ಕಲ್ಪನಾ ಲೋಕದ ವಿಹಾರಿ

Horror Thriller Others

4.3  

ಕಲ್ಪನಾ ಲೋಕದ ವಿಹಾರಿ

Horror Thriller Others

ಭಾರ್ಗವಿ ಎಸ್ಟೇಟ್

ಭಾರ್ಗವಿ ಎಸ್ಟೇಟ್

5 mins
606



ಮನಸ್ವಿ ಹೊರಟಿದ್ದೇ ತಡವಾಗಿ, ಅತ್ತೆ ಬೇಡ ಬೇಡ ಅಂದರೂ ಇಲ್ಲ ಮನೆಗೆ ಹೋಗಲೇಬೇಕು ಅಂತ ಹಠ ಹಿಡಿದು ಬಂದೇ ಬಿಟ್ಟಿದ್ದಳು. ರಜೆ ಕಳೆಯಲು ಅತ್ತೆ ಮನೆಗೆ ಹೋಗಿದ್ದ ಬೋಲ್ಡ್ ಹುಡುಗಿ ಮನಸ್ವಿ... ಆದರೆ ಏಕೋ ವಾಪಸ್ಸು ಬರಬೇಕು ಅಂತ ಅನಿಸಿ ಊರಿಗೆ ಹೊರಡಲು ಸಿದ್ಧ ಆಗಿದ್ದಳು... ಅತ್ತೆ ಅವರ ಊರಲ್ಲಿ ಬಸ್ ಹತ್ತಿದ್ರೆ ನಮ್ಮೂರಿನ ಗೇಟ್ ಹತ್ತಿರಕ್ಕೆ ಎರಡೇ ಗಂಟೆ. ಅಲ್ಲಿಂದ ಯಾರಾದರೂ ಒಬ್ಬರು ಸಿಕ್ತಾರೆ. ಅವರ ಜೊತೇಲಿ ಹೋದ್ರೆ ಹತ್ತು ನಿಮಿಷ ಊರಲ್ಲಿ ಇರ್ತೀನಿ ಅಂತೆಲ್ಲಾ ಲೆಕ್ಕಾಚಾರ ಹಾಕಿದ ಅವಳು, ಅವರ ಅತ್ತೆಗೆ ಭಯ ಪಡ್ಬೇಡಿ ಮನೆಗೆ ಹೋಗಿ ಫೋನ್ ಮಾಡ್ತೀನಿ ಅಂತ ಸಿದ್ಧವಾಗಿ ಬಸ್ ನಿಲ್ದಾಣಕ್ಕೆ ಬಂದೇ ಬಿಟ್ಟಳು... ಆದರೆ ಅವಳ ದುರಾದೃಷ್ಟವೋ ಏನೋ ದಾರಿಯಲ್ಲಿ ಬಸ್ ಕೆಟ್ಟು, ಅದು ಮತ್ತೆ ಸರಿಯಾಗಿ ಹೊರಡುವ ವೇಳೆಗೆ ಅರ್ಧಗಂಟೆಯಾಗಿತ್ತು...

ಬಸ್ ಅವರ ಊರಿನ ಗೇಟ್ ಬಳಿ ಬಂದು ನಿಂತಿತು..

ಮನಸ್ವಿ ಬಸ್ ಇಳಿದಳು. ಅದಾಗಲೇ ಸಂಜೆ ಆರೂವರೆ ಗಂಟೆ. ಊರಿಗೆ ಹೋಗೋರು ಯಾರಾದ್ರೂ ಬರ್ತಾರಾ ಅಂತ ಒಂದು ಹತ್ತು ನಿಮಿಷ ಕಾದು ನೋಡಿದಳು, ಆದರೆ ಯಾರೂ ಬರಲೇ ಇಲ್ಲ..... ಕಡೆ ಬಸ್ ಬೇರೆ ಅದು ಹೊರಟು ಹೋಯ್ತು...ಸಾಲದಕ್ಕೆ ಆವತ್ತೇ ಯಾರೂ ಓಡಾಡ್ತಿಲ್ಲ....ಫೋನ್ ತೆಗೆದಳು...‌ ಅದ್ರಲ್ಲಿ ನೋ ನೆಟವರ್ಕ್ ಆಗಿತ್ತು.... ಏನು ಮಾಡೋದು ತೋಚಲಿಲ್ಲ ಅವಳಿಗೆ , ಏನಾದ್ರೂ ಆಗ್ಲಿ ಧೈರ್ಯ ಮಾಡಿ ನಡ್ಕೊಂಡು ಹೋಗೋಣ.. ಹೇಗೂ ನಡೆದರೆ ಒಂದು ಅರ್ಧಗಂಟೆ ಅಷ್ಟೆ. ಅನ್ಕೊಂಡು ಮುಂದೆ ಹೆಜ್ಜೆ ಹಾಕಿದಳು...

