STORYMIRROR

Indira Udupa

Inspirational

4  

Indira Udupa

Inspirational

ತೀರ್ಮಾನ

ತೀರ್ಮಾನ

5 mins
12

" ಇಲ್ಲಾರೀ,. ನನಗಂತೂ ಈ ಕೆಲಸ ಬಿಡುವ ಮನಸ್ಸಿಲ್ಲ. ನಾನಷ್ಟು ಶ್ರಮ ಹಾಕಿ ಓದಿ, ಅರ್ಹತೆಯ ಆಧಾರದ ಮೇಲೆ ಇಂತಹ ಅಂತರ್ದೇಶೀಯ ಕಂಪೆನಿಯ, ಅದರಲ್ಲೂ ತಿಂಗಳಿಗೆ ೮೦,೦೦೦/ ರೂ ಸಂಬಳ, ಇತರ ಏನೆಲ್ಲಾ ಸವಲತ್ತುಗಳಿಂದ ಕೂಡಿರೋ ಈ ಕೆಲಸವನ್ನ , ಕೇವಲ ನಾನು ತಾಯಿ ಆಗ್ತಾ ಇದೀನಿ ಅನ್ನೋ ಕಾರಣಕ್ಕೊಸ್ಕರ ಬಿಡಲು ನಾ ತಯಾರಿಲ್ಲ. ಈ ಕೆಲಸಾ ಬಿಟ್ಟರೆ ನಾನೆಂತ ಪೆದ್ದಿ ಆಗ್ತೀನಿ ಗೊತ್ತಾ?"... ಆರತಿ ಎಂದಾಗ ಗೌತಮ ಗಂಭೀರನಾದ.

" ನೀನು ಕೆಲಸ ಬಿಟ್ಟು ಬಿಡೋದು ನನಗೂ ಇಷ್ಟ ಇಲ್ಲ ಮುದ್ದು....ಆದರೆ ನಾವು ಕುಟುಂಬ ಬೆಳೆಸುವುದು ಎರಡು ವರ್ಷಗಳ ನಂತರ ಅಂದುಕೊಂಡಿದ್ದರೂ ಈಗ ಅಚಾನಕ್ ಆಗಿ ನೀನೀಗ ಈ ಸ್ಥಿತಿಯಲ್ಲಿದ್ದೀ.....ಇದಕ್ಕೆ ನನಗೆ ಹೊಳೀತಾ ಇರೋ ಒಂದೇ ಮಾರ್ಗ ಅಂದರೆ ನೀನು ಸದ್ಯಕ್ಕೆ ಕೆಲಸ ಬಿಟ್ಟು ಮಗುವಿಗೆ 4...5 ವರ್ಷಗಳು ಆದ ನಂತರ ಮತ್ತೆ ಕೆಲಸ ಮಾಡು...ನಿನ್ನ ವಿದ್ಯೆಗೆ, ಅರ್ಹತೆಗೆ ಕರೆದು ಕೆಲಸ ಕೊಡೋದಂತೂ ಖಂಡಿತಾ.......ಆದರೆ ಅಂತಿಮ ನಿರ್ಣಯ ನಿನ್ನದು......ನನ್ನಿಂದ ನಿನಗೆ ಯಾವುದೇ ಒತ್ತಾಯವಿಲ್ಲ..." ಗೌತಮ ನುಡಿದ.

