ಬದುಕಿನ ಸಿಹಿಯನ್ನು ಸಂಭ್ರಮಿಸೋಣ
ಬದುಕಿನ ಸಿಹಿಯನ್ನು ಸಂಭ್ರಮಿಸೋಣ
ಸಿಹಿಯೆಂದ ತಕ್ಷಣ ನೆನಪಾಗುವುದು ಇರುವೆಗಳು. ಸಿಹಿಗೂ ಇರುವೆಗಳಿಗೂ ಅವಿನಾಭಾವ ಸಂಬಂಧ. ಸಿಹಿ ತಿನಿಸುಗಳಿಗೆ ಇರುವೆಗಳು ಮುತ್ತುವ ಹಾಗೆ ಸಿಹಿಯಾದ ಬದುಕಿಗೆ ಪ್ರತಿಯೊಬ್ಬರೂ ಹಾತೊರೆಯುವುದು ಸಹಜ.ಆದರೆ ಅದು ಎಲ್ಲರಿಗೂ
ಬಹು ಸುಲಭವಾಗಿ ದಕ್ಕುವಂತದ್ದಲ್ಲ.ಕಠಿಣ ಪರಿಶ್ರಮ,ಸತತ ಪ್ರಯತ್ನ, ನಿರಂತರ ಹುಡುಕಾಟದ ಪ್ರತಿಫಲವದು.ಅನೇಕ ಕಹಿ ಅನುಭವಗಳ ನಂತರ ಸಿಗುವ ಅದ್ಭುತವದು.ಜೇನು ನೊಣಗಳು ಹೇಗೆ ಪ್ರತಿದಿನ ಪ್ರತಿಕ್ಷಣ ಕಾರ್ಯೋನ್ಮುಖವಾಗಿ ಮಕರಂದವನ್ನು ಹೀರಿ ತಂದು ಸಂಗ್ರಹಿಸಿ ಜೇನಿನ ಖಜಾನೆ ನಿರ್ಮಿಸುತ್ತವೆಯೋ ನಾವು ಹಾಗೇ ದಿನದಿನ ಪಟ್ಟ ಕಷ್ಟಗಳ ಒಟ್ಟಾರೆ ಫಲವೇ ಸಿಹಿಯಾದ ಬದುಕು. ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ ಎಂದು ಸರ್ವಜ್ಞ ಕವಿ ಹೇಳಿದ್ದಾನೆ.ಸದ್ಗುಣಗಳನ್ನು ಹೊಂದಿದ ವ್ಯಕ್ತಿಯ ಸ್ನೇಹ ಎಲ್ಲರಿಗೂ ಸಿಹಿಯಾಗಿರುತ್ತದೆ ಅಂತವರ ಸ್ನೇಹ ಸಿಗುವುದೇ ಪುಣ್ಯ. ಸಿಕ್ಕರೆ ಅವರ ಒಳ್ಳೆಯ ಗುಣಗಳು ನಮಗೂ ವರ್ಗಾವಣೆ ಆಗಿ ನಮ್ಮ ಸ್ನೇಹಕ್ಕೂ ಇತರರು ಹಾತೊರೆಯುತ್ತಾರೆ ಇಂತಹ ಸಿಹಿಯಾದ ವ್ಯಕ್ತಿತ್ವದ ನಿರ್ಮಾಣವಾಗಲು ನಾವು ಕಾಮ,ಕ್ರೋಧ,ಲೋಭ,ಮೋಹ,ಮದ,ಮತ್ಸರಗಳನ್ನು ಮೆಟ್ಟಿ ನಿಲ್ಲಬೇಕಾಗುತ್ತದೆ. ಆದರೆ ಪ್ರಸ್ತುತ ಸಮಾಜದ ಸ್ಥಿತಿಗತಿಗಳನ್ನು ಅವಲೋಕನ ಮಾಡಿದಾಗ ನಾವು ತುಂಬಾ ಸಿಹಿ ಆಗಿದ್ದರೆ ಜನ ನಮ್ಮನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ. ಕೆಲವೊಮ್ಮೆ ಕಾಠಿಣ್ಯತೆ ಅನಿವಾರ್ಯವಾಗಬಹುದು.
