Ashwini MN

Romance Inspirational Others crime

4.2  

Ashwini MN

Romance Inspirational Others crime

ಇನಿಯನಲ್ಲ, ಆದರೂ ಸನಿಹ ಬಂದಿಹನಲ್ಲ!

ಇನಿಯನಲ್ಲ, ಆದರೂ ಸನಿಹ ಬಂದಿಹನಲ್ಲ!

6 mins
788



ಡೋರ್ ಬೆಲ್ ರಿಂಗ್ ಆದಾಗ, ನಾನು ಎಂದು ತಿಳಿಯದೆ ಬಾಗಿಲು ತೆರೆದಿದ್ದ ಪೃಥ್ವಿ! ನನ್ನನ್ನು ನೋಡಿ ಸ್ವಲ್ಪ ತಡಬಡಾಯಿಸಿದಂತೆ ಕಂಡರೂ, ಸಾವರಿಸಿಕೊಂಡು ನಾನಿತ್ತ ಪಾಯಸದ ಬಾಕ್ಸ್ ಅನ್ನು ತೆಗೆದುಕೊಂಡು,

"ಬನ್ನಿ", ಎಂದು ಒಳ ಕರೆದ. ಆಶ್ಚರ್ಯ ಕಾದಿತ್ತು ನನಗೆ! ಹಾಲಿನಲ್ಲಿದ್ದ ಕ್ಯಾನ್ವಾಸ್ ಮೇಲೆ ಅವನ ಕುಂಚದಿಂದ ಅರಳುತಲಿತ್ತು ನನ್ನ ಚಿತ್ರ!

ನನ್ನ ಮುಖದಲ್ಲಿ ಮೂಡುತ್ತಿದ್ದ ಭಾವನೆಗಳನ್ನು ಗಮನಿಸುತ್ತಿದ್ದ. ನಾ ರೋಮಾಂಚನಗೊಂಡು, ಮನಸ್ಸು ಒಂದು ರೀತಿ ಸಂತೋಷಪಡುತ್ತಿದ್ದರೂ ಅದನ್ನು ಮುಖದ ಮೇಲೆ ತೋರ್ಪಡಿಸಿಕೊಳ್ಳದ ಹಾಗೆ ಇರಲು ಪ್ರಯತ್ನಿಸುತ್ತಿದ್ದೆ! ಸಾಫ್ಟ್ ವೇರ್ ಇಂಜಿನಿಯರ್ ಆದರೂ ಅವನಿಗೆ ಪೇಂಟಿಂಗ್ ಹವ್ಯಾಸವಾಗಿತ್ತು. ಸುಂದರವಾದುದನ್ನು ಮತ್ತು ಇಷ್ಟಪಟ್ಟಿದ್ದನ್ನು ಮಾತ್ರ ಚಿತ್ರಿಸುತ್ತೇನೆಂದು ಹೇಳಿದ್ದ. ಆದ್ದರಿಂದ ನನ್ನ ಚಿತ್ರ ನೋಡಿದಾಗ ಒಂದು ರೀತಿ ಆಶ್ಚರ್ಯ, ಸಂತೋಷ, ದ್ವಂದ್ವ. ಹೀಗೆ ಏನೇನೋ ಭಾವನೆಗಳು ಮೂಡಿದವು.

"ಆಶ್ಚರ್ಯ ಆಯ್ತಾ?! ಇವತ್ತು ನಿಮ್ಮ ಬರ್ತಡೇಗೆ ಗಿಫ್ಟ್ ಮಾಡೋಣ ಅಂತ ಚಿತ್ರಿಸುತ್ತಿದ್ದೆ", ಎಂದ.

"ಓ ಹೌದ?! ಥ್ಯಾಂಕ್ಸ್", ಎಂದೆ ಭಾವನೆಗಳನ್ನು ಅದುಮಿಕೊಳ್ಳುತ್ತಾ.

ಅದನ್ನು ಗಮನಿಸಿದವನಂತೆ,"ಅಷ್ಟೇನಾ?!! ಬೇರೇನು ಇಲ್ವ?!!", ಎಂದ, ನನ್ನ ಕಣ್ಣುಗಳನ್ನೇ ದಿಟ್ಟಿಸುತ್ತ. ಅವನ ಆ ನೋಟಕ್ಕೆ ಎಂದಿನಂತೆ ಮರುಳಾದೆ!

ಹೃದಯ ವೇಗವಾಗಿ ಬಡಿಯತೊಡಗಿತು, ಅವನ ನೋಟವನ್ನು ಎದುರಿಸಲಾರದೆ! ಏನು ಹೇಳಬೇಕೆಂದು ತೋಚದೆ ಅತ್ತ ಇತ್ತ ನೋಡುತ್ತ ನಿಂತಿದ್ದಾಗ, ಅತ್ತೆಯಿಂದ ಫೋನ್ ಬಂತು. ಅದೇ ನೆಪ ಮಾಡಿಕೊಂಡು ಮನೆಗೆ ಓಡಿದೆ.


