ಜೀವಪ್ರಪಂಚ
ಜೀವಪ್ರಪಂಚ
ಮೂಡಣದರಮನೆ ಬೆಳಗಲು
ಕಣ್ತೆರೆಯಿತು ಜೀವ ಪ್ರಪಂಚ ll
ಹೊಸಹೊಸತನಗಳ ಪುನರಾರಂಭ
ಸೃಷ್ಟಿ ಸಮೂಹದ ಜೀವತರಂಗ l
ಹಕ್ಕಿಯ ಗಾನದಿ ಜೀವದ ನಲಿವು
ತಣ್ಣಗೆ ಬೀಸುವ ಗಾಳಿಯ ಹರವು ll
ಕಣ್ತೆರೆಯಲು ಮೈ ಕೊಡಹಲು
ಗರಿಬಿಚ್ಚಲು ಪುಟಿದೇಳಲು..l
ನವನವ ದಾರಿಗಳನೇಕವು
ಸೃಷ್ಟಿಯ ಬೇರಿನ ಹರವು ll
ಎಲೆಗಳ ಮೇಲಿನ ಹನಿಯು
ಸೂರ್ಯಕಿರಣದ ಪ್ರಕಾಶದಿ l
ಮಂಜಿನೊಳಗೆ ಮಿನುಗಲು
ಪ್ರತೀ ಹನಿಯೂ ಮುತ್ತುಗಳು ll
ಮರದ ಬೇರು ಹೂವ ಪರಿಮಳ
ಮಣ್ಣಿನ ಸಾರ ಬದುಕ ಜೀವಾಳ l
ಉಸಿರಿನ ಹಸಿರು ಬತ್ತದ ಜಲ
ಪಂಚಭೂತಗಳ ಸಾನ್ನಿಧ್ಯ ತೇರು ll
ಹಸಿರಿನೊಳಗೆ ಉಸಿರಿನೊಡಲು
ಕಾರ್ಯಕಾರಣದಾ ಹೊನಲು l
ನೀರ ಮೇಲಿನಾ ಮಂಜಿನಪ್ಪುಗೆ
ಜೀವಹನಿಗಳಿಗೆ ಮರುಘಳಿಗೆ ll
ಮೂಡಣದರಮನೆ ಬೆಳಗಲು
ಕಣ್ತೆರೆಯಿತು ಜೀವ ಪ್ರಪಂಚ ll
