ಲೆಟರ್
ಲೆಟರ್
ಆಫೀಸಿನಲ್ಲಿ ಕುಳಿತು ಸಚಿವ ಟಿ.ಬಿ. ಜಯಚಂದ್ರ ಬಗ್ಗೆ ಸೊಗಡು ಶಿವಣ್ಣ ಮಾಡಿದ ಆರೋಪದ ಬಗ್ಗೆ ವರದಿ ಬರೆಯುತ್ತಿದ್ದೆ ಆಗ ರಿಸಪ್ಷನ್ ಹುಡುಗಿ ಶಾಲಿನಿ ಬಂದು ಸಾರ್ ನಿಮಗೊಂದು ಲೆಟರ್ ಇದೆ ಎಂದು ಹೇಳಿ ಪತ್ರವೊಂದನ್ನು ನನ್ನ ಕೈಗಿತ್ತು ಹೋದಳು. ನನ್ನ ಹೆಸರಿಗೆ ಕಛೇರಿ ವಿಳಾಸಕ್ಕೆ ಕಾಗದ ಬರೆದವರು ಯಾರೆಂದು ಗೊತ್ತಾಗದೆ ಯಾರು ಬರೆದಿರಬಹುದೆಂದು ಕಾಗದ ತಿರುಗಿಸಿ ಅಲ್ಲಿ ಕಂಡ ಹೆಸರು ಕಂಡು ಹಾಗೆ ನೆನಪಿನಾಳಕ್ಕೆ ಜಾರಿದೆ . . .
ನನ್ನೆದೆಗೆ ಮೊದಲ ಮಳೆ ಬಿದ್ದ ಆದಿನ ನನಗಿನ್ನು ನೆನಪಿದೆ. ಅಂದು ಶನಿವಾರ ಮಾರ್ನಿಂಗ್ ಕ್ಲಾಸ್ ! ಬೆಲ್ಲು ಹೊಡೆಯಲು ಹತ್ತು ನಿಮಿಷವಿರುವಾಗಲೆ ಜಡಿ ಮಳೆ ಪ್ರಾರಂಭವಾಗಿತ್ತು ಬೆಲ್ಲು ಹೊಡೆಯುತ್ತಿದ್ದಂತೆ ಎಲ್ಲರೂ ಕ್ಲಾಸ್ ರೂಮಿಂದ ಹೊರಗೆ ಬಂದು ವರಾಂಡದಲ್ಲಿ ಮಳೆ ಹನಿಯೊಂದಿಗೆ ಆಟವಾಡುತ್ತಾ ನಿಂತು ಬಿಟ್ಟೆವು. ನನ್ನ ಪಕ್ಕ ಬಂದು ನಿಂತವಳು ಮಳೆ ಹನಿಗೆ ಕೈಯೊಡ್ಡಿ ಕುಣಿಯುತ್ತಿದ್ದಳು. ಆಗ ನನಗೇಕೆ ಹಾಗೆನ್ನಿಸಿತೋ ಕಾಣೆ. ಸುರಿಯುತ್ತಿದ್ದ ಮಳೆಗೆ ಕೈಯೊಡ್ಡಿ ನೀರನ್ನು ಅವಳ ಮುಖಕ್ಕೆ ರಾಚಿಬಿಟ್ಟೆ. ಅವಳ ಮುಖ ನೀರಲ್ಲಿ ತೊಯ್ದು ಹೋಯ್ತು ನಿಂತಿದ್ದ ಹುಡುಗರೆಲ್ಲ ಗೊಳ್ಳೆಂದು ನಕ್ಕುಬಿಟ್ಟರು. ಅವಳು ಸಿಟ್ಟಿನಿಂದ ನನ್ನ ಬೆನ್ನತ್ತಿದಳು. ನಾನು ಆ ಮಳೆಯಲ್ಲೇ ಗೇಟಿನತ್ತ ಓಟಕಿತ್ತೆ. ಅವಳು ನನ್ನ ಹಿಂದೆಯೇ ಓಡಿದಳು. ಹೈಸ್ಕೂಲ್ ಗೇಟ್ ಸಮೀಪಿಸುವಷ್ಟರಲ್ಲಿ ಅವಳು ಹಿಂದಿನಿಂದ ನನ್ನ ಅಂಗಿ ಹಿಡಿದೆಳೆದಳು. ಅವಳು ಎಳೆದ ರಭಸಕ್ಕೆ ಜಾರಿದ ನಾನು ಹಾಗೆ ಅನಾಮತ್ತು ಅವಳ ಮೇಲೆ ಬಿದ್ದೆ ಅವಳ ಮುಖದಲ್ಲಿ ಆಗ ಸಿಟ್ಟಿನ ಬದಲಾಗಿ ನಸುನಾಚಿಕೆ ಲಾಸ್ಯವಾಡುತ್ತಿತ್ತು.
