ಆದರ್ಶ
ಆದರ್ಶ
. " ನೀನು ಮದುವೆ ಆಗುವ ಹುಡುಗಿ ಹೇಗಿರಬೇಕು ಶರತ್?"....
ಬ್ಯಾಂಕ್ ಉದ್ಯೋಗಿ ಪ್ರಸಾದ್ ಮಧ್ಯಾಹ್ನ ಊಟ ಮಾಡುವ ಸಮಯದಲ್ಲಿ ತನ್ನ ಸಹೋದ್ಯೋಗಿ ಹಾಗೂ ಸ್ನೇಹಿತನಾದ ಶರತ್ ನನ್ನು ಪ್ರಶ್ನಿಸಿದ.
" ನಾನಿನ್ನೂ ಮದುವೆ ಬಗ್ಗೆ ಆಲೋಚನೆಯೇ ಮಾಡಿಲ್ಲ ಕಣೋ.... ಹೇಗೂ ಅಪ್ಪ ಅಮ್ಮ ನೋಡಿಕೊಳ್ತಾರೆ ಮದುವೆ ವಿಷಯವನ್ನು....ನನಗೊಪ್ಪುವ, ನನಗೆ ಒಪ್ಪಿಗೆಯಾಗುವ ಹುಡುಗಿಯನ್ನೇ ಹುಡುಕ್ತಾರೆ ಅನ್ನೋದು ನನ್ನ ತಿಳುವಳಿಕೆ ಹಾಗೂ ನಂಬಿಕೆ. ಅಷ್ಟಕ್ಕೂ ನನಗೀಗ ೨೫ ವರ್ಷ ಅಷ್ಟೇ. ಈಗಷ್ಟೇ ಬ್ಯಾಂಕ್ ಉದ್ಯೋಗಿ ಆಗಿದೀನಿ. ಒಂದು ಸಲ ಜೀವನದಲ್ಲಿ ಸೆಟಲ್ ಆದಮೇಲೆ ಮದುವೆಯ ಮಾತೆಲ್ಲ." ಶರತ್ ಉತ್ತರಿಸಿದ.
" ನಾನೇನೋ ತೀರ್ಮಾನ ಮಾಡಿ ಆಗಿದೆ ಕಣೋ. ನಾನು ಯಾರಾದ್ರೂ ವಿಧವೆಯನ್ನೋ, ಅನಾಥೆಯನ್ನೋ, ಅಂಗವಿಕಲೆಯನ್ನೋ, ವಿಚ್ಛೇದಿತೆಯನ್ನೋ ಮದುವೆ ಆಗೋದು ಅಂತ.....ಪಾಪ, ಅವರುಗಳೆಲ್ಲ ಎಷ್ಟೊಂದು ಕಷ್ಟ ಅನುಭವಿಸುತ್ತಾರೆ ಅಲ್ವಾ? ....ನಮ್ಮಂಥ ಯುವಕರೇ ಮುಂದೆಬಂದು ಅಂತಹವರನ್ನು ಮದುವೆಯಾಗಿ ಅವರಿಗೊಂದು ಜೀವನ ಕೊಡುವ ಉದಾರ ಮನಸ್ಸು ಮಾಡಬೇಕು. ಇದೂ ಒಂಥರಾ ಸಮಾಜ ಸೇವೆ ಅಲ್ವಾ? ಜನ ಮೊದಮೊದಲು ಆಡಿಕೊಳ್ತಾರೆ. ಆದರೆ ನಮ್ಮ ಬಗ್ಗೆ ಸಮಾಜದ ದೃಷ್ಟಿಕೋನ ಬದಲಾಗುವುದರಲ್ಲಿ ಸಂಶಯವಿಲ್ಲ. ಮೊದಲು ತಿರಸ್ಕಾರದಿಂದ ಕಂಡರೂ ಆಮೇಲೆ ಅವರೇ ನಮ್ಮ ದಾರಿಗೆ ಬರ್ತಾರೆ. "....
ಶರತ್ ಮೌನವಾಗಿ ಅವನ ಮಾತು ಕೇಳಿಸಿಕೊಳ್ಳುತ್ತ ಊಟ ಮುಂದುವರೆಸಿದ್ದ.
