ನಾ ಏನ ಹೇಳಲಿ? ನಾ ಏನ ಕೇಳಲಿ?
ನಾ ಏನ ಹೇಳಲಿ? ನಾ ಏನ ಕೇಳಲಿ?
ಬೆಳದಿಂಗಳ ಬೆಳಕಿನಲಿ
ನೀನಾಡಿದ ಮಾತುಗಳಿಗೆ
ಮಾಡಿದ ಪ್ರಮಾಣಕೆ
ಹಂಚಿಕೊಂಡ ಇತಿಹಾಸಕೆ
ಜೀವನದ ಮುಂದಿನ ಹೆಜ್ಜೆಗಳಿಗೆ
ಕೊಟ್ಟ ಭರವಸೆಗಳಿಗೆ
ಇತ್ತ ನಂಬಿಕೆಗೆ
ಕಿರಿಕಿರಿಯಾದ ಸಿಹಿ ನಗುವಿಗೆ
ಸಾಕ್ಷಿಯಾಗಿ ಸಾಕ್ಷಿಯಾಗದ ಚಂದಿರನ ಬಳಿ
ನಾ ಏನ ಹೇಳಲಿ? ನಾ ಏನ ಕೇಳಲಿ?
ಒಂದೇ ರಾತ್ರಿಯಲ್ಲಿ, ಮರೆಯಾದ ಹಗಲಿಗೆ
ಅನಿಸಿ, ಅಂದುಕೊಂಡ ಸತ್ಯದ ಭ್ರಮೆಗೆ
ಜಾರಿದಂತಿದ್ದ ನಿದ್ರೆಯ ಕನಸಿನ ನೆನಸಿಗೆ
ಮತ್ತೆ ವಾಸ್ತವಕ್ಕೆ ಮರಳುವ ಗೊಂದಲದ ಬುದ್ದಿಗೆ
ಅಲೆಯುತಿದ್ದ ಮನಸಿನ ಯೋಚನೆಗಳಿಗೆ
ಕಣ್ಣೀರಿನ ಅರ್ಥ ಗೊತ್ತಿಲ್ಲದೆ ಒದ್ದೆಯಾದ ಕಂಗಳಿಗೆ
ಸಾಕ್ಷಿಯಾಗಿ ಸಾಕ್ಷಿಯಾಗದ ಚಂದಿರನ ಬಳಿ
ನಾ ಏನ ಹೇಳಲಿ? ನಾ ಏನ ಕೇಳಲಿ?

