ಸಂತು..!!
ಸಂತು..!!
ಅಷ್ಟಕ್ಕೂ ನಮಗೆ ದೇವರು ಏನಕ್ಕೂ ಕಡಿಮೆ ಮಾಡಿಲ್ಲ. ಹೇಳಬೇಕೆಂದರೆ ಎಲ್ಲವೂ ಜಾಸ್ತಿಯೇ ಕೊಟ್ಟಿದ್ದಾನೆ. ಹಣ, ಆಸ್ತಿ, ಐಶ್ವರ್ಯ, ಸೌಂದರ್ಯ ಆರೋಗ್ಯ, ಹೀಗೆ ಎಲ್ಲವೂ..!! ಆದರೆ ಸಂತೋಷವನ್ನೊಂದು ಬಿಟ್ಟು ಎನ್ನಬಹುದು..?!
ಗಂಡನ ಮನೆಯವರಿಂದ ಬಂದ ಪಿತ್ರಾರ್ಜಿತ ಆಸ್ತಿ ಸಾಕಷ್ಟು ಇದೆ. ಕೂತು ತಿನ್ನುವುದಕ್ಕೆ ಏನೂ ತೊಂದರೆ ಇಲ್ಲ. ಮನೆಯಲ್ಲಿಯೇ ಇಬ್ಬರು ಆಳುಗಳು ಯಾವಾಗಲೂ ಇರುತ್ತಾರೆ. ಜೊತೆಗೆ ಒಬ್ಬ ವಾಚ್ ಮ್ಯಾನ್ ಬೇರೆ. ಆದರೆ ಇಷ್ಟೆಲ್ಲ ಇದ್ದರೂ ನಮ್ಮ ಮನೆ ಮಂಕು ಕವಿದಂತೆ ಇದೆ.
ನಾನು ನನ್ನ ಗಂಡ ಇಬ್ಬರೂ ಐವತ್ತು ವರ್ಷ ದಾಟಿದ್ದೇವೆ. ದುಡಿದದ್ದು ಸಾಕು ಎಂದು ಇತ್ತೀಚಿಗೆ ಇವರು ತಮ್ಮ ಪಾಡಿಗೆ ತಾವು ಇರುತ್ತಾರೆ. ಹಣ ಮಾಡಬೇಕು, ದುಡ್ಡು ಖಾತೆಯಲ್ಲಿ ಸದಾ ಏರಿಕೆ ಕಾಣುತ್ತಿರಬೇಕು ಎಂಬ ಇವರ ಹಂಬಲ, ಈಗೇಕೋ ಕಡಿಮೆಯಾದಂತೆ ಅನಿಸಿದೆ.
ಎಲ್ಲರೂ ಹಾಗೆಯೇ ಅಲ್ಲವೇ..? ಇರದಿದ್ದಾಗ ಬೇಕು ಬೇಕು ಎನ್ನುತ್ತಾರೆ. ಇದ್ದಾಗ ಅದರ ಬಗ್ಗೆ ಯಾವ ಆಸೆ, ಆಸಕ್ತಿ, ಕುತೂಹಲವನ್ನೂ ತೋರಿಸುವುದಿಲ್ಲ..!! ಅದಕ್ಕೆ ಅಲ್ಲವೇ ಹೇಳುವುದು... "ಇರುವುದೆಲ್ಲವ ಬಿಟ್ಟು, ಇರದುದರೆಡೆಗೆ ತುಡಿವುದೇ ಜೀವನ..!!" ಎಂದು. ಎಂತಹ ಅರ್ಥಗರ್ಭಿತವಾದ ಸಾಲುಗಳಲ್ಲವೇ ಇವು..? ನಮ್ಮಲ್ಲಿ ಈಗ ಬೇಕಾದಷ್ಟು ಹಣ ಇದೆ. ಈಗ ಅದು ಮುಖ್ಯ ಎನಿಸುತ್ತಿಲ್ಲ. ಇನ್ನೂ ಬೇರೆ ಏನೋ ಬೇಕು ಎನಿಸುತ್ತಿದೆ ನಮ್ಮಿಬ್ಬರಿಗೂ..!
