ಮೌನ ಆರಾಧನೆ
ಮೌನ ಆರಾಧನೆ
ಬೆಂಗಳೂರಿನಲ್ಲಿ ಒಳ್ಳೆಯ ಕೆಲಸ ಸಿಕ್ಕಿತೆಂದು ಊರಿನಲ್ಲಿ ಮಾಡುತ್ತಿದ್ದ ಚಿಕ್ಕದೊಂದು ಕೆಲಸಕ್ಕೆ ರಾಜೀನಾಮೆ ಇತ್ತು 2 ವರ್ಷಗಳ ಹಿಂದೆ ಹೊರಟುಹೋಗಿದ್ದ ಮಗ 4-5 ದಿನಗಳ ರಜೆಗೆಂದು ಬಂದಿಳಿದಾಗ ಶಾರದಮ್ಮ ಹಿಗ್ಗಿನಿಂದ ಸ್ವಾಗತಿಸಿದರೂ ಬಡಕಲಾಗಿದ್ದ ಮಗನನ್ನು ಕಂಡು ಗಂಡನ ಎದುರಲ್ಲಿ ಅಲವತ್ತು ಕೊಂಡರು. " ಏನೂಂದ್ರೆ, ಎಷ್ಟು ಇಳಿದಿದ್ದಾನೆ ನಮ್ಮ ರಾಘವ! ಹೋಟೆಲ್ ಊಟ ತಿಂಡಿ, ಎಣ್ಣೆನೀರು ಕಾಣದ ತಲೆ...ಛೇ.... ನಾನಾದ್ರು ಹೋಗಿರೋಣ ಅವ್ನ ಜೊತೆ ಅಂದ್ರೆ ಇಲ್ಲಿ ನಿಮಗೆ, ಮಾಧೂಗೆ ತೊಂದರೆ ಆಗತ್ತೆ. ನಂಗೂ ಬೆಂಗಳೂರಿನ ಹವೆ ಮೈಗೆ ಒಗ್ಗಲ್ಲ. ಈ ಸಲ ಮದುವೆ ನಿಶ್ಚಯ ಮಾಡಿಕೊಂಡೇ ಹೋಗ್ಲಿ."
ಆಯ್ತು ಮಹಾರಾಯ್ತಿ.....ನಿಂಗೆ ಮಗನ ಮದುವೆ ನೋಡೋ ಹಂಬಲ ಅಂತ ಗೊತ್ತಾಯ್ತು...ಮಾಡಿಯೇ ಕಳ್ಸಿಬಿಡು, ಪಾಪ ಅವನೂ ಹಳ್ಳಕ್ಕೆ ಬೀಳಲಿ " ರಾಜಾರಾಯರು ತಮಾಷೆ ಮಾಡಿದರು.
ಅಂದು ರಾತ್ರಿ ಊಟ ಬಡಿಸುವಾಗ ಶಾರದಮ್ಮ ಪ್ರಸ್ತಾಪವೆತ್ತಿದರು...' ರಾಘು, ನಾಳೆ ನಾಡಿದ್ದರಲ್ಲಿ ಅಪ್ಪನ ಜೊತೆ ಮೈಸೂರಿಗೆ ಚಂದ್ರು ಮಾವನ ಮನೆಗೆ ಹೋಗಿಬಾ. ರಾಧಳನ್ನು ನೀ ನೋಡದೆ 4-5 ವರ್ಷ ಆಗಿರಬೇಕಲ್ಲ..ಅವಳನ್ನೂ ಮಾತಾಡಿಸಿ ಹಾಗೇ ಮದುವೆ ಬಗ್ಗೆ ಮಾತುಕತೆ ಮುಗಿಸಿಬನ್ನಿ ಅಪ್ಪ, ಮಗ ಇಬ್ರೂ. ಆದಷ್ಟು ಬೇಗನೆ ದಿನ ಇಡೋಕೆ ಹೇಳಿಬನ್ನಿ..."
" ಅಮ್ಮಾ, ನನಗಿನ್ನೂ 28 ವರ್ಷ. ಇಷ್ಟು ಬೇಗ ಮದುವೇನಾ??!!....." ಉದ್ಗಾರ ತೆಗೆದ ಮಗನ ಬಾಯಿ ಮುಚ್ಚಿಸಿದರು ಶಾರದಮ್ಮ. " ಮುಖ ನೋಡ್ಕೋ ಹೇಗಾಗಿದೆ....ಮೈ ಒಣಗಿಹೋಗಿದೆ, ತಲೆ ಕೂದಲು ನೋಡ್ಕೋ...ಆರೈಕೆ ಬೇಡ್ವಾ ದೇಹಕ್ಕೆ? ಈಗಲ್ಲದೆ ಯಾವಾಗ ಆಗೋದು ಮದುವೆ? ಸುಮ್ನೆ ನಾ ಹೇಳಿದಷ್ಟು ಮಾಡು"....
