Ashwini MN

Classics Inspirational Others

4.3  

Ashwini MN

Classics Inspirational Others

ನಿನ್ನಂಥ ಅಪ್ಪ ಇಲ್ಲ!

ನಿನ್ನಂಥ ಅಪ್ಪ ಇಲ್ಲ!

5 mins
787


ನಿನ್ನಂಥ ಅಪ್ಪ ಇಲ್ಲ.


ಅಪ್ಪ.. ಅಪ್ಪ.. ನಂಗೆ ನೀನು ಬೇಕಪ್ಪಾ.


ಹಾಡುಗಳು ಮುಗಿಯುತ್ತಿದ್ದಂತೆ, ಮತ್ತೊಬ್ಬ ಕಾಲರ್ ಆರ್.ಜೆಗೆ ಕರೆ ಮಾಡಿ, ಹಿಂದಿನ ಕಾಲರ್ಸ್ ಗಳಂತೆ, ತನ್ನ ತಂದೆಯ ಬಗ್ಗೆ ಗುಣಗಾನ ಮಾಡಿ, ಫಾದರ್ಸ್ ಡೇಗೆ ಅಪ್ಪನಿಗಾಗಿ ಐ ಲವ್ ಯು ಪಾ... ಹಾಡನ್ನು ಅರ್ಪಿಸಲು ಕೋರಿದರು. ನಾ ಕುಳಿತಿದ್ದ ಬಸ್ಸಿನ F.M ರೇಡಿಯೊ ಹಾಡತೊಡಗಿತು..


ನಾನು ಹಾಡು ಕೇಳುತ್ತಾ, ಹಾಗೆ ಬಸ್ಸಿನ ಕಿಟಕಿ ಮೂಲಕ ಹೊರಗೆ ನೋಡುತ್ತಾ ಸೀಟಿಗೊರಗಿ ಯೋಚಿಸತೊಡಗಿದೆ. ಹರೆಯದವರಿಂದ ಹಿಡಿದು ವಯಸ್ಸಾದವರವರೆಗೂ ಅದರಲ್ಲೂ ಹೆಣ್ಣುಮಕ್ಕಳಿಗೆ ತಂದೆಯೆಂದರೆ ಎಷ್ಟು ಪ್ರೀತಿ, ವಿಶೇಷ ಸ್ಥಾನ ಹೃದಯದಲ್ಲಿ. ಎಲ್ಲರೂ ಕರೆಮಾಡಿ ಗುಣಗಾನ ಮಾಡುತ್ತಲೇ ಇದ್ದರು. ಅಪ್ಪನೆಂದರೆ ಆಕಾಶ, ಅದ್ಭುತ, ಆಲದಮರ!

ಅಪ್ಪನೆಂದರೆ ಸ್ಫೂರ್ತಿ, ಸೂಪರ್ ಮ್ಯಾನ್, ಗುರು! ಕೇಳಲಿಕ್ಕೆ ಎಷ್ಟು ಹಿತ. ಅಂದರೆ ಕೆಟ್ಟ ಅಪ್ಪ ಯಾರಿಗೂ ಇಲ್ಲವೇ?!


ಬಸ್ ಮುಂದೆ ಹೋದಂತೆಲ್ಲ, ನಾನು ನನ್ನ ಜೀವನ ಪುಟಗಳಲ್ಲಿ ಹಿಂದೆ ಹೋದೆ. ಹೆಣ್ಣು ಮಕ್ಕಳ ಜವಾಬ್ದಾರಿ ಇದ್ದರೂ ತಂದೆ ಯಾವ ಕೆಲಸದಲ್ಲಿಯೂ ಸ್ಥಿರವಾಗಿ ನಿಲ್ಲಲಿಲ್ಲ. ನನಗೆ ಒಳ್ಳೆಯ ಅಂಕಗಳು ಬಂದು, ಮೆಡಿಕಲ್ ಸೀಟ್ ಸಿಕ್ಕಿದರೂ ನನ್ನಿಂದ ಹಣ ಹೊಂದಿಸಲು ಆಗುವುದಿಲ್ಲವೆಂದು ಹೇಳಿ ಕೈತೊಳೆದುಕೊಂಡರು. ಬೇರೆ ದಾರಿ ಕಾಣದೆ ನಾನು ಸರ್ಕಾರಿ ಡಿಗ್ರಿ ಕಾಲೇಜಿಗೆ ಸೇರಿದೆ. ಅದರಲ್ಲೂ ಹುಡುಗಿಯರ ಕಾಲೇಜಿಗೆ ಸೇರಬೇಕೆಂದು ಅಪ್ಪಾಜಿ ಆರ್ಡರ್! ಸಂಜೆ ೫:೦೦ ಗಂಟೆ ಒಳಗೆ ನಾವು ಮನೆಯಲ್ಲಿರಬೇಕು, ಸ್ವಲ್ಪ ತಡವಾದರೂ "ಯಾರ್ ಜೊತೆ ಅಲೆಯೋಕೆ ಹೋಗಿದ್ದೆ", ಎಂಬ ಬೈಗುಳಗಳ ಸುರಿಮಳೆಯಾಗುತ್ತಿತ್ತು. ಉಡುಗೆ ತೊಡುಗೆಯಲ್ಲೂ ಕಟ್ಟುನಿಟ್ಟು. ಶೃಂಗರಿಸಿಕೊಂಡರೆ, "ಯಾರು ನೋಡಲಿ ಎಂದು ಈ ಶೃಂಗಾರ", ಎಂಬ ಕುಹಕ ಮಾತು. ಆಡುವ ಮಾತು ಅಷ್ಟೇ, ಮೆಲ್ಲಗೆ ಆಡಬೇಕು! ನಮ್ಮ ಜೊತೆ ಅಮ್ಮನಿಗೂ ಇದೂ ಅನ್ವಯಿಸುತ್ತಿತ್ತು.

