ಫೇಸ್ಬುಕ್ ನಲ್ಲಿ ಪ್ರೀತಿ ಪ್ರೇಮ...
ಫೇಸ್ಬುಕ್ ನಲ್ಲಿ ಪ್ರೀತಿ ಪ್ರೇಮ...
ಪ್ರೀತಿಗೆ ಮೊದಲಿನಿಂದಲೂ ಫೇಸ್ಬುಕ್ ಹುಚ್ಚು. ಬೆಳಿಗ್ಗೆ ಎದ್ದ ತಕ್ಷಣವೇ ಅವಳು ನೋಡುವುದು ಫೇಸ್ಬುಕ್ನ ಮುಖವನ್ನೇ! ತನಗೆ ಬಂದ ಫ್ರೆಂಡ್ ರಿಕ್ವೆಸ್ಟ್ ಅನ್ನು ಅಳೆದೂ ತೂಗಿ ಒಪ್ಪಿಗೆ ನೀಡಿ, ನಂತರ ಸ್ನೇಹಿತರಿಂದ ಬಂದ ಪೋಸ್ಟ್ಗಳಿಗೆ ಪಟಪಟನೆ ಲೈಕ್ ಕಮೆಂಟ್ ಕೊಟ್ಟು, ನಂತರ ಇನ್ಸ್ಟಾಗ್ರಾಮ್ ನಲ್ಲಿ ಒಂದು ಸುತ್ತು ಹಾಕಿದರೇನೇ ಅವಳಿಗೆ ಮುಂದಿನ ಕೆಲಸ ಮಾಡಬೇಕು ಎಂದೆನಿಸುವುದು! ಮೊಬೈಲ್ ಚಾರ್ಜ್ ಇಲ್ಲದೆಯೋ ಅಥವಾ ಕೆಲಸಕ್ಕೆ ಬೇಗ ಹೋಗಬೇಕೆಂದೋ ಫೇಸ್ಬುಕ್ ನೋಡದಿದ್ದರೆ ಅವಳಿಗೆ ಏನೂ ಮಾಡಲು ಹುರುಪೇ ಇರುವುದಿಲ್ಲ. ಇನ್ನು ಮಧ್ಯಾಹ್ನ ಬಂತೆಂದರೆ ಆಫೀಸಿನಲ್ಲಿ ಬೇಗಬೇಗನೆ ಊಟವನ್ನು ಮುಗಿಸಿ, ಒಂದೆರಡು ಸೆಲ್ಫಿ ಕ್ಲಿಕ್ಕಿಸಿ, ಫೇಸ್ಬುಕ್ ಇನ್ಸ್ಟಾಗ್ರಾಮ್ ಗಳಿಗೆ ಫೋಟೋ ಅಪ್ಲೋಡ್ ಮಾಡಿದರೇನೇ ಅವಳಿಗೆ ಸಮಾಧಾನ.
ಇವಳು ಆತುರದಲ್ಲಿ ಎಲ್ಲರಿಗೂ ಒಂದೊಂದು ಲೈಕ್ ಕಮೆಂಟ್ ಕೊಟ್ಟಂತೆ, ಫೇಸ್ಬುಕ್ ಸ್ನೇಹಿತರೂ ಸಹ ಕೊಡಬಹುದೇನೋ ಎಂಬ ಯೋಚನೆಯನ್ನು ಅವಳು ಮಾಡುವುದಿಲ್ಲ! ಫೋಟೋ ಅಪ್ಲೋಡ್ ಮಾಡಿದ ಹತ್ತೇ ನಿಮಿಷಕ್ಕೆ ತನ್ನ ಫೋಟೋಗೆ ಏನು ಕಮೆಂಟ್ ಬಂತು, ಎಷ್ಟು ಲೈಕ್ ಬಂತೆಂದು ಎಣಿಸುತ್ತಾ ಕೂರುತ್ತಾಳೆ. ಈ ಮಹಾನ್ ಕೆಲಸ ಮಾಡುವಾಗ ಒಂದೆರಡು ಸಲ ಅವಳ ಬಾಸ್ ಕೈಯಲ್ಲಿ ಸಿಕ್ಕಿಯೂ ಹಾಕಿಕೊಂಡಿದ್ದಾಳೆ. ಆದರೂ "ನಾಯಿ ಬಾಲ ಡೊಂಕೆ" ಎನ್ನುವ ಹಾಗೆ ಅವಳ ಫೇಸ್ಬುಕ್ ಹುಚ್ಚು ಇಲ್ಲಿಯವರೆಗೂ ಕಡಿಮೆಯಾಗಿಲ್ಲ. ಎಲ್ಲಿಗೇ ಹೋದರೂ ಆ ಸ್ಥಳದ ಬಗ್ಗೆ ಒಂದೆರಡು ಮಾಹಿತಿಗಳನ್ನು ಹಾಕಿ, ನಂತರ ತನ್ನ ಚಂದದ ಫೋಟೋಗಳನ್ನು ಅಪ್ಲೋಡ್ ಮಾಡುತ್ತಾಳೆ. ಇವಳ ಹಿಂಬಾಲಕರು ಸಹ ಆ ಫೋಟೋ ಚೆನ್ನಾಗಿತ್ತು, ಈ ಪೋಸು ಚೆನ್ನಾಗಿತ್ತು, ನೀವು ಹೂವು ಮುಡಿದರೆ ಚೆಂದ, ದೇವಸ್ಥಾನದಲ್ಲಿ ಸೀರೆಯುಟ್ಟು ತೆಗೆಸಿಕೊಂಡ ಫೋಟೋ ಚೆನ್ನ ಎಂದು ಹೊಗಳಿ ಇವಳನ್ನು ಅಟ್ಟಕ್ಕೇರಿಸುತ್ತಾರೆ.
ಪ್ರೀತಿಯೂ ಅಷ್ಟೇ ಯಾರು ಏನೇ ಕಮೆಂಟ್ ಮಾಡಿದರೂ ಅದೇ ನಿಜವೆಂದು ನಂಬಿ ಖುಷಿಯಿಂದ ಪ್ರತ್ಯುತ್ತರಿಸುತ್ತಾಳೆ. ಹೀಗೆಯೇ ಒಂದು ದಿನ ಪ್ರೇಮ್ ಎಂಬುವ ಅಕೌಂಟ್ ನಿಂದ ಫ್ರೆಂಡ್ ರಿಕ್ವೆಸ್ಟ್ ಇವಳಿಗೆ ಬರುತ್ತದೆ. ಹೊಸ ರಿಕ್ವೆಸ್ಟ್ ಅನ್ನು ಒಪ್ಪುವುದಾ ಬೇಡವಾ ಎಂದು ಕೂಲಂಕುಶವಾಗಿ ಯೋಚಿಸಿ ಅಂತೂ ಒಪ್ಪಿದಳು ಪ್ರೀತಿ. ಪ್ರೇಮ್ ಎಂಬ ಯುವಕ ಪ್ರೀತಿಗೆ ಪರಿಚಯವಾದ ದಿನವೇ ಅವಳಿಗೆ ಮೆಸೆಂಜರ್ ಮೂಲಕ ಗುಡ್ ಮಾರ್ನಿಂಗ್, ಗುಡ್ ನೈಟ್ ಮೆಸೇಜ್ ಕಳುಹಿಸಿದ. ನೋಡಲು ಫೇಸ್ಬುಕ್ ಫೋಟೋಗಳಲ್ಲಿ ಒಳ್ಳೆಯವನಾಗಿ ಕಂಡಿದ್ದರಿಂದ ಇವಳೂ ಒಂದೆರಡು ಮೆಸೇಜ್ ಗಳಿಗೆ ಉತ್ತರಿಸಿದಳು. ಇದಕ್ಕೆ ಕಾಯುತ್ತಿದ್ದವನಂತೆ ಪ್ರೇಮ್ ದಿನವೂ ಗುಡ್ ಮಾರ್ನಿಂಗ್, ಗುಡ್ ನೈಟ್ ಮೆಸೇಜುಗಳನ್ನು ಕಳುಹಿಸಲು ಪ್ರಾರಂಭಿಸಿದ. ಮತ್ತೂ ಸುಮ್ಮನಿದ್ದರೆ ಇವನ ಕಾಟ ತಡೆಯುವುದಕ್ಕೆ ಆಗುವುದಿಲ್ಲವೆಂದು ರಿಪ್ಲೈ ಮಾಡಲು ನಿಲ್ಲಿಸಿಬಿಟ್ಟಳು ಪ್ರೀತಿ.
