Mahadevaprasad H R

Classics Others


4.5  

Mahadevaprasad H R

Classics Others


ಅಪ್ಪುಗೆ

ಅಪ್ಪುಗೆ

13 mins 176 13 mins 176

ನನ್ನ ಜೀವನ ಎಷ್ಟು ಚೆನ್ನಾಗಿತ್ತು. ನಾನು, ನನ್ನ ಹೆಂಡತಿ ಹಾಗೂ ನಮ್ಮ ಮುದ್ದಾದ ಒಬ್ಬ ಮಗ. ಮನೆ ಯಾವಾಗಲೂ ನಗುವಿನಿಂದ ತುಂಬಿರ್ತಿತ್ತು, ಬಡತನ ಇದ್ರೂ ಖುಷಿಗೆ ಯಾವುದೇ ತೊಂದ್ರೆ ಅಂತೂ ಇರ್ಲಿಲ್ಲ. ನನ್ನವಳು ಯಾವಾಗಲೂ ಯಾವುದಕ್ಕೂ ದೂರಿದವಳಲ್ಲ. ಇರೋದರಲ್ಲೇ ಖುಷಿ ಕಾಣುತ್ತಿದ್ದ ದೇವತೆ ಅವಳು. ಎಲ್ರೂ ಹೇಳೋರು ಒಂದು ಕಣ್ಣು ಕಣ್ಣಲ್ಲ, ಒಬ್ಬ ಮಗ ಮಗ ಅಲ್ಲ ಅಂಥ ಆದ್ರೆ ನಾವು ಯಾರ ಮಾತನ್ನು ಕೇಳಲಿಲ್ಲ. ಇರೋ ಒಬ್ಬ ಮಗನನ್ನೇ ಚೆನ್ನಾಗಿ ನೋಡ್ಕೋಬೇಕು ಅಂತ ಪಣ ತೊಟ್ವಿ. ಇಬ್ರು ಮಕ್ಳು ಆದ್ರೆ ನಮ್ಮ ಸಣ್ಣ ಸಂಪಾದನೆ ಎಲ್ಲಿ ಇಬ್ರಿಗೂ ಹಂಚಿಹೋಗಿ ಇಬ್ರಿಗೂ ಖುಷಿ ಅಗೋಲ್ವೋ ಅನ್ನೋ ಚಿಂತೆಲಿ ಒಬ್ಬನಿಗೆ ನಮ್ಮ ಪ್ರೀತಿನೆಲ್ಲಾ ಧಾರೆ ಎರೆದ್ವಿ. ಅವನಿಗೂ ಅಷ್ಟೇ ನಮ್ಮನ್ನ ಕಂಡ್ರೆ ತುಂಬಾ ಇಷ್ಟ. ನಮ್ಮನ್ನು ಬಿಟ್ಟು ಒಂದು ದಿನನೂ ಇರ್ತಿರ್ಲಿಲ್ಲ. ಅಮ್ಮನ ಕಂಡ್ರೆ ಪ್ರಾಣನೇ ಕೊಡೋನು. ನಾವು ಓದು ಅಂತ ಹೇಳತಿದ್ವೊ ಇಲ್ವೋ ಅವನಿಗೆ ಓದೋದು ಅಂದ್ರೆ ತುಂಬಾ ಇಷ್ಟ. ಅವ್ನು ಮೊದ್ಲ ಸಲ ನಮ್ಮ ಹೆಸರು ಬರ್ದು ತೋರಿಸ್ದಾಗ ನಮ್ಮಿಬ್ರಿಗೂ ಆದ ಖುಷಿ ಅಷ್ಟಿಷ್ಟಲ್ಲ. ಇವಳಿಗಂತು ಕಣ್ಣಂಚಿನಲ್ಲಿ ನೀರು ಬಂದುಬಿಟ್ಟಿತು. ಅಮ್ಮ ನಾನು ನಿನ್ನ ಚಿತ್ರ ಬಿಡಿಸ್ತೀನಿ, ಅಪ್ಪ ನಾನು ನಿನ್ನ ಚಿತ್ರ ಬಿಡಿಸ್ತೀನಿ ಅಂತ ಏನೇನೋ ಗೀಚಿದಾಗ ನಮ್ಗೆ ಆಗ್ತಿದ್ದ ಸಂತೋಷಕ್ಕೆ ಪಾರವೇ ಇರ್ತಿರ್ಲಿಲ್ಲ. ಆ ಓದೋದೆ ನಮ್ಮ ಖುಷಿಗೆ ಮುಳುವಾಯಿತೇನೋ ಅಂತ ಈಗೀಗ ಅನ್ಸುತ್ತೆ ಕೆಲವು ಸಲ. ಓದೋಕೆ ಅಂತ ಅವನು ಬೆಂಗಳೂರಿಗೆ ಹೋಗೋ ಹಾಗಾಯ್ತು. ಅದೇ ಮೊದ್ಲ ಸಲ ನಮ್ಗೆ ಅವನ್ನ ಬಿಟ್ಟು ಇರ್ಬೇಕಲ್ಲ ಅನ್ನೋ ಚಿಂತೆ ಶುರುವಾಗಿದ್ದು. ಹೇಗೋ ಮಗ ಓದಿ ಒಳ್ಳೆ ಹೆಸರು ಸಂಪಾದಿಸಲಿ ಅನ್ನೋ ಆಸೆಗೆ ನಾವು ಹೇಗೋ ಸಮಾಧಾನ ಮಾಡ್ಕೊಂಡ್ವಿ. ಮಗ ಮಾತ್ರ ಚೆನ್ನಾಗಿ ಓದಿ ಒಳ್ಳೆ ಮಾರ್ಕ್ಸ್ ತಗೊಂಡು ಪಾಸ್ ಆಗ್ತಾನೇ ಹೋದ. ಕೊನೆಗೆ ಒಂದು ದಿನ ಅಪ್ಪ ನಂಗೆ ಒಳ್ಳೆ ಕೆಲಸ ಸಿಕ್ಕಿದೆ ನಾನು ಅಮೇರಿಕಾಕ್ಕೆ ಹೋಗ್ತಿನಿ ಅಂದ. ನಾನು ಬೇಡ ಇಲ್ಲೇ ಇರು ನಮ್ಮ ಕಣ್ಣ ಮುಂದೆ ನಿನ್ನ ಬಿಟ್ಟು ನಮ್ಗೆ ಇರೋ ಶಕ್ತಿ ಇಲ್ಲ ಅಂದೆ. ಆ ಗಳಿಗೆಯಿಂದ ಅವನ ಮುಖದಲ್ಲಿ ನಗುವೇ ಮಾಯವಾಯ್ತು. ಕೊನೆಗೆ ಇವಳೇ, ರೀ ನಮ್ಮ ಖುಷಿ ಅವನೇ ಅಲ್ವಾ ಅವನು ಈ ತರ ಇದ್ರೆ ನಾವು ಖುಷಿಯಾಗಿ ಇರೋಕೆ ಆಗುತ್ತಾ, ದೂರ ಇದ್ರು ಅವನ ಕನಸು ಕಟ್ಕೊಂಡು ಖುಷಿಯಾಗಿ ಇದಾನೆ ಅಂತ ನಾವು ಹೇಗೋ ಇರಬೋದು. ಅವನ್ನ ಕಳುಹಿಸಿ ಕೊಡ್ರಿ ಎಂದು ಗಟ್ಟಿ ಮನಸ್ಸು ಮಾಡಿಕೊಂಡು ಕಳುಹಿಸಿ ಕೊಟ್ಟಳು. 

ಮಗ ಹೋಗಿ ಇನ್ನೇನೂ ಹತ್ತು ವರ್ಷ ಆಗ್ತಾ ಬಂತು. ಹೋದ ಮೂರು ವರ್ಷಗಳು ಈ ಕಡೆ ತಿರುಗಿ ನೋಡಲಿಲ್ಲ. ನಮ್ಗೆ ಆಗ್ತಿದ್ದ ತಳಮಳ ಹೇಳ್ಕೊಳೋಕು ಆಗದೇ ಬಿಡೋಕು ಆಗದೇ ಹೇಗೋ ಒಬ್ಬರಿಗೆ ಒಬ್ಬರು ಸಮಾಧಾನ ಮಾಡ್ಕೊಂಡು ಜೀವನ ಮಾಡಿದ್ವಿ. ಆಮೇಲೆ ಬಂದವನಿಗೆ ಮದುವೆ ಮಾಡಿ ಕಳ್ಸಿದ್ದೆ, ಇವಳ ಖುಷಿ ಅಂತೂ ಹೇಳತೀರದಾಗಿತ್ತು. ಮದುವೆ ಮಾಡಿದ ಮೇಲೆ ನನ್ನ ಕರ್ತವ್ಯ ಮುಗಿತು ಅಂತಲೋ ಏನೋ ಇವಳು ನನ್ನ ಬಿಟ್ಟು ಹೋಗೆಬಿಟ್ಲು. ಆಗ ಮಗನಿಗೆ ಮದ್ವೆ ಹಾಗಿ ಎರಡು ವರ್ಷ ಆಗಿತ್ತು, ಒಂದು ಮಗು ಸಹ ಆಗಿತ್ತು. ಆದ್ರೆ ಅವನು ಮಾತ್ರ ಒಂದು ಸಲನೂ ಇಲ್ಲಿಗೆ ಬಂದಿರ್ಲಿಲ್ಲ. ಅವಳಿಗೆ ಅವಳ ಮೊಮ್ಮಗಳನ್ನು ಎತ್ತಿಕೊಂಡು ಆಡಿಸಬೇಕು, ಮುದ್ದು ಮಾಡಬೇಕು ಅನ್ನೋ ಕನವರಿಕೆ. ನನ್ನ ಕಂದ ಹಾಗೆ ಮಾಡುತ್ತಿರಬಹುದು, ಈಗೇ ಮಾಡುತ್ತಿರಬಹುದು ಅಂತ ಇಲ್ಲೇ ನೆನೆಸಿಕೊಂಡು ಖುಷಿ ಪಡ್ತಿದ್ಲು ಹಾಗೇ ದುಃಖ ಹೊತ್ತರಿಸಿ ಸಹ ಬರೋದು. ಕೊನೆಗೆ ಮಗ ಅವಳು ಹೋದ ಸುದ್ದಿ ತಿಳಿದು ಬಂದ ಆದರೆ ಖುಷಿಯಿಂದ ಬರಮಾಡಿಕೊಳ್ಳೋಕೆ ಅವಳೇ ಇರಲಿಲ್ಲ, ಅದೇ ಮುಗುಳುನಗೆಯೊಂದಿಗೆ ಅವರ ಮುಂದೇನೆ ಮಲಗಿದ್ದರೂ ಅವಳ ಮೊಮ್ಮಗಳತ್ತ ಕೈ ಚಾಚುವ ಸ್ಥಿತಿಯಲ್ಲಿ ಇರಲಿಲ್ಲ. ಅವನು ಕಾರ್ಯ ಆದ ಮಾರನೇ ದಿನನೇ ಹೊರಟು ನಿಂತಾಗ ಮಗುವಿನ ಆ ಬಟ್ಟಲು ಕಣ್ಣಿನ ಮುಗ್ದ ನಗುವೇ ಇನ್ನೂ ನನ್ನ ಮನಸ್ಸಿನಲ್ಲಿ ಅಚ್ಚೋತ್ತಿದ್ದೆ. ಇಂದಿಗೆ ಇವಳು ಹೋಗಿ ಐದು ವರ್ಷಗಳೇ ಕಳೆಯಿತು.