ರಾಧಾಳ ತಂದೆ ರಾಘವನ ತಂದೆಗೆ ದೂರದ ಸಂಬಂಧಿಕರಾದರೂ ಸಣ್ಣ ವಯಸ್ಸಿನಲ್ಲಿ ಒಟ್ಟಿಗೆ ಆಡಿ ಒಂದೇ ಕಡೆ ಬೆಳೆದು ಗಳಸ್ಯ ಕಂಠಸ್ಯ ರಾಗಿದ್ದರು. ರಾಧಾ ಹುಟ್ಟಿದಾಗ ರಾಘವನಿಗಾಗೇ ಹುಟ್ಟಿದವಳು ಎಂಬುದು ಎರಡೂ ಕಡೆಯ ತಾಯ್ತಂದೆಯರ ಒಮ್ಮತದ ಅಭಿಪ್ರಾಯವಾಗಿತ್ತು. ಪರಸ್ಪರ ಸ್ನೇಹ, ಗೌರವದ ಭಾವಗಳಿಂದಾಗಿ ಯಾವ ಆಕ್ಷೇಪಣೆಯೂ ಇರಲಿಲ್ಲ.
ರಾಘವ, ರಾಧಾ ಇಬ್ಬರೂ ಸಣ್ಣವರಾಗಿದ್ದಾಗಲಿಂದಲೇ ಅವರಿಗೆ ಗಂಡ ಹೆಂಡತಿ ಎಲ್ಲರೂ ತಮಾಷೆ ಮಾಡುತ್ತಿದ್ದರು. ಬೆಳೆಯುತ್ತ ಬಂದಂತೆ ಬೇರೆ ಬೇರೆ ಊರುಗಳಲ್ಲಿದ್ದರಿಂದ ಪರಸ್ಪರ ಭೇಟಿಯೂ ಕಡಿಮೆಯಾಗಿತ್ತು. ಇಬ್ಬರಲ್ಲೂ ಪರಸ್ಪರ ನೋಡುವ , ಮಾತಾಡುವ ತವಕ, ಚೆಲ್ಲುತನವಂತೂ ಇರಲಿಲ್ಲ. ಹೇಗೂ ಮುಂದೆ ಒಟ್ಟಿಗೆ ಬಾಳುವುದು ಇದ್ದೇ ಇದೆಯಲ್ಲ ಎನ್ನುವ ಧೋರಣೆ ಅವನದು. ಜಾಣನಾಗಿದ್ದ ಅವನು ಪಿ.ಯು.ಸಿ. ಮುಗಿದ ನಂತರ ಎಂಜಿನಿಯರಿಂಗ್ ಓದಲು ಆಯ್ಕೆ ಮಾಡಿದ ನಂತರವಂತೂ ಮೈಸೂರಿಗೆ ಹೋಗಿರಲೇ ಇಲ್ಲ.
ಅವನ ತಮ್ಮ ಮಾಧವ ಅಣ್ಣನಷ್ಟು ಜಾಣ್ಮೆ ಇಲ್ಲದಿದ್ದರೂ ದಡ್ಡನೇನಲ್ಲ. ಬಿ.ಕಾಂ. ಮಾಡಿ ಐ. ಸಿ.ಡಬ್ಲ್ಯೂ. ಎ. ಮಾಡ್ತಾ ಆಡಿಟರ್ ಬಳಿ ಕೆಲಸಕ್ಕೆ ಸೇರಿದ್ದ. ಆಗಾಗ ಕೆಲಸದ ಮೇಲೆ ಮೈಸೂರಿಗೆ ಹೋಗಿ ಬರ್ತಿದ್ದ. ಹೋದಾಗಲೆಲ್ಲ ಚಂದ್ರುಮಾಮನ ಮನೆಗೆ ಭೇಟಿ ಕೊಟ್ಟು, ಅಮ್ಮ ಅತ್ತೆಯರ ಪರಸ್ಪರ ತಿಂಡಿಗಳ ಪಾರ್ಸೆಲ್ ಗಳ ವಿನಿಮಯ ಮಾಡಿ, ಮಾವನ ಜೊತೆ ಹರಟೆ ಹೊಡೆದು ಬರ್ತಿದ್ದ. ರಾಧಾಳ ಹತ್ತಿರ ಹೆಚ್ಚು ಮಾತಿಲ್ಲ. ಸ್ವಭಾವತಃ ಮೌನಿ, ಮೆಲುನಡೆಯ ರಾಧಾ ತುಂಬಾ ಸಾಧು ಸ್ವಭಾವದವಳು. ತಾನಾಯ್ತು, ತನ್ನ ಕೆಲಸವಾಯ್ತು, ತನ್ನ ಓದು ಆಯ್ತು....ಇಷ್ಟೇ ಅವಳ ಪ್ರಪಂಚ..ಹೈಸ್ಕೂಲ್ ಗೆ ಸೇರಿದ ಮೇಲಂತೂ ಬೆಂಗಳೂರಿಗೆ ಬಂದಿರಲೇ ಇಲ್ಲ. ಸಣ್ಣವಳಿದ್ದಾಗ ಅಪ್ಪ ಹೊರಟಾಗಲೆಲ್ಲ ತಾನೂ ಹೊರಟು ಬಿಡುತ್ತಿದ್ದಳು ಬೆಂಗಳೂರಿಗೆ. ಶಾರದಮ್ಮನಿಗಂತೂ ಅವಳೆಂದರೆ ಅಚ್ಚುಮೆಚ್ಚು. 'ನನ್ನ ಸೊಸೆ ' ಅಂತಲೇ ಅವಳನ್ನು ಸಂಭೋದಿಸೋದು ಅವರು.
