Read #1 book on Hinduism and enhance your understanding of ancient Indian history.
Read #1 book on Hinduism and enhance your understanding of ancient Indian history.

Jyoti b Devanagaav

Classics Inspirational


3.8  

Jyoti b Devanagaav

Classics Inspirational


ಆಲದ ಮರ

ಆಲದ ಮರ

5 mins 11.6K 5 mins 11.6K


ಅವಳು ದೊಡ್ಡ ಸಂಸಾರದ ಗೃಹಿಣಿ ಅಕ್ಷರ ಅರಿಯದ ಹೆಣ್ಣು ,ಅನಕ್ಷರತೆ ಈಗಿನ ತಲೆಮಾರಿನ ಜನರಿಗೆ ಪರಿಚಿತ ಪದ, ಅಕ್ಷರ ಕಲಿಕೆ ಸಾಮೂಹಿಕವು, ಕಡ್ಡಾಯವು ಆಗಿರುವ ಈಗಿನ ಕಾಲದಲ್ಲೂ ಅನಕ್ಷರಸ್ಥರು ಸಿಗುವದುಂಟು ಆದರೆ ಅವರ ಸಂಖ್ಯೆ ವಿರಳ, ಬೆರಳೆಣಿಕೆಯ ಜನರಷ್ಟೇ ಓದುವ ಅಧಿಕಾರ,ಬರೆಯಲು ಕಲಿಯುವ ಸೌಲಭ್ಯ, ಹೊಂದಿದ ದಶಕಗಳ ಹಿಂದಿನ ಕಾಲದಲ್ಲಿ ಹುಟ್ಟಿದ ಹೆಣ್ಣುಮಕ್ಕಳಿಗೆ ಓದು ಕೈಗೆಟುಕದ ಫಲವೇ ಸರಿ ಆದರೂ ಅಕ್ಷರಸ್ಥರು,ಆಧುನಿಕರು ನಾಚುವಂತೆ ಬದುಕುವ ಜೀವನ ಪದ್ಧತಿ ಅವರ ತಲೆಮಾರಿನ ಜೀವಾಳ.

ಅಂತಹ ತಲೆಮಾರಿನಿಂದ ನಮ್ಮ ಕಾಲದ ಹೊಸ ತಲೆಮಾರಿನ ಜನರೊಂದಿಗೆ ಕೂಡ ಸಹಜವಾಗಿ ಪಯಣಿಸಿದ ಹಿರಿಜೀವವದು ಆಯಿ .

ತಂದೆಯ ತಾಯಿಮತ್ತು ತಾಯಿಯ ತಾಯಿಯನ್ನು ಆಯಿ ಎಂದೇ ಕರೆಯುವುದು ನಮ್ಮ ಆಡು ಮಾತಿನ ವರಸೆ.ಇದೊಂದು ಆ ಹಿರಿ ಜೀವಕ್ಕೆ ಕರೆಯುತ್ತಿದ್ದ ಹೆಸರಷ್ಟೇ,ಆಕೆ ತಾಯಿಯ ಮಮತೆ,ತಂದೆಯ ಕಾಳಜಿ,ಗುರುವಿನ ಮಾರ್ಗದರ್ಶನ,ಸ್ನೇಹಿತರ ಸಹಚರ್ಯ,ಬಂಧುಗಳ ಬಾಂಧವ್ಯ ಎಲ್ಲವನ್ನೂ ಒಟ್ಟೊಟ್ಟಿಗೆ ಮೊಗೆದು ಕೊಡುತ್ತಿದ್ದ ಮಾತೃತ್ವದ ಹೆಣ್ಣು ಜೀವ.

ಶ್ರೀಮಂತ ಮನೆತನದ ಕೂಡು ಕುಟುಂಬದ ಹೆಣ್ಣುಮಗಳನ್ನು ಅದೇ ಊರಿನ ಒಬ್ಬನೇ ಮಗ ಇರುವ ದೊಡ್ಡ ಆಸ್ತಿಯುಳ್ಳ ವಿದ್ಯಾವಂತನಿಗೆ ಕೊಟ್ಟು ಮದುವೆ ಮಾಡಿದ ಹಿರಿಯರು ಹತ್ತು ಮಕ್ಕಳೊಂದಿಗೆ ಮುತ್ತೈದೆಯಾಗಿ ಬಾಳು ಅಂತ ಆಶೀರ್ವದಿಸಿದ್ದರೆನೋ ಹತ್ತು, ಹನ್ನೆರಡು ಮಕ್ಕಳು ಗಂಡ,ಸಂಪತ್ತು ದುಡಿಮೆ, ಜೀವನ ಹೀಗೆ ಸಾಗಿ ಬಳಲಿತ್ತು ಜೀವ.

ನನಗೆ ಅವಳ ಆಂತರ್ಯದ ಮುಖಾ ಮುಖಿಯಾದದ್ದು ಬಹುಶಃ ನನ್ನ ಹತ್ತೊಂಬತ್ತನೇ ವಯಸ್ಸಿಗೆ ಅವಳ ಅನುಭವದ ಆಳ ನನ್ನ ವಯಸ್ಸಿನ ನಾಲ್ಕು ಪಟ್ಟು ಅದನ್ನು ನಾನು ಸಂಪೂರ್ಣವಾಗಿ ಅರಿವಿಗೆ ಹೇಗೆ ನಿಲುಕಿಸಿಕೊಳ್ಳಬಲ್ಲೆ? ಆದರೂ ನನಗೆ ದಕ್ಕಿದ ಅವಳ ಒಡನಾಟ ನನ್ನ ಜೀವನದ ಅತೀ ಅಮೂಲ್ಯ ಕ್ಷಣಗಳು, ವರ್ಷಗಳನ್ನುಅವಳೊಂದಿಗೆ ಕಳೆದರೂ ಅವೀಗ ಬರೀ ಕ್ಷಣಗಳಾಗಿ ಅವಿತಿವೆ.

ಬಹುಶಃ ಐದು ಅಡಿಯ ಗಿಡ್ಡ ಮೂರ್ತಿ ಅವಳು ಆದ್ರೆ ನನ್ನೊಳಗೆ ಅವಳು ಹಚ್ಚಿದ ಆರದ ದೀಪ ಇಂದಿಗೂ ಕಷ್ಟದ ಹಾದಿಗೆ ಕ್ಷಣ ಕ್ಷಣಕ್ಕೂ ಬೆಳಕು ನೀಡುವ ಸಾಂತ್ವನ ನೀಡುವ ಬಹು ಎತ್ತರದ ವಿಚಾರಧಾರೆಗಳ ಪ್ರಕಾಶವದು.

ಸದಾ ಏನಾದರೊಂದು ಕೆಲಸವನ್ನು ಮಾಡುತ್ತಲೇ ಇರುತ್ತಿದ್ದ ಅವಳ ದೇಹ ಮನಸ್ಸು ದುಡಿಮೆಗೆ ಎಷ್ಟು ಒಗ್ಗಿಕೊಂಡಿದ್ದವು ಅಂದ್ರೆ ಕೆಲಸಮಾಡದೆ ಇದ್ರೇನೇ ಮೈಭಾರ,ಜಡ್ಡುಗಟ್ಟಿದ ಸ್ಥಿತಿ ಉಂಟಾಗುವ ಮನಸ್ತಿತಿ,ಸದಾ ಒಂದಿಲ್ಲೊಂದು ಕೆಲಸ ಮಾಡುತ್ತಲೇ ಇರುತ್ತಿದ್ದ ಜೀವವದು.ಯಾವಾಗಲಾದರೂ ಒಮ್ಮೊಮ್ಮೆ ತನ್ನ ವಯಸ್ಸಿನ ಅಳತೆ ಮೀರಿ ಹೆಚ್ಚಿನ ಕೆಲಸ ಮಾಡಿ ನರುಳುವದು,ನಮ್ಮಿಂದ ಬೆನ್ನು ಕೈಕಾಲು ನೀವಿಸಿ ಕೊಳ್ಳುವದು ಮಾಡುವಾಗ ಅವಳ ಮತ್ತು ನನ್ನ ಕೆಲವು ಸಂಭಾಷಣೆಗಳು ನನ್ನ ಮತ್ತು ಅವಳದೇ ಮಾತಲ್ಲಿ ...:


