STORYMIRROR

Indira Udupa

Romance

5  

Indira Udupa

Romance

ಆಯ್ಕೆ

ಆಯ್ಕೆ

7 mins
9

" ಇಲ್ಲಾ, ಇಲ್ಲಾ, ಇಲ್ಲಾ...... ನೀವ್ಯಾರೇನೆ ಹೇಳಿದ್ರೂ ನಾನು ನನ್ನ ನಿರ್ಧಾರ ಬದಲಿಸಲ್ಲ. ನಾನು ಅಜಯ್ ನನ್ನೇ ಮದುವೆ ಆಗೋದು...ಸಣ್ಣ ಹುಡುಗಿ ಆದಾಗಿನಿಂದ ನಾನು ಕೇಳಿದ್ದನೆಲ್ಲ ತೆಗೆಸಿಕೊಟ್ಟು ಈಗ ನನ್ನ ಮನಸ್ಸನ್ನು ಬದಲಿಸುವ ಪ್ರಯತ್ನ ಮಾಡ್ತೀರಾ? ನಾನಂತೂ ನಿಮ್ಮ ಯಾವ ಮಾತಿಗೂ ಬಗ್ಗುವುದಿಲ್ಲ.."......

ಮುಖ ದಪ್ಪ ಮಾಡಿಕೊಂಡು ಕೋಪದಿಂದ ಏದುಸಿರು ಬಿಡುತ್ತಿದ್ದ ಅಂಕಿತಳನ್ನು ನೋಡಿ ನಿಟ್ಟುಸಿರು ಬಿಟ್ಟರು ಅವಳ ತಂದೆ ತಾಯಿಗಳು. ಅಲ್ಲೇ ಕುಳಿತಿದ್ದ ಅವಳ ಅಣ್ಣ ಶ್ರೀಧರನೆಂದ..... " ಇಲ್ಲಿ ನೋಡು ಅಂಕಿತಾ, ಅಪ್ಪ, ಅಮ್ಮ ನಮಗೆ ತುಂಬಾ ಸ್ವಾತಂತ್ಯ್ರ ಕೊಟ್ಟು ಬೆಳೆಸಿದ್ದಾರೆ. ನಮ್ಮ ಜೀವನದಲ್ಲಿ ಆಯ್ಕೆಯ ಸ್ವಾತಂತ್ಯ್ರ ವನ್ನೂ ಕೊಟ್ಟಿದ್ದಾರೆ. ಆದರೆ ಆಗ ಸಣ್ಣ ಪುಟ್ಟ ನಿರ್ಧಾರ ತೆಗೆದುಕೊಂಡಾಗ ನಾವೇನಾದರೂ ಎಡವಿದ್ದರೂ ಮತ್ತೆ ಚೇತರಿಸಿಕೊಳ್ಳುವ , ಬೇರೊಂದನ್ನು ಆರಿಸಿಕೊಳ್ಳುವ ಅವಕಾಶಗಳು ಇರುತ್ತಿದ್ದವು. ಆದರೆ ಮದುವೆ ಎನ್ನುವುದು ಜೀವನದ ಅತಿ ಮುಖ್ಯ ಘಟ್ಟ. ಇಲ್ಲಿ ಎಡವಿದರೆ ಅಷ್ಟೇ. ಅಷ್ಟಕ್ಕೂ ಅಪ್ಪ ಅಮ್ಮ ನಿನಗೆ ಯಾವುದೋ ಹುಡುಗನನ್ನ ಅವರೇ ಆರಿಸಿ, ಅವನನ್ನೇ ಮಾಡಿಕೋ ಅಂತ ಏನೂ ಒತ್ತಾಯ ಮಾಡ್ತಿಲ್ಲವಲ್ಲ. ನೀನು ಇಷ್ಟ ಪಟ್ಟಿರುವ ಹುಡುಗ ಮುಂದೆ ನಿನ್ನನ್ನು ಸಂತೋಷದಿಂದ ಇಡಲಾರ ಅಂತ ಅವರ ಅನಿಸಿಕೆ. ಅಮ್ಮ ಅಪ್ಪನ ಹೆತ್ತ ಕರುಳಿಗೆ ಅರ್ಥವಾಗುತ್ತೆ ಮಗಳು ಮುಂದೆ ಚೆನ್ನಾಗಿ ಇರ್ತಾಳೆ ಅಥವಾ ಇಲ್ಲ ಅನ್ನೋದು. ಬೇರೆ ತಾಯ್ತಂದೆಯರ ಬಗ್ಗೆ ನನಗೆ ಗೊತ್ತಿಲ್ಲ ಆದ್ರೆ ನಮ್ಮ ಅಮ್ಮ ಅಪ್ಪ ಅಂದ್ರೆ ಸಾಕ್ಷಾತ್ ದೇವರಿದ್ದಂತೆ. ಅವರ ಮಾತುಗಳಿಗಾದರೂ ಬೆಲೆ ಕೊಟ್ಟು ನಿನ್ನ ಹೃದಯ, ಬುದ್ಧಿಯನ್ನೊಮ್ಮೆ ಸರಿಯಾಗಿ ಪ್ರಶ್ನಿಸಿ ಆಮೇಲೆ ನಿರ್ಧಾರ ತೆಗೆದುಕೋ...."

" ನನಗೆ ಗೊತ್ತು ಅಣ್ಣಾ...ನೀವೆಲ್ಲ ಸೇರಿ ನನ್ನನ್ನು ಅಲೋಕನಿಗೆ ಕಟ್ಟಬೇಕು ಅಂತ ಇದೀರಿ....ಅಲೋಕ ನಿನಗೆ ಒಳ್ಳೇ ಸ್ನೇಹಿತ ಇರಬಹುದು. ಅಪ್ಪ ಅಮ್ಮ ನ ಕಣ್ಣಲ್ಲಿ ಅವನು ಒಳ್ಳೆಯ ವ್ಯಕ್ತಿ ಇರಬಹುದು. ನಾನೂ ಅವನನ್ನು ಗೌರವಿಸುತ್ತೇನೆ ನಿಜ. ಆದರೆ ಅಜಯ್ ನನ್ನೇ ನಾನು ಮದುವೆಯಾಗೋದು...."

