Shiqran Sharfuddin

Classics Fantasy Inspirational

5.0  

Shiqran Sharfuddin

Classics Fantasy Inspirational

ತ್ಯಾಗ

ತ್ಯಾಗ

8 mins
238


ಪ್ರತ್ಯಾಯನ ಹೊತ್ತು ಕಳೆದಿತ್ತು. ಸೂರ್ಯಾಸ್ತದ ಕೇಸರಿ ಕಿರಣಗಳು ಜಗತ್ತಿನಾದ್ಯಂತ ರಂಗಭೂಮಿಯ ಸುತ್ತ ತಮ್ಮ ಪರದೆಗಳನ್ನು ಸುರುಳಿ ಬಿಚ್ಚಿದ್ದವು. ಪವಿತ್ರ ರಂಝಾನ್ ತಿಂಗಳು ಕೊನೆಯ ಹಂತಕ್ಕೆ ತಲುಪಿತ್ತು ಇಪ್ಪತ್ತೊಂಬತ್ತು ಉಪವಾಸಗಳು ಕಳೆದುದರಿಂದ, ಇಂದು ಆಚರಿಸಿದ ಉಪವಾಸ ಕೊನೆಯ ಉಪವಾಸವಿರಬಹುದೆಂದು ಕೆಲವರು ಊಹಿಸಿದರು. ಹಾಗಾಗಿ, ಮಾಘ್ರಿಬ್ ನಮಾಜ್ ಮುಗಿಸಿ, ಎಲ್ಲರು ಕಡಲ ತೀರಕ್ಕೆ ಹೋದರು, ಚಂದ್ರ ದರ್ಶನವಾಗಬಹುದೆಂದು. ಎಲ್ಲರು ಆತುರತೆಯಿಂದ ಗಗನತ್ತ ಒಂದೇ ಸವನೆ ಬಿಟ್ಟಗಣ್ಣಿನಿಂದ ನೋಡುತ್ತಿದ್ದಂತೆ, ಮುಸ್ಸಂಜೆಯ ಮಂದ ಬೆಳಕಿನಲ್ಲಿ ಕಿಲಕಿಲನೆ ಹಾರುವ ದೆವ್ವ ಬಾವಲಿಗಳ ನಡುವೆ ಬಾಲಚಂದಿರದ ದರ್ಶನವಾಯಿತು. ಹಾಗಾಗಿ, "ನಾಳೆ ಈದುಲ್-ಫಿತ್ರ್ ಆಚರಿಸಲಾಗುವುದು" ಎಂದು ಮಸೀದಿಯಲ್ಲಿ ಉದ್ಘೋಷಿಸಲಾಯಿತು.

ಊರಿನವರು ತಮ್ಮ ತಮ್ಮ ಫೀತ್ರಾಗಳನ್ನು ತಂದು ಮಸೀದಿಗೆ ಅರ್ಪಿಸಿದರು. ಮೌಲ್ವಿ ಸಾಹೇಬರು ನ್ಯಾಯಯುತವಾಗಿ ಲೆಕ್ಕಿಸಿ, ಫಿತ್ರಾವನ್ನು ಹಲವು ಪೊಟ್ಟಣಗಳಲ್ಲಿ ಭಾಗ ಮಾಡಿದರು. ಊರಿನ ಯುವಕರು ಈ ಈದ್ ಕಿಟ್ ಗಳನ್ನು ಬಡವರಲ್ಲಿ ಹಂಚಲು ಸಿದ್ಧತೆ ನಡೆಸಿದರು. ಹಿರಿಯರು ಮಕ್ಕಳಲ್ಲಿ ಕಲ್ಲು-ಸಕ್ಕರೆ ಮತ್ತು ಖರ್ಜೂರಗಳನ್ನು ಹಂಚಿ ಸಂಭ್ರಮಿಸಿದರು. ಮಕ್ಕಳಿಗೆ ಎಲ್ಲಿಲ್ಲದ ಸಂತೋಷ-ಸಡಗರ; ಹಬ್ಬದ ದಿನದಂದು ಹೊಸ ಉಡುಪುಗಳನ್ನು ಧರಿಸುವ ಉತ್ಸಾಹ…!

* * * * *


ಅರಬ್ಬಿ ಕಡಲ್ತಡಿಯ ನಮ್ಮ ಈ ಊರಿನಲ್ಲಿರುವ ಭೋಜನಗೃಹ ಒಂದೇ- ಅಬು ಬ್ಯಾರಿಯವರದ್ದು. ಬ್ಯಾರಿ ಸಾಹೇಬರ ಹೋಟೆಲಿನಲ್ಲಿ ಅವರ ಮಡದಿಯೇ ಅಡಿಗೆ ಬಡಿಸುವುದರಿಂದ, ಊರಿನವರಿಗೆ ಮನೆಯ ರುಚಿ-ಸ್ವಾದ ಹೋಟೆಲಿನಲ್ಲಿ ದೊರೆಯುತ್ತಿತ್ತು. ಅಬು ಬ್ಯಾರಿಯವರು ಇಬ್ಬರೇ ಆಳುಗಳ ನೆರವಿನಿಂದ ತಮ್ಮ ಹೋಟೆಲನ್ನು ನಡೆಸುತ್ತಿದ್ದರು. ಆಳುಗಳಿಬ್ಬರಾದ, ಸುಲ್ತಾನ್ ಮತ್ತು ಬಷೀರ್, ಇಬ್ಬರು ದೂರದ ಸಂಬಂಧಿಕರು.

ಬಷೀರ್, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ ತೋರಿಸಿದ್ದರಿಂದ, ತಂದೆ ಅವನನ್ನು ದುಡಿಯಲು ಕಳುಹಿಸಿದರು. ಉಂಡಾಡಿಗುಂಡನಾಗಿ ಕಾಲ ವ್ಯರ್ಥಪಡಿಸುವುದಕ್ಕಿಂತ, ಹೋಟೆಲಿನಲ್ಲಿ ದುಡಿಯುವುದೇ ಲೇಸೆಂದು ಅವರು ಬಲವಾಗಿ ಪ್ರತೀತಿಸುತ್ತಿದ್ದರು. ಆದರೆ, ನಲವತ್ತು ಕಳ್ಳರಿಂದ ಗೆದ್ದು ಬಂದ ಅಲಿಬಾಬಾನಂತಹ ಕೃಶ ಶರೀರದ ಸುಲ್ತಾನನಿಗೆ ವಿದ್ಯಾಸಕ್ತಿಯಿದ್ದರೂ, ತಂದೆ ತೀರಿ ಹೋಗಿದ್ದರಿಂದ ಮನೆಯ ಬಡತನದ ಅಟ್ಟಹಾಸ ಅವನನ್ನು ಹೋಟೆಲಿಗೆ ದುಡಿಯಲು ತಳ್ಳಿತು. ಹೋಟೆಲಿನಲ್ಲಿ, ಸುಲ್ತಾನ್ ವಹಿಸಿಕೊಂಡ ಕೆಲಸಗಳನ್ನು ಹಸ್ತಕೌಶಲ್ಯದಿಂದ ನಿಭಾಯಿಸುತ್ತಿದ್ದನು. ಸಾಹುಕಾರನ ಮುಂದೆ ಸ್ವಾಧೀನವಾಗಿ ನಿಲ್ಲುತ್ತಿದ್ದನು. ಹಾಗಾಗಿ, ಅಬು ಬ್ಯಾರಿಯವರಿಗೆ ಸುಲ್ತಾನೆಂದರೆ ಎಲ್ಲಿಲ್ಲದ ಪ್ರೀತಿ-ಮಮತೆ. ಸುಲ್ತಾನನ ಮನೆಯ ಅವಸ್ಥೆಯನ್ನು ಸಮಗ್ರವಾಗಿ ಅರಿತ ಅಬು ಬ್ಯಾರಿಯವರು, ಸಂಬಳದೊಂದಿಗೆ ಏನಾದರೂ ಹೆಚ್ಚು-ಕಡಿಮೆ ನೀಡಿ ಸಹಕರಿಸುತ್ತಿದ್ದರು. ಪ್ರತಿ ವರ್ಷ ಹಬ್ಬದ ಸಂದರ್ಭಗಳಲ್ಲಿ ಅಂತಃಕರಣದಿಂದ ಹೊಸ ಅಂಗಿ ಮತ್ತು ಲುಂಗಿಯನ್ನು ಸುಲ್ತಾನನಿಗೆ ಉಡುಗೊರೆಯಾಗಿ ನೀಡುತ್ತಿದ್ದರು.