ಮರುದಿನ ಊರಲ್ಲಿದ್ದ ಹಳೇ ಸ್ನೇಹಿತರನ್ನೆಲ್ಲ ಭೇಟಿಯಾಗಿ ಬಂದ ರಾಘು. ರಾತ್ರಿ ಗಡದ್ದಾಗಿ ನಿದ್ದೆ ಹೊಡೆದು ಬೆಳಗ್ಗೆ ಬೇಗ ಎದ್ದು ಮೈಸೂರಿಗೆ ಹೊರಡಲು ಅಣಿಯಾದ. ಅಷ್ಟರಲ್ಲಿ ರಾಜಾರಾಯರ ಸ್ನೇಹಿತರು ಅವರನ್ನು ಬಲವಂತವಾಗಿ ಒಂದು ಸಮಾರಂಭಕ್ಕೆ ಹೋಗಲು ಒತ್ತಾಯಿಸಿದರು. ಒಬ್ಬನೇ ಹೋಗಬೇಕಲ್ಲ ಎಂದು ರಾಘು ತಮ್ಮನನ್ನು ಹೊರಡಿಸಿದ. " ನೀನೂ ಬಾರೋ ಮಾಧು, ನನಗೊಬ್ಬನಿಗೇ ಬೇಜಾರು". .. " ನಾನು ಕಳೆದ ತಿಂಗಳಷ್ಟೇ ಹೋಗಿ ಬಂದಿದೀನಿ ಅಣ್ಣ.... ನಾನ್ಯಾಕೆ ಈಗ? ನೀನು ಹೋಗಿ ಬಾ. ನಂಗೆ ಸ್ವಲ್ಪ ಕೆಲಸವಿದೆ." ಮಾಧು ನುಣುಚಿಕೊಳ್ಳುವ ಪ್ರಯತ್ನ ಮಾಡಿದ. ರಾಘು ಹಿಡಿದ ಪಟ್ಟು ಬಿಡಲಿಲ್ಲ.." ಸಂಜೆ ವಾಪಸ್ ಬಂದುಬಿಡೋಣ. ಈಗ ನೀನು ಬರಲೇ ಬೇಕು ನನ್ನ ಜೊತೆಗೆ."
ಅಂತೂ ತಿಂಡಿ ಮುಗಿಸಿ ಅಣ್ಣ ತಮ್ಮ ಹೊರಟರು . ಅಲ್ಲಿ ಅತ್ತೆ ಮಾವನಿಗೆ ಸಂಭ್ರಮವೋ ಸಂಭ್ರಮ. ಅಣ್ಣ ತಮ್ಮ ಇಬ್ಬರಿಗೂ ರಾಜೋಪಚಾರ ನಡೆಯಿತು. ರಾಧಾ ಎಂದಿನಂತೆ ಮೌನಿ. ಅವಳು ಮನೆಯಲ್ಲಿದ್ದಳು ಎನ್ನುವುದಕ್ಕೆ ಅವಳು ಓಡಾಡುವಾಗ ಕಾಲಿನ ಗೆಜ್ಜೆಯ ಶಬ್ಧ ಸಾಕ್ಷಿಯಾಗಿತ್ತು.
ಊಟವಾದ ಬಳಿಕ ರಾಘವ ಅತ್ತೆ ಮಾವಂದಿರ ಜೊತೆ ಕೋಣೆ ಯಲ್ಲಿ ಕುಳಿತು ಒಂದು ಗಂಟೆ ಮಾತನಾಡಿದ. ಹೊರಗಡೆ ಸೋಫಾದ ಮೇಲೆ ಮಾಧವ ಮುಖಕ್ಕೆ ಕೈ ಅಡ್ಡ ಇಟ್ಟು ಮಲಗಿ ನಿದ್ದೆ ಮಾಡಿದರೆ ರಾಧಾ ಹೊರಗೆ ಜಗಲಿಯಲ್ಲಿ ಕುಳಿತು ಹೂ ಕಟ್ಟುತ್ತಿದ್ದಳು.
