ಕೊರೊನ ಮತ್ತು ಅವನು
ಕೊರೊನ ಮತ್ತು ಅವನು


ಆತ ಬಿಂದಾಸ್ ಅನ್ನುತ್ತಾರಲ್ಲ ಹಾಗೆ ತನ್ನ ಹೆಂಡತಿ ಚಿನ್ಮಯಿ ಮತ್ತು ಮಗಳು ಚೈತನ್ಯಳೊಂದಿಗೆ ಬದುಕುತ್ತಿದ್ದವ. ಹೇಳಿಕೊಳ್ಳಲಿಕ್ಕೆ ಒಂದು ಖಾಸಗಿ ಆಫೀಸಿನಲ್ಲಿ ಕ್ಲಾರ್ಕ್ ಹುದ್ದೆಯಿತ್ತು. ಎಲ್ಲವೂ ಸರಿಯಾಗಿ ನಡೆಯುತ್ತಿದೆ ಎನ್ನುವಂತಹ ಸಮಯದಲ್ಲಿ ಅವನಿದ್ದ ಊರಿಗೂ ಕೊರೊನಾ ವೈರಸ್ ವಕ್ಕರಿಸಿತ್ತು.ರಾಜ್ಯಾದ್ಯಂತ ಲಾಕ್ ಡೌನ್ ಘೋಷಣೆಯಾಯಿತು. ಈತನ ಕಛೇರಿಗೂ ರಜೆ ಅಂತ ತಿಳಿದು ಕುಣಿದಾಡಿದ.ಕೆಲಸ ಮಾಡದೆ ಸಂಬಳ ಬರುತ್ತೆ ಅಂತಂದುಕೊಂಡ . `ಗಂಜಿ ಉಂಡಾದರೂ ಬದುಕೋಣ.ಎಲ್ಲರೂ ಲಾಕ್ ಡೌನ್ ನಿಯಮಗಳನ್ನು ತಪ್ಪದೆಪಾಲಿಸೋಣ’ ಎಂದು ಬರೆದು ತನ್ನ ಫೇಸ್ ಬುಕ್‌ಮತ್ತು ವಾಟ್ಸಾಪ್‌ಗಳಲ್ಲಿ ಸ್ಟೇಟಸ್‌ನ್ನು ಹಾಕಿದ.ಹೆಂಡತಿಯೂ ಮಗಳು ಗಂಡನ ಅದರ್ಶ ನೋಡಿ ಖುಷಿಯಾದರು.
ಮರುದಿನ ಬೆಳಿಗ್ಗೆ ತನ್ನ ಬಳಿ ಹೆಚ್ಚು ಹಣವಿಲ್ಲದ ಕಾರಣ ಹೆಂಡತಿಯ ಬಳಿಯಿದ್ದ ಐದುಸಾವಿರ ರೂಪಾಯಿಗಳನ್ನು ಮತ್ತೆ ಎಟಿಎಮ್‌ನಿಂದ ತೆಗೆದುಕೊಡುತ್ತೇನೆ ಎಂದು ತರಕಾರಿತರಲೆಂದು ಮಾರುಕಟ್ಟೆಗೆ ಹೋಗಿ ಬರೋಬ್ಬರಿ 1400 ರೂಪಾಯಿ ತೆತ್ತು ಮಟನ್ ಖರೀದಿಸಿದ. ಜೊತೆಗೆವಾರಕ್ಕಾಗುವಷ್ಟು ಹಣ್ಣು ತರಕಾರಿಗಳನ್ನು ಮತ್ತೊಂದಷ್ಟು