ಧೃತರಾಷ್ಟ್ರನ ಪೂರ್ವಜನ್ಮ
ಧೃತರಾಷ್ಟ್ರನ ಪೂರ್ವಜನ್ಮ
ಧೃತರಾಷ್ಟ್ರ - ಪಾಂಡು ಇವರ ಪೂರ್ವಜನ್ಮ
ಆಧಾರ: ಜಾನಪದ ಭಾರತ
ದ್ವಾಪರ ಯುಗದ ಆರಂಭದಲ್ಲಿ
ಸುವರ್ಣಕೇಶಿ ಮತ್ತು ಸ್ವೇತುಕೇಶಿ ಎಂಬ ಅಣ್ಣ ತಮ್ಮಂದಿರು ಇರುತ್ತಾರೆ. ಸುವರ್ಣಕೇಶಿಯ ಮಕ್ಕಳು ದೇವಲೋಕವನ್ನು ಗೆದ್ದು ದೇವತೆಗಳನ್ನು ಭಂದಿಸುತ್ತಾರೆ. ದೇವತೆಗಳನ್ನು ಬಿಡಿಸುವ ಸಲುವಾಗಿ ನಾರಾಯಣನು ಮೋಹಿನಿಯಾಗಿ ಅವತರಿಸಿ ತನ್ನ ರೂಪದಿಂದ ಅವರನ್ನು ಮರಳುಗೊಳಿಸಿ ಎಲ್ಲರನ್ನು ಸಂಹರಿಸುತ್ತಾನೆ. ದೇವತೆಗಳನ್ನು ರಕ್ಷಿಸುತ್ತಾನೆ.
ಇದರಿಂದ ಕುಪಿತಗೊಂಡ ಸುವರ್ಣಕೇಶಿ, ತಪಸ್ಸಿನಿಂದ ಮತ್ತೆ ನೂರು ಮಕ್ಕಳ ವರವನ್ನು ಪಡೆಯುತ್ತಾನೆ. ಈ ಮಕ್ಕಳು ನಾರಾಯಣನನ್ನು ಕೊಲ್ಲಲು ಸಮರ್ಥರಾಗುವ ವರವನ್ನು ಪಡೆಯಲಾಗದಿದ್ದರೂ, ನಾರಾಯಣನು ಅವರನ್ನು ಕೊಲ್ಲಬಾರದೆಂದು ವರವನ್ನು ಪಡೆಯುತ್ತಾನೆ.
ಸುವರ್ಣಕೇಶಿ ವರ ಪಡೆದು ಅಹಂಕಾರದಿಂದ ವರ್ತಿಸುತ್ತಿರುತ್ತಾನೆ. ನಾಗ
ರುಸಿಯ ಕಣ್ಣನ್ನು ಚುಚ್ಚಿ ಕುರುಡು ಮಾಡಿದ ಕಾರಣ ನಾಗರುಸಿ ಅವನಿಗೆ ಕುರುಡನಾಗೆಂದು ಶಾಪ ಕೊಡುತ್ತಾನೆ. ಇತ್ತ ಸುವರ್ಣಕೇಶಿಯ ತಮ್ಮ ಸ್ವೇತುಕೇಶಿ, ನಾಗರುಸಿಯ ಹೆಂಡತಿ ನಾಗವೇಣಿಯನ್ನು ಮೋಹಿಸಿ, ನಾಗರುಸಿಯಿಂದ ಶಾಪಕ್ಕೆ ಗುರಿಯಾಗುತ್ತಾನೆ.
ಸುವರ್ಣಕೇಶಿ ಧೃತರಾಷ್ಟ್ರನಾಗಿ, ಸ್ವೇತುಕೇಶಿ ಪಾಂಡುವಾಗಿ ಮತ್ತು ಸುವರ್ಣಕೇಶಿಯ ಹೆಂಡತಿ ಚಿತ್ರಾಂಗಿ ಗಾಂಧಾರಿಯಾಗಿ ಜನಿಸುತ್ತಾರೆ. ಶಾಪದ ಪ್ರಭಾವದಿಂದ ಧೃತರಾಷ್ಟ್ರ ಕುರುಡನಾದರೆ, ಪಾಂಡು ಸಂಸಾರ ಸುಖದಿಂದ ವಂಚಿತನಾಗುತ್ತಾನೆ.
ಸುವರ್ಣಕೇಶಿಪಡೆದ ವರದಂತೆ ಧೃತರಾಷ್ಟ್ರನಿಗೆ ನೂರು ಮಕ್ಕಳು ಹುಟ್ಟುತ್ತಾರೆ. ಇವರು ಪ್ರತಿನಾಯಕರೆಂದು (villains) ಜಾನಪದ ಭಾರತದಲ್ಲಿ ಹೇಳಿದೆ. ಈ ನೂರು ಮಕ್ಕಳು ನಾರಾಯಣನಿಗೆ ಅವರನ್ನು ಕೊಲ್ಲಲು ಸಾಧ್ಯವಿರುವುದಿಲ್ಲ. ಆದ್ದರಿಂದ ಪಾಂಡವರ ಮೂಲಕ ಕುರುಕ್ಷೇತ್ರ ಯುದ್ಧದಲ್ಲಿ ಅವರನ್ನು ಕೊಲ್ಲುತ್ತಾನೆ.