ಎದುರು ಸೀಟಿನ ಹುಡುಗಿ
ಎದುರು ಸೀಟಿನ ಹುಡುಗಿ
ಅವಳು ಯಾವಾಗ ಬಸ್ಸು ಹತ್ತಿದಳೋ ಗೊತ್ತಿಲ್ಲ. ನಾನು ಕಣ್ತೆರೆದಾಗ, ಕಿಟಕಿಯೆಡೆ ಮುಖಮಾಡಿ ಎದುರಿಗೇ ಕುಳಿತಿದ್ದಳು. ನನಗೋ ಇನ್ನೂ ಅರೆಬರೆ ನಿದಿರೆ. ಆಕಳಿಸುತ್ತಲೇ ಅವಳತ್ತ ನೊಡುತ್ತಾ ಕುಳಿತೆ.
ಎಂಥಹಾ ಹಸನ್ಮುಖ, ನಸುನಾಚುತ್ತಿತ್ತು ಆ ಚೂಪು ನಾಸಿಕ. ಚೊಕ್ಕ ಹಣೆಯಲ್ಲಿ ಚಿಕ್ಕ ಬೊಟ್ಟು.ಆ ಪುಟ್ಟ ಜಡೆಯು ಸಣ್ಣಗೆ ಸಿಕ್ಕುಗಟ್ಟಿತ್ತು. ಕಣ್ಣಲ್ಲಿ ಕಾಡಿಗೆಯು ಇನ್ನೂ ಮಿಕ್ಕಿತ್ತು. ತಿಳಿಯಾಗಿ ಮರುಳು ಮಾಡುವಂತಿತ್ತು ಅವಳ ಸರಳ ಸೌಂದರ್ಯ. ಸಂಜೆಯ ಮಂದ ಬೆಳಕಿನಲ್ಲಿ ಕೆಂದಾವರೆಯೊಂದು ಅರಳಿದಂತೆ.
ವಾಹನದಲ್ಲಿ ಕೇಳಿಸಿತ್ತು ಆಕಾಶವಾಣಿಯ ಗಾಯನ. ಆಲಿಸುತ್ತ ಅತ್ತಿತ್ತ ನೋಡುತ್ತಿದ್ದಳು. ತಂಗಾಳಿಗೆ ಕೆದರುತ್ತಿದ್ದ ಕೂದಲ ಹೆಕ್ಕಿ, ತುರುಬಲ್ಲಿ ಮತ್ತೆ ಸಿಕ್ಕಿಸುತ್ತಿದ್ದಳು. ಏತಕೋ ಬಿಕ್ಕಳಿಸುತ್ತಿದ್ದಳು.
ಕುಡಿನೋಟವು ನಿಜವಾಗಿಯೂ ಮೋಹಕವೇ.ಮನದಲ್ಲೇ ಹಾಡುತ್ತಾ, ಈ ಪ್ರಯಾಣವು ಕೊನೆಯಾಗದಿರಲೆಂದು ಬೇಡಿಕೊಂಡೆ. ಆದರೆ ಗಂಟೆಯು ಓಡುತ್ತಿತ್ತು. ಅವಳ ನಿಲ್ದಾಣವು ಬಂದೇ ಬಿಟ್ಟಿತ್ತು. ಕಾಲವ ಶಪಿಸುತ್ತಾ ಬಾಗಿಲ ಕಡೆಯೇ ನೋಡಿದೆ. ಹೊರಡುವಾಗ ಅವಳು ತಿರುಗಿದ ರೀತಿ ಮುದ್ದಾಗಿತ್ತು. ಈ ಬರಡು ಹೃದಯದಲ್ಲಿ ಚಿಗುರು ಪ್ರೀತಿಯ ಸದ್ದಾಗಿತ್ತು.