ಡ್ರೈ ಫ್ರೂಟ್ಸ್ ಗಳನ್ನುದುಬಾರಿ ಹಣ ತೆತ್ತು ತಂದಿದ್ದ. ಎಟಿಎಮ್ ಕ್ಲೋಸ್‌ಆಗಿತ್ತು. `ಅಲ್ಲಾರೀ ಗಂಜಿ ಊಟ ಅಂತಂದು ಇಷ್ಟೊಂದು ಖರ್ಚು ಮಾಡುತ್ತೀರಲ್ಲಾ. ಸ್ವಲ್ಪ ಉಳಿಸಿಕೊಳ್ಳಿ. ಮುಂದೆ ಯಾವುದಕ್ಕಾದರೂ ಆಗುತ್ತದೆ.’ ಎಂದ ಚಿನ್ಮಯಿಯ ಮಾತಿಗೆ ಈತ ವ್ಯಂಗ್ಯವಾಗಿ ನಗುತ್ತಾ ಹೇಳಿದ. `ಅಂತಹ ಪರಿಸ್ಥಿತಿ ಬಂದಾಗ ನೋಡೋಣ ಮರಾಯ್ತಿ. ಈಗ ದುಡ್ಡಿದೆ. ಖಾಲಿಯಾದರೆ ಎಟಿಎಮ್‌ನಿಂದ ತಂದರಾಯ್ತು. ಕೊರೊನಾ ಹೀಗೆ ಇರುತ್ತಾ?ಹೆಚ್ಚೆಂದರೆ ಒಂದೆರಡು ತಿಂಗಳು. ಅಲ್ಲೀತನಕ ಬ್ಯಾಂಕಿದೆ ನಮಗೆ ಯಾಕೆ ಹೆದರುತ್ತೀ!’ ಎಂದ.
ಸ್ವಲ್ಪ ಸಮಯ ಬಿಟ್ಟು ಯಾರೋ ಕರೆದಂತಾಗಿ ಹೊರಗೆ ನೋಡಿದರೆ ಮಾಸ್ಕ್ ಹಾಕಿಕೊಂಡು ಏರಿಯಾದಲ್ಲಿನ ಇಬ್ಬರು ಪರಿಚಯದ ಹುಡುಗರು ನಿಂತಿದ್ದರು ಏನು ಎಂಬಂತೆ ನೋಡಿದವನ ಬಳಿ. ಒಬ್ಬಾತ ಹೇಳಿದ `ಸರ್ ನಾವೆಲ್ಲಾ ಒಂದಷ್ಟು ಜನ ಸೇರಿಕೊಂಡು ಅಸಹಾಯಕರಿಗೆ ನಿರ್ಗತಿಕರಿಗೆ ಒಂದಷ್ಟು ರೇಷನ್ ನೀಡೋಣ ಅಂತ ಯೋಚಿಸಿದ್ದೀವಿ. ನಿಮ್ಮಿಂದ ಸಣ್ಣ ಮಟ್ಟಿನ ಧನಸಹಾಯ ಸಿಗಬಹುದೇನೋ ಅಂತ ಬಂದೆವು’ ಎಂದ. `ಒಳ್ಳೆಯಕೆಲಸ ಆದರೆ ಈಗ ಕ್ಯಾಶ್ ಅಂತ ಇಲ್ಲ. ನಾನೇನಿಮ್ಮನ್ನು ಸಂಪರ್ಕ ಮಾಡ್ತೇನೆ ಆಯ್ತಾ..’ಎಂದು ಹೇಳಿ ಅವರನ್ನು ಸಾಗ ಹಾಕಿದ್ದ.
