ಓಟು, ನಾನು ಮತ್ತು ನಾಲ್ಕು...!!
ಓಟು, ನಾನು ಮತ್ತು ನಾಲ್ಕು...!!
ಅಂತೂ ಮೇ 10, 2023ರಂದು ನಾನು ಸಹ ಬೆಂಗಳೂರಿನಿಂದ ಬಂದು ಮೈಸೂರಿನಲ್ಲಿ ಓಟು ಹಾಕಿ, "ಮತದಾನ ನನ್ನ ಹಕ್ಕು" ಎಂದು ನಿದರ್ಶಿಸಿದೆ. ಆದರೆ ಓಟು ಹಾಕಲು ನಾನು ಪರದಾಡಿದ್ದು, ಒಂದು ಹಂತಕ್ಕೆ ಅಲ್ಲಿದ್ದ ಕೆಲವರಂತೆ ನನ್ನ ಹೆಸರು ಮತ ಪಟ್ಟಿಯಲ್ಲಿ ಇಲ್ಲದ ಕಾರಣ, 'ಓಟು ಮಿಸ್ ಅನಿಸುತ್ತೆ' ಎಂದುಕೊಂಡದ್ದು, ನಿಜಕ್ಕೂ ಬೇಸರದ ಮತ್ತು ನೆನಪಿನಲ್ಲಿ ಉಳಿಯಬಹುದಾದ ಸಂಗತಿ..!!
ಅದೇಕೋ ಗೊತ್ತಿಲ್ಲ ನನಗೂ ಹಾಗೂ ಸಂಖ್ಯೆ ನಾಲಕ್ಕಿಗೂ, ಎಲ್ಲಿ ಹೋದರೂ ಒಂದು ಸಂಬಂಧ ಇದ್ದೇ ಇರುತ್ತದೆ. ಬೆಂಗಳೂರಿನಿಂದ ಬಂದಿಳಿದು, ಸುಮಾರು ನಾಲ್ಕು ಗಂಟೆಗೆ ಮತಗಟ್ಟೆಗೆ ಹೋದ ನಾನು ಮತ್ತು ನನ್ನ ಕುಟುಂಬ, ಮೊದಲಿಗೆ ಮತ ಪಟ್ಟಿಯಲ್ಲಿ ಹೆಸರನ್ನು ಹುಡುಕಲು ನಿಂತೆವು. ಹೋದ ಸಲದಂತೆ ಈ ಸಲವೂ ನನ್ನ ಅಪ್ಪ, ಅಮ್ಮ ಮತ್ತು ತಂಗಿಯ ಹೆಸರು ಒಂದು ಕೇಂದ್ರದಲ್ಲಿದ್ದರೆ ನನ್ನ ಹೆಸರು ಅಲ್ಲಿ ಸಿಗಲಿಲ್ಲ. "ಹೆಸರನ್ನು ಡಿಲೀಟ್ ಮಾಡಿಸಿದ್ದೀರಾ, ಅಥವಾ ಚೇಂಜ್ ಮಾಡಲು ಕೊಟ್ಟಿದ್ದೀರಾ" ಎಂದು ಕೇಳಿದರು.
ಹಾಗೇನೂ ಇಲ್ಲ ಎಂದಾಗ, ಮತ್ತೆ ಹುಡುಕಿದ ಸಿಬ್ಬಂದಿ "ನಿಮ್ಮ IQ ನಂಬರ್ ಚೇಂಜ್ ಆಗಿದೆ" ಎಂದು, ಚೀಟಿಯಲ್ಲಿ ನಂಬರ್ ಮತ್ತು ಕ್ರಮ ಸಂಖ್ಯೆ ನಾಲ್ಕು ಎಂದು ಬರೆದುಕೊಟ್ಟು ಪಕ್ಕದ ಕೇಂದ್ರಕ್ಕೆ ಹೋಗಲು ಹೇಳಿದರು. ಅಲ್ಲಿಂದ ಅಷ್ಟು ದೂರವಿರದಿದ್ದರೂ ಪ್ರಯಾಣದಿಂದ ಸುಸ್ತಾಗಿದ್ದ ನನಗೆ, ಸ್ವಲ್ಪ ನಡಿಗೆಯೂ ಆಯಾಸವಾದಂತೆ, ಅನಿಸಿತು. ಮಧ್ಯೆ ಮಧ್ಯೆ "ಮೇಡಂ ನಮಗೇ ಓಟು ಹಾಕಿ" ಎನ್ನುವ ಬೆಂಬಲಿಗರು ಬೇರೆ...!!
