ಲಕ್ಷ ಬೇಕೆ? ಕೋಟಿ ಸಾಕೇ?
ಲಕ್ಷ ಬೇಕೆ? ಕೋಟಿ ಸಾಕೇ?
ಜೀವನದಲ್ಲಿ ಅತ್ಯಂತ ಜಿಗುಪ್ಸೆ ಹೊಂದಿದ ಕಡು ಬಡವನೊಬ್ಬ ಊರಾಚೆ ಕಾಡಿನಲ್ಲಿದ್ದ ಮರವೊಂದಕ್ಕೆ ನೇಣು ಹಾಕಿಕೊಳ್ಳಲು ಹೋದಾಗ ಅಲ್ಲೇ ಮರದ ಕೆಳಗೆ ಧ್ಯಾನಸ್ಥನಾಗಿದ್ದ ಮುನಿಗಳನ್ನು ಕಂಡು , ಸಾಯುವ ಮೊದಲು ಅವರ ಆಶೀರ್ವಾದ ಪಡೆಯಲು ಅವರ ಕಾಲಿಗೆ ಉದ್ದಂಡ ನಮಸ್ಕಾರ ಮಾಡಿದ.
ತನ್ನ ಕಾಲಿಗೆ ಏನೋ ತಗಲಿದಂತೆ ಆದಾಗ ಮುನಿಗಳು ಕಣ್ಣು ತೆರೆದರು. ಕಣ್ಣೀರು ಸುರಿಸುತ್ತಿದ್ದ ಅವನನ್ನು ವಿಚಾರಿಸಿದರು. ಎಲ್ಲವನ್ನೂ ವಿವರಿಸಿದ ಬಡವ ತನಗೆ ಮುಂದಿನ ಜನ್ಮದಲ್ಲಿ ಆದರೂ ಶ್ರೀಮಂತ ಜನ್ಮದ ಪುಣ್ಯ ಸಿಗಲಿ ಎಂದು ಬೇಡಿಕೊಂಡ. ಒಂದು ಕ್ಷಣ ಕಣ್ಣು ಮುಚ್ಚಿದ ಮುನಿಗಳು, " ಅದಕ್ಕೆ ಮುಂದಿನ ಜನ್ಮ ಏಕಪ್ಪ? ಈ ಜನ್ಮದಲ್ಲೇ ಶ್ರೀಮಂತನನ್ನಾಗಿಸುವ ವರ ನೀಡುವೆ, ನಾನು ಕೇಳಿದ್ದನ್ನು ಕೊಡುವೆಯಾದರೆ " ಎಂದರು.
ಬಡವ ಅತ್ಯಂತ ಹರ್ಷಿತನಾದ. " ಕೇಳಿ ಸ್ವಾಮಿ, ಆದರೆ ಕೊಡಲು ನನ್ನ ಹತ್ತಿರ ಏನೂ ಇಲ್ಲವಲ್ಲ ಸ್ವಾಮಿ ".
" ಯಾಕೆ ಇಲ್ಲ? ನಿನ್ನ ಎರಡು ಕೈಗಳನ್ನು ಕತ್ತರಿಸಿ ಕೊಡು. ನಿನಗೆ ಒಂದೊಂದು ಕೈಗೂ ಹತ್ತು ಹತ್ತು ಲಕ್ಷ ಸಿಗುವಂತೆ ಮಾಡುವೆ "
ಬಡವ ಹಿಂಜರಿದ. " ನನ್ನ ಕೈಗಳನ್ನು ಕೊಡುವುದೇ? "
" ಬೇಡ ಬಿಡು, ನಿನ್ನ ಕಾಲುಗಳನ್ನು ಕೊಡು. ಒಂದು ಕೋಟಿ ಸಿಗುವಂತೆ ಮಾಡುವೆ "
ಬಡವ ಹತ್ತು ಹೆಜ್ಜೆ ಹಿಂದೆ ಸರಿದ.
" ಹೋಗಲಿ. ನಿನ್ನ ಕಣ್ಣುಗಳನ್ನು ಕಿತ್ತಿಕೊಡು. ಹತ್ತು ಕೋಟಿಗೆ. "
ಬಡವ ಎರಡೂ ಕೈಗಳಿಂದ ಕಣ್ಣುಗಳನ್ನು ಮುಚ್ಚಿಕೊಂಡ.
" ನಿನ್ನ ಕಿವಿಗಳು? ನಾಲಿಗೆ? ಹೃದಯ? ಶ್ವಾಸಕೋಶ? " ಒಂದೊಂದೇ ಹೇಳುತ್ತಾ ಹೋದಂತೆ ಬಡವ ಹಿಂದೆ ಹಿಂದೆ ಸರಿದ.
ಮುನಿಗಳು ಜೋರಾಗಿ ನಕ್ಕರು. " ಇಷ್ಟೆಲ್ಲಾ ಅಮೂಲ್ಯವಾದ ಆಸ್ತಿಗಳನ್ನು ಇಟ್ಟುಕೊಂಡು ನಿನ್ನನ್ನು ನೀನು ಬಡವ ಅಂದುಕೊಂಡಿದ್ದೇ ಅಲ್ಲದೆ ಆತ್ಮಹತ್ಯೆ ಎನ್ನುವ ಮಹಾಪಾಪಕ್ಕೂ ಕೈ ಹಾಕಲು ಹೊರಟಿದ್ದೀಯಲ್ಲಾ . ಸಿಕ್ಕಿರುವ ಈ ಅಮೂಲ್ಯ ಮಾನವ ಜನ್ಮವನ್ನು ಶ್ರಮ ವಹಿಸಿ ದುಡಿದು ಸಾರ್ಥಕ ಪಡಿಸಿಕೊ. ಪ್ರಾಮಾಣಿಕನಾಗಿ ದುಡಿ. ಬಂದ ಹಣದಲ್ಲಿ ಮಿತವಾದ ಖರ್ಚು ಮಾಡಿಕೊಂಡು ಉಳಿತಾಯ ಮಾಡಿಕೊ. ನಿನ್ನ ಬಳಿ ಇರುವುದರಲ್ಲಿ ತೃಪ್ತನಾಗಿರು. ಆತ್ಮಹತ್ಯೆಯ ಯೋಚನೆ ಮತ್ತೆಂದೂ ನಿನ್ನ ಬಳಿ ಸುಳಿಯದಿರಲಿ. "
ದೂರದಿಂದಲೇ ಅವರಿಗೆ ಸಾಷ್ಟಾಂಗ ನಮಸ್ಕಾರ ಮಾಡಿದ ಬಡವ ಅಲ್ಲಿಂದ ಒಂದೇ ಕ್ಷಣದಲ್ಲಿ ಓಡಿ ಪರಾರಿಯಾದ. ಮುನಿಗಳು ನಗುತ್ತಾ ಮತ್ತೆ ಧ್ಯಾನಕ್ಕೆ ಕುಳಿತರು.
💐💐💐💐💐💐💐💐💐💐💐💐