* * * * *


"ನಾಳೆ ಹಬ್ಬವೆಂದು ಈಗಾಗಲೇ ಮಸೀದಿಯಲ್ಲಿ ಉದ್ಘೋಷಿಸಲಾಗಿದೆ. ಎಲ್ಲರು ಹಬ್ಬದ ಉತ್ಸಾಹದಲ್ಲಿದ್ದಾರೆ… ಆಚರಣೆಯ ಗುಂಗಿನಲ್ಲಿದ್ದಾರೆ… ನನ್ನ ಮಿತ್ರವೃ೦ದದವರೆಲ್ಲರು ಹಬ್ಬಕ್ಕಾಗಿ ಹೊಸ ಬಟ್ಟೆ-ಬರೆಗಳನ್ನು ಖರೀದಿಸಿದ್ದಾರೆ" ಎಂದು ಪೆಚ್ಚು ಮುಖ ಹಾಕಿ ಸುಲ್ತಾನ್ ತಾಯಿ ಅಮೀನಾ ಬೀಯವರಲ್ಲಿ ದೂರಿದನು.

"ಅದರಲ್ಲೇನಿದೆ? ಪ್ರತಿ ವರ್ಷ ನಡೆಯುವಂತೆ, ಈ ವರ್ಷವೂ ಎಲ್ಲರು ಸಡಗರದಿಂದ ಹಬ್ಬವನ್ನು ಆಚರಿಸುವ ಯೋಜನೆಯಲ್ಲಿದ್ದಾರೆ" ಎಂದು ತಾಯಿ ಅಮೀನಾ ಬೀ ಕ್ಷೀಣಸ್ವರದಲ್ಲಿ ಉತ್ತರಿಸಿದಳು.

"ಹಾಗಲಮ್ಮ. ಎಲ್ಲರು ಹೊಸ ಬಟ್ಟೆಗಳನ್ನು ಖರೀದಿಸಿದ್ದಾರೆ. ನಾನೇನು ಮಾಡುವುದು?" ಎಂದು ಸ್ವಲ್ಪ ತಡೆದು, "ನನ್ನ ಬಳಿ ಹೊಸ ಅಂಗಿಯೂ ಇಲ್ಲ… ಲುಂಗಿಯೂ ಇಲ್ಲಮ್ಮ…"

"ನಾನೇನು ಮಾಡಬಹುದು, ಮೊಣು? ನಿನ್ನ ತಂದೆ ಸಮುದ್ರಪಾಲಾಗಿ ಸ್ವರ್ಗವಾಸಿಯಾದ ದಿನದಿಂದ ನಾನು ಬದುಕಿನೊಂದಿಗೆ ಪ್ರತಿದಿನ ಹೋರಾಡುತ್ತ ಬಂದಿದ್ದೇನೆ. ಇತರರ ದೂಷಣೆ ಮತ್ತು ಮನೆಯ ಕಡು ಬಡತನದೊಂದಿಗೆ ಶೀತಲ ಸಮರವನ್ನು ಧೈರ್ಯದಿಂದ ಸಾರಿ, ನಿನ್ನನ್ನು ಬೆಳೆಸಿದೆ. ಆದರೆ, ನನ್ನ ದ್ರಷ್ಟಿ ಹೋದ ದಿನದಿಂದ ನಾನು ಕಂಗಾಲಾಗಿದ್ದೇನೆ…" ಎಂದು ಹೇಳಿ ಅಮೀನಾ ಬೀ ತನ್ನ ಕಣ್ಣುಗಳನ್ನು ಒರೆಸಿದಳು.

"ಹಾಗೆ ಹೇಳಬೇಡಮ್ಮ. ನಿನ್ನೊಂದಿಗೆ ನಾನಿದ್ದೇನೆ, ನಮ್ಮೊಂದಿಗೆ ಅಲ್ಲಾಹ್ ಇದ್ದಾನೆ" ಎಂದು ಸುಲ್ತಾನ್ ತಾಯಿಯನ್ನು ಸಮರ್ಥಿಸಲು ಪ್ರಯತ್ನಿಸಿದನು.

"ಮಗ, ಪ್ರತಿ ವರ್ಷ ಸಾಹುಕಾರ ಬ್ಯಾರಿ ಸಾಹೇಬರು ನಿನಗೆ ಅಂಗಿ ಮತ್ತು ಲುಂಗಿ ನೀಡುತ್ತಿದ್ದರಲ್ಲ. ಈ ವರ್ಷ ನೀಡಲಿಲ್ಲವೇ?" ಎಂದು ತಾಯಿ ಕೇಳಿದಳು.

"ಇಲ್ಲಮ್ಮ. ಎರಡು ತಿಂಗಳಿನ ಹಿಂದೆ ಅವರ ಸಹೋದರ ಹೃದಯಾಘಾತದಿಂದ ತೀರಿ ಹೋದರು ಮತ್ತು ಹದಿನೈದು ದಿನಗಳ ಹಿಂದೆ ಅವರ ಮಗ ದುಬೈಯಲ್ಲಿ ಅಪಘಾತವೊಂದರಲ್ಲಿ ತೀರಿ ಹೋದನು. ಅವರೀಗ ದುಃಖತೃಪ್ತರಾಗಿರುವಾಗ, ನನಗೆ ಅಂಗಿ ಮತ್ತು ಲುಂಗಿ ಹೇಗೆ ಕೊಡಬಹುದು?"