ನಾನು:ಯಾಕ ಇಷ್ಟು ಹೊತ್ತ ಕೆಲ್ಸಾ ಮಾಡ್ದಿ ಸ್ವಲ್ಪ ಕಮ್ಮೀ ಮಾಡಬೇಕಿತ್ತು ಈಗ ನೋಡ್ ಹೆಂಗ ಮುನುಗಾಕತ್ತಿದಿ

ಆಯಿ: ಅಯ್ಯಾ ಸ್ವಲ್ಪ... ಕಂಡಂಗ ಆಯ್ತು ಮಾಡ್ಲಾಕ ಕುಂತ್ರ ಜಲ್ದಿ ಮುಗಿಲೇ ಇಲ್ಲ   ಮೊದ್ಲ.. ಇದ್ರ ನಾಕ್ ಪಾಲ ಕೆಲ್ಸಾ ಮಾಡಿನಿ ಆದ್ರ ಇವತ್ತ ಬಾಳ ದಣಿಕಿ ಅನ್ಸ್ಲಾಕತ್ಯಾದ,ಏನಿಲ್ಲ ಸ್ವಲ್ಪ ಝಂಡು ಬಾಂ ಹಚ್ಚಿ ಬೆನ್ನ ವರ್ಸು ನಿದ್ದಿ ಹತ್ತು ಅಂದ್ರ ಮುಂಜಾನಿ ಅಷ್ಟಿಗೆ ಎಲ್ಲ ಕಡಿಮಿ ಆಗ್ತಾದ .

ನಾನು: ಅಲ್ಲ ಮೊದಲಿನಂಗ ಮಾಡಿದ್ರ ಈಗ ತಾಳ್ತದೇನು ಹೊತ್ತ ಹೋಗವಲದು ಅಂತಿದಿ ಸುಮ್ಮ್ನ ಒಂದು ಸ್ವಲ್ಪ ಸ್ವಲ್ಪ ಮಾಡ್ಬೇಕು.

ಆಯಿ:ಮೊದ್ಲ ನಸಿನ್ಯಾಗ ಎದ್ದು ನೀರೋಲಿ ಹಚ್ಚಿ, ನಾಕೆಮ್ಮಿ ಮೊಸರ ಮಜ್ಜಿಗಿ ಮಾಡಿ,

ಎಂಟೆಂಟ ಆಳ ಮಕ್ಕಳಿಗಿ ರೊಟ್ಟಿ ಪಲ್ಯ ಮಾಡಿ ,ನುಚ್ಚು ಮಜ್ಜಿಗಿ,ಆಳ ಮಕ್ಳ ಬುತ್ತಿ ತೋಂಡು ಕುದುರಿಮ್ಯಾಲ ಕುಂತ ಹೊಲಕ್ ಹೋಗಿ ಕೂಲ್ಯಾರ ಸಂಗಾಟ ಚಂತೆನ ಕೆಲ್ಸಾ ಮಾಡಿ ಚಂಜಿಕಿ ಬಂದ ಮತ್ತ ನಾಳಿಗಿ ರೊಟ್ಟಿ ಮಾಡ್ಲಾಕಾ ಜ್ವಾಳ ಬಿಸಿವೇ ತಾಯಿ ಈಗಿನ ಕಾಲ ಬಾಳ ಚೊಲೋ ಆವ ಈಗ ಎಲ್ಲ ಸೌಕರ್ಯ ಬಂದಾವ.ಮೊದಲೆಲ್ಲ ಬಾಳ ತ್ರಾಸ ಇತ್ತವ್ವ ಜೀವ್ನ..    ಬಡುವ್ರು ಅಂತು ಬಾಳ ತಿಪ್ಲದಾಗ ಜೀವ್ನ ಮಾಡ್ತಿದ್ರು ,ಚೊಲೋ ದುಡಿವ ಗಂಡಸರಿದ್ರ ಒಂದೀಟು ಚೊಲೋ ಇರ್ತಿತ್ತು ಬಾಳ್ಯಾ ಇಲ್ಲಂದ್ರ ನೋಡು ಹಡ್ದ ಬಾಣ್ತಿಗಿ ಹೊಟ್ಟಿಗಿ ಹಿಡಿ ಚಜ್ಜಕ ಕಂಡಿಲ್ಲ ಹುಟ್ಟಿದ ಕೂಸಿನ ನೆತ್ತಿಗಿ ಹನಿ ಎಣ್ಣಿ ಕಂಡಿಲ್ಲ.. ತಾಯಿ..,ಈಗಿನ ಕಾಲಾನೆ ಬಾಳ ಚೊಲೋ ಅನ್ಬೇಕು.

