Shanthi Tantry

Inspirational

2  

Shanthi Tantry

Inspirational

“ಶರಣಾಗತಿ”

“ಶರಣಾಗತಿ”

2 mins
159


ಕೃಷ್ಣ' ನಮ್ಮ ಮನೆಯ ಬೆಕ್ಕು. ಪ್ರೀತಿಯಿಂದ 'ಪಪ್ಪೀ' ಎಂದೇ ಕರೆಸಿಕೊಳ್ಳುವ ಈ ಮಗು, ಪ್ರತಿನಿತ್ಯ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ತನ್ನ 'ಕೆಲಸ'ವನ್ನೆಲ್ಲಾ ಅಚ್ಚುಕಟ್ಟಾಗಿ ಸಮಯಕ್ಕೆ ಸರಿಯಾಗಿ ಮಾಡುವ ಜೀವಿ.


ನಾನು ಈ ದೇಶಕ್ಕೆ ಕಾಲಿಟ್ಟ ದಿನವೇ ಇದು ಹುಟ್ಟಿದ್ದು. ಆದರೆ ಸರಿಯಾಗಿ ಹದಿನೈದು ವರ್ಷದ ನಂತರ. ಒಂಬತ್ತು ವಾರ ತುಂಬುತ್ತಿದ್ದಂತೆಯೇ ನಮ್ಮ ಮನೆ ಸೇರಿದ ಈ ಮಗು, ನಮ್ಮ ಅಂಗೈಯಲ್ಲಿ ಹಿಡಿಯುವಷ್ಟಿತ್ತು. ಇಂದು ಎಂಟು ವರ್ಷ ವಯಸ್ಸಿಗೆ ಎರಡೂ ಕೈಯಿಂದ ಎತ್ತಿ ನಮ್ಮ ಹೆಗಲ ಮೇಲೆ ಕೂರಿಸಿಕೊಳ್ಳುವಷ್ಟು ಎತ್ತರಕ್ಕೆ ಬೆಳೆದು ನಿಂತಿದೆ.


ಎಲ್ಲರೊಂದಿಗೂ ಸ್ನೇಹದಿಂದಲೇ ಓಡಾಡುತ್ತಿದ್ದ ಈ ಪಪ್ಪೀ, ಬೆಳೆಯುತ್ತಾ ಬೆಳೆಯುತ್ತಾ, ಮನೆಯಲ್ಲಿರುವ ನಮ್ಮನ್ನು ಬಿಟ್ಟರೆ ಬೇರೆಯವರೊಂದಿಗೆ ಬೆರೆಯುವ ಸ್ವಭಾವವನ್ನು ತನ್ನಿಂದ ತಾನಾಗಿಯೇ ಕಳೆದುಕೊಂಡಿತು.ಮನೆಯ ಡ್ರೈವ್ ವೇ ಯಲ್ಲಿ ಯಾರಾದರೂ ಬರುವ ಶಬ್ದವಾದರೆ ಸಾಕು, ಸೀದಾ ಓಡಿ ಬೇಸ್ ಮೆಂಟಿನಲ್ಲಿರುವ ದೇವರ ಗುಡಿಯ ಅಡಿಯಲ್ಲಿ ಶರಣಾಗಲು ಶುರುಮಾಡಿತು. ಆ ಗುಡಿಯ ಅಡಿಯಲ್ಲಿ ಯಾರ ಕೈಗೂ ಸಿಗದೇ ಅಡಗಿಕೊಳ್ಳಲು ಒಂದು ಬೆಕ್ಕಿಗೆ ಬೇಕಾಗುವಷ್ಟು ಸುಭದ್ರ ಜಾಗ ಇರುವ ಕಾರಣ.


ಏನೇ ಕಷ್ಟ ಬಂದರೂ ನಾವು ದೇವರಡಿಯಲ್ಲಿ ಶರಣಾಗಬೇಕೆಂದು ಅದರದೇ ಶೈಲಿಯಲ್ಲಿ ಪ್ರತಿನಿತ್ಯ ನಮಗೆ ಪಾಠಮಾಡುತ್ತಿದೆ ಎಂದೇ ನಾನು ಅರ್ಥೈಸಿದ್ದೆ!


