ಪ್ರಳಯದ ಹಿನ್ನೆಲೆಯಲ್ಲಿ
ಪ್ರಳಯದ ಹಿನ್ನೆಲೆಯಲ್ಲಿ


ಶಾಲೆ ಬಿಟ್ಟು ರಸ್ತೆಬದಿಯಲ್ಲಿ ನಡೆದು ಸಾಗುತ್ತಿದ್ದಳು ಮೀನಾಕ್ಷಿ. ಮಳೆ ಹನಿಗಳು ಮೆಲ್ಲನೆ ದರೆಗಿಳಿಯುತ್ತಿತ್ತು. ಕೊಡೆಯನ್ನು ಬಿಡಿಸಿ ತವಕದಿಂದ ಅವಳು ಮುಂದಕ್ಕೆ ಹೆಜ್ಜೆ ಹಾಕಿದಳು.ಅಂಗಳದ ಮೆಟ್ಟಿಲುಗಳನ್ನು ಹತ್ತಿ ಮೇಲೆ ಸಾಗುತ್ತಿದ್ದಂತೆ ಮಳೆ ತುಸು ಜೋರಾಗಿ ಬೀಳತೊಡಗಿತ್ತು. ಬಾಗಿಲ ಬಳಿ ನಿಂತಿರುವ ನಿರ್ಮಲ "ಇವತ್ತೇನೊ ಇಷ್ಟು ಬೇಗ ಬಂದುಬಿಟ್ಟಿದ್ದಿಯಾ...!!
ಶಾಲೆ ಏನೂ ಬೇಗ ಬಿಟ್ಟಿದ್ರಾ ಇವತ್ತೂ..?" ಎಂದು ಕುತೂಹಲದಿಂದ ಕೇಳಿದಳು.ಹಿಂತಿರುಗಿ ಗಡಿಯಾರವನ್ನು ವೀಕ್ಷಿಸಿದ ನಿರ್ಮಲ "ಇನ್ನೇನೂ ಗಂಟೆ ನಾಲ್ಕು ಆಗಲಿಲ್ಲವಲ್ಲ...!!." "ಇವತ್ತಿನ ಮಳೆ ಕಾರಣ ಶಾಲೆ ಬೇಗನೆ ಬಿಟ್ಟಿದ್ದಾರೆ " ಎಂದು ತವಕದಿಂದ ಚೀಲವನ್ನು ಹತ್ತಿರದ ಮಂಚದಲ್ಲಿ ಇಟ್ಟ ಅವಳು ಒಳಗೆ ನಡೆದಳು ಹಜಾರಾದಲ್ಲಿ ಕುಳಿತು ರಾಮ ಅದೇನೊ ಸಣ್ಣ ಪುಸ್ತಕವನ್ನು ಬರೆಯುತ್ತಿದ್ದ. ಬಾಗಿಲ ಅಂಚಿನಿಂದ ಇಣುಕಿ ನೋಡಿ ಮೀನಾಕ್ಷಿ..."ಅಪ್ಪಾ ನದಿಯಲ್ಲಿ ನೀರು ಹೆಚ್ಚಾಗಿ ಈ ಊರಿನ ಮನೆಗಳೆಲ್ಲ ಮುಳುಗಳು ಸಾಧ್ಯತೆ ಇದೆಯಂತೆ ಎಂದು ಬರುವ ದಾರಿಯಲ್ಲಿ ಯಾರೋ ಹೇಳಿದ್ರು" ಎಂದು ಹೇಳುತ್ತಾ....ಓಡಿ ತಂದೆಯ ತೊಡೆ ಏರಿ ಕುಳಿತುಕೊಂಡಲು, ಅವಳ ಮುಖದಲ್ಲಿದ್ದ ಎಂದಿನ ಉತ್ಸುಕತೆ ಮಾಯವಾಗಿ ಆತಂಕ ತುಂಬಿತ್ತು. ರಾಮ ತೊಡೆಯ ಮೇಲೇರಿದ ಮಗಳನ್ನು ಮುದ್ದಿಸುತ್ತಾ ಅವಳನ್ನು ಸಮಾಧಾನ ಪಡಿಸಿದ.
ಹತ್ತಿರಬಂದ ನಿರ್ಮಲ ಟವೆಲ್ ನಿಂದ ಮೀನಾಕ್ಷಿಯ ತಲೆಯನ್ನು ತಡವುತ್ತಾ " ಹೋಗು ಸ್ನಾನ ಮಾಡಿ ಬೇಗನೇ ಬಂದುಬಿಡು...ಮಳೆ ಜೋರಾಗಿ ಬರುತ್ತಾಉಂಟು" ಎಂದು ಹೇಳಿ ಹೊರಗಡೆ ಮಳೆಯನ್ನು ವೀಕ್ಷಿಸುತ್ತಾ ಹಜಾರಾದಲ್ಲಿ ಕುಳಿತುಕೊಂಡಲು.ಕೈಯ್ಯಲ್ಲಿದ್ದ ಪುಸ್ತಕವನ್ನು ಹತ್ತಿರದ ಕವಾಟಿ ನಲ್ಲಿರಿಸಿದ ರಾಮ, ಎದ್ದು ನಿಂತು " ಒಂದೆರಡು ದಿನಗಳಿಂದ ಮಳೆ ಎಡೆ ಬಿಡದೆ ಸುರಿಯುತ್ತಿದೆಯಲ್ಲ....ಏನು ಅನಾಹುತ ಕಾದಿದೆಯೋ ಏನೋ..!! " ಎಂದು ಆತಂಕದಿಂದ ಗೊಣಗುತ್ತಾ ಮಡದಿಯ ಕಡೆಗೆ ನೋಡಿದ.ನಿರ್ಮಲ.. ..ಹೂಂ ಗುಟ್ಟಿ ಏನೋ ಹೇಳಲೆಂದು ಬಾಯ್ತೆರೆದು ಮತ್ತೆ ಸುಮ್ಮನಾದಳು.