"ಯಾ ಅಲ್ಲಾಹ್! ದಯೆ ಪಾಲಿಸು… ಎರಡು ತಿಂಗಳಿನಲ್ಲಿ, ಎರಡು ಮರಣಗಳು…" ಎನ್ನುವಾಗ, ಒಣಗಿ ಮುರುಟಿದ ಅಮೀನಾ ಬೀಯವರ ಕೀಚುಗಾಯಿ ಶರೀರ ನಡುಗಲಾರಂಭಿಸಿತು.

ಹೀಗೆ ಮಾತುಕತೆ ನಡೆಯುತ್ತಿರುವಾಗ ರಾತ್ರಿಯ ಅಝಾನ್ ಹೇಳಲಾಯಿತು. "ನಮಾಜ್ ಮುಗಿಸಿ ಬರುತ್ತೇನಮ್ಮ" ಎಂದು ಹೇಳಿ ಸುಲ್ತಾನ್ ಮಸೀದಿಗೆ ಹೊರಟನು. "ಹೂಂ" ಎನ್ನುತ್ತಾ ತಾಯಿ ಅಮೀನಾ ಬೀ ಹೊರಗೆ ಜಗುಲಿಯ ತನಕ ಸುಲ್ತಾನಿನೊಂದಿಗೆ ಬಂದಳು.

ಒಬ್ಬನ ಕಷ್ಟ-ಸುಖಗಳನ್ನು ಯಾರೂ ಅರ್ಥೈಸಿಕೊಳ್ಳದಿದ್ದರೂ ತಾಯಿಯಾದವಳು ಅನುಭವಿಸದೇ ಇರುವುದಿಲ್ಲ. ಮಗನ ನಗುಮುಖ ಬಾಡಿ ಹೋಗುವುದರಿಂದ ತಾಯಿಯೆದೆ ಒಡೆದು ಚೂರಾಯಿತು.

"ಯಾ ಅಲ್ಲಾಹ್! ನನ್ನ ಹೃದಯದ ತುಂಡು- ಸುಲ್ತಾನನಿಗೆ ದಯೆ ಪಾಲಿಸು. ಕುರುಡು ತಾಯಿಯ ಹಗಲಿರುಳು ಸೇವೆ ಸಲ್ಲಿಸುತ್ತಿರುವ ಹುಡುಗನ ಮುಖ ಬಾಡಿ ಹೋಗುವುದು ಪ್ರಕೃತಿಯು ಸಹಿಸುವುದಿಲ್ಲ. ದಯೆ ಪಾಲಿಸು…" ಎಂದು ಜಗುಲಿಯ ಮೇಲೆ ನಿಂತು, ಎರಡು ಕೈಗಳನ್ನೆತ್ತಿ ಅಮೀನಾ ಬೀ ದುವಾ ಬೇಡಿ, ಕಣ್ಣೀರನ್ನು ಒರೆಸುತ್ತ ಒಳಗೆ ಹೋಗಿ ಬಾಗಿಲನ್ನು ಮುಚ್ಚಿದಳು. ಶಾಂತ ಸಾಗರದ ಅಲೆಗಳು ಉರುಳುತ್ತಿದ್ದವು, ಉಬ್ಬರ-ಇಳಿತದ ಮೇಲೆ ಇನ್ನೊಂದು. ಕುಂಟು ನೆಪದ ಮುಳ್ಳು ಸುಲ್ತಾನನಿಗೆ ಚುಚ್ಚುತ್ತಿತ್ತು; ನೋವು ತಾಯಿ ಅನುಭವಿಸುತ್ತಿದ್ದಳು.

* * * * *


ರಾತ್ರಿಯ ನಮಾಜ್ ಮುಗಿಸಿ, ಮಸೀದಿಯಿಂದ ಹೊರಬಂದ ಸುಲ್ತಾನ್, ಮನೆಗೆ ಹಿಂದಿರುಗದೆ ನೇರವಾಗಿ ಕಡಲತೀರಕ್ಕೆ ಹೋಗಿ, ಮೃದು ಮರಳಿನ ಮೇಲೆ ಕಾಲು ಚಾಚಿ ಸುಮ್ಮನೆ ಕುಳಿತು ಆಲೋಚನೆಯ ಸಾಗರದಲ್ಲಿ ಧುಮುಕಿಸಿದನು. ಅಲೆಗಳು ಬಂದು ಸುಲ್ತಾನನ ಪಾದಗಳನ್ನು ಚುಂಬಿಸಿ ಹಿಂದಿರುಗುತ್ತಿದ್ದವು. ಪುಟ್ಟ ದೋಣಿಯೊಂದು ಭಯಂಕರ ಸುಂಟರಗಾಳಿಯೊಂದಿಗೆ ಸೆಣಿಸಿ, ದಡ ಸೇರಲು ಯತ್ನಿಸುತ್ತಿತ್ತು. ನಾಲ್ಕು ದಿಕ್ಕಿನಲ್ಲೂ ಕಗ್ಗತ್ತಲು!

ಹೀಗೆ ಕುಳಿತಿರುವಾಗ ಅಲೆಗಳೊಂದಿಗೆ ಏನೋ ಗಟ್ಟಿ ವಸ್ತುವೊಂದು ಬಂದು ಕಾಲಿಗೆ ಬಡಿದುದರಿಂದ, ಸುಲ್ತಾನ್ ತನ್ನ ಯೋಚನೆಯ ಸಾಗರದಿಂದ ಈಜಿ ವಾಸ್ತವ ಪ್ರಪಂಚಕ್ಕೆ ಬಂದಿಳಿದನು.

"ಕಾಲಿಗೇನು ಬಡೀತು?" ಎಂದು ಯೋಚಿಸುತ್ತ, ಅದನ್ನೆತ್ತಿ ಪರೀಕ್ಷಿಸಿದನು. ನೋಡಲು ಪುರಾತನ ದೀಪದಂತೆ ಇತ್ತು. ದೀಪ ಒದ್ದೆಯಾಗಿದೆ, ಒರೆಸುತ್ತೇನೆಂದು ಒರೆಸುತ್ತಿರುವಾಗ, "ಭೂ೦" ಎಂದು ಬ್ರಹತ್ ಆಕಾರದ ಪೆಡಂಭೂತವೊಂದು ಪ್ರತ್ಯಕ್ಷವಾಗಿ, "Tell me what thou dost want of me; Here am I, thy slave and the slave of him who holdeth the lamp" ಎಂದು ಗಾಂಭೀರ್ಯತೆಯಿಂದ, ಕೈ ಕಟ್ಟಿ ಅದು ಹೇಳಿತು.

"ಏ, ಎಲ್ಲಿಯ ಸೈತಾನ್ ನೀನು? ಎಂಥ ಇಂಗ್ಲಿಷ್ ಮಾತನಾಡುತ್ತಿದ್ದೀಯಾ?" ಎಂದು ಸುಲ್ತಾನ್ ಭೂತವನ್ನು ಕೇಳಿದನು.

"ಸುಮ್ನಿರು ಹುಡುಗ! ನಾನು ಸೈತಾನಲ್ಲ… ನಾನು ಈ ದೀಪದ ಗುಲಾಮ. ಈಗ ನಿನ್ನ ಗುಲಾಮ" ಎಂದು ದೀಪದ ಭೂತದ ಘರ್ಜಿಸಿತು.