ನಾಲ್ಕು ಗಂಟೆಗೆ ಕಾಫಿ ತಿಂಡಿಯಾದ ಬಳಿಕ ತಂದೆಯಿಂದ ರಾಧಾಳಿಗೆ ಬೆಂಗಳೂರಿಗೆ ಹೊರಡುವಂತೆ ಆದೇಶ ಬಂತು. ಏಕೆ ಎನ್ನುವಂತೆ ಪ್ರಶ್ನಾರ್ಥಕವಾಗಿ ನೋಡಿದ ರಾಧಾಳ ದೃಷ್ಟಿ ಗೆ ದೃಷ್ಟಿ ಬೆರೆಸಿ ಮೆಲು ನಗೆ ನಕ್ಕ
ರಾಘವ ...." ನಿನ್ನ ಅತ್ತೆ ಹೇಳಿಕಳಿಸಿದ್ದಾರೆ...4 ದಿನ ಇದ್ದು ಬರುವೆಯಂತೆ ಬಾ."...... ಹರಟೆ ಮಲ್ಲ ಮಾಧವ ಇಂದೇಕೋ ಬೆಳಗ್ಗಿನಿಂದ ಮೌನವಾಗಿದ್ದ..
ಬಸ್ಸಿನಲ್ಲಿ ಕಿಟಕಿಯ ಬಳಿ ರಾಧಳನ್ನು ಕೂಡಿಸಿ ತಾನು ಅವಳ ಪಕ್ಕ ಕುಳಿತ ರಾಘವ ತುಂಬಾ ಖುಷಿಯಲ್ಲಿರುವಂತೆ ಕಂಡುಬಂತು ಮಾಧವನಿಗೆ. ರಾಧಳನ್ನು ಬಲವಂತವಾಗಿ ಮಾತಿಗೆಳೆಯುತ್ತಿದ್ದ ರಾಘವನ ಪಕ್ಕ ಕುಳಿತು ಕೈಲಿದ್ದ ಪತ್ರಿಕೆ ಬಿಡಿಸಿದ..
ರಿಕ್ಷಾ ಮನೆಯ ಮುಂದೆ ನಿಂತೊಡನೆ ಶಾರದಮ್ಮ ಬಾಗಿಲು ತೆಗೆದರು. ಮಾಧವ ಒಂದು ಕೈಲಿ ಅತ್ತೆ ಕೊಟ್ಟ ಚೀಲ, ಮತ್ತೊಂದು ಕೈಲಿ ರಾಧೆಯ ಬ್ಯಾಗ್ ಹಿಡಿದು ಒಳಬಂದ. ರಾಘವ ರಿಕ್ಷಾದವನಿಗೆ ದುಡ್ಡು ಕೊಟ್ಟು ಒಳಹೊಕ್ಕ. ನಿಧಾನವಾಗಿ ಒಳಬರುತ್ತಿದ್ದ ರಾಧಳನ್ನು ನೋಡಿದ ಶಾರದಮ್ಮನ ಮುಖ ಮೊರದಗಲವಾಯಿತು. " ಅಮ್ಮಾ ನೋಡು, ನೀನು ಬರಹೇಳಿದ್ದಿ ಅಂತ ಸುಳ್ಳು ಹೇಳಿ ನಿನ್ನ ಸೊಸೆಯನ್ನ ಕರೆದುಕೊಂಡು ಬಂದಿದೀನಿ"...ತುಂಟತನದಿಂದ ರಾಘವ ನುಡಿದ... ತನ್ನ ಕಡೆ ಆಶ್ಚರ್ಯ ದಿಂದ ನೋಡಿದವಳಿಗೆ ಮೆಲ್ಲನೆ ಕಣ್ಣು ಹೊಡೆದ ರಾಘವ.
ಕೈ, ಕಾಲು, ಮುಖ ತೊಳೆದು ದೇವರಿಗೆ ನಮಸ್ಕರಿಸಿ ಬರುವಷ್ಟರಲ್ಲಿ ಅತ್ತೆ ಮಾಡಿದ ಕಾಫಿ ತಂದು ಎಲ್ಲರಿಗೂ ಕೊಟ್ಟಳು ರಾಧಾ.
" ಎಲ್ಲಾ ಮಾತಾಡಿ ಬಂದ್ಯೇನೋ?"......
" ಹೌದಮ್ಮ. ಎಲ್ಲಾ ಮಾತೂ ವಿವರವಾಗಿ ಆಡಿ ಬಂದೆ."......
" ಏನಂದ್ರು ಅತ್ತೆ, ಮಾವ?".....
"ಏನಂತಾರೆ? ನೀನು ಹೇಳ್ತಾ ಇರೋದು ತುಂಬಾನೇ ಸರಿಯಾಗಿದೆ. ಜಾತಕಗಳನ್ನ ತೊಗೊಂಡು ಹೋಗಿ ದಿನ ನಿಶ್ಚಯಿಸಿ ಬರ್ತೀವಿ ಅಂದ್ರು. ಅಮ್ಮಾ, ಆದ್ರೆ ಈಗ ಅರ್ಜೆಂಟಾಗಿ ನನಗೊಂದು ಹುಡುಗೀನ ಹುಡುಕಬೇಕು ನೀನು............"