" ನನಗೆ ಗೊತ್ತು ರೀ...ನೀವು ನನ್ನ ಪತಿಯಷ್ಟೇ ಅಲ್ಲ, ಉತ್ತಮ ಸ್ನೇಹಿತ ಹಾಗೂ ಶ್ರೇಯೋಭಿಲಾಶಿ ಅಂತ...ನನ್ನ ಒಳಿತನ್ನೇ ಸದಾ ಬಯಸುವವರು ಅಂತ.... ಹಾಗಾಗಿಯೇ ನಿಮ್ಮ ಹತ್ರ ಎಲ್ಲ ಹೇಳಿಕೊಳ್ಳೋದು ನಾನು..........." ಭಾವುಕಳಾಗಿ ಆರತಿ ಹೇಳಿದಳು......' ಬೇರೆ ಕೆಲಸ ಸಿಗಬಹುದು. ನನ್ನ ವೃತ್ತಿಯಲ್ಲಿ ಬಡ್ತಿಗಳನ್ನೂ ಕಳೆದುಕೊಳ್ಳ ಬಲ್ಲೆ..ಆದ್ರೆ ನಮ್ಮ ಕಂಪೆನಿ ಯ ವಿನಿಮಯ ನಿಯಮದಂತೆ ಈ ಬಾರಿಯ ವಿನಿಮಯ ಅಭ್ಯರ್ಥಿಯಾಗಿ ನನ್ನ ಆಯ್ಕೆ ಆಗಿತ್ತು...ಇನ್ನು ಮೂರು ತಿಂಗಳಿಗೆ ವಿದೇಶಕ್ಕೆ ಹೋಗಿ ಒಂದು ವರ್ಷಕಾಲ ಅಲ್ಲಿ ದುಡಿಯುವ ಹಂಬಲ ನನಗಿದ್ದುದು ನಿಮಗೂ ಗೊತ್ತಿದೆ. ಈಗ ನಾನು ನಿರಾಕರಿಸಿದರೆ ಮುಂದೆಂದೂ ನನ್ನನ್ನು ಆಯ್ಕೆ ಮಾಡುವುದಿಲ್ಲ....ಪ್ಲೀಸ್, ನನ್ನ ಆರ್ಥ ಮಾಡಿಕೊಳ್ಳಿ....ಬೆಳಗ್ಗೆಯಿಂದ ತಲೆ ಕೆಡಿಸಿಕೊಂಡು ಒಂದು ನಿರ್ಧಾರಕ್ಕೆ ಬಂದಿದೀನಿ. ದಯವಿಟ್ಟು ನನಗೆ ಒತ್ತಾಸೆಯಾಗಿ ನಿಲ್ಲಿ........." ಕಂಬನಿ ತುಂಬಿದ ಕಣ್ಣುಗಳಿಂದ ಗೌತಮ್ ನನ್ನೇ ನೋಡುತ್ತಾ ಕೈ ಮುಗಿದು ಬೇಡಿಕೊಂಡ ಪತ್ನಿಯನ್ನು ನೋಡುತ್ತಾ ಗೌತಮ ನೋವಿನಿಂದ ಮುದುಡಿದ ಮೊಗದಿಂದ ನುಡಿದ....

" ನಿನ್ನ ನಿರ್ಧಾರ ಅರ್ಥ ಆಯ್ತು...ಮದುವೆಯಾಗಿ 3 ವರ್ಷ ಆಯ್ತು....ಕೇಳುವವರಿಗೆ ಉತ್ತರ ಸಿಕ್ಕಿತು ಅಂದುಕೊಂಡೆ...ಇರಲಿ ಬಿಡು......ನಿನ್ನ ನಿರ್ಧಾರ ಬೆಂಬಲಿಸುವುದು ನನ್ನ ಧರ್ಮವೂ ಹೌದು...ಕರ್ತವ್ಯವೂ ಹೌದು....ಅದೆಲ್ಲಕ್ಕಿಂತ ಹೆಚ್ಚಾಗಿ ನಾನು ಇಷ್ಟೊಂದು ಪ್ರೀತಿಸೋ ನೀನು ಯಾವ ಕಾರಣಕ್ಕೂ ನೋಯಬಾರದು..'"

"ಥಾಂಕ್ಯೂ ರೀ ...ಥಾಂಕ್ಯೂ".....ಅವನ ಚಾಚಿದ ತೋಳುಗಳಲ್ಲಿ ಸೇರಿ ಅವನ ಕುತ್ತಿಗೆಯಲ್ಲಿ ಮುಖ ಮರೆಸಿದಳು ಕಣ್ಣೀರು ಕಾಣದಿರಲೆಂದು.....