ಶಂಕರಣ್ಣ, ಶಂಕರಣ್ಣ ಎಲ್ಲಿ ಸದ್ದೇ ಇಲ್ಲ. ಅಲ್ಲಿ ಎಲ್ಲಾ ನಿಮಗಾಗಿ ಕಾಯ್ತ ಇದಾರೆ ಎಂದು ಸುಬ್ಬು ಬಂದು ಕರೆದಾಗಲೇ ಇವರು ವಾಸ್ತವಕ್ಕೆ ಬಂದಿದ್ದು. ಅದಾಗಲೇ ಸಂಜೆಯ ಕಪ್ಪು ಬಾನನ್ನು ಮುತ್ತಿಕೊಳ್ಳುತ್ತಿತ್ತು. ತಾವು ಕುಳಿತಿದ್ದ ಆರಾಮ ಕುರ್ಚಿಯಿಂದ ಮೇಲೆ ಎದ್ದವರೇ ಗೌರಿ ಇವತ್ತು ರಾತ್ರಿಗೆ ಅಡುಗೆ ಬೇಡಮ್ಮ, ನೀನು ಮನೆಗೆ ಹೋಗು ನನಗೆ ಒಂದು ಲೋಟ ಹಾಲು ಇಟ್ಟು ಹೋಗು ಸಾಕು, ನಾನು ಆಚೆ ಹೋಗಿ ಬರ್ತೀನಿ ಅಂತ ಹೇಳಿ ಬಂದವನ ಜೊತೆ ಹೊರಟರು. 

ಒಂಟಿ ಜೀವನ ಬೆಳಿಗ್ಗೆ ಎದ್ದು ಗದ್ದೆ ಕಡೆ ಹೊರಟರೆ ಹೇಗೋ ಮದ್ಯಾಹ್ನದ ತನಕ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಹೊತ್ತು ಕಳೆಯುತ್ತಾರೆ. ಮಗ ಅಮೆರಿಕಕ್ಕೆ ಹೋದ ಮೇಲೆ ಇವರು ಇರಲೆಂದೇ ದೊಡ್ಡ ಮನೆ ಕಟ್ಟಿಸಿದ್ದಾನೆ, ಮನೆಯೇನೋ ಕಟ್ಟಿಸಿದ ಆದರೆ ಅವರಿಗೆಕೋ ಅವನಿಲ್ಲದ ಮನೆ ಮನೆಯೆಂದೇ ಅನಿಸುವುದಿಲ್ಲಮ್ ದೊಡ್ಡ ತೋಟವನ್ನು ಸಹ ಖರೀದಿ ಮಾಡಿದ್ದಾನೆ. ಮದ್ಯಾಹ್ನದ ತನಕ ತೋಟದಲ್ಲಿ ವೇಳೆ ಕಳೆದರೆ, ಮದ್ಯಾಹ್ನದ ಊಟದ ನಂತರ ಸ್ವಲ್ಪ ಹೊತ್ತು ಮಲಗುತ್ತಾರೆ. ಮಲಗಿದಾಗ ನಿದ್ರೆಯ ಬದಲು ಬರಿ ಹಳೆಯ ನೆನಪುಗಳೇ ಹೊತ್ತರಿಸಿ ಬಂದು ಕಣ್ಣಂಚು ತೇವವಾಗುತ್ತದೆ. ಈಗೀಗ ಇವರಿಗೆ ಹಳೆಯ ನೆನಪುಗಳೊಂದಿಗೆ ಬದುಕುವುದು ರೂಢಿಯಾಗಿದೆ, ಆದರೂ ಕೆಲವು ಸಲ ಕುಳಿತಲ್ಲೇ ಮತ್ತದೇ ಹಳೆ ನೆನಪಿನೊಂದಿಗೆ ಕಳೆದು ಹೋಗಿ ವಾಸ್ತವವನ್ನೇ ಮರೆಯುತ್ತಾರೆ. 

ಬಾ ಬಾ ಶಂಕರಪ್ಪ, ನಾವೆಲ್ಲ ತುಂಬಾ ಹೊತ್ತಿಂದ ಕಾಯ್ತಿದ್ವಿ, ನೀನು ಎಲ್ಲೋ ಬರ್ಲಿಲ್ಲ ಅದಿಕ್ಕೆ ನಮ್ಮ ಸುಬ್ಬುನ ನೋಡ್ಕೊಂಡು ಬಾ ಅಂತ ಕಳ್ಸಿದ್ವಿ. ಊರಿನಲ್ಲಿ ಎಲ್ಲರೂ ಇವರನ್ನ ಕರೆಯೋದು ಶಂಕರಣ್ಣ ಎಂದೇ ಆದರೆ ವಯಸ್ಸಲ್ಲಿ ಇವರಿಗಿಂತ ದೊಡ್ಡವರು ಮಾತ್ರ ಇವರನ್ನು ಶಂಕರಪ್ಪ ಅಂತಾನೇ ಸಂಭೋದಿಸುತ್ತಾರೆ. ಶಂಕರಪ್ಪನ ಒಳ್ಳೆಯ ನಡೆನುಡಿಯಿಂದ ಊರಿನ ಎಲ್ಲರ ಗೌರವಕ್ಕೆ ಪಾತ್ರವಾಗಿದೆ. ಇವರ ಸಂಜೆ ದಿನಚರಿಯಲ್ಲಿ ಈ ಗೆಳೆಯರ ಬಲಗದೊಂದಿಗೆ ಹರಟೆ ಜೀವನದ ಒಂದು ಭಾಗವೇ ಆಗಿ ಹೋಗಿದೆ, ಹಾಗಾಗೇ ಶಂಕರಣ್ಣ ಒಂದು ದಿನ ಬರುವುದು ತಡವಾದರೂ ಅವರನ್ನು ಕರೆತರಲು ಸುಬ್ಬು ಹೋಗುತ್ತಾನೆ. ಇವರ ಈ ಗುಂಪಿನಲ್ಲಿ ಇರೋದು ಐದು ಜನ. ಊರಿನ ಗೌಡರು ಶಿವಪ್ಪ, ಪಕ್ಕದ ಮನೆ ಶ್ರೀಕಂಠಪ್ಪ, ಒಂದು ಕಾಲದಲ್ಲಿ ಪಂಚಾಯಿತಿಯ ಸದಸ್ಯನಾಗಿದ್ದ ನಂಜುಂಡಪ್ಪ ಹಾಗೂ ಇವರ ಕಷ್ಟ ಸುಖಗಳಿಗೆ ಎಲ್ಲಿದ್ದರೂ ಓಡಿ ಬರೋ ಸುಬ್ಬು. ಇವರೆಲ್ಲರೂ ಮಾತಿಗೆ ಕುಳಿತರೂ ಎಂದರೆ ಅಲ್ಲಿ ಎಲ್ಲಾ ವಿಷಯಗಳು ಬಂದು ಹೋಗುತ್ತವೆ. ಡೆಲ್ಲಿಯಲ್ಲಿ ನಡೆಯೋ ರಾಜಕೀಯದಿಂದ ಇಡಿದು ಊರ ಬೀದಿಗಳಲ್ಲಿ ನಡೆಯೋ ಜಗಳದ ತನಕ ಎಲ್ಲಾ ವಿಷಯ ಮಾತನಾಡುತ್ತಾರೆ. ಆದರೆ ಶಂಕರಪ್ಪ ಅಲ್ಲಿದ್ದಾಗ ಹೆಂಗಸರ ಖಾಸಗಿ ವಿಷಯಗಳನ್ನು ಮಾತನಾಡುವಂತಿಲ್ಲ, ಅದೇನೋ ಊರಿಗೆ ಶಿವಪ್ಪ ಗೌಡರೇ ಆದರೂ ಅವರು ಸಹ ಆ ಧೈರ್ಯ ಮಾಡಿಲ್ಲ. ಶಂಕರಪ್ಪನ ಸ್ವಭಾವ ತಿಳಿದೋ ಏನೋ ಈ ವಿಷಯದಲ್ಲಿ ಎಲ್ಲರೂ ಅರ್ಥಮಾಡಿಕೊಂಡಿದ್ದಾರೆ.

