ಕರುಣಳ ಕರುಣೆ
ಕರುಣಳ ಕರುಣೆ


ಮಾನವೀಯ ಮೌಲ್ಯಗಳು ಹಾಗೂ ಸಂಬಂಧಗಳ ಬಗ್ಗೆ ಬರೆಯುವ ಒಂದು ಸಾಹಿತ್ಯಕ ಸ್ಪರ್ಧೆ ಏರ್ಪಡಿಸಲಾಗಿತ್ತು... ನಮ್ಮ ಕಥಾ ನಾಯಕಿಯವರು ಈಗಾಗಲೇ ಹಲವು ಕಥೆ, ಕವನ, ಲೇಖನ ಹಾಗೂ ಪ್ರಬಂಧ ಬರೆದು ಹೆಸರಾದವರು.
ಗಂಡ ದೂರದ ದುಬೈನಲ್ಲಿ ಇದ್ದ... ಮನೆಯಲ್ಲಿ ಅತ್ತೆ,ಸೊಸೆ ಇಬ್ಬರೇ... ಅದಕ್ಕೆ ಕಾಲ ಕಳೆಯಲು ಸಾಹಿತ್ಯದ ಕಡೆ ಹೊರಳಿಸಿದ್ದಳು ಗಮನ.... ಇನ್ನು ಈ ಸ್ಪರ್ಧೆಯಲ್ಲಿ ಭಾಗವಹಿಸದಿರುವುದು ಸಾಧ್ಯವೇ? ಆರಂಭವಾಯಿತು ತಾನೊಂದು ಲೇಖನ ಬರೆಯುವ ಕಾಯಕ....
ಅಂದು ಬೆಳಿಗ್ಗೆ ಮನೆಯಲ್ಲಿ ಅತ್ತೆಗೆ ಹುಷಾರಿರಲ್ಲ..ಅದನ್ನು ನೋಡಿದ ಕೂಡಲೇ ಕರುಣಾ, "ಥೂ ಇವರಿಗೆ ನಾನೇನಾದ್ರೂ ಬರೆಯೋ ದಿನಾನೇ ಬರುತ್ತೆ ರೋಗ" ಎಂದು ಬೈದು ಕೊಂಡು, ತಿಂಡಿ ನಾನೇ ಮಾಡಬೇಕಲ್ಲ ಎಂದು ಕೋಪದಿಂದ ಅಡುಗೆ ಮನೆಯೊಳಗೆ ಹೋದ ಕೆಲವು ನಿಮಿಷಗಳಲ್ಲೇ, ಒಳಗೆ ಪಾತ್ರೆಗಳ ನರ್ತನ ಶಬ್ದ ಕೇಳಿಸ ತೊಡಗಿತು..
ಆಗ ಅವರತ್ತೆ ಹುಷಾರಿಲ್ಲದೆ, ಆಯಾಸವಾಗಿದ್ದರೂ ನಿಧಾನವಾಗಿ ನಡೆದು ಬಂದು, ಅಮ್ಮಾ ಕರುಣಾ ಹೋಗು ತಾಯಿ, ನೀನೇನೋ ಬರೀಬೇಕು ಅಂತಾ ಇದ್ಯಲ್ವಾ...ಅದರ ಕಡೆ ಗಮನ ಕೊಡು ಅಂದರು... ಆ ಮಾತು ಕೇಳಿ ಕರುಣಾಳ ಮುಖದಲ್ಲಿ ನಗು ಅರಳಿ, ಅತ್ತೆಯ ಆರೋಗ್ಯದ ಬಗ್ಗೆ ಕರುಣೆಯೇ ಇಲ್ಲದೆ ಮಾನವ ಸಂಬಂಧಗಳು ಹಾಗೂ ಮೌಲ್ಯಗಳ ಬಗ್ಗೆ ಬರೆಯಲು ಜಿಂಕೆಯಂತೆ ಕುಣಿದು ಓಡಿದಳು...