"ದೀಪದ ಗುಲಾಮ…? ನನ್ನ ಗುಲಾಮ…?" ಏನು ಅರ್ಥವಾಗದೇ ಸುಲ್ತಾನ್ ಗಲಿಬಿಲಿಗೊಂಡನು.

"ಹೌದು. ಹಲವಾರು ವರ್ಷಗಳ ಹಿಂದೆ ಅಲ್ಲಾವುದ್ದೀನ್ ಎಂಬ ತರುಣ ನನ್ನನ್ನು ಚೀನಾ ದೇಶದ ಗುಹೆಯೊಂದರಿಂದ ಬಿಡುಗಡೆಗೊಳಿಸಿದನು. ಬಳಿಕ, ನನ್ನ ನೆರವಿನಿಂದಲೇ ಬದುಕಿಡೀ ಸುಖಪ್ರದದಿಂದ ಕಳೆದು… ಮುಂದೊಂದು ದಿನ ಮಹಾರಾಜನ ಮಗಳನ್ನು ಮದುವೆಯಾದನು. ಆಗ, ನಾನೇ ಅವನಿಗಾಗಿ ಆಫ್ರಿಕಾ ಖಂಡದಿಂದ ಅರಮನೆಯೊಂದನ್ನು ಹಾರಿಸಿ ತಂದು ಕೊಟ್ಟಿದ್ದೆ. ನನ್ನ ನೆರವಿನಿಂದಲೇ ಅವನು ಸಾಮಾನ್ಯ ಹುಡುಗನಿಂದ ಅರಬ್ಬಿ ದೇಶದ ದೊರೆಯಾದನು…!"

"ಆಹಾ! ಇದು ಒಳ್ಳೆದಾಯಿತು. ಅದೇನೆಂದರೆ ನಾಳೆ ನಮಗೆ ಹಬ್ಬ. ಎಲ್ಲರು ಹೊಸ ಬಟ್ಟೆಗಳನ್ನು ಖರೀದಿಸಿದ್ದಾರೆ. ಆದರೆ, ನನ್ನ ಬಳಿ ಧರಿಸಲು ಹೊಸ ಉಡುಪುಗಳಿಲ್ಲ. ನನಗೆ ಅಂಗಿ ಮತ್ತು ಲುಂಗಿಯೊಂದನ್ನು ತಂದು ಕೊಡುತ್ತೀಯಾ?" ಎಂದು ಬಹಳ ನಮ್ರನಾಗಿ ಸುಲ್ತಾನ್ ಕೇಳಿದನು. ಬಾಡಿ ಹೋದ ಸುಲ್ತಾನನ ಮುಖ ಒಮ್ಮೆಗೆ ಚಿಗುರಿತು. ಹಲವಾರು ದುಂಬಿಗಳ ನಡುವೆ ಆಶಾಜನಕ ಹೂವೊಂದು ಅರಳಿತು.

"ನಾನಿನ್ನೂ ಯಾರಿಗೂ ಏನನ್ನೂ ತಂದು ಕೊಡುವುದಿಲ್ಲ. ಅವಶ್ಯವಿದ್ದರೆ ಮಾಡುವ ಕೆಲಸದಲ್ಲಿ ನೆರವನ್ನು ಒದಗಿಸುತ್ತೇನೆ" ಎಂದು ಅದು ಉತ್ತರಿಸಿತು.

"ಸೊಕ್ಕೆಷ್ಟು ನಿನಗೆ? ಏನೂ ಬೇಕಾದರು ಮಾಡುವವನು, ನನಗೊಂದು ಹೊಸ ಅಂಗಿ ಮತ್ತು ಲುಂಗಿಯನ್ನು ತರುವುದಿಲ್ಲ ಅಂದರೆ…?"

"ಮಾನವನ ಆಸೆಗೆ ಮಿತಿಯಿಲ್ಲ. ಪ್ರಮಿತಿಯವರೆಗೆ ತನ್ನ ಆಸೆಗಳನ್ನು ಈಡೇರಿಸಲು ಹೊರಡುತ್ತಾನೆ. ಆದರೆ, ಅವನಿಗೆ ನಿಜಕ್ಕೂ ಬೇಕಾಗಿರೋದು ಮತ್ತು ಕೊನೆಗೆ ಖಂಡೀತವಾಗಿ ಸಿಗೋದು- ಆರು ಅಡಿ ಮಣ್ಣು. ಅದೇ ನಿಶ್ಶಬ್ದ ಸತ್ಯ"

"ಏ, ನನಗೀಗ ಬೇಕಾಗಿರೋದು ಧರಿಸಲು ಹೊಸ ಅಂಗಿ ಮತ್ತು ಲುಂಗಿ. ನಿನ್ನ ಪ್ರವಚನ ಬೇಡ. ನಿನಗ್ಯಾರು ಕಲಿಸಿಕೊಟ್ಟರು ಇಷ್ಟೆಲ್ಲಾ ಧರ್ಮೋಪದೇಶಗಳನ್ನು?"

"ಆಫ್ರಿಕಾ ಖಂಡದಿಂದ ಚೀನಾ ದೇಶದವರೆಗೆ ಬೃಹತ್ ಅರಮನೆಯೊಂದನ್ನು ಹಾರಿಸಿದವನಿಗೆ ಒಂದು ಕೃತಿಯನ್ನು ತೆರೆದು ಓದುವಷ್ಟು ಶಕ್ತಿಯಿಲ್ಲವೆಂದು ಅಂದುಕೊಂಡಿಯಾ?"

"ಇರಬಹುದು. ಆದರೆ, ನನಗೀಗ ಬೇಕಾಗಿರೋದು ಈದ್ ಗಾಗಿ ಹೊಸ ಉಡುಪುಗಳು. ನಿನ್ನ ಧರ್ಮೋಪದೇಶದಿಂದ ನಾನೇನು ಮಾಡಲಿ?"

"ಇದೇ! ಇದೇ! ನಿನ್ನ ಗೋಳು ಸಿದ್ಧವಾಗಿ ಬಿಟ್ಟಿದೆ. ಈಗ ನನ್ನ ನೀತಿಬೋಧೆ ಕೇಳಿ ನಿನಗೇನು ಪ್ರಯೋಜನ?"

"ಹೇಳಲೇನು ಬಯಸುತ್ತಿದ್ದೀಯಾ?"

"ಕೇಳು. ಇದು ಸುಮಾರು ಸಾವಿರ ಇನ್ನೂರು ವರ್ಷಗಳ ಹಿಂದಿನ ಕತೆ" ಎಂದು ದೀಪದ ಗುಲಾಮ ತನ್ನ ಕತೆಯನ್ನು ಹೇಳಲು ಪ್ರಾರಂಭಿಸಿತು. ಸುಲ್ತಾನ್ ಕತೆ ಕೇಳುವುದರಲ್ಲಿ ಮಂತ್ರಮುಗ್ಧನಾದನು.