ಹೇಗಾದರೂ ಸರಿಯೇ ಮತ್ತೆ ಇವಳ ಸ್ನೇಹವನ್ನು ಸಂಪಾದಿಸಬೇಕೆಂದು ಹಠಕ್ಕೆ ಬಿದ್ದ ಪ್ರೇಮ್. ಪ್ರೀತಿಯ ಅಕೌಂಟ್ ನಲ್ಲಿದ್ದ ಎಲ್ಲಾ ಪೋಸ್ಟ್ಗಳನ್ನು ಒಂದೆರಡು ದಿನ ಗಮನಿಸಿದ. ಅವಳು ಅಪ್ಲೋಡ್ ಮಾಡುತ್ತಿದ್ದ ಫೋಟೋಗಳನ್ನು ಒಂದೂ ಬಿಡದೆ ನೋಡಿದ. ನಂತರ ಒಂದು ಚೆಂದನೆಯ ಪ್ಲಾನ್ ಅನ್ನು ಹೆಣೆದ. ಪ್ರೀತಿಗೆ ಮೊದಲಿನಿಂದಲೂ ದೇವರು ಎಂದರೆ ಭಯ-ಭಕ್ತಿ ಜಾಸ್ತಿ. ಹಾಗಾಗಿ ಅವಳ ಎಷ್ಟೋ ಫೋಟೋಗಳು ದೇವಸ್ಥಾನದ ಸುತ್ತಮುತ್ತಲೇ ಇರುತ್ತಿತ್ತು. ಜೊತೆಗೆ ಹಬ್ಬ ಹರಿದಿನಗಳು ಎಂದರೆ, ಅಂತಹ ದಿನಗಳಲ್ಲಿ ಚಂದದ ವರ್ಣಮಯ ಸೀರೆಗಳನ್ನು ಉಟ್ಟು, ಫೋಟೋ ಕ್ಲಿಕ್ಕಿಸಿ, ಅವುಗಳನ್ನ ಫೇಸ್ಬುಕ್ ನಲ್ಲಿ ಹಾಕುತ್ತಿದ್ದಳು. ಇದರ ಮೂಲಕ ಪ್ರೇಮ್ ಗೆ ಗೊತ್ತಾಯ್ತು ಅವಳು ಸಂಪ್ರದಾಯಸ್ಥ ಕುಟುಂಬದ ಹೆಣ್ಣು ಮಗಳು ಎಂದು.
ಆದ್ದರಿಂದ ಅಂದಿನಿಂದ ತಾನೂ ದೇವಸ್ಥಾನದ ಮುಂದೆ, ಅಕ್ಕಪಕ್ಕದಲ್ಲಿ ನಿಂತ ಫೋಟೋಗಳನ್ನು ಫೇಸ್ಬುಕ್ ನಲ್ಲಿ ಹಾಕಲು ಶುರು ಮಾಡಿದನು. ಜೊತೆಗೆ ತಾನು ಭೇಟಿ ಕೊಟ್ಟ ದೇವಸ್ಥಾನಗಳ ಬಗ್ಗೆ ತನಗೆ ಗೊತ್ತಿರುವಂತಹ ಮಾಹಿತಿಗಳನ್ನು, ಫೋಟೋದೊಂದಿಗೆ ಹಂಚಿಕೊಳ್ಳುತ್ತಿದ್ದನು. ಶುದ್ಧ ಬಿಳಿ ಬಣ್ಣದ ಪಂಚೆಯನ್ನು, ಫೋಟೋಗೆ ತಕ್ಕಂತಹ ಬಣ್ಣ ಬಣ್ಣದ ಶರ್ಟುಗಳನ್ನು ತೊಟ್ಟು, ಕೆಲವೊಮ್ಮೆ ನಾಮ- ವಿಭೂತಿಗಳನ್ನು ಹಾಕಿ, ಫೋಟೋಗಳನ್ನು ಕ್ಲಿಕ್ಕಿಸಿ, ತನ್ನ ಖಾತೆಗಳಿಗೆ ಹಾಕಲು ಪ್ರಾರಂಭಿಸಿದನು. ಮೊದಮೊದಲು ನೋಡಿದರೂ ನೋಡಿದವಳಂತೆ ಇರುತ್ತಿದ್ದ ಪ್ರೀತಿ, ಪದೇ ಪದೇ ಅವನ ಫೋಟೋ, ಅಪ್ಡೇಟ್ಸ್ ಬಂದಾಗ ಗಮನಹರಿಸಲು ಶುರು ಮಾಡಿದಳು. ಅವನ ಅಭಿರುಚಿ, ದೇವರ ಬಗೆಗಿನ ನಂಬಿಕೆ, ಶಾಸ್ತ್ರ-ಸಂಪ್ರದಾಯಗಳನ್ನು ಬಿಂಬಿಸುವ ಫೋಟೋಗಳನ್ನು ನೋಡಿ, ತನಗೆ ಗೊತ್ತಿಲ್ಲದೆ ಅವನೆಡೆಗೆ ಆಕರ್ಷಿತಳಾದಳು.
