B S Jagadeesha Chandra

Inspirational

3.9  

B S Jagadeesha Chandra

Inspirational

ಕಡೆಯ ಆಸೆ

ಕಡೆಯ ಆಸೆ

2 mins
64ರಾಜಪ್ಪನವರು ಹಾಸಿಗೆಯ ಮೇಲೆ ಮಲಗಿದ್ದರು. ಅವರು ಒಂದು ಸ್ವಲ್ಪ ಪಕ್ಕಕ್ಕೆ ಸರಿದರೂ, ಸ್ವಲ್ಪ ಮುಲುಗಿದರೂ ಕೂಡಲೇ ಸಹಾಯಕರು ಓಡಿ ಬಂದು 'ಏನಾದರೂ ಸಹಾಯ ಬೇಕೇ' ಎನ್ನುತ್ತಿದ್ದರು. ಒಂದು ಹಂತದಲ್ಲಿ ಅವರಿಗಂತೂ ಎಲ್ಲವನ್ನೂ ಬಿಟ್ಟು ಎಲ್ಲಾದರೂ ಓಡಿಹೋಗಿ ಬಿಡಲೇ ಎನ್ನಿಸುವಷ್ಟು ಬೇಸರವಾಗುತ್ತಿತ್ತು. ತಮ್ಮ ಜೀವನದ ಕೊನೆಯ ಹಂತ ತಲುಪಿದ್ದೇನೆ ಎಂದು ಅವರ ಒಳಮನ ಹೇಳುತ್ತಿತ್ತು. ಆದರೆ ಅವರ ಸುತ್ತಮುತ್ತಲಿನ ಜನ ಅವರನ್ನು ನೆಮ್ಮದಿಯಾಗಿ ಸಾಯಲೂ ಬಿಡುತ್ತಿರಲಿಲ್ಲ. ಅವರೆಲ್ಲರ ಪ್ರೀತಿ ಇವರಿಗೆ ಹಿಂಸೆಯಾಗಿಬಿಟ್ಟಿತ್ತು. ಹಾಗೆಯೆ ಮಲಗಿ ತಮ್ಮ ಕಳೆದ ಜೀವನವನ್ನು ನೆನಪಿಸಿ ಕೊಳ್ಳಲಾರಂಭಿಸಿದರು.

ಕಡುಬಡತನದಿಂದ ಬಂದ ಅವರು ಹಂತ ಹಂತವಾಗಿ ಮೇಲೆ ಬಂದಿದ್ದರು. ಅವರ ಹಾದಿಯೇನು ಹೂವಿನ ಹಾಸಿಗೆಯಾಗಿರಲಿಲ್ಲ. ಈಗ ಅವರನ್ನು ನೋಡಿದವರು, 'ಇವರೆಂಥ ಪುಣ್ಯಾತ್ಮರು, ಬೆಳ್ಳಿಯ ಚಮಚದಲ್ಲಿಯೇ ತಿಂದುಂಡು ಬೆಳೆದವರು' ಎಂದು ಅಂದುಕೊಳ್ಳುತ್ತಿದ್ದರು. ಆದರೆ ರಾಜಪ್ಪನವರು ಎಷ್ಟರಮಟ್ಟಿಗೆ ಮೇಲೇರಿದರೆಂದರೆ 'ಅಬ್ಬಾ ಇಷ್ಟು ಶ್ರೀಮಂತರೂ ಇರುತ್ತಾರಾ' ಎಂದು ಅಂದುಕೊಳ್ಳುವಷ್ಟಿತ್ತು. ಆದರೆ ಅವರು ಸಂಪಾದಿಸಿದ್ದೆಲ್ಲವೂ ಕಷ್ಟದಿಂದಲೇ, ಒಬ್ಬರಿಗೂ ಮೋಸ, ಅನ್ಯಾಯ ಮಾಡದೇ ಗಳಿಸಿದ್ದುದು. ಹೀಗಾಗಿ ಜನಮನ್ನಣೆ ಗಳಿಸಿದ್ದರು. ಮೊದಮೊದಲು ಈ ಜನಮನ್ನಣೆ, ಕೂಡಿಟ್ಟ ಹಣ ಒಂದು ರೀತಿಯ ಹೆಮ್ಮೆ, ಗರ್ವ ತಂದಿತ್ತಾದರೂ ಇತ್ತೀಚಿಗೆ ಇವೆಲ್ಲವೂ ಬೇಕಿತ್ತೇ ಎಂದು ಅನ್ನಿಸಲಾರಂಭಿಸಿತ್ತು. ಮಾಡಿದ್ದ ಅಸ್ತಿ, ಸಂಸ್ಥೆಗಳು, ಉದ್ಯಮಗಳು ಅವರದ್ದೇ ಆದರೂ ಮಕ್ಕಳು ಅದನ್ನು ಚೆನ್ನಾಗಿಯೇ ನಡೆಸಿಕೊಂಡು ಹೋಗುತ್ತಿದ್ದರು. ಇವರಿಗೆ ಏನನ್ನೂ ಮಾಡಲು ಬಿಡುತ್ತಿರಲಿಲ್ಲ. ಏನಾದರೂ ಹೇಳಲು ಹೋದರೆ, ನಿಮಗೇಕೆ ತೊಂದರೆ, ನಾವು ನೋಡಿಕೊಳ್ಳುತ್ತೇವೆ, ನೀವು ಆರಾಮವಾಗಿರಿ ಎಂದು ಬಾಯಿ ಮುಚ್ಚಿಸಿಬಿಡುತ್ತಿದ್ದರು.

