ಅದೊಂದು ಕರೆ...!
ಅದೊಂದು ಕರೆ...!
"ನಿಮ್ಮ ಮನೆ" ಎಂಬ ಫಲಕ ಕಾಣುತ್ತಿದ್ದಂತೆ ಆಟೋವನ್ನು ನಿಲ್ಲಿಸಲು ಹೇಳಿದ ಶಾಂತಮ್ಮ ಚಾಲಕನಿಗೆ ದುಡ್ಡನ್ನು ಕೊಟ್ಟು ಗೇಟ್ ತೆರೆದು ಮುಂದೆ ಸಾಗಿದರು. ಅದೊಂದು ವೃದ್ದಾಶ್ರಮ. ಒಳಗೆ ಕಾಲಿಡುತ್ತಿದ್ದಂತೆ ತನ್ನ ವಯಸ್ಸಿನವರು ಹಲವಾರು ಮಂದಿ ಇರುವುದನ್ನು ನೋಡಿ ಶಾಂತಮ್ಮನಿಗೆ ಕೊಂಚ ನೆಮ್ಮದಿ ಎನಿಸಿದರು ಮನಸು ಭಾರವಾಗಿತ್ತು.ಹೇಳದೆಯೇ ಪತ್ರವನ್ನು ಬರೆದಿಟ್ಟು ಮನೆ ಬಿಟ್ಟು ಬಂದ ಶಾಂತಮ್ಮನಿಗೆ ಆಶ್ರಮದ ಬಾಗಿಲಲ್ಲಿ ಮೊಮ್ಮಕ್ಕಳ ನೆನಪಾಗಿತ್ತು. ಹಿಂದಿನ ದಿನ ನನ್ನಿಂದಾಗಿ ಮಗ ಸೊಸೆ ಮನೆಯಲ್ಲಿ ಚರ್ಚೆ ಮಾಡಿಕೊಳ್ಳುವುದನ್ನು ಸಹಿಸಲಾಗದೆ ಬಿಟ್ಟು ಬರುವ ನಿರ್ಧಾರವನ್ನು ತೆಗೆದುಕೊಂಡಿದ್ದರು. ನನ್ನಿಂದಾಗಿ ಮಗ ಸೊಸೆಯ ಜೀವನ ಹಾಳಾಗಬಾರದು.ಹೇಗೋ ನನ್ನ ಗಂಡ ಮಾಡಿಟ್ಟ ಎಫ್ಡಿ ಯಲ್ಲಿ ಸ್ವಲ್ಪ ಹಣವಿದೆ.ನನ್ನ ಜೀವನ ಹೇಗೋ ಸಾಗುತ್ತದೆ ಎಂಬ ಧೈರ್ಯದಲ್ಲಿ ಮನೆಯನ್ನು ಬಿಟ್ಟು ಬಂದು ಆಶ್ರಮದ ಬಾಗಿಲಲ್ಲಿ ನಿಂತಿದ್ದರು.
ಆಶ್ರಮಕ್ಕೆ ಸೇರಬೇಕಾದ ಎಲ್ಲಾ ದಾಖಲಾತಿಗಳನ್ನು ಭರ್ತಿ ಮಾಡಿ ತನಗೆಂದು ನಿಗದಿಯಾಗಿದ್ದ ಮಂಚದ ಬಳಿ ಕುಳಿತು ವಿಶ್ರಾಂತಿ ಪಡೆಯುತ್ತಿರುವಾಗ ಆ ಕೋಣೆಯ ಮೂಲೆಯಲ್ಲಿ ಒಂದು ಟೆಲಿಫೋನ್ ಇದ್ದಿದ್ದನ್ನು ಗಮನಿಸಿದರು. ಧಣಿವಾಗಿದ್ದ ಕಾರಣ ವಿಶ್ರಾಂತಿಗಾಗಿ ನಿದ್ದೆ ಮಾಡಲು ಪ್ರಯತ್ನಿಸಿದರೂ ನಿದ್ರಾ ದೇವಿ ಹತ್ತಿರ ಸುಳಿಯಲಿಲ್ಲ.ಶಾಲೆಗೆ ಹೋಗಿದ್ದ ಮ್ಮೊಮಕ್ಕಳು ಬರುವ ಹೊತ್ತಾಯಿತ್ತೇನೋ ಎಂಬ ಆಲೋಚನೆಯಲ್ಲಿ ಮಲಗಿದ್ದರು.
