ನೀನೆ ಬದುಕಿನ ಸ್ಫೂರ್ತಿ
ನೀನೆ ಬದುಕಿನ ಸ್ಫೂರ್ತಿ
ಕಂದಾ ನಿನ್ನ ಮುದ್ದು ಮೊಗದಲಿ ಖುಷಿಯ
ನಗುವಿನೊಂದಿಗೆ ನಲಿವಾ ಜಗದೊಡತಿ ನಾನು
ವಿಧ ವಿಧ ವೇಷದಲಿ ನನ್ನ ರಮಿಸುವ ಪರಿಯ
ನಗುತಲಿ ಕಲಿತಿರುವ ಜಾಣ ಪೋರ ನೀನು!!
ರವಿ ಶಶಿಯು ಹಾಯುವ ಭುವಿಯ ಅಂಗಣದಲ್ಲಿ
ಚಂದಮಾಮನ ನಾಚಿಸುವ ದುಂಡು ಮುಖವರಳಿ
ಬೆಳಕನ್ನು ಹೆಚ್ಚಿಸಿ ಮಿನುಗುವ ವಿದ್ಯುದ್ಮಾನ ದೀಪ
ಲಾಂದ್ರದಲಿ ಕಂಡು ಭೂಲೋಕದ ಭಾವಗಳೆಲ್ಲ ಕೆರಳಿ!!
ಅಂಬೆಗಾಲಿಟ್ಟು ಎದ್ದು ನಿಂತು ನಡೆದಾಗ
ನಕ್ಷತ್ರಗಳ ಚಿತ್ತಾರ ಮೂಡಿ ಜೀವದಲಿ
ನೊಂದ ಮನವಿರಲೇನು ನಿನ್ನ ನಗುವದು ಸಾಕು
ಒಂದಿನಿತು ನೆನೆಸಲಾರೆ ಚಿಂತೆಯ ನಾನಿಲ್ಲಿ!!
ರಂಜಿಸುವ ಆಟಗಳು ಬಹು ವಿಧದ ಜೇಂಕಾರ
ಮಂಜಹನಿ ಹರಳುಗಟ್ಟಿದ ತೆರನ ಸೊಗಸು
ನಂಜು ತುಂಬಿರದ ಮನಸು ಮುಗ್ಧತೆಯ ಸಾಕಾರನೀನೆಮಗೆ ಬದುಕಿನಾ ಸ್ಫೂರ್ತಿಯ ತೇಜಸ್ಸು!!