ಹೊರಗಡೆ ಆಗಲೂ ಮಳೆ ಜೋರಾಗಿ ಬೀಳುತ್ತಿತ್ತು.....ಮಳೆಗಾಲದ ಕತ್ತಲು ಎಲ್ಲೆಲ್ಲೂ ಆವರಿಸಿ... ಭೀತಿ ಉಂಟುಮಾಡುವ ಗುಡುಗಿನ ಶಬ್ದ ಕೇಳಿಬರುತ್ತಿತ್ತು. ಅಲ್ಪ ಸಮಯದ ನಂತರ ಮಳೆಯ ತೀವ್ರತೆ ಸ್ವಲ್ಪ ಕಡಿಮೆಯಾಗಿತ್ತು, ಅಂಗಳಕ್ಕಿಳಿದು ದೂರದ ಬಯಲು ಪ್ರದೇಶಕ್ಕೆ ಕಣ್ಣು ಹಾಯಿಸಿದ ರಾಮನ ಮುಖದಲ್ಲಿ ಭೀತಿ ತುಂಬಿತ್ತು.ಅಲ್ಲಿ ಗದ್ದೆಗೆ ನೀರು ನುಗ್ಗಿ ಸುಮಾರು ಅರ್ಧ ಕಿಲೋಮೀಟರ್ ವ್ಯಾಪ್ತಿ ಸಂಪೂರ್ಣ ಜಲಾವೃತವಾಗಿ ಇದ್ದ ಕೆಲವೊಂದು ಮನೆಗಳು, ಮಂದಿರಗಳು ಎಲ್ಲಾ ನೀರಲ್ಲಿ ಮುಳುಗಿದ್ದವು. ಒಂದೆರಡು ದಿನಗಳಿಂದ ಬಿಡದೆ ಸುರಿಯುತ್ತಿದ್ದ ಮಳೆ...ಪ್ರಕೃತಿಯ ಹಲವಾರು ಸೌಂದರ್ಯ ಗಳನ್ನು ಹಿಸುಕಿ ಆ ಊರಿನ ಜನರಲ್ಲಿ ಭೀತಿ ಹುಟ್ಟಿಸಿ ಮುನ್ನೆರುತಿತ್ತು. ಸ್ವಛಂದ ಗಾಳಿ... ಶುದ್ಧ ನೀರು ಹೀಗೆ ಸಾವಿರಾರು ಮಂದಿಯ ಕನಸುಗಳು ಎಲ್ಲಾ ನೆಲಸಮ ವಾಗಿತ್ತು..!!
ಸಮಯ ಕಳೆದಂತೆ ನೀರು ನಿದಾನವಾಗಿ ಮೇಲೇರಿ ಬರುತಿತ್ತು. ನೋಡುತ್ತಿದ್ದಂತೆ ಮನೆಮುಂದಿನ ರಸ್ತೆಗೆ ನೀರು ಹತ್ತಿ ಸ್ವಲ್ಪ ಹೊತ್ತಲ್ಲಿ ಅಂಗಳಕ್ಕಿಳಿಯುವುದರಲ್ಲಿತ್ತು, ಭಯದಿಂದ ಕಂಗೆಟ್ಟ ಮೀನಾಕ್ಷಿ ಮತ್ತುನಿರ್ಮಲಳ ಮುಖದಲ್ಲಿ ಚಡಪಡಿಕೆ ಆತಂಕವಾಗಿ ಬದಲಾಗಿತ್ತು....ತಮ್ಮ ಜೀವದ ಹೊಂಗುತೊರೆದು ಮಗಳ ಜೀವವನಾದರೂ ರಕ್ಷಿಸುವ ಆತಂಕದಿಂದ ನಿರ್ಮಲ ಪರಿಭ್ರಾಂತಲಾಗಿದ್ದಳು.
ಸುತ್ತಲೂ ಮನೆ ಮಠ ಗಳನ್ನು ಕಳೆದುಕೊಂಡು ಭಯ ಭೀತಿ ಯಿಂದ ಬೊಬ್ಬಿಡುವ ಜನರ ಶಬ್ದ ಕೇಳಿ ಬರುತಿತ್ತು. ಕೆಲವರಂತೂ ದಿಕ್ಕು ತೋಚದೆ ಉಟ್ಟ ಬಟ್ಟೆಯಲ್ಲಿ ನೀರಿಗಿಳಿದು ಸಾಗುತ್ತಿದ್ದರು.ವೈದ್ಯುತಿ ಖಡಿತವಾಗಿ ಸುತ್ತಲೂ ಕತ್ತಲು ಆವರಿಸಿತ್ತು...ನಾದಿಪ್ರವಾಹದ ಒಡಲಲ್ಲಿ ಬದುಕು ಮುಳುಗುತ್ತಿರುವಾಗ ಆ ಊರಿನ ಜನರ ಹೆಜ್ಜೆ ಹೆಜ್ಜೆಗಳಲ್ಲಿ ಸವಾಲು ಎದುರಾಗುತ್ತಿತ್ತು... ಆ ಕ್ಷಣಕ್ಕೆ ಭಗವಂತಾ ಎಂಬುದೊಂದೇ ಪ್ರಾರ್ಥನೆಯಾಗಿತ್ತು ಅವರ ಮನದಲ್ಲಿ....ಆ ಹೊತ್ತಿಗೆ ಧಾವಿಸಿ ಬಂದ ನಾವಿಕ ಸೇನೆಯವರು ನೀರಿಗಿಲಿದು ಸಾಗುತ್ತಿದ್ದ ಜನರನ್ನು ಬಂದು ಮೇಲಕ್ಕೆತ್ತಿದರು. ಊರ ದೇವಸ್ಥಾನದ ಸಭಾಂಗಣದಲ್ಲಿ ವಾಸಕ್ಕೆ ವ್ಯವಸ್ಥೆ ಮಾಡಿದ್ದರು. ಮನೆ ಮಠಗಳನ್ನು ಕಳೆದುಕೊಂಡ ನೆರೆಯವರು, ಸಂಬಂಧಿಕರು ಎಂಬಂತೆ ಹಲವು ತರದ ಜನರು, ಜಾತಿ ಧರ್ಮದ ಹಂಗು ತೊರೆದು, ತಮ್ಮ ಬಾಡಿದ ಮುಖವನ್ನು ಹೊತ್ತು ಅಲ್ಲಿ ನೆರೆದಿದ್ದರು.