ಇದ್ದಕ್ಕಿದ್ದ ಹಾಗೆ ಆಶ್ರಮದ ಆವರಣದಲ್ಲಿ ಜೋರಾದ ದನಿಯೊಂದು ಕೇಳಿ ಬರುತ್ತಿತ್ತು. ಶಾಂತಮ್ಮನಿಗೆ ಹೊಸದಾಗಿದ್ದ ಕಾರಣ ಏನೆಂದು ನೋಡಲು ಹೊರ ನಡೆದರು.ತನ್ನಷ್ಟೇ ವಯಸ್ಸಿನ ಹೆಂಗಸು ಜೋರಾಗಿ ಮಾತನಾಡುತ್ತಾ ಸುತ್ತಮುತ್ತ ಇರುವವರೊಂದಿಗೆ ಕಾಲ ಕಳೆಯುತ್ತಿರುವುದನ್ನು ನೋಡಿ ಶಾಂತಮ್ಮನಿಗೆ ಆಶ್ಚರ್ಯವೆನಿಸಿತು. ಇಲ್ಲಿರುವವರಲ್ಲಿ ಯಾರಿಗೂ ಮನೆಯ ಚಿಂತೆ ಇಲ್ಲವೇ? ನಾನೊಬ್ಬಳೇ ಏಕೆ ಮನೆಯ ಬಗ್ಗೆ ಚಿಂತಿಸುತ್ತಿದ್ದೇನೆ ಅಥವಾ ಇವರ್ಯಾರಿಗೂ ಮಕ್ಕಳು ಮೊಮ್ಮಕ್ಕಳೆಂಬ ಬಂಧನವಿಲ್ಲವೇ ಎಂದು ಯೋಚಿಸುತಿದ್ದರು. ನಿಂತು ಚಿಂತಿಸುತ್ತಿದ್ದವರನ್ನು ನೋಡಿದ ಸಾವಿತ್ರಮ್ಮ ಶಾಂತಮ್ಮನ ಬಳಿ ಬಂದು ಹೊಸಬ್ಬರೇ?ಎಂದು ಪ್ರಶ್ನಿಸಿದರು. ಹೌದೆಂದು ಉತ್ತರಿಸಿದ ಶಾಂತಮ್ಮನನ್ನು ಕಂಡು ಮೊದಲೆರಡು ದಿನ ನಾನು ನಿಮ್ಮಂತೆ ಇದ್ದೆ.ಇಲ್ಲಿಗೆ ತಂದು ಸೇರಿಸಿದ ಮಗನನ್ನು ನೆನೆದು ಚಿಂತಿಸುತ್ತಿದೆ.ನಾನೇನು ಅಂತಹ ತಪ್ಪು ಮಾಡಿದ್ದೆ ಎಂದು ಯೋಚಿಸುತ್ತಿದೆ. ಯಾವುದಕ್ಕೂ ಉತ್ತರ ದೊರಕದೆ ಇದ್ದಾಗ ಬಿಟ್ಟು ಹೋದ ಮಗ ನನ್ನನ್ನು ನೋಡಲೆಂದು ಬಾರದೆ ಇದ್ದಾಗ ವ್ಯರ್ಥವಾಗಿ ಚಿಂತಿಸಿ ನನ್ನ ಆಯಸ್ಸನ್ನು ಕಳೆಯುತ್ತಿದ್ದೇನೆ ಎಂದು ಅನಿಸಲು ಪ್ರಾರಂಭವಾಯಿತು. ಅಂದಿನಿಂದ ಎಲ್ಲರೊಂದಿಗೆ ಚಿಕ್ಕ ಪುಟ್ಟ ವಿಷಯಕ್ಕೂ ನಗುನಗುತ್ತಾ ಕಾಲ ಕಳೆಯಲಾರಂಭಿಸಿದೆ ನಾನಿಲ್ಲಿಗೆ ಬಂದು ಮೂರು ವರ್ಷ ಕಳೆದಿದೆ. ಇಂದಿಗೂ ಕೂಡ ನನ್ನ ಮಗ ನನ್ನನ್ನು ನೋಡಲೆಂದು ಬರಲಿಲ್ಲ.