ಪತ್ರ ಮಾತನಾಡುತ್ತಿತ್ತು...!
ಪತ್ರ ಮಾತನಾಡುತ್ತಿತ್ತು...!
ಸುದರ್ಶನ್ ಮತ್ತು ಸುನಿತಾ ದಂಪತಿಗಳು ಆದರ್ಶ ದಂಪತಿಗಳಂತಿದ್ದರು.. ಎಲ್ಲರೂ "ಇದ್ದರೆ ಅವರಂತಿರಬೇಕು" ಎಂದು ಮಾತನಾಡುವಷ್ಟು ಅನ್ಯೋನ್ಯತೆ ಸಹ ಬಾಳ್ವೆ ಅವರಲ್ಲಿ ಇತ್ತು.. ಸುನಿತಾ ಅಪ್ಪಟ ಗೃಹಿಣಿಯಾಗಿದ್ದು ಸುದರ್ಶನ್ ಒಬ್ಬ ಬಿಝ್ನೆಸ್ ಮ್ಯಾನ್.. ಮನೆಯ ಕೆಲಸಗಳನ್ನು ಅಚ್ಚುಗಟ್ಟಾಗಿ ನಿಭಾಯಿಸಿಕೊಂಡು ಒಬ್ಬಳೇ ಮಗಳಾದ ಮಹಿತಾಳನ್ನು ಪ್ರೀತಿಯಿಂದ ಬೆಳೆಸುತ್ತಿದ್ದಳು.ಗಂಡನಿಗೆ ಸದಾ ತಮಗಾಗಿ ಕೊಂಚ ಸಮಯ ಕೊಡುವಂತೆ ಕೋರುತ್ತಿದ್ದಳು.ಹೊಸದಾಗಿ ಆರಂಭಿಸಿದ ಬಿಝ್ನೆಸ್ ಆದ ಕಾರಣ ಹೆಚ್ಚಿನ ಸಮಯ ಅಲ್ಲಿಯೆ ಕಳೆಯುತ್ತಿದ್ದ..
ಮಹಿತಾಳ 6ನೇ ವರ್ಷದ ಹುಟ್ಟು ಹಬ್ಬ ಸಡಗರದಿಂದ ನೆರವೇರಿತು.ಸಂತೋಷದಿಂದ ಬಾಳುತ್ತಿದ್ದ ಕುಟುಂಬಕ್ಕೆ ಆಘಾತ ಒಂದು ಕಾದಿತ್ತು..ಸುನಿತಾಗೆ ಸಹಿಸಲಾಗದ ಹೊಟ್ಟೆನೋವು ಕಾಣಿಸಿತು. ಯಾವ ರೀತಿಯ ಮನೆ ಮದ್ದು ಮಾಡಿದರು ನೋವು ಶಮನವಾಗಲಿಲ್ಲ. ಇನ್ನೂ ಕಡೆಗಣಿಸುವುದರಲ್ಲಿ ಅರ್ಥವಿಲ್ಲವೆಂದು ತಿಳಿದು ಸುದರ್ಶನ್ ಸುನಿತಾಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಕಹಿ ಸತ್ಯವೊಂದನ್ನು ಡಾಕ್ಟರ್ ಹೇಳಿದರು. ಸುನಿತಾ ಕ್ಯಾನ್ಸರ್ ನಿಂದ ಬಳಲುತ್ತಿದ್ದಾಳೆ ಎಂಬ ವಿಚಾರವನ್ನು ಸುದರ್ಶನ್ ಗೆ ಅರಗಿಸಿಕೊಳ್ಳಲಾಗುತ್ತಿರಲ್ಲಿಲ್ಲ.. ಪ್ರಾರಂಭಿಕ ಹಂತದ ಟ್ರೀಟ್ಮೆಂಟ್ ನೀಡಬಹುದು.