ಮತ್ತೇನೋ ಹೇಳಲು ಹೊರಟ ಶ್ರೀಧರನನ್ನು ತಡೆದಳು ರೇಖಾ...."ಈಗೇನೂ ಹೇಳಬೇಡಿ .ಸುಮ್ಮನಿರಿ. " ಅತ್ತೆ ಮಾವ ಇಬ್ಬರಿಗೂ ಕಣ್ಸನ್ನೆ ಮಾಡಿದಳು.

ಮರುದಿನ ಅಂಕಿತ ಮನೆಯಲ್ಲಿ ಇಲ್ಲದ ಸಮಯ ನೋಡಿಕೊಂಡು ಅತ್ತೆ, ಮಾವ, ಹಾಗೂ ಗಂಡನ ಬಳಿ ಹೇಳಿದಳು ರೇಖಾ....." ಈಗ ನಾವೇನ್ ಹೇಳಿದ್ರೂ ಅವಳು ಕೇಳುವ ಸ್ಥಿತಿಯಲ್ಲಿಲ್ಲ. ಅಜಯ್ ನ ದುರ್ಗುಣಗಳ ಬಗ್ಗೆ ಅವಳ ಕಣ್ಣು ಕುರುಡಾಗಿದೆ. ನಾಲ್ಕು ದಿನ ಅವಳ ಪಾಡಿಗೆ ಅವಳನ್ನು ಬಿಟ್ಟುಬಿಡಿ. ನೀವು ಅವಳಿಗೆ ಕೊಟ್ಟ ಸ್ವಾತಂತ್ಯ್ರ ಅವಳೆಂದೂ ದುರುಪಯೋಗ ಪಡಿಸಿಕೊಳಲ್ಲ. ಅವಳ ಬಿಚ್ಚುಮನಸ್ಸು, ನೇರ ಮಾತು, ನಿಷ್ಪಕ್ಷಪಾತದ ಧೋರಣೆಗಳಿಗೆ ಅಜಯ್ ನ ಸುಳ್ಳುಗಳು, ಬೇಜವಾಬ್ದಾರಿ, ಅಪ್ರಾಮಾಣಿಕತೆ ಇವತ್ತಲ್ಲ ನಾಳೆ ತಿಳಿದೇ ತಿಳಿಯುತ್ತದೆ. ತಾನಾಗೇ ತನ್ನ ತಪ್ಪು ತಿಳಿದು ತಿದ್ದಿಕೊಳ್ಳಲು ಒಂದು ಒಳ್ಳೆಯ ಅವಕಾಶ ಸಿಕ್ಕೇ ಸಿಗುತ್ತೆ. ನೀವು ಅವಳ ಹತ್ತಿರ ಅಜಯ್ ಬಗ್ಗೆ ವಾದಕ್ಕೆ ಇಳಿಯುವುದು ಬೇಡ...."

"ನೀನು ಹೇಳಿದ ಹಾಗೆ ಆಗಲಿ ತಾಯಿ. ಮದುವೆಗೆ ಮುಂಚೆಯೇ ಅವಳಿಗೆ ಅವಳ ತಪ್ಪಿನ ಅರಿವಾದರೆ ಸಾಕು." ಅತ್ತೆಯೆಂದರು.

ದಿನಗಳು ಉರುಳಿದವು. ಬೆಳಗ್ಗೆ ಅತ್ತಿಗೆಗೆ ಮನೆಗೆಲಸದಲ್ಲಿ ಸಹಕರಿಸಿ ತಾನು ಕೆಲಸ ಮಾಡುತ್ತಿದ್ದ ಆಫೀಸಿಗೆ ಹೊರಟರೆ ಸಂಜೆ ಅಜಯ್ ಜೊತೆ ತಿರುಗಾಟ. ಏಳು ಗಂಟೆಯ ಹೊತ್ತಿಗೆ ಮನೆ ಸೇರಿದರೆ ಅಪ್ಪ, ಅಮ್ಮ,ಅಣ್ಣ, ಅತ್ತಿಗೆ, ಅಲೋಕ್ ಜೊತೆ ಹರಟೆ, ಅಜಯ್ ನ ಗುಣಗಾನ, ಊಟ, ಕೆಲಸ ಮುಗಿದನಂತರ ಭವಿಷ್ಯದ ಕನಸು ಕಾಣುತ್ತಾ ನಿದ್ರೆ. ನಾಲ್ಕಾರು ದಿನ ಕಳೆಯುವಷ್ಟರಲ್ಲಿ ಅವಳಿಗೆ ಒಂದು ಕಡೆ ಯಾರೂ ತನ್ನ ನಿರ್ಧಾರದ ಬಗ್ಗೆ ಚರ್ಚಿಸುತ್ತಿಲ್ಲ ಎನ್ನುವ ನಿರಾಳ ಭಾವ...ಹಾಗಂತ ಯಾರೂ ಸಪ್ಪಗೂ ಇಲ್ಲ. ಬಹುಶಃ ಅತ್ತಿಗೆ ಏನಾದ್ರೂ ಉಪದೇಶ ಮಾಡಿರಬೇಕು ಅಂತ ಅಂದುಕೊಂಡಳು. ಆದ್ರೂ ಮನದ ಮೂಲೆಯಲ್ಲೆಲ್ಲೋ ಸಣ್ಣ ಸಂದೇಹ.....