ಸಭಾಂಗಣದ ಒಂದು ಮೂಲೆಯಲ್ಲಿ ಮುದುಡಿ ಕುಳಿತುಕೊಂಡಿದ್ದಳು... ಮೀನಾಕ್ಷಿ. " ದೇವರೇ..!!ಇನ್ನು ಎಷ್ಟು ದಿನ ಇಲ್ಲಿ ಇರಬೇಕೊ ಏನೋ ..." ಮನೆಯಲ್ಲಿ ಕುಳಿತು ತನ್ನದೇ ಆದ ಪ್ರಪಂಚದಲ್ಲಿ ಮಳೆಯನ್ನು ಆಸ್ವಾದಿಸುವ ಸೊಗಸು ಇನ್ನುಮುಂದೆ ಸಾಧ್ಯವೇ.?" "ಇನ್ನು ಮುಂದೆ ಶಾಲೆಗೆ ಹೋಗುವ ಮಾತಾದರು ಏನೂ..!!""ಇದ್ದ ಪುಸ್ತಕ ಗಳೆಲ್ಲ ನೀರು ಪಾಲಾಗಿರುವುದಂತೂ ಖಂಡಿತ..!!' ಅವಳು ಒಂದೊಂದೇ ಹೇಳಿ ಮರುಗುತ್ತಿದ್ದಳು.ಬಹು ದೂರದ ದಿಗಂತದ ಭವಿಷ್ಯದ.. ಮೇಲೆ ದ್ರಿಷ್ಟಿ ಇಡಲು ಇನ್ನೂ ಬಾರದಿದ್ದ ಹುಡುಗಿಯ ಜೀವಕ್ಕೆ ತನ್ನ ಎದುರಿಗಿರುವ ದ್ರಿಶ್ಯ ತಾನು ಪೂರ್ತಿ ಎದ್ದ ಮೇಲಿನ ತನ್ನ ಜೀವನದ ಪರಿಯನ್ನು ಮರೆಮಾಚಿತ್ತು.ಯಾವುದಕ್ಕೂ ಸಂತಸವಿಲ್ಲದೆ ಎಲ್ಲವನ್ನು ಕಳೆದುಕೊಂಡ ಗೊಂದಲ ಗೂಡಾಗಿತ್ತು ಅವಳ ಮನಸ್ಸು ...ಕುಂದಿದ ಮುಖವನ್ನು ಹೊತ್ತ ಮೀನಾಕ್ಷಿಯ ಕಣ್ಣಾಲಿಗಳಲ್ಲಿ ನೀರ ಹನಿ ತುಂಬಿತ್ತು "ಒಂದೆರಡು ದಿನಗಳಲ್ಲಿ ಮಳೆ ಸ್ವಲ್ಪ ಕಡಿಮೆಯಾದಾಗ ಎಲ್ಲಾ ಸರಿ ಹೋಗುತ್ತೆ...ನಿಷ್ಚಿಂತೆಯಾಗಿ ಮಲಗಿ ನಿದ್ರಿಸು.." ಎಂದು ಅವಳ ಬೆನ್ನು ತಟ್ಟಿ ಸಂತೈಸುತ್ತಿದ್ದಳು ನಿರ್ಮಲ.
ಕೈಯಲ್ಲಿದ್ದ ಚಾದರವನ್ನು ಮುಖಕ್ಕೆ ಎಳೆದುಕೊಂಡು ತೆರೆದ ಕಣ್ಣುಗಳನ್ನು ಮುಚ್ಚಿಕೊಂಡಳು ಮೀನಾಕ್ಷಿ. ಅವಳ ಸೂಕ್ಷ್ಮ ಮನ ಅವಳೊಂದಿಗೆ ಪಿಸು ಮಾತಾಡಿತು" ಮನವೇ , ಈ ಕ್ಷಣದಲ್ಲಿ ಧೈರ್ಯವಂತಳಾಗಿರು.." ಸೋತ ಕಣ್ಣುಗಳಿಗೆ ತಾಸುಗಳ ನಂತರದಲ್ಲಿ ಸೂಕ್ಷ್ಮ ವಾಗಿ ಹಗುರವಾಗಿ ಅವಳ ಕಣ್ಣುಗಳನ್ನು ನಿದ್ದೆ ಆವರಿಸಿಕೊಂಡಿತ್ತು.
ಸ್ವಲ್ಪ ಹೊತ್ತಲ್ಲಿ ಎಲ್ಲಿಯೋ... ಏನೋ... ಒಂದು ಎಳೆಯ ಧ್ವನಿ ಕೇಳಿ ಬರುತಿತ್ತು.".ಓ ಮೀನಾಕ್ಷಿ"ನಿದ್ರಾವಸ್ಥೆ ಕ್ಷಣ ಮಾತ್ರದಲ್ಲಿ ಹರಿದು ...ಕಣ್ಣುಗಳನ್ನು ಅಗಲ ಅಗಲವಾಗಿ ತೆರೆದು ನೋಡಿದಳು...".ಓಹ್... ಮೀನು..ನೀನಾ..!!" ಎಂದು ವಿಸ್ಮಿತಳಾಗಿ ಕೈಗಳನ್ನು ಅತ್ತ ಕಡೆ ಚಾಚಿದಳು. "ನೀನೂ ಇಲ್ಲಿಗೆ ಬಂದ್ಯಾ" ಎಂದು ಸಂತಸದಿಂದ ಕೇಳಿದಳು ಮೀನಾಕ್ಷಿ "ಆದರೆ ನಿನ್ನ ಮನೆ." "ಎಲ್ಲಾ ನೀರು ಪಾಲಾಗಿದೆ " ಎಂದಳು ಮೀನು ಮುಗುಳ್ನಗುತ್ತಾ."ಸದ್ಯಕ್ಕೆ ಶಾಲಾ ಪುಸ್ತಕಗಳನ್ನು ಹೇಗೋ ಎಲ್ಲಾ ಹೊತ್ತು ತಂದಿದ್ದೇನೆ..." . ಎಂದು ಒಂದೊಂದೇ ಪುಸ್ತಕವನ್ನು ತೆಗೆದು ಎಣಿಸಲಾರಂಭಿಸಿದಳು.