ಮತ್ತೆ ನುಡಿದ ಪ್ರಸಾದ್..." ಸಮಾಜದಲ್ಲಿ ಪ್ರಾಮುಖ್ಯತೆ ಪಡೆಯೋಕೆ ಇದೊಂದು ಸುಲಭದ ದಾರಿ ನೋಡು..."
ಶರತ್ ಚಕಿತನಾಗಿ ಪ್ರಶ್ನಿಸಿದ...." ಹಾಗಾದ್ರೆ ನೀನು ಮದುವೆ ಆಗೋದು ನಿನಗೋಸ್ಕರ ಅಲ್ಲ....ಸಮಾಜದಲ್ಲಿ ಪ್ರಾಮುಖ್ಯತೆ ಸಿಗಲಿ ಅಂತಾನಾ? .....
"ಹೌದು ಮತ್ತೆ.... " ಪ್ರತ್ಯುತ್ತರವಿತ್ತ ಪ್ರಸಾದ್.... "ಅದೂ ಅಲ್ದೆ ಈಗಿನ ಕಾಲದ ಹುಡುಗಿಯರು ಸಿಕ್ಕಾಪಟ್ಟೆ ಜೋರಿನವರು, ಸ್ವಾತಂತ್ರ್ಯದ ಸೋಗಿನಲ್ಲಿ ಸ್ವೇಚ್ಛಾಚಾರ ಪ್ರಿಯರೇ ಆಗಿರ್ತಾರೆ. ಅವರನ್ನು ಅಂಕೆಯಲ್ಲಿ ಇಟ್ಟು ಕೊಳ್ಳುವುದು ಭಾರೀ ತಾಪತ್ರಯದ ಕೆಲಸ. ಅದೇ ಏನಾದರೂ ನ್ಯೂನತೆ ಇರುವವಳನ್ನು ಆಗಿಬಿಟ್ಟರೆ ನಾವು ಹೇಳಿದಂತೆ ಕೇಳಿಕೊಂಡು ಇರ್ತಾರಲ್ವಾ? ."
ಅವನ ಮನದಾಳದ ಭಾವನೆಗಳು ಮಾತಿನ ರೂಪದಲ್ಲಿ ಹೊರಹೊಮ್ಮಿದ್ದು ಕೇಳಿ ದಂಗು ಬಡೆದುಹೋದ ಶರತ್ ." ನಿನ್ನ ಅಪ್ಪ, ಅಮ್ಮ, ಮನೆಯವರಿಗೆ ನಿನ್ನ ಈ ನಿರ್ಧಾರ ಗೊತ್ತಿದೆಯಾ?"
" ಅಪ್ಪ, ಅಮ್ಮನ ವಿಷಯ ಬಿಡು....ಇದು ನನ್ನ ವೈಯಕ್ತಿಕ ವಿಚಾರ. ಇದರಲ್ಲಿ ನನ್ನ ತೀರ್ಮಾನವೇ ಅಂತಿಮ...." ಪ್ರಸಾದ್ ನುಡಿದಾಗ ಶರತ್ ಮೌನದ ಮೊರೆ ಹೊಕ್ಕ.
ಬೆಚ್ಚನಾ ಮನೆ ಇರಲು
ವೆಚ್ಚಕ್ಕೆ ಹೊನ್ನಿರಲು
ಇಚ್ಛೆಯನರಿತು ನಡೆವ ಸತಿಯಿರಲು
ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ
ಸರ್ವಜ್ಞಾ
___________________________________________
ಕಾಲ ಮುಂದೆ ಮುಂದೆ ಮುಂದಕ್ಕೆ ಹೆಜ್ಜೆ ಹಾಕುತ್ತದೆ....ಎಲ್ಲರೂ ಅದರ ಹಿಂದೆ ಹಿಂದೆ ಹಿಂದೆಯೇ ನಡೆ ನಡೆಯಲೇಬೇಕು.......ಬ್ಯಾಂಕ್ ಉದ್ಯಮಿಗಳಿಗೂ ಕಾಲನ ಆಕ್ರಮಣದಿಂದ ತಪ್ಪಿಸಿಕೊಳ್ಳಲು ಆಗಲಿಲ್ಲ. ಉದ್ಯೋಗದಲ್ಲಿ ಬಡ್ತಿಗಳ , ವರ್ಗಾವಣೆಗಳ ತಿರುಗು ರಾಟೆಗೆ ಸಿಲುಕಿ ಬೇರೆ ಬೇರೆ ಶಾಖೆಗಳ, ಬೇರೆ ಬೇರೆ ರಾಜ್ಯಗಳ ಸುತ್ತಾಟ.......