ದಿನಕಳೆದಂತೆ ಅವಳಿಗೆ ತನ್ನ, ಅಜಯ್ ನ ಅಭಿರುಚಿಗಳಲ್ಲಿ ಇದ್ದ ಅಗಾಧ ವ್ಯತ್ಯಾಸ ಗಮನಕ್ಕೆ ಬರತೊಡಗಿತು. ತನಗೆ ಓದುವುದರಲ್ಲಿ ಆಸಕ್ತಿ ಇದ್ದರೆ ಅವನು ಓದು ಎಂದರೆ ಮೈಲುಗಟ್ಟಲೆ ದೂರ. ಒಳ್ಳೆಯ ವಿಚಾರಗಳ ಬಗ್ಗೆ ಚರ್ಚೆ ನಡೆಸೋಣ ಎಂದರೆ ಅವನಿಗದು ಶುದ್ಧ ಬೇಸರ. ಸಿನಿಮಾಗಳ ಬಗ್ಗೆ, ಹೀರೋ, ಹೀರೋಯಿನ್ ಗಳ ಬಗ್ಗೆ ಗಂಟೆಗಟ್ಟಲೆ ಬೇಕಾದ್ರೂ ಅಜಯ್ ಹರಟುತ್ತಾನೆ ಆದರೆ ತನಗದು ಸ್ವಲ್ಪವೂ ಇಷ್ಟವಿಲ್ಲ. ಹಳೆಯ ಹಾಡುಗಳೆಂದರೆ ತನಗೆ ಪ್ರಾಣ. ಇಂಗ್ಲಿಷ್ ಹಾಡು, ಪಾಪ್ ಹಾಡುಗಳು ಅವನಿಗೆ ಇಷ್ಟ. ತನಗೆ ಅದರ ಗಂಧಗಾಳಿಯೂ ಗೊತ್ತಿಲ್ಲ. ತುಂಬಾ ದೂರದವರೆಗೆ ನಡೆಯುತ್ತಾ ಹೋಗುವುದು ತನಗಿಷ್ಟ. ಒಂದು ಹೆಜ್ಜೆ ನಡೆಯುವುದೂ ಅವನಿಗೆ ಬೇಡ. ಪ್ರಕೃತಿಯ ಆರಾಧನೆ, ಪ್ರಶಾಂತ ವಾತಾವರಣ ತನಗಿಷ್ಟ. ಗಲಾಟೆ, ಸದ್ದುಗದ್ದಲ ಅವನಿಗೆ ಪ್ರಿಯ.

ಒಂದೆರಡು ತಿಂಗಳು ಕಳೆಯುವಷ್ಟರಲ್ಲಿ ಅವಳಿಗೆ ಅವನ ಸಹವಾಸ, ಸನಿಹ ಬೇಸರ ತರಲಾರಂಭಿಸಿತು. ಮೊದಲು ಅಮ್ಮ, ಅಪ್ಪ ಅವನ ಬಗ್ಗೆ ವಿರೋಧ ವ್ಯಕ್ತ ಪಡಿಸುವಾಗ ಅವರನ್ನು ಧಿಕ್ಕರಿಸಿ ಅವನೊಡನೆ ಸಮಯ ಕಳೆಯುವಾಗ ಆಗುತ್ತಿದ್ದ ಥ್ರಿಲ್ ಈಗ ಇರಲಿಲ್ಲ.

ಈ ಮಧ್ಯೆ ಒಂದು ದಿನ ಮಾಮೂಲಿನಂತೆ ಅಂಕಿತಾ ಕಾಯುತ್ತ ನಿಂತಿದ್ದಳು ೫ ಗಂಟೆಯಿಂದ. ೬ ೧೫ ಆದರೂ ಅವನ ಪತ್ತೆಯಿಲ್ಲ. ಫೋನ್ ಸಹ ಮಾಡಿರಲಿಲ್ಲ ಬಾರದಿರುವ ಬಗ್ಗೆ. ಇನ್ನು ಕಾಯುವುದು ಬೇಡ ಅಂತ ಬಸ್ ನಿಲ್ದಾಣ ಕ್ಕೆ ಹೊರಟಾಗ ಬಂದು ನಿಂತಿತು ಬೈಕ್. "ಹಾಯ್ ಅಂಕಿತಾ ".....ಏರು ಸ್ವರಕ್ಕೆ ಬೆಚ್ಚಿದಳು. ಸುತ್ತಲಿದ್ದವರೆಲ್ಲ ಇವರನ್ನೇ ನೋಡುತ್ತಿರುವುದು ಮುಜುಗರವಾಯಿತು ಅವಳಿಗೆ. ಕೆಂಪೇರಿದ್ದ ಕಣ್ಣುಗಳು, ಬೀಡ ಸೇವನೆಯಿಂದ ಕೆಂಪಾದ ತುಟಿಗಳು, ಕೈಯಲ್ಲಿ ಹೊಗೆ ಆಡುತ್ತಿದ್ದ ಸಿಗರೇಟ್.....ಆಶ್ಚರ್ಯ, ಆತಂಕ , ಬೇಸರ ಒಟ್ಟಿಗೆ ದಾಳಿ ಮಾಡಿದವು. ಸುತ್ತಲಿದ್ದವರ ದೃಷ್ಟಿ ತಪ್ಪಿಸಲು ಬೇಗ ಬೈಕ್ ಹತ್ತಿದಳು.