ಮೀನು ಮೀನಾಕ್ಷಿಯ ಸಹಪಾಠಿ ಮತ್ತು ಉತ್ತಮ ಗೆಳತಿಯಾಗಿದ್ದಳು.ಅಮೇಲಿನ ದಿನಗಳಲ್ಲಿ ಅವರ ಮನೆ ಪರಿಸರವೆಲ್ಲಾ ಆ ದೇವಸ್ಥಾನ ವಠಾರವಾಗಿತ್ತು. ಮೀನಾಕ್ಷಿ, ಮೀನು ಅಲ್ಲಿಂದಲೇ ಶಾಲೆಗೆ ಹೋಗಿ ಬರುತ್ತಿದ್ದರು.ಅದೊಂದು ದಿನ ದೇವಸ್ಥಾನದ ಕೆಳಗದ್ದೆ ಬದಿಯ ಕಾಲು ದಾರಿಯಲ್ಲಿ ಅವರು ನಡೆದು ಸಾಗಿದರು. ಅಂದು ಮಳೆ ಸ್ವಲ್ಪ ಕಡಿಮೆಯಾಗಿತ್ತು.
.ಹಚ್ಚಹಸುರಾಗಿ ಕಂಗೊಳಿಸುತ್ತಿರುವ ವಿಶಾಲವಾದ ಗದ್ದೆ. ಬದಿಯಲ್ಲಿ ಹಾವು ಹರಿದ ರೀತಿಯಲ್ಲಿ ಸಾಗುವ ಸಣ್ಣ ಕಾಲುದಾರಿ. ಮುಂದೆ ಸಾಗುತ್ತಿದ್ದಂತೆ ಗೋಚರಿಸುವ ಪಶ್ಚಿಮ ಘಟ್ಟದ ಪರ್ವತ ಶ್ರೇಣಿಗಳು . ಪಟ್ಟಣದ ಹೊಗೆ, ದೂಳು, ಶಬ್ದವನ್ನು ಕೇಳುತ್ತಿದ್ದ ಅವರಿಗೆ ಅದೊಂದು ಹೊಸ ಅನುಭವವಾಗಿತ್ತು.ಸುಂದರ ದೃಶ್ಯ ಕಾವ್ಯದ ತಪ್ಪಲಿನಲ್ಲಿ ನಲಿಯುತ್ತಿರುವ ಪ್ರಕೃತಿ ರಮಣೀಯ ಪ್ರದೇಶ ನೋಡುವ ನಯನಗಳಿಗೊಂದು ಚೆಂದದ ಚಿತ್ತಾರವನ್ನುಂಟುಮಾಡುತಿತ್ತುಯುದ್ಧ ಭೂಮಿಯಂತೆ ತೋರುತ್ತಿರುವ ಕಾರ್ಮೋಡ ಗಳನ್ನು ವೀಕ್ಷಿಸುತ್ತಾ ಅವರು ಮುನ್ನಡೆದರು. ಅವರ ದುಗುಡ ತುಂಬಿದ ಮುಖವನ್ನು ನೋಡಿಯೋ ಏನೋ ..ಬೀಸಿ ಬಂದ ಗಾಳಿ ಕಾರ್ಮೋಡಗಳನ್ನು ಮುಂದಕ್ಕೆ ಸರಿಸಿ ಹಾದುಹೋಯಿತು. ಅಲ್ಪ ಸ್ವಲ್ಪ ಬೆಳಕು ಗೋಚರವಾಗಿ...ಮಳೆ ಸ್ವಲ್ಪ ಕಡಿಮೆಯಾಗಿತ್ತು.
ಮರುಕ್ಷಣದಲ್ಲಿ ಯಾರೋ ಕರೆದಂತೆ ಭಾಸವಾಗಿ ಅತ್ತ ನೋಡಿದರೆ ಮುದುಕಿ ಯೊಬ್ಬಳು ದೂರದಿಂದ ನಡೆದು ಬರುತ್ತಿದ್ದಳು. ಕೈಯಲ್ಲಿ ಊರುಗೊಳು ಮತ್ತು ಸಣ್ಣ ಕೈಚೀಲವನ್ನು ಹಿಡಿದಿದ್ದಳು. ಒಂದು ಕ್ಷಣ ಭಯಭೀತ ರಾಗಿ ನಿಂತಿದ್ದ ಅವರನ್ನು ನೋಡಿ..."ನೀವು ಮಕ್ಕಳು ಈ ಮಳೆಯಲ್ಲಿ ಎಲ್ಲಿಗೆ ಹೋಗುತ್ತಿರುವಿರಿ..??""ಪ್ರವಾಹ ಪರಿಹಾರ ಶಿಭಿರದಿಂದ ಬಂದವರಾಗಿರಬಹುದು..ಅಲ್ಲವಾ!!"ಎಂದು ಕಂಪಿಸುವ ಧ್ವನಿಯಲ್ಲಿ ಹೇಳುತ್ತಾ ನಡೆದುಬರುತ್ತಿದ್ದಳು. ಹತ್ತಿರ ಬಂದ ಮುದುಕಿಯನ್ನು ನೋಡಿ ಆವರು ಹೌದೆಂದು ತಲೆ ಅಲ್ಲಾಡಿಸಿದರು.
ಮುದುಕಿ ತನ್ನ ಸೆರಗಿನ ತುದಿಯಿಂದ ಅವರಿಬ್ಬರ ತಲೆಯನ್ನು ತಡವುತ್ತಾ "ನೀವು ಇನ್ನು ಮುಂದೆ ಸಾಗಬೇಡಿ ತುಂಬಾ ಅಪಾಯ..""ನನ್ನ ಜೊತೆ ಬನ್ನಿ" "ನಿಮಗೆ ಕೈ ತುಂಬಾ ಹಣ್ಣು ಹಂಪಲುಗಳನ್ನು ಕೊಡುತ್ತೇನೆ "ಎಂದು ಹತ್ತಿರ ಕರೆದಳು, ಅವಳ ನಗುಮುಖದಲ್ಲಿ ವಾತ್ಸಲ್ಯ ತುಂಬಿತ್ತು.
ಅವರು ಮುದುಕಿಯೊಂದಿಗೆ ನಡೆದು ಮುಂದೆ ಸಾಗಿದರು. ಗದ್ದೆ ತುದಿಯಲ್ಲಿರುವ ಸಣ್ಣ ಬೆಟ್ವವನ್ನು ಹತ್ತಿ ಇಳಿದ ಅವರು ವಿಶಾಲವಾದ ಅರಣ್ಯದ ಒಳಗಡೆ ಬಂದು ಸೇರಿದರು. ಹುಲುಸಾಗಿ ಬೆಳೆದು ನಿಂತಿರುವ ಬೃಹದಾಕಾರದ ಮರಗಳೆಡೆಯಲ್ಲಿ ಹಾದು ಸಾಗುವ ಆ ಚಿಕ್ಕ ಕಾಲುದಾರಿಯಲ್ಲಿ ಅವರು ಮತ್ತೂ ಮುಂದಕ್ಕೆ ಹೆಜ್ಜೆ ಹಾಕಿದರು .
