ಉಡುಗೊರೆ
ಉಡುಗೊರೆ
ಹುಟ್ಟುಹಬ್ಬಕ್ಕೆ ಇನ್ನೂ ಒಂದು ವಾರ ಇದೆ ಎನ್ನುವಾಗಲೇ ಕಸ್ತೂರಿಯ ಮನದಲ್ಲಿ ಸಂಭ್ರಮದ, ನಿರೀಕ್ಷೆಯ ಪುಳಕಗಳು ಅಲೆಗಳಂತೆ ಏಳಲು ಆರಂಭಿಸಿದ್ದವು..ಮದುವೆಯಾದ ನಂತರ ಮೊದಲಬಾರಿಗೆ ಬರುತ್ತಿರುವ ತನ್ನ ಹುಟ್ಟಿದ ದಿನವನ್ನು ತನ್ನಿನಿಯ ಯಾವ ರೀತಿ ಆಚರಿಸುತ್ತಾನೆ ನೋಡಬೇಕು ಎನ್ನುವ ಕಾತರ . ಇಷ್ಟು ವರ್ಷ ಅಪ್ಪ, ಅಮ್ಮಂದಿರ ಜೊತೆ, ಇದ್ದ ಒಬ್ಬನೇ ಅಣ್ಣನ ಜೊತೆ, ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದ ದಿನ, ಈ ವರ್ಷ ಬೇರೆಯದೇ ಪ್ರಾಮುಖ್ಯತೆ ಪಡೆದಿತ್ತು. ಎಣ್ಣೆ ನೀರು ಹಾಕಿಕೊಂಡು, ಅಮ್ಮ ಮಾಡುತ್ತಿದ್ದ ತನ್ನಿಷ್ಟದ ತಿಂಡಿ, ಅಡಿಗೆಗಳನ್ನು ಪಟ್ಟಾಗಿ ಹೊಡೆಯುತ್ತಿದ್ದಳು. ಅಪ್ಪ ತಮ್ಮ ಮುದ್ದಿನ ಮಗಳಿಗೆ ಕೊಡುತ್ತಿದ್ದ ಹಣ ಹೊಸ ಬಟ್ಟೆ ಖರೀದಿಗೆ ಒದಗುತ್ತಿತ್ತು . ಅಣ್ಣ ಅವಳನ್ನು ಸಿನಿಮಾಗೋ , ತಿರುಗಾಡಲಿಕ್ಕೋ ಕರೆದೊಯ್ದು ಅವಳಿಗೆ ಇಷ್ಟವಾದದ್ದನ್ನು ತೆಗೆಸಿ ಕೊಡುತ್ತಿದ್ದ. ವರ್ಷದ ಅತ್ಯಂತ ಪ್ರೀತಿಯ ದಿನವೆಂದರೆ ತನ್ನ ಹುಟ್ಟುಹಬ್ಬವಾಗಿತ್ತು ಅವಳಿಗೆ.