ಆಗ ಅಲ್ಲಿಗೆ ಬಂದ ಅವರ ಸಹಾಯಕ ರಾಮಣ್ಣ, 'ಏನಾದರೂ ಬೇಕಿತ್ತಾ ಸರ್? ಈಗ ನೀವು ಔಷಧವನ್ನು ತೆಗೆದುಕೊಳ್ಳಬೇಕು, ಅದನ್ನು ಕೊಡಲು ಬಂದೆ' ಎಂದ. ಅವನು ಧರಿಸಿದ್ದ ಕೈಗಡಿಯಾರ ಎತ್ತಿ ಕಾಣುತ್ತಿತ್ತು. ಅದು ರಾಜಪ್ಪನವರೇ ಎಲ್ಲರಿಗೂ ಹಬ್ಬದ ಉಡುಗೊರೆಯಾಗಿ ಕೊಟ್ಟುದುದಾಗಿತ್ತು. ಆ ದಿನಗಳಲ್ಲಿ ಅವರು ಕೈಗಡಿಯಾರಗಳನ್ನು ಒಟ್ಟಿಗೆ ಬಹಳ ಕಡಿಮೆ ಬೆಲೆಗೆ ಖರೀದಿಸಿ ಎಲ್ಲರಿಗೂ ಕೊಟ್ಟಿದ್ದರು. ತಮ್ಮ  ಅತಿ ಬೆಲೆಬಾಳುವ ಗಡಿಯಾರಕ್ಕೆ ಹೋಲಿಸಿಕೊಂಡರು. ಎರದೂ ಒಂದೇ ಸಮಯವನ್ನು ತೋರಿಸುತ್ತೆ ಆದರೂ ಇದನ್ನು ಧರಿಸಿ ಎಲ್ಲರ ಮುಂದೆ ಕಾಣುವಂತೆ ಕಟ್ಟಿಕೊಂಡು ಮೆರೆದದ್ದುದು ಅವರಿಗೆ ನೆನಪಿಗೆ ಬಂದು 'ತಾನು ಎಂತಹ ಮೂಢ ' ಎಂದು ಮನದಲ್ಲೇ ನಕ್ಕರು. ಅವರಿಗೆ ತಮ್ಮ ಐಷಾರಾಮಿ ಕಾರು, ಬಂಗಲೆ ಎಲ್ಲವೂ ನೆನಪಿಗೆ ಬಂದವು. ತನ್ನ ವೃತ್ತಿಜೀವನದಲ್ಲಿ ತಾನು ಏನೇನೆಲ್ಲ ಮಾಡಿದೆ, ಗೆದ್ದೆ ಎಂದು ಬೀಗಿದೆ ಆದರೆ ಈ ಆರೋಗ್ಯವನ್ನು ಕೊಳ್ಳಲಾಗುತ್ತಿಲ್ಲವಲ್ಲ ಎಂದುಕೊಂಡರು. ಅಸ್ತಿ, ಹೆಸರು, ಅಧಿಕಾರಗಳ ಅಮಲಿನಲ್ಲಿ ತಾವು ಇತರರಿಗೆ ತೊಂದರೆ ಮಾಡದಿದ್ದರೂ ಅದರಿಂದ ಅನೇಕ ಗೆಳೆಯರನ್ನು ಕಳೆದುಕೊಂಡೆ, ಎಷ್ಟೊಂದು ಜನರೊಂದಿಗೆ ನಿಷ್ಠುರವಾಗಿ ನಡೆದುಕೊಂಡೆ ಎಂದು ನೆನಪಿಸಿಕೊಂಡರು. ಜೀವನದಲ್ಲಿ ಸಂತೋಷ ಮುಖ್ಯ ಎಂಬುದನ್ನು ನಾನೇಕೆ ಮರೆತೆ ಎಂದು ಬೇಸರಗೊಂಡರು. ತಮ್ಮ ಮಕ್ಕಳಿಗಾದರೂ ಇದನ್ನು ಹೇಳಬೇಕಿತ್ತು, ಅವರನ್ನೂ ನನ್ನಂತೆಯೇ ಬೆಳೆಸಿಬಿಟ್ಟೆನಲ್ಲ ಎಂದು ಪಶ್ಚಾತ್ತಾಪ ಪಟ್ಟರು. ತಾವು ಈಗ ನುಂಗುತ್ತಿರುವ ಮಾತ್ರೆಗಳನ್ನು ನೆನಪಿಸಿಕೊಂಡು 'ಅಯ್ಯೋ, ಊಟವನ್ನು ಔಷಧದಂತೆ ತಿನ್ನಿ, ಇಲ್ಲವಾದರೆ ಮುಂದೆ ಔಷಧವೇ ಊಟವಾಗುತ್ತದೆ' ಎಂದು ಮಕ್ಕಳಿಗೆ ಕೂಗಿ ಹೇಳಬೇಕೆನಿಸಿತು.