ಹೋಟೆಲಿನ ಮುಂದೆ ಬೈಕ್ ನಿಂತಾಗಲೂ ಅವಳ ಕಸಿವಿಸಿ ಕಡಿಮೆ ಆಗಿರಲಿಲ್ಲ....ಎರಡು ಕಾಫಿಗೆ ಆರ್ಡರ್ ಮಾಡಿ ಸಿಗರೇಟ್ ನ ಘಾಟಿಗೆ ಮೂಗು ಮುರಿದಳು. "ನೀನು ಸಿಗರೇಟ್ ಸೇದಲ್ಲ ಅಂತ ಹೇಳಿದ್ಯಲ್ಲ ನನ್ನ ಹತ್ತಿರ, ಮತ್ತೆ ಈಗ ನೋಡಿದ್ರೆ " ....ಮಾತಿನಲ್ಲಿ, ಮುಖದಲ್ಲಿ ಅಸಹನೆ ಮೂಡಿತ್ತು. " ಯಾಕೆ ಇಷ್ಟು ಕಾಯಿಸಿದ್ದು ನನ್ನ?".......ಅಜಯ್ ತುಟಿ ಸೊಟ್ಟ ಮಾಡಿ ನಕ್ಕ. " ನನ್ನ ಸ್ನೇಹಿತ ಕೆಲಸ ಸಿಕ್ಕ ಖುಷಿಯಲ್ಲಿ ಪಾರ್ಟಿ ಇಟ್ಟುಕೊಂಡಿದ್ದ ಅವನ ಮನೇಲಿ. ಪಾರ್ಟಿ ಒಳ್ಳೆ ಗಮ್ಮತ್ತಾಗಿತ್ತು...ಒಳ್ಳೆ ಸ್ಟಾಕ್ ಇಟ್ಟಿದ್ದಾನೆ. ಎಲ್ಲ ಫಾರಿನ್ ಮಾಲೇ... ಆಕಸ್ಮಾತ್ ನೀನು ಕಾಯ್ತಿರೋದು ನೆನಪಾಗಿ ಅರ್ಧದಲ್ಲೇ ಬಿಟ್ಟು ಬಂದೆ. ತುಂಬಾ ದಿನಗಳಿಂದ ರುಚಿ ನೋಡಿರಲಿಲ್ಲ. ಛೇ..ಅರ್ಧದಲ್ಲೇ ಬರುವ ಹಾಗಾಯ್ತು" ... ಚಡಪಡಿಸಿ ನುದಿದವನ ಮಾತುಗಳು, ಅಮಲೇರಿದ ಕಣ್ಣುಗಳು, ಬಾಯಿಂದ ಹೊರಹೊಮ್ಮುತ್ತಿದ್ದ ವಾಸನೆ....ಹೊಟ್ಟೆ ತೊಳೆಸುವಂತಾಯ್ತು ಅಂಕಿತಾಳಿಗೆ....

" ಸಿಗರೇಟ್ ಮಾತ್ರ ಅಂದುಕೊಂಡೆ.... ಕುಡಿಯೋ ಅಭ್ಯಾಸ ಕೂಡ ಇತ್ತಾ ನಿಂಗೆ?". ಗಹಗಹಿಸಿ ನಕ್ಕ. " ಅದ್ಯಾಕಮ್ಮಣ್ಣಿ ಅಷ್ಟು ಬೆಚ್ಚಿ ಬೀಳ್ತೀ? ಅಡಗೂಲಜ್ಜಿ ತರ ಆಡ್ತೀಯಲ್ಲಾ. . ಸ್ಮೋಕಿಂಗ್, ಡ್ರಿಂಕಿಂಗ್ ಇದ್ರೇನೆ ಇವತ್ತು ಬೆಲೆ ಮನುಷ್ಯನಿಗೆ. ಇಲ್ಲಾಂದ್ರೆ ಅವನು ಗಂಡಸು ಅನ್ನಿಸ್ಕೊಳ್ತಾನಾ?". ಅಜಯನ ಬಾಯಿಂದ ಹೊರಹೊಮ್ಮಿದ ಮಾತುಗಳನ್ನು ಕೇಳುತ್ತಾ ಕೇಳುತ್ತಾ ಸ್ತಬ್ಧ ಚಿತ್ರ ಅವಳು. ಕಾಫಿಯ ಬಿಲ್ಲು ತೆತ್ತು " ನಾನು ಆಟೋ ಲಿ ಮನೆಗೆ ಹೋಗ್ತೀನಿ. ನೀನು ನಿನ್ನ ಪಾರ್ಟಿಗೆ ಹೋಗು ವಾಪಸ್. " ಸರಸರ ಹೊರನಡೆದು ಎದುರಿಗೆ ಇದ್ದ ರಿಕ್ಷಾ ಹತ್ತಿ ಮನೆ ಸೇರಿದಳು. ತಲೆ ಸಿಡಿಯುತ್ತಿತ್ತು.

ಯಾರ ಹತ್ತಿರವೂ ಮಾತಾಡದೆ, ಮೌನವಾಗಿ ಸಪ್ಪಗಿದ್ದ ನಾದಿನಿಯನ್ನು ಊಟದ ನಂತರ ಅಡಿಗೆ ಮನೆಗೆ ಕರೆದಳು ರೇಖಾ. " ಸ್ವಲ್ಪ ಈ ಪಾತ್ರೆಗಳನ್ನು ತೊಳೆದು ಕೊಡು ಬಾ ಅಂಕಿತಾ. ನಾನು ದೋಸೆಗೆ ಅರೆದಿಟ್ಟುಬಿಡ್ತೀನಿ.". ....ನಿಧಾನವಾಗಿ ಮಾತಿಗೆಳೆದಳು ಮೌನವಾಗಿ ಪಾತ್ರೆ ತೊಳೆಯುತ್ತಿದ್ದವಳನ್ನು...." ಯಾಕೆ ಅಂಕಿತಾ ಸಪ್ಪ ಗಿದ್ದೀ.?....ಅಜಯ್ ಜೊತೆ ಜಗಳವಾಗಿದೆಯಾ?".....