 

ಹೇಗೋ ವಿದ್ಯಾಭ್ಯಾಸ ಮುಗಿಸಿದೆ. ಹಣದ ಅವಶ್ಯಕತೆ ಇದ್ದುದ್ದರಿಂದ ತಕ್ಷಣಕ್ಕೆ ನಮ್ಮ ಊರಿನ ಪ್ರೈವೇಟ್ ಶಾಲೆಯಲ್ಲಿ ಟೀಚರ್ ಆಗಿ ಕೆಲಸಕ್ಕೆ ಸೇರಿದೆ. ಸಂಬಳ ಕಡಿಮೆಯಿದ್ದರೂ ಸಹ ಅಪ್ಪಾಜಿಗೆ ತಂದು ಕೊಡಬೇಕಿತ್ತು.

ಸರ್ಕಾರಿ ಕೆಲಸಕ್ಕೆ ಅರ್ಜಿಯೂ ಹಾಕಿದ್ದೆ. ಅಷ್ಟರಲ್ಲಿ, ದೂರದ ಸಂಬಂಧಿಯೊಬ್ಬರು ಗೊತ್ತಿರುವ ಹುಡುಗನಿಗೆ ಮದುವೆ ಮಾಡಿಕೊಡುವಂತೆ ಅಪ್ಪಾಜಿಯಲ್ಲಿ ಕೇಳಿದರು. ಅವರು ಹುಡುಗನ ಬಗೆ ಗುಣಗಾನ ಮಾಡಿದ ರೀತಿಗೆ ಮನೆಯಲ್ಲಿ ಎಲ್ಲರಿಗೂ ಇಷ್ಟವಾಯ್ತು. ನನಗೂ ಆ ಹುಡುಗನ ಬಗ್ಗೆ ಮೆಚ್ಚುಗೆಯಾಯ್ತು. ಆದರೆ ಎಷ್ಟು ದಿನವಾದರೂ ಅದು ಮುಂದುವರೆಯದಿದ್ದಾಗ, ಅಮ್ಮ ವಿಚಾರಿಸಿದಾಗ, ಅಪ್ಪಾಜಿ ಹೇಳಿದ್ದು,"ಹುಡುಗನ ಜಾತಕ ಸರಿ ಬರಲಿಲ್ಲ ಹಾಗಾಗಿ ನನ್ನ ಫ್ರೆಂಡ್ ಮಗಳಿಗೆ ಕೂಡಬಹುದು ಅಂತ ಸ್ನೇಹಿತನಿಗೆ ನೋಡೋದಿಕ್ಕೆ ಹೇಳಿದ್ದೀನಿ", ಎಂದು. ಆ ಹುಡುಗನ ಮದುವೆ ಅಪ್ಪಾಜಿಯ ಫ್ರೆಂಡ್ ಮಗಳ ಜೊತೆ ಆಯ್ತು. ಒಂದೆರಡು ವರ್ಷ ಕಳೆದ ಮೇಲೆ ನನಗೆ ಸರ್ಕಾರಿ ಕೆಲಸ ಸಿಕ್ಕಿತು. ಖುಷಿಯಾಯ್ತು. ಅಪ್ಪನಿಗೆ ನನ್ನ ಡೆಬಿಟ್ ಕಾರ್ಡ್ ಸಿಕ್ಕಿತು. ಅವರಿಗೂ ಖುಷಿಯಾಯ್ತು!! ಸ್ವಲ್ಪ ದೂರದ ಊರಾದರೂ ಸಹ,"ಬಸ್ ನಲ್ಲಿ ಓಡಾಡು, ಬಾಡಿಗೆಮನೆ ಮಾಡುವುದು ಬೇಡ, ನಮ್ಮಜೊತೆಯೇ ಇರು",ಎಂದು ಅಪ್ಪಾಜಿಯಿಂದ ಆರ್ಡರ್ ಬಂತು. ಕಷ್ಟವಾದರೂ ಸುಮ್ಮನಾದೆ.