ಈ ಆಲೋಚನೆಗಳು ಬರ್ತಿದ್ದ ಹಾಗೇ ಅದರ ಹಿಂದೆಯೇ ಬರುತ್ತಿದ್ದ ಯೋಚನಾಸರಣಿ ಅವಳ ಉತ್ಸಾಹದ ಬಲೂನನ್ನು ಒಡೆಯುತ್ತಿತ್ತು. ತನ್ನ ಒಲವಿನ ಪತಿರಾಯ ಪ್ರಶಾಂತ್ ಈಗ ಒಂದು 25......30 ದಿನಗಳಿಂದ ಮನೆ ಸೇರುತ್ತಿರುವುದು ರಾತ್ರಿ 10 ಘಂಟೆಗೆ. ಅದೂ ಕೈಯಲ್ಲಿ ಕೆಲವು ಕಡತಗಳನ್ನು ಇಟ್ಟುಕೊಂಡೇ.. ಬ್ಯಾಂಕ್ ಆಫೀಸರ್ ನ ಹೆಂಡತಿಯಾಗುವೆ ಎಂದು ಹೆಮ್ಮೆಯಿಂದ ಬೀಗಿದ್ದಳು..ನಿಯಮಿತ ಕೆಲಸದ ಅವಧಿ, ತಿಂಗಳಿಗೆರಡು ಶನಿವಾರಗಳು , ಎಲ್ಲಾ ಭಾನುವಾರಗಳು ರಜೆ ಅಂತೆಲ್ಲ ಲೆಕ್ಕ ಹಾಕಿದವಳಿಗೆ ಮದುವೆಯಾದ ಎರಡು ತಿಂಗಳಿಗೇ ನಿಜ ಪರಿಸ್ಥಿತಿಯ ಅರಿವಾಗತೊಡಗಿತ್ತು. ಪ್ರತಿದಿನ ಬೆಳಗ್ಗೆ ಬೇಗ ಹೊರಟು ರಾತ್ರಿ ಮನೆ ಸೇರುವುದು 7 ಘಂಟೆಯ ನಂತರವೇ. ಕೆಲವೊಮ್ಮೆ ರಜೆ ಇರುವ ಶನಿವಾರದಂದು ಅಥವಾ ಭಾನುವಾರಗಳೂ ಹೋಗಿದ್ದುಂಟು ಬ್ಯಾಂಕ್ ಗೆ. ಅಥವಾ ಹೋಂ ವರ್ಕ್ ಮನೆಗೇ ತಂದದ್ದೂ ಉಂಟು...ಈಗ ಒಂದು ತಿಂಗಳಿನಿಂದಲೂ ಮನೆಗೆ ಬರುವುದು ರಾತ್ರಿಯ ಊಟ ಮತ್ತು ನಿದ್ದೆಗೆ ಮಾತ್ರ... ಕೇಳಿದರೆ ಆರ್ಥಿಕ ವರ್ಷದ ಕೊನೆ, ಕೆಲಸ ವಿಪರೀತ ಎಂಬ ಉತ್ತರ. ಏಪ್ರಿಲ್ ಹತ್ತನೇ ತಾರೀಕು ಕಳೆದರೂ ಇನ್ನೂ ಕೆಲಸದ ಒತ್ತಡದಿಂದ ಬಿಡುವಿಲ್ಲ.. ಇನ್ನೂ ಒಂದು ವಾರ ಹೀಗೇ ಎನ್ನುವ ಸಮಜಾಯಿಷಿ.
ಗಂಡನಿಗೆ ನೆನಪಿರತ್ತಾ ತನ್ನ ಹುಟ್ಟುಹಬ್ಬದ ದಿನಾಂಕ? ಕಸ್ತೂರಿಯ ತಲೆಯೊಳಗೆ ಸಂದೇಹದ ಹುಳು ಗೂಡುಕಟ್ಟಿ ಮನೆ ಮಾಡಲು ಆರಂಭಿಸಿತು. ತಾನಾಗೇ ನೆನಪಿಸಲು ಅಭಿಮಾನ ಅಡ್ಡ ಬರತ್ತೆ. ಅದೂ ಅಲ್ಲದೆ ತನಗೆ ಅಷ್ಟು ಪ್ರಾಮುಖ್ಯ ಅಂತ ಅನಿಸಿದ ದಿನ ಪತಿರಾಯನಿಗೆ ಪ್ರಾಮುಖ್ಯ ಅಂತ ಅನ್ನಿಸಬೇಕಾಗೇನೂ ಇಲ್ಲ. ಹೋಗಲಿ ಪ್ರಾಮುಖ್ಯ ಅನ್ನಿಸದಿದ್ದರೆ ಬೇಡ ....ನೆನಪಿನಿಂದ ಒಂದು ಕೊಡುಗೆಯನ್ನಾದರೂ ನೀಡಬಹುದಾ? ತನಗೇನು ಉಡುಗೊರೆ ತರಬಹುದು??????... ಸೀರೆ ನಾ?...... ಒಡವೆ ನಾ?......ಪರಿಮಳದ ದ್ರವ್ಯ ನಾ?......ಕೈ ಗಡಿಯಾರ ನಾ?......ಪುಸ್ತಕ ವಾ????? ಮತ್ತೇನು ಇರಬಹುದು????? ಗುಟ್ಟು ಮಾಡಿ ತಂದು ತನ್ನನ್ನು ಆಶ್ಚರ್ಯಗೊಳಿಸುತ್ತಾರಾ ಅಥವಾ ತನಗೇ ಆಯ್ಕೆಯನ್ನು ಬಿಡುತ್ತಾರಾ ???????