" ಅತ್ತಿಗೇ, ಮೊದಲು ನನ್ನ ಪ್ರಶ್ನೆಗೆ ಉತ್ತರ ಕೊಡಿ. ....ಪ್ರೇಮ, ಪ್ರೀತಿ ಅಂದರೆ ಏನು ಅತ್ತಿಗೆ? ಸಿನಿಮಾ, ಕಾದಂಬರಿ, ದೂರದರ್ಶನ ಇವುಗಳ ಪ್ರಭಾವಕ್ಕೆ ಒಳಗಾಗಿ ವಯೋ ಸಹಜ ಆಕರ್ಷಣೆ ಯನ್ನು ಪ್ರೇಮ ಅನ್ನುವ ಭ್ರಮೆ ಯಾಕೆ ಒಳಗಾಗ್ತೀವಿ?......

" ನಿನ್ನ ಪ್ರಶ್ನೆಯಲ್ಲಿಯೇ ಉತ್ತರ ಇದೆಯಲ್ಲೆ..." ರೇಖಾ ಗಂಭೀರವಾಗಿ ನುಡಿದಳು. " ವಯೋ ಸಹಜ ಹಾರ್ಮೋನುಗಳ ಏರುಪೇರಿನಿಂದ ದೇಹದಲ್ಲಾಗುವ ಬದಲಾವಣೆಗಳು ಮನಸ್ಸಿನ ಮೇಲೂ ಪರಿಣಾಮ ಬೀರುತ್ತವೆ . ಎಂತಹ ಕುರೂಪಿಗಳೂ ಯೌವ್ವನದಲ್ಲಿ ಸುಂದರವಾಗಿ ಕಾಣುತ್ತಾರೆ. ಆಗ ಹದಿಹರೆಯದ ಹುಡುಗ ಹುಡುಗಿಯರು ತಮ್ಮ ಮೇಲೆ ತಾವೇ ಮೋಹ ಹೊಂದಿ ತಮ್ಮನ್ನು ತಾವೇ ಪ್ರೀತಿಸುತ್ತಾರೆ. ಅಂತಹ ಸಮಯದಲ್ಲಿ ಸ್ನೇಹಿತರು, ಪರಿಚಿತರು, ಅಪರಿಚಿತರು ಯಾರಾದ್ರೂ ತಮ್ಮ ಬಗ್ಗೆ ಕೊಂಚ ಆಸಕ್ತಿ ತೋರಿಸಿದರೆ ತಾವವರನ್ನು, ಅವರು ತಮ್ಮನ್ನು ಪ್ರೀತಿಸ್ತಾ ಇದಾರೆ ಅನ್ನೋ ಭ್ರಮೆಗೆ ಸಿಲುಕಿ ಕನಸಿನ ಲೋಕದಲ್ಲಿ ಮುಳುಗಿ ಹೋಗ್ತಾರೆ. ತಾವಿಷ್ಟ ಪಡುವ ಗುಣಗಳೆಲ್ಲ ಅವರಲ್ಲಿ ಇದೆ ಅಂತ ನಂಬಿ ಬಿಡುತ್ತಾರೆ. ಕೆಲವರು ಅವರ ಈ ನಂಬಿಕೆಯ ದುರುಪಯೋಗ ಮಾಡಿಕೊಳ್ಳುತ್ತಾರೆ. ಆದರೆ ಅವರಲ್ಲಿ ತಾವು ಅಂದುಕೊಂಡ ಗುಣಗಳು ಇಲ್ಲ, ಬದಲಾಗಿ ಅವಗುಣಗಳೇ ತುಂಬಿವೆ ಅನ್ನುವುದು ಅರಿವಾದ ಕ್ಷಣ ಆಕಾಶ ದಲ್ಲಿ ತೇಲುತ್ತಾ ಇರುವಾಗ ಭೂಮಿಗೆ ಬಿದ್ದಂತಹ ಆಘಾತ ಆಗಿಬಿಡುತ್ತೆ ಅವರಿಗೆ . ನಾಲ್ಕು ದಿನ ತಾವು ಭಗ್ನ ಪ್ರೇಮಿಗಳು ಎಂದು ಖಿನ್ನತೆಗೆ ಒಳಗಾಗುತ್ತಾರೆ.ದುರ್ಬಲ ಮನಸ್ಸಿನವರು ಅದೇ ತಮ್ಮ ಜೀವನದ ಅತ್ಯಂತ ದೊಡ್ಡ ದುರಂತ ಎಂದು ಭಾವಿಸಿ ಬಿಡುತ್ತಾರೆ. ವಿವೇಚನೆ ಇರುವವರು ತಪ್ಪು ತಮ್ಮದೇ ಎಂದರಿತು ತಪ್ಪನ್ನು ತಿದ್ದಿ ಕೊಳ್ಳುತ್ತಾರೆ ".....

" ಹಾಗಾದ್ರೆ ನಿಜವಾದ ಪ್ರೇಮ ಎಂದರೆ ಏನು?"....