ಅದೇ ಏನೆಂದು ಕೇಳುವಿರಾ..? ನಮಗೆ ಬೇಕಿರುವುದು ನೆಮ್ಮದಿ, ಲವಲವಿಕೆಯ ಜೀವನ ಮತ್ತು ಸದಾ ಸಂತೋಷ. ಈ ವಯಸ್ಸಿನಲ್ಲಿ ನಾವೆಲ್ಲ ಅದನ್ನೇ ಅಲ್ಲವೇ ದೇವರಲ್ಲಿ ಕೇಳುವುದು..?! ಆದರೆ ನಾನು ನನ್ನ ಗಂಡ ಈ ರೀತಿ ನಮಗೆ ಸಂತೋಷವನ್ನು ಕೊಡು ದೇವರೇ ಎಂದು ಸತತ ಇಪ್ಪತ್ತು ವರ್ಷಗಳಿಂದ ಕೇಳುತ್ತಿದ್ದೇವೆ...!!
ಆದರೆ ದೇವರಿಗೇಕೋ ನಮ್ಮ ಮೇಲೆ ಮುನಿಸು ಅನಿಸುತ್ತೆ. ಸಂತೋಷ ಎಂದರೆ ದುಡ್ಡು, ಆಸ್ತಿ, ಅಂತಸ್ತು ಎಂದುಕೊಂಡಿದ್ದಾನೆ. ಹಾಗಾಗಿಯೇ ಇಪ್ಪತ್ತು ವರ್ಷಗಳಿಂದ ನಮ್ಮ ಸಂಪತ್ತು, ನಗ-ನಾಣ್ಯ ಬೆಳೆಯುತ್ತಲೇ ಹೋಗಿದೆ. ಸದ್ಯ ಬೇಕಾದಷ್ಟು ಆಸ್ತಿ ನಮ್ಮ ಬಳಿ ಇದೆ. ಆದರೂ ಏನೋ ಬೇಸರ ನಮ್ಮಿಬ್ಬರಿಗೂ ಯಾವಾಗಲೂ ಕಾಡುತ್ತಿರುತ್ತದೆ.
ಇದಕ್ಕೆ ಕಾರಣವೇನೆಂದು ಹೇಳಲೇ..? ನಮ್ಮ ಮನೆ ಯಾವಾಗಲೂ ಸ್ವಚ್ಛವಾಗಿಯೇ ಇರುತ್ತದೆ. ಯಾವ ವಸ್ತುಗಳು ಆ ಕಡೆಯಿಂದ ಈ ಕಡೆಗೆ ಅಲ್ಲಾಡುವುದಿಲ್ಲ..! ನಾನು ಮತ್ತು ನನ್ನ ಗಂಡ ಇಬ್ಬರೂ ಯಂತ್ರ ಮಾನವರಂತೆ ಆಗಿಬಿಟ್ಟಿದ್ದೇವೆ. ಸದಾ ಮೌನ ನಮ್ಮ ಮನೆಯಲ್ಲಿ ನೆಲೆಸಿರುತ್ತದೆ. ಏಕೆಂದರೆ ನಮಗೆ ಮಕ್ಕಳು-ಮರಿ ಇಲ್ಲ..!!
ಇಪ್ಪತ್ತು ವರ್ಷಗಳಿಂದ ನಾವಿಬ್ಬರೂ ದೇವರಿಗೆ ಇದನ್ನೇ ಬೇಡಿದ್ದು. "ಒಂದು ಮಗುವನ್ನಾದರೂ ದಯಪಾಲಿಸು ದೇವರೇ..!" ಎಂದು. ಆದರೆ ಅದೇಕೋ ದೇವರು ಕಣ್ಣು ಬಿಡಲೇ ಇಲ್ಲ. ನಮಗೆ ಮಕ್ಕಳಾಗುವುದು ಕನಸಾಗಿಯೇ ಉಳಿಯಿತು. ಎಷ್ಟೇ ಹರಕೆ ಕಟ್ಟಿದರೂ, ದೇವಸ್ಥಾನಗಳಿಗೆ ಅಲೆದರೂ, ಲಕ್ಷಗಟ್ಟಲೆ ದುಡ್ಡನ್ನು ಖರ್ಚು ಮಾಡಿದರೂ, ನನಗೇಕೋ ಗರ್ಭ ನಿಲ್ಲಲೇ ಇಲ್ಲ..!!