***************


ಮನೆ ತಲುಪಿದರೂ, ಹೃದಯ ಇನ್ನೂ ಹೊಡೆದುಕೊಳ್ಳುತ್ತಲೇ ಇತ್ತು. ಅವನನ್ನು ಮೊದಲು ನೋಡಿದ ದಿನವೂ ಹೀಗೆಯೇ, ಹೃದಯ ಜೋರಾಗಿ ಬಡಿದುಕೊಳ್ಳುತ್ತಿತ್ತು. ಕಾರಣ ಬೇರೆ. ನಮ್ಮ ಅಪಾರ್ಟ್ಮೆಂಟ್ ಲಿಫ್ಟ್ ಕ್ಲೋಸ್ ಆಗುವಷ್ಟರಲ್ಲಿ ಒಳ ಸೇರಲು ಜೋರಾಗಿ ಓಡಿದ್ದೆ. ಲಿಫ್ಟ್ ಕ್ಲೋಸ್ ಆಗುತ್ತಿದ್ದಂತೆ ತಲೆ ಸುತ್ತಿ ಕುಸಿದೆ. ಆಗ ಒಳಗಿದ್ದ ಇವನು, ತಕ್ಷಣ ತನ್ನ ವಾಟರ್ ಬಾಟಲ್ ಕೊಡುತ್ತಾ, ನನ್ನ ಕೈಗಳಲ್ಲಿದ್ದ ಬ್ಯಾಗ್ಗಳನ್ನು ತೆಗೆದು ಕೆಳಗಿಡುತ್ತಾ ಮಾಸ್ಕ್ ತೆಗೆದು, ಕೂರುವಂತೆ ನನಗೆ ಹೇಳಿದ. ಆಗ ಸ್ವಲ್ಪ ಸಮಾಧಾನವಾಯಿತು. ಪಿರಿಯಡ್ಸ್ ದಿನ, ಬಿಸಿಲಿನಲ್ಲಿ, ಊಟ ಮಾಡದೆ, ಸಾಮಾನುಗಳನ್ನು ತರಲು ಮಾರ್ಕೆಟ್ಗೆ ಹೋಗಲೇಬಾರದು ಎಂದು ಅಂದು ನಿರ್ಧರಿಸಿದೆ. ಆಗಂತುಕನಾಗಿದ್ದರೂ ಒಳ್ಳೆಯವನಂತೆ ಕಂಡ ಅವನಿಗೆ ಸಂಜ್ಞೆಯಲ್ಲೇ ಥ್ಯಾಂಕ್ಸ್ ಹೇಳಿದೆ. ನನ್ನ ಅವಸ್ಥೆ ಕಂಡು ನಮ್ಮ ಫ್ಲ್ಯಾಟ್ ವರೆಗೂ ಬಿಡಲು ಬಂದವನಿಗೆ, ಅತಿಥಿ ದೇವೋಭವ ಎನ್ನುವ, ಅತ್ತೆ ಮಾವ ಸುಮ್ಮನೆ ಹೋಗಲು ಬಿಡಲಿಲ್ಲ. ಕಾಫಿ-ತಿಂಡಿ ಉಪಚಾರ, ಪರಿಚಯ ಎಲ್ಲಾ ಆಯಿತು. ಆಗ ಅವನ ಬಗ್ಗೆ ತಿಳಿದಿದ್ದು, ಹೆಸರು ಪೃಥ್ವಿ. ಕನ್ನಡದವ, ಬ್ಯಾಚುಲರ್. ನಮಗಿಂತ 2 ಫ್ಲೋರ್ ಮೇಲಿದ್ದಾನೆ ಎಂದು. ಹೊಸದಾಗಿ ಬಂದಿದ್ದ ನಮಗೆ ಅಲ್ಲಿ ಹಳಬನಾಗಿದ್ದ ಅವನ ಪರಿಚಯವಾಗಿದ್ದು, ಒಳ್ಳೆಯದಾಯ್ತು ಎನಿಸಿತು. ಕೋರೊನಾದಿಂದಾಗಿ ಅವನು ಸಹ ಆಫೀಸ್ ಹೋಗದೆ ತನ್ನ ಫ್ಲಾಟ್‌ನಿಂದ ವರ್ಕ್ ಮಾಡುತ್ತಿದ್ದ. ಹೀಗೆ ಶುರುವಾಯ್ತು ನಮ್ಮ ಪರಿಚಯ. ಎಂಥವರನ್ನು ಆಕರ್ಷಿಸುವ ವ್ಯಕ್ತಿತ್ವ ಅವನದ್ದು. ನನ್ನ ಅತ್ತೆ, ಮಾವ ಮತ್ತು ಪುಟ್ಟ ಮಗಳು ಅವನಿಗೆ ಹತ್ತಿರವಾದರು. ಬೇಜಾರಾದಾಗಲೆಲ್ಲ, ಅವನು ಇಲ್ಲಿಗೆ ಅಥವಾ ಅಜ್ಜ, ಮೊಮ್ಮಗಳು ಅವನ ಫ್ಲ್ಯಾಟಿಗೆ ಹೋಗುತ್ತಿದ್ದರು. ಅತ್ತೆ ವಿಶೇಷ ಅಡಿಗೆ ಮಾಡಿದಾಗ ಊಟಕ್ಕೆ ಕರೆಯದೆ ಬಿಡುತ್ತಿರಲಿಲ್ಲ.