ಹೌದು ಇವತ್ತು ಸಂಜೆ ಕುಳಿತ್ತಿದ್ದವನು ಏನೋ ಯೋಚನೆಯಲ್ಲಿ ಕಳೆದು ಹೋದೆ ಗೊತ್ತೇ ಆಗ್ಲಿಲ್ಲ. ಸುಬ್ಬು ಬಂದು ಕೂಗೋ ತಂಕ ನಂಗೆ ಪರಿವೇ ಇರ್ಲಿಲ್ಲ. ಮತ್ತದೇ ಮಗನ ವಿಷ್ಯ ಯೋಚನೆ ಮಾಡೋಕೆ ಶುರು ಮಾಡಿದ್ಯಾ ಶಂಕರಪ್ಪ ಅಂತ ಗೌಡ್ರು ಕೇಳಿದಕ್ಕೆ ಅದು ಬಿಟ್ಟು ಇನ್ನೇನು ಇರುತ್ತೆ ಈ ವಯಸ್ಸಿನಲ್ಲಿ, ಮಕ್ಕಳು ಮೊಮ್ಮಕ್ಕಳೊಂದಿಗೆ ಇರೋದೇ ಅಲ್ವಾ ನಾವೆಲ್ಲ ಕೇಳ್ಕೊಳ್ಳೋದು ಹಾಗೇ ಶಂಕರಪ್ಪನಿಗೂ ಅನ್ಸುತ್ತೆ ಎಂದು ಶ್ರೀಕಂಠಪ್ಪನೇ ಹೇಳಿದ. ಹೌದು ಎಂಬಂತೆ ತಲೆ ಅಡಿಸಿದರು ಶಂಕರಣ್ಣ. ಆ ದಿನ ಮನಸ್ಸಿಲ್ಲದ ಮನಸ್ಸಿನಲ್ಲಿ ಮಾತುಕತೆ ಮುಗಿಸಿ ಶಂಕರಪ್ಪ ಮನೆ ತಲುಪಿ ಗೌರಿ ಇವರಿಗೆ ಎಂದು ಇಟ್ಟಿದ ಹಾಲನ್ನು ಕುಡಿಯುವುದು ಮರೆತು ಹಾಸಿಗೆ ಮೇಲೆ ಮಲಗಿದರು.

ಬೆಳಿಗ್ಗೆ ಎದ್ದವರೇ, ಏನಮ್ಮ ಗೌರಿ ಯಾಕೋ ಇವತ್ತು ದೇವಸ್ಥಾನಕ್ಕೆ ಹೋಗಬೇಕು ಅಂತ ಮನಸ್ಸಿಗೆ ಅನಿಸುತ್ತಿದೆ, ನನಗೆ ಅಂತ ಏನು ತಿಂಡಿ ಮಾಡೋಕೆ ಹೋಗಬೇಡ, ಏನಾದರೂ ಬೇರೆ ಕೆಲ್ಸ ಇದ್ರೆ ಮುಗಿಸಿಕೊಂಡು ಮನೆಗೆ ಹೋಗಮ್ಮ. ಅಯ್ಯೋ ಅಣ್ಣ ನೀವು ರಾತ್ರಿ ಸಹ ನಾನು ಇಟ್ಟಿದ ಹಾಲು ಕುಡಿದಿಲ್ಲ, ಇವತ್ತು ಉಪವಾಸ ಅಂತಿದ್ದೀರಿ ಈ ತರ ಆದ್ರೆ ನಿಮ್ಮ ಆರೋಗ್ಯ ಹಾಳಾಗುತ್ತೆ ದಯವಿಟ್ಟು ಏನಾದರೂ ತಿಂದು ಹೋಗಿ ಗೌರಿ ಹೇಳಿದಳು. ಇಲ್ಲಮ್ಮ ಗೌರಿ ನೀನು ತಲೆಕೆಡಿಸ್ಕೊಬೇಡ, ನಾನೇನು ಉಪವಾಸ ಇರೋಲ್ಲ. ದೇವಸ್ಥಾನದಲ್ಲೇ ಪ್ರಸಾದ ತಿಂನ್ಕೋತಿನಿ, ಆಮೇಲೆ ತೋಟದಲ್ಲಿ ಎಳನೀರು ಕುಡಿದರೆ ದನಿವೇನು ಆಗಲ್ಲ ಎಂದು ಹೇಳಿ ದೇವಸ್ಥಾನದ ಕಡೆ ಹೆಜ್ಜೆ ಹಾಕಿದರು.

ಏನು ಶಂಕರಪ್ಪ ಇವತ್ತು ಬೇಗ ಬರುತ್ತಿದ್ದೀಯ ಎಂದು ಗೌಡರು ಶಂಕರಪ್ಪನನ್ನು ತಮಾಷೆ ಮಾಡಿದರು. ಹಾಗೇ ಏನಿಲ್ಲ ಗೌಡ್ರೆ ಬೆಳಿಗ್ಗೆ ಎದ್ದು ದೇವಸ್ಥಾನಕ್ಕೆ ಹೋಗಿದ್ದೆ ಏನೋ ಒಂಥರಾ ಮನಸ್ಸಿಗೆ ನೆಮ್ಮದಿ ಸಿಕ್ಕ ಹಾಗೇ ಅನಿಸ್ತು. ಸರಿ ಬಾ ಕುಳಿತ್ಕೋ ಎಂದು ಗೌಡ್ರು ಹೇಳಿದರು. ಶಂಕರಪ್ಪ ಮಾತಿಗಿಳಿದರು ಏನು ನಂಜುಂಡಪ್ಪ ಮತ್ತೆ ಏನು ವಿಸ್ಯ. ಇನ್ನೇನು ಇರುತ್ತೆ ಶಂಕರಣ್ಣ ಇದ್ದುದ್ದೇ ನಮ್ದು ರಾಮಾಯಣ ಮಳೆ ಆಗಿಲ್ಲ ಬಿತ್ತನೆ ಶುರುಮಾಡೋಣ ಅಂದ್ರೆ, ಯುಗಾದಿ ಕಳೆದು ತಿಂಗಳು ಆಗಿದ್ರು ಇನ್ನು ಒಂದು ಹನಿ ಬಿದ್ದಿಲ್ವಲ್ಲ ಈ ತರ ಆದ್ರೆ ಹೇಗೆ ಜೀವನ ಮಾಡೋದು? ಹೌದು ನಂಜುಂಡಪ್ಪ ಯಾಕೋ ಇವಾಗ ಯಾವ್ದು ಸರಿಯಾಗಿ ಆಗ್ತಿಲ್ಲ ಇತ್ತೀಚೆಗೆ ಎಂದರು ಶಂಕರಪ್ಪ. ಆಮೇಲೆ ಅದೇನೋ ರೋಗ ಬೇರೆ ಬರುತ್ತಾ ಇದೆಯಂತೆ ಟಿವಿಯಲ್ಲಿ ಯಾವಾಗ್ಲೂ ಅದೇ ಹೇಳ್ತಿದ್ದಾರೆ. ಅದೇನೋ ಕೊರೊನಾನೋ ಅದೆಂಥದ್ದೋ ಅಂತಿದ್ರು. ಹೂ ಕನ್ ಶಂಕ್ರಪ್ಪ ಅದು ಒಬ್ಬರಿಂದ ಒಬ್ಬರಿಗೆ ಬೇಗ ಹರಡುತಂತೆ ಮೊದ್ಲು ಫ್ಲೇಗ್ ಬತ್ತಿತ್ತಲ್ಲ ಹಂಗಂತೆ. ಅಯ್ಯೋ ಅದೇನೇನೋ ಹೇಳ್ತಾರೆ. ಎಲ್ಲಾ ದೇಶದಲ್ಲೂ ಬಂದಿದೆಯಂತೆ ಈಗ ಎಷ್ಟೋ ದೇಶದಲ್ಲಿ ಲಕ್ಷ ಲಕ್ಷ ಜನ ಸತ್ತು ಹೋಗೋರಂತೆ, ಬ್ಯಾರೆ ದೇಶದಲ್ಲಿ ಇದ್ದೋರೆಲ್ಲಾ ಎದ್ನೋ ಬಿದ್ನೋ ಅಂತ ಊರ್ ಕಡೆ ಬತ್ತಾವರಂತೆ. ಸುಮಾರು ಊರುಗಳಲ್ಲಿ ನಮಗೂ ಬಂದು ಬಿಡುತ್ತೆ ಅವ್ರು ಬಂದ್ರೆ ಅಂತ ಅವರನ್ನ ಊರ ಹೊಳಗೆ ಸೇರಿಸ್ತಿಲ್ಲವಂತೆ, ಆಗಂತೆ, ಈಗಂತೆ ಅಂತ ಏನೇನೋ ಒಬ್ಬರಿಗೆ ಒಬ್ಬರು ಮಾತಾಡೋಕೆ ಶುರುಮಾಡಿದರು. ಆದರೆ ಎಲ್ಲಾ ದೇಶಗಳಲ್ಲೂ ಬಂದಿದೆ ಎಂದು ಕಿವಿಗೆ ಬಿದ್ದ ತಕ್ಷಣ ಶಂಕರಪ್ಪನ ಬೆಳಗಿನ ಸ್ವಲ್ಪ ನೆಮ್ಮದಿ ಸಹ ಪಟ್ಟನೆ ಹಾರಿ ಹೋಗಿ ಮನಸಿನಲ್ಲಿ ಗೊಂದಲ ಶುರುವಾಗಿದ್ದು ಅಲ್ಲಿರುವವರ ಕಣ್ಣಿಗೆ ಬೀಳಲಿಲ್ಲ. ಅಲ್ಲಿ ಕುಳಿತುಕೊಳ್ಳಲು ಮನಸ್ಸು ಆಗದೇ ಮನೆ ಕಡೆ ಎದ್ದು ಬಂದರು. ಮನೆಗೆ ಬಂದವರೇ ಯಾವತ್ತೂ ಟಿವಿ ಕಡೆ ಸುಳಿಯದಿದ್ದವರು ಇವತ್ತು ಟಿವಿ ಹಾಕಿ ಅರ್ಧಗಂಟೆ ನೋಡುವ ಹೊತ್ತಿಗೆ ಮನಸ್ಸಿನಲ್ಲಿ ಆಗುತ್ತಿದ್ದ ತಳಮಳ ಹಾಗೂ ಸಂಕಟ ತಡೆಯಲು ಆಗದೆ ಟಿವಿಯನ್ನು ಆಫ್ ಮಾಡುವುದನ್ನು ಮರೆತು ತಮ್ಮ ರೂಮಿಗೆ ಹೋಗಿ ಪತ್ನಿ ಮಂಗಳ ಫೋಟೋ ಮುಂದೆ ಕುರ್ಚಿ ಪತ್ನಿಯನ್ನೇ ದಿಟ್ಟಿಸಿ ನೋಡುತ್ತಾ ಕುಳಿತುಬಿಟ್ಟರು. ಪತ್ನಿಯ ಫೋಟೋ ಮುಂದೆ ಸಣ್ಣದಾಗಿ ಉರಿಯುತ್ತಿದ್ದ ದೀಪದ ಬೆಳಕಿನಲ್ಲಿ ಮಂಗಳರ ಕಣ್ಣುಗಳು ಹೊಳೆಯುತ್ತಿದರೆ, ಇವರ ಕಣ್ಣುಗಳಲ್ಲಿ ನೀರು ತುಂಬಿಕೊಂಡು ಹೊಳೆಯುತಿದಿದ್ದು ದೀಪಕಷ್ಟೇ ತಿಳಿಯುತ್ತಿತ್ತು.