"ಮಕ್ಕಳಿರಲ್ಲವ್ವ ಮನೆ ತುಂಬ" ಎನ್ನುತ್ತಾರೆ. ಆದರೆ ನಮ್ಮ ದುರಾದೃಷ್ಟಕ್ಕೆ ಒಂದು ಮಗುವೂ ಇಲ್ಲ. ಹಾಗಾಗಿಯೇ ನಮಗೆ ಸಂತೋಷ ಎನ್ನುವುದು ಮರೀಚಿಕೆಯಾಗಿಯೇ ಉಳಿದಿದೆ..! ಮಕ್ಕಳಿರುವ ಮನೆಯಲ್ಲಿ ಇರುವ ನಗು, ಸಂತೋಷ, ಸಂಭ್ರಮ, ಗೌಜು, ಗದ್ದಲ ಇವೆಲ್ಲವೂ ನಮ್ಮ ಮನೆಯಲ್ಲಿ ಕಾಣಸಿಗುವುದಿಲ್ಲ. ಅವರ ಆಟ-ತುಂಟಾಟಗಳನ್ನು ನೋಡುವ ಭಾಗ್ಯ ನಮಗಿಲ್ಲವಲ್ಲ ಎಂಬುದೇ ನಮ್ಮಿಬ್ಬರ ಕೊರಗು.
ಸರಿಯಾಗಿ ಸಮಯಕ್ಕೆ ಮಕ್ಕಳಾಗಿದ್ದರೆ, ನಾವಿಬ್ಬರೂ ಈಗ ಅಜ್ಜ-ಅಜ್ಜಿಯರಾಗಿ ಮೊಮ್ಮಕ್ಕಳ ನಡುವೆ ಆಟ ಆಡಿಕೊಂಡು ಇರಬೇಕಿತ್ತು. ಆದರೆ ಅದೆಲ್ಲ ಈಗ ಕನಸಿನ ಮಾತೇ ಆಗಿದೆ..!
ಈಗ ನಾವಾಯಿತು ನಮ್ಮ ಕೆಲಸವಾಯಿತು ಎಂದಿರುತ್ತೇವೆ. ಕೆಲಸಗಾರರು ಅವರವರ ಕೆಲಸಗಳನ್ನು ಚಾಚು ತಪ್ಪದೇ ಮಾಡುತ್ತಾರೆ. ಅವರ ಮಕ್ಕಳಿಗೆ ಬೇಕಾದ ಪುಸ್ತಕ-ಬಟ್ಟೆಗಳನ್ನು ನಾನು ಆಗಾಗ ಕೊಡಿಸುತ್ತಿರುತ್ತೇನೆ. ಅವೆಲ್ಲವನ್ನು ಅಂಗಡಿಗೆ ಹೋಗಿ, ವ್ಯಾಪಾರ ಮಾಡಿ ಅವರ ಮಕ್ಕಳನ್ನು ಮನೆಗೆ ಕರೆದು ಕೊಡುವುದೆಂದರೆ ನನಗೇನೋ ತೃಪ್ತಿ. ಹಾಗಾಗಿ ಬಿಡುವಾದಾಗಲೆಲ್ಲ ಅವರನ್ನೆಲ್ಲ ಕರೆದು ತಿಂಡಿ, ಬಟ್ಟೆ, ಪುಸ್ತಕಗಳನ್ನು ಕೊಟ್ಟು ಅವರ ವಿದ್ಯಾಭ್ಯಾಸದ ಬಗ್ಗೆ ವಿಚಾರಿಸುತ್ತೇನೆ.
ಪಾಠಕ್ಕೆ ಸಂಬಂಧಿಸಿದಂತೆ ಏನಾದರೂ ಗೊತ್ತಾಗಲಿಲ್ಲವೆಂದರೆ ನನ್ನನ್ನು ಬಂದು ಕೇಳಿ ಎನ್ನುತ್ತೇನೆ. ಆಗಲಾದರೂ ಮಕ್ಕಳ ಧ್ವನಿ ಈ ಮನೆಯಲ್ಲಿ ಪ್ರತಿಧ್ವನಿಸಲಿ ಎಂಬ ನನ್ನ ಚಿಕ್ಕ ಆಸೆಯಿಂದ..!!
ಹೀಗೆಯೇ ಒಂದು ದಿನ ಸಂಜೆ ಕಾಫಿ ಕುಡಿಯುತ್ತಾ ಮನೆಯ ಮುಂದಿನ ಹಸಿರು ಹುಲ್ಲಿನ ಮೇಲೆ ಕುಳಿತು ಅಂದಿನ ದಿನಪತ್ರಿಕೆಯನ್ನು ಓದುತ್ತಿದ್ದೆ. ತೋಟದ ಸೀನ ಅಲ್ಲೇ ಗಿಡಗಳಿಗೆ ನೀರು ಹಾಯಿಸುತ್ತಿದ್ದ. ಅದೆಲ್ಲಿತ್ತೋ ಪುಟ್ಟ
ಬೆಕ್ಕಿನ ಮರಿ ನನ್ನ ಕಾಲ ಹತ್ತಿರವೇ ಬಂದುಬಿಟ್ಟಿತು..!
ಸೀನ ಪೈಪ್ ಮೂಲಕ ಹಾಕುತ್ತಿದ್ದ ನೀರಿನಿಂದ ತಪ್ಪಿಸಿಕೊಳ್ಳಲು ಗೊತ್ತಾಗದೆ ಆ ಪುಟ್ಟ ಬೆಕ್ಕಿನ ಮರಿ ನನ್ನ ಚಪ್ಪಲಿ ಹತ್ತಿರ ಬಂದಿತು ಅನಿಸುತ್ತೆ. ನೋಡಲು ಬಲು ಸುಂದರವಾಗಿತ್ತು. ಕೆಂಪು ಬಣ್ಣದ ಮುದ್ದಾದ ಪುಟ್ಟ ಮರಿ. "ಮಿಯಾವ್ ಮಿಯಾವ್" ಎಂದು ಕಿರುಚಿಕೊಳ್ಳುತ್ತಿತ್ತು. ಅದು ಕಿರುಚುವುದನ್ನು ನೋಡಿದ ಸೀನ ಓಡಿಸಲು ಬಂದ. ನಾನೇ "ಬೇಡ ಸೀನ ಪುಟ್ಟ ಮರಿ. ಆಟವಾಡಿಕೊಂಡು ಇರಲಿ ಬಿಡು..!" ಎಂದೆ.
ಇದನ್ನು ಕೇಳಿದ ಸೀನ ತನ್ನ ಕೆಲಸಕ್ಕೆ ಹಿಂದಿರುಗಿದ. ಬೆಕ್ಕಿನ ಮರಿ ನನ್ನ ಚಪ್ಪಲಿಯನ್ನು ಏನೋ ದೊಡ್ಡ ಆಯುಧವೆಂಬಂತೆ ನೋಡುತ್ತಿತ್ತು. ಇಲ್ಲಿಯವರೆಗೂ ನನಗೆ ಬೆಕ್ಕು-ನಾಯಿಗಳ ಪರಿಚಯವೇ ಇರಲಿಲ್ಲ. ಆದರೆ ಅಂದೇಕೋ ನನಗೆ ಈ ಬೆಕ್ಕಿನ ಮರಿ ತುಂಬಾ ಹಿಡಿಸಿಬಿಟ್ಟಿತು. ಅದನ್ನು ಮಾತನಾಡಿಸುತ್ತಾ ಕಾಲ ಕಳೆದೆ. ಮಾರನೇ ದಿನವೂ ಆ ಬೆಕ್ಕು ಅಲ್ಲಿಯೇ ತೋಟದಲ್ಲಿ ಓಡಾಡಿಕೊಂಡಿತ್ತು.
ಅಡುಗೆಯವಳಿಗೆ ಬಟ್ಟಲಲ್ಲಿ ಹಾಲನ್ನು ತಂದಿಡಲು ಹೇಳಿದೆ. ಹಾಲನ್ನು ಕಂಡಿದ್ದೆ ತಡ, ದೂರದಲ್ಲಿದ್ದ ಮರಿ ಮೆಲ್ಲನೆ ಬಟ್ಟಲಿನ ಹತ್ತಿರ ಬಂದು ಒಂದೊಂದೇ ಗುಟುಕು ಕುಡಿಯಲು ಪ್ರಾರಂಭಿಸಿತು. ಆ ಪುಟ್ಟಮರಿ ಕಣ್ಣು ಮುಚ್ಚಿ, ಹಾಲನ್ನು ಆನಂದದಿಂದ ಕುಡಿಯುವುದನ್ನು ನೋಡುವುದೇ ನನಗೆ ಸಂಭ್ರಮದ ಕ್ಷಣವಾಯಿತು..!!