ಒಂದೊಂದೇ ದಿನ ಹತ್ತಿರವಾಗುತ್ತಿದ್ದಂತೆ ಕಸ್ತೂರಿಯ ತವಕ, ಧಾವಂತ ಏರಲಾರಂಭಿಸಿದವು. ಯಥಾ ಪ್ರಕಾರ 9.30....10 ಘಂಟೆಗೆ ಸುಸ್ತಾಗಿ ಬರುತ್ತಿದ್ದವನ ಜೊತೆ ಮಾತನಾಡಲೂ ಸಮಯವಿಲ್ಲದೆ ದಿನ ಕಳೆದು ಹೋಗುತ್ತಿತ್ತು. ಹುಟ್ಟುಹಬ್ಬದ ಹಿಂದಿನ ದಿನದ ರಾತ್ರಿ ಮನೆಗೆ ಹಿಂತಿರುಗಿದವನ ಕೈಲಿ ಯಾವ ಹೊಸ ವಸ್ತುವೂ ಕಾಣಿಸದೇ ಹೋದಾಗ ಮನಸ್ಸಿಗೆ ಪಿಚ್ಚೆನಿಸಿತು. ಅವನು ಮಲಗಿದ ನಂತರ ಅವನ ಶರ್ಟ್, ಪ್ಯಾಂಟ್ ನ ಕಿಸೆಗಳನ್ನೆಲ್ಲ ತಡವಿ ನೋಡಿದಳು. ಉಹೂಂ.. ಸಣ್ಣ ಪ್ಯಾಕೆಟ್ ಸಹಾ ಇಲ್ಲ...
ಬೆಳಗ್ಗೆ ಎಂದಿಗಿಂತ ಬೇಗ ಎದ್ದು ಉಲ್ಲಾಸದಿಂದ ಹಾಡುಗಳ ಗುನುಗುತ್ತ ಬೇಗ ಬೇಗ ಕೆಲಸ ಮುಗಿಸಿದಳು ..ಉಪ್ಪಿಟ್ಟು, ಕೇಸರಿಬಾತ್ ಮಾಡಿದಳು ....ಅಡಿಗೆ ಮುಗಿಸಿದಳು...ಪ್ರಶಾಂತ್
ಎದ್ದ ಕೂಡಲೇ ತನಗೆ ಹಾರೈಸಬಹುದೆಂದು ಕಾದಿದ್ದೇ ಬಂತು ....ಅವನಿಗೆ ಅದರ ನೆನಪೂ ಸಹ ಇದ್ದಂತೆ ತೋರಲಿಲ್ಲ. ಮಾಮೂಲಿನಂತೆ ಬ್ಯಾಂಕಿಗೆ ಹೊರಟಾಗ ಉಕ್ಕಿ ಬರಲು ಹವಣಿಸುತ್ತಿದ್ದ ಕಣ್ಣೀರನ್ನು ತಡೆದುಕೊಂಡು ಪತಿಯನ್ನು ಬೀಳ್ಕೊಟ್ಟಳು. ಅವನತ್ತ ಹೋದೊಡನೆ ಪ್ರತ್ಯಕ್ಷರಾದರು ಗಂಗಾ ಭಾಗೀರಥಿಯರು. ಒಂದು ಸಲ ಮನದ ದುಗುಡವೆಲ್ಲ ಹೊರ ಹೋದ ಮೇಲೆ ಸ್ವಲ್ಪ ಸಮಾಧಾನವಾಯಿತು.
