shwetha bhide

Romance Tragedy Inspirational

4.6  

shwetha bhide

Romance Tragedy Inspirational

ಸಮಾನಾಂತರ ರೇಖೆಗಳು

ಸಮಾನಾಂತರ ರೇಖೆಗಳು

3 mins
24.2Kದೊಡ್ಡ ವೇದಿಕೆ.. ಮುಂಭಾಗ ತುಂಬಿರುವ ಜನಸಾಗರ. ಅದು ಸಾಧಕರ ಜೀವನವನ್ನು ಜನರ ಮುಂದಿಡುವ ಕಾರ್ಯಕ್ರಮ.

ಸಾವಿರದ ಸಂಚಿಕೆ ಅದು. ಜನ ಮೆಚ್ಚುಗೆ ಗಳಿಸಿ ಅಂದು ಮೊಟ್ಟ ಮೊದಲ ಬಾರಿಗೆ ಲೈವ್ ಕಾರ್ಯಕ್ರಮ ನಡೆಯುವುದರಲ್ಲಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿ ದುಷ್ಯಂತ್ ಭಾರದ್ವಾಜ್. ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ,ನಿರ್ದೇಶಿಸಿದ ಹೆಗ್ಗಳಿಕೆ,ಜೊತೆಗೆ ಅದ್ಭುತ ಶಾರೀರ, ಸಾಲುಸಾಲು ಪ್ರಶಸ್ತಿಗಳ ಸರದಾರ. ರಾಷ್ಟ್ರಮಟ್ಟದಲ್ಲಿ ಗುರುತಿಸಲ್ಪಡುವ ವ್ಯಕ್ತಿ,ಅವರದು ಬಹುಮುಖ ಪ್ರತಿಭೆ. ಹೀಗಾಗಿಯೇ ಆಯೋಜಕರು ಕಾರ್ಯಕ್ರಮವನ್ನು ದೊಡ್ಡಮಟ್ಟದಲ್ಲಿ ಆಯೋಜಿಸಿದ್ದರು.


ಕಾರ್ಯಕ್ರಮ ಆರಂಭವಾಯಿತು. ಹೆಸರಾಂತ ನಟರು ನಿರೂಪಕರಾಗಿ ನಿಂತಿದ್ದರು. ಸಾಲು ಸಾಲು ಕಾರ್ಯಕ್ರಮ ನಡೆಸಿ ಪಕ್ವವಾದ ನಟ, ಅವರಿಗೂ ಅದು ಹೊಸ ಅನುಭವ. ಜನರ ಮಧ್ಯೆ ನೇರ ಸಂವಾದ.

ದುಷ್ಯಂತ್ ಆಗಮಿಸಿದಾಗ ಕರತಾಡನದ ಮಳೆಯಾಯ್ತು, ಶಿಳ್ಳೆ, ಚಪ್ಪಾಳೆ ಮುಗಿಲುಮುಟ್ಟಿತು.ನಿರೂಪಕ ದುಷ್ಯಂತ್ ಬದುಕಿನ ಪುಟ ಬಿಚ್ಚಲು ಆರಂಭಿಸಿದರು. 