ಹನ್ನೆರಡು ವರ್ಷಗಳ ನಂತರ ಮತ್ತೆ ಒಂದೇ ಶಾಖೆಗೆ ವರ್ಗಾವಣೆಗೊಂಡು ಒಬ್ಬರನ್ನೊಬ್ಬರು ಭೇಟಿ ಆದಾಗ ಸಂತಸದಿಂದ ಸಂಭ್ರಮಿಸಿದರು. ಕೆಲಸದ ಅವಧಿ ಮುಗಿಯುವುದನ್ನೆ ಕಾದುಕೊಂಡು ಸಮೀಪವೇ ಇದ್ದ ಉಪಹಾರಗೃಹ ಒಂದರಲ್ಲಿ ಕಾಫಿ ತಿಂಡಿ ಸೇವಿಸುತ್ತಾ ಹನ್ನೆರಡು ವರ್ಷಗಳ ವಿಷಯ ವಿಶೇಷಗಳ ವಿನಿಮಯಕ್ಕೆ ಮುಂದಾದರು ಗೆಳೆಯರು.
ಮಾತಿನ ಮಲ್ಲ ಪ್ರಸಾದ್ ಶುರು ಮಾಡಿದ ...." ಎಷ್ಟು ವರ್ಷಗಳ ನಂತರ ಭೇಟಿ ಆಗ್ತಾ ಇದೀವಿ ಅಲ್ವಾ?.....
ಮಸಾಲೆದೋಸೆಯ ಸವಿಯನ್ನು ಆಸ್ವಾದಿಸುತ್ತ ಶರತ್ ತಲೆ ಆಡಿಸಿದ...." ಹೌದು ಕಣೋ....ಹನ್ನೊಂದು ಹನ್ನೆರಡು ವರ್ಷಗಳೇ ಆಗಿರಬೇಕು... ಬ್ಯಾಂಕ್ ಕೆಲಸದ ಒತ್ತಡದಲ್ಲಿ ಸ್ನೇಹ ಸಂಬಂಧ ಗಳೆಲ್ಲ ಕಳಚಿ ಬೀಳತ್ತೆ ಅಲ್ವಾ? ಹೊಸ ಶಾಖೆಗೆ ಹೋಗಿ ಹೊಸ ಸಹೋದ್ಯೋಗಿಗಳ ಪರಿಚಯವಾಗಿ ಅದು ಗಟ್ಟಿ ಗೆಳೆತನ ಆಗುವುದರಲ್ಲಿ ಮತ್ತೊಂದು ಶಾಖೆಗೆ ವರ್ಗ.....ಮನೆ ಹುಡುಕಿ, ಶಿಫ್ಟ್ ಮಾಡೋಷ್ಟರಲ್ಲಿ ୭ ....೮ ತಿಂಗಳೇ ಉರುಳಿರತ್ತೆ. ಊರಿಗೆ , ಗ್ರಾಹಕರಿಗೆ ಪಳಗುವುದರಲ್ಲಿ ಮತ್ತೊಂದು ವರ್ಗಾವಣೆಯ ಆದೇಶ ಪತ್ರ ಕೈಯಲ್ಲಿರತ್ತೆ.. .....ಇರಲಿ ಬಿಡು....ಇದೆಲ್ಲ ನಿಂಗೂ ಗೊತ್ತಿರೋದೆ ತಾನೇ?.....ಎಷ್ಟೋ ವರ್ಷಗಳ ನಂತರ ಮತ್ತೆ ಒಂದೇ ಶಾಖೆಯಲ್ಲಿ ಒಟ್ಟಾಗಿ ಎರಡು ವರ್ಷ ಇರೋ ಹಾಗಾಯ್ತಲ್ಲ ಅನ್ನೋದೇ ಖುಷಿಯ ಸಂಗತಿ. "
" ಹೌದು ಕಣೋ" ...ತಲೆಯಾಡಿಸಿದ ಪ್ರಸಾದ್. " ಮನೆ ಎಲ್ಲಿ ಮಾಡಿದ್ದೇ? ಶಿಫ್ಟ್ ಮಾಡಿ ಆಯ್ತಾ ಕುಟುಂಬವನ್ನು? " ...