ಯಾಕೋ ಕಳೆದ ಮೂರು ದಿನಗಳ ಹಿಂದೆ ಆ ರೋಗದ ಕುರಿತು ಮಾತನಾಡಿದಾಗಿನಿಂದ ಶಂಕರಪ್ಪನ ಮನಸ್ಸು ಇನ್ನೂ ತಹಬದಿಗೆ ಬಂದಿರಲಿಲ್ಲ. ದಿನಚರಿಯಲ್ಲಾ ಮರೆತು ಹೋಗಿ ತಮ್ಮ ರೂಮಿನಲ್ಲೇ ಪತ್ನಿಯ ಎದುರಲ್ಲೇ ಕಳೆದು ಹೋಗುತ್ತಿತ್ತು. ಸುಬ್ಬು ಬಂದು ಕರೆದಾಗಲೆಲ್ಲ ನನಗೆ ಬರುವ ಮನಸ್ಸಿಲ್ಲ ಎಂದು ಹೇಳಿ ಕಳುಹಿಸಿದ್ದರು. ಈ ಮದ್ಯ ಮಗನಿಗೆ ತುಂಬಾ ಸಲ ಫೋನ್ ಮಾಡಲು ಪ್ರಯತ್ನಿಸಿದರೂ ಫೋನ್ ಸಿಗದೆ ಇವರ ತಳಮಳವನ್ನು ಮತ್ತಷ್ಟು ಹೆಚ್ಚು ಮಾಡಿತ್ತು. ಆ ದಿನ ರಾತ್ರಿ 12 ಆಗಿದ್ದರೂ ಇವರು ಮಾತ್ರ ಕುಳಿತ ಕುರ್ಚಿ ಬಿಟ್ಟು ಮೇಲೆ ಎದ್ದಿರಲಿಲ್ಲ. ನಡುವೆ ಗೌರಿ ಬಂದು ತಿನ್ನಲು ಕೊಡಲು ಎಷ್ಟೇ ಪ್ರಯತ್ನಿಸಿದರೂ ಬೇಡವೆಂದು ಉತ್ತರ ಹೇಳಿ ಕಳುಹಿಸುತ್ತಿದ್ದರು. ಆ ನಡುರಾತ್ರಿಯ ಸಮಯದಲ್ಲಿ ಕಾರೊಂದು ಮನೆಯ ಮುಂದೆ ಬಂದ ಶಬ್ದವಾಯಿತು. 

ಶಂಕರಪ್ಪ ಎದ್ದು ಮನೆ ಬಾಗಿಲಿಗೆ ಬರೋ ಹೊತ್ತಿಗಾಗಲೇ ಮಗ, ಸೊಸೆ, ಮೊಮ್ಮಗಳು ಮನೆಯೊಳಗೆ ಬಂದಿದ್ದರು. ತುಂಬಾ ವರ್ಷಗಳ ನಂತರ ಧಿಡೀರನೆ ಬಂದ ಮಗ, ಸೊಸೆ ನೋಡಿ ಶಂಕರಪ್ಪನ ಇಷ್ಟು ದಿನದ ಮನದ ದುಗುಡವೆಲ್ಲಾ ಒಮ್ಮೆಲೇ ದೂರವಾಗಿ, ಮನಸ್ಸು ಕೊರೆಯುತ್ತಿದ್ದ ಚಿಂತೆಗೆ ಮುಕ್ತಿ ಸಿಕ್ಕಿತ್ತು. ಮಗನ ಹತ್ತಿರ ಬರುತ್ತಿದಂತೆ ಮಗ ದೂರದಿಂದಲೇ ತಡೆದು ಅಪ್ಪ ಹತ್ತಿರ ಬರಬೇಡಿ ಎಂದ. ಮಗನ ಮಾತು ಕೇಳುತ್ತಲೇ ಏನೋ ಬಡಿದಂತಾಗಿ ಮಾತೇ ಹೊರಡದೆ ಮಗನ ಮುಖವನ್ನು ಆ ಮಂದ ಬೆಳಕಿನಲ್ಲಿ ಒಮ್ಮೆ ನೋಡಿದರು. ಮುಖದ ಮೇಲೆ ಕಣ್ಣು ಬಿಟ್ಟು ಮತ್ತೇನು ಕಾಣದ ಹಾಗೇ ಮುಸುಕು ಧರಿಸಿದ್ದಾರೆ. ಸೊಸೆಯ ಕಡೆ ನೋಡಿದರೆ ಅವಳು ಸಹ ಹಾಗೇ ಮುಸುಕು ಧರಿಸಿದ್ದಾಳೆ, ಸ್ವಲ್ಪ ದೂರದಲ್ಲಿ ನಿಂತ ಆ ಪುಟ್ಟ ಐದು ವರ್ಷದ ಮಗುವಿನ ಮುಖವು ಸಹ ಕಾಣುತ್ತಿಲ್ಲ. ಆ ಮುಗ್ಧ ಕಣ್ಣುಗಳು ಮಾತ್ರ ಯಾವುದೋ ಹೊಸ ಜಾಗಕ್ಕೆ ಬಂದಿದ್ದೇನೆ ಎನ್ನುತ್ತಾ ಭಯದಿಂದ ಸುತ್ತಲೂ ಪಿಳಿ ಪಿಳಿ ನೋಡುತ್ತಿದೆ. ಯಾಕಪ್ಪಾ ಮಗನೇ ಇಷ್ಟು ವರ್ಷ ಆದಮೇಲೆ ಮನೆಗೆ ಬರ್ತಿದ್ದೀಯ ಹತ್ತಿರ ಬರೋಕು ಬಿಡ್ತಿಲ್ವಲ್ಲ ಎಂದು ಮಗನನ್ನು ಕೇಳಿದರು.

ಅಪ್ಪ ನಿಮಗೆ ಗೊತ್ತಿಲ್ವ ನಾವು ಬೇರೆ ಕಡೆಯಿಂದ ಬಂದಿದ್ದೇವೆ ಹಾಗಾಗಿ ನೀವು ಯಾರು ಇನ್ನು ಹದಿನಾಲ್ಕು ದಿನ ಕಳೆಯುವವರೆಗೆ ನಮ್ಮ ಹತ್ತಿರ ಬರಬೇಡಿ. ಅದರಿಂದ ನಮಗೆ ಕೊರೊನ ಇದ್ದರೆ ನಿಮಗೂ ಬರುವ ಸಂಭವ ಇರುತ್ತದೆ. ಇದೆಲ್ಲ ಆಮೇಲೆ ಮಾತಾಡೋಣ ಟೈಂ ಆಯಿತು ನೀವು ಹೋಗಿ ಮಲಗಿ. ಗೌರಿ ನಾವು ಮೂರು ಜನ ಬೇರೆ ಬೇರೆ ರೂಮಿನಲ್ಲಿ ಇರುತ್ತೀವಿ ನೀವು ಊಟ, ತಿಂಡಿ ಎಲ್ಲಾ ಅಲ್ಲೇ ಬಾಗಿಲ ಹತ್ತಿರನೇ ತಂದು ಕೊಡಬೇಕು, ಯಾವುದೇ ಕಾರಣಕ್ಕೂ ನಮ್ಮನ್ನು ಮುಟ್ಟಿಸಿಕೊಳ್ಳಬಾರದು ಆಯ್ತಾ. ಏನು ಅರ್ಥವಾಗದೇ ಇದ್ದರೂ ಗೌರಿ ಗಾಬರಿಯಲ್ಲಿ ಸರಿ ಎಂಬಂತೆ ತಲೆಯಾಡಿಸಿದಳು. ಏನು ಹೇಳುತ್ತಿದ್ದಿಯೋ ನೀವು ಮೂರು ಜನ ಬೇರೆ ಬೇರೆ ಕಡೆ ಇರ್ತೀರಾ ಆ ಮಗು ಹೆಂಗೆ ಒಂದು ರೂಮಿನಲ್ಲಿ ಒಂದೇ ಇರುತ್ತೆ, ನನ್ನ ರೂಮಿಗೆ ಕಳ್ಸು ನಾನು ನೋಡ್ಕೋತೀನಿ ಎಂದರು ಶಂಕರಪ್ಪ. ಅಪ್ಪ ನಿಮಗೆ ಒಂದು ಸಾರಿ ಹೇಳಿದರೆ ಅರ್ಥ ಅಗೋಲ್ವಾ, ನೀವೇನು ಟಿವಿ ನೋಡಿಲ್ವಾ ಇಷ್ಟು ದಿನ ಕೊರೊನ ಬಗ್ಗೆ ಅಷ್ಟು ತೋರಿಸಿ ಸಾಯ್ತಾ ಇದ್ದಾರಲ್ಲ. ಮಗುವಿಗೆ ನಾನು ಹೇಳಿದ್ದೀವಿ, ಅವಳಿಗೆ ಒಂದು ರೂಮಿನಲ್ಲಿ ಒಬ್ಬಳೇ ಇದ್ದು ಅಭ್ಯಾಸ ಇದೆ. ನೀವು ಹೋಗಿ ಮಲಗಿ ಅಂದೆ ತಾನೇ ನಾನು ಮಗ ರೇಗಾಡಿದ. ಇಷ್ಟು ದಿನ ಮಗ, ಸೊಸೆ, ಮೊಮ್ಮಗಳಿಗಾಗಿ ಹಂಬಲಿಸುತ್ತಿದ್ದ ಜೀವ ಈಗ ಪಕ್ಕದಲ್ಲೇ ಇದ್ದರೂ ಸರಿಯಾಗಿ ಮಾತನಾಡಿಸಲು ಆಗದೆ ಮಲಗುವುದಾದರೂ ಹೇಗೆ ಎಂದು ಯೋಚಿಸುತ್ತಾ, ಮೊಮ್ಮಗಳೆಡೆಗೆ ನೋಡುತ್ತಾ ತಮ್ಮ ರೂಮಿನ ಕಡೆ ಹೊರಟರು. ಮಗು ಇವರು ಯಾರು ಎಂಬಂತೆ ನೋಡುತ್ತಿತ್ತು. 