ಒಂದು ಚಿಕ್ಕಕೆರೆಯದಡದಲ್ಲಿ ಬಂದು ನಿಂತ ಅವರು ಸುತ್ತಲೂ ಕಣ್ಣು ಹಾಯಿಸಿದರು.ಹಕ್ಕಿ ಪಕ್ಷಿಗಳ ಕಲವರ ತುಂಬಿದ ಸುಂದರವಾದ ವಾತಾವರಣ. ಕೆರೆಯ ದಡದಲ್ಲಾಗಿತ್ತು ಮುದುಕಿಯ ಗುಡಿಸಲು. ಮೆಟ್ಟಿಲು ಹತ್ತಿ ಒಳಗೆ ಸಾಗಿದ ಮುದುಕಿ ಬನ್ನಿ ಇಲ್ಲಿ ಕುಳಿತುಕೊಳ್ಳಿ " ಎಂದು ಕರೆದು ಚಾವಡಿಯಲ್ಲಿ ಸಣ್ಣ ಚಾಪೆಯನ್ನು ತಂದಿಟ್ಟಳು.
ಊರುಗೊಳನ್ನು ಕೆಲಗಿಟ್ಟು ಮಣ್ಣಿನ ದಿಣ್ಣೆ ಯಲ್ಲಿ ಕಾಲುಚಾಚಿ ಕುಳಿತ ಅವಳು ಅಂಗಳಕ್ಕೆ ಕಣ್ಣುಹಾಯಿಸಿ "ಇವತ್ತೇನೋ ಮಳೆ ಸ್ವಲ್ಪ ಕಡಿಮೆ ಯಾಗಿದೆ... ಬಹುಶಃ ಕೆಳಗಿನ ನದಿಯಲ್ಲಿ ಇವತ್ತು ನೀರಿಳಿದಿರಬಹುದು..." ಎಂದು ಗೊಣಗಿದಳು.
"ಇಂತಹ ಪ್ರಳಯವನ್ನು ನಾ ಮುಂಚೆ ನೋಡಿದಾಗಿಯೂ ಕೇಳಿದಾಗಿಯೂ ಇಲ್ಲ... ಆದರೆ ಇದಕ್ಕಿಂತಲೂ ಘೋರವಾದ ಮಳೆ ಅಂದೂ ಬರುತಿತ್ತು. ಆದರೇ ಈಗ ಮನುಕುಲದ ಅಹಂಕಾರಕ್ಕೆ ಪ್ರಕೃತಿ ಮುನಿಸಿಕೊಂಡಿದೆ..ಅಷ್ಟೇ...!!!".ಎಂದು ತನ್ನಷ್ಟಕ್ಕೆ ಹೇಳಿ ಹೋಗುತ್ತಿದ್ದಳು.
ಸ್ವಲ್ಪ ಸಮಯದ ಮೌನದ ನಂತರ..
". "ಸ್ವಲ್ಪ ಹಲಸಿನ ಕಾಯಿ ಪಾಯಸವನ್ನು ಕುಡಿದುಕೊಳ್ಳಿ ಮಕ್ಕಳೆ " ಎಂದು ಹೇಳುತ್ತಾ ಮುದುಕಿ ಕೈಯಲ್ಲಿ ದ್ದ ಲೋಟವನ್ನು ಕೆಲಗಿಟ್ಟು. ತುಂಬಿದ 'ಗ್ಲಾಸ'ನ್ನು ಅವರ ಕೈಗಿತ್ತಲು.
ಮತ್ತೆ ಮಾತನ್ನು ಮುಂದುವರಿಸಿದ ಅವಳು..
" ನೀವು ಹತ್ತಿರದ ಪಟ್ಟಣ ವಾಸಿಗಳು ಅಲ್ಲವಾ..?
ನಿಮ್ಮ ಮುಖಭಾವದಲ್ಲಿ ಇಂತಹ ಪರಿಸರವನ್ನು ಮೊದಲ ಬಾರಿಗೆ ನೋಡುವಂತೆ ತೋರುತ್ತಿದೆಯಲ್ಲ..!!??" ಎಂದು ಮುಗುಳ್ನಗುತ್ತಾ ಮೇಲುದ್ವನಿ ಯಲ್ಲಿ ಕೇಳಿದಳು.
ಪಾಯಸ ಕುಡಿಯುತ್ತಿದ್ದ ಮೀನಾಕ್ಷಿ , ಮೀನು... ಲೋಟವನ್ನು ಕೆಲಗಿಟ್ಟು "ಇಷ್ಟು ಒಳ್ಳೆಯ ಪರಿಸರವನ್ನು ನೀವು ಹೇಗೆ ಬೆಳೆಸಿಕೊಂಡಿದ್ದೀರಾ..!!?"
"ಇದು ನಿಮ್ಮದೇ ಜಾಗವಾ..?" ಎಂದು ಅಶ್ವರ್ಯದಿಂದ ಪ್ರಶ್ನಿಸಿದರು .
ಹತ್ತಿರವಿದ್ದ ವೀಳ್ಯದೆಲೆಯನ್ನು ಬಾಯಲ್ಲಿ ಹಾಕಿ ತುಟಿಗಳನ್ನು ಸವರುತ್ತಾ.
ತಿಳಿ ನಗೆ ಬಿರಿದು ಹೌದೆಂದು.. ಹೂಂ ಗುಟ್ಟಿದಳು..ಮುದುಕಿ.
ಗೋಡೆಯಲ್ಲಿ ನೇಣು ಹಾಕಿರುವ ಪಟಗಳನ್ನು ತೋರಿಸುತ್ತಾ "ಇವೆಲ್ಲಾ ನನಗೆ ಊರವರೂ ಮತ್ತು ಸರ್ಕಾರ ಕೊಟ್ಟಂತಹ ಪಾರಿತೋಷಕಗಳು."