"ಆಯ್ತಪ್ಪ ಸಧ್ಯ....ಇನ್ನೆರಡು ಮೂರು ವರ್ಷ ಅಲ್ಲಾಡೋದಿಲ್ಲ......ಮನೆ ವಿಜಯನಗರ.....ನಿಂದು ?"
" ನಮ್ಮನೆ ಕುವೆಂಪುನಗರ......ನಾನು ಎರಡು ದಿನ ಬಿಟ್ಟು ನನ್ನ ಮನೆಯವರನ್ನ ಕರೆ ತರ್ತೀನಿ..."
" ಹೌದಾ? ಎಲ್ಲರೂ ಬಂದಮೇಲೆ ಒಂದು ಭಾನುವಾರ ನಮ್ಮನೆಗೆ ಕರೆದುಕೊಂಡು ಬಾ....ಎಷ್ಟು ಮಕ್ಕಳು ನಿಂಗೆ? ನಿನ್ನ ಶ್ರೀಮತಿ ಕೆಲಸಕ್ಕೆ ಹೋಗ್ತಾರಾ? "
ಉತ್ತರಿಸಿದ ಪ್ರಸಾದ್. .." ಇಲ್ಲಪ್ಪ....ಎರಡು ಮಕ್ಕಳ ಆರೈಕೆ, ಪಾಠ ಪ್ರವಚನ, ಮನೆ ವಾರ್ತೆ......ಇದೆಲ್ಲ ಪೂರ್ಣಾವಧಿ ಕೆಲಸಗಳಲ್ವೆ? ದೊಡ್ಡವನು ಅಂಶುಮಾಲಿ, ಮೂರನೇ ತರಗತಿ..... ಸಣ್ಣದು ಪ್ರಥಾ, ಒಂದನೇ ತರಗತಿ...... ಮನೆ ಹತ್ತಿರವೇ ಶಾಲೆ....."
ಮಸಾಲೆದೋಸೆ ತಿಂದು ಮುಗಿಸಿ ಕೈ ತೊಳೆದುಬಂದ ಶರತ್ ಕರವಸ್ತ್ರದಿಂದ ಕೈ ಒರೆಸುತ್ತಾ ಕೇಳಿದ...." ನಿನ್ನ ಮದುವೆ ಹೇಗಾಯ್ತು? ನಿನ್ನ ಆಸೆ ನೆರವೇರಿತಾ?"....
ಕೊಂಚ ಕೆಂಪೇರಿದ ಮೊಗದಿಂದ ಪ್ರಸಾದ್ ಉತ್ತರ ಕೊಟ್ಟ....." ಇಲ್ಲ ಕಣೋ.....ಅಪ್ಪ, ಅಮ್ಮ ಆರಿಸಿದ ಹುಡುಗೀನ ಮದುವೆ ಆಗಿಬಿಟ್ಟೆ. ಅವರಿಷ್ಟಕ್ಕೆ ತಲೆ ಬಾಗಿಬಿಟ್ಟ ಈ ಪ್ರಸಾದ... ಅವರೇ ಆರಿಸಿದ ಹುಡುಗಿಯೇ ಆದ್ರೂ ದಿನಕ್ಕೊಂದು ರಾಮಾಯಣ ಇವಳ ಜೊತೆಗೆ.... ಇನ್ನು ನಾನು ನನ್ನ ಕೋರಿಕೆಯನ್ನು ಏನಾದರೂ ಮುಂದೆ ಇಟ್ಟಿದ್ದು ಅದೇನಾದರೂ ನೆರವೇರಿ ಬಿಟ್ಟಿದ್ರೆ....... ಅಬ್ಬಾ, ದೇವರೇ ಗತಿ ಆಗ್ತಾ ಇತ್ತು ನಮ್ಮ ಸಂಸಾರ....ಕನಸುಗಳನ್ನ ಕಾಣಬೇಕು ಅಷ್ಟೇ ಕಣೋ....ಅದನ್ನ ನನಸಾಗಿಸಕ್ಕೆ ಹೋಗಬಾರದು.....ಈಗ ಜೀವನ ತುಂಬ ರೋಸಿ ಹೋದಾಗ, ಅದೇ ಕನಸುಗಳ ಪ್ರಪಂಚದಲ್ಲಿ ತಿರುಗಾಡಲು ಒಂಥರಾ ಖುಷಿ, ಒಂಥರಾ ಸಮಾಧಾನ... ನಮ್ಮ ಆಸೆಗಳ ಕಂಡು ನಮಗೇ ನಗು.....".
