STORYMIRROR

Achala B.Henly

Abstract Classics Fantasy

4  

Achala B.Henly

Abstract Classics Fantasy

ಕ್ರಿ.ಶ 21, 22, 23ನೇ ಶತಮಾನ..?!

ಕ್ರಿ.ಶ 21, 22, 23ನೇ ಶತಮಾನ..?!

3 mins
354

ನಮ್ಮ ಕಥಾನಾಯಕ ಧೀರಜ್ ಎಂದಿನಂತೆ ಬೆಳಿಗ್ಗೆ ಬೇಗ ಎದ್ದ. ಅಂದರೆ ಸರಿಯಾಗಿ ಎಂಟು ಗಂಟೆಗೆ. ಅವನಿಗೆ ಬೇಗ ಏಳುವ ಸಮಯವೇ ಎಂಟು ಗಂಟೆ. ಆರಾಮವಾಗಿ ಏಳುವುದು ಎಂದರೆ ಮಧ್ಯಾಹ್ನ ಹನ್ನೆರಡು ಗಂಟೆಯ ಮೇಲೆಯೇ. ದಿನನಿತ್ಯ ಬೆಳಗುವ ಸೂರ್ಯ ಅವನಿರುವ ನಾಡಿನಲ್ಲಿಲ್ಲ. ಎಲ್ಲವೂ ಆಟೋಮ್ಯಾಟಿಕ್. ಎಲ್ಲವೂ ರೋಬೋಟೆಕ್. ನಮ್ಮ ಭೂಮಂಡಲದಿಂದ ಅದೆಷ್ಟೋ ಜ್ಯೋತಿರ್ವರ್ಷಗಳಷ್ಟು ಆಚೆಯಿರುವ "ಸಿಪ್ರಸ್" ಎಂಬ ಗ್ರಹದಲ್ಲಿ ವಾಸಿಸುತ್ತಿದ್ದಾನೆ. ಅವನಷ್ಟೇ ಅಲ್ಲ, ಅವನಂತೆ ಹಲವಾರು ಜನರು ಅಲ್ಲಿದ್ದಾರೆ. ಅಂದಾಜು ಒಂದೆರಡು ಲಕ್ಷ. ಇವನು ಮತ್ತು ಇವನ ಸಂಗಡಿಗರು ಅಲ್ಲಿಗೆ ಹೋದಾಗ ಇದ್ದದ್ದು ಕೇವಲ ಸಾವಿರ ಮಂದಿ ಮಾತ್ರ. ಆದರೆ ಇವನ ವಿಜ್ಞಾನಿಗಳ ಗುಂಪು ಸಾಕಷ್ಟು ಸಂಶೋಧನೆ ನಡೆಸಿ, ಹಲವು ಏಳು ಬೀಳುಗಳನ್ನು ಕಂಡು, ಹವಾಮಾನದ ವೈಪರೀತ್ಯದಿಂದ ಅಸುನೀಗುತ್ತಿದ್ದ ಜನರನ್ನು ಉಳಿಸಿಕೊಂಡಿದ್ದಾರೆ. ಅಮೀಬಾ, ಹೈಡ್ರಾ, ಬ್ಯಾಕ್ಟೀರಿಯ ಇಂತವುಗಳಲ್ಲಿ ಮಾತ್ರ ಸಾಧ್ಯವಿರುವ ಅಲೈಂಗಿಕ ಸಂತಾನೋತ್ಪತ್ತಿಯ ಮೂಲಕ ವಂಶವನ್ನು ಬೆಳೆಸಲು ಪ್ರಯತ್ನಿಸಿದ್ದಾರೆ.