ತಾನು ಗರ್ಭಿಣಿ ಎಂದು ತಿಳಿದಾಗಲಿಂದ ಇದ್ದ ತೊಳಲಾಟ ಇಲ್ಲವಾಗಿ ರಾತ್ರಿ ಒಳ್ಳೆಯ ನಿದ್ದೆ ಬಂತು ಆರತಿಗೆ. ಬೆಳಗ್ಗೆ ಕಚೇರಿಯಲ್ಲಿ ಸಹೋದ್ಯೋಗಿಯೂ, ಸ್ನೇಹಿತೆಯೂ ಆಗಿದ್ದ ಜಾನೆಟ್ ಳ ಜೊತೆ ಊಟದ ಸಮಯದಲ್ಲಿ ಪ್ರಸ್ತಾಪಿಸಿದಳು.. ಅವಳು ಗರ್ಭಿಣಿ ಎಂದು ತಿಳಿದಾಗ ಅರಳಿದ್ದ ಜಾನೆಟ್ ಮುಖ ಅವಳ ನಿರ್ಧಾರದ ಮಾತು ಕೇಳಿ ಚಿಂತಾಕ್ರಾಂತವಾಯಿತು....." ನೀನು ಸರಿಯಾದ ನಿರ್ಧಾರ ತೆಗೆದುಕೊಂಡಿದ್ದೀ ಅಂತ ಅನ್ನಿಸ್ತಾ ಇದೆಯಾ?" ತರಾಟೆಗೆ ತೆಗೆದುಕೊಂಡಳು ಗೆಳತಿಯನ್ನು... ..." ಹೌದು, " ಆರತಿ ಅವಳಷ್ಟೇ ಗಂಭೀರವಾಗಿ ಉತ್ತರಿಸಿದಳು...." ಮುಂದಿನ ಪರಿಣಾಮಗಳ ಬಗ್ಗೆ ಆಲೋಚಿಸಿದ್ದೀಯಾ?" ಜಾನೆಟ್ ಕೇಳಿದಾಗ ...." ಇಲ್ವೇ, ಸದ್ಯ ಈಗ ಏನು ಮಾಡೋದು ಅನ್ನೋ ಯೋಚನೆಯೇ ಸಾಕಷ್ಟು ತಲೆ ತಿಂದಿತ್ತು..." ಆರತಿ ತಲೆ ಬಗ್ಗಿಸಿದಳು.

" ಡಾಕ್ಟರ್ ಗಳು ಏನಂತಾರೆ ಗೊತ್ತೇನೆ? ಮದುವೆಯಾಗಿ ಒಂದೋ ಎರಡೋ ವರ್ಷ ಕುಟುಂಬ ಯೋಜನೆ ಸಾಕು. ನಂತರ ಮಗುವಾಗಲಿ. ಇನ್ನೊಂದು ಮಗು ಬೇಕಿದ್ದ ಪಕ್ಷದಲ್ಲಿ ಮತ್ತೆ ಮೂರು ವರ್ಷ ಕಾಯಿರಿ. ಇಲ್ಲಾಂದ್ರೆ ಶಾಶ್ವತ ತಡೆ ಏರ್ಪಾಡು ಮಾಡಿಕೊಳ್ಳಿ. ಆದರೆ ಮೊದಲನೇ ಗರ್ಭವನ್ನು ಯಾವುದೇ ವೈದ್ಯಕೀಯ ಕಾರಣಗಳು ಇಲ್ಲದೆ ತೆಗೆಸಬೇಡಿ. ನುರಿತ ವೈದ್ಯರಿಂದಲೇ ಮಾಡಿಸಿದ್ದರೂ ಸಹ ಪ್ರಕೃತಿಯ ಮುನಿಸಿನಿಂದ ಮುಂದೆ ಮಕ್ಕಳಾಗುವ ಸಾಧ್ಯತೆಯೇ ಇಲ್ಲವಾಗಬಹುದು. ಎಲ್ಲರಿಗೂ ಹಾಗೆಯೇ ಆಗಬೇಕೆಂಬ ನಿಯಮ ಇಲ್ಲ ಹೌದು..ಆದರೂ ನೀನು ಅಬಾರ್ಷನ್ ಮಾಡಿಸಹೋಗೋದು ನನಗ್ಯಾಕೋ ಸಮಾಧಾನವಿಲ್ಲ. ಒಂದು ಕೆಲಸ ಮಾಡು. ಮಗುವನ್ನು ಹೆತ್ತು ನನಗೆ ಕೊಟ್ಟುಬಿಡು. ನಾನೂ ಜಾರ್ಜ್ ಒಂದೇ ಒಂದು ಮಗುವಿಗೋಸ್ಕರ 7 ವರ್ಷಗಳಿಂದ ಪರಿತಪಿಸುತ್ತಿದ್ದೀವಿ. ನಾನು ಸಾಕಿಕೊಳ್ತೇನೆ ಮಗೂನ...ಈಗ ನಿನ್ನ ಕರುಳ ಕುಡೀನ ಚಿವುಟಬೇಡ ".....ಅಳುತ್ತಳುತ್ತ ಹೇಳಿದ ಗೆಳತಿಯ ಮುಖವ ಅಚ್ಚರಿಯಿಂದ ದಿಟ್ಟಿಸಿದಳು ಆರತಿ....