ಸರ್ಕಾರಿ ಕೆಲಸವಾದ್ದರಿಂದ ಹೆಚ್ಚು ಮದುವೆ ಸಂಬಂಧಗಳು ಕೇಳಿಕೊಂಡು ಬಂದವು. ಆದರೆ ಅಪ್ಪಾಜಿ, "ಹುಡುಗ ಸರಿ ಇಲ್ಲ, ಅಷ್ಟು ಅನುಕೂಲವಂತರಲ್ಲ, ಹುಡುಗನದು ಒಳ್ಳೆಯ ಕೆಲಸವಲ್ಲ", ಎಂದು ತಿರಸ್ಕರಿಸಿ, ಆ ಸಂಬಂಧಗಳನ್ನು ಸೇಹಿತರ/ನೆಂಟರ ಮಕ್ಕಳಿಗೆ ವರ್ಗಾಹಿಸಿದರು. ಅವರ ಜಾತಕಗಳು ಹೊಂದಿ, ಮದುವೆ ಮಕ್ಕಳಾಗಿ ಸುಖ ಸಂಸಾರ ನಡೆಸುತ್ತಿದ್ದರು. ಆ ವಧುಗಳ ಪೋಷಕರು ತಂದೆಗೆ ಬಂದು ಧನ್ಯವಾದ ಹೇಳುತ್ತಿದ್ದರು, ಒಳ್ಳೆಯ ವರನನ್ನು ತೋರಿಸಿದ್ದಕ್ಕಾಗಿ! 


೩೦ ರ ಹತ್ತಿರ ವಯಸ್ಸು ಜಾರುತ್ತಿದರೂ, ಅಪ್ಪಾಜಿ ನನ್ನ ಮದುವೆ ಮಾಡುವ ಲಕ್ಷಣಗಳು ಕಾಣಲಿಲ್ಲ. ಬಾಲ್ಯ ವಿವಾಹ ಚಾಲ್ತಿಯಲ್ಲಿದ್ದ ನಮ್ಮಂಥ ಪುಟ್ಟ ಊರಿನಲ್ಲಿ, ಸಾಧಾರಣ ಕುಟುಂಬದಲ್ಲಿ ೩೦ ದಾಟಿದ ಮೇಲೆ ಹೆಣ್ಣುಮಕ್ಕಳ ಮದುವೆ ಕಷ್ಟ. ಆದರೆ ಹೆಣ್ಣಾಗಿ ನಾನು ನಾಚಿಕೆ ಬಿಟ್ಟು ಹೇಗೆ ಕೇಳಲಿ ಎಂದು ಸುಮ್ಮನಾದೆ. 


ಹೀಗಿರಬೇಕಾದ್ರೆ, ಒಂದು ದಿನ ನನ್ನ ತಂಗಿ ಎಲ್ಲರಿಗೂ ಶಾಕ್ ಕೊಟ್ಟಳು. ತಾನು ಒಬ್ಬರನ್ನು ಪ್ರೀತಿಸುತ್ತಿರುವುದಾಗಿ, ಅವರನ್ನೇ ಮದುವೆಯಾಗುತ್ತೇನೆಂದು ಹಠ ಹಿಡಿದಳು. ಅವಳು ಓಡಿ ಹೋಗಿ ಮರ್ಯಾದೆ ತೆಗೆಯುವ ಮುಂಚೆ ಮದುವೆ ಮಾಡಿಬಿಡೋಣ ಎನ್ನುತ ನಾ ದುಡಿದ ಹಣದಿಂದ ಅಪ್ಪಾಜಿ ಅವಳ ಮದುವೆ ಮಾಡಿದರು. ತಂಗಿ ಮದುವೆ ಆದ್ರು ಅಕ್ಕನಿಗಿನ್ನೂ ಮದುವೆಯಾಗಿಲ್ಲ ಎಂಬ ಗುಸುಪಿಸು ಮಾತುಗಳನ್ನು ಸಹಿಸಿಕೊಂಡು ಮದುವೆ ಮನೆಯಲ್ಲಿ ಓಡಾಡುತ್ತಿದ್ದಾಗ, ದೂರದ ಸಂಬಂಧಿಯೊಬ್ಬರು ನನ್ನ ಬಳಿ ಬಂದು, ಮುಖ ಸಿಂಡರಿಸಿಕೊಂಡು,"ದುರಹಂಕಾರ ನಿನ್ಗೆ! ಚೆನ್ನಾಗಿದ್ದೀನಿ, ಸರ್ಕಾರಿ ಕೆಲಸ ಅಂತ, ಬಂದ ಹುಡುಗರನ್ನೆಲ್ಲಾ ಬೇಡ ಅಂತಿಯಂತೆ. ವರದಕ್ಷಿಣೆ ಕೊಡೋಕೆ ಆಗ್ದೇ ಇರೋ ನಿಮ್ಮಂಥ ಮನೆ ಹುಡುಗಿ ಇಷ್ಟೊಂದು ಜಂಭ ಪಡ್ಬಾರ್ದು. ಸುಮ್ನೆ ಯಾರನ್ನಾದರೂ ಓಪ್ಕೋ! ನಿಮ್ ತಂದೆ ಹೇಳ್ತಾಯಿದ್ರು, ಗಂಡು ತೋರಿಸಿ, ತೋರಿಸಿ ಸಾಕಾಯಿತು ಅಂತ, ತಂದೆಗೆ ಯಾಕ್ ನೋವ್ ಕೊಡ್ತಿಯಾ" ಅಂದುಬಿಟ್ಟರು!


