ನನ್ನವಳೇ ನನ್ನಮ್ಮಾ
ನನ್ನವಳೇ ನನ್ನಮ್ಮಾ
ನಿನ್ನ ಉದರದಿ ಅಡಗಿ ಆಶ್ರಯ ಬಯಸಿ
ನಿನ್ನ ಎದೆಯಾಳದಲ್ಲಿ ಕಾಳಜಿ ಬಯಸಿ
ನವಮಾಸದ ಬೇನೆಯಲ್ಲಿಯೂ ಖುಷಿಯಾಗಿ
ನನ್ನ ಅರಸಿದ ನನ್ನವಳೇ ನನ್ನಮ್ಮಾ ||
ಎದೆಹಾಲಿನಲ್ಲಿ ಸ್ವರ್ಗಬಲವ ಧಾರೆಯೆರೆದು
ಕೈ ಬೆರಳು ಹಿಡಿದು ಸೆರಗ ಮುಚ್ಚಿ
ಭಯದ ಕಾರ್ಮೋಡದಲ್ಲಿ ಕಾಮನಬಿಲ್ಲಯಾಗಿ
ಪ್ರೀತಿಯ ಕಾರುಣ್ಯಮೂರ್ತಿಯ ನನ್ನವಳೇ ನನ್ನಮ್ಮಾ ||
ಎದೆಯಪ್ಪಿ ಪ್ರೀತಿ ಪಸರಿಸಿದ ದೇವಿ
ಪ್ರೇಮದ ಪಾಠ ಕಲಿಸಿದ ಗುರುಮಾತೆ
ಕನಸು ಕಟ್ಟಲು ನೆರವಾದ ಕನಸುಗಳ ನಿರ್ಮಾಪಕಿ
ದೇವಲೋಕದಿಂದ ಧರೆಗಿಳಿದ ನನ್ನವಳೇ ನನ್ನಮ್ಮಾ ||
ಹೆಣ್ಣು ದುರ್ಬಲ
ೆಯೆಂದು ಮರೆತ ಹೆಣ್ಣು
ಬಿಸಿಲಲ್ಲೂ ಪ್ರೀತಿಯ ತಂಗಾಳಿ ಬೀಸಿ
ಮಳೆಯಲ್ಲಿಯೂ ಪ್ರೇಮದ ಆಸರೆಯಾಗಿ
ಸೆರಗಯಲ್ಲಿ ಕಾವಲು ಕಾದ ನನ್ನವಳೇ ನನ್ನಮ್ಮಾ ||
ಕೊಚ್ಚಿ ಹೋಗೊ ಪ್ರವಾಹದಲ್ಲಿಯೂ ಆಶಾಗೋಪುರವಾಗಿ
ಒಡೆದು ಹೋದ ಮಡಿಕೆಯಲ್ಲಿಯೂ ಅನ್ನದಾತೆಯಾಗಿ
ಕೈ ತುತ್ತು ತಿನ್ನಿಸಿ ತನ್ನ ಹೊಟ್ಟೆಬರೆ ಮುಚ್ಚಿಕೊಂಡ
ಸದಾ ಜಪಿಸುವ ಅನ್ನಪೂರ್ಣೇ ನನ್ನವಳೇ ನನ್ನಮ್ಮಾ ||
ಜಗವ ತೋರಿಸಿ ದೈವವನ್ನು ಹರಿಸಿ
ಕನಸುಗಳ ಸಾಗರದಲ್ಲಿ ದೋಣಿಯಾಗಿ
ಮುನ್ನಡೆಸೋ ನನ್ನ ಪುಟ್ಟ ಹೆಜ್ಜೆಗಳ ಮಾರ್ಗದರ್ಶಕಿ
ಕಾಯುವ ದೈವವು ನನ್ನವಳೇ ನನ್ನಮ್ಮಾ ||