ಕೆಸರಾಗಿದ್ದ ಒದ್ದೆ ಬಟ್ಟೆಯೊಂದಿಗೆ ಮನೆ ಸೇರಿಕೊಂಡೆವು. ಮತ್ತೆ ಸೋಮವಾರ ಸ್ಕೂಲಿಗೆ ಹೋದಾಗ ನನಗೆ ಭಯ ಎಲ್ಲಿ ಶನಿವಾರ ಅವಳ ಮೇಲೆ ಬಿದ್ದು ಬಟ್ಟೆ ರಾಡಿ ಮಾಡಿದ ವಿಷಯವನ್ನು ಎ.ಎಸ್. ಮೇಸ್ಟ್ರು ಕೈಲಿ ಹೇಳಿ ಹೊಡೆಸುತ್ತಾಳೋ ಎನ್ನುವ ಅಳುಕು ಎ.ಎಸ್. ಎಂದಿಗೂ ಹೆಣ್ಮಕ್ಕಳಿಗೆ ಹೊಡೆದ ಉದಾಹರಣೆ ಇರಲಿಲ್ಲ. ಗಂಡು ಮಕ್ಕಳಿಗೆ ಮತ್ತೊಂದು ಜನ್ಮ ನೆನಪಾಗುವಂತೆ ಹೊಡೆಯುತ್ತಿದ್ದ ರೀತಿ ನೆನಪಾಗಿ ನನಗೆ ಭಯವಾಗುತ್ತಿತ್ತು. ಬೆಲ್ಲಾಗುವ ವೇಳೆಗೆ ಬಂದವಳು ಪ್ರೈಯರ್ ಮುಗಿದೊಡನೆ ಸೀದಾ ಕ್ಲಾಸ್ ರೂಂಗೆ ಹೋದಳು. ಆಗ ನನಗೆ ಸ್ವಲ್ಪ ಧೈರ್ಯ ಬಂದು ಕೊನೆಯವನಾಗಿ ಒಳ ಹೋದೆ ಅವಳು ನನ್ನ ಮುಖ ನೋಡಿದೊಡನೆ ನಾಚಿಕೆಯಿಂದ ಮುದುಡಿ ಹೋದಳು. ಅವಳ ಮುಖದಲ್ಲಿ ಕೋಪದ ಗೆರೆಗಳಿರಲಿಲ್ಲ. ಅಂದು ಮಧ್ಯಾಹ್ನ ಊಟಕ್ಕೆ ಬಿಟ್ಟಾಗ ಅವಳ ಹಿಂದೆಯೇ ಹೆಜ್ಜೆ ಹಾಕಿದ ನಾನು ಗ್ರಾಮದಮ್ಮನ ಗುಡಿಯ ಮುಂದೆ ಧೈರ್ಯ ಮಾಡಿ ಸಾರಿ ಕೇಳಿದೆ. ಆ ನಂತರದ ದಿನಗಳಲ್ಲಿ ನಾನು ಅವಳಿಗಾಗಿ ಕಾಯುವುದು ಅವಳ ಜೊತೆಯಲ್ಲೇ ಹೋಗುವುದು ಬರುವುದು ಹೆಚ್ಚಾಯ್ತು.
ಎಂದೂ ಆಟೋಟಗಳಲ್ಲಿ ಭಾಗವಹಿಸದ ನಾನು ಅವಳು ಸೇರಿದ್ದನ್ನು ಕಂಡು ಖೋಖೋಗೆ ಸೇರಿದೆ ಗಂಡು ಮಕ್ಕಳು ಹೆಣ್ಣು ಮಕ್ಕಳು ಸೇರಿ ಆಡುತ್ತಿದ್ದೆವು. ಹುಡುಗಿಯರು ಹುಡುಗರನ್ನು ಮುಟ್ಟಿಸುತ್ತಿದ್ದರು. ಒಬ್ಬ ಔಟಾದ ಮೇಲೆ ನಾನು ಚಂಗಿಸುತ್ತಿದೆ. ಕೀ ಪಡೆದ ಹುಡುಗಿ ನನ್ನ ಓಡಿಸಿಕೊಂಡು ಬಂದಳು. ನಾನು ಅವಳಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ನನ್ನ ಹುಡುಗಿಯ ಮೇಲೆ ಬಿದ್ದು ಬಿಟ್ಟೆ. ಅವತ್ತು ಸಾಯಂಕಾಲ ಮನೆಗೆ ಹೋಗುವಾಗ ಅವಳು ನನ್ನ ಚೆನ್ನಾಗಿ ಬೈದಳು. ನೀನು ಬೇಕೆಂದೆ ನನ್ನಮೇಲೆ ಬಿದ್ದೆ ಎಂದಳು. ನಾನಷ್ಟೇ ಸಮಜಾಯಿಸಿಕೊಟ್ಟರು ಒಪ್ಪಲಿಲ್ಲ ನಾಳೆಯಿಂದ ನನ್ನ ಮಾತನಾಡಿಸಬೇಡವೆಂದು ಹೇಳಿ ಹೋದಳು.