ಅದ ಕೇಳಿ ನಾನು ಕುಸಿದು ಹೋದೆ. ತಂದೆಯಾಗಿ ಮಗಳ ಬಗ್ಗೆ ಹೀಗೆ ಹೇಳಿದ್ದಾರಲ್ಲ ಎಂದು ನೆನೆಸಿ, ಹೃದಯಕ್ಕೆ ಈಟಿಯಲ್ಲಿ ಚುಚ್ಚಿದಂತಾಯ್ತು. ಹೇಗೋ ಸಾವಾರಿಸಿಕೊಂಡು ಮದುವೆ ಕಾರ್ಯ ಮುಗಿಸಿದೆ. 


ನಾ ಹರೆಯಕ್ಕೆ ಕಾಲಿಟ್ಟಾಗ ೧೫ ವರ್ಷ. ಆಗಲೇ ಮದುವೆಗಾಗಿ ಸಂಬಂಧಗಳು ಕೇಳಿ ಬಂದಿದ್ದವು. ನಮ್ಮಲ್ಲಿ ಬಾಲ್ಯ ವಿವಾಹವೇನು ಹೊಸತಲ್ಲ. ಚೆನ್ನಾಗಿ ಓದಿ, ಡಾಕ್ಟರ್ ಆಗಬೇಕೆಂಬ ಕನಸು ಕಂಡಿದ್ದ ನನಗೆ, ಆ ವಯಸ್ಸಿಗೆ ಹಸಮಣೆ ಏರಲು ಇಷ್ಟವಿರಲಿಲ್ಲ. ಆಗ, ಮದುವೆಗೆ ಕೇಳಿದವರಿಗೆಲ್ಲಾ,"ಹೆಣ್ಣು ಮಕ್ಕಳು ಡಿಗ್ರಿಯನ್ನಾದರೂ ಮಾಡಿಕೊಂಡಿರಬೇಕು. ತಮ್ಮ ಕಾಲ ಮೇಲೆ ನಿಲ್ಲಬೇಕು. ನಂತರ ಮದುವೆ", ಎಂದು ಕಡಕ್ಕಾಗಿ ಎಲ್ಲವನ್ನು ತಿರಸ್ಕರಿಸುತ್ತಿದ್ದ ಅಪ್ಪಾಜಿ ಮೇಲೆ ಗೌರವ ಬೆಳೆದಿತ್ತು, ನನ್ನ ಪರ ನಿಂತಿದ್ದಕ್ಕೆ. ಆದರೆ ಆ ಮಾತಿನ ಹಿಂದಿದ್ದ ಬೇಜವಾಬ್ದಾರಿತನ ನನಗೆ ಆ ವಯಸ್ಸಿನಲ್ಲಿ ಅರ್ಥವಾಗಲಿಲ್ಲ! ಈಗ ಅರ್ಥವಾಗಿ ಕೇಳಬೇಕು ಎನಿಸಿದರೂ ಸುಮ್ಮನಾದೆ. ನೆಂಟರಿಷ್ಟರ ದೃಷ್ಟಿಯಲ್ಲಿ ಅಪ್ಪಾಜಿ ಒಳ್ಳೆಯವರಾಗಿರುವುದರಿಂದ ಹೊರಗಿನವರು ನನ್ನ ಮಾತು ನಂಬುವುದಿಲ್ಲವೆಂದು ನನ್ನೊಳಗೆ ಇಟ್ಟುಕೊಂಡೆ.