"ಪ್ರಕೃತಿ ಸಂರಕ್ಷಣೆಯ ಹೆಸರಿನಲ್ಲಿ ನನಗೆ ಸಿಕ್ಕಿದ ಸನ್ಮಾನಗಳು".ಎಂದು ಹೇಳಿ ಹೋಗುತ್ತಿದ್ದಳು ಮುದುಕಿ
ಅವಳ ಮಾತುಗಳನ್ನು ಕೇಳಿ ಆಶ್ಚರ್ಯ ಗೊಂಡ ಮೀನಾಕ್ಷಿ..
"ಅಂದ ಮೇಲೆ"
"ಈ ಗಿಡ ಮರಗಳೆಲ್ಲ..??"
"ಹೌದು ಇದೆಲ್ಲಾ ನಾನೇ ನೆಟ್ಟು ಬೆಳೆಸಿದ್ದು. ಐವತ್ತು ಅರುವತ್ತು ವರ್ಷಗಳ ಪರಿಶ್ರಮದ ಫಲ ಅಷ್ಟೇ...ಜೀವನದಲ್ಲಿ ಪ್ರಕೃತಿ ಸಂರಕ್ಷಣೆಯೇ ದೇವರೆಂದು ನಂಬಿಕೊಂಡವಳು ನಾನು..!!" ಎಂದು ಹೇಳಿ ಹೋಗುತ್ತಿದ್ದ ಮುದುಕಿಯ ಮಾತುಗಳಲ್ಲಿ ಅವಳ ಬಗ್ಗೆ ಹೆಮ್ಮೆ ಇತ್ತು.
ಛಾವಡಿಯಿಂದ ಎದ್ದು ಅಂಗಳಕ್ಕಿಳಿದ ಅವರಿಗೆ ಕೆರೆಬದಿಯಲ್ಲಿರುವ ಬಗೆ ಬಗೆಯ ಹೂ ಮತ್ತು ಹಣ್ಣುಗಳು ಅವರ ಕಣ್ಣುಗಳನ್ನು ಆಕರ್ಷಿಸಿತ್ತು.
ಅತ್ತ ಕೆರೆಗೆ ಇಣುಕಿ ನೋಡಿದರೆ ಅಲ್ಲಿ ಹಲವು ತರದ ಮೀನುಗಳು, ಕಪ್ಪೆಗಳು ತಲೆ ಎತ್ತಿ ನೋಡುತ್ತಿದ್ದವು. ಜೊತೆಗೆ ಆಗೊಮ್ಮೆ ಈಗೊಮ್ಮೆ ಇಣುಕಿ ನೋಡುತ್ತಿರುವ ದೊಡ್ಡ ಮೀನುಗಳು, ಆಮೆಗಳು. ಕಣ್ಮುಚ್ಚಿ ನಿಂತು ಆಲಿಸಿದರೆ ದೂರದಲ್ಲಿ ಹರಿಯುವ ನದಿಯ ಝೇಂಕಾರ ಕೇಳಿಬರುತ್ತಿತ್ತು.
ಹತ್ತಿರ ಸರಿದು ಹೂ ಕೊಯ್ಯಲು ಕೈ ಹಾಕಿದ ಮೀನು ಹಿಂದುಗಡೆಯಿಂದ ಮುದುಕಿಯ ಶಬ್ದ ಕೇಳಿ ಅಲ್ಪ ಹಿಂಜರಿದಳು...
"ಅತ್ತ ಹೋಗಬೇಡಿ ಅಲ್ಲೆಲ್ಲಾ ತುಂಬ ಕೆಸರು ತುಂಬಿಕೊಂಡಿದೆ"
"ನಾನೇ ನಿಮಗೆ ಕಿತ್ತು ಕೊಡುತೇನೆ." ಎಂದ ಮುದುಕಿ ತನ್ನ ಊರುಗೊಳನ್ನು ಹಿಡಿದು ಅತ್ತ ಸಾಗಿದಳು.
ಗಿಡವನ್ನು ಬಗ್ಗಿಸಿ ಹೂ ಕೊಯ್ಯುತ್ತಿದ್ದ ಮುದುಕಿ..
" ಜೀವನದಲ್ಲಿ ನಾವು ಅಳವಡಿಸಿ ಕೊಳ್ಳಬೇಕಾದ ನೀತಿಯನ್ನು ಈ ಜೀವಜಾಲಗಳು ತೋರುತ್ತಿವೆ ಎಂಬುದನ್ನು ಮಕ್ಕಳಾದ ನೀವು ತಿಳಿದಿರಬೇಕು".ಎಂದು
ಅವಳು ಮಕ್ಕಳ ಮುಖವನ್ನು ನೋಡಿ ಹೇಳಿದಳು...
"ಪ್ರಕ್ರಿತಿಯಲ್ಲಿರುವ ಈ ಜೀವಜಾಲಗಳು ಎಂದೂ ಮನುಷ್ಯ ನಂತಲ್ಲ. ಅವು ಎಷ್ಟು ಶಿಷ್ಟುರವಾಗಿ ಕಾರ್ಯನಿರ್ವಹಿಸುತ್ತವೆ ... ನೋಡಿ!! ಯಾರ ಶ್ರದ್ಧೆಯನ್ನು ಆಕರ್ಷಿಸದೆ, ಯಾರಲ್ಲೂ ತನ್ನ ದೂರನ್ನು ಹೇಳದೆ...ಇರುವ ನೈಸರ್ಗಿಕ ಸಂಪನ್ಮೂಲಗಳನ್ನು ಉಪಯೋಗಿಸಿ,
ಬೆಳೆಯುತ್ತವೆ....!!"
"ಒಂದು ವೇಳೆ ಯಾರೂ ತಲೆ ಎತ್ತಿ ನೋಡುವವರಿಲ್ಲದಿದ್ದರೂ ಅನ್ಯನ ಒಳಿತಿಗಾಗಿ ಅವು ಬೆಳೆಯುತ್ತವೆ... ಮರ ಗಿಡಗಳು ಹೂ ಬಿಟ್ಟುತ್ತವೆ. ....!!"
" ಎಷ್ಟೊಂದು ಸ್ವಾರ್ಥ ರಹಿತ "
ಮುದುಕಿ ಕೆರೆ ದಡದಲ್ಲಿ ಬಾಗಿ ನಿಂತಿರುವ ಮಾಮರದ ಗೆಲ್ಲನ್ನು ತೋರಿಸುತ್ತಾ..