ನಾನು:ಅಂದ್ರ ಎಲ್ರೂ ಹಂಗೆ ಜೀವ್ನ ಮಾಡ್ತಿದ್ರು

ಆಯಿ: ಹಾ ಮತ್ತ ಹೊಟ್ಟಿ ಕೂಳಿಗಿ

ದುಡ್ದಾರ.. ಯವ್ವ. ಆವಾಗ ಬಾಳ ಅಂದ್ರ ಬಾಳ ತಿಪ್ಲದ ಕಾಲವ್ವ ಬಡೂರಿಗಿ ಉಣ್ಲಾಕ ಜ್ವಾಳ ಸಿಕ್ಕಿಲ್ಲ ಉಡಾಕ ಅರಬಿ ಸಿಕ್ಕಿಲ್ಲ ಮಕ್ಳು ದೊಡ್ಡೋರಾದ್ರ ತಮ್ಮ ಸಿರ್ಯಾಗ ಅದ್ದ ಹರ್ದು ಉಡಿಸಿ ಕುಂದುರ್ಸ್ಯಾರ .ನಮ್ಮ ಹೊಲಕ ದಗದಕ್ಕ ಬಂದ್ರ ನುಚ್ಚು ಮಜ್ಜಿಗಿ, ಹುಣಸಿ ಹಿಂಡಿ, ಅಗಸಿಕಾರ, ಮದ್ಯಾಣ ಊಟಾ ಮಾಡಾಗ ಕೊಟ್ರ ಬಡುರಿಗಿ ಅದ ದೊಡ್ಡ ಉಪಕಾರದಂಗ ಇತ್ತು ದೇಸಾಯರ ಹೊಲಕ್ಕ ಹೋದ್ರ ಮದ್ಯಾಣಕ ಒಂದೆರಡು ರೊಟ್ಟಿ ಕಡಿಮಿ ಒಯ್ದರು ನಡಿತಾದ ಅಂತ ನಮ್ಮ ಹೊಲಕ್ಕ ಮಂದಿ ಕೂಲಿ ಬರ್ತಿದ್ರು

ಮತ್ತ ನಮ್ದು ದೊಡ್ಡ ಒಕ್ಕಲ್ತನ ಸದಾ ಕೂಲಿ ನಡಿತಾದಾ ಅಂತ ಸದಾ ನಾಲ್ಕೈದು ಮಂದಿ ಗಂಡಾಳು ಏಳೆಂಟು ಮಂದಿ ಹೆಣ್ಣಾಳು ಬರಾರು

ನಾನು:ಮತ್ತ ಅಷ್ಟು ಮಂದಿನ ದುಡಿಸಿಕೊಂಡು ಇಷ್ಟು ಹೊಲ ಇದ್ದು ಬೆಳೆದದ್ದು ಎಲ್ಲ ಎನ್ ಮಾಡ್ತಿದ್ರಿ

ಆಯಿ:ಅವಾಗೆಲ್ಲ ಈಗಿನಂಗ ಇಷ್ಟು ಬೇಳಿತಿತ್ತೇನ... ಉಪಾಸ ಇದ್ದೋರ್ ಮಂದ ಉಂಡೋರು ಶ್ರೀಮಂತರು ಅನ್ನೋ ಕಾಲ ಅದು ಹಾಂಗ ಇರುವಾಗ ಕೊಟ್ರಿ ತುಂಬಾ ಜ್ವಾಳ,ಜವಿಗೋಧಿ,ತೊಗರಿ, ಕಡ್ಲಿ,ಎಲ್ಲಾ ಒಂದೊಂದು ವರ್ಸ್ ಬರಗಾಲ ಬಂದ್ರು ಜಪ್ ಅನ್ನಲ್ಲಾರದಂಗ ಇರೋದೇ ದೊಡ್ಡ ಮಾತಾಗಿತ್ತು. ಇಕಡಿ ಇಕಡಿ ನಿಮ್ಮ ಅಪ್ಪ ಕಾಕೋರು ದೊಡ್ಡೋರು ಆದಮ್ಯಾಲ ಚೆಂದ ದುಡುದ್ರು ಒಡ್ಡು ಜಾಲಗಟ್ಟಿ,ಮನಿ, ಕ್ವಾಟಿ ಎಲ್ಲ ಅವ್ರ ಕೈಮ್ಯಾಲ ನಡದಾವ.