" ನಾನು ಏನು ಅಂದುಕೊಂಡಿದ್ದೆ ಗೊತ್ತಾ?... ನಿಮ್ಮ ಇಂತಹ ಉನ್ನತ ಉದ್ಯೋಗಗಳಿಗೆ ಧಕ್ಕೆ ಬರತ್ತೆ ಅಂತ ಮಕ್ಕಳು ಬೇಡ ಅಂತ ನಿರ್ಧಾರ ಮಾಡಿದೀರಿ ಅಂತ.......ಛೇ...... ಡಾಕ್ಟರ್ ಹತ್ರ ಹೋಗಿದ್ರಾ? ಏನಂದ್ರು?"

ಜಾನೆಟ್ ವಿಷಣ್ಣಳಾಗಿ ನುಡಿದಳು... "ಏನಂತಾರೆ? ಇಬ್ಬರಲ್ಲೂ ದೋಷವಿಲ್ಲ....ತಾಳ್ಮೆ ಇರಲಿ ಅಂತಾರೆ...ಮದುವೆಯಾದ ಎರಡೇ ತಿಂಗಳಿಗೆ ಗರ್ಭ ನಿಂತಾಗ ಇಷ್ಟು ಬೇಗ ಬೇಡ ಅಂತ ತೊಗೊಂಡ ನಿರ್ಧಾರದ ಪ್ರತಿಫಲ ಇದು ಅಂತ ನಂಗೆ ಚೆನ್ನಾಗಿ ಗೊತ್ತು. "

" ಅಯ್ಯೋ.... ಛೇ.....ಆದಷ್ಟು ಬೇಗ ನೀನು ಮಗುವನ್ನೆತ್ತಿಕೊಳ್ಳುವ ದಿನ ಬರಲಿ ಅಂತ ನಾನು ಹೃತ್ಪೂರ್ವಕವಾಗಿ ಹಾರೈಸ್ತೀನಿ....ಒಂದು ವೇಳೆ ಮಗುವಾದ್ರೆ ನಿನ್ನ ಉದ್ಯೋಗ? "

