STORYMIRROR

Bellala Gopinath Rao

Inspirational

4.4  

Bellala Gopinath Rao

Inspirational

ಅಮ್ಮ

ಅಮ್ಮ

1 min
191



ನನ್ನ ಎದೆಯಾಳದಲಿ ಬಚ್ಚಿಟ್ಟ ಕನಸಿನಲೂ

ಕಂತು ಕಂತಿಗು ನಿನ್ನ ನೆನಪಿನಳಲೂ


ಎಲ್ಲ ನೋವನು ತನ್ನ ಮನದಲ್ಲೇ ಬಚ್ಚಿಟ್ಟು

ಹೊರಗೆ ಅರಳುವೆ ನೀನು ಪ್ರೀತಿ ಕೊಟ್ಟು


ಮಧುರ ನಿನ್ನಯ ಲಾಲಿ ನನ್ನ ಕಿವಿಗಳಿಗಿಂಪು

ಮತ್ತೆ ಬಿಸಿಯುಸಿರ ಆ ಪ್ರೀತಿಯೊಂಪು


ಇನಿದನಿಯ ಜೋಗುಳದ ಅಕ್ಕರೆಯ ಕುಡಿನೋಟ

ಒಲವಿನಕ್ಕರೆಯ ಆ ತುತ್ತಿನೂಟ


ಮಗುವಿನಕ್ಕರೆಯ ತೊದಲು ನುಡಿಗಳ ತಂಟೆ

ವಿಶ್ವಕೋಶದಕ್ಕರಕೂ ಕಡಿಮೆಯುಂಟೇ


ಬದುಕಿನೋಣಿಯ ತುಂಬ ಒಲುಮೆಯಮೃತ ಹನಿಸಿ

ನನ್ನ ಭಾಗ್ಯವ ಬರೆದೆ ಪ್ರೀತಿಯುಣಿಸಿ


ಮನೆಯ ಕಜ್ಜದ ಹೊರೆಯ ಹೊತ್ತು ಪ್ರೀತಿಯ ಹೊಸೆದು

ನನ್ನ ಬೆಳೆಸಿದೆ ನಿನ್ನ ನೆತ್ತರೆರೆದು


ಉಕ್ಕಿತೆನ್ನಯ ಅಕ್ಷಿಪಟಲದಾಚೆಯು ನಿತ್ಯ

ಇಳೆಯ ದೇವರು ನೀನೆ ಸತ್ಯ ಸತ್ಯ


ಕಣ್ಣಾಳದಲ್ಲೆಲ್ಲ ಹರಿಯಿತೊಲುಮೆಯ ಜಲವು

ನಿನ್ನ ತ್ಯಾಗವ ನೆನಸಿ ಅಮ್ಮ ನಿಜವು


ನಿನ್ನ ಸೇವೆಯ ಋಣವ ನಾ ಹೇಗೆ ತೀರಿಸಲಿ

ನಿನ್ನಮ್ಮನಾಗಿ ನಾ ಮತ್ತೆ ಬರಲೇ


Rate this content
Log in