ಬೇಲಿಯ ಆಚೆಗಿದೆ ಸಂತೃಪ್ತ ಬದುಕು
ಬೇಲಿಯ ಆಚೆಗಿದೆ ಸಂತೃಪ್ತ ಬದುಕು
ಬೇಲಿ ಎಂಬುದು ನಮ್ಮೊಳಗಿನ ಸಂಕುಚಿತ ಮನೋಭಾವದ ಸಂಕೇತವಾಗಿದೆ.ನಮ್ಮ ಆಲೋಚನೆಗಳಿಗೆ ನಾವೇ ಬೇಲಿ ಹಾಕಿಕೊಂಡು ಕೂತಾಗ ನಮ್ಮ ನಿಜವಾದ ಶಕ್ತಿಯೇನು ಎಂಬ ಅರಿವು ನಮಗೆ
ಉಂಟಾಗಲು ಸಾಧ್ಯವಿಲ್ಲ. ರಾಷ್ಟಕವಿ ಕುವೆಂಪುರವರು ಓ ನನ್ನ ಚೇತನ...ಆಗು ನೀ ಅನಿಕೇತನ..
ಮನೆಯನೆಂದು ಕಟ್ಟದಿರು,ಕೊನೆಯನೆಂದ ಮುಟ್ಟದಿರು...ಎಂಬ ಭಾವಗೀತೆಯ ಸಾಲುಗಳಲ್ಲಿ ನಮ್ಮ ಚೈತನ್ಯದಲ್ಲಿ ಅಗಾಧವಾದ ಶಕ್ತಿ ಇದೆ.ಅದನ್ನು ಮನೆ ಅಂದರೆ ಸಂಕುಚಿತ ಪರಿಧಿಯಲ್ಲಿ ಬಂಧಿಸದೆ
ಅದರಾಚೆಗಿನ ವಿಶಾಲತೆಯೆಡೆಗೆ ಹರಿಯ ಬಿಡಬೇಕು ಎಂದಿದ್ದಾರೆ ಇಂದು ಜಾತಿ,ಮತ,ಭಾಷೆ, ರಾಜ್ಯ, ದೇಶಗಳೆಂಬ ಬೇಲಿಯೊಳಗೆ ನಾವೆಲ್ಲರೂ ಬಂಧಿಗಳಾಗುತ್ತಿದ್ದೇವೆ ಇಡೀ ವಿಶ್ವವೇ ಒಂದು ಕುಟುಂಬ,ನಾವೆಲ್ಲರೂ
ವಿಶ್ವದ ಪ್ರಜೆಗಳು ಎಂಬ ಭಾವನೆ ಮೂಡಬೇಕಿದೆ. ಆಗ ಮಾತ್ರ ಮಹಾತ್ಮರ ಸರ್ವೋದಯದ ಕನಸು ನನಸಾಗಲು ಸಾಧ್ಯ. ಗಡಿಯ ವಿಚಾರದಲ್ಲಿ ರಾಜ್ಯ, ದೇಶಗಳ ನಡುವೆ ಕಲಹಗಳು ಇಂದು ತಲೆ ಎತ್ತಿವೆ. ಇತಿಹಾಸ ನಮಗೆ ಕಲಿಸಿದ ಪಾಠವನ್ನು ನಾವು ಮರೆಯುತ್ತಿದ್ದೇವೆ. ಭೂಮಿಯ ವ್ಯಾಮೋಹದಿಂದ ಅತಿರಥ ಮಹಾರಥರೇ ನೆಲಕಚ್ಚಿದ್ದಾರೆ. ರಕ್ತ ಪ್ರವಾಹವೇ ಹರಿದಿದೆ.ಇಂದು ನಾವು ಬೇಲಿ ಹಾಕಿ ನಮ್ಮದೆಂದು ಬೀಗುವ ಭೂಮಿ ನಿನ್ನೆ ಯಾರದ್ದೋ ನಾಳೆ ಇನ್ಯಾರದ್ದೋ.ಇರುವ ಮೂರು ದಿನದ ಬಾಳಿನಲ್ಲಿ ನನ್ನದು,ನನ್ನದು ಎಂಬ ಬಡಿವಾರವೇಕೆ?
