ಕಾಣದ ಕಡಲಿಗೆ ಹಂಬಲಿಸಿದೆ ಮನ
ಕಾಣದ ಕಡಲಿಗೆ ಹಂಬಲಿಸಿದೆ ಮನ


ತಾತಾ...
ಅಪ್ಪಾ ಬಂದ್ರು , ಅಪ್ಪಾ ಬಂದ್ರು....
"ಹೌದೇನೋ ಪುಟ್ಟಾ!!!" ಎಂದು ರಾಯರು ಹೊರಗೆ ಬರುವಾಗ ರಾಜೇಶ ಹಾಗೂ ಅವನ ಪತ್ನಿ ನಿರ್ಮಲ ಬರುತಿರುವುದು ಕಾಣಿಸಿತು.
"ಈ ಉರಿ ಬಿಸಿಲಿನಲ್ಲಿ ಯಾಕೋ ಬರೋದಕ್ಕೆ ಹೋದೆ ಮಗನೇ ?" ಎಂದು ಪ್ರೀತಿಯಿಂದ ಮಗನಲ್ಲಿ ಕೇಳಿದರು.
"ಏನು ಮಾಡೋದು ಅಪ್ಪಾ? ನಿನ್ನ ಸೊಸೆಗೆ ನಿಮ್ಮ ಷಷ್ಠಾಭ್ದಿಯ ಆಚರಣೆಯನ್ನು ವೈಭವದಿಂದ ಮಾಡಬೇಕಂತೆ, ಅದಕ್ಕೆ ಬೇಕಾಗುವ ಉಡುಗೊರೆಗಳನ್ನು ತರೋದಕ್ಕೆ ಹೋಗಿದ್ದೆವು" ಎಂದ ರಾಜೇಶ.
"ಇದೇನೂ ಅರ್ಚಕರೇ, ನೀವು ಇಲ್ಲಿ ? ಅದು ಹೊತ್ತಲ್ಲದ ಹೊತ್ತಿನಲ್ಲಿ ? "ಎಂದು ರಾಯರು ನಂಜುಂಡಸ್ವಾಮಿಯವರ ಬಳಿ ಕೇಳಿದರು.
" ನಿಮ್ಮ ಮಗ , ಸೊಸೆ ಇವಾಗಲೇ ಮನೆಗೆ ಬನ್ನಿ ಅರ್ಚಕರೇ ಎಂದು ಕರೆದರು. ಎದ್ದನೋ, ಬಿದ್ದನೋ ಎಂದು ಅವರ ಜೊತೆಯಲ್ಲಿ ಬಂದೆ ರಾಯರೇ..." ಎಂದರು.
"ಮಾವ, ಷಷ್ಠಾಭ್ಧಿಯನ್ನು ಮಾಡಲು ಮುಂದಿನ ವಾರದಲ್ಲಿ ದಿನ ನೋಡಿದ್ದೇವೆ. ಅದಕ್ಕೆ ಬೇಕಾಗುವ ಪೂಜಾ ಪರಿಕರಗಳು, ಊಟಕ್ಕೆ ಬೇಕಾಗುವ ಸಾಮಾಗ್ರಿಗಳು ಮತ್ತು ಆ ದಿನದ ವ್ಯವಸ್ಥೆಯ ಬಗ್ಗೆ ಲಿಸ್ಟ್ ತೆಗೆದುಕೊಳ್ಳಲು ಅರ್ಚಕರನ್ನು ಕರೆದುಕೊಂಡು ಬಂದೆ. ಆಗಾಗ ಬರೋದಕ್ಕೆ ರಜೆ ಸಿಗಲ್ಲ ನಮಗೆ , ಒಂದೇ ಸಲ ಎಲ್ಲಾ ಕೆಲಸ ಮಾಡೋಣಾಂತ ಅರ್ಚಕರನ್ನು ಕರೆದುಕೊಂಡೇ ಬಂದೆ, ತಪ್ಪಾಗಿದ್ದರೆ ಕ್ಷಮಿಸಿ ಮಾವ" ಎಂದಳು ನಿರ್ಮಲ.
