ಬದುಕಬೇಕಿದೆ ಸದಾ ಇಳೆಯ ಬಸಿರ ಹಸಿರಂತೆ.
ಬದುಕಬೇಕಿದೆ ಸದಾ ಇಳೆಯ ಬಸಿರ ಹಸಿರಂತೆ.
ಬಣ್ಣಮಯ ಬದುಕಲ್ಲಿ
ಬಿಳಿ, ಕಪ್ಪು, ಕೆಂಪು, ನೀಲ
ಹಸಿರು, ಹಳದಿ..
ಕಾಣುವ ಬಣ್ಣ ಏಳೇ,ಆದರೂ
ಅಂತರಂಗದಲ್ಲಿ
ಸಹಸ್ರಾರು ಬಣ್ಣಗಳ ಮೇಳ
ನಮ್ಮ ಬದುಕು.
ನೂರು ಕನಸಿಗೆ ಬಣ್ಣವ
ತುಂಬಿ, ಮೆರೆಸುತ
ಸಕಲವ ಮರೆಸುವ
ಹಣ ಬಣ್ಣದ ತಾಳಕೆ
ಎಲ್ಲ ಬಣ್ಣಗಳ ಸಮ್ಮಿಳಿತ..
ಹಲವು ಭವಿಷ್ಯಗಳ ಏರಿಳಿತ..
ಮುಖ್ಯವಲ್ಲ ಜೀವನದ ಬಣ್ಣ
ಯಾವುದೆಂಬುದು,
ಆಗಬೇಕಿದೆ ಸುಂದರ,
ನಿರ್ಮಲ ನೀಲಾಕಾಶದಂತೆ
ವಿಸ್ತಾರ ಹಾಗೂ ನಿರ್ಭೀತ..
ಕಪ್ಪು ಬ್ರಹ್ಮಾಂಡದಂತೆ,
ಬೆಳಕನ್ನು ಬೆಳಗಿಸುವ
ವಾತಾವರಣದಂತೆ..
ಜೀವಸೆಲೆಯಾಗಬೇಕಿದೆ..
ರಕ್ತನಾಳಗಳಲ್ಲಿ ಹರಿದು
ಕೆಂಪು ರಕ್ತದಂತೆ...
ಸದಾ ಬಿಳಿಯಾಗಿರಬೇಕು..
ಜೀವಂತವಾಗಿ ಹೊರಬರಲು
ಕಾಯುತ್ತಿರುವ
ಖಾಲಿ ಕ್ಯಾನ್ವಾಸಿನಂತೆ,
ತಟಸ್ಥ ಮತ್ತು ಸರಳ..
ಆದರೆ ಯಾವುದೇ ಬಣ್ಣ, ಚಿತ್ರ,
ಅಭಿವ್ಯಕ್ತಿಯ ಹೊರಹೊಮ್ಮುವ
ಸಾಮರ್ಥ್ಯದೊಂದಿಗೆ..
ಬದುಕಬೇಕಿದೆ ಸದಾ
ಇಳೆಯ ಬಸಿರ ಹಸಿರಂತೆ,
ಹಸಿವಿನ ಬೇಗೆಯ ತಣಿಸುವ
ಜೀವದ ಉಸಿರಿನಂತೆ..