ಕೊನೆಗೆ ಮತ್ತೊಂದು ಕೇಂದ್ರಕ್ಕೆ ಹೋಗಿ "ನಂಬರ್ ಹೀಗಿದೆ ನೋಡಿ" ಎಂದು ಹೇಳಿದರೆ, ಮತ್ತದೇ ಮಾತು..!! "ಹೆಸರು ಇಲ್ಲ ಮಿಸ್ ಆಗಿದೆ, ನಿಮ್ಮ ಏರಿಯಾದ ಕೆಲವರ ಹೆಸರು ಹೀಗೆ ಆಗಿದೆ. ಈ ಲಿಸ್ಟನ್ನು ತೆಗೆದುಕೊಂಡು ಹುಡುಕಿ" ಎಂದರು. ನನ್ನಂತೆ ಓಟು ಮಾಡಲು ಬಂದು, ಸಿಗದೇ ಇರುವ ತಮ್ಮ ಹಕ್ಕಿಗಾಗಿ ಪರಿತಪಿಸುತ್ತಾ ಇದ್ದ ಕೆಲವು ಮಂದಿ ಅಲ್ಲಿದ್ದರು. ಸರದಿಯಂತೆ ಹೆಸರನ್ನು ಮಿಕ್ಸ್ ಆಗಿದ್ದ ಲಿಸ್ಟ್ನಲ್ಲಿ ಹುಡುಕುತ್ತಾ ಇದ್ದೆವು. ನನಗಂತೂ ಈ ಚೆಂದಕ್ಕೆ ನಾನು ಬೆಂಗಳೂರಿನಿಂದ ಬರಬೇಕಾಯಿತೇ ಎಂದು ಅಲ್ಲಿದ್ದ ಮಂದಿಯನ್ನು ಕೇಳಿ, "ಬಿಡಿ ಹೋದರೆ ಅವರಿಗೆ ಒಂದು ಓಟು ಲಾಸು" ಎಂದು ಹೇಳಿ ಸುಮ್ಮನಾದೆ..!!
ಇಷ್ಟೆಲ್ಲಾ ನಡೆಯುವಾಗ ಸಮಯ ಮೀರುತ್ತಾ ಇತ್ತು. ನನ್ನ ಅಪ್ಪ, ಅಮ್ಮ ಮತ್ತು ತಂಗಿ ಕ್ಷಣಮಾತ್ರದಲ್ಲಿ ಹೋಗಿ ಓಟನ್ನು ಹಾಕಿ ಬಂದು, ಸಿಗದೇ ಇದ್ದ ನನ್ನ ಹೆಸರಿಗಾಗಿ ಕಾಯುತ್ತಾ ಕೂತಿದ್ದರು. ಇದೆಲ್ಲಾ ನೋಡಿ ಸುಸ್ತಿನ ಜೊತೆಗೆ ಬೇಸರವೂ ನನಗಾಗಿತ್ತು. ನನ್ನ ತಂಗಿ ಮತ್ತೆ ಹಿಂದಿನ ಕೇಂದ್ರಕ್ಕೆ ಹೋಗಿ, "ಬದಲಾದ IQ ನಂಬರ್ ಅನ್ನು ಕೊಡಿ, ಏಕೆಂದರೆ ಅಲ್ಲಿಯೂ ಅವಳ ಹೆಸರು ಸಿಗುತ್ತಿಲ್ಲ" ಎಂದಾಗ ಪುಣ್ಯಕ್ಕೆ ಅಲ್ಲಿದ್ದವರು ಪೂರ್ತಿ ಡೀಟೇಲ್ಸ್ ಕೊಟ್ಟರು.
ಆ ಡೀಟೇಲ್ಸ್ ಅನ್ನು ತೆಗೆದುಕೊಂಡು ಮತ್ತೆ ಈ ಕೇಂದ್ರಕ್ಕೆ ತಂದು ತೋರಿಸಿದಾಗ, ಅಂತೂ ನಾಪತ್ತೆಯಾಗಿದ್ದ ನನ್ನ ಹೆಸರು ಅಂತಿಮವಾಗಿ ಸಿಕ್ಕಿತು..!! ಹೆಸರು ಸಿಕ್ಕದೇ ಬಂದ ದಾರಿಗೆ ಅರ್ಥವಿಲ್ಲ ಎಂದು ಹಿಂದಿರುಗುತ್ತಿದ್ದ ಕೆಲವು ಜನರ ನಡುವೆ, "ಅಬ್ಬಾ ನನ್ನ ಹೆಸರು ಸಿಕ್ಕಿತು..!!" ಎಂಬ ನೆಮ್ಮದಿಯಲ್ಲಿ, ಸತತ ಒಂದು ಗಂಟೆಯ ಹುಡುಕಾಟದ ನಂತರ ಓಟು ಚಲಾಯಿಸಲು ಮತಗಟ್ಟೆ ಒಳಗೆ ಹೋದೆ.