ಅಷ್ಟು ಒಳ್ಳೆಯ ಪತಿ ಇಂಥ ದೊಡ್ಡ ತಪ್ಪು ಮಾಡಿದ್ದೇಕೆ? ಯಾವ ರೀತಿ ಆಲೋಚಿಸಿದರೂ ಕಾರಣ ಹೊಳೆಯಲಿಲ್ಲ. ಕೆಲಸದ ಒತ್ತಡದಲ್ಲಿ ತಾರೀಕೆ ನೆನಪಿಲ್ಲದೆ ಹೋಯಿತೇ??? ಆದ್ರೆ ಬ್ಯಾಂಕ್ ಕೆಲಸದಲ್ಲಿ ಇರುವವರಿಗೆ ದಿನಾಂಕ ನೆನಪಿಲ್ಲ ಅನ್ನೋದು ನಂಬಲಸಾಧ್ಯವಾದ ಮಾತು....ಹಾಗಾದ್ರೆ ತನ್ನ ಬಗ್ಗೆ , ತನ್ನ ಇರುವಿಕೆಯ ಬಗ್ಗೆ, ತನ್ನ ಅಸ್ತಿತ್ವದ ಬಗ್ಗೆ ಯಾವುದೇ ಆಸಕ್ತಿ ಇಲ್ಲ ಹಾಗಾದರೆ!!!! ಅಡಿಗೆ ಮಾಡಲು, ಮನೆಗೆಲಸಗಳ ಪೂರೈಸಲು , ಪತಿಯ ಅಗತ್ಯಗಳಿಗೆ ಮಾತ್ರ ತನ್ನ ಅಸ್ತಿತ್ವವೇ ???? ತಲೆ ಸಿಡಿಯಲು ಪ್ರಾರಂಭಿಸಿತು.....
ಕೊಂಚ ಹೊತ್ತಿನಲ್ಲೇ ಮನಸ್ಸನ್ನು ಸ್ತಿಮಿತಕ್ಕೆ ತಂದುಕೊಂಡ ಕಸ್ತೂರಿ ತನಗಿಷ್ಟವಾದ ಹಾಡುಗಳನ್ನು ಕೇಳುತ್ತಾ ಅದರಲ್ಲೇಮುಳುಗಿಹೋದಳು.........ಅಬ್ಬಾ....
ಸಂಗೀತಕ್ಕೆ ಎಂತಹ ಶಕ್ತಿ ಇದೆ.... ಅಷ್ಟಿಲ್ಲದೆ ಸಂಗೀತವನ್ನು ದೈವತ್ವಕ್ಕೆ ಹೋಲಿಸುತ್ತಾರಾ ಅನ್ನಿಸಿತು..
ತಿಂಡಿ ತಿಂದು ಉಳಿದ ಕೆಲಸಗಳನ್ನು ಮಾಡಿ ಮುಗಿಸುವಷ್ಟರಲ್ಲಿ 11 ಗಂಟೆ....... ಬೆಳಗಿನಿಂದಲೇ ಮೊಬೈಲ್ಗೆ ಮೆಸೇಜ್ ಗಳ ಸುರಿಮಳೆ.... ಒಂದೊಂದನ್ನೇ ನೋಡುತ್ತಾ, ಉತ್ತರಿಸುತ್ತಾ ಹೋದಳು.... ತಟಕ್ಕನೆ ನೆನಪಾಯಿತು...ಅಣ್ಣನದು, ಅಪ್ಪನದು, ಅಮ್ಮನದು. .. ಯಾರದೂ ಮೆಸೇಜ್ ಇಲ್ಲ.... ಯಾರ ಕರೆಯೂ ಬಂದಿರಲಿಲ್ಲ.... ಮೊಬೈಲ್ ಫೋನ್ ನಲ್ಲಿ ಚಾರ್ಜ್ ಇರುವುದನ್ನು ಖಾತ್ರಿ ಪಡಿಸಿಕೊಂಡಳು.......ತನಗಿದ್ದ ಇಬ್ಬರು ಆಪ್ತ ಗೆಳತಿಯರು ಸಂಜೆ ಕರೆ ಮಾಡಿ ಗಂಟೆಗಟ್ಟಲೆ ಹರಟುವವರು. ಇದೇನು ಆಗುತ್ತಿದೆ ಈ ಸಲದ ಸಂಭ್ರಮಾಚರಣೆಗೆ?? ಮತ್ತೆ ಮನವು ಮುದುಡಿ ಹೋಯ್ತು......