ಅದು ಯಾವುದೇ ಸಿನಿಮಾ ಕಥೆಗಿಂತಾ ಕಡಿಮೆಯೇನು ಇರಲಿಲ್ಲ. ಪ್ರತಿಯೊಂದು ಹಂತದಲ್ಲೂ ರೋಚಕತೆ ಇತ್ತು. ಅವನ ಪರಿಶ್ರಮ, ಶ್ರದ್ಧೆ ಎದ್ದುಕಾಣುತ್ತಿತ್ತು. ಅವನೇನೂ ಯಾರದೋ ಸಹಾಯ, ಸಹಕಾರದಿಂದ ಈ ಮಟ್ಟಕ್ಕೆ ಬೆಳೆದಿರಲಿಲ್ಲ. ಕಷ್ಟದ ಬಾಲ್ಯ,ಕನಸಿನ ಆಸ್ತಿಯನ್ನುಬಿಟ್ಟು ಕಾಸಿಗೂ ಪರದಾಡಿದ ಕಾಲ. ಅವನ ಕನಸಿನ ಹಾದಿಯತುಂಬಾ ಕಲ್ಲುಮುಳ್ಳುಗಳ ರಾಶಿಯಿತ್ತು. ಹಂತಹಂತವಾಗಿ ಅವನ ಕನಸಿನ ಬೆನ್ನತ್ತುವ ಛಲ ಅವನನ್ನು ಸಾಧಕರ ಸಾಲಲ್ಲಿ ನಿಲ್ಲಿಸಿತ್ತು.ತಂದೆಯ ಆಸರೆ ಇಲ್ಲದೆ ಸ್ವಂತ ದುಡಿಮೆ, ಓದು ಸಂಭಾಳಿಸಿಕೊಂಡು, ಏನೂ ಇಲ್ಲದೇ ಬರೀ ಬಣ್ಣದ ಜಗತ್ತಿನ ಕನಸ್ಸು ಕಂಡ ಹುಡುಗ. ಲೈಟ್ ಬಾಯ್ ಆಗಿ ಕೆಲಸ ಶುರು ಮಾಡಿ, ಸಹ ನೃತ್ಯಕಲಾವಿದ, ಹೀಗೆ ಎಲ್ಲಾ ಕೆಲಸವನ್ನೂ ಮಾಡಿ, ಹಂತ ಹಂತವಾಗಿ ಚಿತ್ರರಂಗದಲ್ಲಿ ಬೆಳೆದದ್ದು ಚಿಕ್ಕ ವಿಷಯವಾಗಿರಲಿಲ್ಲ. ಅವನ ಪರಿಶ್ರಮ ಪೀಳಿಗೆಯ ಎಷ್ಟೋ ಜನರಿಗೆ ಪ್ರೋತ್ಸಾಹಕರವಾಗಿತ್ತು. 


ಹಂತಹಂತವಾಗಿ ಅವನ ಪಯಣದಲ್ಲಿ ಸಹಕಾರಕೊಟ್ಟ, ಜೊತೆಗಿದ್ದ ಎಷ್ಟೋ ವ್ಯಕ್ತಿಗಳು ವೇದಿಕೆಗೆ ಬಂದರು. ಬಾಲ್ಯದ ಗೆಳೆಯರು,ಸಹಪಾಠಿಗಳು,ಸಹವರ್ತಿಗಳು, ನಿರ್ದೇಶಕರು, ಜೊತೆ ಕೆಲಸಮಾಡಿದ ಗೆಳೆಯರು, ಸಹಕಲಾವಿದರು ಹೀಗೆ ವೇದಿಕೆ ತುಂಬಿ ತುಳುಕಿತು. ಆಯೋಜಕರು ಹುಡುಕಿ ಹುಡುಕಿ ಅವನ ಜೀವನದಲ್ಲಿ ಪಾತ್ರವಹಿಸಿದ್ದ ಜನರನ್ನು ಒಂದೆಡೆ ಕಲೆಹಾಕಿದ್ದರು. ದುಷ್ಯಂತ್ ಮುಖದಲ್ಲಿ ನೆಡೆದುಬಂದ ಹಾದಿ,ಜೊತೆ ನಿಂತಿದ್ದ ಜನರ ನಡುವಿನ ಜೊತೆಗಿನ ಜೀವನ ನೆನೆದು ಸಣ್ಣ ಕಿರುನಗೆಯೊಂದು ಹಾದುಹೋಯಿತು.