" ನಾನು ಗರ್ಭಿಣಿ ಅಂತ ತಿಳಿದ ಕೂಡಲೇ ಮಾಡೋ ಮೊದಲ ಕೆಲಸ ರಾಜೀನಾಮೆ ಕೊಡೋದು. ಅದರ ಬಗ್ಗೆ ಎರಡನೇ ಆಲೋಚನೆಯೇ ಇಲ್ಲ.. ಜಾರ್ಜ್ ದುಡಿಯೋದು ನಾವು ಆರಾಮವಾಗಿ ಇರಲಿಕ್ಕೆ ಸಾಕು. ನನ್ನ ಮಾತು ಕೇಳು .ನಿನ್ನ ನಿರ್ಧಾರ ಬದಲಿಸು. ನಿನ್ನ ಗೌತಮನಿಗೋಸ್ಕರ. ಅವನಿಗೆ ಮಕ್ಕಳು ಅಂದ್ರೆ ಪ್ರಾಣ. ನಿನ್ನನ್ನು ಎಷ್ಟು ಪ್ರೀತಿಸ್ತಾನೆ ಅಂದ್ರೆ ಅವನ ಆಸೆಯನ್ನು ನಿನ್ ಮೇಲೆ ಹೇರದಿರುವಷ್ಟು. ...ನಿನ್ನ ಸ್ವಾರ್ಥದಲ್ಲಿ ಮುಳುಗಿ ಅವನ ಪ್ರೀತಿಗೆ ಅವಮಾನ ಮಾಡಬೇಡ."..

ರಾತ್ರಿ ಊಟ ಮಾಡುವಾಗ ಮೌನವಹಿಸಿದ್ದ ಮಡದಿಗೆ ಮೆಲು ನುಡಿದ ಗೌತಮ..." ಡಾಕ್ಟರ್ ಹತ್ರ ಶನಿವಾರ ಹೋಗೋಣ ಮುದ್ದು? ಇವತ್ತು ಗುರುವಾರ."...ತಲೆಯೆತ್ತಿ ತನ್ನತ್ತ ನೋಡಿದವಳ ಕಣ್ಣ ಹೊಳಪು ಕಂಡು ಬೆರಗಾದ...

" ಹಾಂ....ಹೋಗಿ ಏನೇನು ಮಾಡಬೇಕು, ಮಾಡಬಾರದು ಎಲ್ಲ ಕೇಳಿಬರ್ತೀನಿ....ಜಾಗ್ರತೆಯಿಂದ ನೋಡಿಕೋಬೇಕಲ್ಲ ಪುಟ್ಟ ಗೌತಮ್/ಪುಟ್ಟ ಆರತಿಯನ್ನ"....ಅಪನಂಬಿಕೆಯಿಂದ ಮಡದಿಯ ಮುಖ ನೋಡಿದವನಿಗೆ ಅವಳ ತುಂಟನಗೆ, ಪ್ರಸನ್ನತೆ ಅಪ್ಯಾಯಮಾನವಾಗಿತ್ತು...ಅವನ ಮುಖಕ್ಕೂ ಹರಡಿತು ಆ ಪ್ರಸನ್ನತೆ....ಕೃತಜ್ಞತೆ ಬೆರೆತ ಪ್ರೀತಿಯಿಂದ ಅವಳ ಕೈ ಅದುಮಿದ.

" ಅಬ್ಬಾ, ನಿನ್ನೆಯಿಂದ ಮುಖ ನೋಡಕ್ಕೆ ಆಗ್ತಿರಲಿಲ್ಲ. ಈಗ ನೋಡು ಹೇಗೆ ಅರಳಿದೆ ಅಂತ" ....ಆರತಿ ರೇಗಿಸಿದಾಗ ಸಂತಸದಿಂದ ಜೋರಾಗಿ ನಕ್ಕ..." ಆದ್ರೆ, ಅರೂ, ನಿನ್ನ ವಿದೇಶ ಪ್ರವಾಸ?".....