ಹಾಗೆಂದು ಚಿಂತಿಸುತ್ತಾ ಕುಳಿತಿದ್ದರೆ ಈ ಮೂರು ವರ್ಷ ನಾನು ರೋಗಿಷ್ಟಯಾಗಿಯೇ ಕಳೆಯಬೇಕಿತ್ತೇನೋ. ಅಗೋ ಅಲ್ಲಿ ನೋಡಿ ಅಲ್ಲಿ ಕಾಣುತ್ತಿದೆಯಲ್ಲ ಟೆಲಿಫೋನ್ ಇಲ್ಲಿಯವರೆಗೂ ಯಾರಿಗಾಗಿಯೂ ಆ ಫೋನ್ ರಿಂಗ್ ಆಗಿದ್ದಿಲ್ಲ. ಇಲ್ಲಿರುವ ಪ್ರತಿಯೊಬ್ಬರು ತಮ್ಮ ಮನೆಯಿಂದ ಬರುವ ಅದೊಂದು ಕರೆಗಾಗಿ ಕಾಯುತ್ತಿದ್ದೇವೆ. ಆದರೆ ಈ ನಡುವೆ ಎಲ್ಲರೂ ಕೂಡ ಆ ವಿಶ್ವಾಸವನ್ನು ಕೈಬಿಟ್ಟಿದ್ದೇವೆ ಇಲ್ಲಿರುವವರ ಪ್ರೀತಿ ವಿಶ್ವಾಸ ಮಕ್ಕಳಂತೆ ನೋಡಿಕೊಳ್ಳುವ ಈ ಆಶ್ರಮದ ಸಿಬ್ಬಂದಿಗಳಿಂದ ನಾನು ಆರೋಗ್ಯವಾಗಿದ್ದೇನೆ ಎಂದು ಕೇಳಲಾರದೇನೆ ತಮ್ಮ ಬಗ್ಗೆ ತಮ್ಮ ಮಕ್ಕಳ ಬಗ್ಗೆ ಸಂಸ್ಥೆಯ ಬಗ್ಗೆ ಒಂದಿಷ್ಟು ಮಾತನಾಡಿ ಹೋಗುತ್ತಿದ್ದ ಸಾವಿತ್ರಮ್ಮನನ್ನು ಕಂಡು ಶಾಂತಮ್ಮನ ಮನಸಲ್ಲಿ ಪ್ರಶ್ನೆ ಒಂದು ಮೂಡಿತ್ತು. ಆ ಫೋನ್ ನನಗಾಗಿ ರಿಂಗ್ ಆಗಬಹುದೇನೋ ಎಂದು ಯೋಚಿಸುತ್ತಿರುವಾಗಲೇ ಟ್ರಿನ್ ಟ್ರಿನ್ ಎಂಬ ಸದ್ದು ಆಶ್ರಮದಲ್ಲಿ ಶಬ್ದ ಮಾಡಿತ್ತು. ಅಲ್ಲಿರುವವರೆಲ್ಲರಿಗೂ ಆ ಸದ್ದನ್ನು ಕೇಳಿ ಆಶ್ಚರ್ಯವಾಗಿತ್ತು. ಶಾಂತಮ್ಮ ತಮ್ಮ ವಿವರಗಳನ್ನು ಬರೆದುಕೊಟ್ಟ ನಂತರ ಆಶ್ರಮದ ನಿಯಮಗಳ ಪ್ರಕಾರ ಆಶ್ರಮದವರು ಮಗ ಸಂತೋಷ್ ಗೆ ಕರೆ ಮಾಡಿ ಶಾಂತಮ್ಮನ ಇರುವಿಕೆಯನ್ನು ತಿಳಿಸಿದರು. ಅಮ್ಮ ಮನೆಯಲ್ಲಿ ಇಲ್ಲವೆಂದು ಎಲ್ಲಾ ಕಡೆ ಹುಡುಕಾಡಿ ಸೋತು ಪೊಲೀಸ್ ಗೆ ಕಂಪ್ಲೇಂಟ್ ಕೊಡಲೆಂದು ತೆರಳುವ ವೇಳೆಗೆ ಸಂತೋಷ್ ಗೆ ಆಶ್ರಮದಿಂದ ಬಂದ ಅದೊಂದು ಕರೆ ಅಮ್ಮನ ಬಗ್ಗೆ ತಿಳಿಯುವಂತೆ ಮಾಡಿತ್ತು.
ರಿಂಗ್ ಆದ ಫೋನನ್ನು ಆಶ್ರಮದ ಸಿಬ್ಬಂದಿ ಎತ್ತಿ ಶಾಂತಮ್ಮನನ್ನು ಕರೆದು ಕೊಟ್ಟಾಗ ಬಿಕ್ಕುವಿಕೆಯ ಧ್ವನಿಯಲ್ಲಿ ಮಗನ ಸ್ವರವನ್ನು ಕೇಳಲಾಗದೆ ನೊಂದುಕೊಂಡರು. ನೀನಿಲ್ಲದೆ ಬದುಕುವುದು ಕಷ್ಟ ದಯಮಾಡಿ ಮರಳಿ ಬಾ ಎಂದು ಗೋಗರೆದ ಮಗನ ಮಾತಿಗೆ ಇಲ್ಲ ಎನ್ನಲಾಗದೆ ಮೌನವಾದಾಗ ಫೋನನ್ನು ಕಸಿದ ಸೊಸೆ ನನ್ನಿಂದಾದ ತಪ್ಪಿಗೆ ಕ್ಷಮೆ ಇರಲಿ ಎಂದು ಕೇಳುವಾಗ ಮನಸ್ಸು ಕರಗಿ ನೀರಾಗಿತ್ತು. ಅಜ್ಜಿ ನಮ್ಮೊಂದಿಗೆ ಆಡಲು ಯಾರಿಲ್ಲ ಎಂದು ಅಳುತ್ತಿದ್ದ ಮೊಮ್ಮಕ್ಕಳ ಧ್ವನಿಯನ್ನು ಕೇಳಿ ಪುನ ಮನೆಗೆ ತರುಳುವ ನಿರ್ಧಾರವನ್ನು ಶಾಂತಮ್ಮ ಮನದಲ್ಲಿಯೇ ಮಾಡಿಯಾಗಿತ್ತು. ಅಮ್ಮನ ಉತ್ತರಕ್ಕಾಗಿ ನಿರೀಕ್ಷಿಸಿದ ಮಗ "ಬರುತ್ತೇನೆ "ಎಂದು ಹೇಳಿದ ಮಾತಿಗೆ ತಾನೇ ಬಂದು ಕರೆದುಕೊಂಡು ಬರುವನೆಂದು ತಿಳಿಸಿದ. ಅದೊಂದು ಕರೆ ಶಾಂತಮ್ಮನ ಮನಸ್ಥಿತಿಯನ್ನು ಬದಲಾಯಿಸಿತು. ಅಲ್ಲಿದ್ದವರ ಮನಶಾಂತಿಯನ್ನು ಕೂಡ ಅದೊಂದು ಕರೆ ಬತ್ತಿ ಹೋಗಿದ್ದ ನಿರೀಕ್ಷೆಯನ್ನು ಬಡಿದೇಳಿಸುವಂತೆ ಮಾಡಿತ್ತು.