ನಾನು:ಮತ್ತ ಬಡುವ್ರು ಹೆಂಗ ಮಾಡ್ತಿದ್ರು

ಆಯಿ:ಹಿಂಗ ಕೂಲಿ ಮಾಡೋದು,ಸಾಲ ಮಾಡೋದು,ಜೀತಕ್ ದುಡಿಯೋದು,ಅನ್ನ ಇರೋರ ಮನ್ಯಾಗ ಅವರ ಕೈಯ್ಯಾಗ ಕೈಕೆಲ್ಸಾ ಮಾಡೋದು ಹೆಣ್ಮಕ್ಕಳು ಮನ್ಯಾಗ ಹಳ್ಳ ಹಸನಾ, ಕುಟ್ಟೋದು ಬಿಸೋದು ಮಾಡಿ ಕೊಡೋರು, ಗಂಡಾಳುಗೊಳು ಕಟಿಗಿ ಹೊಡ್ಯಾದು ನೀರ ತರಾದು ಹೆಂಡಿ ಬಳ್ಯಾದು ಮಾಡೋರು ಇನ್ನ ಸಣ್ಣ ಸಣ್ಣ ಪಾರ್ಗೊಳು ದನಕಾಯೋದು,ನಮ್ಮ ಕೈಯ್ಯಾಗಾ ಏನಾರಾ ಕೆಲ್ಸಾ ಮಾಡೋರು ಹಿಂಗ ಇನ್ನೇನೋ ಮಾಡ್ಕೋತಾ ಜೀವ್ನ ನಡೀತಿತ್ತು. ರೊಟ್ಟಿಗಿ ಹಿಟ್ಟ ತಟಕ ಇದ್ರ ಅದರಾಗ ಅಣ್ಣಿ ತಪ್ಲಾ ಕಿರಸಾಲಿ ತಪ್ಲ ಕಲಿಸಿ ನಾದಿದ್ರ ಹಿಟ್ಟ ಎಟೋಣ ಆಗ್ತದ ಎಲ್ರಿಗೂ ಸಾಲ್ತಾದ ಅಂತ ತಪ್ಲ ತಡಮಿ ತಿಂದ ಬದಿಕ್ಯಾರ ಬಡುವ್ರು ಈಗೇ ಚೊಲೋ ಸರ್ಕಾರ ಅಕ್ಕಿ ಗೋಧಿ ಬಂದ ಎಲ್ಲಾರು ಅನ್ನ ಕಾಣಾಕತ್ಯಾರ.

ನಾನು:ಮತ್ತ ಮೊದ್ಲ ಅನ್ನ ಇರ್ಲಿಲ್ಲೆನ್

ಆಯಿ: ಅನ್ನಾ ಎಲ್ಲಿ ಬರ್ಬೇಕ ತಾಯಮ್ಮ ಅವೆ ಜ್ವಾಳದ ನುಚ್ಚು ಹೊಡದು ಕುದಿಸಿದ ಉಳ್ಳಾನುಚ್ಚು, ಜ್ವಾಳ ಕುಟ್ಟಿ ಗೊಳ್ಳ ಕೇರಿ ಜ್ವಾಳದ ಅಕ್ಕಿ ಕುದಿಸಿ ಬಾನಾ,ಕಿಚಡಿ ಮಾಡ್ತಿದ್ವಿ ಈಕಡಿ.. ಈಕಡಿ ಸರ್ಕಾರ ಕೊಟ್ಟ ದಪ್ಪನ ಅಕ್ಕಿ ಅನ್ನ ಬಂದ ಮ್ಯಾಲ ಎಲ್ಲಾರು ಅನ್ನ ಕಂಡಿದ್ದು,ದೊಡ್ಡ ದೊಡ್ಡ ಹಬ್ಬಕ್ಕ ಇಲ್ಲಾಂದ್ರ ಊರಿಂದ ಬೀಗ್ರು ಬಿಜ್ರು ಬಂದಾಗ್ ಸಣ್ಣಾನ್ವು ಅಕ್ಕಿ ಅನ್ನ ಕಾಣ್ಬೇಕು.