" ಪ್ರೇಮದ ನಿಜವಾದ ಅಡಿಪಾಯ ಗೌರವ. ಇಬ್ಬರು ವ್ಯಕ್ತಿಗಳ ಮಧ್ಯೆ ಏರ್ಪಡುವ ಯಾವುದೇ ಸಂಬಂಧ ವಾದರೂ, ಅದು ಗಟ್ಟಿಯಾಗಿ ಇರಬೇಕಾದರೆ ಗೌರವದ ತಳಪಾಯ ಅತ್ಯಗತ್ಯ. ಗೌರವದ ಭದ್ರತೆ ಇರದ ಯಾವುದೇ ಸಂಬಂಧವೂ ಟೊಳ್ಳಾ ಗಿ, ತೋರಿಕೆಗೆ ಮಾತ್ರ ಇರುವ ಸಂಬಂಧವಾಗಿ ಬಿಡುತ್ತದೆ. ಗೌರವಿಸುವ ವ್ಯಕ್ತಿಯ ಬಗ್ಗೆ ಪ್ರೇಮ ತಾನಾಗೇ ಉದಿಸತ್ತೆ..ಅದು ಗಟ್ಟಿಯಾಗಿರುತ್ತೆ.....ಗೌರವ ಹೇಗೆ ಹುಟ್ಟಬಹುದು ಹೇಳು....ನಾವು ನಮ್ಮ ಪ್ರಕಾರ ಯಾವ ಗುಣಗಳನ್ನು ಮೌಲ್ಯಗಳು ಎಂದು ಗುರುತಿಸುತ್ತೇವೆಯೋ ಅವುಗಳ ಬಗ್ಗೆ ಇನ್ನೊಬ್ಬ ವ್ಯಕ್ತಿಯ ಕ್ರಿಯೆ, ಪ್ರತಿಕ್ರಿಯೆಗಳು ಅವರ ಬಗ್ಗೆ ನಮ್ಮಲ್ಲಿ ಗೌರವವನ್ನು ಹುಟ್ಟು ಹಾಕುತ್ತವೆ. ಗೌರವ ಮುಂದೆ ಅಭಿಮಾನಕ್ಕೆ ದಾರಿ ಮಾಡಿಕೊಟ್ಟು ಅಂತಹ ವ್ಯಕ್ತಿತ್ವ ವುಳ್ಳ ವ್ಯಕ್ತಿ ತನಗೆ ಸಿಗಲಿ ಎನ್ನುವ ಹೃದಯದ ಅಂತರಾಳದಿಂದ ಹೊಮ್ಮುವ ಆಸೆಯನ್ನು ಹುಟ್ಟಿಸುತ್ತದೆ. ಆದರೆ ಅದರಲ್ಲಿ ಸ್ವಾರ್ಥ ಇರುವುದಿಲ್ಲ. ತನ್ನ ಬಗ್ಗೆಯೂ, ತಾನು ಗೌರವಿಸುವ ವ್ಯಕ್ತಿಯ ಬಗ್ಗೆಯೂ ಮನದಲ್ಲಿ ಉನ್ನತ ಭಾವ ಮೂಡುತ್ತದೆ.. ಇದೇ ಪ್ರೇಮ...."

" ಹಾಗಾದ್ರೆ ಅಜಯ್ ಬಗ್ಗೆ ನನಗಿದ್ದದ್ದು ಕೇವಲ ಆಕರ್ಷಣೆ ಮಾತ್ರಾನಾ? ಪ್ರೇಮ ಅಲ್ವಾ?..ಯಾಕಂದ್ರೆ ಅಜಯ್ ನಲ್ಲಿ ನನಗಿಷ್ಟ ವಾಗದ ಹಲವಾರು ಅಭ್ಯಾಸಗಳು, ದುರಭ್ಯಾಸಗಳು ಇವೆ. ನನಗಿನ್ನು ಅವನ ಸ್ನೇಹ ಬೇಡವೇ ಬೇಡ ಅನ್ನಿಸ್ತಾ ಇದೆ. ಇಷ್ಟು ದಿನ ನನ್ನ ಮನಸಿನ ಮೂಲೆಯಲ್ಲಿ ಯಾವುದೋ ಸಂದೇಹ ಮನೆ ಮಾಡಿತ್ತು. ಏನೋ ಅಸಮಾಧಾನ ಕಾಡ್ತಿತ್ತು. ಆದ್ರೆ ಇವತ್ತು ನಿರಾಳವಾಗಿ ಇದೆ ಮನಸ್ಸು. ಅಪ್ಪ, ಅಮ್ಮ, ಅಣ್ಣ ಅಷ್ಟೆಲ್ಲ ಬುದ್ಧಿ ಹೇಳಿದರೂ ನಾನ್ಯಾಕೆ ಅರ್ಥ ಮಾಡಿಕೊಳ್ಳಲಿಲ್ಲ? .... ಸಧ್ಯ ಮದುವೆ ಆಗಿ ಬಿಡಲಿಲ್ಲ ಅಲ್ಲ ನಾನು ಅವನನ್ನು..ಆದ್ರೆ ಅತ್ತಿಗೆ, ನಾನು ಯಾವುದೇ ನಿರ್ಧಾರ ತೊಗೋಬೇಕಾದರೂ ಎಲ್ಲಾ ದೃಷ್ಟಿಯಿಂದಲೂ ಆಲೋಚಿಸ್ತೀನಿ..ಇದರಲ್ಲಿ ಮಾತ್ರ ಯಾಕೆ ಬೇಸ್ತು ಬಿದ್ದೆ????".......

" ಯಾಕೆಂದ್ರೆ ನೀನು ಅಲೋಕನ್ನ ಪ್ರೀತಿಸ್ತಾ ಇರೋದು ನಿಂಗೆ ಗೊತ್ತಾಗಲಿಲ್ಲ ಅದಕ್ಕೆ".... ರೇಖಾ ಗಂಭೀರವಾಗಿ ನುಡಿದಾಗ ಅಂಕಿತಾ ಚಕಿತಾಗೊಂಡ ಮುಖದಿಂದ ಕೇಳಿದಳು ...." ಇದ್ಯಾಕೆ ಅತ್ತಿಗೆ, ಏನೇನೋ ಮಾತಾಡ್ತ ಇದ್ದೀ..."