"ಏನಂದೆ??!!" ಜೋರಾಗಿ ಕಿರುಚಿಯೇಬಿಟ್ಟರು ಶಾರದಮ್ಮ...... ಮಾಧವ, ರಾಜಾರಾಯರು, ರಾಧಾ ದಿಗ್ಭ್ರಮೆ ಯಿಂದ ಇಬ್ಬರ ಮುಖಗಳನ್ನೂ ನೋಡುತ್ತ ನಿಂತರು.
"ಆಯ್ಯೋ ಅಮ್ಮಾ, ಹೆದರಬೇಡ.....ನಾನು ಏನೇನೋ ಮಾತಾಡ್ತಾ ಇಲ್ಲ. ಸರಿಯಾಗೇ ಹೇಳ್ತಿದೀನಿ. ನಾನು ದೊಡ್ಡ ಮಗ ಆಗಿರೋದ್ರಿಂದ ನನ್ನ ಮದುವೆ ಮೊದಲೇ ಆಗ್ಬೇಕು .... ಇಲ್ಲಾ...ಎರಡೂ ಮದುವೆ ಒಟ್ಟಿಗೆ ಇಟ್ರೂ ನಡೆಯತ್ತೆ."
"ರಾಘೂ.... ರಾಘೂ....ಏನೂಂತ ಸರಿಯಾಗಿ ಹೇಳೋ.. ನನ್ನೆದೆ ಹೊಡ್ಕೊತಾ ಇದೆ....ಇಷ್ಟೊಳ್ಳೆ ಸೊಸೆ ಎದುರಿಗಿರುವಾಗ ಅರ್ಜೆಂಟು ಹುಡುಗೀನ ಹುಡುಕು .....ಎರಡೂ ಮದುವೆ ಒಟ್ಟಿಗೆ ಅಂತ ಏನೇನೋ ಮಾತಾಡ್ತಾ ಇದೀಯಲ್ಲೋ!!!....."
" ರಾಧಾ ನಿನ್ನ ಸೊಸೆ ಅಮ್ಮಾ....ಹಿರೀ ಸೊಸೆ ಅಲ್ಲ.... ಕಿರೀ ಸೊಸೆ ಆಗ್ತಾಳೆ ಅಷ್ಟೇ...."
ಮಾಧವ ಗಲಿಬಿಲಿಗೊಂಡ...." ಅಣ್ಣಾ, ಏನು ಮಾತಾಡ್ತಾ ಇದ್ದೀ ನೀನು?!".....
" ನಾನು ಸರಿಯಾಗೇ ಹೇಳ್ತಾ ಇದೀನಿ." ರಾಘವ ಧೃಡ ಸ್ವರದಲ್ಲಿ ನುಡಿದ. " ನೀವು ಒಬ್ಬರಲ್ಲ, ನಾಲ್ಕು ಜನ ದೊಡ್ಡವರು ಇದೀರಾ. ಒಂದೇ ಒಂದು ಸಲ ರಾಧಾಳ ಮನಸ್ಸು ಹೇಗಿದೆ ಅಂತ ತಿಳಿಯೋಕೆ ಪ್ರಯತ್ನ ಪಟ್ಟಿದೀರ? ಅವಳು ಮಾಧವನ್ನ ಪ್ರೀತಿಸ್ತಾ ಇದಾಳೆ ಅಮ್ಮ. ಅವನನ್ನು ಆರಾಧಿಸುವ ರಾಧ ನಿಮಗ್ಯಾರಿಗೂ ಕಾಣ್ತಾ ಇಲ್ವಾ? ಅವ್ಳು ಮಾತಾಡಲ್ಲ ನಿಜ..ಆದ್ರೆ ಅವ್ಳು ಮಾಧವನ್ನ ನೋಡುವಾಗ ಅವ್ಳ ಕಣ್ಣಲ್ಲಿ ಇರುವ ಆರಾಧನಾ ಭಾವನೆ ....ಯಾರಿಗೂ ಗೊತ್ತಾಗಲಿಲ್ಲ ಅಂದ್ರೆ ಆಶ್ಚರ್ಯ.....ಅತ್ತೆ ಮಾವ ಹೇಳಿದ್ರು..ಮಾಧವ ತಿಂಗಳಿಗೆ ಒಂದು ಸಲ ಬರ್ತಿದ್ದ. ಆದ್ರೆ ಅವ್ರಿಬ್ರು ಮಾತುಕತೆ ಆಡ್ತಾನೆ ಇರಲಿಲ್ಲ. ಅವಳೋ ತುಂಬ ಮುಗ್ಧೆ..ತನ್ನ ಭಾವನೆಗಳನ್ನು ಗುರುತಿಸಲು ಹಿಂಜರಿದಿರಬೇಕು...