ನಾಲ್ಕು ಗಂಟೆಯ ಕಾರ್ಯಕ್ರಮ ಹಿಗ್ಗಿ ಆರು ಗಂಟೆಯಾಗಿತ್ತು. ಇನ್ನೇನು ಕಾರ್ಯಕ್ರಮದ ಕೊನೆಯ ಹಂತ. ನಿರೂಪಕರು ಎಂದಿನಂತೆ ಯಾರಿಗಾದ್ರು ಧನ್ಯವಾದ ಅಥವಾ ತಪ್ಪೊಪ್ಪಿಗೆ ಇದ್ರೆ ಹೇಳಿ ಸರ್ ಅಂದರು. ದುಷ್ಯಂತ್ ಆಗಲೇ ಕಳೆದುಹೋಗಿದ್ದ. ಅವಳು!!! ಅವಳ ಬಗ್ಗೆ ಏನು ಹೇಳುವುದು, ಅವಳ ಪಾತ್ರ ಹೇಗೆ ಹೇಳಲಿ ಎಂಬ ಯೋಚನೆಯ ಲಹರಿಯಲ್ಲಿ ಮನದಲ್ಲೊಂದು ರೀಲು ಬಿಚ್ಚಲಾರಂಭಿಸಿತ್ತು.


ಅದು ಸುಮಾರು 10-12 ವರ್ಷಗಳ ಹಿಂದಿನಕಥೆ. ಎಂದಿನಂತೆಯೇ ದುಷ್ಯಂತ್ ವಾಕಿಂಗ್ ಹೋಗಿದ್ದ. ಅದವನ ಅಭ್ಯಾಸ. ಬಿಸಿಲು ಮಳೆ ಚಳಿ ಏನೇ ಆದರೂ ಅವನ ಅಭ್ಯಾಸ ತಪ್ಪವುದಲ್ಲ. ಆ ಪಾರ್ಕ್ ಮೂಲೆ ಮೂಲೆ ಕೂಡ ಚಿರಪರಿಚಿತ. ಹೀಗೆ ಓಡುತ್ತಿದ್ದಾಗ ಯಾವುದೋ ಹೊಸಮುಖವೊಂದು ಕಣ್ಮುಂದೆ ಸುಳಿದು ಮರೆಯಾಯ್ತು. ಮಿಂಚಿದ ಕಂಗಳ ನೆನಪು ಸುಳಿಯಿತು.ಅಷ್ಟೇನು ಗಮನಕೊಡದ ಅವನು ತಿರುಗಿ ಮನೆಗೆಬಂದ. ಮತ್ತೆ ಮಾರನೇದಿನ ಆ ಕಣ್ಣಿನ ಒಡತಿಯ ದರ್ಶನವಾಯ್ತು. ಹಲೋ ವಿನಿಮಯವಾಯ್ತು. ದಿನಕಳೆದಂತೆ ಒಳ್ಳೆಯ ಸ್ನೇಹಿತರಾದರು. ತಮ್ಮ ವೈಯಕ್ತಿಕ ವಿಚಾರಗಳನ್ನು ವಿನಿಮಯಮಾಡಿಕೊಳ್ಳುವುದು ಒಂದು ಪ್ರೀತಿಯ ಸಾಂತ್ವನ ಹೇಳಿಕೊಳ್ಳುವಷ್ಟು ಹತ್ತಿರವಾದರು.ಪರಿಚಯ ಗೆಳೆತನವಾಗಿ,ಅದಕ್ಕೂ ಮೇಲೆ ಒಂದು ವಿಚಿತ್ರ ಅನುಬಂಧ ಅವರನಡುವೆ ಟಿಸಿಲೊಡೆದಿತ್ತು. 