ನೋಡಿಕೊಳ್ಳಲು ಬೇಕಾದಷ್ಟು ಜನ ಇದ್ದಾರೆ ಎಂದು ಆರಾಮವಾಗಿ ಮನೆಯಲ್ಲೇ ಉಳಿದ ಹೆಂಡತಿಯನ್ನು ನೆನಪಿಸಿಕೊಂಡರು. ಆದರೆ ಬೇರೆಯವರು ನೋಡಿಕೊಂಡರೆ ಅದು ಹೆಂಡತಿಯೋ, ಹತ್ತಿರದ ಸಂಬಂಧಿಗಳೋ ನೋಡಿಕೊಂಡಂತೆ ಆಗುತ್ತದೆಯೇ ಎಂದುಕೊಂಡರು. 'ಇಷ್ಟು ದಿನ ನಾನೆ ಭಾಗ್ಯವಂತ ಎಂದು ಬೀಗುತ್ತಿದ್ದೆ, ಈಗ ನನ್ನಷ್ಟು ನತದೃಷ್ಟನಿಲ್ಲ ಎನಿಸಲಾರಂಭಿಸುತ್ತಿದೆಯಲ್ಲ' ಎಂದು ಖೇದಗೊಂಡರು. 'ದೇವರೇ ನನ್ನನ್ನು ಬೇಗ ಕರೆದುಕೊಂಡುಬಿಡು, ಇನ್ನೊಬ್ಬರಮೇಲೆ ಅವಲಂಬಿತನಾಗಿರುವುದು ನನಗಿಷ್ಟವಿಲ್ಲ' ಎಂದು ಕೂಗಿದರು. ಆದರೆ ಅವರ ಕೂಗು ಅವರಿಗೆ ಕೇಳಿಸಿತೇ ಹೊರತು, ದೇವರಿಗಿರಿಲಿ, ಹತ್ತಿರವಿದ್ದ ಯಾರಿಗೂ ಕೇಳಲಿಲ್ಲ. ರಾಮಣ್ಣನನ್ನು ಕರೆದು, ಬರೆಯಲು ಒಂದು ಕಾಗದ, ಪೆನ್ನು ಕೇಳಿದರು. ಅವನು ಅಲ್ಲಿ ಇಲ್ಲಿ ಹುಡುಕಿ ಕಡೆಗೆ ತನ್ನ ಬಳಿ ಇದ್ದ ಒಂದು ಬಿಲ್ಲು, ಹಳೆಯ ಬಾಲ್ ಪೆನ್ನನ್ನು ಕೊಟ್ಟ. ಇಷ್ಟೆಲ್ಲಾ ಅಸ್ತಿ ಮಾಡಿದರು ಕಡೆಗಾಲದಲ್ಲಿ ಕೇವಲ ಕಾಗದದ ಚೂರು, ಹತ್ತು ರೂಪಾಯಿಯ ಪೆನ್ನೇ ಉಳಿದುದು ಎಂದು ಅವರಿಗೆ ನಗು ಬಂತು. ಅದರಲ್ಲಿಯೇ ಅವರು ಆರೋ (ಅರೋಗ್ಯ), ವ್ಯಾಯ (ವ್ಯಾಯಾಮ), ಗೆಳೆ (ಗೆಳೆಯರು), ಭಿಕ್ಷು ಊಟ (ಭಿಕ್ಷುಕನ ಊಟ), ಇತರಕಾಳಜಿ (ಇತರರ ಬಗೆಗೆ ಕಾಳಜಿ) ಎಂದು ಬಹಳ ಕಷ್ಟದಿಂದ ಬರೆದರು, ಇನ್ನೂ ಏನನ್ನೋ ಬರೆಯಬೇಕಿಂದಿದ್ದರು. ಆದರೆ ಬರೆಯಲಾಗದೆ ಪೆನ್ನು, ಕಾಗದ ಕೆಳಗೆ ಬಿತ್ತು. ರಾಮಣ್ಣ ಓಡೋಡಿ ಬಂದ. ಅಷ್ಟರಲ್ಲಿ ರಾಜಪ್ಪನವರ ಪ್ರಾಣಪಕ್ಷಿ ಹಾರಿಹೋಗಿತ್ತು, ಮುಖದಲ್ಲಿ ಮಂದಹಾಸವಿತ್ತು.