ಒಮ್ಮೆ ಅದು ಸಿಕ್ಕ ಸಿಕ್ಕಲ್ಲಿ ವಾಂತಿ ಮಾಡಲು ಶುರುಮಾಡಿತು. ಅದಾಗಿಯೇ ಸರಿಹೋಗಬಹುದು ಎಂದು ಕಾದು ಕಾದು ಇಡೀ ದಿನ ಕಳೆಯಿತು. ವಾಂತಿ ಮಾಡಿ ಮಾಡಿ ಬಳಲಿದ ಮಗುವನ್ನು ಮರುದಿನ ಬೆಳಿಗ್ಗೆಯೇ ಚಿಕಿತ್ಸಾಲಯಕ್ಕೆ ಕರೆದುಕೊಂಡು ಹೋದದ್ದಾಯಿತು. ಪರೀಕ್ಷಿಸಿದ ವೈದ್ಯರು, ಕೂಡಲೇ ‍ಎಕ್ಸ್ ರೇ ತೆಗೆದು, "ಹೊಟ್ಟೆಯಲ್ಲಿ ಏನೋ ಇದ್ದ ಹಾಗೆ ಕಾಣುತ್ತಿದೆ. ಯಾವುದಕ್ಕೂ ಶಸ್ತ್ರಚಿಕಿತ್ಸೆ ಮಾಡಿಯೇ ನೋಡ ಬೇಕು. ಇಲ್ಲಿ ಬಿಟ್ಟು ಹೋಗಿ. ನಾವು ನಾಳೆಗೇ ಅದನ್ನು ಗೊತ್ತು ಮಾಡುವ", ಎಂದರು. 


ಮಗುವನ್ನು ಅಲ್ಲಿ ಬಿಟ್ಟು ಬಂದು, ಕಾಲು ಸುಟ್ಟ ಬೆಕ್ಕಿನ ಹಾಗೆ ಮನೆಯಲ್ಲಿ ಕುಳಿತೆ, ಎಂದೂ ನನ್ನನ್ನು ಬಿಟ್ಟಿರದ ಮಗುವನ್ನು ಅಲ್ಲಿ ಕೇಜಿನಲ್ಲಿ ಕೂಡಿಟ್ಟಿದ್ದಾರಲ್ಲಾ ಎಂಬ ದುಃಖದಲ್ಲಿ.


ಮರುದಿನ ಶಸ್ತ್ರಚಿಕಿತ್ಸೆ ಮುಗಿದ ಕೂಡಲೇ ವೈದ್ಯರಿಂದ ದೂರವಾಣಿ ಕರೆ ಬಂತು. "ಹೊಟ್ಟೆ ಮತ್ತು ಸಣ್ಣ ಕರುಳನ್ನು ಒಂದು ಉದ್ದದ ನೂಲು ಸುತ್ತಿಕೊಂಡಿತ್ತು. ಅದನ್ನೀಗ ತೆಗೆದಾಗಿದೆ. ನಾಳೆ ಸಂಜೆ ಬಂದು ಕರೆದುಕೊಂಡು ಹೋಗಿ", ಎಂದು.


ಕೂಡಲೇ, ಶಸ್ತ್ರಚಿಕಿತ್ಸೆಗೆ ಒಳಗಾದ ಮಗುವು ಮನೆಗೆ ಬಂದ ಮೇಲೆ ಸುಧಾರಿಸಿಕೊಳ್ಳಲು ಪ್ರತ್ಯೇಕ ಒಂದು ಮಂಚದ ತಯಾರಿಯಲ್ಲಿ ತೊಡಗಿದೆ. ನಮ್ಮ ಮಂಚದ ಪಕ್ಕದಲ್ಲಿಯೇ ಗೋಡೆಗೆ ತಾಗಿ ಒಂದು ದೊಡ್ಡ ಟೀ ಟೇಬಲ್ ಇಟ್ಟು, ಅದರ ಮೇಲೆ ಮೆತ್ತಗಿನ ಹಾಸಿಗೆ ಹಾಸಿ, ಅದರ ನಾಲ್ಕೂ ಸುತ್ತ ಮಗು ಕೆಳಗೆ ಬೀಳದ ಹಾಗೆ ಮೆತ್ತಗಿನ ತಲೆದಿಂಬಿನ ಕಟ್ಟೆ ಕಟ್ಟಿದೆ.