ಕರುಣಾಳ ಸಾಹಿತ್ಯ ಕೃಷಿ ಆರಂಭವಾಯಿತು.. ಆ ವೇಳೆಗೆ ಮನೆಯಲ್ಲಿ ಕಸ , ಮುಸುರೆಗಾಗಿ ಇದ್ದ ಕೆಲಸದಾಕೆ ಬಂದಳು... ಮನೆಯಲ್ಲಿ ಹಿರಿಯ ಹೆಂಗಸು ಆರೋಗ್ಯ ಸರಿ ಇಲ್ಲವಾದರೂ ಅಡುಗೆ ಮಾಡುತ್ತಾ, ಆಗಾಗ ಕುಳಿತು ಸುಧಾರಿಸಿಕೊಳ್ಳುವುದನ್ನು ನೋಡಿ ಕೆಲಸದಾಕೆಗೆ ಅಯ್ಯೋ ಪಾಪ ಎನಿಸಿತು... ತಾನು ಆಕೆಗೆ ಕೈಲಾದ ಸಹಾಯ ಮಾಡಿದಳು... ನಂತರ ತನ್ನ ಕೆಲಸ ಮುಗಿಸಿ ಮನೆಗೆ ಹೋಗುವ ಮುನ್ನ ಕರುಣಾಳ ಬಳಿ ಏನೋ ಕೇಳಲು ಬಂದಳು...
ಅಮ್ಮಾವ್ರೇ, ಎಂದಳು... ಕರುಣಾ ಆಗ ಏನೇ ನಿಂದು ಗೋಳು, ಇಲ್ಲಿ ಬರೀತಾ ಇರೋದು ಕಾಣ್ತಾ ಇಲ್ವಾ.... ಅದೇನೋ ಬೇಗ ಹೇಳು ಅಂದಳು... ಕೆಲಸದಾಕೆ ಅಮ್ಮಾ, ನಾಳೆ ಮಗೂನ ಆಸ್ಪತ್ರೆಗೆ ಕರ್ಕೊಂಡ್ ಹೋಗ್ತಾ ಇದ್ದೀನಿ ಅಂದಳು...
ಆ ಮಾತು ಕೇಳಿದ ಕೂಡಲೇ , ಮುಖದಲ್ಲಿ ಕೋಪವನ್ನೇ ಅರೆದು ಕುಡಿದವಳಂತೆ , ಕರುಣಾ ಏನ್ ಅದಕ್ಕೆ ಅಡ್ವಾನ್ಸ್ ಆಗಿ ದ
ುಡ್ಡು ಕೊಡ್ಬೇಕಾ? ಹೇಗೆ? ಅಂತೂ ದುಡ್ಡು ಪಡೆಯೋಕೆ ಯಾರಿಗಾದ್ರೂ ರೋಗ ಬರೋ ಹಾಗೆ ಮಾಡಿ ಬಿಡ್ತೀರಲ್ಲ? ಥೂ ಅಂದಳು...
ಕೆಲಸದಾಕೆ ಇಲ್ಲಮ್ಮ, ನನಗೆ ದುಡ್ಡು ಬೇಡ , ಆದರೆ ಮಗುನಾ ಜೋಪಾನವಾಗಿ ನೋಡ್ಕೋಬೇಕು... ನಾನು ಎರಡು ದಿನ ಕೆಲಸಕ್ಕೆ ಬರಲ್ಲ... ಅದನ್ನು ಹೇಳೋಕೆ ಬಂದೆ ಅಷ್ಟೆ.. ಎಂದಳು...
ಆಗ ಕರುಣಾ ಆಕಾಶವೇ ತನ್ನ ತಲೆಯ ಮೇಲೆ ಬಿತ್ತೇನೋ ಎಂಬಂತೆ,
ಏನ್ ಎರಡು ದಿನಾನ!!!!? ನೀನು ಎರಡು ದಿನ ಬರ್ಲಿಲ್ಲ ಅಂದ್ರೆ ಇಲ್ಲಿ ಕೆಲಸ ಮಾಡೋರ್ಯಾರು? ಕಸ ಗುಡಿಸಿ, ಮುಸುರೆ ತಿಕ್ಕೋರು ಯಾರು? ಅಂತ ಅವರ ಅತ್ತೆ ಕಡೆ ನೋಡಿದಳು...
