STORYMIRROR

Ashritha Kiran ✍️ ಆಕೆ

Abstract Classics Inspirational

4  

Ashritha Kiran ✍️ ಆಕೆ

Abstract Classics Inspirational

ನಗು ಮೊಗದ ಹಿಂದೆ

ನಗು ಮೊಗದ ಹಿಂದೆ

2 mins
395

"ಹಾಯ್ ಗುಡ್ ಮಾರ್ನಿಂಗ್" ಎಂದು ನಗುನಗುತ್ತಾ ಆಫೀಸೊಳಗೆ ಬಂದ ವರುಣ್ ಎಲ್ಲರಿಗೂ ನಗುಮುಖದಿಂದ ಗುಡ್ ಮಾರ್ನಿಂಗ್ ಹೇಳಿ ತನ್ನ ಜಾಗದಲ್ಲಿ ಕುಳಿತು ಕೆಲಸವನ್ನು ಆರಂಭಿಸಿದ..


"ಏನಪ್ಪಾ ಹೀರೋ ನಿನ್ನ ನೋಡಿದ್ರೆ ಹೊಟ್ಟೆ ಉರಿಯುತ್ತೆ ಕಣೋ.. ನಿನ್ನ ಮುಖದಲ್ಲಿ ಯಾವಾಗಲೂ ನಗು ಇರುತ್ತೆ.. ನಿನಗೆ ಮುತ್ತಿನಂತ ಹೆಂಡತಿ ದೇವರಂತ ತಾಯಿ.. ಯಾವುದೇ ತಲೆಬಿಸಿ ಇಲ್ಲ ಅಲ್ವಾ, ಅತ್ತೆ ಸೊಸೆ ಇಬ್ರು ತಾಯಿ ಮಗಳಂತೆ ಇದ್ದಾರೆ.. ಹಾಗಾಗಿ ನೀನು ನೆಮ್ಮದಿಯಾಗಿ ನಗ್ತಾ ಇರ್ತೀ.. ನಮ್ಮನೇಲು ಇದ್ದಾರೆ ಅತ್ತೆ ಸೊಸೆ.. ಒಬ್ರ ತಲೆ ಕಂಡ್ರೆ ಒಬ್ರಿಗ್ ಆಗಲ್ಲ ಇಬ್ರನ್ನ ಸಂಬಾಳಿಸೋದ್ರಲ್ಲಿ ಇತ್ತೀಚಿಗೆ ನಗುವುದನ್ನು ಮರೆತಿದ್ದೇನೆ " ಎನ್ನುತ್ತಾ ಪಕ್ಕದಲ್ಲಿ ಕುಳಿತು ಹೇಳಿದ ಶಂಕರ್ ಕಡೆಗೆ ತಿರುಗಿ ನೋಡಿದವನು ಮತ್ತೊಂದು ಮುಗುಳುನಗೆ ಬೀರಿ ತನ್ನಷ್ಟಕ್ಕೆ ಕೆಲಸವನ್ನು ಮುಂದುವರಿಸಿದ..


ಎಂದಿನಂತೆ ಕೆಲಸ ಮುಗಿಸಿ ಮನೆಗೆ ಹಿಂದಿರುವಾಗ ಆಫೀಸಿನಲ್ಲಿ ಶಂಕರ್ ಹೇಳಿದ ಮಾತಿನ ಬಗ್ಗೆ ಆಲೋಚಿಸಲು ಆರಂಭಿಸಿದ..


"ನಿಜಕ್ಕೂ ನಾನು ಅಷ್ಟು ಸುಖಿಯೇ.. ಶಂಕರ್ ಹೇಳಿದಂತೆ ನಮ್ಮ ಮನೆಯಲ್ಲಿ ಅತ್ತೆ ಸೊಸೆಯ ಜಗಳವಿಲ್ಲ.. ಆದರೆ ಮದುವೆಯಾಗಿ 10 ವರ್ಷ ಕಳೆದರೂ ನಮಗೆ ಮಕ್ಕಳಾಗಿಲ್ಲ.. ಆರಂಭದಲ್ಲಿ ನನ್ನ ಹೆಂಡತಿಗೆ ತೊಂದರೆ ಇರಬಹುದು ಎಂದು ಎಲ್ಲಾ ವೈದ್ಯರ ಬಳಿ ಪರೀಕ್ಷೆ ಮಾಡಿಸಿದ್ದಾಯಿತು.. ಆದರೆ ತೊಂದರೆ ಅವಳಲಿಲ್ಲ ನನ್ನದು ಎಂದು ತಿಳಿದ ಮೇಲೆ ಅತೀವ ನೋವಾಯಿತು.. ಮಕ್ಕಳ ಬಗ್ಗೆ ಸಾವಿರ ಕನಸು ಕಂಡ ನನ್ನಾಕೆಯ ಆಸೆ ಕನಸುಗಳನ್ನೆಲ್ಲ ನುಚ್ಚುನೂರು ಮಾಡಿದ್ದೇನೆ ಎಂದು ಒಳಗೊಳಗೆ ಬೇಸರಿಸಿಕೊಂಡಿದ್ದೆ.. ಪ್ರತಿ ಬಾರಿ ಮಗುವಿಗಾಗಿ ಅವಳು ಹಂಬಲಿಸುವಾಗ ಅವಳಿಗೆ ವಿಚ್ಛೇದನ ನೀಡಿ ಅವಳಿಂದ ದೂರಾದರೆ ಅವಳು ಇನ್ನೊಬ್ಬರನ್ನ ಮದುವೆಯಾಗಿ ಸುಖವಾಗಿರಬಹುದೆಂದು ವಿಷಯ ಪ್ರಸ್ತಾಪಿಸಿದೆ..