ಹೀಗಿದ್ದಾಗ, ಅತ್ತೆ ಮಾವನಿಗೆ ಕೊರೋನ ಪಾಸಿಟಿವ್ ಆಯ್ತು. ಇತ್ತ ಚಿಕ್ಕ ಮಗಳು, ಅತ್ತ ವಯಸ್ಸಾದವರು. ಹಾಸ್ಪಿಟಲ್ನಲ್ಲಿ ಬೆಡ್ ಗಳಿಲ್ಲ. ಡಾಕ್ಟರ್ ಗಳು ಸಿಗುತ್ತಿಲ್ಲ. ಒಬ್ಬಂಟಿಯಾಗಿ ನಾನು ಕಂಗಾಲಾದಾಗ, ಆಫೀಸ್ಗೆ ರಜೆ ಹಾಕಿ ನನ್ನ ಸಹಾಯಕ್ಕೆ ಬಂದ ಪೃಥ್ವಿ. ಅತ್ತೆ-ಮಾವನಂತೂ ನೀನೂ ನಮ್ಮ ಮಗನೇ ಎಂದು ಭಾವುಕರಾದರು. ನನಗಂತೂ ಆಪತ್ಭಾಂದವನಂತೆ ಎನಿಸಿದ. ಅದಾದ ಮೇಲೆ ನಮ್ಮ ಪರಿಚಯ ಸ್ನೇಹಕ್ಕೆ ತಿರುಗಿತು. ವರ್ಷ ಕಳೆಯುವಷ್ಟರಲ್ಲಿ ನಮ್ಮ ಮನೆಯವನಂತೆ ಆದ. ದಿನಕ್ಕೊಮ್ಮೆಯಾದರೂ ನಮ್ಮ ಮನೆಗೆ ಬರುತ್ತಿದ್ದ.



ಆ ದಿನ ನೆನೆಪಿದೆ. ಹಬ್ಬಕ್ಕೆಂದು ಸೀರೆ ಉಟ್ಟಿದ್ದಾಗ ಮನೆಗೆ ಬಂದವ, ಅವಕ್ಕಾಗಿ ನನ್ನನ್ನೆ ನೋಡುತ್ತಾ ನಿಂತ. ಒಂದು ರೀತಿ ಮೆಚ್ಚುಗೆ, ಆರಾಧನಾ ಭಾವನೆ ಇತ್ತು. ನನಗೆ ಮುಜುಗರವಾಯ್ತು ಹಾಗೆ ಸ್ವಲ್ಪ ನಾಚಿಕೆ. ಏಕೆಂದರೆ ಇಷ್ಟು ವರ್ಷಗಳಲ್ಲಿ ಯಾರೂ ಹಾಗೆ ನೋಡಿರಲಿಲ್ಲ. ಅವನೇ ಸಾವರಿಸಿಕೊಂಡು,

"ರೀ, ನಾನು ಕಲಾರಸಿಕ, ಆರಾಧಕ, ಹಾಗಾಗಿ ಡೈರೆಕ್ಟಾಗಿ ಹೇಳ್ತಿನಿ. ನೀವು ತುಂಬಾ ಚೆನ್ನಾಗಿದ್ದೀರಿ, ಆದರೆ ನಿಮಗೆ ನಿಮ್ಮ ಮೇಲೆ ಏಕೆ ನಿರಾಸಕ್ತಿ, ಅಸಡ್ಡೆ? ಮನೆಯಲ್ಲೇ ಇದ್ರೂ, ಸ್ವಲ್ಪ ತಲೆ ಬಾಚಿ, ಒಳ್ಳೆ ಬಟ್ಟೆ ಹಾಕಬಹುದಲ್ವ?",ಎಂದು ಮುಜುಗರದ ವಾತಾವರಣವನ್ನು ತಿಳಿ ಮಾಡಿದ.


ಅವನು ಹೇಳಿದ್ದು ನಿಜ. ನಾನು ಯಾರಿಗಾಗಿ ಶೃಂಗಾರ ಎಂದು, ನೈಟ್ ಡ್ರೆಸ್ ಹಾಕಿ, ತಲೆಗೂದಲು ಗಂಟು ಹಾಕಿಕೊಂಡು ದಿನ ಕಳೆಯುತ್ತಿದ್ದೆ. ಆಚೆ ಹೋದರೂ ಅಷ್ಟೆ, ಹಳೆಯ ಡ್ರೆಸ್, ಒಂದು ಪೋನಿ ಹಾಕಿ ಹೊರಡುವುದು. ಅತ್ತೆ ನನ್ನನ್ನು," ಅಜ್ಜಿ ಹಾಗೆ ಇರ್ತೀಯ. ಹೋಗಲಿ ಬಿಡು ಯಾರಿಗಾಗಿ ಅಲಂಕಾರ ಮಾಡಿಕೊಳ್ಳಬೇಕು ನೀನು",ಎಂದು ಗೇಲಿ ಮಾಡುತ್ತಿದ್ದರು. ಹೌದು 29ಕ್ಕೆ 69ರ ಪ್ರಾಯದಂತೆ ನಿರಾಸಕ್ತಿ ಹೊಂದಿದ್ದೆ. ಆಮೇಲೆ ಅವನ ಮಾತಿನಿಂದ ಪ್ರಭಾವಕ್ಕೊಳಗಾದವಳಂತೆ, ಮರುದಿನ ಒಳ್ಳೆ ಸೆಲ್ವಾರ್ ತೊಟ್ಟು ಲೈಟ್ ಮೇಕಪ್ ಮಾಡಿದೆ. ಆ ದಿನ ನನ್ನ ನೋಡಿದ ಅವನು, ಕಣ್ಣಲ್ಲೇ ಮೆಚ್ಚುಗೆ ವ್ಯಕ್ತಪಡಿಸಿದ. ಖುಷಿಯಾಯ್ತು. ಅದನ್ನು ಹಾಗೆಯೇ ಮುಂದುವರೆಸಿದೆ. ಅವನು ನೋಡಲೆಂದು ಅಲಂಕರಿಸಿಕೊಳ್ಳುತ್ತಿರುವೆಯೊ ಎಂದು ಬುದ್ಧಿ ಕೇಳಿತು. ಇಲ್ಲ ಇಲ್ಲ! ನನಗಾಗಿ ಎಂದು ನಾನು ಬುದ್ಧಿಯನ್ನು ಸುಮ್ಮನಾಗಿಸಿದೆ.