ಯಾಕೋ ಮನಸ್ಸಿಗೆ ತುಂಬಾ ಬೇಜಾರಾಯ್ತು. 

ಬಹುಶಃ ಅವರಿಗೆ ಬೇರೆ ಆದಾಯ ಇರದುದ್ದರಿಂದ, ನನ್ನ ಮದುವೆ ಮಾಡಿಬಿಟ್ಟರೆ, ಇನ್ನಿಬ್ಬ ಹೆಣ್ಣುಮಕ್ಕಳ ಜವಾಬ್ದಾರಿ ಕಷ್ಟವಾಗಬಹುದೆಂದು ಹೀಗೆ ಮಾಡಿರಬಹುದು ಎಂದುಕೊಂಡು ಸಮಾಧಾನಿಸಿಕೊಂಡೆ. ತಂಗಿಯರಿಬ್ಬರ ಮದುವೆ ಆದಮೇಲೆ ನನ್ನ ಮದುವೆ ಮಾಡುತ್ತಾರೆ ಎಂದುಕೊಂಡು ಸುಮ್ಮನಾದೆ.


ನಾ ಎಣಿಸಿದಂತೆ ಸ್ವಲ್ಪ ವರ್ಷಗಳಾದ ಮೇಲೆ, ಇನ್ನೊಬ್ಬ ತಂಗಿಯು ಯಾರನ್ನಾದರು ನೋಡಿಕೊಳ್ಳುವ ಮುಂಚೆ, ಮದುವೆ ಮಾಡಬೇಕು ಎನ್ನುತ್ತಾ ಅವಳ ಮದುವೆಯನ್ನು ನಾ ಕೂಡಿಟ್ಟಿದ್ದ ಹಣದಿಂದ ಮಾಡಿಸಿದರು ಅಪ್ಪಾಜಿ.


ಇಷ್ಟೆಲ್ಲಾ ಆದಮೇಲೂ, ವಯಸ್ಸು ೩೦ ದಾಟಿದರೂ, ಮೊದಲನೇ ತಂಗಿ ಬಾಣಂತನ ಮುಗಿಸಿ ಹೊರಟರೂ, ಎರಡನೇ ತಂಗಿ ಸೀಮಂತ ಮುಗಿದರೂ, ನನ್ನ ಮದುವೆ ಮಾಡುವ ಲಕ್ಷಣಗಳು ಕಾಣಲಿಲ್ಲ. ಹೊರಗಿನವರು ಕೇಳಿದಾಗ "ಜಾತಕ ಸರಿ ಹೊಂದಿಲ್ಲ" ಇತ್ಯಾದಿ ಕಾರಣಗಳೆ ಇರುತ್ತಿದ್ದವು. ಅಷ್ಟರಲ್ಲಿ ಟ್ರಾನ್ಸ್ಫರ್ ಆಗಿ ನಾನು ದೂರದ ಪಟ್ಟಣಕ್ಕೆ ಹೋಗಬೇಕಾಯ್ತು. ಅಪ್ಪಾಜಿಗೆ ಇಷ್ಟವಿಲ್ಲದಿದ್ದರೂ ವಿಧಿ ಇರಲಿಲ್ಲ. ತಿಂಗಳಿಗೊಮ್ಮೆ ಬರಬೇಕು. ಬಂದಾಗ ಖರ್ಚಿಗೆ ಹಣ ಕೊಡುತ್ತೇನೆ ಎಂದು ಹೇಳಿ ಬೀಳ್ಗೊಟ್ಟರು.

 

ನಾ ಹೋದ ಊರಿನಲ್ಲಿ ಬಾಡಿಗೆ ಮನೆ ಮಾಡಿದೆ. ಆ ಮನೆಯ ಮಾಲೀಕರ ಮೊಮ್ಮಗಳು ಸ್ಫಟಿಕ. ಬೇಜಾರಾಗಿದ್ದ ನನ್ನ ಮನಸ್ಸಿಗೆ ಅವಳು ಮುದ ನೀಡಿ ನನ್ನ ಮನಸೂರೆಗೊಂಡಳು. ಈಗ ನನ್ನ ವಾರಾಂತ್ಯವೆಲ್ಲ ಅವಳೊಟ್ಟಿಗೆ. ನಾವಿಬ್ಬರು ಒಬ್ಬರನ್ನೊಬ್ಬರು ಹಚ್ಚಿಕೊಂಡೆವು. ಹುಟ್ಟಿದಾಗಲೇ ತಾಯಿಯನ್ನು ಕಳೆದುಕೊಂಡಿದ್ದ ನತದೃಷ್ಟೆಯವಳು. ಅವಳಿಗಾಗಿ, ಅವಳಪ್ಪ ಬೆಂಗಳೂರಿನಲ್ಲಿದ್ದ ಒಳ್ಳೆಯ ಕೆಲಸ ಬಿಟ್ಟು ತಮ್ಮ ಹುಟ್ಟೂರಿಗೆ ಬಂದು ತಂದೆ ತಾಯಿಯೊಂದಿಗೆ ವ್ಯವಸಾಯ ಮಾಡಿಕೊಂಡು ಇದ್ದರು. ಇಲ್ಲಾದರೆ ತನ್ನ ಮಗಳ ಆರೈಕೆ ತಾಯಿ ಮಾಡುತ್ತಾರೆಂದು.