ಆದರೆ ಮನಸ್ಸಲ್ಲಿ ಒಂದು ಭಯ, ಊರ ದಾರೀಲಿ ಹೋಗೋವಾಗ ದಾರಿಯ ಎಡಗಡೆ ಒಂದು ದೊಡ್ಡ ಎಸ್ಟೇಟ್ ಇದೆ. ಭಾರ್ಗವಿ ಎಸ್ಟೇಟ್. ಊರಲ್ಲಿ ಏನೇನೋ ಕಥೆ ಹೇಳ್ತಾರೆ. ಆ ಎಸ್ಟೇಟ್ ಮಾಲಿಕರ ಮಗಳು, ಭಾರ್ಗವಿ ಯಾವುದೋ ಕಾಯಿಲೆಯಿಂದ ಸತ್ತಳಂತೆ. ಅವಳು ಸತ್ತ ಮೇಲೆ ಅವರ ಮನೆಯವರೆಲ್ಲಾ ಬೇರೆ ಊರಿಗೆ ಹೊರಟೋದ್ರಂತೆ... ಆದರೆ ಮಾಲಿಕರ ಮಗಳಿಗೆ ಸತ್ಮೇಲೂ ಎಸ್ಟೇಟ್ ಮೇಲೆ ಪ್ರೀತಿ ಸಾಯದೆ, ಆ‌ ಎಸ್ಟೇಟ್ ಅಲ್ಲಿ ದೆವ್ವ ಆಗಿ‌ ಓಡಾಡ್ತಾ ಇದ್ದಾಳಂತೆ. ರಾತ್ರಿ ಹೊತ್ತು ಆ ದಾರಿಯಲ್ಲಿ ಊರಿಗೆ ನಡೆದು ಬರುವವರ ಕಣ್ಣಿಗೆ ಕಾಣಿಸಿಕೊಂಡು ತೊಂದರೆ ಕೊಡ್ತಾಳಂತೆ ಅಂತೆಲ್ಲಾ ಹೇಳಿದ್ದನ್ನು ಕೇಳಿದ್ಲು ಮನಸ್ವಿ....ಈಗ ಅದೆಲ್ಲಾ ಬೇಡ ಅಂದರೂ ನೆನಪಾಗ್ತಾ ಇತ್ತು ಅವಳಿಗೆ....

ಮನಸ್ಸಲ್ಲಿ ಭಯ ಇದ್ರು, ಮನೆಗೆ ಹೋಗ್ಬೇಕು ಅನ್ನೋದು ಮೈಂಡ್ ಅಲ್ಲಿ ಇದ್ದಿದ್ರಿಂದ ನಡ್ಕೋಂಡು ಹೋಗ್ತಾ ಇದ್ಲು...ಒಂದು ಹತ್ತು ನಿಮಿಷ ಆಗಿತ್ತು. ಭಾರ್ಗವಿ ಎಸ್ಟೇಟ್ ಗೇಟ್ ಇನ್ನೇನು ಇನ್ನೊಂದು ಸ್ವಲ್ಪ ದೂರದಲ್ಲಿ ಇತ್ತು...ಮನಸ್ವಿ ಎದೆ ಬಡಿತ ಜಾಸ್ತಿ ಆಯಿತು....ಬೇಗ ಬೇಗ ಓಡಿ ಬಿಡೋಣ ಅನ್ಕೊಂಡು ಹೆಜ್ಜೆ ಎತ್ತಿ ಓಡೋಕೆ ಹೋದಳು, ಆದರೆ ಕಲ್ಲೊಂದನ್ನು ಎಡವಿ ಆಯತಪ್ಪಿ ಬಿದ್ದಳು... ಓಡೋ ಮಾತು ಅಲ್ಲಿಂದ ಓಡಿ ಹೋಯ್ತು...ನಿಧಾನವಾಗಿ ಹೆಜ್ಜೆ ಇಡ್ತಾ ಬರ್ತಾ ಇದ್ಲು.... ಎಡಗಡೆ ಭಾರ್ಗವಿ ಎಸ್ಟೇಟ್ ನ ಮೈನ್ ಗೇಟ್ ಮೇಲೆ ಇದ್ದ ಫಲಕ ಗಾಳಿಗೆ ಅಲ್ಲಾಡೋಕೆ ಆರಂಭ ಆಯ್ತು......