".ನೋಡಿ'
"ಒಂದು ವೇಳೆ ಹೆಚ್ಚು ಹೂ ಹಣ್ಣುಗಳು ಒಂಟಾದಲ್ಲಿ ಅವು ಅಷ್ಟೇ ತಲೆ ಬಾಗಿ ನಿಲ್ಲುತ್ತವೆಯೆಂದು....ಅದೆಷ್ಟು ವಿನಯಾಶೀಲತೆಯನ್ನು ತೋರುತ್ತವೆ..!!" ಮುದುಕಿ ತನ್ನ ಮೇಲುದ್ವನಿಯಲ್ಲಿ ಹೇಳಿದಳು.
ಹೂ ಹಣ್ಣುಗಳನ್ನು ಕೊಯ್ದು ಸಣ್ಣ ಕೈ ಚೀಲದಲ್ಲಿ ತುಂಬಿಸುತ್ತಿದ್ದ ಮುದುಕಿ ತನ್ನ ಮಾತುಗಳನ್ನು ಹಾಗೆ ಮತ್ತೆ ಮುಂದುವರಿಸಿದಳು...
" ಮನುಷ್ಯ ತನ್ನ ಸ್ವಾರ್ಥ ಲಾಭಕ್ಕಾಗಿ ಪ್ರಕೃತಿಯನ್ನು ನಾಶ ಮಾಡುತ್ತಾನೆ.ಯಾವಾಗ ಇಲ್ಲಿನ ಜನರ ಚಟುವಟಿಕೆಗಳು ಪ್ರಕೃತಿಗೆ ಪೂರಕವಾಗಿರುತ್ತೋ ಆವಾಗ ಪ್ರಕೃತಿ ಸ್ವಛಂದ ವಾಗಿರುತ್ತದೆ... ಮನುಷ್ಯ ಹಿತವಾಗಿರುತ್ತಾನೆ...!!"
" ಇವತ್ತು ನಮ್ಮೆದುರಿನ ಈ ದುರಂತವೇ ಒಂದು ಉದಾಹರಣೆ..!!"
ಮುದುಕಿಯ ಮಾತುಗಳನ್ನು ಕೇಳುತ್ತಿದ್ದ ಅವರ ಮುಖದಲ್ಲಿ ಪಶ್ಚತ್ತಾಪ ತುಂಬಿತ್ತು. ಪ್ರಕೃತಿ ದುರಂತದ ಅಂತರಾಳದಲ್ಲಿ ಮುದುಕಿಯ ಈ ಮಾತುಗಳು ಅದೆಷ್ಟೋ ಸತ್ಯವೆನಿಸುತ್ತಿತ್ತು.
ಆ ದಿನ ಮಳೆ ಸ್ವಲ್ಪ ಕಡಿಮೆಯಾಗಿತ್ತು ಸಮಯ ಮಧ್ಯಾಹ್ನಕಳೆದು ಸಂಜೆಯಾಗುವುದರಲಿತ್ತು. ಮಧ್ಯಾಹ್ನದ ಊಟ ಅಲ್ಲೇ ಮುಗಿಸಿ ಹೊರಡಲು ಅಣಿಯಾಗಿ ಅವರು ಎದ್ದು ನಿಂತರು. ದೂರದ ದಿಗಂತದಲ್ಲಿ ಸೂರ್ಯ ಮೆಲ್ಲನೆ ಧರೆಗಿಳಿಯುತ್ತಿದ್ದ.
ಮೆಟ್ಟಿಲಿಳಿದು ಹೊರನಡೆದ ಅವರು ಮುದುಕಿಯತ್ತ ತಿರುಗಿ.
"ನಮಗೆ ತುಂಬಾ ಇಷ್ಟವಾಯಿತು ಈ ವಾತಾವರಣ"
"ನಾವು ಬಿಡುವು ಸಿಕ್ಕಾಗಲೆಲ್ಲ ಇತ್ತ ಬರುತ್ತೇವೆ.."
"ನದಿಯಲ್ಲಿ ನೀರಿಳಿಯುವ ತನಕ ನಾವು ಇಲ್ಲೇ ಇರುತ್ತೇವೆ", " ತುಂಬಾ ಧನ್ಯವಾದಗಳು ನಿಮಗೆ..!!"
ಎಂದು ಮುಗುಳ್ನಗುತ್ತಾ ಹೇಳಿ ಮುಂದೆ ಹೆಜ್ಜೆ ಹಾಕಿದರು.
ಹೂ , ಹಣ್ಣುಹಂಪಲುಗಳನ್ನು ತುಂಬಿದ ಕೈಚೀಲವನ್ನು ಹಿಡಿದು ಅವರು ಮುಂದೆ ಸಾಗಿದರು.
ಗುಡ್ಡದ ತಪ್ಪಲಿನಿಂದ ಕೆಳಗಡೆ ಕಣ್ಣು ಹಾಯಿಸಿದರೆ, ಉಕ್ಕಿಹರಿಯುತ್ತಿರುವ ನದಿ, ಅರ್ಧ ನೀರಲ್ಲಿ ಮುಳುಗಿ ಕಾಣುತ್ತಿರುವ ಮನೆಗಳು, ಕಟ್ಟಡಗಳು, ಮಂದಿರಗಳು, ಮಸೀದಿಗಳು....ಆದರ ಅಂತರಾಳದಲ್ಲಿ ಪ್ರಕೃತಿ ತನ್ನ ಮೇಲಿನ ಮನುಷ್ಯನ ಅಟಾಪವನ್ನು ಸದೆಬಡಿದು ತನ್ನ ಗಡಿ ಗುರುತನ್ನು ಮತ್ತೆ ಸ್ಥಾಪಿಸುವ ಸಂದೇಶವನ್ನು ಸಾರಿ ಮುನ್ನೇರುತಿತ್ತು.
ತನ್ನ ಅನುಕೂಲಕ್ಕೆ ತಕ್ಕಂತೆ ಎಲ್ಲವನ್ನೂ ಮಣಿಸಿಕೊಳ್ಳುವ ತನ್ನ ಪ್ರಯತ್ನದಲ್ಲಿ ಮನುಷ್ಯ ವಿಜಯ ಸಾಧಿಸಿದೆ ಎಂದು ಬೀಗಿದರೂ ಅದು ತಾತ್ಕಾಲಿಕ ವಷ್ಟೇ.
.