ಒಂದಷ್ಟು ವರ್ಷ ಕಾಯಿಲೆಯನ್ನು ದೂಡಬಹುದು ಎಂಬ ಸಲಹೆ ಮೇರೆಗೆ ಆಪರೇಷನ್ ಮಾಡಿಸಲಾಯಿತು.. ಧೈರ್ಯದಿಂದ ಬಂದಿದ್ದನ್ನು ಎದುರಿಸಬೇಕು ಎಂದು ಗಟ್ಟಿ ನಿರ್ಧಾರ ಮಾಡಿಕೊಂಡಿದ್ದ ಸುನಿತಾಗೆ ಮಗಳನ್ನು ನೆನೆದಾಗಲೆಲ್ಲ ಕರುಳು ಹಿಂಡಿದಂತಾಗುತ್ತಿತ್ತು.. ಮಹಿತಾ ತುಂಬಾ ಚೂಟಿ. ಹೇಳಿದ್ದನ್ನು ಅರ್ಥ ಮಾಡಿಕೊಳ್ಳುವ ಸ್ವಭಾವದವಳು ಆಗಿದ್ದಳು. ಅಮ್ಮ ಯಾಕೆ ಮಲಗಿದ್ದೀರೀ?ಅಮ್ಮನಿಗೆ ಏನಾಗಿದೆ ?ಎಂದು ಕೇಳುವಾಗಲೆಲ್ಲಾ ಏನೆಂದು ಉತ್ತರಿಸುವುದು ಎಂದು ತೋಚದೆ ಆದಷ್ಟು ಬೇಗ ಹುಷಾರಾಗುತ್ತೇನೆ.ನೀನು ಅಪ್ಪನಿಗೆ ತೊಂದರೆ ಕೊಡಬಾರದು ಎಂದು ಸಮಾಧಾನ ಮಾಡುತ್ತಿದ್ದಳು..
ಬದುಕುಳಿದ ಅಷ್ಟು ದಿವಸ ಮಗಳನ್ನು ಯಾರ ಅವಲಂಬನೆಯೂ ಇಲ್ಲದೆ ಸ್ವತಂತ್ರವಾಗಿ ತನ್ನ ಕೆಲಸವನ್ನು ಮಾಡಿಕೊಳ್ಳಲು ತರಬೇತಿಯನ್ನು ನೀಡುತ್ತಾ ಬೆಳೆಸುತ್ತಿದ್ದಳು...
ಮಹಿತಾಳ 13ನೇ ವರ್ಷದ ಹುಟ್ಟಿದ ಹಬ್ಬಕ್ಕೆ ಸುನಿತಾ ಬದುಕಿರಲ್ಲಿಲ್ಲ.. ಎಷ್ಟೇ ಪ್ರಯತ್ನ ಪಟ್ಟರು ಬದುಕಿಸಿಕೊಳ್ಳಲಾಗಲಿಲ್ಲ.. ಸುನಿತಾ ಇಲ್ಲದ ಮನೆ ಸ್ಮಶಾನದಂತಿತ್ತು.. ತಂದೆ ಮಗಳಿಬ್ಬರಿಗೂ ಅವಳಿಲ್ಲ ಎನ್ನುವ ಸತ್ಯವನ್ನು ಅರಗಿಸಿಕೊಳ್ಳಲು ಬಹಳ ಸಮಯ ಬೇಕಾಯಿತು.. ಮಹಿತಾ ನಿತ್ಯ ಸ್ಕೂಲಿಗೆ ಹೋಗುವಾಗ ಅಮ್ಮನ ಭಾವಚಿತ್ರಕ್ಕೆ ನಮಸ್ಕರಿಸಿ ಹೊರಡುತ್ತಿದ್ದಳು.. ಸುನಿತಾ ಇಲ್ಲದೆ ಅದಾಗಲೇ 9 ತಿಂಗಳು ಕಳೆದಿತ್ತು. ಒಂದು ಮುಂಜಾನೆ ಮಹಿತಾ ಅಸಾಧ್ಯವಾದ ಹೊಟ್ಟೆ ನೋವಿನಿಂದ ಏಳಲಾಗದೆ ಕೂಗಲಾರಂಬಿಸಿದಳು... ತಾನು ಹಾಸಿ ಮಲಗಿದ್ದ ಬೆಡ್ಶೀಟ್ ಮೇಲೆ ರಕ್ತದ ಕಲೆಗಳನ್ನು ಕಂಡು ಗಾಬರಿಯಾಗಿದ್ದಳು.. ಮಗಳ ಕೂಗನ್ನು ಆಲಿಸಿ ಓಡಿ ಬಂದು ನೋಡಿದ ಅಪ್ಪನಿಗೆ ಮಗಳ ಪರಿಸ್ಥಿತಿ ಅರ್ಥವಾಯಿತು.. ಕೂಡಲೇ ತನ್ನ ಕೋಣೆಗೆ ಹೋಗಿ ಪುಟ್ಟದಾದ ಒಂದು ಬ್ಯಾಗ್ ತಂದು ಅವಳ ಕೈಗಿಟ್ಟ.. ನೋವಿನಿಂದ ನರಳುತ್ತಿದ್ದ ಮಹಿತಾ
"ಇದೇನಪ್ಪ"?