ನಿಜಕ್ಕೆಂದರೆ ಆತನಿಗೆ ಕೊಡುವ ಮನಸಿರಲಿಲ್ಲ. ಮರುದಿನ ಎ.ಟಿ.ಮ್ ಕಡೆ ಹೋದವನಿಗೆ ಅದು ಹಾಳಾಗಿದೆ ಎನ್ನುವ ಮಾಹಿತಿ ಸಿಕ್ಕಿತು. ಮುನ್ನೂರು ರೂಪಾಯಿ ಬಿಟ್ಟರೆಬೇರೆ ಹಣವಿಲ್ಲ ಕಿಸೆಯಲ್ಲಿ ಎನ್ನುವುದು ನೆನಪಾದರೂ ಆತ ಜಾಸ್ತಿ ತಲೆ ಕೆಡಿಸಿಕೊಳ್ಳಲಿಲ್ಲ. ಅದಾಗಿ ಎರಡು ದಿನ ಕಳೆದಿತ್ತು. ಮೊಬೈಲಿನಲ್ಲಿ ಬ್ಯಾಂಕಿಗೆ ತಿಂಗಳ ಸಂಬಳ ಕ್ರೆಡಿಟ್ ಆದ ಸಂದೇಶ ತೋರಿಸಿತು. ಖುಷಿಯಿಂದ ನೋಡುತ್ತಿರುವಂತೆ ಮೆಸೆಂಜರ್ ನಲ್ಲಿ ಈ ಬೇಸಿಗೆಯಲ್ಲಿ ಐಸ್ ಕ್ರೀಮ್ ತಿನ್ನಬೇಕೆನಿಸಿದೆಯೆ? ಹಾಗಾದರೆ ಈ ಅಕೌಂಟ್‌ಗೆ ಹಣ ಹಾಕಿ.ಮನೆ ಬಾಗಿಲಲ್ಲಿ ಐಸ್ ಕ್ರೀಮ್ ಪಡೆಯಿರಿ. ಎನ್ನುವ ಜಾಹೀರಾತು ಆಕರ್ಷಿಸಿತ್ತು. ಐಸ್ ಕ್ರೀಮಿನಿಂದ ದೂರವಿರಿ ಎಂದು ಎಲ್ಲೋ ಓದಿದ್ದು ನೆನಪಾಯಿತು. ಆದರೆ ಮಗಳಿಗೆ ಐಸ್ ಕ್ರೀಮ್ ಇಷ್ಟ ಎನ್ನುವುದು ಕೂಡನೆನಪಾಗಿ ಅವಳಿಗೆ ಈ ಲಾಕ್ ಡೌನ್ ಸಮಯದಲ್ಲಿ ಸರ್ಪ್ರೈಸ್ ಇರಲಿ ಅಂತಂದು ಕೊಳ್ಳುತ್ತಾ ತನ್ನಬಾಯಿ ಚಪಲಕ್ಕೂ ಆಗುತ್ತೆ ಎಂದುಕೊಂಡು ಅವರು ಹೇಳಿದಂತೆ 380 ರೂಪಾಯಿಗಳನ್ನು ಅವರು ಹೇಳಿದ ನಂಬರಿಗೆ ಟ್ರಾನ್ಸ್ಫರ್ ಮಾಡಿ ಅಡ್ರೆಸ್ ಕಳುಹಿಸಿದ್ದ. ಬೆನ್ನಿಗೆ ಕಾಲ್ ಬಂದಿತ್ತು.`ಪ್ರಾಸೆಸ್ ಪ್ರಾಬ್ಲಂ ಆಗಿದೆ ಸರ್. ಐಸ್‌ಕ್ರೀಮ್ ಈಗಲೇ ಕಳಿಸುತ್ತೇವೆ. ಅದಕ್ಕೆ ನಿಮ್ಮ ಮೊಬೈಲಿಗೆ ಬಂದ ಒಟಿಪಿ ಹೇಳಿ ಸರ್.’ ಅಂದಿತ್ತು. ಒಂದು ಹೆಣ್ಣು ಧ್ವನಿ.ಮಗಳೊಂದಿಗೆ ಕಾರ್ಟೂನ್ ನೋಡುತ್ತಿದ್ದವ ಧ್ವನಿ ಕೇಳಿ ಕರಗಿದವನೇ ಅದನ್ನೂ ಹೇಳಿ ಬಿಟ್ಟ. ಎರಡು ಕ್ಷಣ ಕಳೆದಿರಿಬಹುದು. ಈತನ ಖಾತೆಯಲ್ಲಿದ್ದ ಅಷ್ಟೂ ಹಣ ಡೆಬಿಟ್ ಆಗಿದೆ ಎನ್ನುವ ಮೆಸೇಜ್ ಮೊಬೈಲಿಗೆ ಬಂದಿತ್ತು. ಮೋಸ ಹೋಗಿದ್ದು ಅರಿವಾದವನ ಇಡೀ ದೇಹ ಕಂಪಿಸತೊಡಗಿತ್ತು.