ಕ್ರಮೇಣ ಮತ್ತೆ ಗೆಳೆತನ ಅವರಿಬ್ಬರಲ್ಲಿ ಚಿಗುರೊಡೆಯಿತು. ಫೋನ್ ನಂಬರ್ ಗಳ ವಿನಿಮಯವಾಯಿತು. ಇಬ್ಬರ ರುಚಿ-ಅಭಿರುಚಿಗಳು ಒಂದೇ, ಜೊತೆಗೆ ಇಬ್ಬರೂ ಕೆಲಸದಲ್ಲಿರುವುದರಿಂದ, ತಮ್ಮ ಪ್ರೀತಿ ಪೋಷಕರಿಗೆ ಗೊತ್ತಾದರೂ ಚಿಂತೆಯಿಲ್ಲ ಎಂದು ಭಾವಿಸಿದರು. ಆದರೆ ಹೇಳದೇ ಉಳಿದಿರುವ ಬಹುದೊಡ್ಡ ಸತ್ಯ ಪ್ರೇಮ್ ನಲ್ಲಿದೆ ಎಂದು ಗೊತ್ತಾಗಲು ಪ್ರೀತಿಗೆ ಒಂದು ವರ್ಷ ಬೇಕಾಯಿತು!! ಅಷ್ಟರೊಳಗೆ ಅವರ ಪ್ರೀತಿಯ ಸಸಿ ದೊಡ್ಡದಾಗಿ ಮರವಾಗಿತ್ತು. ಇನ್ನು ತನ್ನ ಮದುವೆಯೇನಿದ್ದರೂ ಪ್ರೇಮ್ ನೊಂದಿಗೆ ಮಾತ್ರ ಎಂಬಷ್ಟರ ಮಟ್ಟಿಗೆ ಪ್ರೀತಿ ಅವನಿಗೆ ಮನಸ್ಸು ಕೊಟ್ಟಿದ್ದಳು. ಹೀಗೆಯೇ ಒಂದು ರಜೆಯ ದಿನ ಎಂದಿನಂತೆ ಪ್ರೀತಿಗೆ ಸಂಜೆ ಪಾರ್ಕಿಗೆ ಬಾ ಎಂದು ಕರೆದ ಪ್ರೇಮ್, ಗಟ್ಟಿ ಮನಸ್ಸು ಮಾಡಿ ಇರುವ ವಿಷಯವನ್ನು ಹೇಳಬೇಕೆಂದು ನಿರ್ಧರಿಸಿದನು.
ಇದಾವುದರ ಪರಿವೇ ಇಲ್ಲದ ಪ್ರೀತಿ ಖುಷಿಯಿಂದಲೇ ಪ್ರೇಮ್ ನನ್ನು ಮಾತನಾಡಿಸಿದಳು. ಪ್ರೇಮ್ ಗಂಭೀರನಾಗಿ ಇದ್ದದ್ದು ನೋಡಿ "ಏಕೆ ಪ್ರೇಮ್, ಹುಷಾರಿಲ್ಲವಾ?" ಎಂದು ಕಾಳಜಿಯಿಂದ ಕೇಳಿದಳು. ಇದಕ್ಕುತ್ತರಿಸಿದ ಪ್ರೇಮ್, "ಪ್ರೀತಿ ಇಂದಿಗೆ ನಾವಿಬ್ಬರೂ ಪ್ರೀತಿಸಲು ಶುರು ಮಾಡಿ ಒಂದು ವರ್ಷದ ಮೇಲಾಯಿತು. ನಿನಗೆ ಗೊತ್ತಲ್ಲ ನಾನು ನಿನ್ನನ್ನು ಎಷ್ಟು ಪ್ರೀತಿಸುತ್ತೇನೆ ಅಂತ. ನಿನ್ನನ್ನು ಒಪ್ಪಲಿಲ್ಲ ಎಂದರೆ ನನ್ನ ತಂದೆ-ತಾಯಿಯನ್ನು ಬಿಟ್ಟು ಬರಲೂ ನಾನು ಸಿದ್ಧ!! ಆದರೆ ನಿನ್ನದೇ ನನಗೆ ಭಯ. ನೀನು ವಿಷಯ ಗೊತ್ತಾದ ಮೇಲೆ ಎಲ್ಲಿ ನನ್ನಿಂದ ದೂರವಾಗಿ ಬಿಡ್ತೀಯ ಅಂತ. ನಾನು ಬೇಕೆಂದು ಸತ್ಯವನ್ನು ನಿನ್ನಿಂದ ಮರೆಮಾಚಲಿಲ್ಲ. ನನ್ನ ನಂಬು, ನಾನು ಒಳ್ಳೆಯವನೇ! ನಮ್ಮಿಬ್ಬರ ಪರಿಚಯವಾದ ಹೊಸತರಲ್ಲಿ ನೀನು ಇದ್ದಕ್ಕಿದ್ದಂತೆ ಒಂದು ಸಲ ನನ್ನೊಟ್ಟಿಗೆ ಕಾರಣವೇ ಇಲ್ಲದೆ ಮಾತು ನಿಲ್ಲಿಸಿದೆ. ಮತ್ತೆ ನಿನ್ನ ಸ್ನೇಹವನ್ನು ಸಂಪಾದಿಸಲು ಈ ರೀತಿಯ ನಾಟಕವಾಡಿದೆ. ನನಗೂ ಹಿಂಸೆಯಾಯಿತು. ನಿನಗೆ ವಿಷಯ ತಿಳಿಸಬೇಕೆಂದು ಎಷ್ಟೋ ದಿನ ಅಂದುಕೊಂಡೆ. ಆದರೆ ಎಲ್ಲಿ ವಿಷಯ ಹೇಳಿದರೆ ನನ್ನ ನೀನು ಸುಳ್ಳುಗಾರನೆಂದು ಬಿಟ್ಟು ಹೋಗುತ್ತೀಯಾ ಎಂದು ಸುಮ್ಮನಾಗುತ್ತಿದ್ದೆ! ಆದರೆ ಇಂದು ನಾನು ಆ ಸತ್ಯವನ್ನು ಹೇಳಲೇಬೇಕು. ಕಾರಣ ನಮ್ಮ ಮನೆಯಲ್ಲಿ ಹುಡುಗಿ ನೋಡುವ ಕಾರ್ಯ ಶುರು ಮಾಡಿದ್ದಾರೆ!! ಮತ್ತೂ ನಾನು ಸುಮ್ಮನೆ ಕೂತರೆ, ನೀನು ನನಗೆ ಸಿಗುವುದಿಲ್ಲ. ಕ್ಷಮಿಸಿ ಬಿಡು, ನಾನು ನಿನ್ನಿಂದ ಬಹುದೊಡ್ಡ ಸತ್ಯವನ್ನು ಮುಚ್ಚಿಟ್ಟೆ, ಸಾರಿ" ಎಂದ.