"ಇಲ್ಲಮ್ಮ,ನಿನ್ನಂತ ಸೊಸೆ ಪಡೆದಿರುವುದಕ್ಕೆ ತುಂಬಾ ಹೆಮ್ಮೆ ಇದೆ ನನಗೆ" ಎಂದು ಸಂತೋಷದ ಕಣ್ಣೀರು ಹರಸಿದರು.
ಅಷ್ಟರಲ್ಲಿ ಜೀಪೊಂದು ಬಂದು ರಾಯರ ಪಕ್ಕದಲ್ಲಿ ನಿಂತಿತು.ಶ್ಯಾಮಿಯಾನ ಅಂಗಡಿಯ ರಾಜಣ್ಣ ಬಂದು ಎಲ್ಲಿ ಎಲ್ಲಾ ಶ್ಯಾಮಿಯಾನ ಹಾಕಬೇಕೆಂದು ಕೇಳಿ ಮಾರ್ಕ್ ಮಾಡಿದ.ಕೆಲಸವನ್ನು ತನ್ನ ಶಿಷ್ಯರಿಗೆ ಮಾಡಲು ಹೇಳಿ ರಾಯರ ಹತ್ತಿರ ಬಂದ.
"ಅಭಿನಂದನೆಗಳು ರಾಯರೇ... ಆರುವತ್ತನೆಯ ವಯಸ್ಸಿಗೆ ಕಾಲಿಟ್ಟಿದ್ದೀರಾ , 'ಸ್ವೀಟ್ ಸಿಕ್ ಸ್ಟಿ '.." ಎಂದು ತಮಾಷೆ ಮಾಡಿದರು.
ರಾಯರು ನಸುನಗುತ್ತಾ "ತಮಾಷೆ ಮಾಡ್ತೀಯಾ ರಾಜಣ್ಣ, ನಿನಗೆ 'ಸಿಕ್ ಸ್ಟಿ' ಆಗುವಾಗ ನಾನಿರಲ್ಲ ಕಣಪ್ಪಾ ತಮಾಷೆ ಮಾಡೋದಕ್ಕೆ..." ಎಂದರು.
"ಹಾಗೆ ಯಾಕೆ ಹೇಳ್ತಿರಾ ರಾಯರೇ, ನೀವು ನಿಮ್ಮ ಹೆಂಡತಿ ಜೊತೆಗೆ ಬಂದು ನನಗೆ ಆಶೀರ್ವಾದ ಮಾಡೇ ಮಾಡ್ತೀರಾ" ಎಂದು ಹೇಳಿ ತನ್ನ ಕೆಲಸ ಮುಂದುವರಿಸಿದ.
"ತಾತಾ..ತಾತಾ , ಅಜ್ಜಿ ಕರಿತಾರೆ ..."ಎಂದು ಮೊಮ್ಮಗ ಶ್ಯಾಮ್ ಹೇಳಿದಾಗ,
"ಸರಿಯಪ್ಪಾ ... ಬರ್ತೀನಿ ಎಂದು ಹೇಳು ನಿಮ್ಮ ಅಜ್ಜಿಯ ಹತ್ತಿರ.." ಎಂದು ಒಳಹೋದರು ರಾಯರು.
"ಲೇ, ಸುಮ್ಮಿ ಯಾಕೆ ಕರೆದೆ?" ಎಂದು ರಾಯರು ತಮ್ಮ ಪತ್ನಿ ಸುಮಿತ್ರಾಳ ಬಳಿ ಕೇಳಿದರು.
"ನಾನೆಲ್ಲಿ ಕರೆದೆ ಕಣ್ರೀ.... ಇವತ್ತು ಹಗಲುಗನಸು ಕಂಡ್ರಾ? ನಿಮ್ಮ ಮಗ ಅಮೇರಿಕಾಕ್ಕೆ ಹೋಗಿ ಹತ್ತು ವರ್ಷ ಆಯಿತು. ಮೊಮ್ಮಗುವಿನ ಮುಖ ಕೂಡ ತೋರಿಸಿಲ್ಲ ಅವನು, ಆದರೂ ಅದೇನೂ ಹುಚ್ಚು ಪ್ರೀತಿನೋ ನಿಮಗೆ ?" ಎಂದು ಸುಮಿತ್ರಾರವರು ತಮ್ಮ ಪತಿಗೆ ಛೇಡಿಸಿದರು.