ಅವನ ಸೋಲು ಗೆಲುವಿಗೆ ಅವಳು ಸ್ಪಂದಿಸುತ್ತಿದ್ದಳು. ಕಾಳಜಿಯ ಹೊನಲು ಹರಿಯುತ್ತಿತ್ತು. ಅವರ ನಡುವಿನ ಸಂಬಂಧದಲ್ಲಿ ವಿಶೇಷ ಅರ್ಥವಿರಲಿಲ್ಲ, ನಿಜ. ಆದರೆ ಒಬ್ಬರಿಗೊಬ್ಬರ ಮನ ಮಿಡಿಯುತ್ತಿತ್ತು. ಇಬ್ಬರ ಸಮಾನ ಅಭಿರುಚಿಗಳು ಮತ್ತಷ್ಟು ಹತ್ತಿರ ತಂದಿತ್ತು. ಇಬ್ಬರಿಗೂ ತಮ್ಮ ಜೀವನದ ಕನಸುಗಳು ಗುರಿಗಳು ನಿಚ್ಚಳವಾಗಿತ್ತು. ನಿಧಾನವಾಗಿ ದುಷ್ಯಂತ್ ಪರಿಶ್ರಮ ಫಲಕೊಡಲು ಪ್ರಾರಂಭಿಸಿತ್ತು. ಮೊದಲಿನ ಹಾಗೆ ಅವರ ಭೇಟಿ ಅಸಾಧ್ಯವಾಗಿತ್ತು. ಆದರೆ ಸಂದೇಶ ರವಾನೆ ಅವರ ಸಂವಹನವನ್ನು ಜೀವಂತವಿಟ್ಟಿತ್ತು.


ನೋಡ ನೋಡುತ್ತಿದ್ದಂತೆಯೇ ದುಷ್ಯಂತ್ ಜೀವನದಲ್ಲಿ ಬದಲಾವಣೆಯ ಗಾಳಿ ಬೀಸಲಾರಂಭಿಸಿತು. ಅವನ ಜೀವನಕ್ಕೊಬ್ಬ ಸಂಗಾತಿ ಸಿಕ್ಕಳು. ಸಿನಿಮಾಗಳು ಸಾಲು ಸಾಲು ದಾಖಲೆ ನಿರ್ಮಿಸಿತು. ಈಗ ದುಷ್ಯಂತ್ ಸ್ಟಾರ್ ನಟ. ಮೊದಲಿನಂತೆ ಪಾರ್ಕ್ನಲ್ಲಿ ಓಡಾಡುವುದು ಅಸಾಧ್ಯವಾಗಿತ್ತು. ಆಕೆಯನ್ನು ಭೇಟಿಯಾಗುವುದು ಕೂಡ ದುಸ್ತರವಾಗಿತ್ತು. ಅವರ ಭೇಟಿಗೆ ತಡೆಗೋಡೆಯಾಗಿ ಅವನ ಸಂಗಾತಿಯ ಅನುಮಾನ ಅವರನ್ನು ಮತ್ತಷ್ಟು ದೂರ ಮಾಡಿತ್ತು. ಸಮಾನ ಮನಸ್ಕರಾಗಿ, ಕಷ್ಟಸುಖಗಳಿಗೆ ಒತ್ತಾಸೆಯಾಗಿ ಸಾಂತ್ವನದ ಶರಧಿಯಾಗಿ ಹರಿದಾಕೆಯನ್ನು ಹೊರಜಗತ್ತಿಗೆ ಪರಿಚಯಿಸುವ ಅಗತ್ಯ ಇಬ್ಬರಿಗೂ ಕಾಣಲಿಲ್ಲ. ಅವರ ಭಾವಸೆಲೆ ಹಾಗೇ ಚಿಮ್ಮುತ್ತಿತ್ತು. ಅವಳ ನೆಡೆ ನುಡಿ ಇವನಿಗೆ ಚಿರಪರಿಚಿತ. ಕೇವಲ ಇವನ ಏಳ್ಗೆಗಾಗಿ ಪ್ರಾರ್ಥಿಸಿ, ನೂರಾರು ವ್ರತ ಪೂಜೆ ಮಾಡುವುದನ್ನು ಎಷ್ಟೇ ಬೇಡವೆಂದರೂ ಇವಳು ನಿಲ್ಲಿಸಿರಲಿಲ್ಲ.ಈ ಅನುಬಂಧದ ವ್ಯಾಖ್ಯಾನ ಹುಡುಕುವ ಗೋಜು ಇಬ್ಬರೂ ಕೈಬಿಟ್ಟಾಗಿತ್ತು. ಅನವರತ ಪ್ರೇಮದ ಮೂರ್ತರೂಪ ಅವರನಡುವೆ ಜನ್ಮತಳೆದಿತ್ತು.