ಇಂದಿನ ಆಧುನಿಕ ಜೀವನ ಯಾಂತ್ರಿಕವಾಗಿದ್ದು ಇಲ್ಲಿ ಸಂಬಂಧಗಳು ತಮ್ಮ ಸಿಹಿಯನ್ನು ಕಳೆದುಕೊಳ್ಳುತ್ತಿವೆ.ಸಣ್ಣಪುಟ್ಟ ಕಾರಣಕ್ಕೆ ವಿಚ್ಛೇದನಗಳು ನಡೆಯುತಿವೆ. ಒಂದು ಹರಿತವಾದ ಮಾತಿನಿಂದ ಕುಟುಂಬಗಳು ಒಡೆದು ಹೋಗುತಿವೆ.ಸಂಪಾದನೆ,ಆಸ್ತಿ, ಉದ್ಯೋಗ, ಸ್ಥಾನಮಾನ ಮೀರಿ ಸಂಬಂಧಗಳಲ್ಲಿ ಸಿಹಿ ತರಲು ನಮ್ಮ ಮನಗಳನ್ನು ಸಿದ್ಧಗೊಳಿಸಬೇಕಿದೆ. ಪತಿ ಪತ್ನಿ,ಪೋಷಕರು ಮಕ್ಕಳು, ಸಹೋದರ ಸಂಬಂಧ ಇವೆಲ್ಲವೂ ಸಿಹಿಯಾದ ಭಾವನೆಗಳ ವಿನಿಮಯ ಮೇಲೆ ಗಟ್ಟಿಯಾಗಿ ನಿಲ್ಲುತ್ತವೆ. ಯಾವಾಗಲೂ ಜೊತೆಗೆ ಇರಲು ಸಾಧ್ಯವಾಗದಿದ್ದರೂ ಹಬ್ಬ ಹರಿದಿನಗಳಲ್ಲಿ,ಮನೆಯ ಸಂಪ್ರದಾಯದ ಆಚರಣೆಯ ದಿನಗಳಲ್ಲಿ
ಎಲ್ಲರೂ ಒಂದಾಗಿ ಬೆರೆಯುವುದನ್ನು ರೂಢಿಸಿಕೊಳ್ಳಬೇಕಾದ ಅಗತ್ಯವಿದೆ. ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುವುದು, ಹರಟೆ ಹೊಡೆಯುವುದು, ಮನದುಂಬಿ ನಗುವುದು ಮನಕ್ಕೆ ಸಿಹಿಯೆನಿಸುತ್ತದೆ.
ನಮ್ಮ ಕೆಲಸಕ್ಕೆ ಸದಾ ನಾವು ಅಂಟಿಕೊಂಡೇ ಇದ್ದಾಗ ಏಕತಾನತೆ ಆವರಿಸಿ ಬದುಕು ಜಡವೆನಿಸುತ್ತದೆ. ಸ್ವಲ್ಪವಾದರೂ ಓದು,ಬರವಣಿಗೆ, ಸಂಗೀತ, ಕಲೆ ಬದುಕಿನ ಒತ್ತಡ ಮರೆಸಿ ಜೀವನವನ್ನು ಆಸ್ವಾದಿಸುವ ಹುರುಪು ತುಂಬುತ್ತವೆ.ಆಗಾಗ ಸ್ನೇಹಿತರನ್ನು ಭೇಟಿ ಮಾಡುವುದು,ಹಳೆಯ ನೆನಪುಗಳನ್ನು ಮೆಲುಕು ಹಾಕುವುದು.ಕಷ್ಟ ಸುಖಗಳನ್ನು ಹಂಚಿಕೊಳ್ಳುವುದು, ಪ್ರವಾಸ ಹೋಗುವುದು ಆಹಾ ಎನಿಸುವಂತೆ ಮಾಡುತ್ತದೆ.