ಅಲ್ಲಿ ಕ್ರಮ ಸಂಖ್ಯೆ ನಾಲ್ಕರ ಮುಂದೆ ನನ್ನ ಹೆಸರಿತ್ತು. ಅಲ್ಲಿದ್ದ ಮಂದಿ ಆಶ್ಚರ್ಯದಿಂದ, "ಅಚಲ ಎಂದರೆ ನೀವೇನಾ? ಎಷ್ಟೋ ಜನ ಇದು ನನ್ನ ಹೆಸರಾ, ಎಂದು ಕೇಳಿಕೊಂಡು ಬಂದರು. ಕ್ರಮ ಸಂಖ್ಯೆ ನಾಲ್ಕರಲ್ಲಿ ಇರುವ ನಿಜವಾದ ಅಚಲ ಬರುತ್ತಾರಾ, ಎಂದು ಕಾಯುತ್ತಿದ್ದೆವು. ಅಂತೂ ನೀವು ಬಂದುಬಿಟ್ಟಿರಿ..!!" ಎಂದಾಗ "ಓಹೋ ಈ ನಾಲ್ಕರ ನಂಟು ನನಗೆ ಈ ಮಟ್ಟಿಗೆ ಇದೆಯೇ..." ಎಂದು ಖುಷಿಯಿಂದ ಹೋಗಿ ಮತ ಚಲಾಯಿಸಿದೆ. ಸದ್ಯ ನನ್ನ ತೋರು ಬೆರಳು ಖಾಲಿ ಉಳಿಯುವ ಪ್ರಸಂಗ ಬರಲಿಲ್ಲವಲ್ಲ ಎಂದು ಸಮಾಧಾನಗೊಂಡು, ಮನೆಗೆ ಹಿಂತಿರುಗಿದೆವು.
ಆದರೆ ಕೊನೆಗೆ ಪ್ರಶ್ನೆಯಾಗಿ ಉಳಿದಿದ್ದು ಒಂದೇ. ಕೆಲವರು ಓಟು ಹಾಕುವುದಕ್ಕೆ ಇಷ್ಟವಿಲ್ಲದೆಯೋ, ದೂರ ಪ್ರಯಾಣ ಮಾಡಬೇಕೆಂದೋ ಮತಗಟ್ಟೆಗೆ ಹೋಗುವುದಿಲ್ಲ. ಅವರದೆಲ್ಲ ಓಟು ಮಿಸ್ ಆಗುತ್ತದೆ. ಆದರೆ ಆಸಕ್ತಿಯಿಂದ, ಜವಾಬ್ದಾರಿಯಿಂದ "ನನ್ನ ಮತ ನನ್ನ ಹಕ್ಕು" ಎಂದು ಹೋಗುವ ಜನರಿಗೂ ಈ ರೀತಿ ರೆಕಾರ್ಡ್ಸ್ ಕಾಣೆಯಾದ ಕಾರಣ, ಮತ ಚಲಾಯಿಸುವುದಕ್ಕೆ ಆಗದೇ ಇರುವುದು ನಿಜಕ್ಕೂ ಖೇದನೀಯ..!!
ಅಮೆರಿಕಾದಲ್ಲಿರುವ ಒಬ್ಬ ವ್ಯಕ್ತಿಯು ಒಂದೂವರೆ ಲಕ್ಷ ಖರ್ಚು ಮಾಡಿಕೊಂಡು ಬಂದು, ಮತ ಪಟ್ಟಿಯಲ್ಲಿ ತನ್ನ ಹೆಸರಿಲ್ಲದ ಕಾರಣ ಮತ ಚಲಾವಣೆ ಮಾಡದೇ ಬೇಸರಗೊಂಡಿದ್ದು ಈ ಸಂದರ್ಭದಲ್ಲಿ ನೆನೆಯಬಹುದು. ಸಂಬಂಧ ಪಟ್ಟವರು ಮುಂದಿನ ಎಲೆಕ್ಷನ್ ದಿನಗಳಲ್ಲಾದರೂ ಸರಿಯಾಗಿ ಕಾರ್ಯನಿರ್ವಹಿಸಿದರೆ, ಉತ್ತಮ ನಾಯಕನನ್ನು ಇನ್ನೂ ಸರಿಯಾದ ರೀತಿಯಲ್ಲಿ ಆರಿಸುವುದಕ್ಕೆ ಸಹಾಯಕವಾಗುತ್ತದೆ.