ಗುಡ್ಡ ವನ್ನು ಹತ್ತಿ ಇಳಿದು ಮುಂದೆ ಸಾಗುತ್ತಿದ್ದ ಮೀನಾಕ್ಷಿಗೆ
ದೂರದಿಂದ ಯಾರೋ ಹಾಡುತ್ತಿರುವ ಭಾವಗೀತೆಯೊಂದು ಕೇಳಿಬರುತ್ತಿತ್ತು....
"ಇದು ಒಡವ್ಯಲ್ಲ ಮಗನೇ ಉಸಿರಿದ್ದೊಡಲು"
"ಭೂಮಿ ನಿರ್ಜೀವವಸ್ತು ಒಡವೆ ಅಲ್ಲ, ಉಸಿರುತುಂಬಿದ ಜೀವಾಡುವ ಓಡಲು..." ಎಂದು ಯಾರೋ ಮಧುರವಾಗಿ ಹಾಡುತ್ತಿರುವಂತೆ ಕೇಳಿ ಬರುತ್ತಿತ್ತು...
ಜೊತೆಗೆ ಹಿಂದಿನಿಂದ ಯಾರೋ ಬೆನ್ನು ತಟ್ಟಿ ಕರೆಯುತ್ತಿರುವ ಶಬ್ದ ಕೇಳುತಿತ್ತು.
ಹಠಾತ್ತನೆ ಹಿಂತಿರುಗಿ ನೋಡಿದ ಮೀನಾಕ್ಷಿ ಕಂಡದ್ದು ಹತ್ತಿರ ಮುಗುಳ್ನಗುತ್ತಾ ನಿಂತಿರುವ ನಿರ್ಮಲಾಳ ಮುಖ.." ಹೊತ್ತು ಬೆಳಗ್ಗಾಯಿತು ನೀನು ಈಗಲೂ ಮಲಗಿಕೊಂಡಿದ್ದಿಯಾ..." ಎಂದು ಮೀನಾಕ್ಷಿಯನ್ನು ಮೆಲ್ಲನೆ ಹಿಡಿದೆಬ್ಬಿಸಿದಳು.
ಜಾಗ್ರತಾ ಪ್ರಪಂಚಕ್ಕೆ ಬಂದ ಮೀನಾಕ್ಷಿ ಕಣ್ತೆರೆದು ನೋಡಿದರೆ ಬೆಳಗ್ಗಿನ ಗಂಟೆ ಎಂಟಾಗಿತ್ತು....ಇದುವರೆಗೆ ಕಂಡದೆಲ್ಲ ಒಂದು ಕನಸಾಗಿತ್ತು ಎಂದು ಅರಿತ ಅವಳ ಮುಖದಲ್ಲಿ ಸಂಕಟ ಮತ್ತು ದುಃಖ ಎರಡು ಉಕ್ಕಿಬಂದಿತ್ತು.ಸುತ್ತಲೂ ತಿಕ್ಕಿನೆರೆದಿರುವುದು ಹಿಂದಿನ ದಿನ ಕಂಡ ಅದೇ ಜನರು, ಅದೇ ಮುಖಭಾವ....
ಕಣ್ಣುಗಳನ್ನು ಉಜ್ಜಿ ಕುಳಿತುಕೊಂಡ ಅವಳಿಗೆ ಆ ಹಾಡು ಪುನಃ ಕೇಳಿಬರುತ್ತಿತ್ತು. ಮೆಲ್ಲನೆ ಎದ್ದು ಹಾಡು ಕೇಳಿಬರುತ್ತಿರುವ ದಿಕ್ಕಿಗೆ ಅವಳು ಹೆಜ್ಜೆ ಹಾಕಿದಳು.ಅಲ್ಲಿ ಮುದುಕನೊಬ್ಬ ಕುಳಿತು ಈ ಹಾಡನ್ನು ತಾಳ , ಶ್ರುತಿ,ರಾಗವನ್ನು ಸೇರಿಸಿ ಇಂಪಾಗಿ ಹಾಡುತ್ತಿದ್ದ ,
ಶಾಲಾ ಪುಸ್ತಕದಲ್ಲಿ ಬರೆದಿರುವ ದ. ರಾ ಬೇಂದ್ರೆ ಯವರ ಈ ಹಾಡನ್ನು ಕೇಳಲು ಸುತ್ತಲೂ ಕುಳಿತಿರುವ ಚಿಕ್ಕ ಪುಟ್ಟ ಪುಟಾಣಿ ಮಕ್ಕಳು, ಅವರ ನಡುವೆ ತಲೆ ಎತ್ತಿ ಇಣುಕಿ ನೋಡುತ್ತಿರುವ ಮೀನು....
ಮೀನಾಕ್ಷಿಯನ್ನು ನೋಡಿದ ಅವಳು ಕೈ ಬೀಸಿ ಹತ್ತಿರ ಓಡಿ ಬಂದಳು,
"ಮೀನಾಕ್ಷಿ ನೀನು ಇಲ್ಲಿ ಇದ್ದೀಯಾ..!!" ಎಂದು ಮುಗುಳ್ನಗುತ್ತಾ ಓಡಿಬರುತಿದ್ದ ಮೀನುವನ್ನು ನೋಡಿದ ಮೀನಾಕ್ಷಿ ಯ ಕಣ್ಣಾಲಿಗಳಲ್ಲಿ ಸಂತಸದ ನೀರ ಹನಿಗಳು ಸಾಲುಗಟ್ಟಿದವು....ಮನಸ್ಸಲ್ಲಿರುವ ದುಃಖ ಅದೆಲ್ಲೋ ಮಾಯವಾಗಿ... ತನ್ನ ಸೂಕ್ಷ್ಮ ಮನದ ಅಂತರಾಳವು ತನ್ನೊಂದಿಗೆ ಸಂತೋಷದ ಪಿಸುಮಾತಾಡಿತು...
ನಿನ್ನೆ ಕಂಡ ಸುಮಧುರ ಕನಸಿನ ನಿಮಿಷ ಗಳನ್ನು ನಿರೂಪಿಸುತ್ತಾ ಅವರು ಮತ್ತೆ ಹೊರ ನಡೆದರು....
ಹೊರಗಡೆ ಗುಡುಗು ,ಮಿಂಚು, ಗಾಳಿಯೊಂದಿಗೆ ಮಳೆಯ ಆರ್ಭಟ ಮತ್ತೆ ಮುಂದುವರಿಯುತ್ತಿತ್ತು...