ಸುತ್ತ ಕತ್ತಲು ಆಗ್ತಾ ಬರ್ತಿತ್ತು. ಆ ಗೇಟ್ ಹತ್ತಿರ ಬಂದ ಮೇಲೆ ಪೂರ್ತಿ ಕತ್ತಲು ಆಗೋಯ್ತು... ಆದರೆ ಗೇಟ್ ಹತ್ತಿರ ಇದ್ದ ಒಂದು ಲೈಟ್ ಉರಿತಾ ಇತ್ತು.... ನಿಶ್ಯಬ್ದ ವಾತಾವರಣ ಬೀಸೋ ಗಾಳಿ ಹಾಗೂ ಗೇಟ್ ಮೇಲೆ ಇದ್ದ ಆ ಭಾರ್ಗವಿ ಎಸ್ಟೇಟ್ ಅನ್ನೋ ಬೋರ್ಡ್ ಅಲ್ಲಾಡೋ ಶಬ್ದ ಬಿಟ್ಟರೆ ಬೇರೆ ಶಬ್ದ ಇಲ್ಲ.... ಮನಸ್ವಿ ನಿಧಾನವಾಗಿ ಬರ್ತಾ, ಈಗ ರಸ್ತೆಯಲ್ಲಿ ಕರೆಕ್ಟಾಗಿ ಆ ಗೇಟ್ ಮುಂದೆ ಇದ್ದಳು.... ಮುಂದೆ ನಡೆಯೋಕೆ ಅವಳು ಮಾಮೂಲಿಯಾಗಿ ಹೆಜ್ಜೆ ಎತ್ತಿಡೋಕೆ ಕಾಲು ಎತ್ತಿದಳು. ಆದರೆ ಅವಳ ಕಾಲು ಕದಲಲಿಲ್ಲ.... ಯಾರೋ ಅವಳ ಕಾಲನ್ನು ಬಲವಾಗಿ ಹಿಡಿದ ಹಾಗಿತ್ತು...

ಈಗ ಗೇಟ್ ಮೇಲೆ ಇದ್ದ ಬೋರ್ಡ್ ಇನ್ನೂ ಜೋರಾಗಿ ಆಡೋಕೆ ಪ್ರಾರಂಭ ಆಯ್ತು... ಅದು ಮಾಡ್ತಿದ್ದ ಶಬ್ದ ಮೊದಲಿಗಿಂತ ಜಾಸ್ತಿ ಆಯ್ತು....ಸಾಲದಕ್ಕೆ ಅಲ್ಲಿದ್ದ ಲೈಟ್ ಕೂಡಾ ಆನ್ ಆಫ್ ಆಗ್ತಾ ಆಟ ಆಡೋಕೆ ಶುರುವಾಯ್ತು.. ಮನಸ್ವಿಗೆ ಕಾಲು ಎತ್ತಿಡೋಕೆ ಆಗ್ತಾ ಇಲ್ಲ..... ತನ್ನ ಕಾಲು ಯಾಕೆ ಕದಲ್ತಾ ಇಲ್ಲಾ ಅಂತ ಭಯ ಆಯ್ತು...