"ನಿಜ ಹೇಳು ಸುಮ್ಮಿ, ನಿನಗೆ ಮಗನ ನೆನಪು ಆಗಲ್ವೇನೆ? "
"ಆಗುತ್ತೆ ಕಣ್ರಿ, ಮಗ ಜೊತೆಗೆ ಮಗಳ ನೆನಪು ಆಗುತ್ತೆ. ಅವಳೇನೋ ಪ್ರೀತಿಸಿದವನ ಜೊತೆಯಲ್ಲಿ ಮದುವೆ ಆದಳೂಂತ ಸಂಬಂಧನೇ ಬೇಡಾಂತ ಅವಳನ್ನು ದೂರ ತಳ್ಳಿದ್ರಿ.ಅವಳು ಲಕ್ಷಣವಾಗಿ ಸಂಸಾರ ಮಾಡಿಕೊಂಡು, ನಮ್ಮ ಪ್ರೀತಿಗಾಗಿ ಹಂಬಲಿಸುತ್ತಿದ್ದಾಳೆ. ಪೋನ್ ಮಾಡಿದ್ರೆ ಮಾತಡಲ್ಲಾಂತ ಪ್ರತಿ ವರ್ಷ ನಮ್ಮಿಬ್ಬರ ಹುಟ್ಟಿದ ದಿನ, ಮದುವೆ ದಿನಕ್ಕೆ ತಪ್ಪದೇ ಕಾರ್ಡ್ ಕಳುಹಿಸುತ್ತಾಳೆ, ಅವಳನ್ನು ಕಂಡ್ರೆ ಆಗಲ್ಲ ನಿಮಗೆ.
ನೀವು ತೋರಿಸಿದ ಹುಡುಗಿನೇ ಮದುವೆ ಆಗಿ ನ
ಿಮ್ಮ ಮಗ ಏನು ನಮ್ಮ ಜೊತೆಯಲ್ಲಿ ಇದ್ದಾನಾ? ಇಲ್ಲಾ ತಿಂಗಳಿಗೊಮ್ಮೆ ಆದರೂ ಪೋನ್ ಮಾಡ್ತಾನಾ ? ಇಂತಹವನಿಗೋಸ್ಕರ ನಾನು ಅಳಬೇಕಾ ? ಹೆತ್ತ ಹೊಟ್ಟೆ ಸಂಕಟ ನನಗೂ ಇದೇ ಕಣ್ರಿ , ಹಣದ ಮದದಲ್ಲಿ ಅಪ್ಪನಿಗೆ ಕೊಡುವ ಗೌರವ ಯಾವಾಗ ಕಡಿಮೆ ಮಾಡಿದ್ದನೋ ಅವಾಗಲೇ ನಾನು ಅವನ ಬಗ್ಗೆ ಆಸೆ ಬಿಟ್ಟೆ ಕಣ್ರಿ" ಎಂದು ಕಣ್ಣೀರು ಹಾಕುತ್ತಾ ಸುಮ್ಮಿತ್ರಾ ತಮ್ಮ ಕೋಣೆಗೆ ಹೋದರು.
ಸುಮ್ಮಿ ಹೇಳೋದು ಎಷ್ಟು ನಿಜ,' ಇರುವ ಭಾಗ್ಯವ ನೆನೆದು, ಬಾರೆನೆಂಬುದನ್ನು ಬಿಡು ಹರುಷಕ್ಕಿದೆ ದಾರಿ - ಮಂಕುತಿಮ್ಮ' ಎಂದು ಡಿವಿಜಿಯವರು ಹೇಳಿದ್ದು ಇದನ್ನೇ ತಾನೆ. ಮಗಳ ಪ್ರೀತಿಯ ಕಡಲಲ್ಲಿ ತೇಲಾಡುವ ಬದಲು ಬತ್ತಿ ಹೋದ ನದಿಯಲ್ಲಿ ಮಗನ ಪ್ರೀತಿಯನ್ನು ಬಯಸುತ್ತಾ ಇದ್ದೇನೆ ಎಂದು ರಾಯರು ತನ್ನಲ್ಲೇ ಗೊಣಗಿಕೊಂಡರು.