ಆಗ ಅವರತ್ತೆ ಪರವಾಗಿಲ್ಲ ಬಿಡಮ್ಮ, ಪಾಪ ಮಗು ಅಂತಿದಾಳೆ. ಎರಡು ದಿನ ನಾನೇ ಕೆಲಸ ಮಾಡ್ಕೊಳ್ತೀನಿ ಅಂದಳು... ಕರುಣಾಳು ಆಗ ಸರಿ ಆಯಿತು... ನೆನಪಿರಲಿ ಕಣೇ ,ಕೇವಲ ಎರಡೇ ದಿನ..ಮೂರನೇ ದಿನ ಇಲ್ಲಿರಬೇಕೆಂದು ಹೇಳಿದಳು..
ಕೆಲಸದಾಕೆ ಆಯ್ತಮ್ಮ ಎಂದು ಹೊರಟಳು... ಆಗ ಕರುಣಾ ಅತ್ತೆ ನೀವೇ ಜವಾಬ್ದಾರಿ ತಗೊಂಡಿರೋದು, ಆಮೇಲೆ ನನ್ನ ಬೈ ಬೇಡಿ. ನಾನಂತೂ ಈ ಮಾನವೀಯ ಮೌಲ್ಯಗಳು ಹಾಗೂ ಸಂಬಂಧಗಳ ಬಗ್ಗೆ ಬರೆದು ಬಹುಮಾನ ಪಡೆಯಲೇ ಬೇಕು ಎಂದು ಹೇಳಿ ಎರಡು ದಿನ ಬರೆದು, ಬರೆದು , ಹಾಳೆ ಹರಿದು ಹರಿದು ಕಡೆಗೊಮ್ಮೆ ತೃಪ್ತಳಾದಳು... ಸ್ಪರ್ಧೆ ಗೆ ತನ್ನ ಬರಹ ಕಳುಹಿಸಿದಳು...
ಕರುಣಾಳಿಗೆ ಮೊದಲ ಬಹುಮಾನ ಬಂದೇ ಬಂತು. ಅವಳಿಗೆ ಬಹುಮಾನ ನೀಡುವ ದಿನ ತೀರ್ಪುಗಾರರು ಮಾತನಾಡುತ್ತಾ,
"ಅಬ್ಬಾ ಈಕೆಯದು ಎಂತಹ ಬರಹ, ಒಂದೊಂದು ಸಾಲು ಕೂಡಾ ಸತ್ಯ, ಮಾನವ ಸಂಬಂಧಗಳಲ್ಲಿ ಹೊಂದಿ ಕೊಂಡು ನಡೆಯುವುದರ ಅಗತ್ಯ, ಹಿರಿಯರನ್ನು ಗೌರವಿಸುವ ಮಹತ್ವ, ದೀನರಿಗೆ ದಯೆ ತೋರುವ ಅಂತಃಕರಣ, ಪ್ರತಿಯೊಂದು ಕಣ್ಣಿಗೆ ಕಟ್ಟಿಂದಂತಿತ್ತು... ಕೆಲವು ಸಾಲುಗಳು ಕಣ್ಣೀರನ್ನು ತರಿಸಿತು.. ನಿಜಕ್ಕೂ ಈಕೆಯೊಂದಿಗೆ ಒಡನಾಡಿಗಳಾದವರೇ ಧನ್ಯರು.." ಎಂದು ಹೇಳಿ ಕರುಣಾಳನ್ನು ಸತ್ಕರಿಸಿ, ಸನ್ಮಾನ ಮಾಡಿದರು...
ಬಹುಬೇಗ ಆಕೆಯ ಬರಹ ಪತ್ರಿಕೆಗಳಲ್ಲಿ ಕೂಡಾ ಪ್ರಕಟವಾಯಿತು.... ಆಕೆಯ ಬರಹ ಓದಿದವರು ಎಂತಹ ಅದ್ಭುತ ಅನುಭವದ ಮಾತುಗಳೆಂದು ಹೊಗಳಿ, ಹರಸಿ, ಅಟ್ಟಕ್ಕೇರಿಸಿದರು....
©ಮೌನ ಮಾತಾಗುವ ಸಮಯ