ಕುಳಿತಲ್ಲೇ ನಿದ್ರೆಗೆ ಜಾರಿದ್ದವಳು ಕರೆಗಂಟೆ ಬಾರಿಸಿದುದರಿಂದ ದಡಬಡಿಸಿ ಎದ್ದಳು.....ಮತ್ತೊಮ್ಮೆ ಹೃದಯದ ಆಸೆ ತಲೆ ಎತ್ತಿತು. ....ಒಂದುವೇಳೆ ಪ್ರಶಾಂತನೆ ಹೆಂಡತಿಯ ಹುಟ್ಟುಹಬ್ಬದ ನೆನಪಾಗಿ ಬ್ಯಾಂಕ್ ಗೆ ರಜೆ ಮಾಡಿ ಹಿಂತಿರುಗಿರಬಹುದೆ?............ .
ಧಾವಂತದಿಂದ ಓಡಿ ಹೋಗಿ ಬಾಗಿಲು ತೆಗೆದಾಗ ಮೂರು ಕಂಠ ಗಳು ಒಟ್ಟಾಗಿ " ಹುಟ್ಟುಹಬ್ಬ ದ ಶುಭಾಶಯ" ಹೇಳಿದಾಗ ತುಂಬಿ ಬಂದ ಹೃದಯ, ಕಣ್ಣುಗಳ ಸಹಿತ ಅಮ್ಮ, ಅಪ್ಪ, ಅಣ್ಣನನ್ನು ಎರಡೂ ಕೈಗಳಿಂದ ಅಪ್ಪಿಕೊಂಡು ಬಿಟ್ಟಳು....ಅವರನ್ನು ನೋಡಿದ ಖುಷಿ, ಬಂದವನು ಪ್ರಶಾಂತ್ ಅಲ್ಲ ಅನ್ನುವ ನೋವು , ಎರಡೂ ಸೇರಿ ಕಣ್ಣುಗಳಿಂದ ದಳ ದಳನೆ ನೀರು ಸುರಿಯಿತು ..ವಾತ್ಸಲ್ಯ ದಿಂದ, ಪ್ರೇಮದಿಂದ, ತುಂಬು ಸ್ನೇಹದಿಂದ ಅವಳನ್ನು ಸಂತೈಸಿದರು ಅವಳ ಜೀವನದ ಅವಿಭಾಜ್ಯ ಅಂಗಗಳಾಗಿ ಇದ್ದವರು.
ಗಲಗಲ ಮಾತಾಡುತ್ತ ಗಲಾಟೆ ಎಬ್ಬಿಸುತ್ತ ಅವರು ತಂದುಕೊಟ್ಟ ತಿಂಡಿ ತಿನಿಸುಗಳನ್ನು, ಕೊಡುಗೆಗಳನ್ನು ಒಂದರ ನಂತರ ಒಂದರಂತೆ , ಸಣ್ಣ ಮಗುವಿನಂತೆ ಸಂಭ್ರಮಿಸಿದಳು.. .ಮನಸ್ಸು ಒಂದು ತಹಬಂದಿಗೆ ಬಂದಿತ್ತು...
