ಹರಿಯಿತು ಬೆಳಕು ಹಸಿರ ಸಿರಿಯಲಿ
ಹರಿಯಿತು ಬೆಳಕು ಹಸಿರ ಸಿರಿಯಲಿ
ಪ್ರಕೃತಿ ಸಿರಿಯ ಒಳಗೆ ಜೀವಜಾಲದ ಉಸಿರು
ಮನದ ಭಾವ ಬೆಸೆದು ವಿಕಸಿಸುವ ತಳಿರು
ಪುಳಕದ ಭಾವನೆಯ ಹೊನಲಿನ ಚಿಗುರು
ಉಲ್ಲಾಸದಿ ಮಿಂದು ಮನವು ಜೇಂಕರಿಸುವುದು!!
ಮನಸಿನ ನಂದನವನದಲ್ಲಿ ನೆನಪೇ ಸದಾ ಹಸಿರು
ಕೊರಡು ಅಂಕುರಿಸುವ ಕ್ಷಣದಿ ಬಯಕೆಯ ಬಸಿರು
ಏನೆಂದು ವರ್ಣಿಸಲಿ ನಿಸರ್ಗದ ನಾಡಿನ ಬೆಡಗು
ಹಸಿರು ಹಣ್ಣಾಗುವ ಮುನ್ನ ತೋರು ನಿನ್ನಯ ಬೆರಗು!!
ಸುಂದರ ಸೊಬಗಿನ ಹಸಿರೆಲೆಗಳ ಮಧ್ಯೆ ನಾಚುತ್ತ
ದೀಪ ಬೆಳಗುವುದೋ ಬೇಡವೋ ಮೌನ ತಾಳುತ್ತ
ನಾಳೆಗಳ ನೆನೆಯುತ್ತ ಹೂವು ಅರಳುವ ಕನಸಿಂದ
ಮೆಲ್ಲನೆ ಮೂಡುತ್ತಿರುವುದು ನಿತ್ಯ ಪುಷ್ಪ ಚಂದದಿಂದ!!
ನಾಳೆಗಳು ಬರುತ್ತಿರುವುದು ಚಂದದ ದಿನವದು
ಅರಳಿ ಕಂಪನು ಚೆಲ್ಲಿ ಸಂಭ್ರಮಿಸುವ ಮನವು
ಹಸಿರ ಉಸಿರಿನ ಮಧ್ಯೆ ಪ್ರೀತಿ ಹಂಚುತಲಿರುವೆ
ಅರಳಿ ಪರಿಮಳವ ಚೆಲ್ಲಿಬಿಡು ನಾಳೆ ಬೆಳಕ ಹರಿಯೆ!!
ನವಿರಾದ ಹಸಿರು ಎಲೆಗಳ ಮಧ್ಯೆ ಹರಿದ ಬೆಳಕು
ಬೆಳಕಿನ ಕಿರಣಕ್ಕೆ ನಾಚುತ್ತ ಕಂಗೊಳಿಸಿತು ಮನವು
ಅಲ್ಲೊಂದು ಇಲ್ಲೊಂದು ಪಲ್ಲವಿಸುವ ಮೊಗ್ಗುಗಳು
ಸುಮವಾಗಿ ಅರಳಲು ಕಾಯುತ್ತಿವೆ ಮೆಲ್ಲನೆ ಮೂಡಿ!!
