ತಂದೆಯ ಅಂತಃಕರಣ
ತಂದೆಯ ಅಂತಃಕರಣ
ತಂದೆ ಕಲ್ಪವೃಕ್ಷದಂತೆ
ಕೇಳಿದಾಗೆಲ್ಲ ಹಣವನ್ನು ನೀಡುವರು
ತನ್ನಲ್ಲಿ ಇಲ್ಲದಿದ್ದರೂ ಕೂಡಿಟ್ಟು ಕೊಡುವರು
ಜೀವನ ಸುಖ-ದುಃಖಗಳ ಪಾಕವೆಂದು ತಿಳಿಸಿ ಹೇಳುವರು!!
ಬಗೆಬಗೆಯ ಆಸೆಗಳಿಗೆ ಬಣ್ಣ ಬಳಿಯುತ
ವಿಧವಿಧವಾದ ಆಟಿಕೆಗಳ ಕೈಗೆ ನೀಡುತ
ಹೆಗಲ ಮೇಲೇರಿಸಿಕೊಂಡು ಜಾತ್ರೆ ಸುತ್ತುವರು
ಸದಾ ತನ್ನ ಮಗುವಿನ ಆಸೆಗಳಿಗೆ ಕಣ್ಣಾಗುವರು!!
ತಂದೆ ಹರಿದ್ವರ್ಣದಂತೆ
ಮೈಕೈ ನೋವಿದ್ದರು, ಕೆಲಸದ ಒತ್ತಡವಿದ್ದರೂ
ಮಕ್ಕಳಿಗೆ ತಿಳಿಯಪಡಿಸದೇ
ಕಷ್ಟಗಳ ಕರಿಯನ್ನೇ ತನ್ನೊಡಲೊಳಗೆ ನುಂಗಿಕೊಂಡು
ಸದಾ ತನ್ನ ಕುಡಿಯ ನಗುವ ಬಯಸುವರು!!
ತಪ್ಪು ಮಾಡುವಾಗ ಸಿಡುಕುವ ಸಿಡಿಲಾಗಿ
ಅಳುವ ಮಗುವಿನ ಮುಖವ ನೋಡಿ
ಕರಗುವ ಮೋಡವಾಗುವರು
ಸದಾ ಮಕ್ಕಳ ಹಿತವನ್ನೇ ಬಯಸುವರು!!
ತಂದೆ ದುಡಿಯುವ ಯಂತ್ರವಂತೆ,
ನಡುರಾತ್ರಿಗೆ ಬಂದಾಗ ಮಣ್ಣುಮೆತ್ತಿದ
ಒರಟು ಕೈಗಳ ನೋಡಿ
ಅತ್ತು, ನೋವ ನುಂಗಿಕೊಳ್ಳುವರು
ಮಲಗಿದ್ದ ಮುದ್ದು ಮಗುವಿನ ಮುಖವ ನೋಡಿ
ಕೆನ್ನೆಗೆ ಮುತ್ತಿಕ್ಕಿ ಮತ್ತೆ ಚೇತರಿಸಿಕೊಳ್ಳುವರು!!
ತಂದೆ ಕರುಣಾಮೂರ್ತಿಯಂತೆ
ಅಂತಃಕರಣದಿಂದ ಒಳಿತು ಬಯಸುತ
ಅಂತ್ಯವಿಲ್ಲದ ಪ್ರೀತಿ ತುಂಬುತ
ಮಡದಿ-ಮಕ್ಕಳ ಬಾಳಿಗೆ ಬೆಳಕು ಹರಿಸಲು
ಕಠಿಣಗಳ ಸುಳಿಗಾಳಿ-ಬಿರುಗಾಳಿಗೆ ಅಡ್ಡಲಾಗಿ ನಿಲ್ಲುವರು!!