ಇವನ ಬದಲಾವಣೆಗಳ ಜೊತೆ ಇವಳ ಜೀವನವೂ ಬದಲಾಗಿತ್ತು. ಅವಳಿಗೆ ಸಮಾಜದಲ್ಲಿ ತನ್ನದೇ ಆದ ಹೆಸರಿತ್ತು. ಆದರೆ ಹೊರಪ್ರಪಂಚದ ಗೋಡವೆಲ್ಲದೇ ಅವರ ಭಾವನೆಗಳು ಹೆಮ್ಮರವಾಗಿತ್ತು.ಮೊದಲಿನ ಅವಳಾಗಿದ್ದರೆ ತೆರೆಮರೆಯಲ್ಲಿ ಹತ್ತು ಜನರ ಮಧ್ಯೆನಿಂತು ಯಾವುದೇ ಕಾರ್ಯಕ್ರಮ ಕಂಣ್ತುಂಬಿಕೊಂಡು ಅನಿಸಿಕೆಗಳ ಮಹಾಪೂರವನ್ನೇ ರವಾನಿಸುತ್ತಿದ್ದಳು. ಈಗದು ಅಷ್ಟು ಸುಲಭವಲ್ಲ. ದೊಡ್ಡ ಕಂಪನಿ ಕಟ್ಟಿದ್ದಳು. ಅದರ ಮುಖ್ಯಸ್ಥೆ, ಒಂದು ಮಗುವಿನ ತಾಯಿ ಜವಾಬ್ದಾರಿಯ ಹೊರೆಯಿತ್ತು.  ಅವನ ಬಣ್ಣದ ಜಗತ್ತಿನ ಕನಸುಗಳನ್ನೆಲ್ಲಾ ಅವಳ ಬಳಿ ಹೇಳಿಕೊಂಡಾಗ ಅವನಿಗೆ ಭರವಸೆ ತುಂಬಿ, ನೀನು ಹೀರೊ ಆಗೇ ಆಗ್ತೀಯಾ ಅನ್ನುವುದರ ಜೊತೆ "ನೀನು ಆ ಸಾಧಕರ ಬಗ್ಗೆ ಮಾಡೋ ಕಾರ್ಯಕ್ರಮದಲ್ಲಿ ಬರೋವಷ್ಟು ದೊಡ್ಡ ನಟ ಆಗ್ಬೇಕು, ಸಾಧಕರ ಸೀಟಿನಲ್ಲಿ ನೀನು ಕೂರುವುದನ್ನು ನೋಡೋದು ನನ್ನ ಆಸೆ ಕಣೋ, ನೋಡಿದ್ಮೇಲೆ ಏನಾದ್ರೂ ಆಗ್ಲಿ, ಮತ್ತೇನು ಬೇಡ " ಅನ್ನೋ ಅವಳ ಮಾತು ನೆನಪಾಗಿ ಥಟ್ ಎಂದು ಸಣ್ಣ ಕಣ್ಣೀರ ಹನಿ ಕೆನ್ನೆಸೋಕಿ ಮನ ಅಪಸ್ವರ ಪಲುಕಿತು. ಅವಳು ಕಾರ್ಯಕ್ರಮ ನೋಡುತ್ತಿದ್ದಾಳಾ, ಏನು ಮಾಡುತ್ತಿದ್ದಾಳೆ, ಏನೋ ಭಾವ ಸಂಚಲನ. ಮೊಬೈಲ್ನ ಸಣ್ಣ ಕಂಪನ, ಸಂದೇಶವೊಂದು ಸಾರಿತ್ತು. 


