ಧೀಮಂತ ದಿನಚರಿ
ಧೀಮಂತ ದಿನಚರಿ
ಗಲ್ಲಿ ಗಲ್ಲಗಳೆಲ್ಲ ಸೇರಿ ಹಳ್ಳಿ
ಹಳ್ಳಿ ಹಳ್ಳಿಗಳೆಲ್ಲ ಕೂಡಿ ದಿಲ್ಲಿ
ಅಲ್ಲೈತೆ ಹಿರಿಮನೆಯೊಂದು
ಮೂರ್ಬಣ್ಣದ ಬಾವುಟ ನೆಟ್ಟು
ನಡುವೊಂದು ಚಕ್ರ ಇಟ್ಟಿಹರಲ್ಲಿ
ಅದರೊಳಗ ಇಪ್ಪತ್ನಾಕು ಗೀಟಿಟ್ಟು
ಅಲ್ಲೊಬ್ಬ ಧೀಮಂತ ಗೀಚಿದ್ದಾನೆ
ಸಾಮಾನ್ಯ ಓದಿಲ್ಲದ, ಓದಲಾಗದ
ಮಣಬಾರದ ಪುಸ್ತಕದ ಹಾಳೆಯಲಿ
ಸಮಾನತೆ, ಸಹಬಾಳ್ವೆ, ಸಮೃದ್ಧಿಯ
ಸಂಕೇತ ಈ ತಿರಂಗ ಪಟವೆಂದು
ನಾವೆಲ್ಲಾ ಇಲ್ಲಿ ಒಂದೇ.. ಎಂದು
ಕಣ್ಣಿಲ್ಲದ ಕುರುಡ ಹೇಳುತ್ತಾನೆ
ಮಾತಾಡದ ಮೂಕ ಅರ್ಥೈಸುತ್ತಾನೆ
ಬಣ್ಣ ಧರ್ಮ, ಗೆರೆ ಜಾತಿಗಳಾಗಿವೆ
ಬಣ್ಣ ಧನಿಕ, ಗೆರೆ ಬಡವರಾಗಿದ್ದಾರೆ
ಬಣ್ಣ ಜ್ಞಾನಿ, ಗೆರೆ ಮೂಡರಾಗುತ್ತಾರೆ
ಇದೆ ವಾಸ್ತವ ಇರಬಹುದೇನೋ ಕಾಣೆ
ಪುಸ್ತಕದ ರೆಕ್ಕೆ ತಿರುವಿದಾಗಕ್ಷಣವೇ
ಹೊಸದೊಂದು ಗರಿ ಬಿಚ್ಚಿಕೊಳ್ಳುತ್ತದೆ
ಮೂಲಭೂತ ಹಕ್ಕೆಂಬ ಜನ್ಮನಾಮದಲಿ
ಸ್ವಾತಂತ್ರ, ಸಮಾನತೆ, ಧರ್ಮ ಸ್ವಾತಂತ್ರ್ಯ,
ಶೋಷಣೆ ವಿರುದ್ಧ, ಸಾಂಸ್ಕೃತಿಕ ಶೈಕ್ಷಣಿಕ
ಸಾಂವಿಧಾನಿಕ ಪರಿಹಾರದ ಕೆಂಪಂಗಿ ತೊಟ್ಟು
ಹಕ್ಕುಗಳೆಲ್ಲ ಅದರದೇ ರೆಕ್ಕೆಯಲ್ಲೆ ಮುಚ್ಚಿ
ಅದೆಷ್ಟು ಸಂವತ್ಸರಗಳು ಗತಿಸಿದವೇನೋ
ತುಕ್ಕು ಹಿಡಿವುದಷ್ಟೆ ಬಾಕಿಯಿರುವುದಿನ್ನು
ಸ್ವಾತಂತ್ರ ಸಮಾನತೆ ಮತ್ತೆಲ್ಲ ಸಿಕ್ಕಿದ್ದು
ರೋಗಗ್ರಸ್ತ ರಾಜಕಾರಣಿ ಸರ್ವಾಧಿಕಾರಿಗೆ
ಹೊಟ್ಟೆ ಬೆನ್ನಿಗಂಟಿದ ಸಾಮಾನ್ಯನಿಗೆನಲ್ಲ
ಮತ್ತೊಂದಷ್ಟು ಕರ್ತವ್ಯದ ಕಹಿ ದ್ರಾವಣ
ಸವರಿ ಮುಚ್ಚಿಟ್ಟಿದ್ದಾರೆ ಇನ್ನೊಂದು ರೆಕ್ಕೆಗೆ
ಸರ್ವರೂ ಬಹು ದೂರವೇ ಇದರಿಂದ
ಏನಾದರೂ ಎಂತಾದರೂ ಸರಿಯೇ
ಬದಲಾಗಲಸಾಧ್ಯ ಧೀಮಂತನ ದಿನಚರಿ
ಕಾರಣವಿಷ್ಟೆ, ಪುಸ್ತಕ ವಿಶ್ವಕ್ಕೇನೆ ಮಾದರಿ
