ಕಳೆದು ಹೋಗುವ ಮುಸ್ಸಂಜೆ..
ಕಳೆದು ಹೋಗುವ ಮುಸ್ಸಂಜೆ..
ಸದ್ದಿಲ್ಲದೆ ಕೈ ಜಾರುವ ಮುಸ್ಸಂಜೆ...
ನಿನ್ನಯ ನೆನಪಿನಲಿ ಕುಳಿತ ನನಗೆ
ಸಂಜೆಯ ಸೂರ್ಯನು ಕರಗುವುದೂ
ಅರಿವಿಗೆ ಬಂದಿರಲಿಲ್ಲ..
ಗಿಜಿಗಿಜಿ ಸದ್ದು ಮಾಡುತಲೇ
ಗೂಡು ಸೇರುವ ಪಕ್ಷಿಗಳ
ಕಲರವವೂ ಕಿವಿಗೆ ತಾಕಲಿಲ್ಲ..
ಹೊಂಬಣ್ಣಕ್ಕೆ ತಿರುಗಿದ ಆಗಸ,
ಮೋಡದ ಮರೆಯಲ್ಲಿ ಸರಿದು ಹೋದ
ಸೂರ್ಯನು ಕೂಡ ತನ್ನೆಲ್ಲ
ಪ್ರಕಾಶವನ್ನು ಹರಡುತ್ತಲೇ
ಕಡಲಿನಲ್ಲಿ ಕರಗಿಹೋಗುವ
ಹುಮ್ಮಸ್ಸು ಹೊಂದಿದ್ದ..
ಖಾಲಿ ಬೆಂಚಿನಲ್ಲಿ ಈಗ ನಾನೊಬ್ಬಳೇ..
ಅದೇ, ಆದಿನ ನಿನ್ನ ಮೊದಲ
ಭೇಟಿಯಾಗುವ ಸುಸಮಯದಲ್ಲಿ
ಅದೇ ಖಾಲಿ ಬೆಂಚು, ಕಾಲುದಾರಿಯ
ವಿಳಾಸ ಹೇಳಿ ಹೂಗಳಿಂದ ಸಿಂಗರಿಸಿ
ನಿನಗಾಗಿ ಕಾತುರ ಕಂಗಳಿಂದ ಕಾಯುತಲಿದ್ದೆ...
ಇಂದೇಕೋ ಎಲ್ಲವೂ ಮೌನ.
ಸದ್ದಿಲ್ಲದೇ ಸರಿದುಹೋಗುವ ಮುಸ್ಸಂಜೆಯಂತೆ
ಎಲ್ಲವೂ ನನ್ನೀ ನಾಳಿನ ಕನಸುಗಳೇ ಗೌಣವೆನಿಸುತ್ತಿದೆ..
ನೀ ಬಾರದೇ ಹೋಗಿದ್ದರೆ
ಈ ಉಸಿರು ಕೂಡ ಕರಗಿಹೋಗಿ
ಮಂದಾರ ಸುಮವೊಂದು
ಮಣ್ಣಲ್ಲಿ ಮಣ್ಣಾಗುತ್ತಿತ್ತೇನೋ...
ತಂಗಾಳಿಯಂತೆ ಎದುರಾಗಿ
ಸೂರ್ಯರಶ್ಮಿಯಂತೆ ಮೈಮನದೊಳಗೆ
ಹೊಕ್ಕು ಮತ್ತೆ ಚೈತನ್ಯ ತುಂಬಿದಾಗಲೇ
ನಳನಳಿಸಿ ನಗುತ ನಿಂತ ನೈದಿಲೆಯಂತಾಗಿದ್ದೆ..