ಇತ್ತ ಇವರೆಲ್ಲಾ ಒಂದೊಂದು ರೂಮಿನ ಕಡೆ ಹೊರಟು ಮಗುವಿಗೂ ನೀನು ಒಬ್ಬಳೇ ಈ ರೂಮಿನಲ್ಲಿ ಮಲಗಬೇಕು ಎಂದು ಹೇಳಿ ರೂಮಿಗೆ ಕಳುಹಿಸಿ ತಾವು ತಮ್ಮ ತಮ್ಮ ರೂಮಿನ ಕಡೆ ಹೊರಟರು. ಶಂಕರಪ್ಪನಿಗೆ ನಿದ್ರೆ ಸುಳಿಯಲಿಲ್ಲ ಮೊಮ್ಮಗಳನ್ನು ನೋಡಬೇಕು ಎನ್ನುವ ಆಸೆ ನಿದ್ರೆಯನ್ನು ಬರಲು ಬಿಡಲಿಲ್ಲ. ಮೆಲ್ಲಗೆ ಎದ್ದು ಬಂದು ಮೊಮ್ಮಗಳ ರೂಮಿನ ಕಿಟಕಿಯ ಬಳಿ ನಿಂತು ಮೆಲ್ಲಗೆ ಕಿಟಕಿ ಸರಿಸಿ ನೋಡಿದರು. ಪುಟ್ಟ ಮಗು ಯಾವುದರ ಪರಿವು ಇಲ್ಲದೇ ಮಲಗಿತ್ತು. ದೂರದ ಪ್ರಯಾಣದಿಂದ ದಣಿದಿದ್ದರಿಂದಲೋ ಏನೋ ಹೊಸ ಜಾಗವಾದರೂ ಎಚ್ಚರವಿಲ್ಲದೆ ನಿದ್ರಿಸುತ್ತಿತ್ತು. ಹೊರಗೆ ಮಗನ ಶಬ್ದವಾದಂತಾಗಿ ಮೆಲ್ಲಗೆ ಕಿಟಕಿ ಮುಚ್ಚಿ ತಮ್ಮ ರೂಮಿನ ಕಡೆ ಹೊರಟರು. ಅಂದು ರಾತ್ರಿ ಮೂರು ಬಾರಿ ಯಾರಿಗೂ ತಿಳಿಯದಂತೆ ಮೊಮ್ಮಗಳನ್ನು ನೋಡಿ ಬಂದರು. ರಾತ್ರಿ ಎನ್ನುವುದನ್ನು ಶಂಕರಪ್ಪ ಮರೆತಂತಿತ್ತು. ಇನ್ನೇನು ಬೆಳಕು ಹರಿಯುವ ಸಮಯವಾಗಿರಬೇಕು ನಾಲ್ಕು ದಿನದ ನಿದ್ರಾಹೀನತೆಗೆ ಮೊಮ್ಮಗಳ ಮುಖ ನಿರಾಳ ನೀಡಿ ಶಂಕರಪ್ಪ ನಿದ್ರೆಗೆ ಜಾರಿದರು. ಬೆಳಗಿನ 6.30 ರ ಸುಮಾರಿಗೆ ಮನೆಯ ಮುಂದೆ ಏನೋ ಜನಜಂಗುಳಿಯ ಶಬ್ದ ಕೇಳಿದಂತಾಗಿ ಧುತ್ತನೆ ಎದ್ದು ಮನೆ ಬಾಗಿಲಿಗೆ ಬಂದರು. ಊರಿನ ಬಹಳ ಮಂದಿ ಇವರ ಮನೆಯ ಮುಂದೆ ಸೇರಿದ್ದರು. ಶಂಕರಪ್ಪ ಗಾಬರಿಯಾಗಿ ಏನೆಂದು ವಿಚಾರಿಸಲು ಅಲ್ಲಿದ್ದ ಒಬ್ಬ ನಿಮ್ಮ ಮಗ ಅದೆಲ್ಲಿಂದಲೋ ಬಂದಿದ್ದಾನಂತೆ ರಾತ್ರಿ, ಅವನನ್ನು ಹೇಗೆ ಮನೆಗೆ ಸೇರಿಸಿದ್ರಿ? ಅವನಿಂದಾಗಿ ನಮಗೂ, ನಮ್ಮ ಊರಿಗೂ ಆ ಹಾಳಾದ ರೋಗ ಬಂದ್ರೆ ನಮ್ಮ ಗತಿ ಏನು? ಎಂದು ಕೂಗಾಡಲು ಶುರು ಮಾಡಿದ. ಅಷ್ಟರಲ್ಲೇ ಬೆಳಿಗ್ಗೆ ಎದ್ದು ಗದ್ದೆಯ ಕಡೆ ಹೊರಟ ಊರ ಗೌಡರು ಸಹ ಇಲ್ಲಿನ ಶಬ್ದ ಕೇಳಿ ಇತ್ತಲೇ ಬಂದು ವಿಷಯ ಏನೆಂದು ವಿಚಾರಿಸಿದರು. ಏರು ದನಿಯಲ್ಲಿ ಮಾತನಾಡುತ್ತಿದ್ದ ವ್ಯಕ್ತಿ ಗೌಡರನ್ನು ನೋಫಿ ಸ್ವಲ್ಪ ದನಿ ತಗ್ಗಿಸಿ ವಿಷಯ ಹೇಳಿದ. ಇವರ ಗಲಾಟೆಗೆ ಎಚ್ಚರಗೊಂಡ ವಿಶ್ವ ಗೌರಿಯನ್ನು ಕರೆದು ಏನು ಸಮಸ್ಯೆ ಎಂದು ತಿಳಿದುಕೊಂಡು ಮುಖಕ್ಕೆ ಮಾಸ್ಕ್ ಧರಿಸಿ ಬಾಗಿಲಿನ ಬಳಿ ಬರುತ್ತಲೇ ಇವನನ್ನು ಕಂಡ ಜನ ಹೆದರಿ ದೂರ ಸರಿದು ನಿಂತರು. ಅವರನ್ನು ಕುರಿತು ವಿಶ್ವ ನಾವು ಬರುವಾಗ ನಮ್ಮ ಎಲ್ಲರನ್ನು ಪರೀಕ್ಷೆ ಮಾಡಿ ಕಳುಹಿಸಿದ್ದಾರೆ ಹಾಗೂ 14 ದಿನ ಮನೆಯಲ್ಲೇ ಇರಲು ಹೇಳಿದ್ದಾರೆ, ನಾವು ಯಾರು ನಮ್ಮ ರೂಮನ್ನು ಬಿಟ್ಟು ಹೊರಗೆ ಬರುತ್ತಿಲ್ಲ. ಭಯ ಪಡಬೇಡಿ, ನಮ್ಮಿಂದ ನಿಮಗೆ ಯಾವುದೇ ತೊಂದರೆ ಇಲ್ಲ ಎಂದು ತಿಳಿ ಹೇಳಿದ ಮೇಲೆ ಗೌಡರು ಸಹ ದನಿ ಎತ್ತರಿಸಿದ್ದರಿಂದ ಜನ ಅನುಮಾನದಿಂದಲೇ ತಮ್ಮ ಮನೆಗಳತ್ತ ಹೊರಟರು.

ಶಂಕರಪ್ಪ ಸೀದಾ ಮಗು ಇದ್ದ ರೂಮಿನ ಕಡೆ ಹೊರಟಿದ್ದಾಗ ವಿಶ್ವ ನೋಡಿ ನೀವು ಯಾಕೆ ಅಲ್ಲಿ ಹೋಗುತ್ತಿದ್ದೀರಾ ಎಂದು ಗದರಿದ. ಅವಳು ಒಬ್ಬಳೇ ಇರಲಿ ಏನು ಆಗೋಲ್ಲ 14 ದಿನ ತಾನೇ ಆಮೇಲೆ ಸ್ವಲ್ಪ ದಿನ ಇಲ್ಲೇ ಇರುತ್ತಿವಲ್ಲ ಅವಾಗ ಅಲ್ಲೇ ಇರುವಿರಂತೆ ಈಗ ಅವಳನ್ನು ಅವಳ ಪಾಡಿಗೆ ಬಿಡಿ. ನೀವು ಹೋಗಿ ಎಂದು ಹೇಳಿದನ್ನು ಕೇಳಿ ಶಂಕರಪ್ಪ ಏನೂ ಮಾತನಾಡದೇ ಅಲ್ಲೇ ಇದ್ದ ಸೋಫಾದ ಮೇಲೆ ಕುಳಿತುಕೊಂಡರು. ಇವನೇನೋ ಮಗುವನ್ನು ನೋಡಬೇಡ ಅಂತಾನೆ ಆದ್ರೆ ಮನಸ್ಸು ಕೇಳ್ತಿಲ್ಲ, ಇಷ್ಟು ದಿನ ಅದ್ರ ಯೋಚನೆಲೇ ದಿನ ಕಳೆಯುತ್ತಿದ್ದವನಿಗೆ ಈಗ ಕಣ್ಣ ಮುಂದೆ ಇರೋ ಕಂದನನ್ನು ನೋಡದೆ, ಅದ್ರ ಜೊತೆ ಮಾತಾಡದೆ ಹೇಗೆ ಇರ್ಲಿ?, ಯಾವುದೋ ರೋಗ ನಂಗೆ ಬಂದು ಸತ್ತರೆ ತಾನೇ ಏನು? ಇದ್ದು ತಾನೇ ಏನು ಮಾಡಲಿ? ಸಾಯೋ ಮುಂಚೆ ನನ್ನ ಕಂದನನ್ನು ಎತ್ತಿ ಆಡಿಸಿದರೆ ಸಾಯೋ ಗಳಿಗೆಲಿ ಖುಷಿ ಇಂದಾನೆ ಪ್ರಾಣ ಬಿಡಬೋದು. ಇವಳು ಸಹ ಮಗುನ ನೆನೆಸ್ಕೊಂಡು ಎಷ್ಟು ಚಡಪಡಿಸ್ತಿರ್ಲಿಲ್ಲ, ಕೊನೆಗೆ ನೋಡದೆ ಹೋಗ್ಬಿಟ್ಲು. ನಾನು ಪಾಪಿ ಹತ್ತಿರ ಇದ್ದೂ ಸಹ ಅದ್ರ ಜೊತೆ ಕಾಲಕಳೆಯೋಕೆ ಆಗ್ತಿಲ್ಲ. ಏನೇನೋ ಯೋಚನೆಗಳು ತಲೆ ತುಂಬಿದಂತಾಗಿ ಬಿಡದೆ ಕಾಡಿದವು, ಕೊನೆಗೆ ಎದ್ದು ತೋಟದ ಕಡೆ ಹೋಗಿ ಮಗುವಿಗೆ ಏನಾದರೂ ಹಣ್ಣು, ಎಳನೀರು ಆದ್ರೂ ತರೋಣ ಎಂದು ನೆನಪಾಗಿ ಗದ್ದೆ ಕಡೆ ಹೊರಡೋಕೆ ಅನುವಾದರು. ಹೋಗುವ ಮುಂಚೆ ಕಿಟಕಿಯಿಂದ ಇಣುಕಿ ನೋಡುವುದನ್ನು ಮಾತ್ರ ಮರೆಯಲಿಲ್ಲ, ಬೆಳಗಿನ ನಿದ್ರೆಯಲಿದ್ದ ಮಗುವಿನ ಮುಖ ತಾತನಿಗೆ ಏನೋ ಆನಂದ ನೀಡಿತು. 