* * * * *


ಬಾಗ್ದಾದಿನ ಸುಪ್ರಸಿದ್ಧ ವಿದ್ವಾಂಸರಲ್ಲಿ ಅಲ್ಲಾಮಾ ವಾಗ್ದಿರವರ ಹೆಸರು ಗರಿಷ್ಠ ಜ್ಞಾನ ಸಂಪಾದನೆಗೆ ಸರ್ವತ್ರ ಸ್ತುತಿಸಲಾಗುತ್ತಿತ್ತು. ಅವರ ವಿದ್ಯಾಸಂಪತ್ತಿಗೆ ಲೋಕಪ್ರಸಿದ್ಧಿ ದೊರೆಯುವುದರಿಂದ ಜಗತ್ತಿನಾದ್ಯಂತ ವಿದ್ವತ್ತರು, ಅಧ್ಯಾತ್ಮಿಕ ಪ್ರಶ್ನೆ-ಸಮಸ್ಯೆಗಳಿಗೆ ಪರಿಹಾರ ಒದಗಿಸಲು, ಉಷ್ಣ ಮರುಭೂಮಿಯಲ್ಲಿ ಸಾವಿರಾರು ಮೈಲಿಗಳನ್ನು ದಾಟಿ ಇವರಲ್ಲಿ ಬಂದು ಬಗೆಹರಿಸುತ್ತಿದ್ದರು. ಅವರು ಬಹಳ ಸ್ನೇಹಜೀವಿಯಾಗುವುದರಿಂದ, ಜ್ಞಾನ ದಿಗ್ಗಜರಿಬ್ಬರಾದ ಅಬು ಹಾಶಿಮ್ ಮತ್ತು ಮೊಹಮ್ಮದ್ ಕಾಸಿಂರವರನ್ನು ತಮ್ಮ ಸ್ನೇಹದ ಸುಳಿಗೆ ಸಿಲುಕಿಸಿ, ಜಗತ್ತಿಗೆ "ಆದರ್ಶ ಮಿತ್ರ"ರೆಂಬ ಬಿರುದಿಗೆ ನಿಜವಾದ ವ್ಯಾಖ್ಯಾನವನ್ನು ಬರೆದರು. ಅಲ್ಲದೇ, ಶ್ರೀಯುತರ ಘನವಾದ ವ್ಯಕ್ತಿತ್ವಕ್ಕೆ ವಿಶದವಾಗಿ ಜನಸಾಮಾನ್ಯರಿಂದ ಬಹಳ ಸಂಭಾವಿಸಲಾಗುತ್ತಿತ್ತು.

ಅಲ್ಲಾಮಾ ವಾಗ್ದಿಯವರು ವಾಸಿಸುತ್ತಿರುವ ಸುಖಿ ರಾಜ್ಯವನ್ನು ಖಲೀಫ ಅಲ್ ವಾತಿಖ್ II ಆಳುತ್ತಿದ್ದರು. ಖಲೀಫರ ನ್ಯಾಯಯುತ ಆಳ್ವಿಕೆಯಡಿ ನಾಡಿನ ಯಾವನೊಬ್ಬ ಪ್ರಜೆಯೂ ಹಸಿವಿನಿಂದ ಮಲಗುತ್ತಿರಲಿಲ್ಲ. ಅವರ ಸದಾಡಳಿತ ನೆರಳಿನಲ್ಲಿ ಸುಖಪ್ರದ ದಿನಗಳು ಒಂದರ ಮೇಲೆ ಇನ್ನೊಂದು ನಯವಾಗಿ ಬೀಜಮಾತಿನಲ್ಲಿ ಉರುಳುತ್ತಿದ್ದವು. ಹೀಗೆ ಖಲೀಫ ವಾತಿಖ್ II ರವರ ಆಳ್ವಿಕೆಯಡಿ ಚೊಚ್ಚಲ ರಂಜಾನ್ ತಿಂಗಳಿನ ಆಗಮನವಾಯಿತು. ಕಣ್ಣು ಮಿಟುಕುವುದಕ್ಕಿಂತ ಮುಂಚೆಯೇ ಇಪ್ಪತ್ತೊಂಬತ್ತು ಉಪವಾಸಗಳು ಕಳೆದು, ಚಂದ್ರ-ದರ್ಶನವಾಗಿ, ಮರುದಿನ ಹಬ್ಬವೆಂದು ದೇಶವಿಡೀ ಸಾರಲಾಯಿತು.

ಮಕ್ಕಳೆಲ್ಲರಲ್ಲಿ ಹರ್ಷೋದ್ಗಮಿಸಿ, ತಮ್ಮ ತಮ್ಮ ಹಬ್ಬದ ಹೊಸ ಪೋಷಾಕಿನ ಕುರಿತು ಇತರರಲ್ಲಿ ಹೇಳಿ ಸಂತೋಷಪಟ್ಟರು. ಅಲ್ಲಾಮಾ ವಾಗ್ದಿರವರ ಮಕ್ಕಳಿಬ್ಬರು ತಮ್ಮ ಪೋಷಾಕಿನ ಕುರಿತು ತಿಳಿಯಲು, ತಂದೆಯಲ್ಲಿ ಬಂದು ವಿಚಾರಿಸಿದರು. ವಾಗ್ದಿಯವರು, ಶೂನ್ಯ ಉಳಿತಾಯವಾಗುವುದರಿಂದ ಮನೆಯಲ್ಲಿ ಯಾರಿಗೂ ಹಬ್ಬಕ್ಕಾಗಿ ಏನನ್ನೂ ಖರೀದಿಸಿರಲಿಲ್ಲ. ತಮಗೆ ಹಬ್ಬಕ್ಕಾಗಿ ಹೊಸ ಉಡುಪುಗಳಿಲ್ಲವೆಂದು ಅರಿತ ಮಕ್ಕಳು ಆಳಲಾರಂಬಿಸಿ, ಹೊಸ ಉಡುಪಿಗಾಗಿ ಹಠ ಹಿಡಿದರು. ಮಕ್ಕಳ ಆಕ್ರಂದವನ್ನು ನೋಡಿ, ಶ್ರೀಯುತರ ಮಡದಿ, "ನಿಮ್ಮ ಮಿತ್ರವೃ೦ದರಲ್ಲಿ ಯಾರೊಬ್ಬರಿಂದ ಸಾಲ ಮಾಡಿ, ಮಕ್ಕಳಿಗಾಗಿ ಹೊಸ ಉಡುಪುಗಳನ್ನು ಖರೀದಿಸಿರಿ. ಮುಂದೊಂದು ದಿನ ತೀರಿಸಿಕೊಳ್ಳಿ" ಎಂದು ಉಪಾಯ ಹೇಳಿಕೊಟ್ಟು, ಮಕ್ಕಳನ್ನು ಸಂತೈಸುವುದರಲ್ಲಿ ಮಗ್ನಳಾದಳು.

ವಾಗ್ದಿಯವರಿಗೆ ಈ ಉಪಾಯ ಸರಿಯೆನ್ನಿಸಿಕೊಳ್ಳದ್ದಿದ್ದರೂ, ಮಕ್ಕಳ ಖುಷಿಗಾಗಿ, ತಮ್ಮ ಬಾಲ್ಯಮಿತ್ರರಲ್ಲಿ ಒಬ್ಬರಾದ ಮೊಹಮ್ಮದ್ ಕಾಸಿಂರವರಿಂದ ಸಾಲ ಮಾಡಿ ನೂರು ದೀನಾರವುಳ್ಳ ಗಂಟೊಂದು ಮನೆಗೆ ತಂದರು.