ಅಸ್ವಾಭಾವಿಕವಾದ ಸಂತಾನೋತ್ಪತ್ತಿ ಮಾಡಲು ಪ್ರಯತ್ನಿಸಿದ್ದರಿಂದ ಕೆಲವು ಮಂದಿ ಅಸುನೀಗಿದರೆ, ಇನ್ನೂ ಕೆಲವರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಆದರೆ ಅವರು ಮಾಮೂಲಿ ಮಕ್ಕಳಂತೆ ಇರದೆ, ವಿಚಿತ್ರ ಮಾನವರಂತೆ ಹುಟ್ಟಿದ್ದಾರೆ. ದೇಹಕ್ಕೆ ಸ್ವಲ್ಪ ಹೆಚ್ಚೇ ಎನ್ನಬಹುದಾದ ದೊಡ್ಡ ತಲೆ, ಸಣ್ಣ ಕೈಕಾಲುಗಳು, ಜೊತೆಗೊಂದು ಚಿಕ್ಕ ಬಾಲ ಹೀಗೆ. ಇಷ್ಟು ಮಾತ್ರವಲ್ಲ ತಿಂಡಿ ಊಟಗಳನ್ನು ಮಾಡುವುದಕ್ಕೂ ಅವುಗಳಿಗೆ ಇಷ್ಟವಿಲ್ಲ. ಯಾವಾಗಲೂ ಕೆಲಸ ಕೆಲಸ ಎಂದು ತಡಕಾಡುತ್ತಲೇ ಇರುತ್ತವೆ. ಹೊಸ ಆವಿಷ್ಕಾರಗಳನ್ನು ಮಾಡುತ್ತಲೇ ಇರುತ್ತವೆ. ತೀರಾ ವಯಸ್ಸಿಗೆ ಮೀರಿದ್ದು ಯೋಚಿಸುತ್ತಿರುವುದರಿಂದ ತಲೆ ದೊಡ್ಡದಾಗಿ ಊದಿಕೊಂಡಿದ್ದರೆ, ವ್ಯಾಯಾಮವಿಲ್ಲದ ದೇಹವು ಸೊರಗಿ ಹೋಗಿ ಕೈಕಾಲು ಕಡ್ಡಿಗಳಂತಾಗಿವೆ. ರುಚಿಯಾಗಿರುವ ಊಟ ಮಾಡಲು ಈ ವಿಚಿತ್ರ ಜೀವಿಗಳಿಗೆ ಇಷ್ಟವಿಲ್ಲ. ಸದಾ ಕೆಲಸ ಕಾರ್ಯಗಳದ್ದೇ ಧ್ಯಾನ. ಹಾಗಾಗಿ ಎಲ್ಲಾ ರೀತಿಯ ಪೌಷ್ಟಿಕಾಂಶಗಳು ಒಳಗೊಂಡ ಮಾತ್ರೆಗಳನ್ನು ದಿನಕ್ಕೆ ನಾಲ್ಕು ಬಾರಿ ತೆಗೆದುಕೊಂಡರೆ ಮುಗೀತು. ಅಲ್ಲಿಗೆ ಹೊಟ್ಟೆಯೂ ತುಂಬುತ್ತದೆ, ಅಡುಗೆ ಮಾಡಿ ಪಾತ್ರೆ ತೊಳೆಯಬೇಕು ಎಂಬ ಚಿಂತೆಯು ಇರುವುದಿಲ್ಲ!


ಈ ರೀತಿ ರೋಬೋಟ್ನಂತೆ ಆಗಿರುವ ಮಾನವನಿಗೆ ಸಂಬಂಧಗಳ ಬೆಲೆಯೂ ಗೊತ್ತಿಲ್ಲ. ಅಡುಗೆ ಮನೆಗೆಲಸ ಮಾಡುವ ಚಿಂತೆಯೂ ಇಲ್ಲ. ಯಾವಾಗಲೂ ಟಾರ್ಗೆಟ್ ರೀಚ್ ಮಾಡಬೇಕು ಎನ್ನುತ್ತಾ, ಬಾಸ್ ಹಿಂದೆ ಮುಂದೆ ಓಡಾಡಿಕೊಂಡಿರುತ್ತವೆ. ಇವರೆಲ್ಲರಿಗೂ ಬಾಸ್ ಎಂದರೆ ನಮ್ಮ ಧೀರಜ್. ಮೊದಲಿನಿಂದಲೂ ಖಗೋಳ ವಿಜ್ಞಾನದಲ್ಲಿ ಆಸಕ್ತಿ ಜಾಸ್ತಿ. ಹಾಗಾಗಿ ಅದರಲ್ಲೇ ಚೆನ್ನಾಗಿ ಅಭ್ಯಾಸ ಮಾಡಿ ಒಳ್ಳೆಯ ಶ್ರೇಣಿಯಲ್ಲಿ ಓದನ್ನು ಮುಗಿಸಿದ್ದಾನೆ. ತನ್ನ ಕನಸು ಮನಸ್ಸಿನಲ್ಲೂ ಬರುತ್ತಿದ್ದ ಅಮೇರಿಕಾದ ನಾಸಾದಲ್ಲಿ ಏರೋನಾಟಿಕಲ್ ಇಂಜಿನಿಯರಿಂಗ್ ಮುಗಿಸಿ ವಿಜ್ಞಾನಿಯಾಗಿ  ಕೆಲಸಕ್ಕೆ ಸೇರಿದ್ದಾನೆ. ಅನೇಕ ವರ್ಷಗಳ ಪರಿಣತಿಯ ನಂತರ ಅಲ್ಲಿಯ ಕೆಲಸಕ್ಕೆ ರಾಜೀನಾಮೆ ನೀಡಿ, ತನ್ನದೇ ಒಂದು ಲ್ಯಾಬ್ ನಲ್ಲಿ ಅವನ ಸಂಗಡಿಗರನ್ನು ಸೇರಿಸಿಕೊಂಡು ಅಧ್ಯಯನ, ಪ್ರಯೋಗಗಳನ್ನು ನಡೆಸಿ ಪ್ರಸ್ತುತ ಈ ಹೊಸ ಗ್ರಹಕ್ಕೆ ಕಾಲಿಟ್ಟಿದ್ದಾನೆ.