ಪ್ರತಿವರ್ಷ ಮಗಳ 'ಗ್ರೀಟಿಂಗ್ಸ್ ಕಾರ್ಡ್ ' ಬಂದಾಗ ಅದನ್ನು ತೆರೆಯದೇ ಸಿಟ್ಟಿನಿಂದ ಅಟ್ಟದ ಮೇಲೆ ಎಸೆಯುತ್ತಿದ್ದರು. ಇಂದು ನಡುಗುವ ಕಾಲಿನಿಂದಲೇ ಅಟ್ಟದ ಮೇಲೆ ಹತ್ತಿ ಎಲ್ಲಾ ಗ್ರೀಟಿಂಗ್ ಕಾರ್ಡ್ ಹುಡುಕಿ ತಂದರು.
ರಾಯರು ಎಲ್ಲಾ ಕಾರ್ಡನ್ನು ತೆರೆಯುವಾಗ "ಪ್ರೀತಿಯ ಅಪ್ಪ ಅಮ್ಮ, ನನ್ನನ್ನು ಕ್ಷಮಿಸಿ ಮತ್ತೆ ನಿಮ್ಮ ಮಗಳಾಗಿ ಸ್ವೀಕರಿಸಿ" ಎಂದು ನಮೂದಿಸಿದ್ದನ್ನು ಕಂಡು ಪಶ್ಚಾತಾಪದ ಕಣ್ಣೀರು ಸುರಿಸಿದರು. ರಾಯರು ಕಾರ್ಡ್ ನಲ್ಲಿದ್ದ ವಿಳಾಸವನ್ನು ಬರೆದುಕೊಂಡು ಜೋಪಾನವಾಗಿ ತಮ್ಮ ಜೇಬಿನಲ್ಲಿ ಇಟ್ಟರು.
ಬೆಳಿಗ್ಗೆ ಬೇಗ ಎದ್ದ ರಾಯರು, ಪೇಟೆಗೆ ಹೋಗಿ ಸೀರೆ,ಪಂಚೆ, ಮಕ್ಕಳಿಗೆ ಆಟಿಕೆ ಎಲ್ಲವನ್ನೂ ಖರೀದಿಸಿ ಮನೆಗೆ ಬಂದರು.ಅವರ ವಿಚಿತ್ರ ವರ್ತನೆಯನ್ನು ನೋಡಿದ ಸುಮಿತ್ರಾರವರು "ಇದೆಲ್ಲಾ ಯಾರಿಗೆ ಕಣ್ರಿ ?"ಎಂದು ಕೇಳಿದಾಗ
"ಒಳ್ಳೆಯ ಸೀರೆ ಉಟ್ಟು ಹೊರಡು, ನನಗೆ ಬೇಕಾದವರ ಮನೆಗೆ ಹೋಗಲಿಕ್ಕಿದೆ" ಎಂದು ಆತುರವಾಗಿ ಹೊರಡಿಸಿ ವಿಳಾಸವಿದ್ದ ಮನೆಗೆ ಹೋದರು.
ಮನೆಯು ನೆಂಟರಿಷ್ಟರಿಂದ ಕೂಡಿದ್ದು ನೋಡಿ ತಾವು ಬಂದ ವೇಳೆ ಸರಿಯಿಲ್ಲವೇನೋ ? ಎಂದು ಹಿಂದಿರುಗಲು ತಯಾರಾದಾಗ ಒಂದು ಪುಟ್ಟ ಮಗು ," ಅಮ್ಮ .... ಅಮ್ಮ ಅಜ್ಜಿ, ತಾತಾ ಬಂದ್ರು..." ಎಂದು ಜೋರಾಗಿ ಕಿರುಚಿದ್ದನ್ನು ಕೇಳಿ ಮಗುವಿನ ತಾಯಿ ಓಡಿ ಬಂದಳು.ಮೂವರ ಕಣ್ಣಲ್ಲೂ ಆನಂದಭಾಷ್ಪ...ಅಪ್ಪ, ಅಮ್ಮನನ್ನು ಅಪ್ಪಿಕೊಂಡ ರಮ್ಯಳಿಗೆ ಸಂತೋಷದಿಂದ ಮಾತೇ ಹೊರಡದಾಯಿತು.