" ಬೇರೆ ಯಾರಾದ್ರೂ ನನ್ನ ಜಾಗದಲ್ಲಿ ಹೋಗ್ತಾರೆ ಬಿಡಿ..ಆದರೆ ನನ್ನ ಈ ಕೆಲಸ ನಾನೇ ಮಾಡಬೇಕಲ್ಲ...ಬೇರೆ ಯಾರೂ ಮಾಡಕ್ಕೆ ಸಾಧ್ಯವಿಲ್ಲ ತಾನೇ..." ಕಣ್ಣು ಮಿಟುಕಿಸಿ ನಕ್ಕಾಗ ಗೌತಮ ಗಂಭೀರವಾಗಿ ಕೇಳಿದ..........." ನಿನಗೆ ಬೇಸರವೇನೂ ಇಲ್ಲ ತಾನೇ? ಈ ಸಮಯದಲ್ಲಿ ಯಾವಾಗಲೂ ನೆಮ್ಮದಿಯಿಂದ, ಖುಷಿಯಿಂದ ಇರಬೇಕು ಅಂತ ಹೇಳ್ತಾರಲ್ವಾ?"... ............" ಖಂಡಿತಾ ನಾನ್ಯಾವ ಬೇಸರವನ್ನೂ ಇಟ್ಟುಕೊಂಡಿಲ್ಲಪ್ಪ.... ನಾನೆಷ್ಟು ವಾಸ್ತವವಾದಿ ಅಂತ ನಿಮಗೆ ಗೊತ್ತಲ್ಲ...ವಿದೇಶ ಪ್ರವಾಸ ಮುಂದೆ ಯಾವಾಗಲಾದರೂ ಹೋಗಿಬರೋಣ ಬಿಡಿ...."

" ನಿನ್ನ ಕೆಲಸ?"....

" 6-7 ತಿಂಗಳಾಗುವ ಹೊತ್ತಿಗೆ ನನ್ನ ದೊಡ್ಡ ಅಕ್ಕನನ್ನ ಬಂದಿರಕ್ಕಾಗತ್ತಾ ಅಂತ ಕೇಳ್ತೀನಿ...ಹೇಗೂ ಅವಳ ಇಬ್ಬರು ಮಕ್ಕಳೂ ಅವರವರ ಮನೆ ಜವಾಬ್ದಾರಿ ಹೊತ್ತಿದ್ದಾಗಿದೆ. ಅಕ್ಕ ಒಂದೆರಡು ವರ್ಷ ನಮ್ಮ ಜೊತೆಯಿದ್ದು ಮಗುವನ್ನ ನೋಡಿಕೊಳ್ಳೋದಾದರೆ ನಿಶ್ಚಿಂತೆಯಿಂದ ಕೆಲಸಕ್ಕೆ ಹೋಗಿಬರ್ತೀನಿ. ಕೆಲಸದವರ ಕೈಲಿ ಮಗುವನ್ನ ಬಿಟ್ಟು ಹೋಗಕ್ಕೆ ಸುತರಾಂ ಇಷ್ಟವಿಲ್ಲ. ರಾತ್ರಿ ಅಕ್ಕಂಗೆ ಫೋನ್ ಮಾಡ್ತೀನಿ. "

" ಹಾಗೇ ಮಾಡು' ಗೌತಮ ಅನುಮೋದಿಸಿದ..

ರಾತ್ರಿ ಅಕ್ಕನಿಗೆ ಫೋನಾಯಿಸಿದಾಗ ಅಕ್ಕನ ಮಗ ಹರೀಶನ ಧ್ವನಿ ತೇಲಿಬಂತು..." ಆರೇ ಆರು ಚಿಕ್ಕಿ, ಅಮ್ಮ ನಿನಗೀಗ ಫೋನ್ ಮಾಡಲು ಹೇಳ್ತಾ ಇದ್ಲು.....ನೀನೇ ಮಾಡಿಬಿಟ್ಟಿದ್ದೀ...."

" ಯಾಕೋ, ಏನು ಸಮಾಚಾರ?"

" ಅಮ್ಮ ಈಗ ಗ್ರಾಜುಯೇಟ್ ಆಗಲು ಹೊರಟಿದ್ದಾಳೆ... ಮುಕ್ತ ವಿಶ್ವವಿದ್ಯಾಲಯದ ಪರೀಕ್ಷೆ ತೆಗೆದುಕೊಳ್ತಾಳಂತೆ. ಇಲ್ಲೇ ಹತ್ತಿರದಲ್ಲೇ ತರಗತಿಗಳೂ ನಡೀತವೆ. ಬಹಳ ವರ್ಷಗಳ ಬಯಕೆ ಈಗ ಈಡೇರಿಸಿಕೊಳ್ತಾಳಂತೆ."....ಅಕ್ಕ ಮಗನಿಂದ ಫೋನ್ ಕಸಿದುಕೊಂಡು ಹಲೋ ಹೇಳಿದಳು...."