ಕೋಪಗೊಂಡಳು.. ಮುನಿಸಿಕೊಂಡಳು.. ನಿಮ್ಮಷ್ಟು ಪ್ರೀತಿಸುವ ಗಂಡನನ್ನು ಪಡೆದ ನಾನೇ ಪರಮ ಸುಖಿ ಮಕ್ಕಳಾಗಲಿಲ್ಲವೆಂದರೆ ಏನಂತೆ ನನಗೆ ನೀವು ನಿಮಗೆ ನಾನು ಮಗುವಾಗಿರುವ ಎಂದವಳ ಮಾತಿಗೆ ಏನು ಹೇಳಬೇಕು ತಿಳಿಯಲಿಲ್ಲ.. ಪ್ರತಿದಿನ ದುಃಖದಲ್ಲಿ ಕೊರಗುತ್ತಿದ್ದ ನನ್ನ ಬಳಿ ಸದಾ ನಗುನಗುತ್ತಾ ಇರಬೇಕೆಂದು ಮಾತು ತೆಗೆದುಕೊಂಡಳು.. ಮನದ ನೋವನ್ನು ಮರೆಮಾಚಿ ಅವಳಿಗಾಗಿ ಅವಳ ಸಂತೋಷಕ್ಕಾಗಿ ನಾನು ನಗುತ್ತಿದ್ದೇನೆ.. ನನ್ನ ನಗುಮೊಗದ ಹಿಂದಿನ ನೋವನ್ನು ಅವಳು ಬಲ್ಲಳು.. ಆದರೆ ಹೊರಗಿನ ಸಮಾಜ ಅದನ್ನು ಅರಿತು ಹತ್ತಾರು ಮಾತನಾಡಿ ನೋವಿಸುವುದನ್ನು ತಪ್ಪಿಸಲು ನನ್ನಾಕೆ ಈ ನಿರ್ಧಾರವನ್ನು ಮಾಡಿದ್ದಾಳೆ ಎಂದು ತಿಳಿದು ಅವಳ ಬಗ್ಗೆ ಹೆಮ್ಮೆ ಎನಿಸಿತು...


ನನ್ನ ನಗುವಿಗೆ ನನ್ನಾಕೆ ಕಾರಣ..ನನ್ನ ನಗುವಿನ ಹಿಂದಿನ ನೋವು ನನ್ನಾಕೆ ತಿಳಿದಿದ್ದಾಳೆ... ನನ್ನ ನೋವು ಬೇರೆಯವರಿಗೆ ತಿಳಿದು ಪ್ರಯೋಜನವಿದೆಯೇ.. ಸುಮ್ಮನೆ ಹಿಂದಿನಿಂದ ಮಾತನಾಡುವವರ ಪಾಲಿಗೆ ಆಹಾರವಾಗುವ ಬದಲು ನಗುವಿನಿಂದ ಎಲ್ಲವನ್ನು ಮರೆಮಾಚಿ ಮೌನವಾಗುವುದು ಲೇಸು, ನನ್ನಾಕೆಯ ನಿರ್ಧಾರ ಸರಿ ಇದೆ ಎಂದನಿಸಿ ಅಂದಿನಿಂದ ಎಲ್ಲರೊಂದಿಗೆ ನಗುತ್ತಲೇ ಮಾತನಾಡುತ್ತೇನೆ...


ನಗುಮೊಗದ ಹಿಂದೆ ನೋವುಗಳು ಅಡಗಿರುತ್ತದೆಯಂತೆ.. ನಾನು ಅದರಿಂದ ಹೊರತಾಗಿಲ್ಲ... ಹೆಣ್ಣು ಮಕ್ಕಳಿಗೆ ಮಾತ್ರ ನೋವಿರುತ್ತದೆಯೇ..? "ಎಂದು ಮನದಲ್ಲೇ ಪತ್ರ ಬರೆಯುತ್ತಿದ್ದ ವರುಣ್ ನನ್ನು ಕಂಡೆಕ್ಟರ್ ಹಾಕಿದ ವಿಸಿಲ್ ವಾಸ್ತವಕ್ಕೆ ಕರೆತಂದು ಮನೆಯ ಬಳಿ ಇಳಿದು ನಡೆಯುವಂತೆ ಮಾಡಿತು...


ಹಿಂದೆ ಮನೆಯಲ್ಲಿ ಅಜ್ಜಿಯಿಂದಿರು ಮನೆಯ ಗಂಡು ಮಕ್ಕಳು ಅಳಬಾರದು.. ಎಂದು ಹೇಳುತ್ತಿದ್ದರಂತೆ.. ಈಗಲೂ ಕೆಲವು ಕಡೆ ಗಂಡು ಮಕ್ಕಳು ಅತ್ತ ಕೂಡಲೇ ನೀನೇನು ಹೆಣ್ಣಿನಂತೆ ಅಳುತ್ತಿರುವೆಯಲ್ಲಾ ಎಂದು ಆಡಿಕೊಳ್ಳುವವರು ಇದ್ದಾರೆ.. ನಗುಮುಖವನ್ನು ಹೊತ್ತ ಗಂಡಿಗೂ ಕೂಡ ಭಾವನೆಗಳಿರುತ್ತವೆ..ಅವರ ಮನಸ್ಸಲ್ಲಿಯೂ ಕೂಡ ನೋವುಗಳಿರುತ್ತವೆ..ಅದನ್ನು ಹೊರಹಾಕಲು ಸಮಾಜದ ಕಟ್ಟುಪಾಡುಗಳು ಅಡ್ಡಿಯಾಗಿದೆ ಎಂದರೆ ತಪ್ಪಲ್ಲ ಅಲ್ಲವೇ..?


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada story from Abstract