ಒಂದೆರಡು ವಾರ ಮನೆಯ ಹೊರಗಿನ ತೋಟದಲ್ಲಿಯೇ ಆಡಿಕೊಂಡಿದ್ದ ಆ ಪುಟ್ಟ ಬೆಕ್ಕು, ಅದೊಂದು ದಿನ ಮನೆಯ ಒಳಗೆ ಮೆಲ್ಲನೆ ಬಂದುಬಿಡಬೇಕೇ..? "ಅಬ್ಬಾ ಬುದ್ಧಿವಂತ ಬೆಕ್ಕೆ..!! ಈ ಮನೆ ಅಷ್ಟು ಇಷ್ಟವಾಯಿತೇ ನಿನಗೆ..?!" ಎಂದು ಅದರ ತಲೆದಡವಿ ಕೇಳಿದೆ. ಉತ್ತರಿಸುವಂತೆ "ಮಿಯಾವ್" ಎಂದು ಹೇಳಿತು ಆ ಮರಿ..!!
ಈಗ ಮುಂದಿನ ಪ್ರಶ್ನೆ ಉದ್ಭವಿಸಿತು ನನಗೆ..?! ಬೆಕ್ಕು ಮನೆಯೊಳಗೇನೋ ಬಂದದ್ದಾಯಿತು. ದಿನವೂ ನಮ್ಮ ಮನೆಯಲ್ಲೇ ಊಟ ಮಾಡುತ್ತದೆ. ಈಗ ಅದೂ ಸಹ ನಮ್ಮ ಮನೆಯ ಸದಸ್ಯನಂತೆ ಆಗಿಬಿಟ್ಟಿದೆ. ಆದ್ದರಿಂದ ಅದಕ್ಕೆ ಒಂದು ಒಳ್ಳೆಯ ಹೆಸರು ಇಡಬೇಕಲ್ಲ ಎಂದುಕೊಂಡೆ...!
ಬಹಳಷ್ಟು ಯೋಚಿಸಿ "ಸಂತು" ಎಂದು ಹೆಸರಿಟ್ಟೆ...!! ಕಳೆದು ಹೋದ ಸಂತೋಷವನ್ನು ನನಗೆ ಮರಳಿಸಿಕೊಟ್ಟ ಈ ಪುಟ್ಟ ಬೆಕ್ಕಿನ ಮರಿಗೆ, ಸಂತು ಎಂದು ಹೆಸರನ್ನು ಇಟ್ಟರೇನೇ ಚೆಂದ ಎಂದು ನಿರ್ಧರಿಸಿದೆ.
ಈಗ ನಮ್ಮ ಮನೆಯಲ್ಲಿ ಪುಟ್ಟ ಸಂತುವಿನದ್ದೇ ದರ್ಬಾರು..!! ಎಲ್ಲಾ ಕಡೆಯಲ್ಲಿಯೂ ಆರಾಮವಾಗಿ ರಾಜನಂತೆ ಓಡಾಡಿಕೊಂಡಿರುತ್ತದೆ. ಕೆಂಪಗೆ, ಗುಂಡಗೆ ಇರುವ ಬೆಕ್ಕು ದಿನೇ ದಿನೇ ಬೆಳೆಯುತ್ತಿದೆ. ಅದಕ್ಕೂ ಗೊತ್ತು ಅನಿಸುತ್ತೆ ತಾನು ಇರುವ ಮನೆಯಲ್ಲಿ ತಾನೇ "ಮನೆ ಮಗನಂತೆ" ಎಂದು..?!
ಹಾಗಾಗಿಯೇ ಅದು ಹೊರ ಹೋಗುವುದು ಕಮ್ಮಿ, ಸಾಮಾನ್ಯವಾಗಿ ಮನೆಯಲ್ಲಿಯೇ ಇರುತ್ತದೆ. ಸುತ್ತಮುತ್ತ ನಮ್ಮದೇ ತೋಟ ಇರುವುದರಿಂದ ಸ್ವಚ್ಛಂದವಾಗಿ ಓಡಾಡಿಕೊಂಡು, ಮತ್ತೆ ನಮ್ಮ ಮನೆಗೆ ಮರಳುತ್ತದೆ. ಹಾಲು, ಬಿಸ್ಕೆಟ್, ಚಿಪ್ಸ್, ಚಕ್ಕುಲಿ, ತುಪ್ಪದ ದೋಸೆ ಎಂದರೆ ಬಲುಪ್ರಿಯ ಸಂತುವಿಗೆ..!! ವಾರಕ್ಕೆರಡು ಬಾರಿ ನಮ್ಮ ಅಡುಗೆಯವಳು ಅದಕ್ಕೆಂದೇ ಚಿಕನ್ ಸೂಪ್ ಸಹ ಮಾಡಿಕೊಡುತ್ತಾಳೆ.