ಮನೆ ತಲುಪಿದಾಗ, ಮನೆಯಲ್ಲಿ ವಾಗ್ದಿಯವರ ಇನ್ನೊಬ್ಬ ಗೆಳೆಯರಾದ ಅಬು ಹಾಶಿ೦ರವರು, ವಾಗದಿರವರ ಆಗಮನಕ್ಕಾಗಿ ಕಾಯುತ್ತಿದ್ದರು. ಶ್ರೀಯುತರನ್ನು ನೋಡುತ್ತಲೇ ಅವರ ಕಣ್ಣುಗಳು ಪಿಳುಕಿಸಲಾರಂಭವಾಗಿ, ಮನಸ್ಸಿನಲ್ಲಿ ಆಶಾಜನಕ ಕಿರಣಗಳ ಉದಯವಾಯಿತು.

ಅಬು ಹಾಶಿ೦ರವರು ಏನೂ ಮಾತನಾಡದೆ ಮೌನವನ್ನೇ ಕಾಪಾಡಿದರು. ಗೆಳೆಯನ ಮೌನವನ್ನು ಅರ್ಥೈಸಿದ ಅಲ್ಲಾಮಾ ವಾಗದಿರವರು ಖುಷಿಯಿಂದ, ತಾವು ಮೊಹಮ್ಮದ್ ಕಾಸಿ೦ರವರಿಂದ ತಂದ ನೂರು ದಿನಾರಿನ ಗಂಟನ್ನು ಅಬುಹಾಶಿ೦ರವರಿಗೆ ಹಸ್ತಾಂತರಿಸಿದರು.

ಅಲ್ಲಾಮಾ ವಾಗ್ದಿಯವರಿಂದ ಗಂಟನ್ನು ನೋಡುತ್ತಲೇ, "ಇದು ನನ್ನ ಗಂಟು. ಇದನ್ನು ನಾನು ಮೊಹಮ್ಮದ್ ಕಾಸಿ೦ ಅವರಿಗೆ ಸಾಲವಾಗಿ ನೀಡಿದ್ದೆ. ಇದು ನಿಮಗೆ ಹೇಗೆ ಸಿಕ್ತು?" ಎಂದು ಉತ್ಸುಕತೆಯಿಂದ ಕೇಳಿದರು.

"ಮಕ್ಕಳಿಗಾಗಿ ಹೊಸ ಉಡುಪುಗಳನ್ನು ಖರೀದಿಸಲು ಮೊಹಮ್ಮದ್ ಕಾಸಿ೦ ಅವರಿಂದ ಸಾಲ ಮಾಡಿ ತಂದಿದ್ದೆ" ಎಂದು ವಾಗ್ದಿಯವರು ಉತ್ತರಿಸಿ, "ಲೌಕಿಕ ಸಂಪತ್ತನ್ನು ದ್ವೇಷಿಸಿ, ಚಿಕ್ಕಾಸನ್ನೂ ಉಳಿಸದ ನಿಮ್ಮಂತಹ ಬಳಿ ನೂರು ದಿನಾರಗಳು ಹೇಗೆ ಬಂತು?" ಎಂದು ಆಶ್ಚರ್ಯದಿಂದ ಮರು ಪ್ರಶ್ನಿಸಿದರು.

"ಮಕ್ಕಳಿಗಾಗಿ ಹೊಸ ಪೋಷಾಕುಗಳನ್ನು ಖರೀದಿಸಲು ನಾಡಿನ ಖಜಾ೦ಜಿಯವರಿಂದ ಸಾಲ ಮಾಡಿ ತಂದಿದ್ದೆ" ಎಂದು ಅಬು ಹಾಶಿ೦ ಅವರು ಪಿಸುಧನಿಯಲ್ಲಿ ಉತ್ತರಿಸಿದರು. ತಮ್ಮ ಮಿತ್ರವೃ೦ದದವರು ಒಬ್ಬರಿಗಾಗಿ ಇನ್ನೊಬ್ಬರು ಎಷ್ಟು ಪ್ರೀತಿಸಿ, ಇನ್ನೊಬ್ಬರಿಗಾಗಿ ತ್ಯಾಗಿಸುವರು ಎಂದು ಯೋಚಿಸಿ ಸಂತೋಷಪಟ್ಟರು.

ಹೀಗೆ ಮಾತುಕತೆ ನಡೆಯುತ್ತಿರುವಾಗ, ಖಲೀಫರ ಅಜ್ಞಾನುವರ್ತ ಗುಪ್ತಚರನೊಬ್ಬ ಇಬ್ಬರ ಮಾತುಗಳನ್ನು ಕೇಳಿ, ಖಲೀಫರಿಗೆ ಈ ಮಾಹಿತಿಯನ್ನು ಒಪ್ಪಿಸಿದನು. ಖಲೀಫರು ವರದಿಯನ್ನು ಕೇಳಿ ನಾಚಿಕೆಯಿಂದ, "ನನ್ನ ವಿಧೆಯ ಅಜ್ಞಾನುವರ್ತಿಗಳು ನಾಡಿನ ಮೂಲೆ-ಮೂಲೆ, ಗಲ್ಲಿ-ಗಲ್ಲಿಗಳಲ್ಲಿ ತಿರುಗಿ ನನಗೆ ಮಾಹಿತಿ ನೀಡುತ್ತಿದ್ದರು. ಪ್ರತಿ ರಾತ್ರಿ ಸ್ವಯ೦ ನಾನೇ ವೇಷವನ್ನು ಬದಲಿಸಿ, ನಾಡಿನ ಸುತ್ತ ಗಸ್ತು ತಿರುಗುತ್ತಿದ್ದೆ. ಆದರೂ, ನನ್ನ ರಾಜ್ಯಭಾರದಡಿ ಜನರು ಸಂಕಷ್ಟ ಅನುಭವಿಸುವುದೆಂದರೆ, ನಾನೊಬ್ಬ ವಿಫಲ ಖಲೀಫ. ನನ್ನ ಆಳ್ವಿಕೆಯಡಿ ಜನಸಾಮಾನ್ಯರಿಗೆ ತೃಪ್ತಿಯಿಲ್ಲವಾದರೆ, ಪುನರುತ್ಥಾನದ ನಿರ್ಣಾಯಕ ದಿನದಂದು ಅಲ್ಲಾಹನಿಗೆ ನಾನೇನು ಉತ್ತರಿಸಲಿ?" ಎಂದು, ತಮ್ಮ ಪಟ್ಟಕ್ಕೆ ರಾಜಿನಾಮೆಯನ್ನು ಘೋಷಿಸಿ, ಬೈತುಲ್ ಮಾಲ್ ನಿ೦ದ ಮಕ್ಕಳಿಗಾಗಿ ಉಡುಪುಗಳು ಮತ್ತು ದಿನನಿತ್ಯ ಬಳಕೆಯಾಗುವ ಇತರ ಸಾಮಾಗ್ರಿಗಳನ್ನು ಸ್ವಯಂ ತಾವೇ ಬೆನ್ನಿನ ಮೇಲೆ ಹೊತ್ತು ತಂದು, ಮೂವರು ಮನೆಗೆ ತಲುಪಿಸಿದರು. ಖಲೀಫರನ್ನು ಕಂಡು ಅಲ್ಲಾಮಾ ವಾಗ್ದಿಯವರು ಗಲಿಬಿಲಿಗೊಂಡು, "ನಮ್ಮ ಕಷ್ಟಗಳು ನಿಮಗೆ ಹೇಗೆ ತಿಳಿಯಿತು" ಎಂದು ಉತ್ಸುಕತೆಯಿಂದ ಕೇಳಿದರು.