" ಇರೋ ವಿಷಯ ಹೇಳ್ತಾ ಇದೀನಿ. ನಿನಗೆ ಅಲೋಕನ ಬಗ್ಗೆ, ಅವನ ಗುಣಗಳ ಬಗ್ಗೆ, ಅವನ ಗಾಂಭೀರ್ಯ ದ ಬಗ್ಗೆ ತುಂಬ ಗೌರವ ಇದೆ. ಅವನು ನಿನ್ನನ್ನು ಗುರುತಿಸಲಿ, ನಿನ್ನ ಸ್ನೇಹಕ್ಕಾಗಿ ಹಾತೊರೆಯಲಿ ಅಂತ ನಿನ್ನಲ್ಲಿದ್ದ ಅಹಂಕಾರ ಬಯಸಿತು. ಆದರೆ ಅವನು ಚಪಲನಲ್ಲ, ಚಂಚಲನಲ್ಲ ...ನಿನಗಿಂತ ୭....೮ ವರ್ಷ ದೊಡ್ಡವನಾದ ಅವನಲ್ಲಿ , ಮದುವೆಯ ನಂತರ ನೀ ಹೇಗೂ ಸಿಕ್ಕೇ ಸಿಗ್ತೀ ಅನ್ನುವ ಪ್ರಬುದ್ಧತೆ ಇದೆ. ನಮಗೆಲ್ಲ ಅವನೇ ನಿನ್ನ ಪತಿಯಾಗಲಿ ಅನ್ನುವ ಆಸೆ ಇರೋದು ಅವನಿಗೂ ಗೊತ್ತಲ್ಲ.....ಆದರೆ ಅವನ ಪ್ರಬುದ್ಧತೆ ನಿನ್ನ ಬಗೆಗಿನ ಅಲಕ್ಷ್ಯ ಅಂತ ನಿನಗೆ ಅನ್ನಿಸಿತು. ಮೇಲೆ ಬಿದ್ದು ಅವನ ಲಕ್ಷ್ಯ ಸೆಳೆಯಲು ನೀನೂ ಚೆಲ್ಲು ಹುಡುಗಿ ಅಲ್ಲ . ಸರಿಯಾಗಿ ಅದೇ ಸಮಯಕ್ಕೆ ನಿನಗೆ ಆದ ಅಜಯ ನ ಸ್ನೇಹ ನಿನಗೊಂದು ಪ್ರೇರಣೆ ಸಿಕ್ಕಂತಾಯಿತು. ಬೇಕೆಂತಲೇ ನೀನು ಅಜಯನಿಗೆ ನಿನ್ನಲ್ಲಿದ್ದ ಆಸಕ್ತಿಯನ್ನು ಪ್ರೋತ್ಸಾಹಿಸಿದೆ ಅಲೋಕ್ ನನ್ನು ಕೆಣಕಲು. ಆದರೆ ಹಾಗಾಗಲಿಲ್ಲ. ಬದಲಾಗಿ ಅತ್ತೆ, ಮಾವ, ನಿನ್ನ ಅಣ್ಣ ಎಲ್ಲ ಹೆದರುವಂತೆ ಮಾಡಿದೆ. ಆದರೆ ಸ್ವಾನುಭವದ ಮುಂದೆ ಯಾವ ಪಾಠವೂ ಬೇಡ. ಏನೋ ಘಟಿಸಿ ನೀನು ಎಚ್ಚೆತ್ತುಕೊಳ್ಳುವ ಹಾಗೆ ಆಯ್ತು. ಚೆನ್ನಾಗಿ ಆಲೋಚಿಸಿ ನಿನ್ನ ಆಯ್ಕೆ ಯಾರು ಅಂತ ತಿಳಿಸು . "

"ಮತ್ತೊಂದು ವಿಷಯ. ಅಲೋಕ ನಿನ್ನನ್ನು ಗಮನಿಸಲಿಲ್ಲ ಅಂತ ಅಂದುಕೊಳ್ತಿ ದ್ದೀ. ಆದರೆ ಅವನು ನಿನ್ನ ಬಗ್ಗೆ ಅರಿತುಕೊಂಡಿರುವಷ್ಟು ನಿನ್ನ ಬಗ್ಗೆ ನಿನಗೇ ಗೊತ್ತಿಲ್ಲ. ನಿನ್ನ ಬಗ್ಗೆ ಅವನಿಗೆ ಪ್ರೀತಿ, ನಂಬಿಕೆ, ಗೌರವ, ವಿಶ್ವಾಸ, ಸ್ನೇಹ ಎಲ್ಲವೂ ಇದೆ. ನೀನು ಅಜಯನ ಜೊತೆ ತಿರುಗಾಡುತ್ತ ಇದ್ದರೂ ನಿನ್ನ ಬಗೆಗಿನ ಆಸಕ್ತಿ, ಕಾಳಜಿ ಹಾಗೆಯೇ ಇದೆ. ಚೂರೂ ಅಪನಂಬಿಕೆ ಇಲ್ಲ. ನಿನ್ನ ತಂದೆ ತಾಯಿಯರನ್ನು ಸ್ವಂತ ತನ್ನ ಹೆತ್ತವರಂತೆ ನೋಡಿಕೊಳ್ತಾನೆ. ನಿನ್ನ ಅಣ್ಣನ ಕಷ್ಟದ ಸಮಯದಲ್ಲಿ ತನ್ನ ಸಹಾಯ ಹಸ್ತ ಚಾಚುವ ದೊಡ್ಡ ಗುಣ ಇದೆ. ಅತ್ತೆ ,ಮಾವ ಊರಲ್ಲಿ ಇಲ್ಲದಾಗೊಮ್ಮೆ ನೀನು ಟೈಫಾಯಿಡ್ ಆಗಿ ಮಲಗಿಬಿಟ್ಟೆ ಆಗ ಆಫೀಸಿಗೆ ರಜೆ ಹಾಕಿ ನಿನ್ನ ಸೇವೆ ಮಾಡಿರೋದು ನೆನಪಿಸಿಕೊ. ಎಲ್ಲದರ ಬಗ್ಗೆ ಆಲೋಚಿಸುವ ಮನಸ್ಸು ಮಾಡು. ".....