ಒಂದೆರಡು ವರ್ಷ ಕಳೆಯುವಷ್ಟರಲ್ಲಿ ಅವರ ಮನೆಯವರೆಲ್ಲ ನನಗೆ ನನ್ನ ಮನೆಯವರಂತೆಯೇ ಎನ್ನುವಷ್ಟು ಆತ್ಮೀಯತೆ ಬೆಳೆಯಿತು. ಸ್ಫಟಿಕಳ ತಂದೆಯ ಪರಿಚಯವೂ ಆಯ್ತು. ಮೃದು ಸ್ವಭಾವ, ಒಳ್ಳೆಯ ಹಾಗು ಜವಾಬ್ದಾರಿಯುತ ಮನುಷ್ಯ ಎನಿಸಿತು. ನನ್ನ ಮತ್ತು ಸ್ಫಟಿಕಳ ಬಾಂಧವ್ಯವನ್ನು ನೋಡುತ್ತಿದ್ದ, ಅವಳ ಅಜ್ಜಿ ಒಂದು ದಿನ ನನ್ನನ್ನು ಕರೆದು ಕೇಳಿಯೇ ಬಿಟ್ಟರು,"ನನ್ನ ಮಗ ತುಂಬಾ ಒಳ್ಳೆ ಹುಡುಗ. ಓದಿದ್ದಾನೆ. ನಮಗೆ ಹಣಕ್ಕೇನು ಕೊರತೆಯಿಲ್ಲ. ಈ ಚಿಕ್ಕ ವಯಸ್ಸಲ್ಲಿ ಆಗಬಾರದ್ದು ಆಗಿ ಹೋಯಿತು. ಮದುವೆಯಾಗಿ ಸ್ಫಟಿಕಾಗೆ ಮಲತಾಯಿ ತಂದ್ರೆ ಏನಾಗುತ್ತೋ ಎಂದು ಮದುವೇನೇ ಬೇಡ ಎನ್ನುತ್ತಿದ್ದ. ಈಗ ಸ್ಫಟಿಕ ಮತ್ತು ನಿನ್ನ ಪ್ರೀತಿ ನೋಡಿ, ನಾವು ಮದ್ವೆ ಆಗು ಅಂದಾಗ ಒಪ್ಪಿದ. ನಿಂಗೆ ಒಪ್ಪಿಗೆ ಇದ್ರೆ ಮನೇಲಿ ಬಂದು ಕೇಳ್ತೀವಿ", ಎಂದರು. ನಾ ಪುಳಕಗೊಂಡೆ. ನನಗೆ ಇಲ್ಲ ಎನ್ನಲಾಗಲಿಲ್ಲ. ಹೌದು ಮನಸ್ಸಿನ ಯಾವ್ದೋ ಮೂಲೆಯಲ್ಲಿ ಈ ಆಸೆ ಚಿಗುರಿತ್ತು. ಅವರ ಬಾಯಲ್ಲಿ ಕೇಳಿದಾಗ ಖುಷಿಯಾಗಿದ್ದು ನಿಜ. ಆದರೆ ಅಪ್ಪಾಜಿಯ ಭಯವಾಯಿತು. ಹೇಗಿದ್ದರೂ ಎಲ್ಲ ಜವಾಬ್ದಾರಿಗಳು ಮುಗಿದಿದೆ. ಅಪ್ಪಾಜಿ ಈಗ ಒಪ್ಪಬಹುದು ಎನಿಸಿತು. ಏನೋ ಒಂದು ತರ ಖುಷಿ ಆಯ್ತು. 


