ಅಪ್ಪ
ಅಪ್ಪ
ಸರಳತೆ ಮಾದರಿ ಜೀವನದ ಸರದಾರ
ಕಷ್ಟಪಟ್ಟು ದುಡಿದು ನಡೆಸಿದ ಸಂಸಾರ
ತನ್ನವರಿಗಾಗಿ ತನ್ನದೆಲ್ಲ ತ್ಯಾಗ ಮಾಡಿದವ
ಸಂಸ್ಕಾರ ಜೀವನ ಪಾಠವ ಕಲಿಸಿದವ||
ಅಮ್ಮನ ಪ್ರೀತಿ ಕಾಳಜಿ ಕಂಡಷ್ಟು
ಅಪ್ಪನ ಪ್ರೀತಿ ಮಮತೆ ಆರೈಕೆ ಕಾಣದು
ಅಪ್ಪನ ಪ್ರೀತಿಗೆ ಬೆಲೆ ಕಟ್ಟಲಾಗದು
ಅಳೆಯಲಾಗದು ಸಾಕಾರಮೂರ್ತಿಯ ಸಹನೆಯೆಷ್ಟೆಂದು||
ಬದುಕಿಗೆ ಮೊದಲನೇಯ ಗೆಳೆಯನಾಗಿ
ಜೀವನದ ಉತ್ಸಾಹದ ಚಿಲುಮೆಯಾಗಿ
ಈ ಬದುಕಿಗೊಂದು ಸ್ಪೂರ್ತಿಯಾಗಿ
ಸದಾ ರಕ್ಷಿಸಿ ಕಾಯುವ ಸೈನಿಕನಾಗಿ||
ಸದ್ಗುಣ ಸಂಪನ್ನ ನನ್ನ ಅಪ್ಪನು
ಆಕಾಶದಷ್ಟು ಎತ್ತರ ಪ್ರೀತಿ ಕೊಟ್ಟವನು
ಲಾಲಿಸುತ ಪಾಲನೆ ಮಾಡಿದವನು
ಈ ಜೀವನದ ಮಾರ್ಗದರ್ಶಕನು||
ಭೀಮನಷ್ಟೆ ಬಲವಂತನು ಜಗದಲಿ
ಕರ್ಣನಂತೆ ದಾನಿಯು ಗುಣದಲಿ
ಅಪ್ಪ ಜೊತೆಯಿದ್ದರೆ ನೂರಾನೆ ಬಲವು
ಹೆದರಲ್ಲ ಬಂದರೆ ಬೆಟ್ಟದಷ್ಟು ನೋವು||
ಕೇಳಿದನ್ನೆಲ್ಲಾ ಕೊಡುವ ನನ್ನ ಅಪ್ಪ ಸಾಹುಕಾರ
ಮಕ್ಕಳೆಂದರೆ ಅವನಿಗೆ ಎಲ್ಲಿಲ್ಲದ ಮಮಕಾರ
ಭರವಸೆಯ ಈ ಸೂರಿಗೆ ಆಧಾರ ಸ್ತಂಭವು
ಪ್ರೀತಿಯೊಂದೆ ತಿಳಿದ ಮುಗ್ಧ ಅಪ್ಪನ ಹೃದಯವು||
✍️ರಮ್ಯಕೃಷ್ಣಪ್ರಭು
ಮೂಡಬಿದಿರೆ
