ಸ್ವಾತಂತ್ರ್ಯದ ಮಂತ್ರ
ಸ್ವಾತಂತ್ರ್ಯದ ಮಂತ್ರ
ಶತಶತಮಾನಗಳ ಅವಮಾನದ ದಹನ
ಪರಕೀಯರ ಶೋಷಣೆಯ ದಮನ
ಆಂಗ್ಲರು ಭಾರತ ಬಿಟ್ಟು ಹೋಗಿದ್ದಾರೆ ಓಡಿ
ಕಳಚಿಕೊಂಡಿತು ಬಂಧನದ ಬೇಡಿ
ಭಗತ್, ಸುಭಾಷರ ಹೋರಾಟದ ಕೆಚ್ಚು
ತಿಲಕ್, ಲಜಪತರ ಸಿಡಿಮಾತಿನ ಕಿಚ್ಚು
ಬಿಳಿಯರ ಎದೆಗೆ ಬೆಂಕಿ ಇಟ್ಟಿತು ನೋಡಿ
ಕಳಚಿಕೊಂಡಿತು ಬಂಧನದ ಬೇಡಿ
ಭಾರತಮಾತೆಗೆ ಸ್ವಾತಂತ್ರ್ಯದ ಉದ್ಘೋಷವೇ ಝೇಂಕಾರ
ವೀರರ ಕೆಂಪು ನೆತ್ತರೇ ಅಲಂಕಾರ
ಪಂಜರದ ಗಿಣಿಗಳು ಹಾಡಿದವು ಕೂಡಿ
ಕಳಚಿಕೊಂಡಿತು ಬಂಧನದ ಬೇಡಿ
ಬ್ರಿಟೀಷರದ್ದೋ ಕೆಣಕಿ ಸೆಣಸುವ ಧೈರ್ಯ
ಭಾರತೀಯರದ್ದೋ ಮಣಿಸಿ ಮುಗಿಸುವ ಶೌರ್ಯ
ಕೊನೆಗೂ ಗೆದ್ದೆವು ಎಡೆಬಿಡದೆ ಹೋರಾಡಿ
ಕಳಚಿಕೊಂಡಿತು ಬಂಧನದ ಬೇಡಿ
ಭಾರತದ ಕಡೆಗೆ ದೃಷ್ಟಿ ನೆಟ್ಟಿರುವ
ದುಷ್ಟ ಶಕ್ತಿಗಳ ಕಡೆಗಣಿಸಬೇಡಿ
ಸ್ವಾತಂತ್ರ್ಯವೀರರ ಎಂದೂ ಮರೆಯಬೇಡಿ
ಕಳಚಿಕೊಳ್ಳೋಣ ಬನ್ನಿ ಬಂಧನದ ಬೇಡಿ