ಮುಂದಿನ ದಿನಗಳಲ್ಲಿ ಸ್ನೇಹದಲ್ಲಿ ಸಣ್ಣ ಸಲಿಗೆ ಸೇರಿತು. ನನ್ನ ವಾಟ್ಸ್ಯಾಪ್ ಡಿಪಿ/ಸ್ಟೇಟಸ್ಗಳಿಗೆ ಅವನಿಂದ ಮೆಚ್ಚುಗೆಗಳು ವ್ಯಕ್ತವಾಗತೊಡಗಿದವು. ಆ ಮೆಚ್ಚುಗೆಗಳು, ನನ್ನ ಮನ ನವಿಲಿನ ಹಾಗೆ ಕುಣಿಯುವಂತೆ ಮಾಡಿತು. ಮೆಚ್ಚುಗೆಯ ಜೊತೆ ಸಜೆಷನ್ಸ್ ಕೂಡ ಕೊಡಲು ಶುರು ಮಾಡಿದ,"ಆ ಬಣ್ಣ ಸೂಟ್ ನಿಮಗೆ, ಆ ಬಟ್ಟೆ ಧರಿಸಿ ...", ಎಂದು. ಈ ಮೆಚ್ಚುಗೆಯ ಮೆಸೇಜ್ಗಳ್ನು ಓದಿದ ಮೇಲೆ ಡಿಲೀಟ್ ಮಾಡುವಾಗ, ಇದು ತಪ್ಪೆ ಹಾಗಾದರೆ? ಎನಿಸಿ ಬುದ್ಧಿ ಬೇಡವೆಂದರೂ, ಆ ಮೇಸೇಜ್ ಗಳು ಕೊಡುತ್ತಿದ್ದ ಒಂದು ರೀತಿಯ ನಶೆಗೆ ನಾ ಸೋತು ಅವನೆಡೆಗೆ ವಾಲುತ್ತಿದ್ದೆ! ಕೆಲವೊಮ್ಮೆ ಆ ಮೆಚ್ಚುಗೆಗಾಗಿಯೇ ನಾ ಡಿಪಿ/ಸ್ಟೇಟಸ್ ಹಾಕುವಂತಹ ಹಂತಕ್ಕೆ ಹೋದೆ. ಅವನ ರಿಪ್ಲೈ ಸ್ವಲ್ಪ ತಡವಾದರೂ ಮನಸ್ಸು ಚಡಪಡಿಸುತ್ತಿತ್ತು.


ಇದೊಂದು ವಿಷವರ್ತುಲವೆನಿಸಿತು. ಕೆಲವೊಮ್ಮೆ ಈ ಪರದೆ ಕಳಚಿದಂತಾಗಿ ನಾ ಮದುವೆಯಾದವಳೆಂದು, ಇವೆಲ್ಲ ತಪ್ಪು ಎಂದು ಅರ್ಥವಾಗಿ ಸುಮ್ಮನಾದರು, ಅವನನ್ನು ನೋಡಿದ ತಕ್ಷಣ ಎಲ್ಲಾ ಮರೆತು, ಇದೆಲ್ಲಾ ಸ್ನೇಹ ಅಷ್ಟೇ ಎಂದು ಬುದ್ಧಿಗೆ ಬುದ್ಧಿ ಹೇಳಿ ಈ ವ್ಯೂಹದೊಳಗೆ ಪುನಃ ನುಸುಳುತ್ತಿದ್ದೆ. ಮನಸ್ಸಿನೊಳಗೆ ಈ ಜಟಾಪಟಿ ನಡೆಯುತ್ತಲೇ ಇತ್ತು.


ಅವನ ಆಗಮನ, ಕಪ್ಪು-ಬಿಳುಪು/ಮೂಕಿ ಚಿತ್ರದಂತೆ ಹೋಗುತ್ತಿದ್ದ ಜೀವನವನ್ನು ಕಲರ್ ಫುಲ್ ಮಾಡಿತ್ತು. ಉದರದಲ್ಲಿ ಚಿಟ್ಟೆಯಾಡಿದಂತಿತ್ತು. ಮನೆಗೆ ಸಾಮಾನು ತರಲು, ಮಗಳನ್ನು ಪಾರ್ಕ್ಗೆ ಒಯ್ಯಲು, ಹುಷಾರಿಲ್ಲದಾಗ ಆಸ್ಪತ್ರೆಗೆ, ಮನೆಯಲ್ಲಿ ಮೂವಿ/ಸೀರಿಸ್ ನೋಡುವುದಕ್ಕೆ.. ಹೀಗೆ ಎಲ್ಲದಕ್ಕೂ ನನ್ನ ಜೊತೆಯಾದ. ಅವನೊಡನಿದ್ದರೆ, ಅವನ ಮಾತು ಕೇಳುತ್ತಿದ್ದರೆ ಮನ ಹಿಗ್ಗುತಿತ್ತು. ಜೀವನದಲ್ಲಿ ಹುರುಪು, ಉತ್ಸಾಹ ಬಂತು.



*********************


ಅತ್ತೆ ಬಂದು, ಪೃಥ್ವಿ ಬಂದಿದ್ದಾನೆ ನಿನಗೆ ವಿಶ್ ಮಾಡಲು ಎಂದಾಗ ವಾಸ್ತವಕ್ಕೆ ಬಂದೆ. ಅತ್ತೆ, ಮಾವ ಮತ್ತು ಮಗಳು ವಾಕ್ ಹೋದ ತಕ್ಷಣ, ತಟ್ಟನೆ ಪೇಂಟಿಂಗ್ ನನ್ನ ಕೈಗಿತ್ತ ಪೃಥ್ವಿ,"ನಾ ಬೆಳಿಗ್ಗೆ ಹೇಳಿದ್ದರ ಬಗೆ ಏನು ಯೋಚನೆ ಮಾಡಿದ್ರಿ?",ಎಂದ. ನಾ ಗೊಂದಲಕ್ಕೊಳಗಾಗಿ ಮೌನವಾದೆ.