ಅವನನ್ನು ಪರದೆಯ ಮೇಲೆ ನೋಡುತ್ತಾ ಆಕೆ ಕುಳಿತಲ್ಲಿಯೇ ಕುಸಿದಿದ್ದಳು. ಅವಳ ಆಸೆ ಪೂರೈಸಿದ್ದನ್ನು ನೋಡಿದ ಸಂತಸಕ್ಕೆ ಹೃದಯ ತುಂಬಿಬಂದು ಹೃದಯದ ಕಂಪನವಾಗಿತ್ತು. ಅಷ್ಟೇ! ಅವರ ಪ್ರಾಣಪಕ್ಷಿ ಇಹಲೋಕ ತ್ಯಜಿಸಿತ್ತು. ಹೆಸರಿಗೂ ಮೀರಿದ ಸಂಬಂಧ ಇತಿಶ್ರೀ ಹಾಡಿತ್ತು!ಅವರ ಪರಿಚಯದ ಬಗ್ಗೆ ಸ್ವಲ್ಪ ಅರಿವಿದ್ದ ಗೆಳೆಯನೊಬ್ಬನಿಗೆ ವಿಷಯ ತಿಳಿದು ಅವನಿಗೆ ಸಂದೇಶ ರವಾನಿಸಿದ್ದ. ಜೀವನದ ಪ್ರತಿ ಹಂತದಲ್ಲೂ ಜೊತೆಯಾಗಿ ನಿಂತವಳಿಗೆ, ಅವನ ಉನ್ನತಿಗೆ, ಈ ಕ್ಷಣಕ್ಕಾಗಿ ಅನವರತ ಪ್ರಾರ್ಥಿಸಿದವಳಿಗೆ, ಭಾವಕ್ಕೆ ಜೀವ ತುಂಬಿದವಳಿಗೆ, ಎಷ್ಟೋ ಬಾರಿ ಲೆಕ್ಕಕ್ಕೂ ನಿಲುಕದೇ ಹಣ ಸಹಾಯ ಮಾಡಿ, ತನ್ನ ಅಸ್ತಿತ್ವವನ್ನು ಮರೆತು ಅವನನ್ನು ಮನದಲ್ಲಿ ಸ್ಥಾಪಿಸಿ ತನ್ನಿಂದ ಏನೂ ಬಯಸದೆ ಜೀವ ಕಳೆದ ಅವಳಿಗೆ ಧನ್ಯವಾದ ಹೇಳಲೂ, ಕೃತಜ್ಞತೆ ತಿಳಿಸಲೊ ಅಥವಾ ಒಮ್ಮೆ ಭೇಟಿಯಾಗಿ ಎದುರು ಕುಳಿತು ಆಕೆಯ ಕಣ್ಣಲ್ಲಿ ಕಾಣುವ ಹೊಳಪು, ಖುಷಿಗೆ ತುಂಬಿದ ಕಣ್ಣೀರ ಬೀಳಿಸದಿರು ಎಂದು ಆ ಕಣ್ಣಲ್ಲಿ ತನ್ನ ಬಿಂಬ ಕಾಣಲೋ ಎಂಬ ಯೋಚನೆ ನಡೆಸುತ್ತಿರುವಾಗಲೇ ಹೊರಜಗತ್ತಿನಿಂದ ಏನೂ ಬಯಸದೆ ತನ್ನ ಏಳಿಗೆಯಷ್ಟೇ ಬಯಸಿದ ಜೀವ ಈ ಕ್ಷಣಕ್ಕೆ ಇಲ್ಲ ಎಂಬುದೇ ಅರಗಿಸಿಕೊಳ್ಳಲಾಗದೆ ಕೊರಳುಬ್ಬಿ ಬಂತು.

ಕ್ಷಣವೊಂದು ಸ್ತಬ್ಧವಾಯ್ತು. ಸಾಧನೆಯದಾರಿಯ ಜೊತೆಗಾರರ ಜೊತೆ ತೆಗೆಸಿ ಗೋಡೆಗೆ ಹಾಕಿದ ಫೋಟೋ ಅವಳಿಲ್ಲದೆ ಅವನಿಗೆ ಅಪೂರ್ಣವೆನಿಸಿತ್ತು!!!


Rate this content
Log in

Similar kannada story from Romance