ಭಯದಿಂದ ಆ ಗೇಟ್ ಮೇಲಿರೋ ಬೋರ್ಡ್ ಅಲ್ಲಾಡೋದನ್ನು ನೋಡ್ತಾ ಇದ್ಲು.... ಆಗ ಎಸ್ಟೇಟ್ ಒಳಗಿಂದ ರಭಸವಾಗಿ ಬೀಸಿ ಬಂತು ಗಾಳಿ... ಆ ಗಾಳಿ ವೇಗಕ್ಕೆ ಗೇಟ್ ದೊಡ್ಡ ಶಬ್ದ ಮಾಡ್ಕೋಂಡು ತೆರೆದುಕೊಳ್ತು..... ಮನಸ್ವಿಗೆ ಸಿಕ್ಕಾಪಟ್ಟೆ ಭಯ ಆಯ್ತು... ಓಡೋಕು ಆಗದ ಹಾಗೆ ಅವಳ ಕಾಲು ನೆಲಕ್ಕೆ ಅಂಟಿಕೊಂಡಿತ್ತು.... ಅವಳು ಭಯದಲ್ಲಿ ಇರ ಬೇಕಾದ್ರೆ ಅವಳ ಫೋನ್ ರಿಂಗ್ ಆಯ್ತು.... ಆ ಕ್ಷಣದಲ್ಲಿ ಆ ಶಬ್ದ ಕೂಡಾ ಭಯ ಹುಟ್ಟಿಸಿತ್ತು... ಕಾಲು ಕದಲ್ತಿಲ್ಲ.... ಹೋಗಲಿ ಫೋನ್ ನೋಡೋಣ ಅಂತ ಅವಳ ಕೈಯಿಂದ ಪರ್ಸ್ ತೆಗೆಯೋಕೆ ಪ್ರಯತ್ನ ಮಾಡೋ ವೇಳೆಗೆ ಅವಳ ಕೈ ಕೂಡ ಕದಲದೆ ಆಯ್ತು...

ಮನಸ್ವಿಗೆ ಏನಾಗ್ತಾ ಇದೆ ಅಂತ ಅರ್ಥ ಆಗ್ಲಿಲ್ಲ...‌ಕೈಕಾಲು ಎರಡು ಬಿಗಿದು ಹೋಗಿದ್ದವು. ಆಗ ಮತ್ತೆ ಎಸ್ಟೇಟ್ ಒಳಗಿಂದ ಬೀಸಿ ಬಂದ ಗಾಳಿ ಇವಳನ್ನು ತಾಕಿ ಹೋಯ್ತು... ಆ ಗಾಳಿ ತಾಕಿದ ತಕ್ಷಣ ಇವಳ ಕೈ ಕಾಲಲ್ಲಿ ಚಲನೆ ಆಯ್ತು... ಆದರೆ ಅದು ಅವಳ‌ ಇಷ್ಟದ ಪ್ರಕಾರ ಅಲ್ಲ... ಯಾರೋ ಅವಳ‌ ಕೈಯನ್ನು ಎಸ್ಟೇಟ್ ಕಡೆ ತಿರುಗಿಸಿದ್ದರು... ನಿಧಾನಕ್ಕೆ ಅವಳ ಪಾದಗಳು ಎಸ್ಟೇಟ್ ಕಡೆ ತಿರುಗಿದ್ವು... ಮನಸ್ವಿಗೆ ಏನು ಮಾಡಲಿಕ್ಕೆ ಆಗ್ತಿಲ್ಲ... ಯಾರೋ ಅವಳಿಂದ ಬಲವಂತವಾಗಿ ಅವಳ ಹೆಜ್ಜೆಯನ್ನು ಎಸ್ಟೇಟ್ ಕಡೆ ಇಡಿಸ್ತಾ ಇರೋ ತರ ಅನಿಸ್ತು....