ರಾತ್ರಿ ಮಲಗಿದಾಗ ಅಲೋಕನ ಬಗೆಯೇ ಆಲೋಚನೆ. ಅತ್ತಿಗೆ ಹೇಳಿದ್ದೆಲ್ಲ ಸತ್ಯವಿರಬಹುದೆ? ಇರಬೇಕು. ಇಲ್ಲಾಂದ್ರೆ ಇಷ್ಟು ದಿನ ಬಲವಂತವಾಗಿ ಅಜಯನನ್ನು ಮನದೊಳಗೆ, ಕನಸಿನೊಳಗೆ ಬರಮಾಡಿ ಕೊಳ್ಳುತ್ತಿದ್ದಳು. ಆದರೂ ಏನೋ ಅಸಹನೆ...ಬಹುಬೇಗ ನಿದ್ರೆಗೆ ಜಾರಿ ಬಿಡುತ್ತಿದ್ದಳು.ಆದರೆ ಈ ದಿನ ಮನ ಪುಳಕಿತವಾಗುತ್ತಿದೆ. ಹೌದು, ತಾನವನನ್ನು ತುಂಬಾ ಗೌರವಿಸುತ್ತೇನೆ. ಆರಾಧಿಸುತ್ತಿದ್ದೇನೆ. ತಾನು ಸಿಕ್ಕಾಪಟ್ಟೆ ಜ್ವರದಲ್ಲೊಮ್ಮೆ ಅವನು ಪಕ್ಕದಲ್ಲೇ ಕುಳಿತಿರುವಾಗ ವಾಂತಿ ಮಾಡಿದ್ದಾಗ ಅವನ ಮೈಮೇಲೆಲ್ಲಾ ಆಗಿತ್ತು. ಆದರೆ ಕೊಂಚವೂ ಅಸಹ್ಯಿಸಿಕೊಳ್ಳದೆ , ಜುಗುಪ್ಸೆ ಪಡದೆ, ಅತ್ತಿಗೆ ಬರುವ ಮುಂಚೆಯೇ ಎಲ್ಲವನ್ನೂ ಸ್ವಚ್ಛಗೊಳಿಸಿದ್ದ. ತನ್ನ ಮುಖ ತೊಳೆಸಿ ತನ್ನ ತಲೆ ಸವರುತ್ತಾ ಕುಳಿತಿದ್ದ. ಎಂತಹ ಹಿತವಾಗಿತ್ತಾಗ.!!...ಹೌದು, ತನ್ನನ್ನು ತುಂಬಾ ಪ್ರೀತಿಸುತ್ತಾನೆ ಅಲೋಕ್.. ಪ್ರೀತಿಯ ಮತ್ತೊಂದು ಮುಖವೇ ತಾಳ್ಮೆ. ತನಗಾಗಿ ತಾಳ್ಮೆಯಿಂದಲೇ ಕಾಯುತ್ತಿದ್ದಾನೆ. ಅಂತಹ ಹೀನಾಯ ಸ್ಥಿತಿಯಲ್ಲೇ ತನ್ನ ಮೇಲೆ ಅತೀವ ಪ್ರೇಮ ತೋರಿದವನನ್ನು ತಾನೆಷ್ಟು ನೋಯಿಸಿದೇನೋ ಎನ್ನಿಸಿತು. ತಾನು ಪ್ರೇಮಿಸಿ ದವನಿಗಿಂತ ತನ್ನನ್ನು ಪ್ರೇಮಿಸುವ ವ್ಯಕ್ತಿಯನ್ನು ಮದುವೆಯಾಗುವ ಹೆಣ್ಣು ಹೆಚ್ಚು ಸುಖಿ ಎಂದು ಎಲ್ಲೋ ಓದಿದ್ದು ನೆನಪಾಯ್ತು. ತನ್ನ ಮನದ ಗೋಡೆಯ ತುಂಬಾ ಚಿತ್ತಾರ ಬಿಡಿಸಿದವ ಆಲೋಕ ನೇ ಎಂಬ ಅರಿವು ಮೂಡಿದೊಡನೆ ಸುಖವಾದ, ನಿರಾಳವಾದ ನಿದ್ರೆ ಬಂತು.

ಬೆಳಗ್ಗೆ ವಾಕಿಂಗ್ ಮುಗಿಸಿಬಂದ ಅಪ್ಪ, ಅಮ್ಮ ನ ಹತ್ತಿರ ಓಡಿದಳು. " ಅಮ್ಮಾ, ಅಪ್ಪಾ, ನಾನು ಅಲೋಕ್ ನ ಮದುವೆ ಆಗಕ್ಕೆ ಒಪ್ಪಿದೀನಿ. " ಅವರಿಬ್ಬರ ಮುಖಕಮಲಗಳು ಹಿಗ್ಗಿನಿಂದ ಅರಳುವುದನ್ನು ನೋಡಿ ಸಂಭ್ರಮ ಆಯ್ತು. ಹಿಂದಿನ ರಾತ್ರಿಯೇ ರೇಖಾಳಿಂದ ವಿಷಯ ತಿಳಿದಿದ್ದ ಶ್ರೀಧರ ಗಟ್ಟಿಯಾಗಿ ಶಿಳ್ಳೆ ಹಾಕಿದ. " ಈಗ ಅಲೋಕನಿಗೆ ನಾನು ಫೋನ್ ಮಾಡ್ಲಾ ನೀನೇ ಮಾಡ್ತೀಯಾ?"... ಯು ಟರ್ನ್ ತೆಗೆದುಕೊಂಡ  ತಂಗಿಗೆ  ತಮಾಷೆ ಮಾಡಿದ.

" ನಾನೇ ಮಾಡ್ತೀನಿ".....ಫೋನ್ ಕೈಗೆತ್ತಿ ಕೊಂಡು ಕೋಣೆಗೆ ನಡೆದಳು ಅಂಕಿತಾ....

**********************************************

    ಪ್ರತಿಲಿಪಿ ವೇದಿಕೆಯಲ್ಲೂ  ಪ್ರಕಟಿತ)


Rate this content
Log in

Similar kannada story from Romance