"ತೆಗೆದು ನೋಡು"
ಬಾಗಿನ ಜಿಪ್ ಓಪನ್ ಮಾಡಿ ನೋಡಿದವಳಿಗೆ ಅದರಲ್ಲಿ ಸ್ಯಾನಿಟರಿ ಪ್ಯಾಡ್ ಕಾಣಿಸಿತು. ಅದರ ಜೊತೆ ಬಂದು ಪತ್ರವಿತ್ತು. ಮಹಿತಾ ಪತ್ರವನ್ನು ತೆಗೆದಳು
" ಪ್ರೀತಿಯ ಮಗಳೇ..
ತುಂಬಾ ಹೊಟ್ಟೆ ನೋವ್ತಾ ಇದೀಯಾ? ಹೆದರಬೇಡ ಇದು ಎಲ್ಲಾ ಮಹಿಳೆಯರಿಗೆ ಆಗುವಂತದ್ದು. ತಿಂಗಳಲ್ಲಿ ಮೂರು ದಿವಸ ಇದೇ ರೀತಿ ಬ್ಲೀಡಿಂಗ್ ಇರುತ್ತದೆ.ಕೆಲವರಿಗೆ ಒಂದು ವಾರದವರೆಗೂ ಇರುತ್ತದೆ. ಇದರಲ್ಲಿರುವ ಸ್ಯಾನಿಟರಿ ಪ್ಯಾಡ್ ಬಳಸಿಕೋ, ಅದನ್ನು ಹೇಗೆ ಬಳಸಬೇಕೆಂದು ಈ ಪತ್ರದ ಹಿಂಬದಿಯಲ್ಲಿ ತಿಳಿಸಿದ್ದೇನೆ. ಹೊಟ್ಟೆ ನೋವು ಜಾಸ್ತಿ ಅನಿಸಿದರೆ ಒಂದು ಲೋಟ ನೀರಿಗೆ ಜೀರಿಗೆಯನ್ನು ಹಾಕಿ ಚೆನ್ನಾಗಿ ಕುದಿಸಿ ಬೆಲ್ಲದೊಂದಿಗೆ ಸೇರಿಸಿಕೊಂಡು ಕುಡಿ.. ನೋವು ಕಡಿಮೆಯಾಗುತ್ತದೆ.. ಒಂದೇ ಪ್ಯಾಡ್ ಇಡೀ ದಿನ ಬಳಸಬೇಡ ದಿನಕ್ಕೆ ಮೂರರಿಂದ ನಾಲ್ಕು ಬಾರಿ ಪ್ಯಾಡ್ ಅನ್ನು ಚೇಂಜ್ ಮಾಡುತ್ತಿರು. ಇಲ್ಲವಾದಲ್ಲಿ ಇನ್ಫೆಕ್ಷನ್ ಆಗುತ್ತದೆ.. ನಾನು ಸದಾ ನಿನ್ನೊಂದಿಗೆ ಇರುತ್ತೇನೆ. ಚಿಂತಿಸಬೇಡ ಏನೇ ಇದ್ದರೂ ಅಪ್ಪನನ್ನು ಕೇಳು ಭಯಪಡಬೇಡ "
ಇಂತಿ ನಿನ್ನ ಅಮ್ಮ
ಪತ್ರ ಓದಿದವಳಿಗೆ ಕಣ್ಣೀರು ತಡೆಯಲಾಗಲಿಲ್ಲ..ಅಮ್ಮನ ಫೋಟೋ ತಬ್ಬಿಕೊಂಡು "ಲವ್ ಯು ಅಮ್ಮ ಮಿಸ್ ಯು" ಎನ್ನುತ್ತಾ ಮುತ್ತೊಂದನಿಟ್ಟು ಬಾತ್ರೂಮ್ ಕಡೆ ನಡೆದಳು.