ಹೌದು ಯಾವುದೋ ಶಕ್ತಿ ಬಲವಂತವಾಗಿ ಅವಳನ್ನು ಎಸ್ಟೇಟ್ ಕಡೆಗೆ ನಡೆಸ್ತಾ ಇತ್ತು... ಮನಸ್ವಿ ಕಿರುಚೋಕೆ ಬಾಯ್ತೆರದು ಕಿರುಚಿದಳು... ಆದರೆ ಅವಳ ಧ್ವನಿ ಅವಳಿಗೇ ಕೇಳಿಸಲಿಲ್ಲ.... ಊರಿನ ಜನ ಹೇಳ್ತಾ ಇದ್ದ ದೆವ್ವದ ಕಥೆ ನಿಜ ಇರಬಹುದಾ ಅನ್ನೋ ಭಯ ಅವಳಲ್ಲಿ ಹುಟ್ಟಿ ಕೊಂಡಿತ್ತು. ಕೈಕಾಲು ಕೂಡಾ ಕದಲಿಸಲು ಆಗ್ದೆ ಇರೋ ಅವಳು, ಅಲ್ಲಿಂದ ತಪ್ಪಿಸಿಕೊಂಡು ಹೋಗೋದು ಸಾಧ್ಯವೇ ಇಲ್ಲ ಅಂತ ಅವಳಿಗೆ ಅನಿಸ್ತು..... ಅಯ್ಯೋ ದೇವರೆ ಅತ್ತೆ ಬೇಡ ಬೇಡ ಅಂತ ಅಷ್ಟು ಹೇಳಿದ್ರು... ಅವರ ಮಾತು ಮೀರಿ ಬಂದಿದ್ದಕ್ಕೆ ತಕ್ಕ ಶಾಸ್ತಿ ಆಗ್ತಿದೆ ಅಂತ ದುಃಖ ಪಟ್ಟಳು....

ಬಲವಂತದ ಹೆಜ್ಜೆಯನ್ನು ಇಡ್ತಾ ಎಸ್ಟೇಟ್ ಗೇಟ್ ಹತ್ತಿರ ಬಂದೇ ಬಿಟ್ಲು..... ಬೇಡ ಅನ್ಕೊಂಡ್ರು ಏನೂ ಮಾಡೋಕ್ಕಾಗದೆ ಗೇಟ್ ದಾಟಿ ಎಸ್ಟೇಟ್ ಒಳಗೆ ಹೋದ್ಲು... ಅವಳು ಹೋದ ತಕ್ಷಣ ಗೇಟ್ ಮುಚ್ಚಿಕೊಂಡಿತು.... ಈಗ ಅವಳ ದೇಹನ ಹಿಡಿದಿದ್ದ ಶಕ್ತಿ ಅವಳನ್ನ ಬಿಟ್ಟು ಬಿಟ್ಟಿತ್ತು... ಮನಸ್ವಿ ವಾಪಸ್ಸು ಬರೋಕೆ ಓಡಿ ಬಂದ್ಲು, ಗೇಟ್ ತೆರೆಯೋ ಪ್ರಯತ್ನ ಮಾಡಿದ್ಲು,ಆದರೆ ಆ ಗೇಟ್ ಸ್ವಲ್ಪ ಕೂಡಾ ಕದಲಲಿಲ್ಲ... ಗೇಟ್ ಹತ್ತಿ ಹೊರಗೆ ಬರೋಣ ಅನ್ಕೊಂಡ್ಲು, ಆದರೆ ಆ ಗೇಟ್ ಎತ್ತರ ನೋಡಿ ಅದು ಸಾಧ್ಯ ಇಲ್ಲ ಅಂತ ಅವಳಿಗೆ ಗೊತ್ತಾಯ್ತು....

ಆ ಟೈಮಿಗೆ ಅವರೂರಿನ ಇಬ್ಬರು ಬೈಕಲ್ಲಿ ಬರ್ತಾ ಇರೋದು ಅವಳಿಗೆ ಕಾಣಿಸ್ತು... ಜೋರಾಗಿ ಅವರನ್ನು ಕರೆಯೋಕೆ ಅಂತ ಪ್ರಯತ್ನ ಮಾಡೋ ವೇಳೆಗೆ ಎಸ್ಟೇಟ್ ಒಳಗಿಂದ ಯಾವುದೋ ಶಕ್ತಿ ಅವಳ ಕಾಲುಗಳನ್ನು ಹಿಡಿದು ಎಳೆದುಕೊಂಡು ಹೋಯ್ತು... ಮನಸ್ವಿಯನ್ನು ಎಳ್ಕೊಂಡು ಹೋದ ಆ ಶಕ್ತಿ ಅವಳನ್ನು ಎಸ್ಟೇಟ್ ಒಳಗಿದ್ದ ಒಂದು ಮನೆ ಮುಂದೆ ತಂದು ಹಾಕಿತ್ತು.........