ಬಂದವರೆಲ್ಲ ದುಃಖಿಸುತ್ತಾ ನಿಂತಿದ್ದರು. ಅವರು ಕಡೆಯಲ್ಲಿ ಬರೆದ ಚೀಟಿಯನ್ನು ಎಲ್ಲರೂ ನೋಡಿ 'ಪಾಪ, ಅರುಳು ಮರುಳು ಹೋಗುವ ಮುನ್ನ ಮಕ್ಕಳಂತೆ ಏನನ್ನೋ ಗೀಚಿದ್ದಾರೆ' ಎಂದು ಮಾತಾಡಿಕೊಳ್ಳುತ್ತಿದ್ದರು.

ರಾಜಪ್ಪನವರ ಅಂತರಾತ್ಮ "ಅಯ್ಯೋ ಮೂಢಗಳಿರಾ, ಅದು ಗೀಚಿದ್ದಲ್ಲ, ನಿಮಗೆ ನೀಡಿರುವ ಒಂದು ಅತ್ಯುತ್ತಮೆ ಸಂದೇಶ" ಎಂದು ಕೂಗುತ್ತಿತ್ತು. ಆದರೆ ಅದನ್ನು ಅರ್ಥಮಾಡಿಕೊಳ್ಳುವ ಪರಿಸ್ಥಿತಿಯಲ್ಲಿ ಯಾರೂ ಇರಲಿಲ್ಲ.


Rate this content
Log in

Similar kannada story from Inspirational