ಆದ್ರೆ ಈ ಕಳ್ಳ ನಿಗೆ ಅದು ಅರಿವಾಗಿದೆ. ತನ್ನ ಅಣ್ಣನಿಗೆ ಅಂತ ಹೆಸರಿಟ್ಟ ಹುಡುಗಿಯನ್ನ ತಾನು ಪ್ರೀತಿಸೋದು ತಪ್ಪು ಅಂತ ಅವಳನ್ನು ಉದಾಸೀನ ಮಾಡ್ತಾ ಇದಾನೆ ಅನ್ನಿಸತ್ತೆ. ನನಗೆ ಎರಡು ವರ್ಷಗಳಿಂದ ಬಂದ ಪತ್ರ ಗಳಲ್ಲಿ ಒಂದರಲ್ಲೂ ಅವಳ ಸುದ್ಧಿ ಇಲ್ಲ. ನನಗಾಗಲೇ ಸಂದೇಹ ಬಂದಿತ್ತು. ಇವತ್ತು ಅದಕ್ಕೆ ಅವನನ್ನು ಬಲವಂತವಾಗಿ ಹೊರಡಿಸಿದೆ. ಅಲ್ಲಿ ಅವಳ ನೋಟ ತಪ್ಪಿಸಿಕೊಂಡು ಅವನು ಓಡಾಡಿದ್ದನ್ನು ಕಂಡು ನನ್ನ ಸಂದೇಹ ನಿಜ ಅಂತ ಗೊತ್ತಾಯ್ತು. ಅಮ್ಮಾ, ನಿಜವಾಗ್ಲೂ ಹೇಳ್ತಾ ಇದೀನಿ. ನನಗಿಂತ ನಮ್ಮ ಮಾಧೂ ಗೆ ಅವ್ಳು ಸರಿಯಾದ ಜೋಡಿ. ಗುಣ, ಸ್ವಭಾವ, ನಡವಳಿಕೆ ಇಬ್ಬರದೂ ಹಾಲು ಜೇನಿನಂತೆ ಹೊಂದಿಕೆ ಆಗತ್ತೆ. ರಾಧಾ ರಾಘವರಿಗಿಂತ ರಾಧಾ ಮಾಧವರದೇ ಹೇಳಿ ಮಾಡಿಸಿದ ಜೋಡಿ ಅಮ್ಮಾ."
" ಅಣ್ಣಾ, ನೀನು ಮಾಡ್ತಿರೋದು ಸರಿಯಲ್ಲ. ನಿನಗೆ ಅಂತ ಅಪ್ಪ ಅಮ್ಮ ಆರಿಸಿಟ್ಟ ಹುಡುಗಿಯನ್ನ ನಾನು ಮದುವೆ ಆಗೋದ?? ಛೇ ......" ಮಾಧವ ಉದ್ಗರಿಸಿದ.
"ನಾನು ಅವಳನ್ನು ಮದುವೆಯಾದರೆ ದೊಡ್ಡ ತಪ್ಪು ಮಾಡಿದಂತೆ. ನೀನು ಆಗೋದೇ ಸರಿ. ಬುದ್ಧಿ ತಿಳಿಯದ ವಯಸ್ಸಲ್ಲಿ ದೊಡ್ಡವರು ತಮ್ಮ ಬಾಂಧವ್ಯ ಉಳಿಯಲಿ ಅಂತ ಈ ರೀತಿ ಜೋಡಿ ಮಾಡಿಬಿಡುತ್ತಾರೆ. ಬೆಳೆದ ನಂತರ ಮಕ್ಕಳ ಭಾವನೆಗಳು , ಸನ್ನಿವೇಶಗಳು , ಪರಿಸ್ಥಿತಿಗಳು ಹೇಗಿರತ್ತೆ ಅಂತ ಗೊತ್ತಿರಲ್ಲ.. ಈಗ ನೋಡು, ಸಧ್ಯ ಮದುವೆಗೆ ಮೊದಲೇ ತಿಳಿದಿದ್ದು ಎಷ್ಟು ಒಳ್ಳೆಯದಾಯಿತು. ಆಗೋ ಅನಾಹುತ ತಪ್ಪಿತು. ನೋಡೋ. ನನಗೆ ರಾಧಾ ಬಗ್ಗೆ ಎಂದಿಗೂ ಈ ರೀತಿಯ ಭಾವನೆಗಳು ಮೂಡಿರಲೆ ಇಲ್ಲ. ನನಗವಳು ಪುಟ್ಟ ಸ್ನೇಹಿತೆ ಅಷ್ಟೇ. ಆದ್ದರಿಂದಲೇ ಅಷ್ಟೊಂದು ಧೈರ್ಯದಿಂದ ಅತ್ತೆ ಮಾವನನ್ನು ಒಪ್ಪಿಸಿ ಬಂದೆ. ಅವಳನ್ನೂ ಇಲ್ಲಿಗೆ ಹೊರಡಿಸಿದೆ. ನೀನು ಅವಳನ್ನು ಮದುವೆಯಾದರೆ ನನಗ್ಯಾವ ದ್ರೋಹಾನೂ ಬಗೆದಂತೆ ಆಗುವುದಿಲ್ಲ. ಹೆದರಬೇಡಿ. ಅದೂ ಅಲ್ಲದೆ " marriages are made in heaven" ಅನ್ನೋದು ಕೇಳಿಲ್ವ? ಬ್ರಹ್ಮ ಹಾಕಿರೋದು ನಿಮ್ಮಿಬ್ಬರಿಗೆ ಗಂಟು. ಅದನ್ನಿಲ್ಲಿ ಈಗ ಹಾಕಿಸ್ತೀವಿ ಅಷ್ಟೇ. ...... ಅಮ್ಮಾ, ಏನು ಈಗ ನಂಗೆ ಹುಡುಗಿ ಹುಡುಕೋ ಪ್ರಯತ್ನ ಮಾಡ್ತೀಯಾ?....." ರಾಘವ ನಗುತ್ತಾ ನುಡಿದ.