ತೋಟದಿಂದ ಮನೆಗೆ ಬರುತ್ತಲೇ ಗೌರಿಯನ್ನು ಕೂಗಿ, ಗೌರಿ ಮಕ್ಕಳಿಗೆ ತಿಂಡಿ ಕೊಟ್ಟೆ ಏನಮ್ಮ ಎಂದು ಕೇಳಿದರು. ಹು ಅಣ್ಣ ಕೊಟ್ಟೆ ಅಂದಳು ಗೌರಿ. ಮಗುವಿಗೆ ಏನು ಕೊಟ್ಟೆ ಎಂದು ಮತ್ತೆ ಕೇಳಿದರು. ಮಗು ಈಗ ತಾನೇ ಎದ್ದಿದ್ದಳು, ಅವಳಿಗೆ ಹೇಳಿ ಹಾಲನ್ನು ಬಾಗಿಲ ಬಳಿ ಇಟ್ಟು ಬಂದಿದ್ದೀನಿ. ಶಂಕರಪ್ಪನ ಎದೆ ಕುವುಚಿದ ಹಾಗೇ ಆಯಿತು. ಅಪರೂಪಕ್ಕೆ ಬಂದಿರೋ ಮಗುವನ್ನು ಎತ್ತಿಕೊಂಡು ಊಟ ಮಾಡಿಸೋ ಭಾಗ್ಯನೂ ತರ್ಲಿಲ್ಲವಲ್ಲ ನಾನು ಹಾಳಾದ ರೋಗದಿಂದ ಎಂದು ಶಪಿಸಿಕೊಂಡರು. 

ರೂಮಿನ ಕಿಟಕಿ ಬಳಿ ಹೋದವರೇ ಒಳಗೆ ನೋಡಿದರು ಮಗು ಹಾಸಿಗೆ ಮೇಲೆ ಕುಳಿತಿತ್ತು. ಮನಸ್ಸು ಚುರ್ ಎಂದಿತು. ಕಂದ ಕಂದ ಎಂದು ಕೂಗಿದರು. ಕೂಗಿದ ದನಿ ಕೇಳಿ ಮಗು ಇವರತ್ತ ತಿರುಗಿತು. ಯಾರೋ ಒಬ್ಬ ಆಗುಂಟಕನನ್ನು ನೋಡಿದಂತೆ ಮಗು ಇವರನ್ನು ನೋಡುತ್ತಿತ್ತು. ಇದನ್ನು ಅರಿತ ಶಂಕರಪ್ಪ ಕಂದ ನಾನು ನಿಮ್ಮ ತಾತ ಅದೇ ನಿನ್ನ ಜೊತೆ ಪೋನಲ್ಲಿ ಮಾತಾಡುತ್ತಿದ್ದನಲ್ಲ ಅದೇ ತಾತ ಕಂದ ಎಂದರು. ಪೋನಿನಲ್ಲಿ ಅಷ್ಟೇ ಕೇಳಿದ್ದ ಧ್ವನಿ ಆದರೂ ಮಗುವಿಗೆ ಬೇಗನೆ ಗುರುತು ಹಿಡಿಯಲು ಸಾಧ್ಯವಾಗಲಿಲ್ಲ. ಅದರೂ ಕಿಟಕಿ ಕಡೆಯಿಂದಲೇ ಮಗುವನ್ನು ರಂಜಿಸಿ ಹಾಲು ಕುಡಿಯುವಂತೆ ಮಾಡಲು ಯಶಸ್ವಿಯಾದರು. ವಿಶ್ವ ಮತ್ತೆ ತಾನಿದ್ದ ರೂಮಿನಿಂದಲೇ ಕೂಗಿದ ಅಪ್ಪ ಅವಳನ್ನು ಯಾಕೆ ತೊಂದರೆ ಮಾಡುತ್ತೀರಾ ಹೋಗಿ ಸುಮ್ಮನೆ ನಿಮ್ಮ ಕೆಲಸ ನೋಡಿ ಎಂದ. ಅಪ್ಪ ಅಮ್ಮ ಇದ್ದು ಮಗು ಒಬ್ಬಳೇ ಇರೋ ಹಾಗೇ ಆಯಿತಲ್ಲ ಎನ್ನೋ ಬಾಧೆಯಲ್ಲೇ ಶಂಕರಪ್ಪ ತಾವಿದ್ದ ಜಾಗದಿಂದ ಹೊರಟರು..

ಅಮೆರಿಕದಿಂದ ಊರಿಗೆ ಬಂದರು ಇವರು ಇಬ್ರೂ ಅದೇನೋ ಇಲ್ಲಿಂದಲೇ ಕೆಲ್ಸ ಮಾಡುತ್ತಾರಂತೆ, ಅದೆಂತದೋ ವರ್ಕ್ ಪ್ರಮ್ ಹೋಮ್ ಅಂತೆ ಸುಡುಗಾಡು. ದಿನ ಪೂರ್ತಿ ರೂಮಿನಲ್ಲಿ ಕಂಪ್ಯೂಟರ್ ಇಡಕೊಂಡು ಕುಳ್ತಿರ್ತ್ತಾರೆ. ಮದ್ಯ ಮದ್ಯ ಮಗಳ ರೂಮಿನ ಕಡೆ ಬಂದು ದೂರದಲ್ಲೇ ನೋಡಿಕೊಂಡು ಏನೋ ಹೇಳಿ ಹೋಗುತ್ತಾರೆ. ಸೊಸೆ ನನ್ನ ಜೊತೆ ಅಷ್ಟಾಗಿ ಮಾತಾಡೋದಿಲ್ಲ. ಪಾಪ ಅವಳೇನು ತಾನೇ ಮಾಡಿಯಾಳು ಮದುವೆಯಾದ ಒಂದು ವಾರ ಈ ಮನೆಯಲ್ಲಿ ಇದ್ಲು ಅಷ್ಟೇ ಹಾಗಾಗಿ ನಮ್ಮನ್ನು ಅಷ್ಟಾಗಿ ಬೆರೆಯೋದಿಲ್ಲ. ಮಗ ಸೊಸೆ ನೀವು ಮಗುವನ್ನು ತೊಂದರೆ ಮಾಡಬೇಡಿ ಎಂದು ಹೇಳಿ ಹತ್ತು ನಿಮಿಷ ಕಳೆದಿತ್ತೋ ಇಲ್ಲವೋ ಶಂಕರಪ್ಪ ಮತ್ತೆ ಮೆಲ್ಲಗೆ ಕಿಟಕಿ ಕಡೆ ಹೊರಟರು. ಮಗು ಈ ವಯಸ್ಸಲ್ಲೇ ಒಂಟಿ ಜೀವನ ಕಲಿತು ಬಿಟ್ರೆ ಕಷ್ಟ, ಈ ವಯಸ್ಸಲ್ಲಿ ಆಡಿಕೊಂಡು, ಕುಣಿದುಕೊಂಡು ಇರಬೇಕಾದ ಮಗು ಅದೆಂತದ್ದೊ ದೊಡ್ಡ ಫೋನ್ ತರದ್ದು ಇಡಿದುಕೊಂಡು ಅದೇನೋ ಮಾಡುತ್ತಾ ಕುಳಿತಿರುತ್ತೆ, ಅಪ್ಪ ಅಮ್ಮ ಮಗಳಿಗೆ ತಾವು ಮಾಡೋ ಕೆಲ್ಸನೇ ಕಲ್ಸಿ ಬಿಟ್ಟಿದ್ದಾರೆನೋ? ಶಂಕರಪ್ಪ ಕಿಟಕಿಯ ಬಳಿ ಹೋಗಿ ಕರೆದರೆ ಸ್ವಲ್ಪ ಹೊತ್ತು ನೋಡುತ್ತೆ ಅಷ್ಟೇ. ನಾನು ಏನಾದರೂ ಮಾತನಾಡಿಸಿದರೆ ಸುಮ್ಮನೆ ನಗುತ್ತೆ, ನನಗೆ ಆ ಮಗು ನಗು ನೋಡಿದರೆ ಅಗೋ ಖುಷಿ ಹೇಳೋಕೆ ಆಗೋಲ್ಲ. ಆ ನಗುವಿಗಾಗಿ ದಿನ ಪೂರ್ತಿ ಬೇಕಾದರೂ ಆ ಕಿಟಕಿ ಮುಂದೆ ನಿಂತುಕೊಂಡು ಕಾಲ ಕಳೆದು ಬಿಡುತ್ತೇನೆ. ಶಂಕರಪ್ಪ ನೋಡುತ್ತಲೇ ನಿಂತಿದ್ದರು ಮಗು ಮೆಲ್ಲಗೆ ನಿದ್ರೆಗೆ ಜಾರಿತು. 

