ಆ ಸಂಜೆ
ಆ ಸಂಜೆ


ಎದುರು ಮನೆಯ ಹಾಲೋವೀನ್ ಅಲಂಕಾರ ತುಸು ಜಾಸ್ತಿಯೇ ಇತ್ತು ಈ ವರ್ಷ. ಮನೆಯ ಮುಂದೆ ನೇತುಹಾಕಿದ ಬೇತಾಳಗಳ ಜೊತೆ ಈ ಬಾರಿ ಸ್ಮಶಾನದ ಗೋರಿಕಲ್ಲುಗಳ ಸಾಲನ್ನೇ ಕಟ್ಟಿದ್ದರು. ಅದರ ಮೇಲೆ ಎರಡು ಮರಗಳ ಮಧ್ಯೆ ತೂಗುಹಾಕಿದ ಬೃಹದಾಕಾರದ ಜೇಡರ ಬಲೆ! ಅವರವರ ಸಂತೋಷ ಅವರವರಿಗೆ ಎಂದು ನನ್ನ ಕೆಲಸದಲ್ಲಿ ತೊಡಗಿದೆ. ಮನೆಯ ಎಡ ಮಗ್ಗುಲಲ್ಲಿ ದಟ್ಟವಾಗಿ ಬೆಳೆದು ತನ್ನ ಆಕಾರವನ್ನೇ ಕಳೆದುಕೊಂಡು ನಿಂತ ಹತ್ತು ಗಿಡಗಳನ್ನು ಚಂದ ಮಾಡುವುದರಲ್ಲಿ ಮಗ್ನಳಾದೆ.
ಗಿಡಗಳ ಸಂದಿಯಿಂದ ಬಂದ ಕೋಡಿ, ಪಕ್ಕದ ಮನೆಯ ಹತ್ತು ವರ್ಷದ ಬಾಲಕ.
'ನಿನ್ನ ನೋಡಿ ಎರಡು ವರ್ಷವೇ ಆಯಿತಲ್ಲವೇ?', ಎಂದೆ.
ಅವರ ಮನೆಯ ಗರಾಜು ಮತ್ತೊಂದು ಬದಿಯಲ್ಲಿ ಇದ್ದ ಕಾರಣ, ನಮ್ಮ ಮನೆಯ ಕಡೆ ಅವರ ಓಡಾಟ ತೀರಾ ಕಮ್ಮಿ. ನನಗೆ ನಾಲ್ಕು ದಿನ ಶಾಲೆಗೆ ರಜೆ, ಎಂದು ಶುರುವಾದ ನಮ್ಮ ಮಾತು ಕಥೆ, ಅವನ ಕೈಯಲ್ಲಿದ್ದ ಡಬ್ಬಿಯ ಕಡೆಗೆ ತಿರುಗಿತು. ಅದರ ತುಂಬಾ ಸಣ್ಣ ಸಣ್ಣ ಪೆಲೆಟ್ಸ್.
'ಇದನ್ನು ಆಡಿ ತೋರಿಸಲೇ?', ಎಂದ.
'ಹ್ಞೂ' ಅಂದೆ.
ಕೂಡಲೇ ಹೋಗಿ ತನ್ನ ಆಟಿಕೆ ತಂದ. ನೋಡಿ ದಂಗಾದೆ. ಅದು ಒಂದು ಗನ್!
ಮುಂದಿನ ಹತ್ತು ಹದಿನೈದು ನಿಮಿಷ ಅದರ ಕಾರ್ಯ ವೈಖರಿ, ರಾಪಿಡ್ ಫಯ ರ, ಸೆಮಿ-ಆಟೊಮ್ಯಾಟಿಕ್, ಸೇಫ್ಟೀ ಲಾಕ್, ಮ್ಯಾಗಜೀನ್, ಇವೇ ಮೊದಲಾದ ಪದಗಳ ಅರ್ಥವನ್ನು ಮಾತ್ರವಲ್ಲದೇ, ಇದು ತನ್ನ ಅಣ್ಣನ ಆಟಿಕೆ ಎಂದು, ತಾನೇ ಅದರ ಮಾನುಯಲ್ ಓದಿ ಕಲಿತದ್ದೆಂದು, ಯಾವಾಗ ಹೇಗೆ ಹೊಡೆಯಬೇಕು, ತನ್ನ ಟಾರ್ಗೆಟ್ ಅಭ್ಯಾಸದ ಪರಿ, ಎಲ್ಲವನ್ನೂ ನಿರರ್ಗಳವಾಗಿ ವಿವರಿಸುತ್ತಾ ನಡೆದ.
'ನಾನು ಟಾರ್ಗೆಟ್ ಹೊಡೆಯುವುದನ್ನು ನೋಡುವಿರಾ?', ಎಂದು ತನ್ನ ಮನೆಯ ಹಿಂಬದಿಗೆ ಕರೆದುಕೊಂಡು ಹೋಗಿ, 'ಇದು ಸೆಮಿ-ಆಟೋಮ್ಯಾಟಿಕ್, ದೂರದಲ್ಲಿ ಓಡುತ್ತಿರುವವನಿಗೆ ಇದನ್ನು ಉಪಯೋಗಿಸ ಬೇಕು, ಇಲ್ಲದಿದ್ದರೆ ಬುಲೆಟ್ಸ್ ವೇಸ್ಟ್ ಆಗುತ್ತೆ', ಎಂದ
.