ಮರುದಿನ ಸಂಜೆ ಚಿಕಿತ್ಸಾಲಯಕ್ಕೆ ತೆರಳಿ, ಒಳ ನಡೆಯುತ್ತಿದ್ದಂತೆಯೇ, ನಗುಮೊಗದಿಂದಲೇ ನಮ್ಮನ್ನು ಸ್ವಾಗತಿಸಿ, ಬಿಲ್ಲಿಂಗ್ ಕೌಂಟರ್ ನಲ್ಲಿದ್ದ ಮಹಿಳೆ, "ನಿಮಗೆ ಬಿಲ್ ತೋರಿಸುವ ಮೊದಲು, ನಿಮ್ಮ ಬೆಕ್ಕಿನ ಹೊಟ್ಟೆಯೊಳಗೆ ಏನಿತ್ತೆಂದು ತೋರಿಸುತ್ತೇನೆ. ಯಾಕೆಂದರೆ, ಇನ್ನೊಮ್ಮೆ ನೀವು ಇಷ್ಟು ಮೊತ್ತದ ಬಿಲ್ ಕಟ್ಟುವ ಪ್ರಮೇಯ ಬಾರದಿರಲಿ ಎಂದು", ಎನ್ನುತ್ತಲೇ ಒಂದು ಪಾರದರ್ಶಕ ಚೀಲವನ್ನು ನಮ್ಮ ಕೈಗಿತ್ತಳು. ಅದರಲ್ಲಿ ಒಂದು ಕೆಂಪು ಬಣ್ಣದ ಉದ್ದವಾದ ನೂಲು, ಮತ್ತು ಅದರ ಸುತ್ತುವರಿದಿದ್ದ ಕಸ, ಕಡ್ಡಿ, ಮತ್ತು ಇನ್ನೇನೇನೋ. ನೋಡಿದ ಕೂಡಲೇ ಅದು ಯಾವ ಅಂಗಿಯ ನೂಲು ಎಂಬ ಗುರುತು ಸಿಕ್ಕಿತು. 


ಅದರ ಬೆನ್ನಿಗೇ ಬಿಲ್ ಕೊಟ್ಟಳು. ಬರೋಬ್ಬರಿ ಎರಡು ಸಾವಿರದ ಒಂದು ನೂರು ಡಾಲರ್! 


ಬೇಗ ಬೇಗ ಬಿಲ್ ಕಟ್ಟಿ, ನಮ್ಮ ಸರದಿಯನ್ನೇ ಕಾದು, ಪಾಪದ ಮಗುವಿನ ಮುಖದರ್ಶನವಾದಾಗಲೇ ಸಮಾಧಾನ. 


ಹೂವಿನಂತೆ ಮಗುವನ್ನು ಎತ್ತಿ, ಬೆಕ್ಕಿನ ಕ್ಯಾರಿಯರ್ನಲ್ಲಿ ಇಟ್ಟು, ಸುಭದ್ರವಾಗಿ ಅದರ ಬಾಗಿಲು ಹಾಕಿ, ಅಲ್ಲಿಂದ ಹೊರಟು, ಮನೆ ತಲುಪಿ, ಮನೆಯೊಳಗೆ ಬರುತ್ತಲೇ ನಮ್ಮ ಮಂಚದ ಮೇಲೆ ಕ್ಯಾರಿಯರ್ ಅನ್ನು ಇಟ್ಟು, ಅದರ ಬಾಗಿಲನ್ನು ಅದಕ್ಕಾಗಿ ಮಾಡಿಟ್ಟಿದ್ದ ಹಾಸಿಗೆಗೆ ಮುಖ ಮಾಡಿ, ಮೆಲ್ಲನೆ ಬಾಗಿಲು ತೆಗೆದು, ನಿಧಾನಕ್ಕೆ ಮಗುವನ್ನು ಅಲ್ಲಿ ಮಲಗಿಸುವ ಎಂದು ಯೋಚಿಸುತ್ತಿದ್ದಂತೆಯೇ....ನಮ್ಮ ಮಗು ಕ್ಯಾರಿಯರ್ ನಿಂದ ಹೊರ ಚಿಮ್ಮಿ... ಮಂಚದಿಂದ ಛಂಗನೆ ಹಾರಿ... ಸೀದಾ ಓಡಿದ್ದು... ಬೇಸ್ ಮೆಂಟಿನೆಡೆಗೆ... ದೇವರಡಿಗೆ!


Rate this content
Log in

Similar kannada story from Inspirational