ಭರತ ಚಕ್ರವರ್ತಿ ಷಟ್ಖಂಡಗಳನ್ನು ಗೆದ್ದು ಬರುವಾಗ ಸಂಭ್ರಮದಲ್ಲಿ ಮಾರ್ಗ ಮಧ್ಯೆ ಸಿಕ್ಕ ವೃಷಭಾಚಲ ಪರ್ವತದ ಮೇಲೆ ತನ್ನ ಗೆಲುವನ್ನು ಬರೆಸಲು ಮುಂದಾಗುತ್ತಾನೆ.ಆದರೆ ಅಲ್ಲಿ ಈ ಹಿಂದೆ ಈ ಭೂಮಿಯನ್ನು ಗೆದ್ದು ಆಳಿದ ಅರಸರು ತಮ್ಮ ಸಾಧನೆಯ ಕಥೆಗಳನ್ನು ಬರೆಸಿ ಸ್ಥಳವೇ ಇಲ್ಲದಷ್ಟು ತುಂಬಿ ಹೋಗಿರುತ್ತದೆ.ಆಗ ಭರತನಿಗೆ ತನ್ನ ಚಕ್ರಾಧಿಪತ್ಯವೂ ಕ್ಷಣಿಕವೆಂಬುದು ಮನವರಿಕೆ ಆಗುತ್ತದೆ. ಭೂಮಿಗೆ ಬೇಲಿ ಹಾಕಿ ನಮ್ಮದೆಂದುಬೀಗುವುದು, ಆ ಕಾರಣಕ್ಕಾಗಿ ದ್ವೇಷ,ಅಸೂಯ ಭಾವನೆಗಳನ್ನು ಹೊಂದಿ ನಮ್ಮ ವಿನಾಶಕ್ಕೆ ನಾವೇ ಕಾರಣರಾಗುವುದು ಸರಿಯಲ್ಲ. ಬೇಲಿಯ ಭ್ರಮ ಯಿಂದ ಹೊರಬಂದು ಅದರಾಚೆಗಿನ ಸುಂದರವಾದ ಬದುಕನ್ನು ನಾವೆಲ್ಲರೂ ಪ್ರೀತಿಸಬೇಕು.
ಹಳ್ಳಿಗಳ ಬದುಕು ನಿಂತಿ ರುವುದು ಸಹಬಾಳ್ವೆಯ ತತ್ವದ ಮೇಲೆ. ಆದರೆ ಇಂದು ಜಮೀನು,ಬೇಲಿ ವಿವಾದಗಳು ಹಳ್ಳಿ ಜೀವನದ ನೆಮ್ಮದಿ,ಸಾಮರಸ್ಯವನ್ನು ನುಂಗಿ ಹಾಕುತ್ತಿವೆ.ಒಡಹುಟ್ಟಿದವರು, ಬಂಧುಗಳು ತಮ್ಮ ಬಾಂಧವ್ಯಕ್ಕಿಂತ ಬೇಲಿಯ ವಿಚಾರದಲ್ಲಿ ಪ್ರತಿಷ್ಠೆಗೆ ಪೆಟ್ಟು ಬೀಳಬಾರದೆಂಬಂತೆ ಸ್ವಾರ್ಥತನ ತೋರುತ್ತಿದ್ದಾರೆ.ಹಿಂಸೆಗೆ ಪ್ರಚೋದನೆ ನೀಡುತ್ತಿದ್ದಾರೆ.