ಅವನೇ ಶುರು ಮಾಡಿದ. "ನಾನು ಹೀಗೆ ಒದ್ದಾಡುತ್ತಿದ್ದೆ, ನಿಮ್ಮ ಭೇಟಿ ಆದ ಮೇಲೆ. ಇದೆಲ್ಲಾ ಏನು ಎಂದು ತಿಳಿಯದೆ. ಕೊನೆಗೆ ಅಳೆದು ಸುರಿದು ನೋಡಿದ ಮೇಲೆ ತಿಳಿದೆ, ಇದು ಪ್ರೀತಿಯೆಂದು. ಕೊನೆಗೆ ಇವತ್ತು ನಿಮ್ಮ ಬರ್ತಡೆಯಂದು ಮನಸ್ಸಿನಲ್ಲಿರುವುದನ್ನು ಹೇಳಿ ಹಗುರ ಮಾಡಿಕೊಳ್ಳೋಣವೆಂದು ನಿರ್ಧಾರ ಮಾಡಿದೆ. ಗೊತ್ತು, ನಿಮಗೆ ಮದುವೆ ಆಗಿದೆ ಎಂದು. ತಪ್ಪೋ ಸರಿನೋ ಗೊತ್ತಿಲ್ಲ. ಆದರೂ ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ. ಮೋಹವಲ್ಲ ಇದು. ನಾನೇನು ಟೀನೇಜ್ ಹುಡುಗನಲ್ಲ ಅಕರ್ಷಣೆಗೊಳಗಾಗಲು! ಅಥವಾ ನಿಮ್ಮ ಸೌಂದರ್ಯಕ್ಕೆ ಮಾರು ಹೋಗಿಲ್ಲ. ಸುಮಾರು 1ವರ್ಷದಿಂದ ನನ್ನೊಳಗೆ ನಡೆದ ಯುದ್ಧ ನಿಮಗೆ ಗೊತ್ತಿಲ್ಲ. ನಿಮ್ಮನ್ನು ಪ್ರೀತಿಸದೆ ಇರಲು ಆಗಲಿಲ್ಲ. ಕೊನೆಗೆ ಈ ನಿರ್ಧಾರಕ್ಕೆ ಬಂದೆ. ನಾವಿಬ್ಬರು ಮದುವೆಯಾಗಿ ದೂರ ಹೋಗೋಣ. ನನಗೆ ಗೊತ್ತು, ನಿಮಗೂ ಇಷ್ಟ ಇದೆ ಅಂತ. ನಿಮ್ಮ ಕಣ್ಣುಗಳಲ್ಲಿ ನೋಡಿದ್ದೀನಿ. ನಾ ನಿಮ್ಮ ಮಗಳನ್ನು, ನನ್ನ ಮಗಳಂತೆ ಕಾಣುತ್ತೇನೆ. ನಿಮ್ಮನ್ನ ರಾಣಿಯಂತೆ ನೋಡಿಕೊಳ್ಳುತ್ತೇನೆ. ನಿಮಗೆ ಚೂರು ನೋವಾಗದಂತೆ ಕಾಪಾಡುತ್ತೇನೆ. ಅದ್ಹೇಗೆ ನಿಮ್ಮ ಗಂಡ ನಿಮ್ಮನ್ನು ಇಷ್ಟು ವರ್ಷ ಬಿಟ್ಟಿದ್ದಾರೋ ಗೊತ್ತಿಲ್ಲ. ಆದರೆ ಒಂದು ಕ್ಷಣವೂ ನಾ ಬಿಟ್ಟಿರದಂತೆ ನೋಡಿ.. " ಆ ಪದಗಳನ್ನು ಕೇಳಿದ ತಕ್ಷಣ ಅವನನ್ನು ನೋಡಿದೆ. ನನ್ನ ಕಣ್ಣಲ್ಲಿ ನೀರು ತುಂಬಿತು. ಅವನ ಪಾಡಿಗೆ ಅವನು ಮೆದು ಧ್ವನಿಯಲ್ಲಿ ಬೇರೆಡೆ ನೋಡುತ್ತಾ ತನ್ನ ಪ್ರೀತಿಯನ್ನು ವ್ಯಕ್ತಪಡಿಸುತ್ತಲೇ ಇದ್ದ! ಅವನ ಆ ಪ್ರೀತಿ ನಿವೇದನೆಯನ್ನು ಯಾವ ಹುಡುಗಿಯು ಬೇಡವೆನ್ನದೆ ಇರಲಾರಳು!