ಮಾತು ನಿಲ್ಲಿಸಿ ಬಿಸಿ ಕಾಫಿ ಹೀರುವುದರಲ್ಲಿ ಮಗ್ನನಾದ ಪ್ರಸಾದ್....ಇದ್ದಕ್ಕಿದ್ದಂತೆ ಏನೋ ನೆನಪಾದವನಂತೆ ..." ಏ ಶರತ್, ನಿನ್ನ ಮನೆಯವರ, ಮಕ್ಕಳ ಬಗ್ಗೆ ಹೇಳೋ....ನೀನಂತೂ ಅಪ್ಪ ಅಮ್ಮ ಹಾಕಿದ ಗೆರೆ ದಾಟುವವನಲ್ಲ....ಅವರು ನಿನ್ನೆದುರು ನಿಲ್ಲಿಸಿದ ಹುಡುಗಿಗೆ ಮಾಲೆ ಹಾಕೀರ್ತಿಯ ಅಲ್ಲ....??".
ಶರತ್ ಗಂಭೀರವಾಗಿ ನುಡಿದ .." ನಿನಗೆ ನಿನಾದ ನ ನೆನಪು ಇದೆಯಾ?""
" ಯಾವ ನಿನಾದ? ಹಾ... ನಮ್ಮ ಮೊದಲಿನ ಶಾಖೆಯಲ್ಲಿ ನಮ್ಮ ಜೊತೆ ಕೆಲಸ ಮಾಡ್ತಾ ಇದ್ದಳು ಅಲ್ವಾ? ಪಾಪದ ಹುಡುಗಿ, ಗಂಭೀರೆ, ಮೌನಿ, ತಾನಾಯ್ತು ತನ್ನ ಕೆಲಸ ಆಯ್ತು ಅಂತ ಇರ್ತಿದ್ದ ಹುಡುಗಿ ತಾನೇ?.....ಅದ್ಸರಿ....ಈಗ ಅವಳ ವಿಷಯ ಯಾಕೋ? ನಾನು ಕೇಳಿದ್ದು ನಿನ್ನ ಬಗ್ಗೆ....."
" ಅದನ್ನೇ ಹೇಳ್ತಾ ಇರೋದು ಮರಿ.... ನಿನಾದ ನನ್ನ ಪತ್ನಿ......"
ಪ್ರಸಾದ ನ ಗಲಿಬಿಲಿ ಸ್ಪಷ್ಟವಾಗಿತ್ತು......." ಆದರೆ, ಅವಳಿಗೆ ಆಗಲೇ ಮದುವೆಯಾಗಿತ್ತಲ್ಲೋ....."