ದಿನ ಹೀಗೆ ಕಳೆಯುತ್ತಿತ್ತು, ಇಂದಿಗೆ ಮಕ್ಕಳು ಮನೆಗೆ ಬಂದು ಆರು ದಿನ ಆಯಿತು. ಮಗು ಮೆಲ್ಲಗೆ ಇವರ ಜೊತೆ ಮಾತನಾಡಲು ಆರಂಭಿಸಿತು, ಶಂಕರಪ್ಪ ಸಹ ಮೊಮ್ಮಗಳನ್ನು ಬಿಟ್ಟಿರಲು ಆಗದೇ ಇರೋ ಅಷ್ಟು ಅಚ್ಚಿಕೊಂಡು ಬಿಟ್ಟಿದ್ದರು. ಮಗ ಸೊಸೆಯ ಕಣ್ಣು ತಪ್ಪಿಸಿ ಮಗು ಜೊತೆ ಕಾಲ ಕಳೆಯುತ್ತಿದ್ದರು, ಮಗುವಿನ ಜೊತೆ ಇವರು ಮಗುವಾಗಿ ಬಿಡುತ್ತಿದ್ದರು. ಮಗುವಿಗೆ ಅವಳ ಅಜ್ಜಿ ಬಗ್ಗೆ ಹೇಳೋರು, ತಾವು ತಿಳಿದಿದ್ದ ಕಥೆಗಳನ್ನೆಲ್ಲಾ ಹೇಳುತ್ತಿದ್ದರು. ಅದರಲ್ಲಿ ಪುಣ್ಯಕೋಟಿ, ಪಂಚತಂತ್ರ, ರಾಜನ ಕಥೆಗಳನ್ನು ಹೇಳಿ ಕಿಟಕಿ ಬಳಿಯಲ್ಲಿ ನಿಂತು ನಟಿಸಿ ಮಗುವನ್ನು ನಗುವಂತೆ ಮಾಡುತಿದ್ದರು. ಮಗು ಸಹ ಇವರ ಜೊತೆ ಹೊಂದಿಕೊಳ್ಳಲು ಶುರು ಮಾಡಿತು. ಬಾಗಿಲ ಬಳಿಯೇ ನಿಂತುಕೊಂಡು ಊಟ ಮಾಡಿಸಲು ಬಗೆ ಬಗೆಯಲ್ಲಿ ಮುದ್ದು ಮಾಡುತ್ತಿದ್ದರು. ಜೀವನದಲ್ಲಿ ಅವರು ಕಳೆದ ಐದು. ವರ್ಷಗಳಲ್ಲಿ ಅನುಭವಿಸಿದ ಒಂಟಿತನದ ಯಾತನೆ ಐದೇ ದಿನದಲ್ಲಿ ಮರೆತು ಹೋಗಿತ್ತು. ಮೊಮ್ಮಗಳ ಬರುವಿಕೆಯಿಂದ ಹೊಸ ಪ್ರಪಂಚವೇ ಅವರಿಗೆ ಸೃಷ್ಟಿಯಾಗಿತ್ತು. 

ಮಾರನೇ ದಿನ ಬೆಳಿಗ್ಗೆ ಮನೆಗೆ ಯಾರೋ ಒಂದಷ್ಟು ಜನ ಬಂದ ಹಾಗೇ ಆಯಿತು, ಶಂಕರಪ್ಪ ಹೊರಗೆ ಹೋಗಿ ನೋಡಿದರೆ ಆಂಬುಲೆನ್ಸ್ ಇದೆ, ಡಾಕ್ಟರ್, ನರ್ಸ್, ಒಬ್ಬ ಪೊಲೀಸ್ ಕಾನ್ಸ್ಟೇಬಲ್ ನಿಂತಿದ್ದಾರೆ. ಜನ ಸಹ ಹಿಂದೆಯೇ ಬರುವುದಕ್ಕೆ ಶುರುವಾದರು. ಅವರನ್ನೆಲ್ಲಾ ನೋಡಿದ ಶಂಕರಪ್ಪನಿಗೆ ಎದೆ ಜೋರಾಗಿ ಒಡೆದುಕೊಳ್ಳಲು ಶುರು ಆಗಿ, ಮೈ ಬೆವೆತು, ಮಾತು ತೊದಲಲು ಆರಂಭಿಸಿತು. ಅವರು ಯಾಕೆ ಇಲ್ಲಿ ಬಂದಿದ್ದಾರೆ ಅನ್ನೋದು ವಿಚಾರಿಸಲು ಆಗದೆ ಇರುವಷ್ಟು ಮಾತು ಅಸ್ಪಷ್ಟವಾಯಿತು. ಡಾಕ್ಟರ್ ಗೆ ಇವರ ಸ್ಥಿತಿ ಅರ್ಥವಾಯಿತೋ ಏನೋ ಅವರೇ ಬಳಿ ಬಂದು ಯಜಮಾನರೇ ಗಾಬರಿ ಅಗಬೇಡಿ, ಏನೂ ಆಗಿಲ್ಲ. ನಿಮ್ಮ ಮಗ ಸೊಸೆ ಎಲ್ಲಾ ಬೇರೆ ದೇಶದಿಂದ ಬಂದಿದ್ದರಲ್ಲಾ ಅವರನ್ನು ಒಂದು ಸಾರಿ ಚೆಕ್ ಮಾಡಿ ಹೋಗೋಣ ಎಂದು ಬಂದಿದ್ದೇವೆ ಅಷ್ಟೇ ಎಂದು ಸಮಾಧಾನ ಮಾಡಿದರು. ನಡುಗುತ್ತಿದ್ದ ಕೈ ಕಾಲುಗಳು ಹೇಗೋ ಕಷ್ಟಪಟ್ಟು ತಹಬದಿಗೆ ಬಂದವು. ಮಗ ಸೊಸೆ ಇಬ್ಬರೂ ರೂಮಿನಿಂದ ಹೊರಗಡೆ ಬಂದು ದೂರ ದೂರದಲ್ಲೇ ನಿಂತರು. ನೀವೇನು ಅಮೆರಿಕದಿಂದ ಬಂದಿರೋದು ಡಾಕ್ಟರ್ ಕೇಳಿದರು. ಯಸ್ ಡಾಕ್ಟರ್ ನಾವೇನೇ. ಏನು ವಿಷಯ ಡಾಕ್ಟರ್ ಮನೆ ತನಕ ಬಂದಿರೋದು ಇಸ್ ಎನಿಥಿಂಗ್ ಪ್ರಾಬ್ಲಂ? ಯಸ್ ಮಿಸ್ಟರ್ ಸಂಥಿಂಗ್ ಇಸ್ ಪ್ರಾಬ್ಲಮ್ ಸೋ ಐ ವಾಂಟ್ ಟು ಟಾಲ್ಕ್ ಟು ಯು, ಡಾಕ್ಟರ್ ಹೇಳಿದರು. ಯಸ್ ಡಾಕ್ಟರ್ ಪ್ಲೀಸ್ ವಿಶ್ವ ಹೇಳಿದ. ಏನಿಲ್ಲಾ ಮಿಸ್ಟರ್ ನೀವು ಊರಿಗೆ ಬಂದಿರೋದರಿಂದ ನಮ್ಮ ಊರಿಗೆ ರೋಗ ಎಲ್ಲಿ ಬಂದು ಬಿಡುತ್ತೋ ಎಂದು ಊರಿನಲ್ಲಿ ಕೆಲವರು ತುಂಬಾ ಹೆದರಿದ್ದಾರೆ ಹಾಗೇ ಕಂಪ್ಲೇಂಟ್ ಸಹ ಮಾಡಿದ್ದಾರೆ. ನಿಮ್ಮನ್ನು ಬೇರೆ ಕಡೆ ಕರೆದುಕೊಂಡು ಹೋಗಿ ಇಲ್ಲಿ ಅವರು ಇರುವುದು ಬೇಡ ಎಂದು ಅವರ ಬೇಡಿಕೆ ಡಾಕ್ಟರ್ ವಿವರಿಸಿದರು. ಬಟ್ ಡಾಕ್ಟರ್ ವೀ ಅಲ್ ಆರ್ ಪೈನ್, ನಮಗೆ ಯಾವುದೇ ತೊಂದರೆ ಸಹ ಇಲ್ಲ ಅಂಡ್ ನಾವು ಹೋಮ್ ಕ್ವಾರಂಟೈನ್ ಆಗಿದ್ದೀವಿ, ನಮ್ಮ ರೂಮ್ ಬಿಟ್ಟು ನಾವುಗಳು ಹೊರಗಡೆ ಸಹ ಬಂದಿಲ್ಲ ವಿಶ್ವ ಹೇಳಿದ. ಐ ನೋ ಬಟ್ ನಮ್ಮ ಪರಿಸ್ಥಿತಿ ಸ್ವಲ್ಪ ನೀವು ಅರ್ಥಮಾಡಿಕೊಳ್ಳಿ, ಜನರು ಪ್ಯಾನಿಕ್ ಆಗಿದ್ದಾರೆ ಅವರಿಗೆ ಧೈರ್ಯ ಹೇಳೋದು ನಮ್ಮ ಡ್ಯೂಟಿ, ಪ್ಲೀಸ್ ಕೋಪರೇಟ್ ವಿತ್ ಅಸ್. ನೀವು ನಮ್ಮ ಜೊತೆ ಬನ್ನಿ ಹಾಸ್ಪಿಟಲ್ ಅಲ್ಲೇ ಕ್ವಾರಂಟೈನ್ ಆಗಿ, ನಿಮಗೆ ಬೇಕಾದ ಎಲ್ಲಾ ಪೆಸಿಲಿಟಿ ನಾವು ನಿಮಗೆ ಅರೇಂಜ್ ಮಾಡುತ್ತೇವೆ ಎಂದರು ಡಾಕ್ಟರ್. ಶಂಕರಪ್ಪನ ಎದೆ ಬಡಿತ ಮತ್ತೆ ಜೋರಾಯಿತು. ಎಷ್ಟೋ ವರ್ಷಗಳ ಮೇಲೆ ಬಂದಿರುವ ಮಕ್ಕಳನ್ನು ಅವರಿಗೆ ಒಂದು ಕ್ಷಣವೂ ಎಲ್ಲೂ ಕಳುಹಿಸಲು ಇಷ್ಟವಿರಲಿಲ್ಲ. ಸರಿ ಡಾಕ್ಟರ್ ನಾವು ಬರುತ್ತೇವೆ, ನಮ್ಮಿಂದ ಯಾಕೆ ಬೇರೆಯವರಿಗೆ ತೊಂದರೆ ಮಗ ಸೊಸೆ ಹೊರಟು ನಿಂತರು. ಮಗುವನ್ನು ಕರೆಯಲು ಮಗ ಹೊರಟ ಆದರೆ ಶಂಕರಪ್ಪ ಅವನನ್ನು ಬಿಡಲಿಲ್ಲ. ನಾನು ಮಾತ್ರ ಮಗುವನ್ನು ಎಲ್ಲೂ ಕಲಿಹಿಸುವುದಿಲ್ಲ, ನಾನು ಸತ್ತರೂ ಚಿಂತೆ ಇಲ್ಲ ಮಗು ಮಾತ್ರ ಆಸ್ಪತ್ರೆಗೆ ಹೋಗೋಕೆ ಬಿಡುವುದಿಲ್ಲ ಎಂದು ಹಠ ಇಡಿದು ಬಾಗಿಲಿಗೆ ಅಡ್ಡಲಾಗಿ ನಿಂತರು. ಮಗು ಮಂಚದ ಮೇಲೆ ಎಲ್ಲವನ್ನು ನೋಡುತ್ತಾ ಕುಳಿತಿತ್ತು. ಡಾಕ್ಟರ್ ಎಷ್ಟೇ ವಿವರಿಸಿ ಹೇಳುವುದಕ್ಕೆ ಪ್ರಯತ್ನಪಟ್ಟರೂ ಇವರ ಹಠ ಮಾತ್ರ ಬಿಡಲಿಲ್ಲ. ಚಿಕ್ಕ ಮಕ್ಕಳಂತೆ ಕಣ್ಣಲಿ ನೀರು ಪಟ ಪಟ ಸುರಿಯುತ್ತಲೇ ಇತ್ತು. ಡಾಕ್ಟರ್ ಗೆ ಕೈ ಮುಗಿಯುತ್ತ ಬೇಡಿ ಡಾಕ್ಟರ್ ನನ್ನ ಮಕ್ಕಳನ್ನು ಎಲ್ಲೂ ಕರೆದುಕೊಂಡು ಹೋಗಬೇಡಿ, ನಾನು ಸಾಯೋ ಕಾಲದಲ್ಲಿ ನನ್ನ ಮಕ್ಕಳಿಂದ ದೂರಮಾಡಬೇಡಿ. ಈಗಾಗಲೇ ಮಕ್ಕಳನ್ನು ಬಿಟ್ಟು ತುಂಬಾ ನೋವು ಅನುಭವಿಸಿದ್ದೀನಿ, ನಾನು ಸಾಯೋವರೆಗೆ ನನ್ನ ಮಕ್ಕಳನ್ನು ಮತ್ತೆ ನೋಡೋಕೆ ಆಗುತ್ತೋ ಇಲ್ಲವೋ ಅಂತ ದಿನ ಯೋಚನೆ ಮಾಡಿ ದಿನ ಸಾಯ್ತಾ ಬದುಕಿದ್ದೀನಿ. ಈ ರೋಗದ ನೆಪದಲ್ಲಾದರೂ ಮಕ್ಳು ಮನೆಗೆ ಬಂದಿದ್ದಾರೆ ಸ್ವಲ್ಪ ದಿನ ಅದಕ್ಕೂ ನೀವು ಕಲ್ಲು ಹಾಕಬೇಡಿ ಎನ್ನುತ್ತಾ ಗೋಗರೆದರು, ಒಂದು ಕ್ಷಣ ಡಾಕ್ಟರ್ ಕಾಲನ್ನು ಹಿಡಿಯಲು ಹೋದರು. ಇವರ ಪ್ರೀತಿಯನ್ನು ಹಾಗೂ ಮಕ್ಕಳಿಂದ ದೂರವಾಗಿ ಅವರು ಅನುಭವಿಸಿದ ಯಾತನೆ ನೋಡಿ ಡಾಕ್ಟರ್ ಸೇರಿದಂತೆ ಅಲ್ಲಿ ಇದ್ದವರ ಕಣ್ಣುಗಳುಸಹ ತೇವವಾದವು. ಮಗ ಸೊಸೆ ಮಾತು ಮರೆತು ಕಣ್ಣಾಲಿಗಳನ್ನು ಹೊರೆಸಿಕೊಂಡರು. ಕೊನೆಗೂ ಸೋತ ಡಾಕ್ಟರ್ ಶಂಕರಪ್ಪನ ಕೈಗಳನ್ನು ಇಡಿದು ನೀವು ನನ್ನ ತಂದೆಯ ಸಮಾನ ನೀವು ನನ್ನ ಕಾಲು ಹಿಡಿಯಲು ಬರಬಾರದು, ನಿಮ್ಮ ಪ್ರೀತಿ ಏನು ಎಂದು ನನಗೂ ಅರ್ಥವಾಗುತ್ತದೆ ಆದರೆ ನಾನು ನನ್ನ ಕರ್ತವ್ಯ ಮಾಡೋಕೆ ಬಿಡಿ ದಯವಿಟ್ಟು. ಇನ್ನೂ ಏಳು ಕೇವಲ ಏಳು ದಿನ ಅಷ್ಟೇ ಆಮೇಲೆ ನಿಮ್ಮ ಮಕ್ಕಳು ನಿಮ್ಮ ಮನೆಗೆ ಬರುತ್ತಾರೆ ಅಲ್ಲಿ ತನಕ ಸಮಾಧಾನ ಮಾಡಿಕೊಳ್ಳಿ. ನಿಮಗೆ ನಾನು ಒಂದು ಸಹಾಯ ಮಾತ್ರ ಮಾಡಬಲ್ಲೆ ಈ ಚಿಕ್ಕ ಮಗುವನ್ನು ಇಲ್ಲೇ ಬಿಟ್ಟು ಹೋಗುತ್ತೇನೆ ಆದರೆ ನೀವು ಆ ಮಗು ಇರೋ ರೂಮಿಗೆ ಹೋಗುವುದು ಆಗಲಿ , ಅವಳನ್ನು ಮುಟ್ಟುವುದು ಆಗಲಿ ಮಾಡುವುದಿಲ್ಲ ಎಂದು ನನಗೆ ಮಾತು ಕೊಡಿ. ಏಳು ದಿನ ಅಷ್ಟೇ ಆಮೇಲೆ ನಿಮ್ಮ ಮೊಮ್ಮಗಳನ್ನು ನೀವು ಹೆಗಲ ಮೇಲೆ ಕೂರಿಸಿಕೊಂಡು ಊರ ತುಂಬಾ ಓಡಾಡಿ. ನಿಮ್ಮ ಖುಷಿ ಹೇಗೆ ಅನಿಸುತ್ತೋ ಹಾಗೆ ಮಾಡಿ ದಯವಿಟ್ಟು ನಿಮ್ಮ ಮಗ ಈ ಮಾತು ಕೇಳುತ್ತಿದ್ದಾನೆ ಎಂದು ಅಂದುಕೊಂಡು ಒಪ್ಪಿಕೊಳ್ಳಿ. ಡಾಕ್ಟರ್ ನ ಕಣ್ಣುಗಳನ್ನು ನೋಡಿದ ಶಂಕರಪ್ಪ ಆಯಿತು ಎನ್ನುವಂತೆ ತಲೆ ಅಡಿಸಿದರು. ಮಗ ಸೊಸೆ ಯಾಕೋ ಇಂದು ಪ್ರೀತಿ ತುಂಬಿದ ಕಣ್ಣುಗಳಲ್ಲಿ ಶಂಕರಪ್ಪನ ಕಡೆ ತಿರುಗಿ ನೋಡುತ್ತಾ ಆಂಬ್ಯುಲೆನ್ಸ್ ಕಡೆ ಹೊರಟರು. ಡಾಕ್ಟರ್ ಮಗುವಿನ ಟೆಂಪರೇಚರ್ ಚೆಕ್ ಮಾಡಿ ಏನು ತೊಂದರೆ ಇಲ್ಲ ಆದರೂ ಇನ್ನೂ ಏಳು ದಿನ ಎಚ್ಚರದಿಂದ ಇರಲು ಹೇಳಿ ಹೊರಟರು..