" ಮಾವ, ನಿಮ್ಮ ಜನ್ಮ ದಿನವಾದ ಇವತ್ತು ನಿಮ್ಮ ಒಪ್ಪಿಗೆಯಿಲ್ಲದೇ, ನೀವಿಲ್ಲದಿದ್ದರೂ ನಿಮ್ಮ ದೀರ್ಘಾಯುಷ್ಯ ಹಾಗೂ ಆರೋಗ್ಯಕ್ಕಾಗಿ ಪೂಜೆ ಮಾಡ್ತಾ ಇದ್ದೇವು ಎಂದು ಹೇಳಿದ ಅಲ್ಲಿಗೆ ಬಂದ ರಮ್ಯಳ ಗಂಡ ಸಂತೋಷ್. ಅತ್ತೆ ಮಾವನನ್ನು ಪ್ರೀತಿಯಿಂದ ಮನೆಯೊಳಗೆ ಸ್ವಾಗತಿಸಿ ಪೂಜಾ ಸ್ಥಳದಲ್ಲಿ ಕೂರಿಸಿದ. ಅರ್ಚಕರು ಪೂಜೆಯನ್ನು ನಿರ್ವಿಘ್ನವಾಗಿ ಮುಗಿಸಿದ ಮೇಲೆ, ನೆಂಟರಿಷ್ಟರು ಊಟ ಮಾಡಿ ಹೊರಟರು.
ಮಗಳ ಪ್ರೀತಿ ಕಂಡ ರಾಯರಿಗೆ ತಮ್ಮ ಬಗ್ಗೆ ನಾಚಿಕೆಯಾಗಿ ಮಗ ಹಾಗೂ ಅಳಿಯನಲ್ಲಿ ಕ್ಷಮೆಯಾಚಿಸಿದರು." ನಿಮ್ಮ ಪ್ರೀತಿ ಸಿಕ್ಕಿದ್ದು ನಮಗೆ ಅಷ್ಟ ಐಶ್ವರ್ಯ ಸಿಕ್ಕಷ್ಟು ಸಂತೋಷವಾಗಿದೆ ಮಾವ. ಕ್ಷಮೆ ಎಲ್ಲಾ ನೀವು ಕೇಳಬಾರದು. ನಿಮ್ಮ ಸ್ಥಿತಿಯಲ್ಲಿ ನಾನಿದ್ದರೂ ಹಾಗೇ ಮಾಡ್ತಾ ಇದ್ದೆನೇನೋ..."ಎಂದ ಸಂತೋಷ್.
ಸುಮಿತ್ರಾರವರಿಗೆ ತಮ್ಮ ಮಗಳ ಕುಟುಂಬ ಒಂದಾಗಿದ್ದು ತುಂಬಾ ಸಂತೋಷವಾಗಿತ್ತು. ಎಷ್ಟೋ ವರ್ಷಗಳ ಪ್ರೀತಿಯ ಸವಿಯನ್ನು ಮುದ್ದು ಮಾಡಿ ಕಂಗಳಲ್ಲಿಯೇ ಉಣಬಡಿಸುತ್ತಿದ್ದರು.
ಅಷ್ಟರಲ್ಲಿ ಅಲ್ಲಿಗೆ ಬಂದ ಏಳರ ಪೋರಿ " ಅಜ್ಜಿ, ತಾತ ನಿಮ್ಮ ಮಗಳಿಗೆ ಮುದ್ದು ಮಾಡಿ ಮುಗಿದಿದ್ರೆ ನಾನು ಇದ್ದೀನಿ, ನನಗೂ ಸ್ವಲ್ಪ ಮುದ್ದು ಮಾಡಿ "ಎಂದು ಮುದ್ದಾಗಿ ಹೇಳುವಾಗ ಎಲ್ಲರ ಮುಖದಲ್ಲೂ ನಗು ಇಣಿಕಿತು.