ಹೂವು
ಹೂವು
1 min
7
ಮನೆಯಂಗಳದಿ ಚೆಲುವಾಗಿ ಅರಳಿದಳು
ಬಣ್ಣ ಬಣ್ಣದ ಬಣ್ಣದಿ ಮನವ ಸೆಳೆದಳು.
ಬಗೆ ಬಗೆ ಹೂವ ಸೊಬಗಿನ ಚೆಲುವು
ನೋಡುಗರ ಕಣ್ಮನ ಸೆಳೆದು ತಣಿವವು||
ಮುಂಜಾನೆಯ ಮಂಜಿನ ಹನಿಯಲಿ
ಮಿಂದು ರವಿಯ ಕಾಂತಿಯ ಮೃದು ಸ್ಪರ್ಶದಲಿ.
ಹೊಳೆಯುವಳು ಸಾಗರದ ಮುತ್ತಂತೆ
ಮಿನುಗುವಳು ಅಂಬರದ ತಾರೆಯಂತೆ||
ಹೂವಿನ ದಳವದು ಮೃದು ರೇಶಿಮೆಯಂತೆ
ನುಣುಪು ದುಂಬಿಯು ಸೋಕಲು ಜಾರುದಂತೆ.
ಮಧು ಹೀರಲು ತಡೆಯದು ಕಾತರವಂತೆ
ಅಂದವ ನೋಡುತ ಕುಳಿತು ಮೈಮರೆತನಂತೆ||
ಮುಡಿದರೆ ಮುಡಿ ತುಂಬಾ ಬೀರಿ ಪರಿಮಳವ
ಹರಿಯ ಪಾದಪದ್ಮಗಳ ಸ್ಪರ್ಶಿಸಿ ಸಾರ್ಥಕ ಬಾಳೆಂಬ ಭಾವವ
ಬದುಕು ಕ್ಷಣಿಕವೆಂದು ಭರವಸೆಯಿಂದ ಅರಳುತ ನಗುವ
ಸ್ವಾರ್ಥವಿಲ್ಲದೆ ಲೋಕಕೆಲ್ಲಾ ಸೌಗಂಧವನು ಪಸರಿಸುವ||
✍️ರಮ್ಯಕೃಷ್ಣಪ್ರಭು
ಮೂಡಬಿದಿರೆ