" ಹಲೋ ಅಕ್ಕ, ಅಭಿನಂದನೆಗಳು...ತುಂಬಾ ಖುಷಿ ಆಗ್ತಿದೆ. ಅಂತೂ 17 ವರ್ಷಕ್ಕೇ ಮದುವೆಯಾಗಿ
ಪಿ ಯು ಸಿ ಗೆ ವಿದ್ಯಾಭ್ಯಾಸ ಮುಂದುವರೆಸದೆ ನಿಲ್ಲಿಸಿಬಿಟ್ಟಿದ್ದವಳು....ಮದುವೆಯಾದ 5 ವರ್ಷಕ್ಕೇ ಗಂಡನನ್ನು ಕಳೆದುಕೊಂಡವಳು, ಮಕ್ಕಳನ್ನು ಒಂದು ಹಂತಕ್ಕೆ ತಂದು ನಿಲ್ಲಿಸಿ , ಈಗ ಕಾಲ ವ್ಯರ್ಥ ಮಾಡಲು ಇಚ್ಚಿಸದೆ ಪರೀಕ್ಷೆಗೆ ಕೂರಲು ಹೊರಟಿದ್ದೀ....ನಿನ್ನ ಉತ್ಸಾಹಕ್ಕೆ ಏನು ಕೊಟ್ಟರೂ ಸಾಲದು" .......

ಅಕ್ಕನ ಸ್ವರದಲ್ಲಿ ಸಂತಸ ಉಕ್ಕಿ ಹರಿಯುತ್ತಿತ್ತು. "ಹೌದೇ ಆರು, ನನಗೂ ನನ್ನ ಬಗ್ಗೆ ಹೆಮ್ಮೆ ಅನ್ನಿಸ್ತಿದೆ....ಎಷ್ಟೆಲ್ಲ ಕಷ್ಟಗಳ ಎದುರಿಸಿಯೂ ಏನಾದರೂ ಸಾಧನೆ ಮಾಡುವ ನನ್ನ ಉತ್ಸಾಹಕ್ಕೆ ಧಕ್ಕೆ ಬಂದಿಲ್ಲ......ನೀನು ಹೇಗಿದ್ದೀ? ಏನು ಸಮಾಚಾರ? "...

" ನಾವು ಚೆನ್ನಾಗಿದೀವಿ....ನಿನ್ನ ಜೊತೆ ಮಾತಾಡಬೇಕು ಅನ್ನಿಸ್ತು. ಮಾಡಿದ್ದಕ್ಕೆ ಒಳ್ಳೆ ಸಮಾಚಾರ ಸಿಕ್ಕಿತು ನೋಡು. ಖುಷಿಯಾಯ್ತು ತುಂಬಾ....ನೀವೆಲ್ಲ ಆರಾಮ ತಾನೇ? "....

ಫೋನ್ ಕೆಳಗಿಟ್ಟು ವಿಷಯ ನಿವೇದಿಸಿದ ಮಡದಿಗೆ ಗೌತಮ ಕೇಳಿದ..." ಏನು ಮಾಡೋದು ಈಗ ಅರೂ? ನನ್ನಮ್ಮನನ್ನು ಕೇಳೋಣವಾ?'