ತಾನಿರುವ ಮನೆಯವರೆಲ್ಲ ತನ್ನನ್ನು ಎಷ್ಟು ಇಷ್ಟಪಡುತ್ತಾರೆ ಎಂದು ತಿಳಿದೋ ಏನೋ, ಇಲ್ಲಿಯವರೆಗೂ ನಮ್ಮ ಮನೆಯನ್ನು ಬಿಟ್ಟು ಹೋಗಿಲ್ಲ ಸಂತು..!! ಮನೆಯ ಹಾಲಿನಲ್ಲಿ ಇರುವ ಸೋಫಾದ ಮೇಲೆ ರಾಜನಂತೆ ವಿರಾಜಮಾನವಾಗಿ ಕುಳಿತಿರುತ್ತಾನೆ. ಆಗಂತೂ ನನಗೆ ಈ ಸಂತು ಒಳ್ಳೆಯ "ಜೀವಂತ ಆಭರಣದಂತೆ" ನಮ್ಮ ಮನೆಯನ್ನು ಅಲಂಕರಿಸಿದ್ದಾನೆ ಎಂದು ದೃಷ್ಟಿ ತೆಗೆಯುತ್ತೇನೆ.
ಅದಕ್ಕೂ ಸಹ ಸಂತುವಿನಿಂದ ದೊಡ್ಡದಾದ ಉತ್ತರವೇನು ಬರುವುದಿಲ್ಲ..!! "ಮಿಯಾವ್" ಎಂದು ನನ್ನ ಹತ್ತಿರ ಬಂದು ಮಲಗುತ್ತಾನೆ. ಮಕ್ಕಳಿಲ್ಲ ಎಂಬ ದುಃಖವನ್ನು ಸ್ವಲ್ಪ ಮಟ್ಟಿಗಾದರೂ ಈ ಸಂತು ಮರೆಸಿದ್ದಾನೆ ಎನ್ನಬಹುದು. ಇಡೀ ದಿನ ಅವನ ಕಾಳಜಿಯ ಬಗ್ಗೆ, ಅವನ ದೈನಂದಿನ ಚಟುವಟಿಕೆಯ ಬಗ್ಗೆ, ಅವನ ಆಟ, ಊಟ, ತುಂಟಾಟಗಳ ಬಗ್ಗೆಯೇ ನಮ್ಮ ಮಾತುಕತೆ ನಡೆಯುತ್ತಿರುತ್ತದೆ..!!
ಒಂದೇ ಕಡೆ ಕೂರದೆ, ಎಲ್ಲಾ ಕಡೆಯಲ್ಲೂ ಓಡಾಡುತ್ತಾ ಇರುವುದರಿಂದ ನಮ್ಮ ಮನೆ ಈಗೀಗ ಲವಲವಿಕೆಯಿಂದ ಕೂಡಿದೆ..! ಪುಟ್ಟ ಪುಟ್ಟ ಹೆಜ್ಜೆಗಳನ್ನು ಇಟ್ಟು, ಅವನು ನಮ್ಮ ಮನೆಯ ತುಂಬಾ ಓಡಾಡುತ್ತಾ ಮನೆಯವರೆಲ್ಲರನ್ನು ಖುಷಿಯಿಂದ ಇಡುತ್ತಾನೆ. "ಈ ಸಂತೋಷ ಯಾವಾಗಲೂ ನಮ್ಮ ಮನೆಯಲ್ಲಿ ಹೀಗೆಯೇ ನೆಲೆಸಲಿ ದೇವರೇ..!" ಎಂದು ಪುಟ್ಟ ಸಂತುವನ್ನು ನೋಡಿ ಪ್ರಾರ್ಥಿಸುವುದೇ ನನ್ನ ಈಗಿನ ಕೆಲಸವಾಗಿದೆ..!!
