21 ದಿನಗಳು
21 ದಿನಗಳು
ದಿನಗೂಲಿ ನೌಕರರವರು. ನಿನ್ನೆ ಸಂಜೆ ಹೊತ್ತಿನಲ್ಲಿ ಹಾಲು ತರುವುದಕ್ಕೆಂದುಹೋದಾಗ ಖಾಲಿ ಖಾಲಿಯಾಗಿದ್ದ ರಸ್ತೆಯಲ್ಲಿ ಸಿಕ್ಕಿದರು. “ಜನವೇ ಇಲ್ಲ. ರಸ್ತೆಯೆಲ್ಲಾ ಖಾಲಿ ಖಾಲಿ” ಎಂದು ನಾನಂದದ್ದಕ್ಕೆ “ಹೌದು. ಅದೆಂಥದ್ದೋ ಖಾಯಿಲೆ ಬಂದಿದೆಯಂತಲ್ಲಾ ನಮ್ಮ ಬದುಕನ್ನು ಹಾಳುಮಾಡುವುದಕ್ಕೆ?” ಎಂದರು. ‘ಈಗ ನಿಮಗೆ ಸಂಪಾದನೆ ಇದೆಯಾ? ಬದುಕು ಹೇಗೆ ನಡೆಸುತ್ತಿದ್ದೀರಿ?’ ಎಂಬ ಮಾತು ನನ್ನ ಗಂಟಲಿನಿಂದ ನಾಲಗೆಗೆ ಬರುವ ಮೊದಲೇ ಹೇಳಿದರು- “ನನಗೆ ಈಗ ಸಂಪಾದನೆಯೇ ಇಲ್ಲ. ಕೆಲವರಿಗೆ 21 ದಿನಗಳೆಂದರೆ ರಜಾದಿನಗಳಾಗಬಹುದೇನೋ. ಆದರೆ ನನಗೆ ಆ 21 ದಿನಗಳು 21 ಕೆಲಸದ ದಿನಗಳು. ಯಾರೋ ಮಾಡುವ ತಪ್ಪಿಗೆ ಅವರ ಜೊತೆಯಲ್ಲಿ ಇನ್ನುಳಿದವರೂ ಶಿಕ್ಷೆ ಅನುಭವಿಸಬೇಕು.”
ಯಾರೋ ಮರ ಕಡಿದಾಗ ಅದರ ಕೆಳಗೆ ಬೇರೆ ಯಾರೋ ಸಿಲುಕಿ ನರಳಾಡುವುದರ ಬಗೆಗೆ ನನಗೆ ಹೇಳಬೇಕೆಂದೆನಿಸಿತು. ಜಾಗತೀಕರಣ, ಜಾಗತಿಕ ತಾಪಮಾನ ಏರಿಕೆ, ಪರಿಸರ ಸಂರಕ್ಷಣೆ, ಪ್ರಾಣಿಹಿಂಸೆ, ಮಾನವೀಯತೆ...ಹೀಗೆ ಮಾತನಾಡಬಲ್ಲ ವಿಷಯಗಳು ನನ್ನಲ್ಲಿ ಹಲವಿದ್ದವು. ಆದರೆ ಅವರು ಅದಾಗಲೇ ತಮ್ಮ ಭವಿಷ್ಯದ ಬಗೆಗೆ ಯೋಚಿಸುತ್ತಾ ಹತ್ತು ಹೆಜ್ಜೆ ಮುಂದೆ ಸಾಗಿಯಾಗಿತ್ತು.
***********************************************************************************************************************************************************
*****