ಆ ಬಾರಿ ಊರಿಗೆ ಹೋದಾಗ ಅಮ್ಮನ ಮೂಲಕ ವಿಷಯ ಮುಟ್ಟಿಸಿದೆ. ಅಪ್ಪಾಜಿ ಮುಖದಲ್ಲಿ ಯಾವ ಭಾವವು ಇಲ್ಲ. ನೋಡೋಣ ಬಿಡು ಎಂದು ವಾಕ್ ಹೊರಟುಬಿಟ್ಟರು. ನಾನು ವಾಪಸ್ ಪಟ್ಟಣಕ್ಕೆ ಬಂದೆ. ೨ ವಾರದ ನಂತರ ಅಪ್ಪಾಜಿಯಿಂದ ಫೋನ್ ಬಂತು. ಊರಿನಲ್ಲಿ ಸೈಟ್ ತಗೋಬೇಕು. ನಿನ್ನ ಹೆಸರಲ್ಲಿ ಲೋನ್ ತಗೋತಿದ್ದೀನಿ. ಬಂದಾಗ ಪೇಪರ್ಸ್ ಗೆ ಸೈನ್ ಮಾಡಬೇಕು",ಎಂದ್ರು. "ಆಯ್ತು",ಎನ್ನುತಾ ನಾನೇ ನಾಚಿಕೆ ಬಿಟ್ಟು ಮದುವೆ ವಿಷಯ ಕೇಳಿದಾಗ, ಜಾತಕ ಕಳಿಸು ಎಂದರು. ಜಾತಕ ಕಳಿಸಿದರೂ ಏನೂ ಉತ್ತರ ಇಲ್ಲ. ಈ ತಿಂಗಳ ಕೊನೆಗೆ ಹೇಗೂ ಊರಿಗೆ ಹೋಗುತ್ತೇನಲ್ಲ, ಕೇಳುವ ಎಂದು ಸುಮ್ಮನಾದೆ. ಸ್ಫಟಿಕಳ ಮನೆಯವರಂತೂ ನನ್ನ ಉತ್ತರಕ್ಕಾಗಿ ಕಾಯುತ್ತಿದ್ದರು.



ಬಸ್ ಬ್ರೇಕ್ ಹಾಕಿದಾಗ ವಾಸ್ತವಕ್ಕೆ ಬಂದೆ. ಬಸ್ ಇಳಿದು ಮನೆ ತಲುಪಿದಾಗ, ನನಗಾಗಿ ಕಾಯುತ್ತಿದ್ದ ಬ್ಯಾಂಕ್ನವರ, ಲೋನ್ ಪೇಪರ್ಸ್ಗೆ ಸೈನ್ ಹಾಕಾಯ್ತು. ಮಾತನಾಡಬೇಕೆಂದು ಹೇಳಿದರೂ, ಅಪ್ಪಾಜಿ ಬಿಜಿ ಇದ್ದವರಂತೆ ನಡೆದುಕೊಂಡರು. ನನಗೆ ಅರ್ಥವಾಯಿತು. ಆದರೆ ನಾನು ಈ ಸಲ ನಿರ್ಧಾರ ಮಾಡಿಯೇ ಬಿಟ್ಟಿದ್ದೆ! ಕೇಳಿಯೇ ಬಿಟ್ಟೆ. ಅಪ್ಪಾಜಿಯಿಂದ ಅದೇ ಹಳೇ ಉತ್ತರ ,"ಜಾತಕ ಕೂಡಿ ಬರಲಿಲ್ಲ!!!"