ಫೋನಲ್ಲಿಯೇ ಪೋಲಿಸರಿಗೆ ವಿಷಯ ತಿಳಿಸಿದ.ಬ್ಯಾಂಕಿಗೂ ಫೋನಾಯಿಸಿದ. ಆದರೆ ಹಣ ವಾಪಾಸು ಬರುವ ಸಾಧ್ಯತೆ ದೂರವಿತ್ತು. ಕೈಯಲ್ಲಿದ್ದ ಹಣಬರಿದಾಗಿತ್ತು. ನಾಲ್ಕು ದಿನ ಕಳೆಯುವಷ್ಟರಲ್ಲಿ ತಂದ ದಿನಸಿ ಖಾಲಿಯಾಗಿತ್ತು. ಹೊಸದಾಗಿ ಏರಿಯಕ್ಕೆ ಬಂದಿದ್ದ ಕಾರಣ ಅಕ್ಕಪಕ್ಕದವರ ಬಳಿ ಸಾಲಮಾಡುವ ದಾರಿಯೂ ಕಾಣಲಿಲ್ಲ. ಹೆಂಡತಿ ಮತ್ತುಮಗಳ ಬಾಡಿದ ಮುಖ ನೋಡಿದವನ ಅಷ್ಟೂ ಅಹಂಕಾರ ಇಳಿಯ ತೊಡಗಿತ್ತು. ಸದ್ಯ ಲಾಕ್ ಡೌನ್ ತೆರವು ಮಾಡುವ ಸೂಚನೆಗಳೂ ಇರಲಿಲ್ಲ.ಮುಂದೆ ದಿನ ಕಳೆಯುವುದು ಕಷ್ಟ ಅಂತನ್ನಿಸತೊಡಗಿತು..ಚಿನ್ಮಯಿ ಹೇಳಿದಂತೆ ಒಂದಷ್ಟು ಉಳಿಸಿಕೊಂಡಿದ್ದರೆ..!
ಒಂದು ದಿನ ಕಳೆದಿತ್ತು. ಯಾರೋ ಬಾಗಿಲು ತಟ್ಟಿದಂತಹ ಶಬ್ದ. ಹೋಗಿ ಬಾಗಿಲು ತೆರೆದ.ಒಂದು ಬ್ಯಾಗ್ ತುಂಬಾ ದಿನಸಿ ಸಾಮಾಗ್ರಿಗಳನ್ನುಹಿಡಿದುಕೊಂಡು ಅದೇ ಪರಿಚಯದ ಹುಡುಗರು ನಿಂತಿದ್ದರು. ಅದರಲ್ಲೊಬ್ಬ `ಸರ್ ನಿಮ್ಮಮಗಳು ಚೈತನ್ಯ ಮತ್ತು ನನ್ನ ಮಗಳು ಇಂಚರಾ ಒಂದೇ ಕ್ಲಾಸ್ ಮೇಟ್. ಅವಳುಇಂಚರಳಿಗೆ ಸಂದೇಶ ಕಳಿಸಿದ್ದಳು. ಹಾಗಾಗಿನಿಮ್ಮ ಮನೆ ಪರಿಸ್ಥಿತಿ ಗೊತ್ತಾಯಿತು. ದಯವಿಟ್ಟು ತೆಗೆದುಕೊಳ್ಳಿ. ಸಂಕೋಚ ಬೇಡ.ಮನುಷ್ಯರು ಎಂದ ಮೇಲೆ ಒಬ್ಬರಿಗೊಬ್ಬರುಆಗಬೇಕಲ್ಲವೆ. ಎಂದು ಹೇಳಿ ದಿನಸಿಯ ಬ್ಯಾಗನ್ನು ನೀಡಿದವರೇ ಬರ‍್ತೀವಿ ಅಂತಂದು ಹೊರಟುಹೋಗಿದ್ದರು. ಬ್ಯಾಗನ್ನು ತೆಗೆದುಕೊಂಡವನ ಕಣ್ಣುಗಳಲ್ಲಿ ಕಣ್ಣೀರು ತುಂಬತೊಡಗಿತ್ತು.