ಮನೆಯೆಂದ ಮೇಲೆ ಒಂದು ಮಾತು ಹೆಚ್ಚಾದರೂ ಕಷ್ಟವೇ. ಹಾಗೆಂದು ಒಂದೇ ಮಾತಿಗೆ ದುಡಿಕಿ ನಿರ್ಧಾರವನ್ನು ಕೈಗೊಳ್ಳಬಾರದು. ಸಮಸ್ಯೆಗಳನ್ನು ಕೂತು ಮಾತನಾಡುವ ಮೂಲಕ ಬಗೆಹರಿಸಿಕೊಳ್ಳುವ ಪ್ರಯತ್ನವನ್ನು ಮಾಡಬೇಕು.ಏನನ್ನು ಮಾತನಾಡದೆ ತಮ್ಮಿಷ್ಟದಂತೆ ನಿರ್ಧಾರವನ್ನು ಕೈಗೊಳ್ಳುವುದು ಇನ್ನೊಬ್ಬರ ನೋವಿಗೆ ದಾರಿಯಾಗುತ್ತದೆ.ಇಲ್ಲಿ ಶಾಂತಮ್ಮ ತೆಗೆದುಕೊಂಡು ನಿರ್ಧಾರದಲ್ಲಿ ತಪ್ಪಿಲ್ಲ. ತನ್ನಿಂದ ಮಗನ ಸಂಸಾರಕ್ಕೆ ತೊಂದರೆ ಆಗಬಾರದೆಂದು ಹೊರಟು ಬಂದರು. ಆದರೆ ಮಗನ ಸ್ವಭಾವವನ್ನು ತಿಳಿದಿದ್ದರೂ ಕೂಡ ಅವಸರದಲ್ಲಿ ತೆಗೆದುಕೊಂಡ ನಿರ್ಧಾರ ಆಶ್ರಮದಲ್ಲಿ ನೆಮ್ಮದಿ ಕಾಣುತ್ತಿದ್ದವರ ಮನಶಾಂತಿಯನ್ನು ಕೆಡಿಸಿತ್ತು. ಯಾವುದೇ ಕೆಲಸವನ್ನು ಕೈಗೊಳ್ಳುವ ಮೊದಲು ಯೋಚಿಸುವುದು ಒಳಿತು. ನೆಮ್ಮದಿಯಾಗಿದ್ದ ಶಾಂತಮ್ಮ ಮಾತುಗಳನ್ನು ಆಲಿಸಿಕೊಂಡು ಸ್ವ ನಿರ್ಧಾರವನ್ನು ತೆಗೆದುಕೊಂಡು ಹೊರಟಿದ್ದಲ್ಲದೆ ಆಶ್ರಮದಲ್ಲಿ ಎಲ್ಲವನ್ನು ಮರೆತು ಬದುಕುತ್ತಿದ್ದವರ ನೆಮ್ಮದಿಯನ್ನು ಅಲುಗಾಡಿಸಿ ಬಂದಂತಾಗಿತ್ತು. ದುಡಿಕಿನ ನಿರ್ಧಾರ ಇನ್ನೊಬ್ಬರಿಗೆ ನೋವುಂಟು ಮಾಡಬಾರದು. ನಿರ್ಧಾರವನ್ನು ಕೈಗೊಳ್ಳುವಾಗ ಸೂಕ್ಷ್ಮವಾಗಿ ಎಲ್ಲಾ ವಿಷಯಗಳನ್ನು ಗಮನಿಸಿ ತೆಗೆದುಕೊಳ್ಳುವುದು ಉತ್ತಮ.