ನಾನು:ಹತ್ತು ಹನ್ನೊಂದು ಮಕ್ಕಳನ್ನ ಹಡದಿರೆಲ್ಲ ಅವ್ರನ್ನ ಸಾಕಕ್ಕ ಬೆಳಸಕ ತ್ರಾಸ ಆಗಲಿಲ್ಲೇನು?

ಆಯಿ:ತ್ರಾಸ ಆವಾಗ ತ್ರಾಸ ಯಾವದಕ್ಕ ಇರಲಿಲ್ಲ ಹೇಳ್ ಹೊಟ್ಟಿಗಿ,ಬಟ್ಟಿಗಿ ನಮಗೇನು ಕಡಿಮಿ ಇದ್ದಿದ್ದಿಲ್ಲ ಇನ್ನ ಮಕ್ಕಳು ಕಮ್ಮಿ ಹಡಿಬೇಕು,ಅವ್ರನ್ನ ಬೆಳಸಬೇಕು ಅನ್ನೋ ತಾಪತ್ರಿ ನಮಗಿರಲಿಲ್ಲ ಒಂಭತ್ತು ತಿಂಗಳ ಕೆಲ್ಸಾ ಮಾಡೋರು ಕೆಲಸ ಬೊಗಸಿ ಮಾಡ್ಕೋತಾ ಬ್ಯಾನಿ ತಿಂದಿವಿ ಹಡದಾಗ ಒಂದ ತಿಂಗಳ ಮಾತ್ರ ನಮ್ಮವ್ವ ತಣ್ಣಿರಾಗ ಕೈ ಇಡಗೊಟ್ಟಿಲ್ಲ ಬ್ಯಾಸರಕಿ ಇಲ್ದಾಂಗ ಬಾಣ್ಯಾತನಾ ಮಾಡಕ್ಕಿ ತಿಂಗಳಾತು ಅಂದ್ರ ನಿಮ್ಮ ಮದ್ಯಾಣದ ಅಡಗಿ ನೀನೇ ಮಾಡ್ಕೊಳ್ಳವ್ವ ನಾ ಹೊಲಕ್ಕ ಹೋಗಿ ಬರ್ತೀನಿ ಅಂತಿದ್ಲು. ಈಗಲಂಗ ದವಾಖಾನಿ,ಆಪರ್ಷನ್ನು ಆವಾಗ ಗೊತ್ತಿದ್ದಿಲ್ಲ.ಹಿಂಗ ಆಯಸ್ಸು ಗಟ್ಟಿ ಇದ್ದ ಮಕ್ಕಳು ಬದುಕುತಿದ್ವು ಇಲ್ಲಂದ್ರ ಸಾಯ್ತಿದ್ವು,ಜಡ್ಡು ಬಂದಾಗ ಸತ್ತು,ಸತ್ತು ಹುಟ್ಟತಿದ್ವು.ಹಿಂಗ ಉಳುದಿದ್ವು ನಮ್ಮ ನಮ್ಮ ಅವ್ವಗೊಳು,ಅತ್ತಿದೇರು, ಮಾವದೇರು ಕೈಯ್ಯಾಗಾ ಹೆಂಗೋ ಜ್ವಾಪಾನ ಆಗತಿದ್ರು ಈಗೀಗ ನಿಮ್ಮವ್ವದೆರ ಕಾಲಕ್ಕ ಬಂದಾದ ಈ ಹೊಟ್ಟಿ ಕೊಯ್ಸಗೋದು.

ಮೊದಲೆಲ್ಲಿ ಒಂದು ಹೊಟ್ಯಾಗ,ಒಂದು ರಟ್ಯಾಗ ಒಂದೆರಡು ಅಂಗಳದಾಗ ಹಿಂಗ ಇರತಿತ್ತು ಎಲ್ಲರ ಮನಿ.