ಅಮ್ಮ ವಿಶೇಷ ಅಡಿಗೆ ಮಾಡಿ ತಂದಿದ್ದರು. ಅಪ್ಪ ಒಂದು ಸಣ್ಣ ನಿದ್ದೆ ತೆಗೆಯಲು ಉತ್ಸುಕರಾದರು. ಅಣ್ಣ ತಂಗಿಯನ್ನು ಚೆನ್ನಾಗಿ ಗೋಳುಹುಯ್ದುಕೊಂಡ. ಜೊತೆಗೆ ಹೊಟ್ಟೆ ಹುಣ್ಣಾಗುವಷ್ಟು ನಗಿಸಿಟ್ಟ... ಅವಳ ಹುಟ್ಟುಹಬ್ಬದ ದಿನದಂದೂ ಕೆಲಸಕ್ಕೆ ಹೋಗಿದ್ದ ಭಾವನ ಬಗ್ಗೆ ಹುಸಿಮುನಿಸು ತೋರಿಸಿದ. ಗಂಡನ ಪರ ವಹಿಸಿದ ತಂಗಿಯನ್ನ ಚೆನ್ನಾಗಿ ರೇಗಿಸಿದ. ಅವನ ಒತ್ತಾಯದ ಮೇರೆಗೆ ಒಂದು ಗಂಟೆಯ ಹೊತ್ತಿಗೆ ಬ್ಯಾಂಕಿಗೆ ಫೋನ್ ಮಾಡಿದಳು ಊಟಕ್ಕಾದರೂ ಮನೆಗೆ ಬಂದು ಹೋಗಿರೆಂದು ಹೇಳಲು... ಅತ್ತ ಕಡೆಯಿಂದ ಬಂದ ಉತ್ತರ ಅನಿರೀಕ್ಷಿತವಾಗಿತ್ತು. ಪ್ರಶಾಂತ್ ರವರು ಒಂದು ದಿನದ ವಿಶೇಷ ರಜೆಯಲ್ಲಿದ್ದಾರೆ ಎಂದು ಕೇಳಿದೊಡನೆ ಆತಂಕಿತಳಾದ ಕಸ್ತೂರಿಯನ್ನು ಸಮಾಧಾನ ಪಡಿಸಹೋಗಿ ಎಲ್ಲರೂ ಸೋತರು...ಅವನ ಮೊಬೈಲ್ ಸ್ವಿಚ್ ಆಫ್ ಆಗಿದೆ ಬೇರೆ. . ಬೆಳಗ್ಗೆ 9 ಗಂಟೆಗೆ ಮನೆ ಬಿಟ್ಟವರು ಹಾಗಾದ್ರೆ ಎಲ್ಲಿ ಹೋಗಿರಬಹುದು?? ಯಾರ ಜೊತೆಯೂ ಮಾತಾಡಬೇಕೆನಿಸಲಿಲ್ಲ ....
ಒಂದೂವರೆಯ ಹೊತ್ತಿಗೆ ಮನೆಯ ಮುಂದೆ ಗಂಡನ ಬೈಕ್ ಬಂದು ನಿಂತ ಶಬ್ದವಾದಾಗ ಒಂದೇ ಉಸಿರಿಗೆ ಹೊರಗೋಡಿದಳು...ಕೊಂಚ ಸುಸ್ತಾದ ಆದರೆ ಮುಖವೆಲ್ಲ ನಗೆಯಾದ ಗಂಡನ ದರ್ಶನ..ಅವನ ಎರಡೂ ಕೈ ತುಂಬಾ ಹೂವು, ಹಣ್ಣು, ಹಾಗೂ ಉಡುಗೊರೆಯ ಪ್ಯಾಕೆಟ್ ಗಳು ಇದ್ದವು...ಈಗ ಅದ್ಯಾವುದರ ಕಡೆಯೂ ಕಸ್ತೂರಿಯ ಗಮನವಿಲ್ಲ..." ಎಲ್ಲಿ ಹೋಗಿದ್ದೀರಿ ಇಷ್ಟು ಹೊತ್ತು? ರಜೆ ಬೇರೆ ಮಾಡಿದ್ರಂತೆ ...ನಂಗೆ ಎಷ್ಟು ಗಾಬರಿ ಆಗಿತ್ತು ಗೊತ್ತಾ??"
ಪ್ರಶ್ನೆಗಳ ಸುರಿಮಳೆಗೆ ಪ್ರಶಾಂತ ನಕ್ಕ." ಮೊದಲು ನನ್ನ ಹಾರೈಕೆಗಳನ್ನು ಸ್ವೀಕರಿಸಿ ಮೇಡಂ... ಆಮೇಲೆ ಉಳಿದ ವಿಷಯ....."
