ಉದ್ಧರಿಸು ದೇವಾ!!!
ಉದ್ಧರಿಸು ದೇವಾ!!!
ಉದ್ಧರಿಸು ದೇವಾ!!!
ಬೆನ್ನು ಬಾಗಿದೆ , ಕಣ್ಣು ಮಂಜಾಗಿದೆ
ಚರ್ಮ ಸುಕ್ಕುಗಟ್ಟಿದೆ, ಕರ್ಮ ಮುಗಿದಿದೆ, ಒಳಮರ್ಮ ಅರಿವಾಗಿದೆ,
ಹೃದಯ ಸೊಡರು ಕುಂದಿದೆ, ಮಂದಗತಿಯಲಿ ಉಸಿರು ಚಲಿಸಿದೆ,
ಮನಸು ಹದಗೊಂಡಿದೆ ಕನಸಿಲ್ಲದೆ,
ಬಂಧಗಳು ಕಳಚಿವೆ, ನಿಂಧನೆಗಳು ಇಲ್ಲವಾಗಿವೆ, ಸಂಧ್ಯಾಕಾಲ ಸಮೀಪಿಸಿದೆ, ಮುಪ್ಪನಾವರಿಸಿದೆ
ಸವೆದುಹೋದವು ಪಾಪಕರ್ಮಗಳು,
ಬಸಿದುಹೋದವು ಆಸೆ , ಮೋಹಗಳು,
ನಶಿಸಿದವು ಬಯಕೆಗಳು, ಹಸಿವುಗಳು.
ಕೊರಡು ಚಿಗುರದಿನ್ನು, ಬರಡು ದೇಹದಿ, ಕರೆದುಕೋ ಹರನೇ ಸಾಕಿನ್ನು,
ಮರುಜನ್ಮವಿಲ್ಲದಂತೆ ಐಕ್ಯವಾಗಿಸಿಕೋ ನಿನ್ನೊಳಗೆ.
ಜೀವ ಬಯಸಿದೆ ಮುಕ್ತಿ, ಸೋತು ಶರಣಾಗಿದೆ ಭಕ್ತಿ, ಇಹದಗೊಡವೆ
ಸಾಕೆನಗೆ, ದೈವಸನ್ನಿಧಿ ಬೇಡುತಿದೆ.
ಅಂತಿಮಯಾತ್ರೆಯ ಜಾತ್ರೆ ಶುರುವಾಗಿದೆ, ಚಟ್ಟಕೇರುವ ಹೊತ್ತು,
ಇಟ್ಟ ಮುಹೂರ್ತ ಬದಲಾಗದು ಎಂದೂ ...
ಕೊನೆಯ ಹಂತಕೆ ತಲುಪಿದೆ, ನಮನ ಸಲ್ಲಿಸಲೆಂದು ಬಂದೆನಿಲ್ಲಿಗೆ,
ಗಮನವೆಲ್ಲಾ ನಿನ್ನ ಸೇರುವಲ್ಲೇ ತಂದೆ...ಅರ್ಪಿಸಿಕೋ ಎನ್ನ....