" ಬಲವಂತದ ಮದುವೆ ಆಗಿತ್ತು ಅವಳಿಗೆ ....ಗಂಡ ಸಂಶಯಪಿಶಾಚಿ...ಸಾಕಷ್ಟು ಕಿರುಕುಳ ಅನುಭವಿಸುತ್ತಿದ್ದರೂ ಮೌನವಾಗಿಯೇ ಸಹಿಸುತ್ತ ನಾಲ್ಕೈದು ವರ್ಷ ಕಳೆದಿದ್ದಳು ಅಲ್ಲಿಯೇ.....ಕಡೆಗೊಂದು ದಿನ ಮಧ್ಯರಾತ್ರಿಯಲ್ಲಿ ಗಂಡ ಮನೆಯಿಂದ ಹೊರಹಾಕಿದಾಗ ವಿಧಿಯಿಲ್ಲದೆ ತಂದೆಯ ಮನೆಗೆ ವಾಪಸ್ ಹೋಗಿದ್ದಳು. ವಿಚ್ಛೇದನವೂ ಸಿಕ್ಕಿತು,.ಅವಳ ಗುಣ, ಸ್ವಭಾವ, ನಡತೆ, ನಡವಳಿಕೆ ನನಗೆ ತುಂಬಾ ಮೆಚ್ಚಿಗೆಯಾಗಿತ್ತು. ನನ್ನ ಮನೆಯವರನ್ನೂ,,ಅವಳನ್ನೂ, ಅವಳ ಮನೆಯವರನ್ನೂ, ಛಲ ಬಿಡದೆ ಅಂತೂ ಇಂತೂ ಒಪ್ಪಿಸಿ ಮದುವೆಯಾದೆ.....ಈಗ ಒಬ್ಬಳು ಮಗಳು ನಮಗೆ....ಎರಡನೇ ತರಗತಿಯಲ್ಲಿ ಓದುತ್ತಿರುವ ಗಾನ....."
" ನನ್ನದು ಅತ್ಯಂತ ಸುಖೀ ದಾಂಪತ್ಯ....ನಮ್ಮ ಮನೆಯವರಿಗೆಲ್ಲ ನಿನಾದ ನನ್ನು ಕಂಡರೆ ನನಗಿಂತ ಹೆಚ್ಚಿನ ಪ್ರೀತಿ....ಸಾರ್ಥಕ ಬದುಕು ಬದುಕುತ್ತಿದ್ದೇವೆ.....ಜೀವನದಲ್ಲಿ ಸಣ್ಣ ವಯಸ್ಸಿಗೇ ಅಪಾರ ನೋವಿನ ಅನುಭವ ಇರುವವಳು ಯಾರನ್ನೂ ನೋಯಿಸುವುದಿಲ್ಲ..... ಯಾರನ್ನೂ ನೊಂದುಕೊಳ್ಳಲು ಬಿಡುವುದಿಲ್ಲ..... ಅಪ್ಪ ಅಮ್ಮನಿಗೆ ಮಗಳೂ ಅವಳೇ, ಸೊಸೆ ನೂ ಅವಳೇ...ಎಲ್ಲರ ಬೇಕು ಬೇಡಗಳನ್ನು ಅವರು ಹೇಳುವ ಮೊದಲೇ ಅರಿತು ಪೂರೈಸುವ , ಎಲ್ಲರ ಅಚ್ಚುಮೆಚ್ಚಿನ ಜೀವ ಅವಳೀಗ."
ಪ್ರಸಾದನಿಗೆ ತೆರೆದ ಬಾಯಿ ಮುಚ್ಚಲು ಆಗಲಿಲ್ಲ.
ಶರತ್ ನ ಎತ್ತರದ ಎದುರು ತಾನು ಅತ್ಯಂತ ಕುಬ್ಜನಾದಂತೆ ಭಾಸವಾಯಿತು.
ಹೋಟೆಲ್ಲಿನ ಮೂಲೆಯಲ್ಲಿ ರೇಡಿಯೋ ಉಲಿಯುತ್ತಿತ್ತು....
" ಆಡಿಯು ಮಾಡದವನು ಅಧಮ
ಆಡಿ ಮಾಡುವವ ಮಧ್ಯಮ
ಆಡದೇ ಮಾಡುವವ ರೂಢಿಯೊಳಗೆ
ಉತ್ತಮನು ಸರ್ವಜ್ಞ......."
***######******######*******########**
.(ಪ್ರತಿಲಿಪಿ ವೇದಿಕೆಯಲ್ಲಿ ಪ್ರಕಟವಾದ ಕಥೆ)