'ದೇವರೇ, ಇವನಿಗೆ ಬೇರೆ ಆಟಿಕೆಯೇ ಸಿಗಲಿಲ್ಲವೇ?', ಎಂದು ಪರಿತಪಿಸಿದೆ.
ಕೂಡಲೇ, 'ಕಿಚ್, ಕಿಚ್', ಎಂದು ಶಬ್ದ ಕೇಳಿ ಬಂದು, ಅವನ ಗನ್ನೇ ಕೆಟ್ಟು ಹೋಯಿತು.
'ಬ್ಯಾಟರಿ ಮುಗಿಯಿತೋ ಏನೋ?, ಪೆಲೆಟ್ಸ್ ಜಾಮ್ ಆಗಿರಬೇಕು', ಎಂದೆನ್ನುತ್ತಲೇ ಒಂದೊಂದೇ ಭಾಗ ಬಿಡಿಸಿ, ಬಿಡಿಸಿ ಪರೀಕ್ಷಿಸತೊಡಗಿದ.
ನೀನು ಹೋಗಿ ನಿನ್ನ ಅಣ್ಣನನ್ನೇ ಕೇಳು, ಅಂದೆ. ಕೂಡಲೇ ಒಪ್ಪಿದ.
ಅವನನ್ನು ಬೀಳ್ಕೊಡುತ್ತ, 'ನೀನು ಮುಂದೆ ಶಿಕ್ಷಕನಾಗಬಹುದು, ತುಂಬಾ ಚೆನ್ನಾಗಿ ವಿಷಯವನ್ನು ತಿಳಿಯಪಡಿಸುತ್ತೀಯ', ಎಂದು ಹುರಿದುಂಬಿಸಿದೆ.
ಯಾಕೋ ನನ್ನ ಮಾತು ಖುಷಿಕೊಟ್ಟ ಹಾಗೆ ಕಾಣಲಿಲ್ಲ.
ಮೆಲ್ಲನೆ ಮುಖ ಎತ್ತಿ, 'ನಿಮ್ಮ ಪತಿಯವರು ಕೊಡುತ್ತಿದ್ದ ಚಾಕಲೇಟ್ಸ್ ಇನ್ನೂ ಇದೆಯೇ?', ಎಂದು ಕೇಳಿದ.
ಅಬ್ಬ, ಇದರಲ್ಲಿಯೂ ಇನ್ನೂ ರುಚಿ ಇಟ್ಟುಕೊಂಡಿದ್ದಾನೆ, ಎಂದು ಖುಷಿಪಟ್ಟೆ. ತನ್ನ ಸಹೋದ್ಯೋಗಿ ಪ್ರೀತಿಯಿಂದ ಕಳುಹಿಸುತ್ತಿದ್ದ ಆಸ್ಟ್ರಿಯಾ ದೇಶದ ಚಾಕಲೇಟ್ಸ್ ನನ್ನ ಪತಿ ದಾರಾಳವಾಗಿ ಊರವರಿಗೆಲ್ಲಾ ಹಂಚುತ್ತಾರೆ.
'ಈಗ ಮುಗಿದಿದೆ, ಇನ್ನೊಮ್ಮೆ ಸಿಕ್ಕಿದ ಕೂಡಲೇ ನಿನಗೇ ಮೊದಲು ಕೊಡುವೆ', ಎಂದು ಹೇಳಿ ಅಲ್ಲಿಂದ ಹೊರಟೆ.
ಅಂದು ರಾತ್ರಿ ಗೂಗಲಿಗೆ ಶರಣಾಗಿ, ಗನ್ ಆಡುವ ಮಕ್ಕಳು ಮುಂದೆ ನಿಜವಾದ ಗನ್ ಉಪಯೋಗಿಸಿ ಭಯೋತ್ಪಾದನೆಯಲ್ಲಿ ತೊಡಗುವರೇ, ಎಂದು ನೋಡ ಹೊರಟೆ. ಮಕ್ಕಳ ಆಟಿಕೆಯಲ್ಲಿ ಮೂಗು ತೂರಿಸಬೇಡಿ, ಎಂಬ ಸಲಹೆಯಿಂದ ಹಿಡಿದು, ಯಾವ ಸಂಶೋದನೆಯೂ ಇದನ್ನು ಪ್ರತಿಪಾದಿಸುವುದಿಲ್ಲವೆಂದು ತಿಳಿದು ಸಂತೋಷಪಟ್ಟರೂ, ಯಾವ ಸಂದರ್ಭದಲ್ಲಿ ಯಾರಿಗೆ ಯಾವ ಬುದ್ಧಿ ಬರುತ್ತದೋ ಎಂಬ ಆತಂಕ ಕಾಡದೇ ಇರಲಿಲ್ಲ.
ಇಲ್ಲಿನ ಮಕ್ಕಳು ಮಾತು ಮಾತಿಗೂ ತೆರಪಿ, ಕೌಂಸೆಲಿಂಗ್ ಎಂದು ಹೋಗುವುದು ಈ ವಾತಾವರಣಕ್ಕೆ ಒಂದು ಒಳ್ಳೆಯ ಅಭ್ಯಾಸವೇ ಸರಿ ಎಂದು ಸಮಾಧಾನಪಟ್ಟೆ.