ದಿನಗಳು ಉರುಳಿದವು. ಹೆಂಡತಿಗೆ ಕೊಟ್ಟ ಮಾತಿನಂತೆ ಸುದರ್ಶನ್ ತನ್ನ ಕೆಲಸದ ಭಾರವನ್ನು ಕೊಂಚ ಇಳಿಸಿಕೊಂಡು ಮಗಳಿಗಾಗಿ ಸಮಯವನ್ನು ಮೀಸಲಿಡುತ್ತಿದ್ದ. ಮಹಿತಾ ಪಿಯುಸಿ ಮೆಟ್ಟಿಲೇರಿ ಅದಾಗಲೇ ಒಂದು ವರ್ಷ ಕಳೆದಿತ್ತು.ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ ಸಮೀಪಿಸುತ್ತಿರುವಾಗ ಹೆದರಿಕೆಯಿಂದ ಕುಳಿತಿದ್ದ ಮಗಳನ್ನು ನೋಡಿ ಮಡಿದಿ ಬರೆದ ಇನ್ನೊಂದು ಪತ್ರದ ಜೊತೆ ಕಟ್ಟಿದ ಪೆನ್ನು ತಂದು ಮಗಳ ಕೈಗಿಟ್ಟ.
"ಪ್ರೀತಿಯ ಮಗಳೇ,
ಪರೀಕ್ಷೆ ಎಂಬುದು ಅಂತಿಮವಲ್ಲ. ಅದು ಆರಂಭ. ನೀನು ಜಾಣೆ. ಓದಿದ್ದನ್ನು ನೆನಪಿನಲ್ಲಿಟ್ಟುಕೊಳ್ಳುತ್ತಿ.. ಹೆದರಬೇಡ.. ನೆನಪಾದಷ್ಟು ಪರೀಕ್ಷೆಯಲ್ಲಿ ಬರಿ. ಆಲ್ ದ ಬೆಸ್ಟ್ ಕಂದ. ಪತ್ರದ ಜೊತೆಗೆ ಪೆನ್ ಒಂದನ್ನು ಇಟ್ಟಿದ್ದೇನೆ. ನಿನ್ನ ಪರೀಕ್ಷೆಗಳು ಸುಲಭವಾಗಿರುತ್ತವೆ. ಧೈರ್ಯದಿಂದಿರು
ಪತ್ರ ಓದಿದವಳಿಗೆ ಅಮ್ಮನೇ ಜೊತೆ ನಿಂತು ಧೈರ್ಯ ಹೇಳಿದಂತೆ ಭಾಸವಾಯಿತು.. ಪರೀಕ್ಷೆಯಲ್ಲಿ ರಾಂಕ್ ಪಡೆದಳು.. ಪ್ರತಿಯೊಂದು ಹಂತದಲ್ಲಿಯೂ ಮಗಳ ಬಗ್ಗೆ ಕಾಳಜಿ ವಹಿಸಿದ್ದ ಸುನಿತಾ ಎಲ್ಲಾ ದಿಕ್ಕಿನಲ್ಲಿಯೂ ಪತ್ರಗಳನ್ನು ಬರೆದು ಗಂಡನ ಕೈಗೊಪ್ಪಿಸಿ ಹೋಗಿದ್ದಳು. ಪ್ರತಿಪತ್ರಕ್ಕೆ ಸುದರ್ಶನ್ ಸಾಕ್ಷಿಯಾಗಿದ್ದ. ಸುನಿತಾ ಮಗಳ ಬದುಕಿನಲ್ಲಿ ಜೀವಂತವಾಗಿ ಇರಲಿಲ್ಲ ಅಷ್ಟೇ.ಆದರೆ ಪತ್ರದ ಮುಖಾಂತರ ಅವಳೊಂದಿಗೆ ಬದುಕುತ್ತಿದ್ದಳು.ಅವಳ ಪತ್ರದ ಮೂಲಕ ಮಗಳೊಂದಿಗೆ ಮಾತನಾಡುತ್ತಿದ್ದಳು...