ಶಂಕರಪ್ಪ ದೇವರೇ ನನ್ನ ಮಕ್ಕಳಿಗೆ ಏನು ತೊಂದರೆ ಆಗದಂತೆ ಕಾಪಾಡು ಎಂದು ದೇವರಲ್ಲಿ ಬೇಡಿಕೊಂಡರು. ಏಳು ದಿನಗಳು ಮೊಮ್ಮಗಳ ಬಳಿ ಹೋಗಲಾಗದಿದ್ದರೂ ಬಾಗಿಲ ಬಳಿಯಿಂದ ಮಾತ್ರ ದೂರ ಸರಿಯಲ್ಲ. ಮಗುವಿನೊಂದಿಗೆ ದಿನವೆಲ್ಲಾ ಮಾತನಾಡಿದರೂ, ಅವಳನ್ನು ಎತ್ತಿಕೊಂಡು ಓಡಾಡಬೇಕು ಎನ್ನುವ ಬಯಕೆ ತೀರದೆ ಎಷ್ಟೋ ಸಾರಿ ಒಳಗೆ ಹೋಗಲು ಮನಸ್ಸು ಮಾಡಿದರೂ ಡಾಕ್ಟರ್ ನ ಮಾತು ನೆನಪಾಗಿ ಸುಮ್ಮನಾಗುತ್ತಿದ್ದರು. ಇವರು ಕಾದಿದ್ದ ಆ ದಿನ ಯುಗಗಳಂತೆ ಸಾಗಿ ಕೊನೆಗೆ ಆ ದಿನ ಬಂದೇ ಬಿಟ್ಟಿತು. ಆ ದಿನ ನಿದ್ರೆಯನ್ನು ಸಹ ಮಾಡದೆ ಬಾಗಿಲ ಬಳಿ ಕಾಯುತ್ತಲೇ ನಿಂತವರು ಮಗು ನಿದ್ರೆಯಿಂದ ಎಚ್ಚರವಾಗುವುದನ್ನೇ ಕಾಯುತ್ತಿದ್ದರು. ಮಗು ಎದ್ದು ತಾತ ಎಂದು ಕರೆದ ತಕ್ಶಣವೇ ಓಡಿ ಹೋಗಿ ಮಗುವನ್ನು ಎತ್ತಿ ಎದೆಗವಚಿಕೊಂಡು ಓಡುತ್ತಲೇ ಪತ್ನಿಯ ಬಳಿಗೆ ಹೋಗಿ ನಿಂತರು. ದೀಪದ ಬೆಳಕಿನಲ್ಲಿ ಮಂಗಳರ ಮುಗುಳುನಗೆ ಕಾಣುತಿತ್ತು.


Rate this content
Log in

More kannada story from Mahadevaprasad H R

Similar kannada story from Classics