ದಿಗ್ಭ್ರಮೆ ಯಿಂದ ಮಗನ ಮಾತನ್ನು ಆಲಿಸುತ್ತಿದ್ದ ಶಾರದಮ್ಮ ಸಮಾಧಾನದ ನಿಟ್ಟುಸಿರು ಬಿಟ್ಟರು. " ಅಲ್ವೋ, ಮದುವೆ ಆದ್ಮೇಲೆ ದೂರದ ಊರಿಗೆ ಹೋಗ್ತಾಳೆ ಅಂದುಕೊಂಡ ರಾಧಾ ನಮ್ಮ ಜೊತೆಯೇ ಇರ್ತಾಳೆ ಅಂದ್ರೆ. ನಾವು ಬೇಡ ಅಂತೀವೇನೋ?. ನಿಂಗೂ ಬೇಗ ಹುಡುಕಿ ಇಬ್ಬರ ಮದುವೆನೂ ಪೂರೈಸಿ ಬಿಡೋಣ. ಆದರೆ ರಾಘೂ, ನಿನಗೇನೂ ಬೇಸರ ಇಲ್ಲ ತಾನೇ?"
" ಇಲ್ಲಾಮ್ಮ..... ಖಂಡಿತಾ ಇಲ್ಲ. ನಾನು ಹೇಳಿದ್ನಲ್ಲಾ ರಾಧನ ಬಗ್ಗೆ ನನಗೆ ಮಮತೆ, ಸ್ನೇಹ ಇದೆ ಅಷ್ಟೇ...ಅದು ಹಾಗೆಯೇ ಮುಂದೇನೂ ಇರತ್ತೆ ಅಷ್ಟೇ. ಮಾಧೂ, ಒಂದು ಮಾತು...ನೀನು ಈಗಲೂ ನಿನ್ನ ಮನಸ್ಸು ಬಿಚ್ಚಿ ಮಾತಾಡದಿದ್ರೆ ಆಗ ಮಾತ್ರ ಅಮ್ಮನ ಆಸೆ ನಾನೇ ನಿಜ ಮಾಡಬೇಕಾಗತ್ತೆ...ಏನಂತೀ? ಕಣ್ಣು ಮಿಟುಕಿಸುತ್ತಾ ತಮ್ಮನನ್ನು ಛೇಡಿಸಿದ....
" ಇಲ್ಲಾ....ನಂಗೆ ರಾಧಾ ಬೇಕು, ಬೇಕೇ ಬೇಕು.." ಅಣ್ಣನ ದೃಢ ಸ್ವರವನ್ನು ಎರವಲು ಪಡೆದವನಂತೆ ನುಡಿದವನ ಬೆನ್ನು ಚಪ್ಪರಿಸಿ ರಾಧಳನ್ನು ಎಳೆ ತಂದು ಅವಳ ಬಲಗೈಯನ್ನು ತಮ್ಮನ ಬಲಗೈಲಿ ಇಟ್ಟು " ಸುಲಗ್ನಾ ಸಾವಧಾನ ಸುಮುಹೂರ್ತ ಸಾವಧಾನ " ರಾಗವಾಗಿ ಹಾಡಿ ಎಲ್ಲರನ್ನೂ ನಗಿಸಿದ ರಾಘವ.