ಕೊನೆಯಲ್ಲಿ ಹೊರಡುತ್ತಾ,"ನಿಮ್ಮ ಅಭಿಪ್ರಾಯ ತಿಳಿಸಿ. ರಾತ್ರಿ ಹತ್ತಕ್ಕೆ ಕಾಲ್ ಮಾಡ್ತೀನಿ. ಮದುವೆ ನಿಮಗೆ ಕಷ್ಟವಾದರೆ, ಅಟ್ಲೀಸ್ಟ್ ನಮ್ಮ ಸ್ನೇಹವನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ಯೋಣ! ಹಾಗಂತ ಇದಕ್ಕೆ ಅನೈತಿಕ ಎಂದು ಹೆಸರಿಡಬೇಡಿ. ವಿಶೇಷ ಅನುಬಂಧ ಇದು. ಮತ್ತು ನಮ್ಮಿಬ್ಬರ ಸಿಕ್ರೇಟ್ ಆಗಿರುತ್ತದೆ. ನಿಮ್ಮನ್ನು ಬಿಟ್ಟು ಯಾರನ್ನು ಮದುವೆಯಾಗಲು ನಾ ರೆಡಿ ಇಲ್ಲ. ಅದಕ್ಕಾಗಿ ಇನ್ನೊಂದು ಆಫ್ಶನ್ ಕೊಟ್ಟೆ. ಒಪ್ಪಿಕೊಳ್ಳಿ ಪ್ಲೀಸ್, ನೀವು ನಿರಾಶೆ ಮಾಡಿದ್ರೆ, ನಾ ಈ ಊರಿನಿಂದ, ನಿಮ್ಮಿಂದ ದೂರ ಹೋಗಿಬಿಡುತ್ತೇನೆ", ಎನ್ನುತ ಬಂದು ಕೈ ಹಿಡಿದ. ಕರೆಂಟ್ ಸಂಚಲನವಾದಂತಾಯ್ತು ಆ ಸ್ಪರ್ಶಕ್ಕೆ.



ರಾತ್ರಿ ಮಗಳ ಮಲಗಿಸುತ್ತಾ, ಹಾಗೆ 9 ವರ್ಷಗಳ ಕಾಲ ಹಿಂದೆ ಹೋದೆ. ಡಿಗ್ರಿಯಾದ ತಕ್ಷಣ ಒಳ್ಳೆಯ ಸಂಬಂಧವೆಂದು, ಪಪ್ಪ ಜಾಸ್ತಿ ಯೋಚಿಸದೆ ಚಿಕ್ಕ ವಯಸ್ಸಿಗೆ ಮದುವೆ ಮಾಡಿಬಿಟ್ಟರು. ಕೆಲಸಕ್ಕೆ ಸೇರಬೇಕು, ಫ್ರೆಂಡ್ಸ್ ಜೊತೆ ಕಾಲ ಕಳೆಯಬೇಕು, ದೇಶ ಸುತ್ತಬೇಕು ಎನ್ನುವ ಆಸೆಗೆಲ್ಲಾ ಬೈ ಹೇಳಿ ಮದುವೆಯೆಂಬ ಪಂಜರ ಸೇರಿದೆ. ರಾಜೇಶ್ ಮಧ್ಯಮ ವರ್ಗದ ನೂರಾರು ಕನಸು ಹಾಗು ಜವಾಬ್ದಾರಿ ಹೊತ್ತ ಹುಡುಗ. ಮದುವೆಯಾದ 1ವರ್ಷಕ್ಕೆ ಒಳ್ಳೆಯ ಆಫರ್ ಬಂತೆಂದು ವಿದೇಶಕ್ಕೆ ಹೋದರು. ಒಬ್ಬನೇ ಹೋದರೆ ಉಳಿತಾಯ ಜಾಸ್ತಿ ಎಂದು, ಅವರ ಅಪ್ಪ ಅಮ್ಮನೊಂದಿಗೆ ನನ್ನನ್ನು ಬಿಟ್ಟು ಹೋದರು. ಅವರ ಜೊತೆ ಹೋಗುವ ಆಸೆ ಇದ್ದರೂ, ಅರ್ಥ ಮಾಡಿಕೊಂಡು ಸುಮ್ಮನಾದೆ. ಮಕ್ಕಳಾಗುವುದನ್ನು ಸಹ ಮುಂದೂಡಿದರು. ನೋವಾದರೂ ನುಂಗಿಕೊಂಡೆ. ವರ್ಷಕ್ಕೊಮ್ಮೆ ಭಾರತಕ್ಕೆ ಬರುತ್ತಿದ್ದರು. ವೀಡಿಯೋ ಕಾಲ್ಗಳು, ಅವರು ನನ್ನ ಹತ್ತಿರವಿದ್ದಂತೆ ಮಾಡಲಾದಿತೇ? ನನ್ನ ಒಂಟಿತನ, ವಿರಹವನ್ನು ಕಡಿಮೆ ಮಾಡಿತೇ? ಅವರ ತಂಗಿಯರ ಮದುವೆಯ ಸಾಲ ತೀರಿದರೂ, ಸ್ವಂತ ಮನೆ ಕೊಳ್ಳಲು ಹಣ ಸಂಪಾದನೆಗಾಗಿ, ಪುನಃ ವಿದೇಶದಲ್ಲೇ ಕೆಲಸ ಮುಂದುವರೆಸಿದರು. ಬೇಜಾರಾದರೂ ನಾನು ಸುಮ್ಮನಾದೆ. ಜೀವನದ ಏಕತಾನತೆಯಿಂದ ಉತ್ಸಾಹ ಕಳೆದುಕೊಂಡೆ. ಆದರೆ ಕೇಳುವವರ್ಯಾರು? ಇದರಿಂದ ಹೊರ ಬರಲು ಕೆಲಸಕ್ಕೆ ಹೋಗುತ್ತೇನೆಂದು ವಿನಂತಿಸಿದಾಗ ಮಗು ಕೈಗಿತ್ತರು! ಮಗಳು ಹುಟ್ಟಿದಾಗ ಒಂದೆರೆಡು ವರ್ಷ ಬಾಳಿನಲ್ಲಿ ಬಣ್ಣಗಳು ಮೂಡಿದರೂ ಪುನಃ ಅದೇ ಏಕತಾನತೆಯ ಜೀವನ, ಹೆಂಡತಿಯಾಗಿ, ತಾಯಿಯಾಗಿ, ಸೊಸೆಯಾಗಿ. ಆಗ ಕೋಪ ಹತಾಶೆಗೊಳಗಾದೆ. ಎಡಕಲ್ಲು ಗುಡ್ಡದ ಮೇಲೆ ಸಿನಿಮಾ ಮುಂಚೆ ನೋಡಿದ್ದಾಗ ಅಲ್ಲಿ ಮಾಧವಿ ಮಾಡಿದ್ದು ತಪ್ಪೆನ್ನುತ್ತಿದ್ದವಳು, ಈಗ ಸಿನಿಮಾ ನೋಡಿದಾಗ ಆ ತಪ್ಪು ಸರಿಯೆನಿಸಿತು.


