ಮರೆಯಾದ ಆಸರೆ..!!
ಮರೆಯಾದ ಆಸರೆ..!!
ಗಂಡನ ಸತತ ಅನಾರೋಗ್ಯದಿಂದ ಕಂಗೆಟ್ಟಿದ್ದ ಆಕೆ, ಆಸ್ತಿಕಳಾಗಿ ಮಾರ್ಪಟ್ಟಿದ್ದಳು. ಪೂಜೆ, ವ್ರತ, ದೇವರ ದರ್ಶನ, ದೇವಸ್ಥಾನದ ಭೇಟಿ, ಇವೆಲ್ಲವೂ ಅವಳ ದಿನಚರಿಯಲ್ಲಿ ಸೇರಿಕೊಂಡು ಬಿಟ್ಟವು. ಪದೇ ಪದೇ ಕೆಡುತ್ತಿದ್ದ ಗಂಡನ ಆರೋಗ್ಯದಿಂದ, ದಿನೇ ದಿನೇ ಸೊರಗುತ್ತಿದ್ದಳು ಆಕೆ. ಜೊತೆಗೆ ಎರಡು ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ಬೇರೆ..!
ಗೃಹಿಣಿಯಾದ ಆಕೆಗೆ ಮುಂದೆ ಹೇಗೆ ತಮ್ಮ ಜೀವನವೆಂಬುದೇ ದೊಡ್ಡ ಯೋಚನೆಯಾಗಿತ್ತು. ಈ ಯೋಚನೆಯಲ್ಲೇ ಕಂಗೆಟ್ಟ ಅವಳು, ಅಂದು ಸಂಜೆ ದೇವರಿಗೆ ಪೂಜೆ ಮಾಡಿ ಹಣೆಗೆ ಕುಂಕುಮವಿಡುವಾಗ ಭರಣಿ ಕೈ ಜಾರಿ ಕೆಳಗೆ ಬಿದ್ದಿತು. ಮುಂದೆ ಏನು ಗ್ರಹಚಾರ ಕಾದಿದೆಯೋ ಎಂದು ಚಿಂತಿತಳಾದಳು ಆಕೆ. ಆದರೆ ಅವಳ ಸುಪ್ತ ಮನಸ್ಸು, "ಚಿಂತಿಸಬೇಡ ಅದೇನು ಅಪಶಕುನವಲ್ಲ. ನಿಶ್ಚಿಂತೆಯಿಂದ ಪ್ರಾರ್ಥನೆ ಮಾಡು" ಎಂದಿತು.
ಮಾರನೇ ದಿನ ಸೂರ್ಯನು ಆಗಸದಲ್ಲಿ ಮೂಡಲು, "ಇದೇಕೆ ಇಷ್ಟು ಹೊತ್ತಾದರೂ ತನ್ನಾಕೆ ಎದ್ದಿಲ್ಲ..! ಗಂಟೆ ಬೇರೆ ಎಂಟಾಯ್ತು. ಇನ್ನೂ ಇವಳಿಗೆ ಬೆಳಿಗ್ಗೆ ಆಗಲಿಲ್ಲವೇ..?!" ಎಂದು ಎಚ್ಚರಿಸಿದ ಆಕೆಯ ಗಂಡ.
ಎಚ್ಚರಿಸಲು ಅವಳೆಲ್ಲಿದ್ದಳು, ಮಲಗಿದ್ದಲ್ಲಿಯೇ ಉಸಿರು ನಿಲ್ಲಿಸಿದ್ದಳು ಆಕೆ..! ಚಿಂತೆಯಿಂದ ಚಿತೆಗೆ ಸೇರಿದ್ದಳೆ ಗೊತ್ತಿಲ್ಲ..?! ಆದರೆ ಆಕೆಯ ಪತಿ ಮಾತ್ರ ಚಿಂತಾಕ್ರಾಂತನಾಗಿ, "ದೇವರೇ, ಮುಂದೆ ಇನ್ನಾರು ತನಗೆ ಮತ್ತು ತನ್ನ ಮಕ್ಕಳಿಗೆ ಆಸರೆ..?" ಎಂದು ಕಣ್ಣೀರಿಡುತ್ತಾ ಮಮ್ಮಲ ಮರುಗಿದ...!!