ರಾಧಾ ಮಾಧವ ಇಬ್ಬರು ಒಬ್ಬರನ್ನೊಬ್ಬರು ನೋಡುತ್ತಾ ತನ್ಮಯರಾಗಿ ನಿಂತಿದ್ದರು. ರಾಧಾಳ ಅರಳಿದ ಕಣ್ಣುಗಳ ಮುಂದೆ ಅವಳು ಮನದಲ್ಲಿ ಮುಸುಕು ಹೊದಿಸಿ ಕೂರಿಸಿದ್ದ ರೂಪ ಪ್ರತ್ಯಕ್ಷವಾಗಿ ಎದುರು ನಿಂತಿದೆ. ಸಣ್ಣವಳಾಗಿದ್ದಾಗ ಮಾಧವನ ಜೊತೆ ಆಡಿದ ಆಟಗಳು, ಬೇಸಿಗೆಯಲ್ಲಿ ಮನೆಯ ಅಂಗಳದಲ್ಲಿ ಮನೆಯವರೆಲ್ಲ ಉದ್ದಕ್ಕೆ ಹಾಸಿ ಮಲಗುತ್ತಿದ್ದಾಗ ಅವನ ಕೈ ತನ್ನ ಕೈಯನ್ನು ಅರಸುತ್ತಿದ್ದುದು, ತಾನು ಅವನ ಕೈಯನ್ನು ತನ್ನ ಕೆನ್ನೆಯಡಿ ಇಟ್ಟುಕೊಂಡು ನಿದ್ದೆ ಮಾಡುತ್ತಿದ್ದುದು, ದೇವಸ್ಥಾನಗಳಿಗೆ ಒಟ್ಟಾಗಿ ಮನೆಯವರೆಲ್ಲರ ಜೊತೆ ಹೋದಾಗ ಅಮ್ಮ ಅಪ್ಪನ ಕೈಯಿಂದ, ಅತ್ತೆ ಮಾವನ ಕೈಯಿಂದ ಪ್ರಸಾದದ ಹೂವನ್ನು ತೆಗೆದುಕೊಂಡು ಕಣ್ಣಿಗೊತ್ತಿಕೊಂಡು ಮುಡಿದುಕೊಂಡದ್ದನ್ನು ಕಂಡು ತಾನೂ ಮಾಧವನ ಕೈಯಿಂದ ತೆಗೆದುಕೊಂಡು ಭಕ್ತಿಯಿಂದ ಕಣ್ಣಿಗೊತ್ತಿ ಮುಡಿಗೆ ಏರಿಸುತ್ತಿದ್ದುದು, ಬೇರೆ ಊರಿಗೆ ಹೋದ ನಂತರ ಅವನು ಬರುತ್ತಾನೆ ಎಂಬ ಸುದ್ಧಿ ಬಂದಾಗಿನಿಂದ ಅವನು ಬಂದು ಹೋಗುವ ತನಕ ತನ್ನ ಹೃದಯ ನವಿಲಿನಂತೆ ಗರಿಗೆದರಿ ಕುಣಿಯುತ್ತಿದ್ದುದು, ಅವನು ವಾಪಸ್ ಹೊರಟ ಎಂದರೆ ಮನ ಕಮಲ ಮುದುಡಿ ಹೋಗುತ್ತಿದ್ದುದು, ಸಂಜೆಯ ತಂಗಾಳಿ ಹೊತ್ತು ತರುತ್ತಿದ್ದ ಘಮ ದಲ್ಲಿ ಅವನದೇ ನೆನಪು........ಇತ್ತೀಚೆಗೆ ಅವನು ತನ್ನ ನೋಟ ತಪ್ಪಿಸಿ ತಿರುಗಾಡಲು ಶುರು ಮಾಡಿದಾಗ ಅವನನ್ನು ಹೃದಯದಿಂದ ಆಚೆಗೆ ದೂಡಲು ತಾನು ಶತಪ್ರಯತ್ನ ಮಾಡಿ ಸೋತಿದ್ದು,,,ತನ್ನ ಹಣೆಬರಹದಂತೆ ಆಗಲಿ ಎಂದುಕೊಂಡು ಸಮಾಧಾನವಾಗಿ ಇರಲು ಒದ್ದಾಟ ......ಎಲ್ಲವೂ ಅವಳ ಕಣ್ಣೆದುರು ಹಾದು ಹೋದವು.
ಈಗ ಅನಿರೀಕ್ಷಿತವಾಗಿ ನಡೆದ ಈ ಸುಖಾಂತ್ಯ ರೋಮಾಂಚನಕಾರಿಯಾಗಿತ್ತು. ಮಾಧವನ ಕೈಲಿದ್ದ ಅವಳ ಹಸ್ತ ಕಂಪಿಸುತ್ತಿತ್ತು.
ಮೌನ ಆರಾಧನೆ ಸಿದ್ಧಿಸಿತ್ತು.
🌹🌹🌹🌹🌹🌹🌹🌹🌹🌹🌹
( ಈ ಕಥೆಯು ಮೊದಲು ಪ್ರತಿಲಿಪಿ ವೇದಿಕೆಯಲ್ಲಿ ಪ್ರಕಟವಾಗಿತ್ತು)