ಕೆಲವರ ಬಳಿ ಐಶ್ವರ್ಯ ಇರುವುದಿಲ್ಲ. ಆದರೆ ಅವರ ಸಂತಸಕ್ಕೆ ಯಾವುದೇ ಕೊರತೆ ಇರುವುದಿಲ್ಲ. ಕೋಟಿ ಕೋಟಿ ಇದ್ದರೂ ಬದುಕು ಸಿಹಿಯೆನಿಸದು.ಬದುಕಿನ ಸಿಹಿಗೆ ಬೇಕಾಗಿರುವುದು ಸಂತೋಷ. ಅದು ಹೊರಗೆ ಹುಡುಕಿದರೆ ಯಾವುದೇ ವಸ್ತುವಿನ ರೂಪದಲ್ಲಿ ಸಿಗುವಂತದ್ದಲ್ಲ.ಅದೊಂದು ಅನುಭವ. ಅದು ನಮ್ಮೊಳಗೆ ಮೂಡಿ ಬರಲು ನಮ್ಮ ಸುತ್ತಲೂ ಪ್ರೀತಿ, ಸ್ನೇಹ, ಬಾಂಧವ್ಯಗಳ ಸಿಹಿ ಹರಡಬೇಕು. ಆಗ ಇರುವೆಗಳಂತೆ ಎಲ್ಲರೂ ನಮ್ಮನ್ನು ಇಷ್ಟಪಟ್ಟು ನಮ್ಮ ಬಳಿಗೆ ಬರುತ್ತಾರೆ. ಕಹಿಯನ್ನು ಅರಗಿಸಿಕೊಳ್ಳಬಲ್ಲವರೇ ಸಿಹಿಯನ್ನು ನೀಡಬಲ್ಲರು.ಕಷ್ಟದ ಹಿನ್ನಲೆಯಲ್ಲಿ ಬಂದವರಿಗೆ ಬದುಕಿನ ಮಹತ್ವದ ಅರಿವಿರುತ್ತದೆ.ನಮ್ಮ ಬದುಕು ಕ್ಷಣಿಕವಾದುದು.ಮೂರು ದಿನದ ಬಾಳನ್ನು ದ್ವೇಷ ಸಾಧನೆಯಲ್ಲೇ ಕಳೆದರೆ ದೇವರು ಕೊಟ್ಟ ಸಿಹಿಯಾದ ಬದುಕನ್ನು ನಾವೇ ಹಾಳು ಮಾಡಿಕೊಂಡಂತೆ. ಕೋಪ ನಮ್ಮನ್ನು ಸುಡುವುದರೊಂದಿಗೆ ನಮ್ಮ ಹತ್ತಿರ ಯಾರೂ ಬರದಂತೆ ದೂರವಿಡುತ್ತದೆ. ನಗು,ಹಾಸ್ಯ ಮನೋಭಾವ, ಒಳ್ಳೆಯ ಮಾತುಗಳು ನಮ್ಮ ವ್ಯಕ್ತಿತ್ವದ ಆಕರ್ಷಣೆಯನ್ನು ಹೆಚ್ಚುವಂತೆ ಮಾಡುತ್ತವೆ.ಅವರೆಷ್ಟು ಸ್ವೀಟ್....ಗೊತ್ತಾ ಅಂತ ನಮ್ಮ ಬಗ್ಗೆ ಹೇಳುವಂತೆ ಮಾಡುತ್ತವೆ.
ನಮಗೆ ಏನೇ ಸಂತೋಷವಾಗಲಿ,ಸಂಭ್ರಮಾಚರಣೆಗೆ ಸಿಹಿ ಹಂಚುತ್ತೇವೆ.ಅಂದರೆ ಸಿಹಿ ಎನ್ನುವುದು ಸಂಭ್ರಮ ಕಷ್ಟ ನಷ್ಟಗಳ ನಡುವೆ ಬದುಕಿನ ಪ್ರತಿಕ್ಷಣವನ್ನೂ ಸಂಭ್ರಮಿಸುವುದೇ ನಿಜವಾದ ಜೀವನ. ನಮ್ಮ ಹಳೆಯ ದಿನಗಳೆಲ್ಲಾ ಸಿಹಿ ನೆನಪುಗಳಾಗಿ ನಮ್ಮನ್ನು ಆವರಿಸಿರುತ್ತವೆ.ಇಂದಿನ ಕಹಿಯೂ ಮುಂದೆ ಸಿಹಿ ಎನಿಸಬಹುದು. ಒಟ್ಟಿನಲ್ಲಿ ಬದುಕಿನಲಿ ಸಿಹಿ ಮಾತು,ಸಿಹಿ ಮುತ್ತು, ಸಿಹಿ ನೆನಪು,ಸಿಹಿ ಕನಸು,ಸಿಹಿ ಮುನಿಸು ಆಗಾಗ ಇರಲೇಬೇಕು. ಆಗಲೇ ಬದುಕಬೇಕು ಎಂದೆನಿಸುವುದು.