ಎಲ್ಲವನ್ನು ಗಾಬರಿಯಾಗಿ ಕೇಳಿಸಿಕೊಳ್ಳುತ್ತಿದ್ದ ಪ್ರೀತಿ, "ಅದೇನು ಸತ್ಯ ಮುಚ್ಚಿಟ್ಟೆ ಎಂದು ಹೇಳು ಪ್ರೇಮ್? ನನಗೇನು ಮೋಸ ಮಾಡಿದೆ?! ಅಂತೂ ನಿನ್ನನ್ನು ನಂಬಿದ್ದಕ್ಕೆ ಬಲು ದೊಡ್ಡ ಕಾಣಿಕೆಯನ್ನು ನೀಡುತ್ತಿದ್ದೀಯ ಎನಿಸುತ್ತೆ! ಅದೇನೆಂದು ಬೇಗ ಹೇಳು!" ಎಂದು ಕಿರುಚಿದಳು. ಕೂಡಲೇ ತನ್ನ ಹುಡುಗಿಯನ್ನು ಸಮಾಧಾನಿಸಿದ ಪ್ರೇಮ್, "ಕ್ಷಮಿಸು ಪ್ರೀತಿ. ನನ್ನ ಪೂರ್ತಿ ಹೆಸರು ಪ್ರೇಮ್ ಆಂಟೊನಿ!! ಅಂದರೆ ನಾನೊಬ್ಬ ಕ್ರಿಶ್ಚಿಯನ್ ಹುಡುಗ. ಆದರೆ ನಿನ್ನ ಸ್ನೇಹ ಸಂಪಾದಿಸಲು ದೇವಸ್ಥಾನಗಳ ಮುಂದೆ ನಿಂತು ಫೋಟೋ ಹಾಕುತ್ತಾ, ನಾನೊಬ್ಬ ಹಿಂದು ಎಂದು ಬಿಂಬಿಸಿದೆ. ಆದರೆ ನಾನು ಫೋಟೋಗಳಲ್ಲಿ ಪಂಚೆ-ಶಲ್ಯ ಹಾಕಿದಂತೆ ನನಗೇನು ಅದರ ಬಗ್ಗೆ ಅಷ್ಟು ಒಲವಿಲ್ಲ. ನನಗೆ ಫಾರ್ಮಲ್ಸ್ ಅಂದರೇನೇ ಇಷ್ಟ. ನನ್ನ ತಂದೆ-ತಾಯಿ ಮತ್ತು ನಿನ್ನ ತಂದೆ-ತಾಯಿಯರನ್ನು ಹೇಗಾದರೂ ಮಾಡಿ ಒಪ್ಪಿಸುತ್ತೇನೆ. ಆದರೆ ನಾನು ಸುಳ್ಳು ಹೇಳಿದೆ ಎಂದು ನನ್ನನ್ನು ದಯವಿಟ್ಟು ಬಿಟ್ಟು ಹೋಗುವ ಮಾತು ಆಡಬೇಡ! ನಿನ್ನ ಯಾವುದೇ ರೀತಿಯ ಸಂಸ್ಕೃತಿ- ಸಂಪ್ರದಾಯಗಳಿಗೆ ನಾನು ಅಡ್ಡ ಪಡಿಸುವುದಿಲ್ಲ. ನೀನು ಹೇಗೆ ಬೇಕೋ ಹಾಗಿರಬಹುದು. ನಿನಗೆ ಯಾವಾಗ ದೇವಸ್ಥಾನಕ್ಕೆ ಹೋಗಬೇಕೆನಿಸಿದರೂ ನಾನು ಕರೆದುಕೊಂಡು ಹೋಗುತ್ತೇನೆ. ಇಬ್ಬರೂ ಸೇರಿ ಎರಡು ರೀತಿಯ ಹಬ್ಬಗಳನ್ನು ಮನೆಯಲ್ಲಿ ಆಚರಿಸೋಣ. ನಾನಾಗಲಿ ಅಥವಾ ನೀನಾಗಲಿ ಹೀಗೆಯೇ ಇರಬೇಕು ಎಂದು ಒತ್ತಡ ಹಾಕುವ ಪ್ರಮೇಯವೇ ಬರುವುದು ಬೇಡ!! ನಾವು ನಾವಾಗಿಯೇ ಇರೋಣ ಏನಂತೀಯಾ? ಪ್ಲೀಸ್ ಏನಾದರೂ ಹೇಳು ಪ್ರೀತಿ" ಎಂದನು.