ಆದರೆ, ಖಲೀಫರ ಮೌನವೇ ಅವರಿಗೆ ಉತ್ತರವಾಗಿತ್ತು. ಹೊಸ ಪೋಷಾಕುಗಳನ್ನು ಕಂಡು ಮಕ್ಕಳು, ಉತ್ಸಾಹದ ಪುಟಿ ಚೆಂಡಾದರು. ಖಲೀಫರು ತಂದರಲ್ಲಿ ಒಪ್ಪಿಗೆ ಇಲ್ಲದಿದ್ದರೂ, ವಾಗ್ದಿಯವರು ಮಕ್ಕಳಿಗಾಗಿ ಸ್ವೀಕರಿಸಿದರು. ಹೆತ್ತವರ ಮುಖದಲ್ಲಿ ಸಮಾಧಾನದ ಭಾವನೆ ಮೂಡಿ, ತೃಪ್ತಿಕರ ಮೂಗುಳ್ನಗೆ ಮೊಳಗಿದಾಗ, ಖಲೀಫರು ಅವರಲ್ಲಿ ಏನೂ ಹೇಳದೆ, ತಮ್ಮ ನಿರ್ಲಕ್ಷ್ಯ ಆಳ್ವಿಕೆಗಾಗಿ ಕ್ಷಮೆ ಕೇಳಿ ಬೀಳ್ಕೊಟ್ಟರು. ಅಲ್ ವಾಗ್ದಿಯವರು ದಿಙ್ಮ್ೂಢರಾಗಿ ಖಲೀಫರನ್ನೇ ನೋಡುತ್ತ ನಿ೦ತರು.

* * * * *


"The intense fear held for God; The real master. ಖಲೀಫರು ತಮ್ಮ ಪಟ್ಟಕ್ಕೆ ರಾಜೀನಾಮೆ ನೀಡಿ, ನಿಜವಾಗಿಯೂ, ಆ ಮಾತಿಗೆ ಬದ್ಧತೆ ತೋರಿದ್ದಾರೆ" ಎಂದು ದೀಪದ ಗುಲಾಮ ತನ್ನ ಕತೆ ಮುಗಿಸಿದಾಗ, ಗಗನ ತುಂಬಿ ಗದಾಂಬರ ಆವರಿಸಿತ್ತು. ದಟ್ಟ ಕರಿ ಮೋಡಗಳತ್ತ ಸುಲ್ತಾನನ ದೃಷ್ಟಿ ಬಿದ್ದರೂ, ಭೂತದ ಕತೆಯನ್ನು ಅತ್ಯುತ್ಸುಕತೆಯಿಂದ ಕೇಳುವುದರಲ್ಲಿ ಅದ್ಯಾವುದನ್ನೆಲ್ಲಾ ಪರಿಗಣಿಸಲಿಲ್ಲ.

"ಕೇಳು ಹುಡುಗ, ರಣರಂಗದಲ್ಲಿ ವೈರಿಗಳ ಮೇಲೆ ಧನುಕಾ೦ಡಗಳ ಸುರಿಮಳೆಯನ್ನು ಸುರಿಸಿ, ಸಾವಿರಾರು ಜೀವಿಗಳನ್ನು ನಾಶಗೊಳಿಸುವನು ನಿಜವಾದ ಶೂರನಲ್ಲ. ತನ್ನ ಆಸೆ-ಆಕಾಂಕ್ಷೆಗಳನ್ನು ಮೆಟ್ಟಿ ನಿಲ್ಲುವನೇ ನಿಜವಾದ ವೀರ" ಎಂದು ದೀಪದ ಭೂತ ಸುಲ್ತಾನಿಗೆ ಬುದ್ಧಿ ಮಾತು ಹೇಳಿತು.

"ನಾವು ನಮ್ಮ ಆಸೆ-ಆಕಾಂಕ್ಷೆಗಳನ್ನು ಮೆಟ್ಟಿ ನಿಲ್ಲಬಹುದು. ಆದರೆ, ಸದಡಳಿತ ನಡೆಸುವ ಆಡಳಿತಗಾರರು ಇನ್ನಿಲ್ಲಲ್ವ" ಎಂದು ಸುಲ್ತಾನ್ ಪ್ರತಿಭಟಿಸಿದನು.

"ಹೌದು. ಈಗ ಜಗತ್ತಿನಲ್ಲಿ ಮೂರ್ಖರಿಗೆ ಮಾತ್ರ ಸಂಭಾವಿಸಲಾಗುವುದು. ಶತಮೂರ್ಖರಿಗೆ ಗೌರವ-ಸನ್ಮಾನ ಸಿಗುತ್ತದೆ. ನೈಜ ಗುಣವಂತರಿಗೆ ಕೊಳಚೆ ಪಟ್ಟಿಯಲ್ಲಿ ಕೊಲೆಬಾಳುವೇ ಗತಿ. ಇಂದು, ಜನಸಾಮಾನ್ಯರ ಮುಂದೆ ಜೊಲ್ಲು ಸುರಿಸಿ, ಮತಗಳ ಭೀಕ್ಷೆಯನ್ನು ಬೇಡಿ, ಮಾನ-ಮರ್ಯಾದೆ ಮಾರುವವರೇ ಅಧಿಕಾರದ ಚುಕ್ಕಾಣಿ ಹಿಡಿಯುತ್ತಾರೆ. ಅಂತಹ ಕೀಳರ ಆಳ್ವಿಕೆಯಲ್ಲಿ ನಿನ್ನಂತಹ ಹುಚ್ಚು ಪ್ರಜೆಗಳು…" ಎಂದು ದೀಪದ ಗುಲಾಮ ತನ್ನ ಮಾತನ್ನು ಮುಗಿಸುವುದಕ್ಕಿಂತ ಮುಂಚೆಯೇ ಸುಲ್ತಾನ್, ಅದರ ಮಾತನ್ನು ಕತ್ತರಿಸಿ, "ನನ್ನಂತಹ ಹುಚ್ಚು...? ನಾನೇನು ಮಾಡಿದೆ?" ಎಂದು ಗಲಿಬಿಲಿಗೊಂಡು ಕೇಳಿದನು.