ಇವನ ಪತ್ನಿ, ಮಕ್ಕಳು, ಮೊಮ್ಮಕ್ಕಳು ಭೂಮಿಯಲ್ಲೇ ವಾಸಿಸುತ್ತಿದ್ದಾರೆ. ಆದರೆ ಇವನು ಮತ್ತು ಇವನ ವಿಜ್ಞಾನಿಗಳ ಗುಂಪು "ರಿವರ್ಸ್ ಏಜಿಂಗ್" ಎಂಬ ವಿಧಾನದ ಮೂಲಕ ಇನ್ನೂ ನಲವತ್ತರ ಆಸುಪಾಸಿನಲ್ಲಿ ಇದ್ದಾರೆ. ಸಿಪ್ರಸ್ ಗ್ರಹದ ಅಧಿಪತಿಗಳಾಗಿದ್ದಾರೆ. ಈ ಗ್ರಹದಲ್ಲಿ ತಮ್ಮ ಮನೆಗಳಲ್ಲಿ ವಾಸಿಸಲು, ಸೈಟ್ಗಳಿಗೆ ಹಣ ಪಡೆದು ಹಂಚಿಕೆ ಮಾಡಿದ್ದು ಸಹ ಧೀರಜ್ನೇ. ಈ ರೀತಿ ಕೋಟ್ಯಂತರ ರೂಪಾಯಿಗಳನ್ನು ತನ್ನ ಬ್ಯಾಂಕ್ ಖಾತೆಗೆ ಸೇರಿಸಿದ್ದಾನೆ. ಸದಾ ದುಡ್ಡು ದುಡ್ಡು ಎನ್ನುತ್ತಾ ಹಪಾಹಪಿಗೆ ಬಿದ್ದ ಧೀರಜ್ ಸಂಬಂಧಗಳ ಮಹತ್ವ, ವ್ಯಕ್ತಿತ್ವ, ಒಳ್ಳೆಯತನ, ಸಂಸ್ಕಾರ, ಇವುಗಳೆಲ್ಲದರ ಅರ್ಥವನ್ನೇ ಮರೆತಿದ್ದಾನೆ. ಇವನು ಮಾತ್ರವಲ್ಲ ಇವನ ಜೊತೆಗಿರುವ ಅನೇಕ ಮಂದಿಯ ತಲೆಕೆಡಿಸಿ, ಅವರನ್ನು ಇವನಂತೆ ಯೋಚಿಸುವಂತೆ ಮಾಡಿದ್ದಾನೆ!


ಪರಿಣಾಮವಾಗಿ ಸಿಪ್ರಸ್ ಗ್ರಹದಲ್ಲಿ ಹುಟ್ಟಿರುವ ವಿಚಿತ್ರ ಮಾನವರು ನೋಡುವುದಕ್ಕೆ ಏಲಿಯನ್ಗಳಂತೆ ಇದ್ದರೂ, ಅವರಿಗೆ ಏನೂ ಚಿಂತೆ ಇಲ್ಲ!!ನೋಡುವುದಕ್ಕೆ ಹೇಗಿದ್ದರೇನು? ಜೀವನಶೈಲಿ ಕೆಟ್ಟು ಹೋದರೇನು? ದುಡಿಯುವುದೇ ಜೀವನದ ಮುಖ್ಯ ಗುರಿ ಎಂದುಕೊಂಡಿದ್ದಾರೆ ಅವರು. ನೈತಿಕತೆ ಅನೈತಿಕತೆಯ ವ್ಯತ್ಯಾಸವನ್ನು ಮರೆತು ತಮಗೆ ಇಷ್ಟ ಬಂದಂತೆ ಬಾಳುತ್ತಿದ್ದಾರೆ.