ಈ ಕೋರೋನಾದಿಂದ, ಭಾರತಕ್ಕೆ ಬಂದರೆ ವಾಪಸ್ ಹೋಗುವುದು ಕಷ್ಟವೆಂದು ಎರಡು ವರ್ಷದಿಂದ ರಾಜೇಶ್ ಭಾರತಕ್ಕೆ ಬರಲಿಲ್ಲ. ಬಂದು ಇಲ್ಲಿಯೇ ಉಳಿದುಬಿಡಿ ಎಂದು ಕೇಳಿದಾಗ,"ಡಾಲರ್ ಬೆಲೆ ಗೊತ್ತಿಲ್ವ? ನನಗೋಸ್ಕರ ಇದ್ದೇನೆಯೇ ಅಲ್ಲಿ? ಅರ್ಥ ಮಾಡ್ಕೋ ಪ್ಲೀಸ್",ಎಂಬ ಹಳೇ ಉತ್ತರ. ಹೀಗೆ ನೆಪ ಹೇಳಿ ಇನ್ನೂ ಮುಂದೆ ತಳ್ಳುವರೇನೋ ಎನಿಸಿತು. ಅವರು ಹೇಳಿದ್ದರಲ್ಲಿ ಸತ್ಯಾಂಶವಿದ್ದುದ್ದರಿಂದ ನಾನು ಸುಮ್ಮನಾದೆ. ಪುನಃ ನಾನು ಕೆಲಸಕ್ಕೆ ಹೋಗುವೆನೆಂದು ಕೇಳಿದಾಗ,"ಮಗು ಹಾಗೂ ವಯಸ್ಸಾದವರನ್ನು ನೋಡಿಕೊಳ್ಳಲು ಮನೆಯಲ್ಲೇ ಒಬ್ಬರು ಇದ್ದರೆ ಚೆನ್ನ, ನಿನಗೇನು ಬೇಕೋ ತಗೋ ಹಣ ಕೊಡ್ತಿನಿ",ಎಂದರು ರಾಜೇಶ್. ದೊಡ್ಡವರೆಲ್ಲರೂ ಅದೇ ಸರಿ ಎಂದರು. ಎಲ್ಲರಿಗೂ ನಾನು ಎಂದರೆ ತಾತ್ಸಾರವೆನೊ ಎನಿಸಿತು. ಜೀವನ ಜಿಗುಪ್ಸೆ ಬಂತು.


ಹಾಗಾಗಿ ಬಹುಶಃ ಪೃಥ್ವಿಯ ಆಗಮನ ಒಂದು ರೀತಿ ವಸಂತಾಗಮನದ ಹಾಗಿತ್ತು. ಬೇಡವೆಂದು ಬಿಸಾಡಿದ್ದ ವಸ್ತುಗೆ ಅತ್ಯಮೂಲ್ಯ ಸ್ಥಾನ ಕೊಟ್ಟಂತಾಗಿತ್ತು. ಜಟಕಾ ಬಂಡಿಯಂತೆ ನಿಧಾನವಾಗಿ ಚಲಿಸುತ್ತಿದ್ದ ನನ್ನ ಜೀವನಕ್ಕೆ ಕಿಕ್ ಕೊಡುತ್ತಿತ್ತು, ಅವನ ನೋಟ, ಮಾತುಗಳು. ಚೈತನ್ಯ ಉಕ್ಕಿಸುತ್ತಿತ್ತು, ಅವನ ಸಾಮೀಪ್ಯ. ಆದರೆ ಇದು ಮುಂದಿನ ಹಂತಕ್ಕೆ ಹೋಗುತ್ತದೆ ಎಂದು ತಿಳಿದಾಗ, ಚಿಟ್ಟೆಯಂತೆ ಚಂಚಲವಾಗಿ ಹಾರುತ್ತಿದ್ದ ಮನಸ್ಸು ಬುದ್ಧಿಯೊಂದಿಗೆ ಸೇರಿ ಯೋಚಿಸಲು ಶುರುಮಾಡಿತು.