ಮನಸ್ವಿ ನಿಧಾನವಾಗಿ ಮೇಲೆ ಎದ್ದಳು.... ಸುತ್ತಾ ಇದ್ದ ಕತ್ತಲು ಚಂದ್ರನ ಬೆಳಕಿಂದ ಸ್ವಲ್ಪ ಕಡಿಮೆಯಾಗಿತ್ತು...

ಆ ಭಾರ್ಗವಿ ಎಸ್ಟೇಟ್ ಒಳಗೆ ಮನಸ್ವಿ ಒಬ್ಬಳೆ,,,,ಅರ್ಧಗಂಟೇಲಿ‌ ಮನೇಲಿ ಇರ್ತೀನಿ ಅನ್ಕೊಂಡು ಹೆಜ್ಜೆ ಇಟ್ಟೋಳು,,,ಯಾವುದೋ ಮನೆ ಮುಂದೆ ಭಯದಿಂದ ನಿಂತಿದ್ಲು....ಒಂದು ಸಲ‌ ಹಿಂದೆ ತಿರುಗೋ ಪ್ರಯತ್ನ ಮಾಡಿದ್ಲು, ತಕ್ಷಣ ಯಾರೋ ಗಟ್ಟಿಯಾಗಿ ಹಿಡಿದು ಮುಂದೆ ತಿರುಗಿಸಿದ ಹಾಗಾಯ್ತು ಅವಳಿಗೆ.... ಇಷ್ಟು ಹೊತ್ತು ಯಾರ ಶಬ್ದವೂ ಇಲ್ಲದ ಆ ಎಸ್ಟೇಟ್ ಒಳಗೆ, ಈಗ ಅವಳಿಗೆ ಒಂದು ಹೆಂಗಸಿನ ಧ್ವನಿ‌ ಕೇಳಿಸಿತು......

ಆ ಧ್ವನಿಯು, ಏ ಹುಡುಗಿ ನಡೀ ಮನೆ ಒಳಗೆ ಅಂತು..ಮನಸ್ವಿ ನಡುಗುತ್ತಾ ಯಾರು ನೀವು ಅಂದ್ಲು, ಆಗ ಆ ಧ್ವನಿ , ನನ್ನ ಎಸ್ಟೇಟ್ ಅಲ್ಲಿ ನಿತ್ಕೊಂಡು ನನ್ನನ್ನೇ ಯಾರು ಅಂತ ಕೇಳ್ತೀಯಾ ನಾನೇ ಭಾರ್ಗವಿ... ಈ ಎಸ್ಟೇಟ್ ನಂದೇ ಅಂತ ನಗುತ್ತಾ ಹೇಳಿತು... ಆ ನಗುವಿನ ಜೊತೆಗೆ ಅಬ್ಬರದ ಗಾಳಿ ಜೊತೆಯಾಯ್ತು..... ಮತ್ತೆ ಆ ಧ್ವನಿ ಮನಸ್ವಿಗೆ ನಡಿ ಮನೆ ಒಳಗೆ ಅಂತು... ಬೇರೆ ದಾರಿಯಿಲ್ಲದೆ ಅವಳು ಆ ಮನೆ ಒಳಗೆ ಹೋಗೋಕೆ ನಡೆದಳು... ಮನಸ್ವಿ ಮನೆ ಮುಂಭಾಗಿಲ ಹತ್ತಿರ ಬಂದ ತಕ್ಷಣ ಒಳಗಡೆ ಲೈಟ್ ಹೊತ್ತಿತ್ತು...ಮುಂಭಾಗಿಲು ಕಿರ್ರ್ ಅಂತ ತನ್ನಷ್ಟಕ್ಕೇ ತಾನೇ ತೆಕ್ಕೋಂತು.....