" ಬೇಡಾ ರೀ....ವಯಸ್ಸಾದವರ ಹತ್ತಿರ ಮಾಡಿಸಿಕೊಳ್ಳೋದು ಸರಿಯಲ್ಲ...ನನಗೆ ಆಗುವಷ್ಟು ದಿನ ಕೆಲಸಕ್ಕೆ ಹೋಗ್ತೀನಿ. ಆಮೇಲೆ ರಾಜೀನಾಮೆ ಸಲ್ಲಿಸ್ತೀನಿ. ನಿಮ್ಮ ಸಂಬಳ ನಮಗೆ ಧಾರಾಳವಾಗಿ ಸಾಕಾಗತ್ತೆ. ಮಗು ಕೊಂಚ ದೊಡ್ಡದಾದ ಮೇಲೆ ಮನೆಯಿಂದಲೇ ಕೆಲಸ ಮಾಡ್ತೀನಿ. ಹೇಗೂ ಈಗ ಹೆಚ್ಚಿನ ಕಂಪನಿಗಳು ಆ ಸ್ವಾತಂತ್ರ್ಯ ಕೊಡ್ತಾ ಇದೆ ತನ್ನ ಉದ್ಯೋಗಿಗಳಿಗೆ..... ಮನೆಯಲ್ಲಿ ಕಂಪ್ಯೂಟರ್ ಅಂತೂ ಇದ್ದೇ ಇದೆಯಲ್ಲ....'

ಮರುದಿನ ರಾತ್ರಿ ಅಕ್ಕನಿಂದ ಫೋನ್...." ಏನೇ ಕಳ್ಳಿ.... ಶುಭ ಸಮಾಚಾರ ನಿನ್ನದಿಟ್ಟುಕೊಂಡು ಹೇಳದೇ ಹಾಗೇ ಫೋನ್ ಇಟ್ಟುಬಿಟ್ಯಾ? ನಿನ್ನೆ ನನಗೇನೋ ಸಂದೇಹ ಬಂದು ಇವತ್ತು ಜಾನೆಟ್ ಗೆ ಫೋನಾಯಿಸಿದಾಗ ವಿಷಯ ತಿಳೀತು.... ಇನ್ನೊಂದು ಹದಿನೈದು ದಿನಗಳಲ್ಲಿ ನಾನು ನಿಮ್ಮನೇಲಿ ಹಾಜರ್.... ಈಗ ಮೊದಲು ನಿನ್ನ ಆರೈಕೆ....ಮಗು ಹುಟ್ಟಿದ ನಂತರ ಅದರದು... ಆಮ್ಮನ ಸ್ಥಾನದಲ್ಲಿದೀನಿ...ನಿನ್ನ ಮತ್ತೆ ಮಗುವಿನ ಆರೈಕೆ ನನ್ನ ಹೊಣೆ....ನಿಮ್ಮನೇಲಿ ಕುಳಿತೇ ನಾನು ಪರೀಕ್ಷೆಗೆ ಕೂರ್ತೀನಿ. ನೀನು, ಗೌತಮ ನಂಗೆ ಪಾಠ ಹೇಳಿಕೊಡಿ..ಸರೀನಾ? "

ಅಪ್ಪ ಅಮ್ಮ ಆಗಲು ಹೊರಟ ದಂಪತಿಗಳ ಹೃದಯದಲ್ಲಿ ಸಮಾಧಾನ, ನೆಮ್ಮದಿ ಮನೆ ಮಾಡಿತು. ಜಾನೆಟ್ ಳಿಗಂತೂ ಆರತಿಯ ತೀರ್ಮಾನ ಖುಷಿಯಿಂದ ಕುಣಿದಾಡುವಂತೆ ಮಾಡಿತು...ಅಮ್ಮ ಆಗದಿದ್ರೆ ಏನಂತೆ....ದೊಡ್ಡಮ್ಮ ಆದ್ರೂ ಆಗ್ತೀನಲ್ಲ ಅಂತ....

ಮನೆಯಲ್ಲಿ ಸಂತಸ, ಸಂಭ್ರಮದ ವಾತಾವರಣ ತಾನೇ ತಾನಾಗಿತ್ತು..

&&&&&&&&&&&&&&&&&&&&&&&&&&&&&&&& &&&&&&&&&&&&&&&&&&&&&&&&&&&&&&&&


Rate this content
Log in

Similar kannada story from Inspirational