******************


ಪೃಥ್ವಿ ಇಂದು ತನ್ನ ಮನದಾಳದ ಮಾತುಗಳನ್ನು ಹೇಳುತ್ತಿದ್ದಾಗ ಎಲ್ಲೋ ಕೇಳಿದಂತಿದ್ದವು. "ರಾಣಿಯಂತೆ ನೋಡಿಕೊಳ್ಳುತ್ತೇನೆ" ಎಂದು ರಾಜೇಶ್ ಕೂಡ ಹೇಳಿದ್ರು, ನಮ್ಮ ಮದುವೆಯಾದ ಹೊಸತರಲ್ಲಿ! ನಾ ನಿನ್ನ ಬಿಟ್ಟು ಒಂದು ಕ್ಷಣವೂ ಇರಲಾರೆ ಎನ್ನುತ್ತಿದ್ದರು. ನಾ ಏನೂ ಮಾಡಿದರೂ ಮೆಚ್ಚುಗೆ ಸೂಚಿಸುತ್ತಿದ್ದರು. ನಾ ಸೀರೆ ಉಟ್ಟಾಗ, ಅಲಂಕರಿಸಿಕೊಂಡಾಗಲೆಲ್ಲಾ, ಮುದ್ದಾಡಿ ಅವರ ಬಿಸಿ ಅಪ್ಪುಗೆಯಲ್ಲಿ ಬಂಧಿಸುತ್ತಿದ್ದರು. ಆದರೆ ಆ ಹನಿಮೂನ್ ಫೇಸ್ ಮುಗಿದ ನಂತರ ವರ್ಷಗಳುರುಳಿದಂತೆ ನಾ ಕೇವಲ ಹೆಂಡತಿ/ತಾಯಿ/ಸೊಸೆಯಾಗಿ ಉಳಿದುಬಿಟ್ಟೆ! ಆದರೆ ಮನ, ಸದಾ ಅಲ್ಲದಿದ್ದರೂ ಕೆಲವೊಮ್ಮೆಯಾದ್ರೂ ಆ ಹನಿಮೂನ್ ಫೇಸ್ ಬಯಸುತ್ತಿತ್ತು. ನಾನು ಮನುಷ್ಯಳಲ್ಲವೇ? ಆಸೆಗಳಿಲ್ಲವೇ? ಆದರೆ ತನ್ನ ಕನಸು, ಸಂಪಾದನೆ, ಜವಾಬ್ದಾರಿಗಳ ಬೆನ್ನತ್ತಿದ್ದ ರಾಜೇಶ್, ನನ್ನ ಈ ಅಂತರಾಳವ ತಿಳಿದುಕೊಳ್ಳಲು ಹೋಗಲೇ ಇಲ್ಲ. ಆದರೆ ಅವರೇನು ಕೆಟ್ಟವರಲ್ಲ. ಅವರು ಸಂಪಾದಿಸುತ್ತಿರುವುದು ನಮ್ಮೆಲ್ಲರಿಗಾಗಿ ಎಂದು ತಿಳಿದಿದ್ದರೂ, ಆ ಕ್ಷಣಕ್ಕೆ ಆ ಹನಿಮೂನ್ ಫೇಸ್ ಗೆ ಒಯ್ದ ಪೃಥ್ವಿಗೆ ನಾ ಮರುಳಾಗಿ, ಸೆಳೆತಕ್ಕೊಳಗಾದೆನೇನೋ ಎನಿಸಿತು.


ಆದರೆ ಇಂದು ಅವನ ಮಾತುಗಳು, 9ವರುಷದ ಹಿಂದಕ್ಕೆ ನನ್ನ ಕರೆದೊಯ್ದವು. ಅಂದರೆ ಅವನು ಹೇಳಿದ್ದಕ್ಕೆ ಈಗ ನಾನು ಒಪ್ಪಿದರೆ, 9-10ವರ್ಷಗಳಾದ ಮೇಲೆ ನಾನು ಪುನಃ ಇದೇ ಪರಿಸ್ಥಿತಿಗೆ ಬಂದು ನಿಲ್ಲುತ್ತೇನೆನೋ ಎನಿಸಿತು. ಹೌದು, ಒಂದು ಹಂತದಲ್ಲಿ ಎಲ್ಲವೂ ಚೆನ್ನಾಗಿರುತ್ತದೆ. ನಂತರ ಬದಲಾವಣೆಗಳಾಗುತ್ತವೆ. ಜನರೂ ಮತ್ತು ಸಂಬಂಧಗಳೂ ಸಹ ಬದಲಾಗುತ್ತವೆ. ಯಾರೂ ಹೊರತಲ್ಲ ಎನಿಸಿತು. ಮನಸ್ಸಿನಲ್ಲಿ ಈಗ ಗೊಂದಲಗಳಿರಲಿಲ್ಲ. ಆದ್ದರಿಂದ ದೃಢ ನಿರ್ಧಾರ ಮಾಡಿದೆ.



******************


ಸಮಯ ಹತ್ತು ಆಗಿತ್ತು. ಪಾವನಿಯ ಫೋನ್ ರಿಂಗಿಸಿತು. ಪೃಥ್ವಿ ಎಂದು ಫೋನ್ ಮೇಲೆ ತೋರಿಸುತ್ತಿತ್ತು. ರಿಜೆಕ್ಟ್ ಬಟನ್ ಒತ್ತಿ, ಅವನ ನಂಬರ್ ಬ್ಲಾಕ್ ಮಾಡಿ, ತನ್ನ ಗಂಡ ರಾಜೇಶ್ ನಂಬರಿಗೆ ಡಯಲ್ ಮಾಡಿದಳು ಪಾವನಿ.

  

           ****

ಟಿ.ವಿ/ಪತ್ರಿಕೆಗಳಲ್ಲಿ ಪ್ರಕಟವಾಗುವ ಅಕ್ರಮ/ ಅನೈತಿಕ ಸಂಬಂಧಗಳು ಬಗ್ಗೆ ಕೇಳಿದಾಗ ಅವು ಶುರುವಾಗುವ ಕಾರಣಗಳಲ್ಲಿ ಇದು ಒಂದು ಎನಿಸಿ, ಕಲ್ಪಿಸಿ ಬರೆದ ಕಾಲ್ಪನಿಕ ಕಥೆ. ಆದರೆ ಇಲ್ಲಿ ಅಂತ್ಯ ಬೇರೆ.



          





Rate this content
Log in

Similar kannada story from Romance