"ಇದು ಕಥೆಯ ಪ್ಲಾಟ್ ಸರ್. ಇದೇ ಕಥೆಯ ಸಾರಾಂಶ. ಮುಂದಿನ ಶತಮಾನ ಅಂತಿದ್ದರೆ ಮನುಷ್ಯರು ಹೇಗೆಲ್ಲ ಇರಬಹುದು, ಏನು ಮಾಡಬಹುದು, ಒಳ್ಳೆಯವರಾಗಿ ಈ ಭೂಮಿಯಲ್ಲಿ ಇರುತ್ತಾರಾ, ಅಥವಾ ಇನ್ನೊಂದು ಗ್ರಹದಲ್ಲಿ ವಾಸ ಮಾಡುತ್ತಾರಾ, ಸಂಬಂಧ, ಪ್ರೀತಿ ಪ್ರೇಮಕ್ಕೆ ಬೆಲೆ ಇರುತ್ತದಾ, ಮಕ್ಕಳು ಮೊಮ್ಮಕ್ಕಳು ಎಂಬ ಕಾನ್ಸೆಪ್ಟ್ ಇರುತ್ತದಾ, ಮನುಷ್ಯನ ವಯಸ್ಸು ಮುಂದೆ ಓಡುತ್ತದೆಯಾ ಅಥವಾ ನಿಂತಲ್ಲೇ ನಿಲ್ಲುತ್ತದಾ, ಹೀಗೆ ಹಲವಾರು ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕುವಲ್ಲಿ ಈ ಸಿನಿಮಾ ಸಹಾಯ ಮಾಡಬಹುದು ಪ್ರೊಡ್ಯೂಸರ್ ಸರ್!! ಹೇಗಿದೆ ಕಥೆ ಹೇಳಿ? ಏನಾದರೂ ಸ್ಕ್ರಿಪ್ಟ್ ನಲ್ಲಿ ಬದಲಾವಣೆ ಮಾಡಬೇಕಾ? ಮೊದಲನೆಯದಾಗಿ ನಿಮಗೆ ಕಥೆ ಇಷ್ಟವಾಯಿತಾ?" ಎಂದು ಕೇಳಿದ ಕಥೆಗಾರ ಮಹಂತ್.


ಎಲ್ಲವನ್ನು ಕೇಳಿಸಿಕೊಂಡ ಪ್ರೊಡ್ಯೂಸರ್ ಅಂಜನಪ್ಪ "ಮಹಂತ್, ಇದು ಈ ಕಾಲಕ್ಕೆ ಮಾಡುವ ಚಿತ್ರವಲ್ಲ. ನಮ್ಮ ಬಜೆಟ್ ಚಿಕ್ಕದು. ನೀವು ಬರೆದಿರುವ ಕಥೆ ಇಂಗ್ಲಿಷ್ ಚಿತ್ರಗಳಿಗೆ ಸರಿಹೊಂದುತ್ತವೆ! ನೀವು ಈ ಕಥೆಯನ್ನು ಚಿತ್ರವನ್ನಾಗಿ ಮಾಡಬೇಕೆಂದರೆ ಮೋಸ್ಟ್ಲಿ ಇನ್ನೂ ಐವತ್ತು ವರ್ಷಗಳು ಬೇಕಾಗಬಹುದು. ಅಲ್ಲಿಯವರೆಗೂ ನಾನಿರುತ್ತೇನೆ ಎಂಬುದೇ ಡೌಟು!ಅಕಸ್ಮಾತ್ ನೀವಿದ್ದರೆ, ನನ್ನ ಮಗನಿಗೆ ಬಂದು ಆಗ ಕಥೆ ಹೇಳಿ. ಖಂಡಿತ ದೊಡ್ಡಮಟ್ಟದಲ್ಲಿ ನಿಮ್ಮ ಕಥೆ ಚಲನಚಿತ್ರವಾಗುತ್ತದೆ. ಸದ್ಯಕ್ಕೆ ನನಗೆ ಬೇಕಿರುವುದು ಇದೇ ಶತಮಾನದ ಕಥೆ! ಅಂದರೆ ಪ್ರೀತಿ, ಪ್ರೇಮ, ಸಂಬಂಧ, ಮಕ್ಕಳು-ಮರಿ, ಪ್ರಾಣಿ-ಪಕ್ಷಿ, ಪ್ರಕೃತಿ-ಮಳೆ, ಇಂತವುಗಳಿಗೆ ಬೆಲೆ ಕಟ್ಟುವಂತಹ ಒಂದೊಳ್ಳೆಯ ಸದಭಿರುಚಿಯ ಕಥೆ. ದಯವಿಟ್ಟು ಅಂತಹ ಕಥೆಯೊಂದಿಗೆ ಮುಂದಿನ ಸಲ ಬನ್ನಿ" ಎಂದು ಕಥೆಗಾರ ಮಹಂತನನ್ನು ಬೀಳ್ಕೊಟ್ಟರು ನಿರ್ಮಾಪಕರು..!!



இந்த உள்ளடக்கத்தை மதிப்பிடவும்
உள்நுழை

Similar kannada story from Abstract