"ಅಷ್ಟರಲ್ಲಿ, ಕಣ್ಣನ್ನು ಕುರುಡಾಗಿಸುವಂತಹ ಸಿಡಿಲು ಮಿಂಚಿ, ಕಣ್ಣು ಮಿಟುಕಿಸುವುದಕ್ಕಿಂತ ಮುಂಚೆಯೇ ಇಡೀ ಬ್ರಹ್ಮಾಂಡವನ್ನೇ ನಡುಗಿಸುವಂತಹ ಭಯಂಕರ ಗುಡುಗು ಗುಡುಗಿತು.

"ಇನ್ನೂ ನನಗಿಲ್ಲಿ ಕ್ಷೇಮವಿಲ್ಲ. ಇರುಲಾಗಿದೆ! ಮನೆಗೆ ಹೋಗು… ಹಾಂ, ಒಂದು ಮಾತನ್ನು ನೆನಪಿಡು- ಆಸೆಯೇ ದುಃಖಕ್ಕೆ ಮೂಲ; ಮತ್ತು ಕ್ಷುಲ್ಲಕರು ಮಾತ್ರ ಆತ್ಮ ಪ್ರಶ೦ಸೆಯಲ್ಲಿ ತೊಡಗುತ್ತಾರೆ. ಇದನ್ನು ನೆನಪಿಟ್ಟು, ಸಂಕಷ್ಟ ಬಂದಾಗ ಆ ಮೂರು ಜ್ಞಾನಿಗಳ ಕತೆಯನ್ನು ನೆನೆದು ತಾಳ್ಮೆ-ತ್ಯಾಗದಿಂದ ಎಲ್ಲವನ್ನು ಎದುರಿಸು" ಎಂದು ದೀಪದ ಭೂತ, ತನ್ನ ಎರಡು ಕೈಗಳನ್ನು ಕಟ್ಟಿ, ಕಣ್ಣುಗಳನ್ನು ಮುಚ್ಚಿ ಗಾಳಿಯಲ್ಲಿ ಕರಗಿ ಮಾಯವಾಯಿತು. ದೂರದ ನಕ್ಷತ್ರದಲ್ಲೊಂದು ಒಮ್ಮೆಗೆ ದಿವ್ಯ ಬೆಳಕು ಜ್ವಲಿಸಿತು.

ಇನ್ನೂ ಇಲ್ಲಿದ್ದು ಏನೂ ಆಗಲಾರೆಂದು, ದೀಪವನ್ನು ಸಮುದ್ರದಲ್ಲಿ ಎಸೆದು ಸುಲ್ತಾನ್ ಮನೆಗೆ ಹಿಂದಿರುಗಿದನು. ಇನ್ನೂ ಈ ದೀಪ ಯಾರ ಕೈಗೆ ಸಿಕ್ಕಿದರೂ, ಅವರಿಗೆ ದೀಪದ ಗುಲಾಮ ಸಿಗುವುದಿಲ್ಲವೆಂದು ಸುಲ್ತಾನಿಗೆ ತೃಪ್ತಿಯಾಯಿತು. ದಾರಿಯುದ್ದಕ್ಕೂ ಸುಲ್ತಾನನ ಮನಸ್ಸಿನಲ್ಲಿ ದೀಪದ ಗುಲಾಮ ಹೇಳಿ ಹೋದ ಕತೆ ಪ್ರತಿಧ್ವನಿಸುತ್ತಿತ್ತು.

ಮನೆ ತಲುಪಿದಾಗ, ತಾಯಿ ಅಮೀನಬೀ ಮಗನನ್ನು ಕರೆದು, "ಇಷ್ಟು ಹೊತ್ತು ಎಲ್ಲಿದ್ದಿ, ಮಗ? ರಾತ್ರಿಯ ನಮಾಜ್ ಮುಗಿಸಿ, ಬ್ಯಾರಿ ಸಾಹೇಬರು ನಮ್ಮ ಮನೆಗೆ ಬಂದಿದ್ದರು. ನಿನಗಾಗಿ ಹೊಸ ಅಂಗಿ, ಲುಂಗಿ ಮತ್ತು ಟೊಪ್ಪಿಯನ್ನು ಉಡುಗೊರೆಯಾಗಿ ನೀಡಿ ಹೋದರು. "ತಗೋ… ನಾಳೆ ಧರಿಸು" ಎಂದು ತಾಯಿ ಹೇಳಿದಾಗ, ಸುಲ್ತಾನನ ಎದೆ ಭಾರವಾಗಿ ಬಂತು. ಕಣ್ಣುಗಳು ತುಂಬಿ ಬಂತು.

"ನಮ್ಮ ಮನೆಯ ಶೋಕಕ್ಕೆ ಸುಲ್ತಾನಿಗ್ಯಾಕೆ ಶಿಕ್ಷಿಸುವುದು? ನೀವು ಹಬ್ಬವನ್ನು ಪರಮಸುಖದಿಂದ ಆಚರಿಸಿರಿಯೆಂದು" ಬ್ಯಾರಿ ಸಾಹೇಬರು ನಮಗೆ ಹಬ್ಬದ ಶುಭಾಶಯಗಳನ್ನು ಹಾರೈಸಿ, ನಿನಗಾಗಿ ಉಡುಪುಗಳನ್ನು ನೀಡಿ ಹೋದರು" ಎಂದು ತಾಯಿ ಹೇಳಿದಾಗ, ಸುಲ್ತಾನನ ಎದೆ ಇನ್ನೂ ಭಾರವಾಗಿ ಬಂತು. ಖುಷಿಯಿಂದ ಕಣ್ಣೀರು ಸುರಿಯಲಾರಂಭವಾಯಿತು.

ಆದರೂ, ತನ್ನನ್ನು ತಾನು ನಿರ್ಬಂಧಿಸಿ, "ಇಲ್ಲಮ್ಮ… ನಿನ್ನ ಮಗ, ಸುಲ್ತಾನ್ ಈಗ ತ್ಯಾಗಿಯಾಗಿದ್ದಾನೆ. ಇನ್ನು ತನ್ನೆಲ್ಲಾ ಆಸೆ-ಆಕಾಂಕ್ಷೆಗಳನ್ನು ಮೆಟ್ಟಿ ನಿಲ್ಲುವ ಶೂರನಾಗಿದ್ದಾನೆ. ನನಗೀಗ ಹಬ್ಬಕ್ಕಾಗಿ ಹೊಸ ಉಡುಪುಗಳು ಬೇಕಾಗಿಲ್ಲ. ಹಳೆಯ ಉಡುಪುಗಳಲ್ಲಿ ಶುಭ್ರವಾದ ಬಿಳಿ ಅಂಗಿಯನ್ನು ಧರಿಸಿ ಹಬ್ಬವನ್ನು ಆಚರಿಸುತ್ತೇನೆ" ಎಂದು ಹೇಳಿ, ಊಟ ಮಾಡಲು ಅಡಿಗೆ ಮನೆಗೆ ಹೋದನು. ತಾಯಿ ಏನೂ ಅರ್ಥವಾಗದೇ ಕಂಗಾಲಾಗಿ ನಿಂತಳು.


Rate this content
Log in

Similar kannada story from Classics