ಒಮ್ಮೆ ನಮ್ಮ ಮನಸ್ಸನ್ನು ಬೇಲಿ ಆಚೆಗೆ ಹಾಯಿಸೋಣ. ಅಲ್ಲಿ ಎಲ್ಲರ ಶಾಂತಿ, ನೆಮ್ಮದಿ ನಮಗೆ ಗೋಚರಿಸುತ್ತದೆ. ಅಲ್ಲಿ ನಾವು ಏಕಾಂಗಿಗಳಲ್ಲ.ಎಲ್ಲರೂ ನಮ್ಮವರಾಗಿ ಕಾಣುತ್ತಾರೆ. ಅಲ್ಲಿ ಒಣ ಪ್ರತಿಷ್ಠೆಗೆ ಎಡೆ ಇಲ್ಲ.ಸ್ನೇಹ
ಬಾಂಧವ್ಯದ ಸೇತುವೆ ನಮ್ಮನ್ನು ಬೆಸೆದಿರುತ್ತದೆ. ಅಲ್ಲಿ ಮಾನವ ಜಾತಿ ತಾನೊಂದೆ ವಲಂ ಎಂದ
ಪಂಪನ ವಾಣಿ ನಮಗೆ ಕೇಳಿಸುತ್ತದೆ. ಅಲ್ಲಿ ನೆಲಕ್ಕಾಗಿ ತನ್ನವರೆಲ್ಲರ ಬಲಿ ಪಡೆದು ಒಬ್ಬಂಟಿಯಾದ ದುರ್ಯೋಧನ ನಮಗೆ ನಶ್ವರತೆಯ ಪಾಠ ಹೇಳಿದಂತೆ ಭಾಸವಾಗುತ್ತದೆ. ಯುದ್ಧ ಇತಿಹಾಸದುದ್ದಕ್ಕೂ ನಡೆದಿರುವುದು ಮತ್ತು
ಈಗಲೂ ತನ್ನ ಇರುವನ್ನು ತೋರುತ್ತಿರುವುದು ನಮ್ಮ ಬೇಲಿ ಹಾಕುವ ಬುದ್ಧಿಯಿಂದಲೇ.ವಿಶಾಲವಾದ ಮನಸ್ಥಿತಿ ಉನ್ನತವಾದುದನ್ನು ಯೋಚಿಸುವಂತೆ ಮಾಡುತ್ತದೆ. ಪ್ರಗತಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತದೆ. ಭೇದಭಾವದ
ಬೇಲಿಗಳನ್ನು ಮುರಿದು ಎಲ್ಲವನ್ನೂ ಸ್ವೀಕರಿಸಿ ಬದುಕಿದಾಗ ಬಾಳು ಸಹ್ಯವೆನಿಸುತ್ತದೆ.ನಾವು ಸ್ವತಂತ್ರವಾಗಿ ಯೋಚಿಸುವುದರ ಜೊತೆಗೆ ನಮ್ಮ ಜೊತೆಯಲ್ಲಿರುವವರ ಆಲೋಚನೆಗಳಿಗೂ ಬೇಲಿ ಹಾಕದಂತೆ ಬದುಕುವ ಅವಶ್ಯಕತೆ ಇದೆ.
ಎಲ್ಲರಿಗೂ ಅವರದ್ದೇ ಆದ ಆಸೆ,ಕನಸು,ನಿಲುವುಗಳಿರುತ್ತವೆ. ನಾವು ಬಯಸಿದಂತೆ ಇನ್ನೊಬ್ಬರುಇರಬೇಕೆಂಬುದು ಸಂಕುಚಿತ ಮನೋಭಾವ. ತನ್ನ ಆಸೆಗಳಿಗೆ ಇತರರು ಬೇಲಿ ಹಾಕಿದರೆ ತನಗೆ ಆಗುವ ನೋವೇ ಅವರಿಗೂ ಆಗುತ್ತದೆ ಎಂಬ
ಸೂಕ್ಷ್ಮ ಪ್ರಜ್ಞೆಯನ್ನು ಬೆಳೆಸಿಕೊಂಡು ಸಂತಸದಿಂದ ಬದುಕೋಣ...ಬೇಲಿ ಆಚೆಗಿನ ಸಂತೃಪ್ತ ಜೀವನವನ್ನುನಮ್ಮದಾಗಿಸಿಕೊಳ್ಳೋಣ...
