ಬಿಳುಪಿನ ಬಗೆ
ಬಿಳುಪಿನ ಬಗೆ
ಕಾಮನಬಿಲ್ಲಿನ ಸೇರಿಹ ಬಣ್ಣವು
ಸುಂದರ ನೋಟವ ಕೊಡುತಿಹುದು
ಧ್ವಜದಲಿ ಹೊಂದಿಹ ಬಣ್ಣಗಳಂತೆ
ಜಗಕದು ಸಂದೇಶ ಸಾರುತಿಹುದು
ಸರಳ ಬದುಕಿನ ಸೂತ್ರಗಳಿಗೆ
ಸರಳ ನಡೆನುಡಿ ಮೇಳವು
ಬದುಕ ಮುನ್ನಡೆಸುತ ಸಾಗಲು
ಸ್ವಸ್ಥ ಬದುಕು ನಮ್ಮದು
ಪರಿಶುದ್ಧತೆಯ ಸಾಕಾರವಾಗಿಹ
ಬಣ್ಣವದು ಬಿಳಿಯದು
ಕಪಟ ಕಲ್ಮಶವರಿಯದೆ ಬದುಕಿದ
ಹಿರಿಯರೆ ನಮಗೆ ದಾರಿದೀಪವು
ಶಾಂತಿ ಬದುಕಿನ ಮೂಲಮಂತ್ರವು
ಎಂದು ನಂಬಿದ ಮಕ್ಕಳು
ಇದನೆ ಸಾರುತ ಬಾಳಿಬದುಕಿದ
ಮಹಾತ್ಮರೆ ನಮಗೆ ಆದರ್ಶವು
ಜಾತಿಮತಗಳ ಭೇದ ಮರೆತು
ಕೂಡಿ ಬಾಳಿದ ನೆಲವಿದು
ತಿಳಿಯ ನೀರಿನ ಕೊಳದ ತೆರದಿ
ಪರಿಶುದ್ಧತೆಯ ಮೆರೆದಿಹುದು
ಬಣ್ಣವೇಳದು ಸೇರಿ ಆಗಿಹ
ಬಿಳಿಯ ಬಣ್ಣವ ನೋಡಿರಿ
ಸಪ್ತಸ್ವರಗಳ ಮೇಳದಿಂದಲಿ
ಮಿಡಿವಗಾನವ ಆಲಿಸಿ
ಏಕತೆಯ ಸಾರುವ ಸಂಸ್ಕೃತಿಗೆ
ಯಾರ ದೃಷ್ಟಿಯು ಬೀಳದಿರಲಿ
ಬಾಳದಾರಿಗೆ ಬಣ್ಣ ತುಂಬುತ
ಸದಾ ಬೆಳಗುತಿರಲಿ.