ನಾನು:ಮತ್ತ ಆವಾಗ ಬಂಗಾರ ಬಾಳ ಸಸ್ತಾ ಇತ್ತಂತ ಒಂದಿಟು ಬಾಳ ತೊಗಂಡ ಇಡಬೇಕಿಲ್ಲ

ಆಯಿ: ಸಸ್ತಾನಾ! ಆ ಕಾಲಕ್ಕ ಈ ಕಾಲಕ್ಕೂ ಬಂಗಾರ ಬಂಗಾರನ ನಮ್ಮ ಕಾಲಕ್ಕೂ ಅದು ರೊಟ್ಟಿ, ಬಟ್ಟಿ ಉಳಿದ ಕರ್ಚಿಗಿಂತ ಅದು ತುಟ್ಟಿನೇ ಇತ್ತು ನಾ ಬ್ಯಾರಿ ಆದ ವರ್ಸ ಒಂದು ತೊಲಿಗಿ ನೂರ ರೂಪಾಯಿ ಇತ್ತು.ಮತ್ತ ನನಗ ನಿಮ್ಮ ಮುತ್ಯ ಎಂಟು ತೊಲಿ ತೆರವು ಕೊಟ್ಟು ಮದವಿ ಆಗ್ಯಾನ

ನಾನು:ಮತ್ತ ಮುತ್ಯಾ ಮುಲ್ಕಿ ಪರೀಕ್ಷೆ ಪಾಸ್ ಮಾಡಿದ್ದಾವಾ ನೀನು ಏನು ಓದಲಾರದಕ್ಕಿ ಅಲ್ದ ನಮ್ಮ ಮುತ್ಯಾ ಅಷ್ಟು ಎತ್ತರ ಚಂದ ಇದ್ದ ಅಂತಾವ ನಿನ್ನ ಹೆಂಗ ಲಗ್ನ ಆದ

ಆಯಿ:ಆವಾಗ ಈಗಲಂಗ ನೊಡಾದು, ಬಿಡಾದು ಇತ್ತನು ಆವಾಗ ನಮ್ಮ ಅಪ್ಪ,ಅವ್ವ ,ಬೇಕಿದ್ದೊರು ಎಲ್ಲೋರು ಕೂಡಿ ಮಾಡಿದ್ರ ಮುಗೀತು ನಿಮ್ಮ ಕಾಲಕ್ಕ ಬಂದಾದ ಇದು ನೋಡೋದು ಪಾಸ ಆದೋ ಇಲ್ಲೋ ಅಂತ ಕೆಳಾದು.

ಹೀಗೆ ತನ್ನ ಕಾಲದ ಪರದೆಯೊಳಗಿನ ನೆನಪುಗಳನ್ನು ಹಂಚಿಕೊಳ್ಳುತ್ತಾ ಹೊರಗೆ ಕಟ್ಟೆ ಮೇಲೆ ಕುಳಿತ ನಮ್ಮನ್ನು ಒಳಗೊಂಡಂತೆ ಕತ್ತಲು ಎಲ್ಲವನ್ನೂ ನುಂಗಿರುತ್ತಿತ್ತು ಬರೀ ನಮ್ಮ ದ್ವನಿಗಳಷ್ಟೇ ನಮ್ಮಗುರುತಾಗಿ ರುತ್ತಿದ್ದವು .

ಹಬ್ಬ,ಆಚರಣೆ ಸಂಪ್ರದಾಯಗಳಲ್ಲಿ ಅಷ್ಟೊಂದು ಕಟ್ಟು ನಿಟ್ಟು ಕಾಠಿಣ್ಯ ನಮ್ಮ ಮನೆಯಲ್ಲಿ ಕಂಡಿದ್ದು ಇಲ್ಲ. ಎಲ್ಲಾನೂ ಸಂಪ್ರದಾಯದಂತೆ ನಡೆದರೂ ಬರುತ್ತಿದ್ದ ಅಡೆಚಣೆಗಳಿಗೆ ತನ್ನ ಜೀವನಾನುಭವದಿಂದ ತೋರಿದ ಸರಿಯಾದ ಮತ್ತು ಸೂಕ್ತ ಪರಿಹಾರ ನೀಡುವ ಅವಳ ಸಮಯ ಪ್ರಜ್ಞೆ ಎಲ್ಲ ಕಾಲಕ್ಕು ಮಾದರಿ

ಆಯಿ ಆಯ್ಯನೋರು ಬರೋದಿಲ್ಲಂತ ಅವರಿಗಿ ಆರಾಮ ಇಲ್ಲಂತ ಮತ್ತ ಅಡಿಗಿ ಆಗ್ಯಾದ ಈಗ ಹೆಂಗ ಮಾಡೊನು?