ಮನಸ್ವಿ ಒಳಗೆ ಹೋದ್ಲು..ಒಂದು ಲೈಟ್ ಆನ್ ಆಯ್ತು.....‌ಮನೆ ಹಾಲ್ ವಿಶಾಲವಾಗಿತ್ತು....‌ ಆದರೆ ಆ ಧ್ವನಿ ಮನಸ್ವಿಗೆ ಅಲ್ಲೇ ಮುಂದೆ ಕಾಣ್ತಾ‌‌ ಇದ್ದ ಮೆಟ್ಟಲು ಹತ್ತಿ ಮೇಲೆ ನಡೆ ಅಂತು...ಮನಸ್ವಿ ಮೇಲೆ ಹತ್ತಿದ್ಲು... ಮೇಲೆ ಸಾಲಾಗಿ ಕೋಣೆಗಳಿತ್ತು.... ಆ ಧ್ವನಿ ಎರಡನೆಯ ಕೋಣೆ ಹತ್ತಿರಕ್ಕೆ ನಡಿ ಅಂತು.... ಮನಸ್ವಿ ಅಲ್ಲಿಗೆ ಬಂದ್ಲು...‌ಆ ಕೋಣೆಯ ಬಾಗಿಲು ಓಪನ್ ಆಯ್ತು...ಮನಸ್ವಿ ಒಳಗೆ ಹೋದ್ಲು... ಆ ಧ್ವನಿ ಕೋಣೆಯ ಕಬೋರ್ಡ್ ಹತ್ತಿರ ಹೋಗಿ ಅದರ ಬಾಗಿಲು ತೆಗಿ ಅಂತು.‌ ಮನಸ್ವಿ ಬಾಗಿಲು ತೆರೆದ ಮೇಲೆ ಒಳಗಿದ್ದ ಫೋಟೋ ಆಲ್ಬಂ ತೆಗೆದುಕೊಂಡು ಕೆಳಗೆ ನಡೆ ಅಂತು ಆ ಧ್ವನಿ....

ಮನಸ್ವಿ ಆಲ್ಬಂ ಎತ್ತಿಕೊಂಡಳು. ಕಬೋರ್ಡ್ ಬಾಗಿಲು ಮುಚ್ಚಿ, ಅಲ್ಲೇ ಗೋಡೆಯ ಮೇಲಿದ್ದ ಕನ್ನಡಿ ನೋಡಿದಳು. ಒಂದು ಕ್ಷಣ ಎದೆ ಝಲ್ಲೆಂದಿತು. ಅವಳ ಹಿಂದೆ ಒಂದು ಮನುಷ್ಯ ಆಕೃತಿಯಂಥದ್ದು ಇತ್ತು.. ಅದರ ಮುಖ ವಿಕಾರವಾಗಿತ್ತು.... ಮನಸ್ವಿಗೆ ಅದು ದೆವ್ವ ಅಂತ ತಿಳಿಯಿತು... ಆಲ್ಬಂ ಹಿಡಿದು ಕೆಳಗೆ ಬಂದಳು. ಮನೆಯೊಳಗೆ ಲೈಟ್ ಗಳು ಹೊತ್ತಿಕೊಂಡವು....ಆ ಧ್ವನಿ ಆಲ್ಬಂ ತೆಗಿ ಅಂತು.... ಮನಸ್ವಿ ತೆಗೆದಳು. ಅದರಲ್ಲಿ ಯಾವುದೋ ಕುಟುಂಬದ ಫೋಟೋಗಳು ಒಂದಾಂದ ಮೇಲೊಂದು ಬಹಳ ಸುಂದರವಾಗಿದ್ದವು......

ಮನಸ್ವಿಗೆ ಆ ಫೋಟೋಗಳಲ್ಲಿದ್ದವರೆಲ್ಲಾ ಪರಿಚಯದವರಂತೆ ಕಂಡರು...ಮನಸ್ವಿ ಕೊನೆಯ ಪೋಟೋ ತೆರೆದಳು. ಅವಳ ಬಾಯಿಂದ ಮಾತು ಹೊರಡಲಿಲ್ಲ‌‌.‌.. ಆ ಧ್ವನಿ ಕಿರುಚುತ್ತಾ ಅದು ನಾನೇ ಭಾರ್ಗವಿ ಎಂದಿತು.... ಆದರೆ ಮನಸ್ವಿಗೆ ಆಗಿದ್ದ ಆಘಾತ ಅಷ್ಟಿಷ್ಟಲ್ಲ..... ಏಕೆಂದರೆ ಆ ಕಡೆಯ‌ ಫೋಟೋ ಅವಳಂತೇ ಇತ್ತು.... ಭಾರ್ಗವಿ ಹಾಗೂ ಮನಸ್ವಿ ಇಬ್ಬರೂ ಒಂದೇ ರೀತಿ..... ಮನಸ್ವಿ ಆಗ ಇದು ನಾನು ಅಂದ್ಲು.... ಆ ಧ್ವನಿ ಯಾರೇ ನೀನು, ನನ್ನ ಫೋಟೋ ನೋಡಿ ನಾನು ಅಂತೀಯಾ ಅಂತ, ಆ ಇಡೀ ಮನೆ ಪ್ರತಿಧ್ವನಿಸುವ ಹಾಗೆ ಕೂಗು ಹಾಕಿತು.....