ಪ್ರೀತಿಗೆ ನಿಜ ಪರಿಸ್ಥಿತಿಯ ಅರಿವಾಗುವುದಕ್ಕೆ ಸ್ವಲ್ಪ ಹೊತ್ತು ಹಿಡಿಯಿತು. ನಂತರ ನಗುತ್ತಲೇ "ಪ್ರೇಮ್ ಹೆದರಬೇಡ. ನಾನು ನಿನ್ನನ್ನು ಎಂದಿಗೂ ಬಿಟ್ಟು ಹೋಗುವುದಿಲ್ಲ. ಈ ಜಾತಿ-ಧರ್ಮಕ್ಕೆ ಮಿಗಿಲಾದುದು ಪ್ರೀತಿ ಎಂದು ತಿಳಿದವಳು ನಾನು. ಪರಿಶುದ್ಧ ಪ್ರೀತಿಗೆ ಯಾರ ಹಂಗೂ ಇಲ್ಲ. ನಾನು ನಿನ್ನನ್ನು ನಿಜವಾಗಲೂ ವ್ಯಕ್ತಿಯಾಗಿ ಪ್ರೀತಿಸುತ್ತೇನೆ ಹೊರತು ಬೇರೆ ವಿಧದಿಂದ ಅಲ್ಲ. ನೀನಾಡಿದ ಮಾತುಗಳೇ ಹೇಳುತ್ತದೆ ನೀನು ಬೇಕೆಂದು ಮಾಡಿದ ತಪ್ಪು ಇದಲ್ಲ ಎಂದು! ಹೌದು ನಾವಿಬ್ಬರೂ ಮದುವೆಯಾದ ಮೇಲೆ ಹೀಗೆಯೇ ಇರಬೇಕು, ಹಾಗೆಯೇ ಇರಬೇಕು ಎಂದು ಕಟ್ಟುಪಾಡುಗಳನ್ನು ಹಾಕದೆಯೇ, ನಮಗೆ ಯಾವುದು ಸರಿ ಎನಿಸುತ್ತದೆಯೋ ಆ ಮಾರ್ಗದಲ್ಲಿ ನಡೆಯೋಣ. ಆ ಮಾರ್ಗವು ಸತ್ಯದ ಪರವಿರಬೇಕು ಮತ್ತು ನಮ್ಮ ಪ್ರೀತಿ ದೃಢವಾಗಿ ಉಳಿದು ಎಲ್ಲದಕ್ಕೂ ಉತ್ತರವಾಗಿರಬೇಕು. ನಿನ್ನ ಅಪ್ಪ-ಅಮ್ಮನನ್ನು ಒಪ್ಪಿಸುವ ಜವಾಬ್ದಾರಿ ನಿನ್ನದು. ಆದರೆ ನನ್ನ ತಂದೆ-ತಾಯಿಯರನ್ನು ಒಪ್ಪಿಸುವ ತಲೆನೋವೇ ಬೇಡ! ಏಕೆಂದರೆ ಅವರಿಬ್ಬರೂ ಸಂತೋಷದಿಂದಲೇ ಈ ಸಂಬಂಧವನ್ನು ಒಪ್ಪುತ್ತಾರೆ ಎಂಬ ನಂಬಿಕೆ ನನಗಿದೆ!! ಕಾರಣ ಅವರಿಬ್ಬರದು ಈ ರೀತಿಯ ಮದುವೆಯೇ. ನನ್ನಮ್ಮ ಕ್ರಿಶ್ಚಿಯನ್ ಆದರೆ, ನನ್ನಪ್ಪ ಹಿಂದು!! ಇಬ್ಬರೂ ಪ್ರೀತಿಸಿಯೇ ಮದುವೆಯಾದದ್ದು. ಹಾಗಾಗಿ ಸಂತೋಷದಿಂದಲೇ ಈ ಮದುವೆಗೆ ಒಪ್ಪಿಗೆ ಸೂಚಿಸುತ್ತಾರೆ ಎಂದು ನನಗೆ ಗೊತ್ತು. ತಾವು ನಡೆದ ದಾರಿಯಲ್ಲಿಯೇ ತಮ್ಮ ಮಗಳು ನಡೆಯುತ್ತಾಳೆ ಎಂದು ತಿಳಿದರೆ ಖಂಡಿತ ಖುಷಿಪಡುತ್ತಾರೆ. ಅವರಿಬ್ಬರ ಅನ್ಯೋನ್ಯ ದಾಂಪತ್ಯವನ್ನು ನೋಡಿ, ಅವರಂತೆ ನಾನೂ ಮುಂದೆ ಇರಬೇಕೆಂದು ಆಶಿಸಿದ್ದೆ. ಆ ಕನಸು ಈಗ ನನಸಾಗಿದೆ! ನನಗೆ ನಿನ್ನಂತಹ ಒಳ್ಳೆಯ ಹುಡುಗ ಸಿಕ್ಕಿದ್ದಾನೆ. ಡೋಂಟ್ ವರಿ ನಿಮ್ಮ ತಂದೆ-ತಾಯಿಗಳಿಗೆ ಈ ಕೂಡಲೇ ವಿಷಯ ತಿಳಿಸು. ಅವರೂ ಈ ಮದುವೆಗೆ ಒಪ್ಪಿಗೆ ಕೊಡುತ್ತಾರೆ ನೋಡುತ್ತಿರು" ಎಂದು ಪ್ರೇಮ್ ನನ್ನು ಹುರಿದುಂಬಿಸಿದಳು ಪ್ರೀತಿ!"