ಅಂತ ಮನೆ ಸೊಸೆಯಂದಿರು ಕೇಳಲು

"ಅಯ್ಯ ಬಂದಾಂಗ ಹೋದ್ರ ಬಂಧನ ಇಲ್ಲಂತ" ಹೋದ ವಾರ ಅಯ್ಯನೋರು ಬಂದಾಗ ಧೂಳಪದಕ ಮಾಡಿದ್ವೆಲ್ಲ ಅದರಾಗ ಒಂದಿಸು ಉಳಿಸಿ ಬಾಟ್ಲ್ಯಾಗ ಹಾಕಿ ಜಗಲಿ ಮ್ಯಾಲ ಇಡು ಅಂತ

ಹೇಳಿದ್ನೆಲ್ಲ ಅವುನ್ನ ತೋಗ ಅದರಾಗ ಒಂದಿಸು ತುಂಬಿದ ಕೊಡದಾಗಿನ ನೀರ ಹಾಕಿ ಮನಿತುಂಬ ಹೊಡಿರಿ ಒಂದಿಟು ನೆವದ್ಯಾ ಮಾಡಿ ಆಕಳಿಗಿ ಕೊಟ್ಟು ಎಲ್ಲಾರು ಉಣ್ರಿ ಮತ್ತೆನ್ ಮಾಡಾದು

ಮೊದಲಾ ಗಂಡಸ್ರು ಮುಂಜಾನೆ ಹೊಲಕ್ಕ ಹೋಗಿ ಹಸಗೊಂಡ್ ಬಂದಿರ್ತಾರ ಅವ್ರು ಬಾಯಿಗಿ ಸಿಗಬ್ಯಾಡ್ರಿ ಜಲ್ದಿ ಪೂಜ ನೆವದ್ಯಾ ಮುಗಿಸಿ ಬಿಡ್ರಿ.

ಅನ್ನೋ ಅವಳ ಮುಂದಾಲೋಚನೆ ಸಮಯಪ್ರಜ್ಞೆ ಅವಳನ್ನು ತುಂಬಾ ಮೆಚ್ಚುವಂತೆ ಪ್ರೇರೇಪಿಸುತ್ತಿತ್ತು

ಬದುಕಿನ ಯಾವುದೇ ಹಂತದಲ್ಲಿಯೂ ಆಕೆ ತನ್ನ ನ್ಯಾಯ ಮತ್ತು ನಿರ್ಭೀತಿಯಿಂದ ಕೂಡಿದ ನಡೆಗಳಿಂದ ಹಿಂದೆ ಸರಿದವಳಲ್ಲ.

"ಖಂಡಿತವಾದಿ ಲೋಕ ವಿರೋಧಿ"ಎನ್ನುವ ಗಾದೆ ಮಾತಿನಂತೆ ನಿಷ್ಠುರ ಕಟ್ಟಿ ಕೊಂಡರು ಚಿಂತೆಯಿಲ್ಲ ಯಾವತ್ತಿಗೂ ಅವಳು ಅನ್ಯಾಯದ ಪರ ನಿಂತವಳಲ್ಲ,ಜಾತಿ, ಲಿಂಗಭೇದ,

ಅವಳಲ್ಲಿ ಕಂಡದ್ದಿಲ್ಲ,ಅವಳ ಮಾನವತೆ ಎಡೆಗಿನ ನಡಿಗೆ ಯಾವತ್ತಿಗೂ ಅನುಸರಿಸಲು ಯೋಗ್ಯ ವಾದದ್ದಾಗಿತ್ತು.


Rate this content
Log in

More kannada story from Jyoti b Devanagaav

Similar kannada story from Classics