ಮನಸ್ವಿಯ ಮುಂದೆ ತನ್ನ ವಿಕಾರವಾದ ಮುಖದಿಂದ ಕಾಣಿಸಿಕೊಂಡಿತು..ಮನಸ್ವಿಯನ್ನು ಮನೆಯಿಂದ ಹೊರಗೆ ತಂದು ಹಾಕಿತು. ನೆಲದ ಮೇಲಿದ್ದ ಅವಳ ಮುಖದ ಹತ್ತಿರ ತನ್ನ ಮುಖ ತಂದಿತು... ಆ ವಿಕಾರವಾದ ಮುಖ ನೋಡಿ ಮನಸ್ವಿ ಜೋರಾಗಿ ಕಿರುಚಿ ಪ್ರಜ್ಞೆ ತಪ್ಪಿದಳು.... ಆಮೇಲೆ ಇದ್ದಕ್ಕಿದ್ದಂತೆ ಮುಖದ ಮೇಲೆ ಮಳೆ ಹನಿಗಳ ಸಿಂಚನವಾದಂತಹ ಅನುಭವ.... ದೂರದಲ್ಲಿ ಯಾರೋ ಮನಸ್ವಿ ಎಂದು ಕರೆದಂತಾಯಿತು... ಮತ್ತೆ ಅದೇ ನೀರಿನ ಅನುಭವ, ನಿಧಾನವಾಗಿ ಕಣ್ಣು ಬಿಟ್ಟಳು.......

ಮಂಚದ ಮೇಲಿಂದ ಕೆಳಗೆ ಬಿದ್ದಿದ್ದಳು ಮನಸ್ವಿ... ಅವಳನ್ನು ಎಬ್ಬಿಸಲು ಅತ್ತೆ ನೀರು ಚಿಮುಕಿಸಿದ್ದರು...

ಕೈಯಲ್ಲಿದ್ದ ಫ್ಯಾಮಿಲಿ ಫೋಟೋ ಆಲ್ಬಂ ಕೂಡಾ ಪಕ್ಕದಲ್ಲೇ ಬಿದ್ದಿತ್ತು. ಅವರ ಅತ್ತೆ ಅವಳನ್ನು ಎಬ್ಬಿಸಿದರು...‌ ಮಂಚದ ಮೇಲೆ ಕೂತ್ಕೊಂಡ ಮನಸ್ವಿ ಆಲ್ಬಂ ನೋಡೋ ಮೊದಲು ಓದುತ್ತಿದ್ದ ಯಾವುದೋ ಮ್ಯಾಗಜೀನ್ ಅಲ್ಲೇ ಇತ್ತು... ಗಾಳಿಗೆ ಅದು ಓಪನ್ ಆಯ್ತು... ಅದರಲ್ಲಿತ್ತು ಕಥೆ ಭಾರ್ಗವಿ ಎಸ್ಟೇಟ್..... ನಿದ್ದೆ ಮಾಡೋ ಮೊದಲು ಕಥೆ ಓದಿ, ಆಮೇಲೆ ಆಲ್ಬಂ ನೋಡ್ತಾ ನಿದ್ರೆಗೆ ಜಾರಿದ್ದ ಮನಸ್ವಿಗೆ ಈ ತರ ಒಂದು ಭಯಾನಕ ಕನಸು ಬಿದ್ದಿತ್ತು........

ಕಲ್ಪನಾ ಲೋಕದ ವಿಹಾರಿಯ ಮೌನ ಮಾತಾಗುವ ಸಮಯ..


Rate this content
Log in

Similar kannada story from Horror