ನನ್ನ ತಾಳ್ಮೆಯ ಕಟ್ಟೆ ಹೊಡೆಯಿತು. ನನ್ನ ಮದುವೆ ಮಾಡುವ ಆಲೋಚನೆಯೇ ಇಲ್ಲ ಎಂಬ ಗುಮಾನಿ ನಿಜವೆನಿಸಿತು. "ಅಪ್ಪಾಜಿ, ನನ್ನ ಜಾತಕ ಯಾಕೆ ನೀವು ಯಾರೊಂದಿಗೂ ಹೊಂದಲು ಬಿಡುವುದಿಲ್ಲ? ನಾನು ಮದ್ವೆ ಆಗೋದು ನಿಮಗೆ ಇಷ್ಟ ಇಲ್ಲ ಅಲ್ವ?", ಎಂದೆ ಕೋಪ, ಆವೇಶದಿಂದ. ಎಂದೂ ಎದುರಾಡದ ಮಗಳಿಂದ ಈ ಮಾತುಗಳನ್ನು ಕೇಳಿ ಅವರಿಗೆ ಪಿತ್ತ ನೆತ್ತಿಗೇರಿತ್ತು. "ಏನು ಅರ್ಜೆಂಟ್ ಈಗ ಮದುವೆಗೆ. ಒಳ್ಳೆಯ ಹುಡುಗ ಸಿಕ್ಕಿದ ತಕ್ಷಣ ಮಾಡ್ತಿನಿ. ವಯಸ್ಸಾದ ತಂದೆ ತಾಯಿಯ ಜವಾಬ್ದಾರಿ ಇಲ್ಲವೇ ನಿನಗೆ !? ಸ್ವಾರ್ಥಿಯಾಗಿಬಿಟ್ಟಾ?! ಅಲ್ಲಿ ನಿನ್ನನ್ನು ಒಬ್ಬಳೆ ಬಿಟ್ಟಿದ್ದು ತಪ್ಪಾಯ್ತು. ಎರಡನೇ ಹೆಂಡತಿ ಆಗ್ತಿಯ! ಯಾರೋ ತಲೆ ಕೆಡಿಸಿದ್ದಾರೆ. ನಾನು ಹೇಳೋದನ್ನ ಕೇಳು! ನಾ....".ಅವರ ಮಾತನ್ನು ತಡೆಯುತ್ತಾ, "ಇನ್ನೂ ನೀವು ಹೇಳೋದನ್ನೆ ಕೇಳುತ್ತಾ ಇರ್ಬೇಕ!? ಈಗ ನನ್ನ ಮಾತು ಕೇಳಿಸ್ಕೊಳ್ಳಿ. ನನಗೆ ಈ ಹುಡುಗ ಒಪ್ಪಿಗೆ. ನೀವು ಒಪ್ಪದಿದ್ರೂ ಪರ್ವಾಗಿಲ್ಲ! ಆದರೆ ನಾನು ಅವರ ಜೊತೆನೇ ಮದುವೆ ಆಗೋದು", ಎಂದು ಬಿಟ್ಟೆ!! ಕೈಕಾಲು ಇನ್ನೂ ನಡುಗುತ್ತಿದ್ದರೂ ಹೇಗೋ ಸಂಭಾಳಿಸಿಕೊಂಡು ಅವರ ಉತ್ತರಕ್ಕಾಗಿ ಕಾಯದೆ, ಬ್ಯಾಗ್ ಹಿಡಿದು ಬಸ್ ಸ್ಟಾಂಡ್ ಕಡೆ ಹೊರಟೆ. ಬಸ್ ಏರಿದ ತಕ್ಷಣ ಸ್ಫಟಿಕಾಳ ಅಜ್ಜಿಗೆ ಫೋನ್ ಡೈಯಲ್ ಮಾಡಿದೆ. 



F.M ನಲ್ಲಿ ಫಾದರ್ಸ್ ಡೇಗೆ ಇನ್ನೂ ಅಪ್ಪನ ಗುಣಗಾನ/ಹಾಡುಗಳ ಸುರಿಮಳೆಯಾಗುತ್ತಿತ್ತು. ಎಲ್ಲರ ಬಾಳಲ್ಲಿ ಅವರ ಪಾಲಿನ ನಾಯಕನಾಗಿರುವ ಅಪ್ಪ, ನನಗ್ಯಾಕೆ ಖಳನಾಯಕ ಎಂದು ಮನ ಕೇಳಿತು!


ನಾ ಮಾಡಿದ್ದು ಬೇರೆಯವರ ದೃಷ್ಟಿಯಲ್ಲಿ ತಪ್ಪಾ ಸರಿನಾ ಗೊತ್ತಿಲ್ಲ. ಆದರೆ ನನ್ನವರೆ ನನಗೆ ಒಳ್ಳೆಯದು ಬಯಸದೆ ಇದ್ದಾಗ ನನಗೆ ಬೇರೆ ದಾರಿ ತೋಚಲಿಲ್ಲ. ಸ್ವಾರ್ಥಿಯಾದನೇನೋ ಎನಿಸಿದರೂ, ನನಗಂತೂ ಒಳ್ಳೆ ತಂದೆ ಸಿಗಲಿಲ್ಲ, ಆದರೆ ಮುಂದೆ ಹುಟ್ಟುವ ನನ್ನ ಮಗುವಿಗೆ ಒಳ್ಳೆ ತಂದೆ ಸಿಗುವಂತೆ ಮಾಡಿದನೆಂಬ ಸಮಾಧಾನವಾಯಿತು

*****************


ಅವತ್ತು ಅಪ್ಪಂದಿರ ದಿನಾಚರಣೆ.

ಅತ್ತ, ತಮ್ಮ ಬಾಳಲ್ಲಿ ದೇವತಾ ಮನುಷ್ಯನಾಗಿದ್ದ ಅಪ್ಪನನ್ನು ನಾಯಕನೆಂದರು ಮಕ್ಕಳು. 


ಇತ್ತ, ತಂದೆಯ ಮಾತನ್ನು

ಧಿಕ್ಕರಿಸಿದ ಮಾಧವಿ ತನ್ನ ಅಪ್ಪಾಜಿಗೆ ಖಳನಾಯಕಿಯಾದಳು!




               


Rate this content
Log in

Similar kannada story from Classics