ದಾರಿಹೋಕನ ಪದಗಳು
ದಾರಿಹೋಕನ ಪದಗಳು
ಉಪಕಾರವದು ಪುಣ್ಯವೋ ಪರಪೀಡನೆ ಪಾಪವೋ
ಪುಣ್ಯವನು ಗಳಿಸುತ್ತ ಧರ್ಮದಲಿ ನಡೆಯುತ್ತ
ಕರ್ಮದಲಿ ಸಮತೆಯ ಕಾಣುತಿರು ಶ್ರದ್ಧೆಯಲಿ ನಿತ್ಯ
ಎಸಗುತಿರು ಒಳಿತನ್ನು - ದಾರಿಹೋಕ
ಹೊರಗಿನ ಬೆಂಕಿಯನು ಆರಿಸಲು ಆಗುವುದು
ಒಳಗಿರುವ ಕಿಚ್ಚನು ನಂದಿಸಲು ಆಗುವುದೆ ?
ಒಳಗಿನ ಬೆಂಕಿ ಮನ ಮನೆಯ ಸುಟ್ಟರೆ ಲೋಗರ
ಜೀವನವು ಸಾಗುವುದೇ ? - ದಾರಿಹೋಕ
ಸಾವಿರದ ಮನೆಯುಂಟೆ ನೋವಿರದ ಮನಸುಂಟೆ
ಸುಖವುಂಟೆ ಹಿತವುಂಟೆ ಎನ್ನುವರು ಹಲವಾರು
ಇರುವುದು ಇರಲೇನು ಬರುವುದು ಬರಲೇನು ಏನೊಂದ
ಗೌರವಿಸಿ ಸ್ವೀಕರಿಸು - ದಾರಿಹೋಕ
ನಿನ್ನೆಗಳ ನೆನೆಯುತ ನಾಳೆಗಳ ಚಿಂತಿಸುತ
ಈ ದಿನದ ಕ್ಷಣಗಳ ಮರೆವುದು ಸರಿಯೇನು?
ಆಗಮನ ನಿರ್ಗಮನ ವಿಧಿಯಾಟ ಆಗಿರಲವನ
ದಾಳದ ಗರವು ಹಿರಿದೊ – ದಾರಿಹೋಕ
ಕಳ್ಳರ ಸಂತೆಯಲಿ ಉತ್ತಮರ ಹುಡುಕುವುದು
ತೂತಾದ ಮಡಕೆಯಲಿ ನೀರನ್ನು ತುಂಬುವುದು
ಕಳ್ಳನಿದ್ರೆಯ ಜನರ ಎಚ್ಚರಿಸೆ ಹೋಗುವುದೆಲ್ಲವೂ
ವ್ಯರ್ಥ ಕಾಯಕ ತಿಳಿಯೊ - ದಾರಿಹೋಕ