ತನಗಿರುವ ಕಾಯಿಲೆಯ ವಿಚಾರ ತಿಳಿದ ದಿನದಿಂದ ಮುಂದಾಲೋಚಿಸಿ ಮಗಳ ಬದುಕಿನಲ್ಲಿ ನಡೆಯಬಹುದಾದ ಪ್ರತಿಯೊಂದು ಘಟನೆಗಳನ್ನು ಊಹಿಸುತ್ತಾ ಪ್ರತಿಯೊಂದಕ್ಕೂ ಪತ್ರಗಳನ್ನು ಬರೆದು ಗಂಡನ ಕೈಗಿಟ್ಟು ಒಂದೊಂದನ್ನು ಸಮಯಕ್ಕೆ ತಕ್ಕಂತೆ ಕೊಡುವಂತೆ ಹೇಳಿದ್ದಳು.ಸುದರ್ಶನ್ ಕೂಡ ಅದನ್ನು ಪಾಲಿಸಿದ.ಸುನಿತಾ ಜೀವಂತವಾಗಿರಲಿಲ್ಲ. ಆದರೆ ಪತ್ರದ ಮುಖಾಂತರ ಅಮ್ಮನ ಕರ್ತವ್ಯವನ್ನು ನಿಭಾಯಿಸುತ್ತಿದ್ದಳು.. ಮಹಿತಾಗೆ ಅಮ್ಮನಿಲ್ಲದ ಕೊರಗನ್ನು ಅಮ್ಮ ಬರೆದಿಟ್ಟಿದ್ದ ಪತ್ರಗಳು ನೀಗಿಸುತ್ತಿದ್ದವು..
ಸಾವು ಯಾವಾಗ ಹೇಗೆ ಬರುತ್ತದೆ ಎಂಬುದು ಯಾರಿಗೂ ಊಹಿಸಲಾಗದು...ಸಾವಿಗೆ ಹೆದರುವ ಬದಲು ದೈರ್ಯದಿಂದ ಪರಿಸ್ಥಿತಿ ನಿಭಾಯಿಸಿ ಬದುಕುವುದನ್ನು ಕಲಿಯಬೇಕು..ಸುನಿತಾಳ ಮುಂದಾಲೋಚನೆ ಮಗಳನ್ನು ಒಂಟಿಯಾಗಿಸಿದೆ ದೈರ್ಯದಿಂದ ಬದುಕುವಂತೆ ಮಾಡಿತು..
ಪೋನ್ ಯುಗ ಪ್ರಾರಂಭವಾಗುವ ಮುನ್ನ ಪತ್ರಗಳೆ ಎಲ್ಲಾ ವಿಷಯಕ್ಕೆ ರಾಯಭಾರಿಯಾಗಿ ಕೆಲಸ ಮಾಡುತ್ತಿತ್ತು...ಪತ್ರಗಳು ಮಾತನಾಡುತ್ತಿತ್ತು ಎಂದರೆ ತಪ್ಪಿಲ್ಲ.. ಈ ಕಾಲದಲ್ಲಿ ಪತ್ರಗಳು ಚಾಲ್ತಿಯಲ್ಲಿಲ್ಲ. ಪತ್ರ ಬರೆಯುವುದರಿಂದ ಎದುರಿಗೆ ನಿಂತು ಮಾತನಾಡಿದ ಅನುಭವ ಪತ್ರ ಓದುವಾಗ ದೊರೆಯುತ್ತದೆ..ಅದೆಷ್ಟೇ ಅಪ್ಲಿಕೇಶನ್ ಗಳು ಮೆಸೇಜ್ ಮಾಡಲೆಂದು ಬಂದರು ಪತ್ರ ಬರೆಯುವಾಗ ದೊರೆಯುವ ಅನುಭೂತಿ ತಂದುಕೊಡಲಾರದು.. ಪತ್ರ ಬರೆದವರಿಗೆ ಅಥವಾ ಓದಿದವರಿಗೆ ಇದರ ಅನುಭವವಿದ್ದರೆ ಮುಂದಿನ ಪೀಳಿಗೆಗೆ ಅದರ ರುಚಿ ತೋರಿಸಿ...