ನಗೆಮೊಗದಿಂದ ಅವನಿಗೆ ಧನ್ಯವಾದ ಹೇಳಿ ಅವನು ಕೊಟ್ಟ ಪ್ಯಾಕೆಟ್ ಗಳನ್ನು ಎದೆಗೊತ್ತಿಕೊಂಡು ಒಳಗೆ ಬಂದಳು....
" ಎಲ್ಲಿಗೆ ಹೋಗಿತ್ತು ಭಾವಾ ನಿಮ್ಮ ಸವಾರಿ'?"
" ರಜೆ ಹಾಕಿ ಎಲ್ಲಿಗೆ ಹೊರಟು ಹೋಗಿ ಬಿಟ್ಟಿದ್ರೀ ಅಳಿಯಂದ್ರೆ??"
'ಎಲ್ಲೂ ಇಲ್ಲ ಮಾವ...ಇವತ್ತು ಕಸ್ತೂರಿಯ ಹುಟ್ಟುಹಬ್ಬದ ವಿಶೇಷ ದಿನ ಅಲ್ವೇ? ಅವಳಿಗೆ ಸರ್ಪ್ರೈಸ್ ಮಾಡೋಣ ಅಂತ ಅವಳಿಗೆ ಏನೂ ಹೇಳದೆ ಬ್ಯಾಂಕ್ ಗೆ ಹೋಗಿ ಇವತ್ತು ರಜೆ ಅಂತ ಅಲ್ಲಿ ತಿಳಿಸಿ , ರಕ್ತದಾನ ಮಾಡಕ್ಕೆ ಹೋಗಿದ್ದೆ. ರಕ್ತ ಕೊಟ್ಟಾದ ತಕ್ಷಣಕ್ಕೆ ಬೈಕ್ ಓಡಿಸೋದು ಬೇಡ ಅಂತ ಡಾಕ್ಟರ್ ಸ್ವಲ್ಪ ಹೊತ್ತು ಅಲ್ಲೇ ಕೂಡಿಸಿಕೊಂಡ್ರು. ಆಮೇಲೆ ಅಂಗಡಿಗಳಿಗೆಲ್ಲ ಹೋಗಿ ಬರೋದು ಇಷ್ಟು ಹೊತ್ತಾಯಿತು. ನಿನ್ನೇನೇ ತಂದಿಡಬೇಕಿತ್ತು...ಆದರೆ ನಾನು ಬ್ಯಾಂಕ್ ನಿಂದ ಹೊರಡುವಷ್ಟರಲ್ಲಿ ಅಂಗಡಿಗಳೆಲ್ಲ ಮುಚ್ಚಿದ್ದವು. ಹಾಗಾಗಿ ಈಗ ತರಬೇಕಾಯ್ತು. ಸಾರಿ.... ನಿಮ್ಮನ್ನೆಲ್ಲ ಕಾಯಿಸಿಬಿಟ್ಟೆ..ಬೇಗ ಸ್ನಾನ ಮಾಡಿ ಬರ್ತೀನಿ..... ಊಟ ಮಾಡೋಣ ." ರೂಮಿಗೆ ನಡೆದ...
'ಹೆಂಡತಿಯ ಹುಟ್ಟಿದ ದಿನದ ವಿಶೇಷತೆಗಾಗಿ ಗಂಡ ರಕ್ತದಾನ ಮಾಡೋದು... ಎಂತಹ ಉದಾತ್ತ ವಿಚಾರ....' ಕಸ್ತೂರಿಯ ಅಣ್ಣ ನ ಬಾಯಿಂದ ಉದ್ಗಾರ ಹೊರಟಿತು.....
ಕಸ್ತೂರಿ ದಂಗುಬಡೆದವಳಂತೆ ನಿಂತೇ ಇದ್ದಳು.... ಗಂಡನ ಔನ್ನತ್ಯದೆದುರು ತನ್ನ ಅತಿ ಸಾಧಾರಣವಾದ ವಿಚಾರಧಾರೆಯಿಂದ ನಾಚಿಕೆಗೊಂಡವಳಂತೆ.......
*^^^^^^^^^^^^^^^^^^^^^^^^^^^^^^^^^^^^^^^^^^^^^^^*
**************^^^^^^^^^^^^^^^^^^^^^^*********
.
